" ಸಿನೆಮಾ "(ಕಥೆ) ........ಭಾಗ 6

" ಸಿನೆಮಾ "(ಕಥೆ) ........ಭಾಗ 6

ಚಿತ್ರ

                  
          ಆಗಾಗ ನಾನು ನಮ್ಮ ತಾಯಿಯ ತವರು ಮನೆಯಿಂದ ನಮ್ಮೂರಿಗೆ ಹೋಗುವಾಗ ಹುಬ್ಬಳ್ಳಿಯ ಸಂಬಂಧಿಕರ ಮನೆಯಲ್ಲಿ ವಸ್ತಿ ಮಾಡಿ ಮಾರನೇ ದಿನ ದುರ್ಗದಬೈಲಿನ ಸಮೀಪದಲ್ಲಿದ್ದ ರೇಲ್ವೆ ಮುಂಗಡ ಟಿಕೆಟ್ ಬುಕಿಂಗ್ ಕೌಂಟರಿನಿಂದ ಟಿಕೆಟ್ ಪಡೆದು ಟಾಂಗಾ ಸ್ಟ್ಯಾಂಡ್ನಿಂದ ರೇಲ್ವೆ ಸ್ಟೇಶನ್ಗೆ ಜಿಕೇರಿ ಮಾಡಿ ಟಾಂಗಾ ತರುತ್ತಿದ್ದರು. ಅದು ಬಡಕಲು ಕುದುರೆ ಕಟ್ಟಿದ ಬಣ್ಣ ಮಾಸಿದ ಟಾಂಗಾವೆ ಆಗಿರುತ್ತಿತ್ತು. ಆದರೆ ನಮಗೆ ವಿಧ ವಿಧದ ಬಣ್ಣ ಬಳಿದ ದಷ್ಟ ಪುಷ್ಟ ಕುದುರೆ ಹೂಡಿದ ಹೊಸ ಟಾಂಗಾ ದಲ್ಲಿಯೆ ಹೋಗಬೇಕೆಂಬ ಆದಮ್ಯ ಆಕಾಂಕ್ಷೆ, ಆದರೆ ಆ ಟಾಂಗಾವಾಲಾ ಕೇಳುತ್ತಿದ್ದ ಹೆಚ್ಚು ಹಣ ಕೊಡಲು ಹಿರಿಯರು ಒಪ್ಪುತ್ತಿರಲಿಲ್ಲ. ಆ ಟಾಂಗಾಗಳಲ್ಲಿ ಕುಳಿತು ಹೊರಡುವ ಸಂಭ್ರಮವೆ ಒಂದು ತರಹದ್ದು. ಟಾಂಗಾ ಕುದುರೆಯನ್ನು ಚಾಬೂಕಿನಿಂದ ಹೊಡೆಯುತ್ತ ಹಾರ್ನನ್ನು ಒತ್ತುತ್ತ ಟಾಂಗಾದ ಗಾಲಿಗೆ ಚಾಬೂಕದ ಕಟ್ಟಿಗೆ ಹಿಡಿಯನ್ನು ಉಲ್ಟಾ ಹಿಡಿದು ಟಾಂಗಾದ ಗಾಲಿಗೆ ಹಿಡಿದು ಕಟ ಕಟ ಸದ್ದು ಮಾಡುತ್ತ ಕಿಲ್ಲೆ ಯಲ್ಲಿಯ ಆದರ್ಶ ಪ್ರಿಂಟರ್ಸ, ಹನಮಂತ ದೇವರ ಗುಡಿ ಓಣಿಗಳನ್ನು ದಾಟಿ ಡೆಕ್ಕನ್ ಟಾಕೀಸ್ ಹಿಂಭಾಗ ತಲುಪುತ್ತಿದ್ದಂತೆ ನಾವು ಕುತೂಹಲಿಗಳಾಗುತ್ತಿದ್ದೆವು. ಹಾಗೆಯೆ ಸ್ಟೇಶನ್ ರೋಡ್ ಮೂಲಕ ಹೋಗುವಾಗ ದೂರದಲ್ಲಿ ಗಣೇಶ ಟಾಕೀಸ್, ಮುಂದೆ ಸಾಗುತ್ತಿದ್ದಂತೆ ಎಡ ಬದಿಗೆ ಸುಧರ್ಶನ, ಚಂದ್ರಕಲಾ ಮತ್ತು ರೂಪಮ್ ಟಾಕೀಸ್ಗಳು ಸಿಗುತ್ತಿದ್ದವು, ನಾವು ಉತ್ಸುಕತೆಯಿಂದ ಅವುಗಳನ್ನು ಅಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಸಿನೆಮಾದ ಪೋಸ್ಟರ್ ಗಳನ್ನು ಗಮನಿಸುತ್ತ ಆ ಸಿನೆಮಾಗಳನ್ನು ನೋಡಲಾಗದ ನಮ್ಮ ಪರಿಸ್ಥಿತಿಗೆ ದುಃಖ ಪಡುತ್ತ, ಹೋಗುವ ದಾರಿಯಲ್ಲಿ ತಮ್ಮ ಕಮಟು ವಾಸನೆ ಬೀರುತ್ತ ತಮ್ಮ ಅಸ್ತಿತ್ವವನ್ನು ದೂರದಿಂದಲೆ ಸಾರುತ್ತಿದ್ದ ಸಾರ್ವಜನಿಕ ಮೂತ್ರಿಖಾನೆ, ಅಲ್ಲಲ್ಲಿ ಬಿದ್ದ ಕುದುರೆ ಕತ್ತೆಗಳ ಲದ್ದಿ ಮೂತ್ರ ಮತ್ತು ದನಕರುಗಳ ಸೆಗಣಿ ಮೂತ್ರಗಳ ಮಿಶ್ರಿತ ಒಂದು ತರಹದ ಕಟು ವಾಸನೆಗಳಿಗೆ ಅಸಹ್ಯ ವೆನಿಸಿದರೂ ಮೂಗು ಒಡ್ಡಿಕೊಳ್ಳುತ್ತ ಅಲ್ಲಲ್ಲಿ ಕಟ್ಟಡ ಮತ್ತು ಕಂಪೌಂಡ್ ಗೋಡೆಗಳಿಗೆ ಲಗತ್ತಿಸಿದ ಆಶಿಕ್, ಶ್ರೀ ಚಾರ್ ಸೌ ಬೀಸ್, ಝಮ್ರೂ, ರಣಧೀರ ಕಂಠಾಈರವ, ರಾಣಿ ಹೊನ್ನಮ್ಮ, ಸತಿ ನಳಾಯಿನಿ, ಆಜಾದ್, ಅನಾರ್ಕಲಿ, ಬಾಜಿ ಮುಂತಾದ ಹಳೆಯ ಮತ್ತು ಹೊಸ ಸಿನೆಮಾಗಳ ವಾಲ್ ಪೋಸ್ಟರ್ಗಳನ್ನು ವೀಕ್ಷಿಸುತ್ತ, ಆ ಸಿನೆಮಾಗಳು ಹೇಗಿರಬಹುದು ಎಂದು ಮನದಲ್ಲಿಯೆ ಊಹಿಸಿ ಗೊಳ್ಳುತ್ತ ಸಂತಸಪಡುತ್ತ ಎಲ್ಲ ಹೊಸದನ್ನೂ ಕುತುಹಲದಿಂದ ವೀಕ್ಷಿಸುತ್ತ ಹೊಸ  ಹೊಸ ಅನುಭವಗಳಿಗೆ ಒಡ್ಡಿಕೊಳ್ಳುತ್ತಿದ್ದ ದಿನಗಳವು.


