ದೋನೇಜ ವೆಂಕಟಪ್ಪನಾಯಕನ ಯಶೋಗಾಥೆ ಗೀತನೃತ್ಯರೂಪಕ - ಸದಾನಂದ

ದೋನೇಜ ವೆಂಕಟಪ್ಪನಾಯಕನ ಯಶೋಗಾಥೆ ಗೀತನೃತ್ಯರೂಪಕ - ಸದಾನಂದ


ಕನ್ನಡ ಕಸ್ತೂರಿ

ಘನ ಕದಂಬ ಗಂಗ ಚಾಲುಕ್ಯ ರಾಷ್ಟ್ಟ್ರಕೂಟ ಹೋ
ಯ್ಸಳರ ಘನತೆಗೊಂಡು ಮೆರೆದು
ವಿಜಯನಗರದರಸುಗಳಾ ವೈಭವದೊಳು ಹೊಳಪುಗೊಂಡು
ಹಲ್ಮಿಡಿ ಹಂಪೆ ಬಾದಾಮಿಯಮರ ಚಿತ್ರಗಳಾ
ಬೇಲೂರು ಬೆಳಗೊಳ ಮೈಸೂರಿನ ಸಿರಿಗಳ
ಐಹೊಳೆಗಳ ಮಡಿಲಿಂದ ಹೊಳೆಯಾಗಿ ಹರಿದಿದೆ
ಕನ್ನಡ ಕಸ್ತೂರಿ  ಕನ್ನಡ ಕಸ್ತೂರಿ  ಕನ್ನಡ ಕಸ್ತೂರಿ  || 1 ||

ಪಂಪ ರನ್ನ ನೃಪತುಂಗ ಹರಿಹರ ರಾಘವಾಂಕ
ವ್ಯಾಸ ವಾಲ್ಮೀಕಿ ಕುವರ
ರೊಡಲ ಕಾವ್ಯ ಧಾರೆ ಮೊಳೆತು, ದಾಸವಾಣಿಯಿಂದಗಳಿತು
ಶರಣ ವಚನ ಸರ್ವಜ್ಞರ ಅನುಭಾವಗಳಿಂದ ಬೆಳೆದು
ಶಾಸ್ತ್ರಜ್ಞರ ಅಭಿಮತ ಜನಪದವೂ ಸನುಮತ
ಗಾಯನಸಂಭ್ರಮದಿಂದ ಎಲ್ಲೆಡೆಯೂ ತುಂಬಿದೆ
ಕನ್ನಡ ಕಸ್ತೂರಿ   ಕನ್ನಡ ಕಸ್ತೂರಿ   ಕನ್ನಡ ಕಸ್ತೂರಿ || 2 ||

ಲೋಕಪಾವನೆಯರಾದ ಕೃಷ್ಣೆ ಕಾವೇರಿಯರನು
ತುಂಗಭದ್ರೆ ಸೇರಿಕೊಂಡು
ವರದೆ ಕಾಳಿ ಶರಾವತಿ ಭೀಮೆ ಕಪಿಲೆ ಅಘನಾಶಿನಿ
ಅರ್ಕಾವತಿ ನೇತ್ರಾವತಿ ಹೇಮಾವತಿ ಕುಮದ್ವತಿ
ತುಂಬಿಹರಿವ ನದಿಗಳಿಂದ ನಳ ನಳಿಸುವ ಹೊಲಗಳ
ಹಸಿರಾಗಿ ಉಸಿರಾಗಿ ಹೊರಹೊಮ್ಮುತ ಬಂದಿದೆ
ಕನ್ನಡ ಕಸ್ತೂರಿ  ಕನ್ನಡ ಕಸ್ತೂರಿ  ಕನ್ನಡ ಕಸ್ತೂರಿ  || 3 ||
 

ಪೀಠಿಕೆ : 2 ನಿಮಿಷ :


ನಿರೂಪಕಿ 1 : ಕನ್ನಡಮ್ಮನಿಗೂ ಕನ್ನಡಿಗರಿಗೂ ನಮ್ಮ ಅಕ್ಕರೆಯ ನಮನಗಳು. ಕಸ್ತೂರಿಯ ಕಂಪಿನಂತೆ  ಕನ್ನಡದ ಪೆಂಪು. ಸಾವಿರಾರು ವರ್ಷಗಳಿಂದ ಸಾಗಿಬಂದ ರಾಜಪರಂಪರೆ, ಕವಿಪರಂಪರೆ ಹಾಗು ನಾಡಿನ ನದಿನದಗಳ ಸಂಪತ್ತು ನಾಡನ್ನು ಸಂಪನ್ನಗೊಳಿಸಿವೆ.

ನಿರೂಪಕಿ 2 : ಸಕ್ಕರೆಯಿದ್ದಲ್ಲಿ ಇರುವೆಗಳು ಸಾಮಾನ್ಯ ತಾನೆ ? ಅಂತೆಯೇ ಈವೈಭವವನ್ನು ಸೂರೆಗೊಳ್ಳಲು ಬಹಳ ಪ್ರಯತ್ನಗಳೂ ನಡೆದವು. ಫಲವಾಗಿ ವೈಭವದ ವಿಜಯನಗರ ಸಾಮ್ರಾಜ್ಯವು 1565ರಲ್ಲಿ ನಾಶವಾದಾಗ ಧೈರ್ಯ, ಶೌರ್ಯ, ಪರಾಕ್ರಮ ಮೆರೆಸಿ ನಾಡನ್ನು ಕಟ್ಟಿದವರು ಕೆಳದಿಯರಸರು. 1582ರಿಂದ 1629ರವರೆಗೆ ಸರಿಸುಮಾರು ಅರ್ಧಶತಮಾನ ಸಂಸ್ಥಾನವನ್ನು ಆಳಿದ ದೋನೇಜ ವೆಂಕಟಪ್ಪನಾಯಕನ ಯಶೋಗಾಥೆ ಇದೀಗ ನಮ್ಮ ರೂಪಕದ ಕಥಾವಸ್ತು.

ನಿರೂಪಕಿ 3 : 15ನೇ ಶತಮಾನದ ಆರಂಭದಲ್ಲಿ ಉದಯವಾದ ಕೆಳದಿ ಸಂಸ್ಥಾನದ ಮೊದಲದೊರೆ ಚೌಡಪ್ಪನಾಯಕ, ಆತನ ಮಗನಾದ ವೀರ ಸದಾಶಿವನಾಯಕನು ವಿಜಯನಗರದ ಕೃಷ್ಣದೇವ ರಾಯನ ಬಲಗೈಬಂಟನಂತಿದ್ದು ಅನೇಕ ಯುದ್ಧಗಳನ್ನು ಗೆದ್ದುಕೊಟ್ಟ ಸೇನಾನಿ. ಅವನಮಗ ದೊಡ್ಡಸಂಕಣ್ಣನಾಯಕನು ದೆಲ್ಲಿಯ ಅಕ್ಬರನಆಸ್ಥಾನಕ್ಕೂ ಬೆಟ್ಟಿನೀಡಿ, ಸಾಹಸಪ್ರದರ್ಶಿಸಿದ್ದನೆಂದು ವೀರಶೈವ ಮಠಗಳನ್ನು ಉತ್ತರ ಭಾರತದಲ್ಲಿ ಸ್ಥಾಪಿಸಿದ ಮಹನೀಯನೆಂದು ಇತಿಹಾಸದಲ್ಲಿ ಉಲ್ಲೇಖವಿದೆ. ಈದೊಡ್ಡ ಸಂಕಣ್ಣನಾಯಕನ ಮಗನೇ ಅಪ್ರತಿಮ ಹೋರಾಟಗಾರ, ದೈವಭಕ್ತ, ಪ್ರಜಾವತ್ಸಲ, ನ್ಯಾಯಪರ, ಕವಿ, ದಾನಿ ಹೀಗೆ ಹೆಗ್ಗಳಿಕೆ ಪಾತ್ರನಾಗಬಲ್ಲ ವೆಂಕಟಪ್ಪನಾಯಕ. ಈತನು ಕೆಳದಿಯ ಶಿವಪ್ಪನಾಯಕನಿಗೆ ಹಿರಿಯನಾಗಿದ್ದನು.

