ಚಿಗುರ ಚಿವುಟಬೇಕೆ?
(ಚಿತ್ರಕೃಪೆ:google)
2001ನೇ ಇಸವಿ. ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದೆನಾದ್ದರಿಂದ ಎಲ್ಲವೂ ಹೊಸತು.
ಹೊಸ ಸ್ಥಳ, ಹೊಸ ಕೋರ್ಸು, ಹೊಸ ಮನೆ, ಹೊಸ ರುಚಿ, ಹೊಸ ಜನಗಳ ಒಡನಾಟ, ಒಟ್ಟಿನಲ್ಲಿ ಹೊಸ ಜೀವನ ಶುರುವಾಗಿತ್ತು.
ಅದೇಕೋ ಕೊಂಚ ಸಂಕೋಚ ಮತ್ತು ಆತ್ಮ ವಿಶ್ವಾಸದ ಕೊರತೆ. ಎಲ್ಲಿ ನನ್ನನ್ನು ಹಳ್ಳಿಯವನು ಅಥವಾ ಮಾತನಾಡೋಕೆ ಇಂಗ್ಲಿಷ್ ಬರುವುದಿಲ್ಲ ಅಂತ ಹೀಯಾಳಿಸಿಬಿಡುತ್ತಾರೇನೋ ಅನ್ನುವ ಆತಂಕ. ಕಾಲೇಜಿಗೆ ಸೇರಿದ ಬಹಳಷ್ಟು ತಿಂಗಳುಗಳ ಕಾಲ ನಮ್ಮ ಗುಂಪಿನ ಹತ್ತಿರದ ಹುಡುಗರೊಡನೆ ಮಾತನಾಡುತ್ತಿದ್ದೆ ಹೊರತು ಬೇರಾರ ಜೊತೆಯಲ್ಲೂ ಮಾತನಾಡುತ್ತಿರಲಿಲ್ಲ.
ಇಂಗ್ಲಿಷ್ ಭಾಷೆ ಹಳ್ಳಿಯ ಹುಡುಗರನ್ನು ಅದೆಷ್ಟು ಪೇಚಾಟಕ್ಕೆ ಸಿಕ್ಕಿಸಿಬಿಡುತ್ತದೆ ಅನ್ನುವುದು ಆ ಹುಡುಗರಿಗೆ ಮಾತ್ರ ಗೊತ್ತು.
ಅದರ ಬಗ್ಗೆ ಬೇರೊಂದು ಸಲ ಮಾತನಾಡೋಣ.
ಚಿಕ್ಕಂದಿನಿಂದಲೂ ನಾನು ಆಟಗಳಲ್ಲಿ ಕೊಂಚ ಕಮ್ಮಿ ಆಸಕ್ತಿ ತೋರಿದವನು.
ಆದರೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ (ಅಂದರೆ ಎಲ್ಲಿ ದೈಹಿಕ ಶ್ರಮ ಇಲ್ಲವೋ ಅಂತಹ ಚಟುವಟಿಕೆಗಳಲ್ಲಿ !! )ಬಹಳ ಹುರುಪಿನಿಂದ ಪಾಲ್ಗೊಳ್ಳುತ್ತಿದ್ದೆ.
ನನಗೆ ಬಹಳ ಸಂತೋಷ ಕೊಡುವ ಕಾರ್ಯಕ್ರಮಗಳೆಂದರೆ- ಹಾಡುವುದು, ಅಭಿನಯ ಮತ್ತು ಮಿಮಿಕ್ರಿ!! ಬಹಳಷ್ಟು ಬಾರಿ ವಾರ್ಷಿಕೋತ್ಸವಗಳಲ್ಲಿ ಭಾಗವಹಿಸಿ ಇವುಗಳನ್ನೆಲ್ಲ ಮಾಡಿದ್ದೆನಾದರೂ ಹತ್ತನೇ ತರಗತಿಯ ನಂತರದ ನಗರ ಜೀವನ ಇವಕ್ಕೆಲ್ಲ ಕೊಂಚ ಬ್ರೇಕ್ ಹಾಕಿತ್ತು.