     ವಯೋ ಸಹಜವಾದ ಈ ಸಿನೆಮಾ ಆಕರ್ಷಣೆ, ಕುಟುಂಬದ ಶೋಚನೀಯ ಆರ್ಥಿಕ ಪರಿಸ್ಥಿತಿಗಳು, ಸಿನೆಮಾದ ಬಗ್ಗೆ ಆಸಕ್ತಿ ಬೆಳೆಸಿ ಕೊಂಡವರು ಉದ್ಧಾರ ವಾಗುವವರಲ್ಲ ಅಲ್ಲದೆ ಜೀವನದಲ್ಲಿ ಮುಂದೆ ಬರುವವರಲ್ಲ ಎಂಬ ಆಗಿನ ಸಾಮಾಜಿಕ ನಿಲುವುಗಳು, ಸಣ್ಣ ಮಕ್ಕಳು ಮತ್ತು ಯುವಕರನ್ನು ನಿಯಂತ್ರಿಸಿ ಎಚ್ಚರಿಕೆಯಿದಿಂದಿರುವಂತೆ ಜಾಗೃತ ರಾಗಿರುವಂತೆ ಪ್ರೇರೇಪಿಸುತ್ತಿದ್ದವು. ಈ ಯಾವುವಕ್ಕೂ ಧಕ್ಕೆ ತರದಂತೆ ಆಗಿನ ಯುವ ಜನತೆ ನಡೆದು ಕೊಳ್ಳಬೇಕಾದ ಅನಿವಾರ್ಯತೆಯಿತ್ತು. ಈ ಸಾಮಾಜಿಕ ಲಕ್ಷ್ಮಣ ರೇಖೆಯನ್ನು ದಾಟಿ ಊರಲ್ಲಿ ಅವಮಾನಿತರಾದ ಸ್ನೇಹಿತರ ಜ್ವಲಂತ ಉದಾಹರಣೆ ನಮ್ಮ ಕಣ್ಮುಂದೆ ಇತ್ತು. 1960 - 61 ರ ಸುಮಾರಿಗೆ ಹುಬ್ಬಳ್ಳಿಯಲ್ಲಿ ಆಟೋಗಳ ಪ್ರವೇಶ ಅಲ್ಲಲ್ಲಿ ಆಗುತ್ತಿದ್ದುದು ಟಾಂಗಾಗಳು ನೆಪಥ್ಯಕ್ಕೆ ಸರಿಯ ಬೇಕಾದುದರ ಮುನ್ಸೂಚನೆಯಾಗಿತ್ತು..ನಮ್ಮ ಊರಿನ ಒಬ್ಬ ವಯೋವೃದ್ಧೆ ಒಮ್ಮೆ ಹುಬ್ಬಳ್ಳಿಗೆ ತನ್ನ ಮಗಳ ಮನೆಗೆ ಹೋದಾಗ ಆಕೆಯ ಅಳಿಯ ಅವಳನ್ನು ಆಟೋರಿಕ್ಷಾ ವೊಂದರಲ್ಲಿ ಮನೆಗೆ ಕರೆದೊಯ್ದದ್ದನ್ನೆ ಜಗತ್ತಿನ ಎಂಟನೆ ಅದ್ಭುತವೆಂಬಂತೆ ತನ್ನ ಎಲ್ಲ ಸಮಾನ ವಯಸ್ಕ ವೃದ್ಧೆಯರಲ್ಲಿ ಹೇಳಿ ಕೊಳ್ಳುತ್ತಿದ್ದುದನ್ನು ನೆನೆಯುತ್ತಿದ್ದರೆ ಆಗಿನ ಸಾಮಜಿಕ ಜೀವನ ಎಷ್ಟು ಸರಳ ಸಮಾಜಕ್ಕೆ ಹತ್ತಿರ ವಾಗಿತ್ತು ಮತ್ತು ವಾಸ್ತವದ ಬದುಕು ಅವರದಾಗಿತ್ತು ಎನ್ನವುದುರ  ಅರಿವು ನಮಗಾಗುತ್ತದೆ. ಆಗಿನ ಸಾಮಾಜಿಕ ಜೀವನ ಈಗಿನಂತೆ ಕೃತಕ ಮತ್ತು ಧಾವಂತದ ಬದುಕು ಆಗಿರಲಿಲ್ಲ ಎಂದೆನಿಸುತ್ತದೆ. ಬದಲಾವಣೆ ಮತ್ತು ಅಭಿವೃದ್ಧಿ ಆಧುನಿಕ ಜಗದ ನಿಯಮ, ಅದು ಸರಿಯೋ ತಪ್ಪೋ ಎನ್ನುವುದನ್ನು ಆಯಾ ಕಾಲಘಟ್ಟದ ಜನ ಸಮೂಹ ವಿಶೇಷವಾಗಿ ಯುವ ಪೀಳಿಗೆ ನಿರ್ಧರಿಸಬೇಕು. ಗತ ಕಾಲದ ಆ ಗ್ರಾಮದ ಚಿತ್ರಣ ಜನಜೀವನ ಸಮಾಜದ ರೀತಿ ನೀತಿಗಳು ಆ ಗತಕಾಲದ ಸುಂದರ ದಿನಗಳ ನೆನಪುಗಳಾಗಿ ಮೆದುಳಿನ ಕೋಶಗಳ ಗಳಲ್ಲಿ ಅಚ್ಚೊತ್ತಿ ಬಿಟ್ಟಿರುತ್ತವೆ. ಅವು ಆಗಾಗ ನಮ್ಮನ್ನು ಆ ದಿನಗಳಿಗೆ ಕರೆದೊಯ್ದು ನಮ್ಮನ್ನು ಉಲ್ಲಸಿತರನ್ನಾಗಿ ಮಾಡುತ್ತವೆ.


