ವಿಮಾನನಿಲ್ದಾಣದಲ್ಲಿ ಸಹಾಯ ಮಾಡುವ ಇಂಟರ್‌ನೆಟ್ ತಾಣ

ವಿಮಾನನಿಲ್ದಾಣದಲ್ಲಿ ಸಹಾಯ ಮಾಡುವ ಇಂಟರ್‌ನೆಟ್ ತಾಣ

ಟೂಜಿ ಹರಾಜು:ಮೂಲಬೆಲೆಯಲ್ಲಿ ಶೇಕಡಾ ಮೂವತ್ತು ಕಡಿತ
ಇತ್ತೀಚೆಗೆ ನಡೆದ ಟೂಜಿ ಸ್ಪೆಕ್ಟ್ರಮ್ ಹರಾಜು,ಸರಕಾರ ನಿರೀಕ್ಷಿಸಿದ ನಲುವತ್ತು ಸಾವಿರ ಕೋಟಿ ರೂಪಾಯಿ ಆದಾಯದ ಕಾಲು ಭಾಗವನ್ನಷ್ಟೇ ತಂದುಕೊಟ್ಟಿತು. ಕರ್ನಾಟಕ,ಮುಂಬೈ,ರಾಜಸ್ಥಾನ ವೃತ್ತಗಳಲ್ಲಿ ಹರಾಜು ನಡೆಯಲೇ ಇಲ್ಲ. ಇದೀಗ ಸರಕಾರವು ಮಾರ್ಚ್ ವೇಳೆಗೆ ಮರುಹರಾಜು ನಡೆಸಲು ನಿರ್ಧರಿಸಿದೆ. ಈ ಹರಾಜಿನ ವೇಳೆ ಸ್ಪೆಕ್ಟ್ರಮ್‌ನ ಮೂಲಬೆಲೆಯನ್ನು ಹಿಂದೆ ನಿಗದಿಯಾಗಿದ್ದ ಬೆಲೆಯ  ಶೇಕಡಾ ಮೂವತ್ತು ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಟೆಲಿಕಾಮ್ ಕಂಪೆನಿಗಳಿಗಿದು ಸಮಾಧಾನ ತಂದಿಲ್ಲ. ಹರಾಜು ಪ್ರಕ್ರಿಯೆಯ ಮೂಲಕ ಬೆಲೆಯನ್ನು ಕಂಡುಕೊಳ್ಳುವ ಪ್ರಕ್ರಿಯೆ ಸಫಲವಾಗಬೇಕಿದ್ದರೆ,ಹೆಚ್ಚು ಕಂಪೆನಿಗಳು ಹರಾಜಿನಲ್ಲಿ ಭಾಗವಹಿಸಬೇಕು. ಹೀಗಾಗಬೇಕಿದ್ದರೆ,ಮೂಲಬೆಲೆಯನ್ನು ಎಂಭತ್ತು ಶೇಕಡಾವಾದರೂ ಇಳಿಸಬೇಕಿತ್ತು ಎಂದವುಗಳ ವಾದ. ಬೆಲೆಯನ್ನು ಮೂವತ್ತು ಶೇಕಡಾ ಇಳಿಸುವ ನಿರ್ಣಯದ ಹಿಂದಿನ ತರ್ಕ ಏನೆಂದು ಅವುಗಳು ಪ್ರಶ್ನಿಸಿವೆ. ಸಿಡಿಎಂಎ ಸ್ಪೆಕ್ಟ್ರಮ್ ಹರಾಜು ಕೂಡಾ ಯಾವುದೇ ಕಂಪೆನಿಯು ಭಾಗವಹಿಸದ ಕಾರಣ ಹರಾಜಾಗದೇ ಉಳಿದಿತ್ತು. ಈಗ ನಡೆಯಲಿರುವ ಹರಾಜಿನಲ್ಲಿ ಸಿಡಿಎಂಎ ಸ್ಪೆಕ್ಟ್ರಮ್ ಬೆಲೆ ವಿಚಾರದಲ್ಲಿನ್ನೂ ನಿರ್ಣಯಿಸಲಾಗಿಲ್ಲ. 2014ರಲ್ಲಿ ಮುಂಬೈ,ಕೊಲ್ಕತ್ತಾ,ಚೆನ್ನೈ ಮತ್ತು ದೆಹಲಿಗಳ ಟೆಲಿಕಾಂ ವೃತ್ತಗಳ ಲೈಸೆನ್ಸ್ ಅವಧಿ ತೀರುತ್ತದೆ. ಅವುಗಳ ಅವಧಿಗೆ ಹದಿನೆಂಟು ತಿಂಗಳ ಮುನ್ನವೇ ಮರುಹರಾಜು ನಡೆಸಲು ಟ್ರಾಯ್ ಆದೇಶಿಸಿರುವುದರಿಂದ,ಈ ಲೈಸೆನ್ಸ್‌ಗಳ ಮರುಹರಾಜೂ ನಡೆಯಬೇಕಿದೆ.