ಬಹಳ ಅಂತರ್ಮುಖಿಯಾಗಿದ್ದ ನಾನು ಇಂಜಿನಿಯರಿಂಗ್ ನ 2ನೇ ವರ್ಷದ ನಂತರ ಕೊಂಚ ಹೊಸ ವಾತಾವರಣಕ್ಕೆ ಹೊಂದಿಕೊಳ್ಳತೊಡಗಿದೆ. ಎಲ್ಲರೂ ಗೆಳೆಯರಾಗತೊಡಗಿದರು. ನಮಗೆ ಪಾಠ ಮಾಡುತ್ತಿದ್ದ ಕನಕವಳ್ಳಿ ಎನ್ನುವ ಟೀಚರ್ ಒಬ್ಬರು ತಮ್ಮ ತರಗತಿಗಳಲ್ಲಿ, ಬಹಳಷ್ಟು ಸಮಯ ಪಾಠಕ್ಕಿಂತ ಟೈಮ್ ಪಾಸ್ ಮಾಡುತ್ತಿದ್ದುದೇ ಹೆಚ್ಚು!! :) ಯಾರಿಂದಲೋ ನಾನು ಮಿಮಿಕ್ರಿ ಮಾಡುತ್ತೇನೆ ಅನ್ನುವ ವಿಷಯ ನಮ್ಮ ಕ್ಲಾಸಿನಲ್ಲಿ ಗೊತ್ತಾಗಿ ಹೋಯಿತು. ದಿನವೂ ನಾನು ಮಿಮಿಕ್ರಿ ಮಾಡಬೇಕೆಂದು ಒತ್ತಡ ಶುರುವಾಯಿತು.
ಕನ್ನಡವೇ ಮಾತನಾಡದಿದ್ದ ಹುಡುಗಿಯರು ಅದೆಲ್ಲಿ ನನ್ನ ಮಿಮಿಕ್ರಿ ಇಷ್ಟಪಡುತ್ತಾರೆ ಅಂತ ಸುಮ್ಮನಿದ್ದೆ. ದಿನದಿನವೂ ಏನಾದರೊಂದು ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದೆ. ಇನ್ನೇನು ಇಂಟರ್ನಲ್ ಪರೀಕ್ಷೆಗಳು ಶುರುವಾಗಬೇಕೆಂದಿದ್ದಾಗ ಅದೇ ಟೀಚರ್ ತಾವು 3 ತಿಂಗಳು ರಜದಲ್ಲಿ ಹೋಗುತ್ತಿರುವುದಾಗಿ ಹೇಳಿದರು. ಕೊನೆಯ ದಿನ ರಜಕ್ಕೆ ಹೋಗುವ ಮುನ್ನ ನಾನು ಮಿಮಿಕ್ರಿ ಮಾಡಲೇಬೇಕೆಂದು ಪೂರ್ತಿ ಒತ್ತಡ ಹಾಕಿಬಿಟ್ಟರು. ಸರಿ, ಮಾಡದೆ ಬೇರೆ ವಿಧಿಯಿಲ್ಲ.
ಎದ್ದು ನಿಂತು ಧೈರ್ಯವಹಿಸಿ ಕೊನೆಗೂ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರರ ಎರಡು ಡೈಲಾಗ್ ಗಳನ್ನು ಸಂದರ್ಭ ಸಹಿತ ಅನುಕರಣೆ ಮಾಡಿದೆ. ಅದ್ಯಾವ ಪರಿ ಕ್ಲಾಸಿನಲ್ಲಿ ಕೂತಿದ್ದವರೆಲ್ಲ ಚಪ್ಪಾಳೆ ಹೊಡೆದು ಎಂಜಾಯ್ ಮಾಡಿದರೆಂದರೆ ನಾನು ಅಂತಹದ್ದೊಂದು ಪ್ರತಿಕ್ರಿಯೆಯನ್ನು ಎದುರು ನೋಡಿರಲಿಲ್ಲ. ನಂತರ ಬಹಳಷ್ಟು ಜನ ನನ್ನ ಬಳಿಗೆ ಬಂದು ಅಭಿನಂದಿಸಿದರು.