                                            *


     ಹೀಗಾಗಿ 1962 ರಲ್ಲಿ ಮುಲ್ಕಿ ಪರೀಕ್ಷೆ ಪಾಸಾಗಿ ಹೈಸ್ಕೂಲಿಗೆ ಸೇರಿದ ದಿನಗಳೂ ಸಹ ಅಪ್ಯಾಯಮಾನವಾದ ದಿನಗಳೇ. ಆಗಲೂ ಸಹ ಯುವ ಜನತೆಯಲ್ಲಿ ಸಿನೆಮಾ ಒಂದು ಆಕರ್ಷಣೆಯಾಗಿಯೆ ಮುಂದುವರಿದು ಬಂದಿತ್ತು. ನಮ್ಮ ಊರು ಬಿಟ್ಟು ಹೈಸ್ಕೂಲು ಇರುವ ಊರಿಗೆ ವಲಸೆ ಬಂದಿದ್ದೆವು. ನಮ್ಮದು ಒಂದು ತರಹದ ಸ್ವತಂತ್ರ ಬದುಕಾಗಿತ್ತು. ಒಂದು ರೀತಿಯ ಪುಕ್ಕ ಬಲಿತ ಹಕ್ಕಿಯ ಸ್ಥಿತಿ ನಮ್ಮದಾಗಿತ್ತು. ಮೊದಲಿನಂತೆ ದಿನ ಪೂರ್ತ ಪೋಷಕರ ಕಣ್ಣಳತೆಯಲ್ಲಿಯೇ ಇರಬೇಕಾದ ಸ್ಥಿತಿ ಅದಾಗಿರಲಿಲ್ಲ. ಪೋಷಕರು ಎರಡು ಗಂಟೆಗೆ ಊಟದ ಗಂಟು ತಂದು ಕೊಟ್ಟು ನಾಲ್ಕು ಗಂಟೆಯ ಗಾಡಿಗೆ ಮರಳಿ ಹೋದರೆ ಮುಗಿಯಿತು ಅವರ ದರ್ಶನ ಮಾರನೆಯ ದಿನ ಮತ್ತೆ ಅದೇ ವೇಳೆಗೆ. ಹೀಗಾಗಿ ಹೈಸ್ಕೂಲ್ ಬಿಟ್ಟೊಡನೆ ನಾವು ಮುನಸಿಪಾಲಟಿಯ ವಾಚನಾಲಯಕ್ಕೆ ಹೋಗಿ ಸಂಯುಕ್ತ ಕರ್ನಾಟಕ, ಪ್ರಜಾ ವಾಣಿ, ವಿಶ್ವ ವಾಣಿ, ವಿಶಾಲ ಕರ್ನಾಟಕ, ದಿ ಹಿಂದೂ, ಇಂಡಿಯನ್ ಎಕ್ಸ್ಪ್ರೆಸ್ ದಿನ ಪತ್ರಿಕೆಗಳು ಮತ್ತು ಕರ್ಮವೀರ, ಪ್ರಪಂಚ, ಪ್ರಜಾಮತ, ಜನಪ್ರಗತಿ ಕನ್ನಡ ವಾರ ಪತ್ರಿಕೆಗಳು ನಮ್ಮ ಕುತೂಹಲ ತಣಿಸುವ ಸಂವಹನ ಮಾಧ್ಯಮ ಗಳಾಗಿದ್ದವು. ವಯೋ ಸಹಜವಾಗಿ ಆಗ ನಮ್ಮನ್ನು ಆಕರ್ಷಿಸುತ್ತಿದ್ದವುಗಳು ಸಿನೆಮಾ ಸುದ್ದಿಗಳು ಹಾಗೂ ಆ ಕುರಿತ ವಿಮರ್ಷಾ ಲೇಖನಗಳು. ಅವುಗಳನ್ನು ನಾವು ತಪ್ಪದೆ ಒಂದೂ ಬಿಡದಂತೆ ಓದುತ್ತಿದ್ದೆವು. ನಮ್ಮ ಓದಿನ ಗ್ರಹಿಕೆಗಳ ಆಧಾರದ ಮೇಲೆ ಚರ್ಚೆಗಳೂ ಆಗುತ್ತಿದ್ದವು. ಆ ಸಿನೆಮಾ ಸುದ್ದಿಗಳನ್ನು ಓದಿ ನಮ್ಮ ಸಿನೆಮಾ ಆಕರ್ಷಣೆಯನ್ನು ತಣಿಸಿಕೊಂಡು ನಮ್ಮ ಓದಿನಲ್ಲಿ ಸಹ ಗಣನೀಯ ಪ್ರಗತಿ ಸಾಧಿಸುತ್ತಿದ್ದುದು ಗಮನಾರ್ಹ ಸಂಗತಿಯಾಗಿತ್ತು.