----------------------------------
ಶತಾವಧಾನ:ಇಂಟರ್ನೆಟ್ ಮೂಲಕ ನೇರಪ್ರಸಾರ ಹಿಟ್
ಬೆಂಗಳೂರಲ್ಲಿ ಕಳೆದವಾರ ಪದ್ಯಪಾನ ಒಕ್ಕೂಟದವರು ಆಯೋಜಿಸಿದ್ದ ಕನ್ನಡದ ಶತಾವಧಾನ ಕಾರ್ಯಕ್ರಮ ಭಾರೀ ಸುದ್ದಿ ಮಾಡಿದ್ದು ನಿಮಗೆ ಗೊತ್ತೇ ಇದೆ. ಶತಾವಧಾನ ಕಾರ್ಯಕ್ರಮವನ್ನು ಆರ್.ಗಣೇಶ್ ನಡೆಸಿಕೊಟ್ಟರು.ಇದವರ ಐದನೇ ಶತಾವಧಾನ ಕಾರ್ಯಕ್ರಮವಾಗಿತ್ತು. ಅಷ್ಟಾವಧಾನ ಕಾರ್ಯಕ್ರಮಗಳನ್ನವರು ಎಡೆಬಿಡದೆ ನಡೆಸುತ್ತಾರೆ. ಅವುಗಳ ಸಂಖ್ಯೆ ಮೂರುಸಾವಿರ ಮುಟ್ಟುವುದರಲ್ಲಿದೆ. ಶತಾವಧಾನ ಕಾರ್ಯಕ್ರಮವನ್ನು ಇಂಟರ್ನೆಟ್ ಮೂಲಕ ನೇರವಾಗಿ ಬಿತ್ತರಿಸಲಾಯಿತು. ಇದು ಭಾರೀ ಹಿಟ್ ಆದದ್ದು ವಿಶೇಷ. ಅನಿವಾಸಿ ಭಾರತೀಯರು,ವಾರಾಂತ್ಯ ನಡೆದ ಈ ಕಾರ್ಯಕ್ರಮವನ್ನು ತಾವಿರುವಲ್ಲೇ ನೋಡಿ ಸಂತೋಷಿಸಲು ನೇರ ಪ್ರಸಾರ ಅವಕಾಶ ನೀಡಿತು.
------------------------------------------------------------
ಗೂಗಲ್ ಆಪ್ಸ್:ಇನ್ನು ದುಡ್ಡುಬಿಚ್ಚಿ
ಗೂಗಲ್ ಆಪ್ಸ್ ಖಾತೆ ತೆರೆದರೆ,ನಮ್ಮ ಕಂಪೆನಿಯ ವ್ಯವಹಾರವನ್ನು ಭೂಮಿಯ ಯಾವ ಭಾಗದಿಂದಲೂ ಇಂಟರ್ನೆಟ್ ಸಂಪರ್ಕವಿದ್ದರೆ ನಡೆಸಲು ಸಾಧ್ಯವಾಗುವಂತಹ ಜಿಮೇಲ್ ಮಿಂಚಂಚೆ,ಪದಸಂಸ್ಕಾರಕ,ಸ್ಪ್ರೆಡ್‌ಶೀಟ್,ಕ್ಯಾಲೆಂಡರ್,ಸ್ಮರಣಕೋಶ,ಯಾವುದೇ ವ್ಯವಹಾರದ ಬಗೆಗಿನ ಪ್ರದರ್ಶನ ಮಾಡಲು ಅವಕಾಶ ನೀಡುವ ಸೇವೆಗಳೆಲ್ಲಾ ಲಭ್ಯವಾಗುತ್ತಿದ್ದುವು.ಇನ್ನು ಈ ಗೂಗಲ್ ಆಪ್ ಉಚಿತವಲ್ಲ.ವ್ಯವಹಾರಸ್ಥರಿಗೆ ಅತ್ಯುತ್ತಮ ಸೇವೆ ಒದಗಿಸಲೋಸುಗ ಇದಕ್ಕೆ ಶುಲ್ಕ ವಿಧಿಸುವ ನಿರ್ಧಾರಕ್ಕೆ ಗೂಗಲ್ ಬಂದಿದೆ. ಆದರೆ ಈಗಾಗಲೇ ಖಾತೆ ತೆರೆದಿರುವವರಿಗೆ ಉಚಿತ ಸೇವೆಯೂ ಮುಂದುವರಿಯಲಿದೆ. ಡಿಸೆಂಬರ್ ಅರು ಇದಕ್ಕೆ ಗಡುವಾಗಿದೆ. ಇದಕ್ಕೆ ಮೊದಲು ಖಾತೆ ತೆಗೆದವರು ಉತ್ತಮ ಸೇವೆ ಬೇಕಾದರೆ,ಹಣ ಪಾವತಿಸಬಹುದು.ಈ ಸೇವೆಗಳನ್ನು ಈಗಾಗಲೇ ಐದು ದಶಲಕ್ಷ ವ್ಯವಹಾರಸ್ಥರು ಮಾಡುತ್ತಿದ್ದಾರೆ.