ಸಮಯ ಕಳೆದಿದ್ದೆ ಗೊತ್ತಾಗಲಿಲ್ಲ.ಇಂಜಿನಿಯರಿಂಗ್ ನ ಕೊನೆಯ ವರ್ಷ. ಕಾಲೇಜಿನ ವಾರ್ಷಿಕೋತ್ಸವದ ಸಿದ್ಧತೆ ಭರದಿಂದ ಸಾಗಿತ್ತು. ನಮ್ಮ ಕ್ಲಾಸಿನವರ ಒತ್ತಾಯದ ಮೇರೆಗೆ ನನ್ನ ಹೆಸರನ್ನು ಮಿಮಿಕ್ರಿಗೆ ಕೊಡಲಾಯಿತು. ಆಡಿಷನ್ ಶುರುವಾಯಿತು. ಅದೇಕೋ ನನ್ನ ಮನಸ್ಸಿನಲ್ಲಿ ಏನನ್ನಿಸಿತೋ ನಮ್ಮ ಆಡಿಷನ್ ಮಾಡುತ್ತಿದ್ದ ನಮ್ಮ ಕಾಲೇಜಿನ ಆಡಳಿತ ಮಂಡಳಿಯಲ್ಲೊಬ್ಬರಿಗೆ ವಿನಂತಿಸಿಕೊಂಡೆ. ಮಿಮಿಕ್ರಿಯನ್ನು ಎಲ್ಲರೆದುರು ಈಗ ಆಡಿಷನ್ ಕೊಟ್ಟರೆ ನಂತರ ಅದನ್ನು ನೋಡಲು ಅಂತಹ ಉತ್ಸಾಹವಿರುವುದಿಲ್ಲ.
ಆದ್ದರಿಂದ ಕ್ಲಾಸಿನ ಒಳಗೆ ಆಡಿಷನ್ ಕೊಡುವೆ ಎಂದು ಹೇಳಿ ಕ್ಲಾಸಿನ ಒಳಗೆ ಕರೆತಂದೆ. ಬರೋಬ್ಬರಿ 10 ನಿಮಿಷ ನಾನು ಬಹಳ ಇಷ್ಟಪಟ್ಟ ನಟರುಗಳೆಲ್ಲರ ಮಿಮಿಕ್ರಿಗಳನ್ನೆಲ್ಲ ಮಾಡಿ ತೋರಿಸಿದೆ.
ಅವುಗಳನ್ನೆಲ್ಲ ನೋಡಿದ ಆ ಮನುಷ್ಯ ಹೇಳಿದ ಮಾತೆಂದರೆ ..
ಯಾವ ಸಂಭಾಷಣೆಯೂ ಸಭ್ಯವಾಗಿಲ್ಲ, ಮಿಮಿಕ್ರಿ ಬಹಳ ಚೆನ್ನಾಗಿದೆಯಾದರೂ ಯಾವುದರಲ್ಲೂ ಪೌರಾಣಿಕ ಸಂಭಾಷಣೆಗಳಿಲ್ಲ. ನಂತರ ನನಗೆ ಅರ್ಥವಾಗಿದ್ದು ಆ ಪುಣ್ಯಾತ್ಮನಿಗೆ ಬೇಕಾಗಿದ್ದುದು ಬರೀ ಪೌರಾಣಿಕವಷ್ಟೇ. ನಂಗೆ ಉದಾಹರಣೆ ಕೊಟ್ಟದ್ದು ತೆಲುಗಿನ ಬಹಳ ಹಳೆ ನಟರ ಸಂಭಾಷಣೆಗಳನ್ನು. "ಇನ್ನೂ ಮೂರ್ನಾಲ್ಕು ದಿನಗಳ ಸಮಯವಿದೆ, ಯಾವುದಾದರೂ ಪೌರಾಣಿಕ ಚಿತ್ರದ ಸಂಭಾಷಣೆ ಕಲಿತು ಬಾ" ಅಂದ. ಅಹಂ ಅನ್ನುವುದು ಕೆಲವು ಬಾರಿ ಅದೆಷ್ಟು ನಮ್ಮನ್ನು ನಿಷ್ಠುರ ಮಾಡುತ್ತದೆಂದರೆ,
"ನಂಗೆ ಬರೋದೆ ಇಷ್ಟು, ಬೇಕಿದ್ದರೆ ಮಾಡುತ್ತೇನೆ, ಇಲ್ಲ ಅಂದ್ರೆ ಬೇಡ ಬಿಡಿ" ಅಂತ ಖಡಾಖಂಡಿತವಾಗಿ ಹೇಳಿ ಹೊರ ಬಂದುಬಿಟ್ಟೆ.
