ಮಾತು ಮುಗಿಸಿದರು ಮಾತುಗಾರ..!

ಮಾತು ಮುಗಿಸಿದರು ಮಾತುಗಾರ..!

ಅದು ಆಕಾಶವಾಣಿ. ಬೆಳ್ಳಗ್ಗೆ 7 ಗಂಟೆ ಸುಮಾರು. `ಒಂದು ಮಾತು, ಎ.ಎಸ್ ಮೂರ್ತಿಯವರಿಂದ. ಹೀಗೆ ಉದ್ಘೋಷಕರ ಧ್ವನಿಯಲ್ಲಿ ಕಾರ್ಯಕ್ರಮದ ಪುಟ್ಟ ವಿವರಣೆ ದೊರೆಯುತ್ತಿತ್ತು. 7 ಗಂಟೆ ಹೊಡೆದು ಒಂದಷ್ಟು ಸಕೆಂಡ್ ಕಳೆಯೊ ಹೊತ್ತಿಗೆ, ಕಂಚಿನ ಕಂಠ ಧ್ವನಿ ಕೇಳುಗರ ಮನತಟ್ಟುತ್ತಿತ್ತು. ಅಷ್ಟು ಶಕ್ತಿಯುವಾತ ಮಾತುಗಳವು. ಈಗ ಮೊನಚು ಮಾತಿನ ಆ ಧ್ವನಿ ಪಂಚಭೂತಗಳಲ್ಲಿ ನೀಲವಾಗಿದೆ...

ಹೌದು..! ಪತ್ರಕರ್ತ, ರಂಗಕರ್ಮಿ,ಬೀದಿ ನಾಟಕದ ರೂವಾರಿ, ಮಕ್ಕಳ ಮನಸ್ಸಿಗೆ ಪ್ರತಿಭೆಯ ಬಿಂಬ ಹಿಡಿದ ಬಿಂಬದ ಸ್ಥಾಪಕ ಎ.ಎಸ್. ಮೂರ್ತಿ, 18-12-12 ಬೆಳಿಗ್ಗೆ 8.30 ರ ವೇಳೆ ಕೊನೆಯುಸಿರೆಳೆದಿದ್ದಾರೆ. 84 ವರ್ಷ ತುಂಬು ಜೀವನ ಮಾಡಿದ ಎ.ಎಸ್.ಮೂರ್ತಿಗಳು ಇಡೀ ಬದುಕನ್ನ ತುಂಬಾ ಅನುಭವಿಸಿದವರು.  ದೇಹದಲ್ಲಿ ಚೈತನ್ಯ ಇರೋವರೆಗೂ ಮೂರ್ತಿಗಳು ದುಡಿದಿದ್ದಾರೆ. ಪತ್ರಿಕೆಗಳಿಗೆ ಲೇಖನ ಬರೆದುಕೊಟ್ಟಿದ್ದಾರೆ. ಸಿನಿಮಾ ಮೇಲಿನ ಪ್ರೀತಿಯಿಂದ ಎದ್ದೇಳು ಮಂಜುನಾಥ್ ಚಿತ್ರದಲ್ಲೂ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವೇ ಕೊನೆ ಅನಿಸುತ್ತದೆ. ಆ ಮೇಲೆ ಮೂರ್ತಿಗಳು ಡಲ್ ಆದರು.

ತಮ್ಮ ಅಭಿನಯ ತರಂಗದ  ವಿದ್ಯಾರ್ಥಿಗಳನ್ನ ಜೊತೆ ಮಾಡಿಕೊಂಡು ಪ್ರೆಸ್ ಮೀಟ್ ಗೆ ಬರುತ್ತಿದ್ದರು. ಎಂದಿನಂತೆ ತಮ್ಮ ಮೊನಚಾದ ಮಾತಿನಲ್ಲಿಯೇ ಪ್ರಶ್ನಿಸುತ್ತಿದ್ದರು. ಉತ್ತಮ ನಟನೆ ಮತ್ತು ಉತ್ತಮ ಪ್ರತಿಭೆ ಇದ್ದರೆ, ಅಂತಹ ಪ್ರತಿಭೆಗಳನ್ನ ಪ್ರೋತ್ಸಾಹಿಸುತ್ತಿದ್ದರು. ಇದಾದ ಬಳಿಕ ಎಂದಿನಂತೆ ರಂಗಭೂಮಿ ಮಾತು. ಅಭಿನಯ ತರಂಗದಲ್ಲಿ ಕಲಾ ಸೇವೆಯಲ್ಲಿ ಕಳೆದು ಹೋಗುತ್ತಿದ್ದರು.