ನಿರೂಪಕಿಯರು : ಬನ್ನಿ ವೈಭವದ ಇಕ್ಕೇರಿಗೆ ಹೋಗಿ ಬರೋಣ.




2.  ಅರಮನೆ ಸೆಟ್ :



ನಮಸ್ತುಂಗ ಶಿರಶ್ಚುಂಬಿ ಚಂದ್ರ ಚಾಮರಚಾರವೇ
ತ್ರೈಲೋಕ್ಯ ನಗರಾರಂಭ ಮೂಲಸ್ಥಂಭಾಯ ಶಂಭವೇ ||



ಪದ್ಯ :                ಇಕ್ಕೇರಿಯರಮನೆಯ ತುಂಬಿದೋಲಗದಲ್ಲಿ
                     ಇಕ್ಕೆಲದಿ ಸಾಮಂತ ಧೀಮಂತರಿರಲು ||


ಹೊಗಳುಭಟರು : ರಾಜಾಧಿರಾಜ, ಎಡವಮುರಾರಿ ಕೋಟೆಕೋಲಾಹಲ, ಮಲ್ಲವವಂಶೋದ್ಭವ, ವಿಶುದ್ಧವೈದಿಕಾದ್ವೈತ ಸಿದ್ಧಾಂತಪ್ರತಿಪಾಲಕ, ಶಿವಗುರುಭಕ್ತಿಪರಾಯಣ, ಶ್ರೀಮತ್ಕೆಳದಿ ರತ್ನ ಸಿಂಹಾಸನಾಧೀಶ್ವರ ಶ್ರೀ ವೇಂಕಟಭೂಪಾಲೋ ಬಹುಪರಾಕ್, ಬಹುಪರಾಕ್.

ಮಂತ್ರಿ ಪುಟ್ಟಪ್ಪಯ್ಯ : ದೊರೆಗಳನ್ನು ಕಂಡು ಕಪ್ಪಕಾಣಿಕೆಗಳನ್ನು ಸಲ್ಲಿಸಿ, ನಿವೇದನೆ ಇದ್ದವರು ಅರಿಕೆ ಮಾಡಿಕೊಳ್ಳಬಹುದು. ( ಕೆಲವರು ಕಪ್ಪ ಕಾಣಿಕೆ ಸಲ್ಲಿಸುವರು )
ಕುಶಲಕರ್ಮಿಗಳು : ಪ್ರಭುಗಳಿಗೆ ಪ್ರಣಾಮಗಳು.
ವೆಂಕಟಪ್ಪನಾಯಕ : ಯಾರುನೀವು ? ಬಂದ ಕಾರಣ ?
ಕುಶಲಕರ್ಮಿಗಳು : ಮಹಾಪ್ರಭುಗಳು ಆಲಿಸಬೇಕು, ವಿಜಯನಗರದರಸುಗಳಲ್ಲಿ ಕುಶಲವೃತ್ತಿಗಳನ್ನು ಮಾಡಿಕೊಂಡಿದ್ದವರು ನಾವು. ಆ ವೈಭವವು ಮಣ್ಣುಗೂಡಿದ ಮೇಲೆ ಅಲ್ಲಿದ್ದು ಜೀವನ ನಿರ್ವಹಣೆ ಕಷ್ಟವಾಯಿತು. ಆಶ್ರಯದಾತರನ್ನು ಹುಡುಕಿ ಬಂದೆವು ಮಹಾಸ್ವಾಮಿ.
ವೆಂಕಟಪ್ಪನಾಯಕ : ಒಳ್ಳೆಯದಾಯಿತು. ನಿಮಗೆಲ್ಲರಿಗೂ ಈ ಇಕ್ಕೇರಿಯಲ್ಲಿ ಆಶ್ರಯ ನೀಡಲಾಗುವುದು. ಅಲ್ಲಿ ನೀವು ಯಾವಯಾವ ಉದ್ಯೋಗಗಳನ್ನು ಮಾಡಿಕೊಂಡಿದ್ದಿರೋ ಅದನ್ನೇ ಇಲ್ಲೂ ಮುಂದುವರಿಸಿರಿ. ಸೇನೆಯ ಲಿಂಗಣ್ಣಾ, ಕಿಲ್ಲೇದಾರ ತಿಮ್ಮಣ್ಣ ನಾಯಕರೇ ಕೆಳದಿಯ ಸಾಮ್ರಾಜ್ಯವು ಇನ್ನು ಮುಂದೆ ಸ್ವತಂತ್ರವಾಗಿ ವಿಜಯನಗರದ ಕನಸುಗಳನ್ನು ಸಾಕಾರ ಮಾಡಲಿದೆ.
ಎಲ್ಲರೂ : ಅಪ್ಪಣೆ ಮಹಾಸ್ವಾಮಿ. ಕೆಳದಿ ಸಂಸ್ಥಾನಕ್ಕೆ ಜಯವಾಗಲಿ, ವೆಂಕಟಪ್ಪನಾಯಕರಿಗೆ ಜಯವಾಗಲಿ.



ಪದ್ಯ :                   ಸುಂದರನು ಸೌಭಾಗ್ಯವಂತನಿವ ಶರಧಿ ಗಂ
                        ಭೀರನು ಅತ್ಯಂತ ವೀರಾಧಿವೀರ |
                        ನೀಚರನು ಮನ್ನಿಸುವ, ಆನತರ ಕಾಪಿಡದ
                        ಅನ್ಯಾಯ ಸಹಿಸದವನಂತರಾಳ || 3 ||

:             
 

                              3.  ಪುರಜನರ ಕಟ್ಟೆ  ಸೆಟ್ :     

      ಪದ್ಯ:             ವಿಜಯನಗರದ ಘನತೆ ಮತ್ತೆ ಮೈತಳೆಯುತಿದೆ
                  ಕುಶಲಕರ್ಮಿಗಳೆಲ್ಲ ನೆಲೆಗೊಂಡರಲ್ಲಿ |
                  ವೀರಲಿಂಗಣನಂಥ ಸೇನಾನಿ ತಂಡವಿರೆ
                  ನಾಲ್ದೆಸೆಯ ಕಾಣ್ಕೆಗಳು ಸುರಿದವಲ್ಲಿ || 2 ||