ಇಂಜಿನಿಯರಿಂಗ್ ಮುಗಿದು ಜೀವನ ಕೆಲಸಕ್ಕೆ ನನ್ನನ್ನು ಶುರುಹಚ್ಚಿತು.
ನಾನು ಕೆಲಸ ಮಾಡಿದ ಮೊದಲ ಕಂಪನಿಯಲ್ಲಿ ಮತ್ತು ಎರಡನೆಯ ಕಂಪನಿಯಲ್ಲಿ ಮತ್ತದೇ ಮಿಮಿಕ್ರಿಗಳ ಪ್ರದರ್ಶನ. ತರಬೇತಿಯ ಸಮಯದಲ್ಲಿ ಕೊಟ್ಟ ಕಾರ್ಯಕ್ರಮಕ್ಕೆ ಎಲ್ಲರಿಂದಲೂ ಬಹಳಷ್ಟು ಅಭಿನಂದನೆ ಸಿಕ್ಕಿತು. ಕನ್ನಡ ಬರದಿದ್ದ ಬೇರೆ ರಾಜ್ಯದವರೆಲ್ಲ ಅದೆಷ್ಟು ಖುಷಿಪಟ್ಟರೆಂದರೆ, "ನಿನ್ನ ಮಿಮಿಕ್ರಿ ನೋಡಿದ ಮೇಲೆ ನಿಮ್ಮ ಉಪೇಂದ್ರನ ಚಿತ್ರ ನೋಡಬೇಕು ಅಂತ ಆಸೆಯಾಗಿದೆ."
ಅಂತ ಹೇಳಿ ಹೋದರು!! ಕೆಲವರಂತೂ ನನ್ನನ್ನು ಕೆಲ ದಿನಗಳ ಕಾಲ ಉಪ್ಪಿ ಅಂತಲೇ ಕರೆಯುತ್ತಿದ್ದರು.
ಅದಿರಲಿ. ನನ್ನ ಮಿಮಿಕ್ರಿ ಕತೆಯ ಬಗ್ಗೆ ಅಲ್ಲ ನಾನು ನಿಮಗೆ ಹೇಳಹೊರಟಿದ್ದು.
ನನ್ನ ಕ್ಲಾಸಿನವರಿಗೆ ಕಾಣದ, ನನ್ನ ಕಂಪನಿಯವರು ನೋಡದ ಅ ಮಿಮಿಕ್ರಿ ಸಂಭಾಷಣೆಯಲ್ಲಿನ ಅಸಭ್ಯತೆ ಆತನಿಗೆ ಕಂಡಿದ್ದಾದರೂ ಎಲ್ಲಿ?!
ಅದೇಕೋ ಕೆಲವರು ಕೆಲಸಮಯ ಸುಮ್ಮನೆ ಏನಾದರೊಂದು ಹೇಳಿ ಇನ್ನೊಬ್ಬರ ನೆನಪಿನ ಪುಟಗಳಲ್ಲಿ ಉಳಿದುಬಿಡುತ್ತಾರೆ.
ಅವರಿಗೆ ತಮ್ಮ ಆದರ್ಶವೇ ಇತರರಿಗೂ ಮಾದರಿಯಾಗಬೇಕೆಂಬ ಹುಚ್ಚು ತಲೆಯಲ್ಲಿ ಮನೆಮಾಡಿರುತ್ತದೆ. ಅದನ್ನು ಇಡೀ ಪ್ರಪಂಚವೇ ಪರಿಪಾಲಿಸಬೇಕು ಅನ್ನುವ ಭ್ರಮೆಯಲ್ಲಿ ಓಡಾಡುತ್ತಿರುತ್ತಾರೆ.