     ಬೇಸಿಗೆಯ ರಜೆಯಲ್ಲಿ ನಾವು ನಮ್ಮ ನಮ್ಮ ಹೊಲಗಳಿಗೆ ಶೆಂಗಾ ಆರಿಸಲು ಹೋಗುತ್ತಿದ್ದೆವು. ನಮ್ಮ ಕಡೆ ಕಂಟಿ ಶೆಂಗಾ ಮತ್ತು ಹಬ್ಬು ಶೆಂಗಾ ( ಬಳ್ಳಿ ಶೆಂಗಾ ) ಗಳೆಂದು ಎರಡು ಪ್ರಕಾರದ ಶೆಂಗಾಗಳನ್ನು ಬೆಳೆಯುತ್ತಾರೆ.ಬಳ್ಳಿ ಶೆಂಗಾವನ್ನು ಚಳಿಗಾಲದಲ್ಲಿ ಹರಗಿ ಒಕ್ಕಿದ ನಂತರ ಮೂರು ನಾಲ್ಕು ಸಲ ಆರಿಸುತ್ತಿದ್ದರು. ಆ ನಂತರ ಭೂಮಿಯಲ್ಲಿ ಉಳಿದಿರುತ್ತ್ತಿದ್ದ ಶೆಂಗಾ ಕಾಯಿಗಳು ಬಹಳ ಕಡಿಮೆ. ಅಷ್ಟು ಸಮಯಕ್ಕೆ ಸರಿಯಗಿ ನಮಗೆ ಬೇಸಿಗೆಯ ರಜೆ ಬರುತ್ತಿತ್ತು. ಆಗ ಫಿಫ್ಟಿ ಫಿಫ್ಟಿ ಆಧಾರದ ಮೇಲೆ ನೆಲದಾಳದಲ್ಲಿ ಆರಿಸಿ ಉಳಿದ ಶೆಂಗಾಗಳನ್ನು ಹೆಕ್ಕಲು ಹೋಗುತ್ತಿದ್ದೆವು. ಇದು ಆಗಿನ ಕಾಲದ ಎಲ್ಲ ಸಾಮಾನ್ಯ ವ್ಯವಸಾಯಗಾರರ ಕುಟುಂಬಗಳ ಅಲಿಖಿತ ನಿಯಮ ವಾಗಿತ್ತು. ನಾವು ಆರಿಸಿದ ಶೆಂಗಾದಲ್ಲಿ ಅರ್ಧವನ್ನು ಮನೆಗೆ ಕೊಟ್ಟು ಉಳಿದ ಅರ್ಧವನ್ನು ನಾವು ಮಾರಾಟ ಮಾಡಿಯೋ ಇಲ್ಲ ನಮ್ಮ ಪಾಲನ್ನೂ ಸಹ ಮನೆಯಲ್ಲಿಯೆ ಕೊಟ್ಟು ಆ ದಿನಗಳ ಮಾರುಕಟ್ಟೆಯ ಧಾರಣಿಯಂತೆ ಹಣ ಪಡೆಯ ಬೇಕಿತ್ತು. ಹೆಚ್ಚು ಕಡಿಮೆ ಇದೇ ನಿಯಮ ಎಲ್ಲ ವ್ಯವಸಾಯ ಮನೆಗಳಲ್ಲಿ ಜಾರಿಯಲ್ಲಿತ್ತು. ಈ ನಿಯಮ ಯಾಕೆಂದರೆ ಹುಡುಗರ ಹಣಕಾಸಿನ ಲೆಖ್ಖ ಹಿರಿಯರಾದ ತಮಗೆ ತಿಳಿದಿರಬೇಕು ಮತ್ತು ಹುಡುಗರು ಆ ಹಣವನ್ನು ಪೋಲು ಮಾಡಬಾರದು ಎನ್ನುವ ಹುನ್ನಾರವಾಗಿರುತ್ತಿತ್ತು. ಈ ಒಪ್ಪಂದಕ್ಕೆ ಬರದೆ ನಮಗೆ ಆಗ ಗತ್ಯಂತರವಿರಲಿಲ್ಲ. ಇಷ್ಟೆಲ್ಲ ಅಡೆ ತಡೆಗಳ ಮಧ್ಯೆ ನಮ್ಮ ಸಿನೆಮಾ ನೋಡುವ ಆಸಕ್ತಿಯನ್ನು ತಣಿಸಿ ಕೊಳ್ಳಬೇಕಿತ್ತು, ಇಂತಹ ಅವಕಾಶಗಳು ಒಂದೆರಡು ಸಾರಿ ದೊರಕಿದರೆ ಅದೇ ಪುಣ್ಯ, ಅವಕಾಶಗಳು ದೊರೆಯದೆ ಹೋಗುವ ಸಂಧರ್ಭಗಳೆ ಜಾಸ್ತಿ.