----------------------
ಡಿವಿಡಿಗೆ ಗುಡ್‌ಬೈ ಹೇಳುತ್ತಿರುವ ಡೆಸ್ಕ್‌ಟಾಪ್‍ ಕಂಪ್ಯೂಟರುಗಳು
ಆನ್‌ಲೈನಿನಲ್ಲಿ ನಮಗೆ ಬೇಕಾದ್ದೆಲ್ಲಾ ಸಿಗುತ್ತದೆ ಎನ್ನುವ ಮನೋಭಾವವು ಈಗಿನ ಹೊಸ ಡೆಸ್ಕ್‌ಟಾಪ್ ಕಂಪ್ಯೂಟರುಗಳಲ್ಲಿ,ಡಿವಿಡಿ ಡ್ರೈವ್‌ಗಳಿಗೆ ವಿದಾಯ ಹೇಳಿಸಿವೆ. ಮ್ಯಾಕ್,ಎಚ್‌ಪಿ,ಟೊಶಿಬಾದಂತಹ ಕಂಪೆನಿಗಳೀಗಳು ಅಮೆರಿಕಾದಲ್ಲಿ ಒದಗಿಸುತ್ತಿರುವ ಡೆಸ್ಕ್‌ಟಾಪ್ ಕಂಪ್ಯೂಟರುಗಳಲ್ಲಿ ಡಿವಿಡಿ ಡ್ರೈವ್ ಇಲ್ಲ. ಅವುಗಳ ತೆರೆಗಳು ಹೈಡೆಫಿನಿಶನ್ ಆಗಿ ಸುಸ್ಪಷ್ಟ ಚಿತ್ರ ಪ್ರದರ್ಶಿಸುತ್ತವೆ. ಗಾತ್ರದಲ್ಲಿ ಇಳಿಕೆ,ನೋಡಲು ಚಂದ ಕಾಣಿಸುವ ವಿನ್ಯಾಸ ಈ ಕಂಪ್ಯೂಟರುಗಳ ಹೈಲೈಟ್.ಇನ್ನು ಕೀಲಿಮಣೆ,ಮೌಸ್,ಸ್ಪೀಕರ್,ಪ್ರಿಂಟರ್ ಇವೆಲ್ಲವುಗಳ ನಿಸ್ತಂತು ಸಂಪರ್ಕವನ್ನು ಬ್ಲೂಟೂತ್ ನೆರವಿನಿಂದ ಸಾಧಿಸುವುದು ಸರ್ವೇಸಾಮಾನ್ಯ.ಹಾಗಾಗಿ ಕೇಬಲ್ ಕಾಟ ಇವುಗಳಲ್ಲಿ ಇರದು. ಹಾಗೆಂದು ವಿದ್ಯುತ್ ಕೇಬಲುಗಳೂ ಇಲ್ಲವೆಂದು ಭಾವಿಸಬೇಡಿ ಮತ್ತೆ!