ಅಂತಹವರು ಹೊಸ ಪ್ರಪಂಚಕ್ಕೆ ಎಂದಿಗೂ ಹೊಂದಿಕೊಳ್ಳುವುದಿಲ್ಲ, ನನ್ನ ಮಿಮಿಕ್ರಿಯನ್ನು ಅಸಭ್ಯವೆಂದ ಆ ಪುಣ್ಯಾತ್ಮನ ಹಾಗೆ. ಆತ ಭಾಷಣಕ್ಕೆ ಬಂದರೆ ಎಂತಹ ರಸವತ್ತಾದ ವಿಷಯವನ್ನು ಘಂಟೆಗಳ ಕಾಲ ಮಾತನಾಡಿ ಬೋರು ಹೊಡೆಸುತ್ತಿದ್ದನೆಂದರೆ,ಆತ ಭಾಷಣಕ್ಕೆ ನಿಂತರೆ ಸಾಕು ಎಲ್ಲರೂ ಅವನಿಗೆ ಹಿಡಿಶಾಪ ಹಾಕುತ್ತಿದ್ದರು. ಪಾಪ ಅವನಿಗೆ ಅದು ಗೊತ್ತಿರಲಿಲ್ಲ !!
ಅದಾಗಿ ವರ್ಷಗಳೇ ಕಳೆದಿವೆ.
ಈಗಲೂ ಯಾರಾದರೂ ಹೊಸದಾಗಿ ಏನಾದರೊಂದು ಪ್ರಯತ್ನ ಮಾಡಿದರೆ ನಾನು ಯಾವಾಗಲೂ ಅವರನ್ನು ಹುರಿದುಂಬಿಸುತ್ತೇನೆ.
ಒಂದು ಕವನ ಬರೆದು ತೋರಿಸಿದರೆ ಅವರ ಸಾಹಿತ್ಯ ಪ್ರೇಮಕ್ಕೆ ಶಹಬ್ಬಾಷ್ ಹೇಳಬೇಕೇ ಹೊರತು, ಅದರಲ್ಲಿಯ ಒಂದು ದೋಷ ಹುಡುಕಿ "ಮೊದಲು ಕನ್ನಡ ಕಲಿ" ಅಂತ ಹೇಳುವುದಲ್ಲ.
ಯಾರಿಗೆ ಗೊತ್ತು, ನಾಳೆ ಆತನೇ ಆ ಕ್ಷೇತ್ರದಲ್ಲಿ ಬಹಳಷ್ಟು ಬೆಳೆದು ಹೆಮ್ಮರವಾಗಿ ನಿಲ್ಲಬಹುದು.
ಆದರೆ ಬೆಳೆಯುವ ಮುನ್ನವೇ ಚಿಗುರನ್ನು ಚಿವುಟುವ ಕಾರ್ಯಕ್ಕೆ ನಾವು ಮುಂದಾಗಬಾರದು ಅಲ್ಲವೇ? ಏನಂತೀರಿ?
ನಿಮ್ಮವನು,
ಸಂತು
Comments
ಇಂದು ಪ್ರತಿಷ್ಠೆಯ ಮುಂದೆ
In reply to ಇಂದು ಪ್ರತಿಷ್ಠೆಯ ಮುಂದೆ by ಮಮತಾ ಕಾಪು
ಮಮತಾರವರೆ,
ನಿಜ, ಚಿಗುರನ್ನು ಚಿವುಟಬಾರದು.
In reply to ನಿಜ, ಚಿಗುರನ್ನು ಚಿವುಟಬಾರದು. by kavinagaraj
kavinagaraj ಸರ್,
In reply to kavinagaraj ಸರ್, by santhu_lm
ಚಿಗುರನ್ನು ಚಿವುಟಬಾರದು
In reply to ಚಿಗುರನ್ನು ಚಿವುಟಬಾರದು by Premashri
Premashri ಯವರೇ