     ಇಲ್ಲಿ ನಮ್ಮ ಖರ್ಚುಗಳ ಬಗ್ಗೆ ನಿಮಗೆ ಹೇಳಲೇ ಬೇಕು. ಆ ಖರ್ಚುಗಳು ಯಾವುವೆಂದರೆ ದೈನಂದಿನ ಅವಶ್ಯಕತೆಗಳಾದ ಮಂಕಿ ಟೂತ್ ಪೌಡರ್ ಇಲ್ಲ ನಂಜನಗೂಡು ಟೂತ್ ಪೌಡರ್, ಲೈಫ್ ಬಾಯ್ ಸೋಪುಗಳು. ಇವೆಲ್ಲಕ್ಕೂ ಮನೆಯ ಹೈಕಮಾಂಡ್ಗಳಾದ ಹಿರಿಯರ ಒಲ್ಲದ ಮನಸಿನ ಅನುಮತಿ ದೊರೆಯುತ್ತಿತ್ತು, ಅದರ ಜೊತೆಗೆ ಕರಬಟ್ಟಿನಿಂದ ( ಬೆರಣಿಯನ್ನು ಸುಟ್ಟು ಮಾಡಿದ ಪುಡಿ ) ಇಲ್ಲವೆ ಇದ್ದಲಿನ ಪುಡಿಗೆ ಉಪ್ಪು ಸೇರಿಸಿ ಮಾಡಿದ ಪುಡಿ ಮತ್ತು ಅಂಟವಾಳದ ಇಲ್ಲವೆ ಸೀಗೆ ಪುಡಿಗಳನ್ನು ಉಪಯೋಗಿಸ ಬಹುದಿತ್ತು ಈಗಿನ ಹುಡುಗರ ಷೋಕಿ ಜಾಸ್ತಿಯಾಯಿತು ಎಂಬ ಅವರ ಒಗ್ಗರಣೆಯ ಮಾತುಗಳ ಗೊಣಗಾಟವನ್ನು ಬೇರೆ ಕೇಳಬೇಕಿತ್ತು. ಈ ಎಲ್ಲ ನಮ್ಮ ಅವಶ್ಯಕತೆಗಳನ್ನು ಪೂರೈಸಿಕೊಂಡು ಪುಡಿಗಾಸನ್ನು ಉಳಿಸಿಕೊಳ್ಳಬೇಕಿತ್ತು. ಆ ಹಣವನ್ನು ಅವಕಾಶ ಸಿಕ್ಕರೆ ಸಿನೆಮಾ ಮತ್ತು ನಾಟಕ ನೋಡಲು ಬಳಸಿಕೊಳ್ಳ ಬೇಕಾಗುತ್ತಿತ್ತು. ಆದರೆ ಇದು ಅಷ್ಟೆ ಕಷ್ಟದಾಯಕವಾದ ಸಾಹಸವಾಗಿರುತ್ತಿತ್ತು. ನಮ್ಮ ಈ ಸಾಹಸಗಳನ್ನು ಊರಿನ ಯಾರಾದರೂ ನೋಡಿ ನಮ್ಮ ನಮ್ಮ ಮನೆಗಳಲ್ಲಿ ಹೇಳಿದರೆ ಏನು ಮಾಡುವುದು ಎನ್ನುವ ಆತಂಕವೂ ಕೂಡ ಇರುತ್ತಿತ್ತು. ಹಿರಿಯರ ಲೆಖ್ಖಕ್ಕೆ ಸಿಗದ ಹಾಗೆ ನಾವು ಶ್ರಮಪಟ್ಟು ಗಳಿಸಿದ ಹಣವನ್ನು ಉಳಿಸಿಕೊಳ್ಳುವುದೆಂದರೆ ಬಂಡವಾಳುದಾರ ಇನ್ಕಮ್ ಟ್ಯಾಕ್ಸ್ ನವರ ಹದ್ದಿನ ಕಣ್ಣನ್ನು ತಪ್ಪಿಸಿ ತನ್ನ ಹಣದ ವಹಿವಾಟನ್ನು ಸಂರಕ್ಷಿಸಿ ಕೊಂಡಷ್ಟೆ ಶ್ರಮದಾಯಕ ವಾಗಿರುತ್ತಿತ್ತು. ಯಾಕೆಂದರೆ ಒಮ್ಮೊಮ್ಮೆ ನಾವು ಮೈಮರೆತ ಸಂಧರ್ಭಗಳಲ್ಲಿ ಅನಿರೀಕ್ಷಿತವಾಗಿ ನಿಮ್ಮ ಹಣವನ್ನು ಏತೇತಕ್ಕೆ ಖರ್ಚು ಮಾಡಿದ್ದೀರಿ ಎನ್ನುವ ಮೌಖಿಕ ತಪಾಸಣೆ ಬೇರೆ ಇರುತ್ತಿತ್ತು. ನಮ್ಮ ಅಂತರಾಳದ ಅನಿಸಿಕೆ ಏನಾಗಿರುತ್ತಿತ್ತೆಂದರೆ ನಾವು ನಮ್ಮ ಶ್ರಮದ ಪಾಲನ್ನು ಅವರಿಗೆ ತಲುಪಿಸಿದ್ದರೂ ನಮ್ಮ ಉಳಿತಾಯದ ಹಣದ ವಿವರವನ್ನು ಅವರು ಕೇಳುವುದು ತರವಲ್ಲ ವೆಂಬುದಾಗಿರುತ್ತಿತ್ತು. ಆದರೂ ಅವರು ಕೇಳುತ್ತಿದ್ದರು, ಅವರಿಗೆ ಗೊತ್ತಿದೆ ಎಂದರೂ ನಿಜವಾದುದನ್ನು ಗುಟ್ಟು ಮಾಡಲು ಹವಣಿಸುತ್ತಿದ್ದೆವು. ಆ ಗುಟ್ಟು ಏನೆಂದರೆ ಅಂಗಡಿಗಳಲ್ಲಿ ಮಿಠಾಯಿ ಕೊಂಡು ತಿನ್ನುವುದು ಮತ್ತು ಅವಕಾಶ ದೊರೆತರೆ ಸಿನೆಮಾ ನಾಟಕಗಳನ್ನು ನೋಡುವುದು ಆಗಿರುತ್ತಿತ್ತೆ ವಿನಃ ಮತ್ತೇನೂ ಇರುತ್ತಿರಲಿಲ್ಲ. ಈ ಹವ್ಯಾಸಗಳನ್ನು ಕಲಿಯ ಬಾರದು ಎನ್ನುವುದು ಆ ಹಿರಿಯ ಜೀವಿಗಳ ಅಭೀಕ್ಷೆಯಾಗಿರುತ್ತಿತ್ತು ಎನ್ನುವುದು ನಮಗೆ ಈಗ ಅರ್ಥವಾಗುತ್ತಿದೆ, ಆಗ ನಮಗೆ ಅವರ ಮೇಲೆ ಕೋಪ ಬರುತ್ತಿತ್ತು. ಒಳ್ಳೆಯ ಸಿನೆಮಾ ನೋಡುವುದು ನಮ್ಮ ಆದ್ಯತೆಗಳಾಗಿದ್ದವು. ಆದರೆ ಈ ಆಶಯಗಳು ಅಷ್ಟು ಸುಲಭಕ್ಕೆ ಈಡೇರುತ್ತಿರಲಿಲ್ಲ.