--------------------------------
ವಿಮಾನನಿಲ್ದಾಣದಲ್ಲಿ ಸಹಾಯ ಮಾಡುವ ಇಂಟರ್‌ನೆಟ್ ತಾಣ
Nerdwallet ಇಂಟರ್ನೆಟ್ ತಾಣವು ಆರಂಭದಲ್ಲಿ ವಿವಿಧ ವೈಮಾನಿಕ ಕಂಪೆನಿಗಳ ದರಗಳನ್ನು ಹೋಲಿಸಿನೋಡುವ ಸವಲತ್ತು ಒದಗಿಸುತ್ತಿತ್ತು. ಆದರೀಗ ಅದನ್ನು ಸುಧಾರಿಸಿ,ವಿಮಾನನಿಲ್ದಾಣಗಳಲ್ಲಿ ವಿವಿಧ ಸೇವೆಗಳೆಲ್ಲಿ ಸಿಗುತ್ತವೆ ಎಂದು ಮಾರ್ಗದರ್ಶನ ಮಾಡುವ ತಾಣವಾಗಿ ಬದಲಿಸಲಾಗಿದೆ. ಸ್ಮಾರ್ಟ್‌ಫೋನ್ ಇದ್ದವರು ವಿಮಾನನಿಲ್ದಾಣಗಳಲ್ಲಿ ಇದ್ದಾಗ ಕಾಫಿ ಕುಡಿಯಬೇಕೆನಿಸಿದರೆ,ಅಲ್ಲಿಗೆ ಹೋಗುವ ದಾರಿ ಯಾವುದು ಎಂದು ತಿಳಿದುಕೊಳ್ಳಬಹುದು. ಅಗ್ಗದ ದರದಲ್ಲಿ ವಸ್ತುಗಳೆಲ್ಲಿ ದೊರೆಯುತ್ತವೆ ಎನ್ನುವುದನ್ನೂ ಅದು ತಿಳಿಸಬಲ್ಲುದು. ವೈ-ಫೈ ಸಂಪರ್ಕ ವಿಮಾನ ನಿಲ್ದಾಣದಲ್ಲಿ ಎಲ್ಲೆಲ್ಲಾ ಲಭ್ಯವಿದೆ. ಶೌಚಾಲಯ ಯಾವ ಮೂಲೆಯಲ್ಲಿದೆ ಹೀಗೆಲ್ಲಾ ತಿಳಿಯಲು ಇದು ಸಹಕಾರಿ.
---------------------------------
ಬಾಗಿಲನು ತೆರೆಯದೇ..




ಬಾಗಿಲಿನಲ್ಲಿ ಅಳವಡಿಸಿದ ವೈಫೈ ಕ್ಯಾಮರಾದಲ್ಲಿ ಮೂಡುವ ಚಿತ್ರವನ್ನು ಸ್ಮಾರ್ಟ್‌ಪೋನಿನಲ್ಲಿ ನೋಡುವ ತಂತ್ರಾಂಶ ಅಳವಡಿಸಿಕೊಂಡರೆ,ಮನೆಯ ಬಾಗಿಲಿನ ಕರೆಗಂಟೆ ಬಾರಿಸಿದಾಗ,ಕುಳಿತಲ್ಲಿಂದಲೇ ಬಂದವರಾರು ಎಂದು ಕಾಣಬಹುದು. ಇನ್ನು ಇಂಟರ್‌ಕಾಮ್ ವ್ಯವಸ್ಥೆಯನ್ನು ಹೋಲುವ ವ್ಯವಸ್ಥೆಯ ಮೂಲಕ,ಸ್ಮಾರ್ಟ್‌ಫೋನಿನಲ್ಲಿ ಹೇಳಿದ ಮಾತು ಬಾಗಿಲಲ್ಲಿದ್ದವರಿಗೆ ಅಲ್ಲಳವಡಿಸಿದ ಸ್ಪೀಕರ್ ಮೂಲಕ ಕೇಳಿಸಿ,ಅವರ ಮಾತನ್ನು ಮೈಕ್ ಮೂಳಕ ಸ್ಮಾರ್ಟ್‌ಫೋನಿನಲ್ಲಿ ಆಲಿಸಬಹುದು.ಸೇಲ್ಸ್‌ಮ್ಯಾನ್‌ಗಳು ಬಂದರೆ,ಅನಗತ್ಯವಾಗಿ ಬಾಗಿಲು ತೆರೆಯುವುದನ್ನು ತಪ್ಪಿಸಿಕೊಳ್ಳಲು ಈ ವ್ಯವಸ್ಥೆ  ಸಹಕಾರಿ.
--------------------
ಲ್ಯಾಪ್‌ಟಾಪ್,ಅಲ್ಟ್ರಾಬುಕ್,ಟ್ಯಾಬ್ಲೆಟ್:ಯಾರಿಗೆ ಯಾವುದು ಹಿತ ?