ಕನ್ನಪ್ಪ : ಅಬ್ಬಬ್ಬಾ ಆ ದಳವಾಯಿ ಲಿಂಗಣ್ಣನ ಸಾಹಸ ಕೇಳಿದ್ಯೇನೋ ರಾಮಣ್ಣ ? ಉಡುಗಣಿ ಕೋಟೆ ಮುತ್ತಿದ ಹನುಮನಾಯ್ಕನ್ನ ಓಡ್ಸಿಯೇ ಬಿಟ್ನಂತೆ.
ರಾಮಪ್ಪ : ನಮ್ಮ ದೊರೆಗಳ ಮೇಲಿನ ಭಕ್ತಿ ಹಾಂಗಿತ್ತು ಅವಂಗೆ. ಅದ್ಕೇ ಗೆದ್ನಲೇ. ಕೆಳದಿ ಸಂಸ್ಥಾನದ ಕೀರ್ತಿಪತಾಕೆ ಹ್ಯಾಂಗೆ ಮ್ಯಾಗೇರ್ತಾಯಿದೆ ನೋಡು ಕನ್ನಪ್ಪಾ.
ಹನುಮವ್ವ : ಏನ್ರಪ್ಪಾ, ಕಟ್ಟೆ ಮ್ಯಾಗೆ ಕುಂತು ದುಡಿಯೋ ಹೊತ್ನಾಗೆ ಹರಟೆ ಹೊಡೀತಿದೀರೇನ್ರೋ ?
ಗೌರಕ್ಕ : ನಾಡ ಕಟ್ಟೋದಂದ್ರ ಸುಲಭನೇನ್ರೋ ತಮ್ಮಾ, ನೋಡ್ರೀ ನಮ್ಮ ನಾಯಕ ವೆಂಕಟಪ್ಪನೋರು ಹ್ಯಾಂಗ ಹೇಳ್ತಾರೋ ಹಾಂಗೆ ನೆಡ್ಕಾಬೇಕಪಾ.
ಕನ್ನಪ್ಪ : ಅಯ್ಯ್ ಇಲ್ಲಾ ಬಿಡಬ್ಬೀ ನಾವ್ಯಾಕೆ ಏನೇನೋ ಹೇಳಾಣ, ನಾಡಿನ್ನ ಗಾಥಾನಾ ಹಾಡ್ತಾ ಇದ್ವಿ. ಅಷ್ಟ್ರಲ್ಲಿ ನೀವು ಬಂದ್ರಿ ಹೌದು ಗೌರಕ್ಕ.
ಜೋಯೀಸರು : ಎಲ್ರಿಗೂ ಒಳ್ಳೇದಾಗ್ಲಪ್ಪ. ಈ ನಮ್ಮ ವೆಂಕಟಪ್ಪನಾಯಕನ ಆಳ್ವಿಕೆ ಬಂದ್ಮೇಲೆ ಮಳೆ, ಬೆಳೆ ಚೆನ್ನಾಗಾಗ್ತಿದೆ. ಜನಾನೂ ಒಳ್ಳೇ ದಾರೀಲೇ ಹೋಗ್ತಿದ್ದಾರೆ. `ರಾಜಾ ಕಾಲಸ್ಯ ಕಾರಣಂ’ ಅಲ್ಲಿ ವಿಜಯನಗರ ಸ್ವಾರ್ಥಿಗಳಿಗೆ ಬಲಿಯಾಯಿತು. ಆದರೆ ಇಲ್ಲಿ ಕೆಳದಿ ಧೀರನಾಡಾಗಿ ಹೊರಹೊಮ್ಮುತ್ತಿದೆ. ಅಲ್ಲಿ ಮುಳುಗಿದ ಸೂರ್ಯ ಇಲ್ಲಿ ಹುಟ್ಟುತ್ತಿದ್ದಾನೆ.
ಎಲ್ಲರು : ಓ ಜೋಯೀಸರು, ನಮಸ್ಕಾರ ಬುದ್ದೀ.
ಜೋಯೀಸರು : ಎಲ್ರಿಗೂ ಒಳ್ಳೇದಾಗ್ಲಿ. ನೋಡೀಪ್ಪಾ, ನೀವೆಲ್ಲಾ ಒಳ್ಳೇತನದಲ್ಲಿ ನಾಡನ್ನ ಕಟ್ಟೋಕೆ ಹೊರ್ಟಿದೀರಿ. ಆದ್ರೆ ಎಲ್ಲವೂ ನಾವಂದುಕೊಂಡಂತೆ ಆಗೋದಿಲ್ಲ. ಈಗ ನೋಡಿ ಆ ಬರಗಿಯ ದೇವೀನಾಯ್ಕ, ಹನುಮನಾಯ್ಕರು ದೊರೆಗಳೊಂದಿಗೆ ಕಾದಾಡಿ ಜೈಸಲಾಗದೆ, ಓಡಿಹೋಗಿ ದೂರದ ಬಿಜಾಪುರ ಬಾದಷಹನಿಗೆ ಏನೇನೋ ದೂರುಹೇಳಿ ಅಲ್ಲಿಂದ ಬಾಳಾ ದೊಡ್ಡ ಸೈನ್ಯ ಹೊರಡ್ಸಿದಾರಂತೆ.
ರಾಮಪ್ಪ : ಜೋಯೀಸರೇ, ಹಾಗಿದ್ರೆ ಮತ್ತೊಂದು ಯುದ್ಧ ಬಂತು ಅನ್ನಿ.
ಜೋಯೀಸರು : ಹೌದ್ರಪ್ಪ, ಇನ್ನು ಕೆಲವು ವರ್ಷ ಯುದ್ಧಗಳೇ ಅನ್ನಿ. ಸುತ್ತಮುತ್ತ ವಿರೋಧಿಗಳು ಮುತ್ತುತ್ತಿದ್ದಾರೆ. ಒಳಗೆ ರಾಜಧಾನಿಯಲ್ಲೂ ಪೂರ್ತಿ ಕ್ಷೇಮಕರವಾಗಿಲ್ಲ. 
ಹನುಮವ್ವ : ಇಲ್ಲೇನಾಗಿದೆ ಜೋಯೀಸರೇ ?
ಜೋಯೀಸರು : ಇಲ್ಲಿ,…..ಚಿಕ್ಕ ಸಂಕಣ್ಣನಾಯಕರ ಸಾವಿಗೆ ಕಾರಣ ಹುಡುಕುತ್ತಿದ್ದ ಮಂದಿ ರಾಮರಾಜ ನಾಯಕರ ಸಾವಿಗೆ ಕಾರಣರಾದರು. ಇವರನ್ನೆಲ್ಲಾ ಮೆಟ್ಟಿ ಗೆಲ್ಲಬೇಕಾದರೆ ನಮ್ಮ ದೊರೆಯಲ್ಲಿ ಆ ಶಿವನೇ ಮೈಗೂಡಬೇಕು. ಸುಂದರನೂ, ಮಲ್ಲ ಜಟ್ಟಿಯೂ, ಯುದ್ಧವೀರನೂ ಆದ ವೆಂಕಟಪ್ಪನಾಯಕನೇ ನಮ್ಮನ್ನು ಕಾಪಾಡಬೇಕಿದೆ.
ಎಲ್ಲರೂ : ಹೌದೇ ಜೋಯೀಸರೇ, ಸಂದರ್ಭ ಬಿದ್ದರೆ ನಾವೂ ಹೋರಾಡ್ತೇವೆ.
ಜೋಯೀಸರು : ಸರಿಸರಿ ನನಗೆ ಹೊತ್ತಾಯ್ತು. ಅವಸರದ ಕೆಲಸಗಳೇ ಬಹಳ ಇದ್ದಾವೆ. ನಾನಿನ್ನು ಬರ್ತೀನಿ ಹನುಮಕ್ಕ, ಗೌರಮ್ಮ, ಕನ್ನಪ್ಪ, ರಾಮಪ್ಪ ಬರ್ತೀನಿ.