ಇದೇ ಅಭಿನಯ ತರಂಗದಿಂದಲೇ ಪ್ರಕಾಶ್ ರೈ ರಂತಹ ಕಲಾವಿದರು ಹೊರ ಬಂದಿದ್ದಾರೆ. ಮುಕ್ತ ಧಾರವಾಹಿಯನ್ನ ನಿರ್ದೇಶಿಸಿದ್ದ ಟಿ.ಎನ್.ಸೀತಾರಮ್ ಕೂಡ ಅಭಿನಯ ತರಂಗದ ಮೊದಲ ಬ್ಯಾಚ್ ನ ಒಬ್ಬ ವಿದ್ಯಾರ್ಥಿ. ಇತ್ತೀಚಿಗೆ ರಾತ್ರೋ ರಾತ್ರಿ  ಹೀರೋ ಆದ ಧೃವ ಸರ್ಜಾ ಇದೇ ಅಭಿನಯ ತರಂಗದ ಸ್ಟುಡೆಂಟ್. ಒಲವೆ ಮಂದಾರ ಸಿನಿಮಾದ ಡೈರೆಕ್ಟರ್ ಜಯತೀರ್ಥ, ಮೂರ್ತಿಗಳ ಶಿಷ್ಯ...ಹೀಗೆ ಮೂರ್ತಿಗಳ ಗರಡಿಯಲ್ಲಿ ಬೆಳೆದ ಪ್ರತಿಭೆಗಳ ಹೆಸರು ಹೇಳ್ತಾ ಹೋದ್ರೆ ಪಟ್ಟಿ ದೊಡ್ಡದಾಗುತ್ತದೆ.

ಊರಿಗೆ ಉಪಕಾರಿ, ಮನೆಗೆ ಮಾರಿ ಅನ್ನೋ ಹಾಗೆ ಮೂರ್ತಿಗಳು ಇರಲಿಲ್ಲ. ಮೇಲೆ ಹೇಳಿದ ಪ್ರತಿಭೆಗಳನ್ನ ಬೆಳೆಸೋದರ ಜೊತೆಗೆ ತಮ್ಮ ಮನೆಯಲ್ಲಿಯೇ ಕಲಾವಿದರನ್ನ ಸೃಷ್ಟಿಸಿದರು. ಮೊಮ್ಮಗಳಾದ ಗಾಯಕಿ ಎಂ.ಡಿ.ಪಲ್ಲವಿ ಅವ್ರಿಗೆ ನಾಟಕದ ಗೀಳು ಹಚ್ಚಿದ್ದು ಮೂರ್ತಿಗಳೇ. ಜೊತೆಗೆ ಇನ್ನಿತರ ಮೊಮ್ಮಕಳನ್ನೂ ಮೂರ್ತಿಗಳು, ಪ್ರತಿಭಾನ್ವಿತರನ್ನಾಗಿಯೇ ಮಾಡಿದ್ದಾರೆ. ಈಗ ಮಾತು ಮುಗಿದೆ. ಈರಣ್ಣ ಇಹಲೋಕ ಬಿಟ್ಟು ಎದ್ದು ಹೋಗಿದ್ದಾರೆ. ತಮ್ಮ ಎದುರು ಪ್ರತಿಭೆಯನ್ನ ತೋರಿದ ಮಕ್ಕಳ ಮನದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ.

-ರೇವನ್ ಪಿ.ಜೇವೂರ್

Comments

Submitted by ಮಮತಾ ಕಾಪು Wed, 12/19/2012 - 10:01

ದೂರವಾದರೂ ಅವರ ಧ್ವನಿ ಇನ್ನೂ ಮನದಲ್ಲಿ ಈಗ ತಾನೆ ಕೇಳಿಸಿದಂತಿದೆ, ಉತ್ತಮ ನಿರೂಪಣೆ. ಧನ್ಯವಾದಗಳು.
Submitted by Prakash Narasimhaiya Wed, 12/19/2012 - 10:16

In reply to by ಮಮತಾ ಕಾಪು

ರೇಡಿಯೋ ಆಕಾಶವಾಣಿಯಲ್ಲಿ ಮನೆಮಾತು ಪ್ರಾರಂಭ ಮಾಡಿದವರೇ ಎ ಎಸ್ ಮೂರ್ತಿ ಯವರು. ಇವರ ಮನೆಮಾತು ಅದೆಷ್ಟು ಪ್ರಸಿದ್ಧಿಯಾಗಿತ್ತೆಂದರೆ ಬಿನಾಕ ಗೀತ್ಮಾಲದಷ್ಟು. ಕಾರ್ಯಕ್ರಮದ ಕೊನೆಯಲ್ಲಿ ಮರ್.........ತೆ ಬಿಟ್ಟಿದ್ದೆ ಎನ್ನೋದನ್ನ ಅವರ ಬಾಯಲ್ಲೇ ಕೇಳಬೇಕು! ಹವ್ಯಾಸಿ ರಂಗಭೂಮಿ ಕಲಾವಿದರಾಗಿ ಜನಮನಗಳಲ್ಲಿ, ರೇಡಿಯೋ ಮೂಲಕ ಇನ್ನಷ್ಟು ಪ್ರಸ್ಸಿದ್ಧಿಗೆ ಬಂದ ಎ ಎಸ್ ಮೂರ್ತಿ ನಿಧನ ಒಂದು ನಷ್ಟವೇ ಸರಿ. ತುಂಬು ಹೃದಯದ ಭಾವಪೂರ್ಣ ಶ್ರದ್ಧಾಂಜಲಿ.........................
Submitted by swara kamath Wed, 12/19/2012 - 14:47