ಲ್ಯಾಪ್‌ಟಾಪ್ ಖರೀದಿಸಬೇಕೇ?ಅಲ್ಲ ಅಲ್ಟ್ರಾಬುಕ್ ಸಾಕೇ? ಅಥವಾ ಈಗೆಲ್ಲರೂ ಮುಗಿಬೀಳುವ ಟ್ಯಾಬ್ಲೆಟ್ ಉಚಿತವೇ? ಯಾವ ಸಾಧನ ನಮಗೆ ಹಿತ ಎಂದು ನಿರ್ಧರಿಸುವುದು ತಲೆನೋವಿನ ಕೆಲಸವೇ ಸರಿ.ಸಾಧನ ಖರೀದಿಸುವ ಮೊದಲು ಅದನ್ನು ನಾವು ಯಾತಕ್ಕಾಗಿ ಬಳಸಲಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ.ಕೆಲವರು ಸಂಚಾರದಲ್ಲಿರುವುದೇ ಹೆಚ್ಚು.ಆ ವೇಳೆ ಬಳಸಲು,ಇಂಟರ್‌ನೆಟ್ ಜಾಲಾಡಲು,ಕರೆ ಮಾಡಲು ಹೀಗೆ ಬಳಸುವವರಿರುತ್ತಾರೆ.ಇವರಿಗೆ ಟ್ಯಾಬ್ಲೆಟ್ ಸಾಧನ ಬಹು ಅನುಕೂಲ.ಇದು ಸಣ್ಣದು,ತೂಕ ಕಡಿಮೆ,ವೈ-ಫೈ,ತ್ರೀಜಿ ಇರುತ್ತದೆ. ಬ್ಯಾಟರಿ ಬಾಳಿಕೆ ಇರುತ್ತದೆ. ಹೆಚ್ಚು ಬೇಗನೆ ಆರಂಭವಾಗುತ್ತದೆ ಎನ್ನುವುದಿದರ ಪ್ಲಸ್ ಪಾಯಿಂಟ್.
ಇನ್ನು ಶಾಲಾ ಕಾಲೇಜಿನಲ್ಲಿ ಬಳಸಲು,ಪ್ರೊಗ್ರಾಮಿಂಗ್‌ನಂತಹ ಕೆಲಸಕ್ಕಾದರೆ ಲ್ಯಾಪ್‌ಟಾಪ್ ಬೇಕು.ಇದರ ಸಂಸ್ಕಾರಕ,ಸ್ಮರಣಕೋಶ ಸಾಮರ್ಥ್ಯ,ಡಿಸ್ಕ್ ಸಾಮರ್ಥ್ಯ ಇಂತಹ ಕೆಲಸಕ್ಕೆ ಬೇಕಾದಷ್ಟಿರುತ್ತದೆ.ಇನ್ನು ಕಚೇರಿ ಕೆಲಸಗಳು,ವ್ಯವಹಾರ ಸಂಬಂಧ ಕಂಪ್ಯೂಟರ್ ಬಳಸುವವರಿಗೆ ಅಲ್ಟ್ರಾಬುಕ್ ಹೇಳಿಮಾಡಿಸಿದ್ದು.ಇದು ಸಾಕಷ್ಟು ಸ್ಮರಣಕೋಶ,ಡಿಸ್ಕ್ ಸಾಮರ್ಥ್ಯ,ಸಣ್ಣಗಾತ್ರ,ತೆಳು ಆಕಾರ,ತೂಕ ಕಡಿಮೆ,ಬ್ಯಾಟರಿ ಬಾಳಿಕೆ ಹೆಚ್ಚು ಇಂತಹ ಗುಣವಿಶೇಷಗಳೊಂದಿಗೆ ವ್ಯವಹಾರಸ್ಥರಿಗೆ ಹೆಚ್ಚಿನ ಅನುಕೂಲಕಾರಿ.
ಕಂಪ್ಯೂಟರ್ ಆಟಗಳನ್ನು ಆಡಲು,ವಿನ್ಯಾಸ ಕೆಲಸಗಳನ್ನು ಮಾಡಲು ಬಳಸುವುದಾದರೆ,ಡೆಸ್ಕ್‌ಟಾಪ್‌ ಸೂಕ್ತ ಆಯ್ಕೆ.ಇದಕ್ಕೆ ಹೆಚ್ಚು ಕಂಪ್ಯೂಟರ್ ಸಂಪನ್ಮೂಲಗಳು ಬೇಕು. ಹಾಗಾಗಿ ಶಕ್ತಿಯುತ ಯಂತ್ರವನ್ನು ನಮ್ಮದಾಗಿಸಿಕೊಳ್ಳುವುದು ಜಾಣತನ.
--------------------------------
ಇಂಟ‌ರ್ನೆಟ್‌ನಲ್ಲಿ ಅಂಕಣ ಬರಹಗಳು: http://ashok567.blogspot.com
UDAYAVANI
EPAPER

*ಅಶೋಕ್‌ಕುಮಾರ್ ಎ


 

Comments