 



                               4.  ಯುದ್ಧ ಸೆಟ್ :   

ಹಿನ್ನೆಲೆಯಿಂದ ಕೂಗು : ಬಿಜಾಪುರದ ಬಾದಷಹರ ಸೈನ್ಯ ಜಡೆಯ ಕೋಟೆಯನ್ನು ಮುತ್ತಿದೆ.
(ರಣಕಹಳೆಯ ಸದ್ದು )

        ಪದ್ಯ :         ಬಡಗುದಿಕ್ಕಿಂದ ಬಂದೆರಗೆ ಖಾನರ ದಂಡು
                          ದೋಖಂಡೆರಾಯ ತಾ ಸಾಹಸವ ಮೆರೆದು |

ಹಿನ್ನೆಲೆಯಿಂದ ಕೂಗು : ಬಿಜಾಪುರದ ಬಾದಷಹರ ಸೈನ್ಯ ಹಾನಗಲ್ಲು ಗುತ್ತಿಗಳನ್ನು  ಆಕ್ರಮಿಸಿಕೊಂಡಿದೆ.

ಮದ್ದಾನೆ ಸಹಿತಲೇ ಬರಿದಗನ ಸೆರೆವಿಡಿದು
  ಸೆರೆಮನೆಗೆ ದೂಡಿದನು ಖ್ಯಾತಿಯನು ಪಡೆದು || 4 ||

ಹಿನ್ನೆಲೆಯಿಂದ ಕೂಗು : ಏಕಲಕ್ಷದರಾಣಿ ಚೆನ್ನಭೈರಾದೇವಿ ಸಮುದ್ರವ್ಯಾಪಾರ ತನ್ನದೆಂದು ನಮ್ಮವರ ಮೇಲೆ ನಿರ್ಬಂಧ ಹೇರುತ್ತಿದ್ದಾಳೆ. 

ಮೆಣಸುಕಾಳಿನರಾಣಿ ಚೆನ್ನಭೈರಾದೇವಿ
ಗಿದ್ದ ಸಿರಿಸುಖದಮಲ ಬಿಡಿಸಿ ತಂದು |
ಬಂಧಿಸುತಲಾಕೆಯನು ಸೀಮೆ ಸೀಮೆಯ ಗೆದ್ದು
ತುಳುನಾಡ ಒಳನಾಡ ಗೆಲ್ದನವನು || 5 ||

ಹಿನ್ನೆಲೆಯಿಂದ ಕೂಗು : ಭೈರಸ ಒಡೆಯರನ್ನು ಗೆದ್ದು ಕೆಳದಿ ಸೈನ್ಯ ಬಾರಕೂರನ್ನು ವಶಪಡಿಸಿಕೊಂಡು ಮಂಗಳೂರಿನಕಡೆ ಸಾಗುತ್ತಿದೆ.

ಕೊಡಗನ್ನು ಕೈವಶಕೆ ಬೇಲೂರು ತನ್ನೊಶಕೆ
ಮತ್ತೆ ಪಡುವಣದೆಸೆಗೆ ನಾಡದಿಲ್ಲ |
ಮೂಡಣದ ಪಡುವಣದ ಬಡಗಣದ ತೆಂಕಣದ
ದೆಸೆದೆಸೆಯ ಕಪ್ಪಗಳ ಲೆಕ್ಕವಿಲ್ಲ || 6 ||

ಹಿನ್ನೆಲೆಯಿಂದ ಕೂಗು : ಕೆಳದಿಯ ಸೈನ್ಯವು ಉಳ್ಳಾಲದ ಸೈನ್ಯವನ್ನು ಕೂಡಿಕೊಂಡು ಮಂಗಳೂರನ್ನು ಗೆದ್ದಿತು. ಕಾಮರಾಜನೊಂದಿಗೆ ಪೋರ್ಚುಗೀಸರೂ ಅಲ್ಲಿಂದ ಪಲಾಯನ ಮಾಡಿದ್ದಾರೆ.

ಕೆಳದಿ ಸಂಸ್ಥಾನಕ್ಕೆ ಜಯವಾಗಲಿ, ರಾಜ ವೆಂಕಟಪ್ಪನಾಯಕರಿಗೆ ಜಯವಾಗಲಿ.


5.  ಶಿವಾಲಯ ಸೆಟ್ : 

             ಪದ್ಯ :          ಎಡೆಹಳ್ಳಿ ಕೋಟೆಯನು ಆನಂದಪುರಗೊಳಿಸಿ
                         ತಾಂಡವೇಶ್ವರನಿರಿಸಿ ಪೂಜೆಗೈದು |


ವೆಂಕಟಪ್ಪನಾಯಕ : ಹೇ ತಾಂಡವೇಶ್ವರ, ಕೃಪಾಕರಾ ನನ್ನನ್ನು ಮುತ್ತಿದ ಶತೃಗಳಿಂದ ಪಾರುಮಾಡಿದೆ ತಂದೆ. ಇದೋ ನಿನಗಾಗಿ ಆನಂದಪುರವೆಂಬ ಹೆಸರಿನ ಈ ಊರನ್ನು ಕಟ್ಟಿ ಇಲ್ಲಿ ನಿರ್ಮಿಸಿದ ಈ ಶಿವಾಲಯದಲ್ಲಿ ಬಂದು ನನ್ನ ಸೇವೆಯನ್ನು ಸ್ವೀಕರಿಸಿ ಆನಂದಗೊಳಿಸು ಪ್ರಭೂ.