                                                                                ( ಮುಂದುವರಿದುದು )
 
                                                                               
 

Rating
No votes yet

Comments

Submitted by swara kamath Wed, 12/19/2012 - 17:29

ಪಾಟೀಲರಿಗೆ ನಮಸ್ಕಾರಗಳು
"ಸಿನೆಮಾ" (ಕಥೆ) ಚನ್ನಾಗಿ ಬರುತ್ತಿದೆ. ಓದಲು ಸಂತೋಷ ಕೋಡುತ್ತದೆ. ಆ ಬಾಲ್ಯದ ದಿನಗಳನ್ನು ಕಳೆದ ರೀತಿ,ಟಾಂಗಸವಾರಿ ,ಹೊಸದಾಗಿ ಆಟೊಬಂದ ದಿನಗಳ್ಳಿನ ಉತ್ಸಕತೆ, ಪಾಕೆಟ್ ಹಣಕ್ಕಾಗಿ ಹೊದದಲ್ಲಿ ಶೆಂಗಾ ಆರಿಸೋದು,ಕಡೆಗೆ ಸಿನೆಮಾ ನೋಡಲು ಪಡುವ ಸಂಕಟ ಎಲ್ಲವನ್ನು ಓದುವಾಗ ಆ ದಿನಗಳು ಎಷ್ಟು ಸುಂದರ ವಾಗಿದ್ದವು ಎಂದೆನಿಸುತ್ತಿದೆ......ವಂದನೆಗಳು

Submitted by H A Patil Wed, 12/19/2012 - 18:49

In reply to by swara kamath

ರಮೇಶ ಕಾಮತರಿಗೆ ವಂದನೆಗಳು
ತಮ್ಮ ಪ್ರತರಿಕ್ರಿಯೆ ಓದಿದೆ, ಸಿನೆಮಾ ಕಥಾನಕದ ಜೊತೆ ಜೊತೆಗೆ ಅರ್ಧ ಶತಮಾನದ ಹಿಂದಿನ ಸ್ಥಿತಿ ಗತಿಗಳು, ಹಾಗೂ ಆಗಿನ ಕಾಲದ ಮೌಲ್ಯಗಳು ಮತ್ತು ಜನ ಮಾನಸದ ಮನಸ್ಥಿತಿಗಳನ್ನು ಬಿಂಬಿಸುವುದೆ ಈ ಕಥಾನಕದ ಉದ್ದೇಶ, ಮೆಚ್ಚುಗೆಗೆ ಧನ್ಯವಾದಗಳು.