ರೇವನ್ ಪಿ. ಜೇವೂರ್ ಅವರಿಗೆ ವಂದನೆಗಳು. ಪತ್ರಕರ್ತ, ಆಕಾಶವಾಣಿ ಕಲಾವಿದ, ಹಾಗು ರಂಗಭೂಮಿ ನಟ ದಿವಂಗತ ಎ.ಎಸ್ ಮೂರ್ತಿ ಯವರ ಕುರಿತು ತಮ್ಮ ಸಕಾಲಿಕ ಲೇಖನ ನನಗೆ ತುಂಬಾ ಮೆಚ್ಚುಗೆ ಅಯಿತು .ಅವರ ಕುರಿತು ಎಷ್ಟು ಓದಿದರೂ ಕಡಿಮೆ ಎನಿಸುತ್ತದೆ. ಮಿತ್ರರಾದ ಪ್ರಕಾಶ್ ನರಸಿಂಹಯ್ಯಅವರು ಬರೆದಂತೆ ಅವರು ಆಕಾಶವಾಣಿಯಲ್ಲಿ ನಡೆಸಿಕೊಡುತ್ತಿದ್ದ "ಮನೆಮಾತು" ಕಾರ್ಯಕ್ರಮ ಕೇಳಿ ಆನಂದಿಸಲು ನಾವು ಮನೆಸದಸ್ಯರೆಲ್ಲರೂ ಸಂಜೆ ಒಟ್ಟುಗೂಡುತ್ತಿದ್ದೆವು.ಕೇಳುಕೇಳುತ್ತಿದ್ದಂತೆ ಎಷ್ಟುಬೇಗ ಸಮಯ ಕಳೆಯಿತು ಎಂದೆನಿಸುತ್ತಿತ್ತು. ನನಗೆ ನೆನಪಿದ್ದಂತೆ ಅವರ ನೇರ ಹಾಗೂ ದಿಟ್ಟಮಾತುಗಳೇ ಅವರಿಗೆ ಆಕಾಶವಾಣಿ ಕೆಲಸದಿಂದ ಹೊರಬರುವ ಹಾಗೆ ಮಾಡಿತು .ಆಗ ನಡೆದ ಘಟನೆ ಸರಿಯಾಗಿ ನೆನಪಿಗೆ ಬರುತ್ತಿಲ್ಲಾ. ಅಂತು ಅವರ ಸ್ಥಾನತುಂಬಲು ಮತ್ತೊಬ್ಬರಿಲ್ಲಾ. ಅವರಿಗೆ ನನ್ನ ಚಿರ ನಮನಗಳು
Submitted by venkatb83 Wed, 12/19/2012 - 15:27

In reply to by swara kamath

ಇವರ ಹಲವು ಜನ ಸಾಮನ್ಯರಿಗೆ ತಿಳುವಳಿಕೆ ನೀಡುವ ಕಾರ್ಯಕ್ರಮಗಳನ್ನ ಕಾಮನಬಿಲ್ಲು ಚಾನ್ನೆಲ್ನಲ್ಲಿ (ರೇಡಿಯೋ)ಕೇಳಿದ್ದೆ. ಹಾಗೆಯೇ ಇವರು ರಂಗಕರ್ಮಿ -ಚಿತ್ರ ನಟರೂ ಹೌದು. ಅವರ ಆತ್ಮಕ್ಕೆ ಶಾಂತಿ ಸಿಗಲಿ.. ಮೋಡಿ ಗಾರ-ಮಾತುಗಾರನ ಕಣ್ಮರೆ ಅನ್ನಬಹ್ದು... ಆದರೂ ಅವರು ಅವರ ಕಾರ್ಯಕ್ರಮಗಳ -ಕಾರ್ಯ ಕ್ಷೇತ್ರದ ಮರು ಪ್ರಸಾರ ಮೂಲಕ ನಮ್ಮನ್ನು ಮುಟ್ಟುವರು -ಮನ ತಟ್ಟುವರು ... ಸಕಾಲಿಕ ಸಂತಾಪ ಬರಹ..