ಪ್ರಜೆಗಳು : ಮಹಾರಾಜರಿಗೆ ಅಡ್ಡಬಿದ್ದೆವು ಸ್ವಾಮಿ.
1 :   ನಾವು ಹಳ್ಳೀ ರೈತಾಪಿಗಳು ಸ್ವಾಮಿ
2 :   ಕುಡಿಯಾಕೆ ಸರಿಯಾಗಿ ನೀರಿಲ್ಲ, ದನಕರುಗಳ್ನ ಹ್ಯಾಂಗೆ ಸಾಕಾದು ಸ್ವಾಮಿ.
3 :  ಇರಾದ್ರಾಗೆ ಅಲ್ಪಸ್ವಲ್ಪಾನೂ ವರ್ಷಕ್ಕೆ ಮರ್ನಾಲ್ಕದಪ ಬಂದು ತೆರಿಗೆ ಅಂತ ಕಿತ್ಕೊಂಬುಡ್ತಾರೆ ದಣೀ, ಹ್ಯಾಂಗೆ ನಾವು ಅನ್ನ ಕಾಣಾದು, ಮಕ್ಳುಮರಿ ಸಾಕಾದು ಹೇಳಿ ಸ್ವಾಮಿ.
ವೆಂಕಟಪ್ಪನಾಯಕ : ರೈತನು ದೇಶದ ಬೆನ್ನೆಲುಬು. ನೀವು ಜಾಣರಾಗಬೇಕು, ಶಿಸ್ತುಕಲಿಯಬೇಕು, ಊರುಊರುಗಳಲ್ಲಿ ಕೆರೆಗಳನ್ನು ಕಟ್ಟೋಣ. ಕಾಲುವೆಗಳನ್ನು ತೆಗೆಸೋಣ, ಉತ್ತಮ ನೀರಿನ ಸೌಕರ್ಯವುಳ್ಳ ಭೂಮಿ ಕೃಷಿಗೇ ಸಲ್ಲಬೇಕು. ನಿಮ್ಮ ಹೊಲ, ತೋಟ, ಗದ್ದೆಗಳನ್ನೂ ಮಣ್ಣಿನ ಗುಣದಮೇಲೆ ವಿಭಾಗಿಸಿ ಉತ್ಪನ್ನ ಮತ್ತು ವ್ಯಾಪ್ತಿಗಳನ್ನು ಅಂದಾಜುಮಾಡಿ ತೆರಿಗೆ ವಿಧಿಸಲಾಗುವುದು. ಇದು ನಾನು ಪ್ರಾರಂಭಿಸುವ ಕೆಳದಿಯ ಶಿಸ್ತು. ಇನ್ನು ಮುಂದೆ ನಾಡಿನ ರೈತರೆಲ್ಲಾ ಈ ಶಿಸ್ತಿಗೆ ಒಳಪಟ್ಟು ಕೈತುಂಬಾ ಕೆಳದಿಯ ಶ್ರೀಸದಾಶಿವ ಬಂಗಾರದ ನಾಣ್ಯಗಳನ್ನು ಬಾಚಿಕೊಳ್ಳಿರಿ.
ರೈತರು : ವೆಂಕಟಪ್ಪನಾಯಕರಿಗೆ ಜಯವಾಗಲಿ. ಕೆಳದಿ ಸಂಸ್ಥಾನಕ್ಕೆ ಜಯವಾಗಲಿ, ರಾಜ ವೆಂಕಟಪ್ಪನಾಯಕರಿಗೆ ಜಯವಾಗಲಿ.




6.  ಅರಮನೆ  ಸೆಟ್ :

            ಪದ್ಯ :           ಹಿರಿಯಜ್ಜ ಕೋಟೆಕೋಲಾಹಲನು ಶ್ರೀಸದಾ
                          ಶಿವರಾಯ ನಾಯಕರ ಜ್ಞಾಪಕಾರ್ಥ |
                                ಕೆರೆಕಟ್ಟೆಗಳ ಕಟ್ಟಿ ಗಣಪತಿಯ ಗುಡಿಕಟ್ಟಿ
                                  ಪಟ್ಟಣವ ಕಟ್ಟಿದುದು ಪಾರಮಾರ್ಥ || 8 ||


ರೈತರು : ಪ್ರಭುಗಳೇ ನಮ್ಮಪಾಲಿನ ದೇವರು ನೀವು. ಎಂತೆಂತಹಾ ಕೆರೆಗಳನ್ನ ಕಟ್ಟಿಸಿದಿರಿ. ಎಲ್ಲಿ ನೋಡಿದ್ರೂ ಹಸಿರು ಕಾಣ್ತಾಯಿದೆ. ತೆರಿಗೆ ಅಂತ ಜೀವ ಹಿಂಡೋ ಜನಯಿಲ್ಲ. ಎಲ್ಲಾ ಕಡೆ ಶಿಸ್ತು.
ಮುಸ್ಲೀಂಪ್ರಜೆ : ಎಲ್ಲೂ ಕಾಣದ ರಕ್ಷಣೆ ನಮಗೆ ಸಿಗ್ತಾಯಿದೆ. ಮಸೀದಿ ಕಟ್ಸಿದೀರಿ. ಸೈನ್ಯಕ್ಕೆ ಸೇರ್ಸಿಕೊಂಡಿದೀರಿ. ಯಾವ ಬಾದಷಹರೂ ಕೊಡದ ಗೌರವವನ್ನು ನೀವು ನಮ್ಮ ಸಮಾಜಕ್ಕೆ ಕೊಟ್ಟಿದೀರಿ ಅದಕ್ಕೆ ನಾವು ಋಣಿಗಳು. ನಿಮ್ಮ ಸೇವೆಗೆ ಸದಾನಾವು ಸಿದ್ಧ.
 ಕಲಾವಿದೆ : ಪ್ರಭು, ಸದಾಶಿವ ಸಾಗರ ನಗರದಲ್ಲಿ ನಾಟಕಶಾಲೆ ನಿರ್ಮಿಸಿ ನನ್ನಂತಹ ಕಲಾವಿದರನ್ನು ರಕ್ಷಿಸಿ ಪೆÇ್ರೀತ್ಸಾಹಿಸಿ ಕಾಪಾಡಿದ್ದೀರಿ. ಕಲಾಸೇವೆಗೆ ಅವಕಾಶ ಮಾಡಿಕೊಟ್ಟೀದೀರಿ. ಕೃತಾರ್ಥರು ನಾವು.




ಪದ್ಯ :          ನಾಲ್ಕು ದಶಕಕು ಮಿಕ್ಕಿ ಆಡಳಿತೆಯನು ನಡೆಸಿ
           ಪೋರ್ಚುಗೀಸರ ಎದೆಯ ನಡುಕವೆನಿಸಿ |
                ಕೆಳದಿಯನು ವಿಸ್ಥರಿಸಿ ಧೀಮಂತರನು ಬೆಳೆಸಿ
          ಮತ್ತೆ ಧರ್ಮವ ಮೆರೆದ ನಾಡಶಿಲ್ಪಿ || 9 ||


ವಿಠ್ಠಲ್ ಸೇನಾಯ್ : ಮಹಾಪ್ರಭುಗಳಿಗೆ ಪ್ರಾಣಾಮಗಳು. ಭಂಗರಾಜನಿಗೆ ಸಂಬಂಧಿಸಿದಂತೆ ಮಹಾಪ್ರಭು ಗಳೊಂದಿಗೆ ತುರ್ತು ಮಾತುಗಳಾಡಲು ಗೋವಾದಿಂದ ಬಂದ ಪೋರ್ಚಗಲ್‍ದೇಶದ  ಪ್ರತಿನಿಧಿ ಜಿಯೋ ಫರ್ನಾಂಡೀಸ್ ಲೆಯ್ಟೋನ್ ರವರು ಹೊರಗಡೆ ಕಾಯುತ್ತಿದ್ದಾರೆ ಸ್ವಾಮೀ.
ವೆಂಕಟಪ್ಪನಾಯಕ : ಸರಿ ಬರಹೇಳು .
ಜಿಯೋ ಫರ್ನಾಂಡೀಸ್ ಲೆಯ್ಟೋನ್ : ಮಹಾಸ್ವಾಮಿ ನಮಸ್ಕಾರಗಲು. ಸ್ಪೇನ್ನನ ದೊರೆಯ ಪರವಾಗಿ ನಿಮಗೆ ಒಳ್ಳೇ ಕುದುರೆಗಳನ್ನ ಉಡುಗೊರೆ ತಂದಿದೀನಿ. ನಮಸ್ಕರಗಲು. ನಾನು ಗೋವಾ ವೈಸ್ರಾಯ್ ಕಡೇಂದ ಬಂದೀದೀನಿ. ಮ್ಯಾಂಗಲೂರ್ ನಿಮ್ದೇ, ಉಲ್ಲಾಲನೂ ನಿಮ್ದೇ, ಬಟ್ಕಲಾನೂ ನಿಮ್ದೇ, ಈ ಕಡೆ ಹೊನ್ನೋರುನೂ ಎಲ್ಲಾ ನಿಮ್ದೇ ಆಗಿಬಿಟ್ಟಿದೆ ರಾಜರೇ. ಆ ಬಂಘೇಲ್ ರಾಜ್ ಕಾಮ್ರಾಜ್ ನಿಮ್ಗೆ ತುಂಬಾ ಹೆದರ್ಕಂಡಿದೆ. ಯುದ್ಧ ಗಿದ್ಧ ಏನೂ ಬೇಡ. ನನ್ಗೆ ಸ್ವಲ್ಪ ಜೀವನಾಂಶಕೊಟ್ರೆ ಸಾಕು ಅಂತಿದಾನೆ. ತಾವು ದೊಡ್ಡ ಮನ್ಸು ಮಾಡ್ಬೇಕು. ಹಾಗೆ ನಮ್ದು ಮೆಣ್ಸಿನಕಾಳು ವ್ಯಾಪಾರ, ಬಟ್ಟೆ ವ್ಯಾಪಾರ ಮತ್ತೆ,,,
ವೆಂಕಟಪ್ಪನಾಯಕ :  ಸಾಕು ನಿಲ್ಸೀ, ನಿಮ್ಮ ಮಾತು ನಂಬುಗೆಗೆ ಅರ್ಹವಾಗಿಲ್ಲ. ಆ ಉಳ್ಳಾಲದ ಅಬ್ಬಕ್ಕಳನ್ನು ಬೆದರಿಸಲು ಆ ಕಾಮರಾಜನನ್ನು ಎತ್ತಿಕಟ್ಟಿದವರು ನೀವೇ, ಈಗ ಸೋತು ಸಂಧಾನದ ಮಾತುಗಳನ್ನಾಡುತ್ತಿರುವಿರಿ. ಯಾರಿಗೆ ಬೇಕಿದೆ ನಿಮ್ಮ ಈ ಸಂಧಾನ. ನೀವು ಸೋತಾಗ ಮಾತ್ರವೇ ತಾನೆ ಇಂತಹ ಮಾತುಗಳು ? ಕಾಮರಾಜನಿಗೆ ಆಶ್ರಯವನ್ನು ನೀವು ಗೋವಾದಲ್ಲಿ ನೀಡಬಹುದು. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಇಲ್ಲಿ ನಮಗೆ ಮುಖ ತೋರಿಸುವಂತಿಲ್ಲವೆಂದು ಅವನಿಗೆ ಹೇಳಿಬಿಡಿ. ಈ ಹಿಂದಿನ ಅನುಭವಗಳನ್ನು ಮರೆತಿಲ್ಲ ತಾನೆ ? ನಿಮ್ಮ ಸ್ಪೇನ್ ದೊರೆಯೊಂದಿಗೆ ಸ್ನೇಹಹಸ್ತಕ್ಕೆ ನಾವು ಸಿದ್ದರು. ಆದರೆ ನಮ್ಮ ನಾಡಿನ ವ್ಯವಹಾರಗಳು ನಮ್ಮ ನಿರ್ಧಾರದಂತೆಯೇ ನಡೆಯಬೇಕು. ಹಿಂದಿನ ವರ್ಷ ನಮ್ಮ ರೈತರೊಂದಿಗೆ ನೀವು ಮಾಡಿದ ವ್ಯಾಪಾರವನ್ನು ಮೊದಲು ಮುಗಿಸಿ. ನಂತರ ಈ ವರ್ಷದ ಬಗ್ಗೆ ಮಾತಾಡೋಣ. ವ್ಯಾಪಾರ ವ್ಯಾಪಾರವೇ ಆಗಿರಬೇಕು. ನೀವು ಅದಕ್ಕೆಂದು ಬಂದವರು. ಅಷ್ಟನ್ನೇ ಮಾಡಿ ಸಾಕು. ರಾಜಕೀಯ ಮಾಡಿದರೆ ಜಾಗ್ರತೆ.
ಜಿಯೋ ಫರ್ನಾಂಡೀಸ್ ಲೆಯ್ಟೋನ್ : ಛೇ ಛೇ ಎಲ್ಲಾದರೂ ಉಂಟೇ ?    
ವೆಂಕಟಪ್ಪನಾಯಕ :  ಪುಟ್ಟಪ್ಪಯ್ಯಾ, ಈ ವಿಟ್ಟಲನೊಂದಿಗೆ ನೀವು ಮಾತಾಡಿ, ಆನಂತರ ಇವರನ್ನ ಕಳಿಸಿ.
ಪುಟ್ಟಪ್ಪಯ :   ಆದೀತು. ಅಪ್ಪಣೆ ಮಹಾಸ್ವಾಮಿ
ಫಿಯಾತ್ರೋ ಡೆಲ್ಲಾವೆಲ್ಲೆ : ಹ್ಹೆಹ್ಹೆಹ್ಹೆ ನಾನು ಇಟೆಲಿ ದೇಶದವನು ಫಿಯಾತ್ರೋಡೆಲ್ಲಾವೆಲ್ಲೆ. ಇಡೀ ವಿಶ್ವನೇ ಸುತ್ತಬೇಕೂಂತ ಹೊರಟು ಹೀಗೆ ಭಾರತಕ್ಕೆ ಬಂದೆ. ಇಲ್ಲಿ ಈ ಸುಂದರ ಕಾಡುಗಳ ನಡುವೆ ಈ ದಿಟ್ಟ ಸಾಮ್ರಾಜ್ಯವನ್ನು ನೋಡಿ ಸಂತೋಷವಾಯಿತು. ಇಲ್ಲಿನ ಜನರ ನಡೆ, ನುಡಿ, ಊಟ, ಆಟ, ಹಾಡು, ನೃತ್ಯ ಎಲ್ಲವೂ ನನಗೆ ಮರೆಯಲಾರದ ನೆನಪುಗಳು. ಇದನ್ನೆಲ್ಲಾ ಚೆನ್ನಾಗಿ ಬರೆದು ನನ್ನ ಊರಿಗೆ ಕಳಿಸುವೆ. ನಾನು ಊರಿಗೆ ಹೋದಾಗ ನನ್ನವರಿಗೆ ಹೀಗೇ ಬದುಕಲು ತಿಳಿಸುವೆ.




***


ವೆಂಕಟಪ್ಪನಾಯಕ :  ಶಿವಪ್ಪನಾಯಕ, ವೀರಭದ್ರನಾಯಕರೇ,
ಇಬ್ಬರೂ :    ಏನಪ್ಪಣೆ ಪ್ರಭೂ,
ವೆಂಕಟಪ್ಪನಾಯಕ : ಮಕ್ಕಳೇ ನನಗೆ ವಯಸ್ಸಾಗುತ್ತಾ ಬಂತು. ಈ ಇಕ್ಕೇರಿಯನ್ನಾಳುತ್ತಾ ಎಷ್ಟೊಂದು ವರ್ಷಗಳು ಕಳೆದುಹೋದವು. ನನ್ನ ರಾಣಿಯರೂ ನನ್ನನ್ನು ಅಗಲಿ ಶಿವೈಕ್ಯರಾದರು. ಮಗನೂ ಅಕಾಲ ಸಾವಿಗೆ ತುತ್ತಾದ. ಶಿವಪ್ಪ,
ಶಿವಪ್ಪನಾಯಕ : ಚಿಕ್ಕಪ್ಪ, ನಿಮ್ಮ ಮಾತುಗಳೇಕೋ ಒಗಟಾಗಿದೆಯಲ್ಲ, ಏಕೆ ಚಿಂತೆ ? ನೀವು ಆಧ್ಯಾತ್ಮಿಕ ಶಾಂತಿಯನ್ನೂ ಕಂಡವರಲ್ಲವೇ ?
ವೆಂಕಟಪ್ಪನಾಯಕ : ಹೌದು, ಆದ್ದರಿಂದಲೇ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬಲ್ಲೆ. ಶಿವಪ್ಪ ನೀನು ಈ ಮೊಮ್ಮಗ ವೀರಭದ್ರನನ್ನು ಚೆನ್ನಾಗಿ ನೋಡಿಕೋ. ನಾನಿನ್ನು ಹೆಚ್ಚುಕಾಲ ಉಳಿಯಲಾರೆ.
ವೀರಭದ್ರನಾಯಕ : ಯಾಕೆ ತಾತ, ಇಂಥಾ ಮಾತಾಡುತ್ತಿದ್ದೀರಿ. ನನಗೇಕೋ ತುಂಬಾ ಭಯವಾಗುತ್ತಿದೆ.
ವೆಂಕಟಪ್ಪನಾಯಕ : ಧೃತಿಗೆಡಬಾರದು. ಆಡಳಿತದ ಶಿಸ್ತು ಮರೆಯಬಾರದು. ಸೇವೆಯಲ್ಲಿ ಹಿಂದುಳಿಯಬಾರದು. ಹಿರಿಯರ ಕೀರ್ತಿಗೆ ಊನ ಬಾರದಂತೆ ಚೆನ್ನಾಗಿ ಆಡಳಿತ ನಡೆಸು.  ಶಿವಪ್ಪ, ನೀನು ಮೈಯೆಲ್ಲಾ ಕಣ್ಣಾಗಿ ನಾಡನ್ನು ರಕ್ಷಿಸು. ಈ ನಾಗರಮುರಿ ಕತ್ತಿ ಎಂದೂ ಸೋಲು ಕಂಡಿಲ್ಲ. ಇದನ್ನು ಚೆನ್ನಾಗಿ ಬಳಸು. ಇಗೋ ಕತ್ತಿ.
                ವೀರಭದ್ರ, ನೀನು ಮುಂದಿನ ಇಕ್ಕೇರಿಯ ದೊರೆಯಾಗಿ ಧರ್ಮದಿಂದ ರಾಜ್ಯಭಾರ ನಡೆಸು. ಉತ್ತರಾಧಿಕಾರಿಯಾದ ನಿನಗಿದೋ ಮುದ್ರೆಯುಂಗುರ.
ಇಬ್ಬರೂ :    ನಿಮ್ಮ ಸೂಚನೆಯನ್ನು ತಲೆಯಲ್ಲಿ ಹೊತ್ತು ಪಾಲಿಸುತ್ತೇವೆ.
 




           ಪದ್ಯ :         ಕಲಿಯಾಗಿ ಕವಿಯಾಗಿ ಆಧ್ಯಾತ್ಮ ಒಲವಾಗಿ
                         ಇಕ್ಕೇರಿಬಲವಾಗಿ ಹೆಸರುಗಳಿಸಿ |
                               ದಾನ ಧರ್ಮವ ನಡೆಸಿ ಮಠಮಾನ್ಯ ಸತ್ಕರಿಸಿ
                           ಕಿರಿಯಪೀಳಿಗೆಗಾಗಿ ನೀತಿಯುಳಿಸಿ || 10 ||



ನಿರೂಪಕಿ 1 : ಹೀಗೆ ನಮ್ಮ ದೋನೇಜ ಅಂದರೆ ಎರಡುಕೈಗಳಲ್ಲೂ ಭರ್ಜಿಗಳನ್ನು ಹಿಡಿದು ಯುದ್ಧಮಾಡಿದ, ದೋಖಂಡೆರಾಯ ಎಂದರೆ ಎರಡುಕೈಗಳಲ್ಲೂ ಖಡ್ಗಗಳನ್ನು ಹಿಡಿದು ಯುದ್ಧಮಾಡಿ ಬಿರುದುಗಳಿಸಿಮೆರೆದ ವೆಂಕಟಪ್ಪನಾಯಕ ಅನೇಕಾನೇಕ ದೇವಾಲಯ ಶಿವಾಲಯಗಳನ್ನು ಮಠಗಳನ್ನೂ ಮಸೀದಿಗಳನ್ನು ಕಟ್ಟಿಸಿದ್ದನು. ಕೊಲ್ಲೂರಿನ ಮೂಕಾಂಬಿಕಾ ದೇವಾಲಯವನ್ನು ಜೀರ್ಣೋದ್ಧಾರ ಮಾಡಿಸಿ ಕಲ್ಲು ಹಾಸನ್ನು ನೆಲಕ್ಕೆ ಹಾಕಿಸಿದನು. ಹಾನಗಲ್ಲಿನಲ್ಲಿ ವಿಜಯಸ್ಥಂಭ ಸ್ಥಾಪಿಸಿದನು.

ನಿರೂಪಕಿ 2 : ಶೃಂಗೇರಿಯ ಶ್ರೀ ವಿದ್ಯಾಶಂಕರ ದೇವಸ್ಥಾನ ಕಟ್ಟಿಸಿ ಹಾಗುಮಠಕ್ಕೆ ಉದಾರ ಕಾಣಿಕೆ ನೀಡಿ ಗುರುಗಳನ್ನು ಸತ್ಕರಿಸಿದ್ದನು. ಪ್ರಜಾವತ್ಸಲ, ನ್ಯಾಯಪರ, ಕವಿ, ದಾನಿ ಹೀಗೆ ಹೆಗ್ಗಳಿಕೆ ಪಾತ್ರನಾಗಬಲ್ಲ ಈತನು ಶಿವಪ್ಪನಾಯಕ  ಮತ್ತು ವೀರಭದ್ರನಾಯಕರನ್ನು ತನ್ನ ಗರಡಿಯಲ್ಲಿ ಚೆನ್ನಾಗಿ ಬೆಳೆಸಿದ್ದನು. ಸ್ವತಃ ಕವಿಯಾಗಿದ್ದ ಈತ ಕವಿ, ಸಾಹಿತಿ, ಕಲಾವಿದರುಗಳಿಗೆ ಆಶ್ರಯ ನೀಡಿದ್ದನು. 

ನಿರೂಪಕಿ 3 : ಹಿರಿಯ ವೆಂಕಟಪ್ಪನಾಯಕನು ಕಟ್ಟಿಸಿದ ನೂರಾರು ಕೆರೆಗಳು, ದೇವಾಲಯಗಳು ಸ್ಮಾರಕಗಳಾಗಿ ಇಂದಿಗೂ ಉಳಿದಿವೆ. ಆದರೆ ನಮ್ಮ ಉದಾಸೀನತೆ ಅದನ್ನು ಹಾಳುಗೆಡವದಿರಲಿ. ನಾಡಿನ ಅಭಿಮಾನಕ್ಕೆ ಕಾರಣರಾದವರನ್ನು ಹೆಮ್ಮೆಯಿಂದ ಸ್ಮರಿಸುವ ಅಭ್ಯಾಸ ನಮ್ಮದಾಗಲೆಂದು ಆಶಿಸುತ್ತೇವೆ. ಹರಡಲಿ ಎಲ್ಲೆಡೆ ಕನ್ನಡ ಕಸ್ತೂರಿಯ ಕಂಪು.




ಜೈ ಭುವನೇಶ್ವರೀ    ಜೈ ಜೈ ಭುವನೇಶ್ವರೀ



************************************************************************************************

ದೋನೇಜ ವೆಂಕಟಪ್ಪನಾಯಕನ ಯಶೋಗಾಥೆ                         - ಸದಾನಂದ 
ದೂರದರ್ಶನಕ್ಕಾಗಿ ಸಿದ್ಧಪಡಿಸಿದ ಗೀತನೃತ್ಯರೂಪಕ ಕಾರ್ಯಕ್ರಮ :                                                                                                                        ಕಾಲಮಿತಿ : 25 ನಿಮಿಷ.

ಸೆಟ್ಟಿಂಗ್ಸ್ :

(1) ಕನ್ನಡ ಕಸ್ತೂರಿ ಹಾಡಿಗೆ ನೃತ್ಯ : ಬರುವ ಪಾತ್ರಗಳು = ರಾಜರುಗಳು, ಕವಿಗಳು,   ನದಿಗಳು. ನಿರೂಪಕರು, ರಾಜಲಾಂಛನಗಳು

                                 (ಸಮಯ=3 ನಿಮಿಷಗಳು)

(+) ನಿರೂಪಣೆ :                                                                                                                                                                                                            (2 ನಿಮಿಷ)
(2) ಅರಮನೆ ಸೆಟ್ಟಿಂಗ್ : ರಾಜವೆಂಕಟಪ್ಪ, ಹೊಗಳುಭಟರು, ಮಂತ್ರಿ, ಕುಶಲಕರ್ಮಿಗಳು, ಸೇನಾಧಿಕಾರಿಗಳು, ಇತ್ಯಾದಿ.

                    (ಸಮಯ = 2.5 ನಿಮಿಷಗಳು )

(3) ಪುರಜನರ ಕಟ್ಟೆ ಸೆಟ್ಟಿಂಗ್ :  ಕನ್ನಪ್ಪ, ರಾಮಪ್ಪ,  ಹನುಮವ್ವ,  ಗೌರಕ್ಕ,  ಜೋಯೀಸರು, ಇತ್ಯಾದಿ                                                                    (ಸಮಯ = 2.5 ನಿಮಿಷಗಳು)

(4) ಯುದ್ಧಭೂಮಿಸೆಟ್ಟಿಂಗ್: (1)  ಖಾನರು & ಶತೃಸೈನ್ಯ, - ವೆಂಕಟಪ್ಪನ ಸೈನ್ಯ
                                    (2) ಚೆನ್ನಭೈರಾದೇವಿ, & ಪೋರ್ಚುಗೀಸರು- ವೆಂಕಟಪ್ಪನ ಸೈನ್ಯ,              
                                   (3) ಕಾಮರಾಜ, & ಪೋರ್ಚುಗೀಸರು- ಅಬ್ಬಕ್ಕ, ವೆಂಕಟಪ್ಪನ ಸೈನ್ಯ                                                                             (ಸಮಯ=4.5 ನಿಮಿಷಗಳು)

(5) ಶಿವಾಲಯ ಸೆಟ್ಟಿಂಗ್ : ವೆಂಕಟಪ್ಪ, ಇಬ್ಬರು ರಾಣಿಯರು, ಭಟರು, ರೈತರು ಇತ್ಯಾದಿ

(ಸಮಯ = 2.5 ನಿಮಿಷಗಳು )

(6) ಅರಮನೆ ಸೆಟ್ಟಿಂಗ್ : ವೆಂಕಟಪ್ಪ, ರಾಜಭಟರು, ಕುಶಲಕರ್ಮಿಗಳು,  ರೈತರು,  ಮುಸ್ಲೀಂ, ಕಲಾವಿದೆ, ಮಂತ್ರಿ, ವಿಠಲ್‍ಸೇನಾಯ್, 
                                       ರಾಯಭಾರಿ, ಪ್ರವಾಸಿ, ಶಿವಪ್ಪನಾಯಕ,  ವೀರಭದ್ರನಾಯಕ, ಸೇನಾಧಿಕಾರಿಗಳು, ಇತ್ಯಾದಿ.

                                (ಸಮಯ = 6 ನಿಮಿಷಗಳು )

(7) ಕನ್ನಡ ಕಸ್ತೂರಿ ಹಾಡಿಗೆ ನೃತ್ಯ : ನಿರೂಪಕರು, & ಎಲ್ಲರು                                                                                                                             (ಸಮಯ = 2ನಿಮಿಷಗಳು)


- ಸದಾನಂದ

 

Comments

Submitted by ಗಣೇಶ Tue, 12/18/2012 - 00:25

ಸದಾನಂದ ಅವರೆ, ನಾಟಕ ಇಷ್ಟವಾಯಿತು.>>>.... ಮ್ಯಾಂಗಲೂರ್ ನಿಮ್ದೇ, ಉಲ್ಲಾಲನೂ ನಿಮ್ದೇ, ಬಟ್ಕಲಾನೂ ನಿಮ್ದೇ, ಈ ಕಡೆ ಹೊನ್ನೋರುನೂ ಎಲ್ಲಾ ನಿಮ್ದೇ ಆಗಿಬಿಟ್ಟಿದೆ ರಾಜರೇ, << ಫರ್ನಾಂಡೀಸ್ ಬಾಯಲ್ಲಿ ಅತೀ ಕೆಟ್ಟ ಕನ್ನಡ ಉಪಯೋಗಿಸಿಲ್ಲ. ಹಾಗೇ..>>>ಮುಸ್ಲೀಂಪ್ರಜೆ : ಎಲ್ಲೂ ಕಾಣದ ರಕ್ಷಣೆ ನಮಗೆ ಸಿಗ್ತಾಯಿದೆ. ಮಸೀದಿ ಕಟ್ಸಿದೀರಿ. ಸೈನ್ಯಕ್ಕೆ ಸೇರ್ಸಿಕೊಂಡಿದೀರಿ. ಯಾವ ಬಾದಷಹರೂ ಕೊಡದ ಗೌರವವನ್ನು ನೀವು ನಮ್ಮ ಸಮಾಜಕ್ಕೆ ಕೊಟ್ಟಿದೀರಿ ಅದಕ್ಕೆ ನಾವು ಋಣಿಗಳು. ನಿಮ್ಮ ಸೇವೆಗೆ ಸದಾನಾವು ಸಿದ್ಧ.>>ಸಹ ಸುಂದರ ಕನ್ನಡದಲ್ಲೇ ಮಾತನಾಡಿದ್ದಾರೆ. ಉತ್ತಮ ನಾಟಕ.-ಗಣೇಶ.