ಹಾಸಿಗೆ ಬಿಟ್ಟೇಳುವ ಮೊದಲೇ ಸ್ಮಾರ್ಟ್‌ಫೋನ್ ದರ್ಶನ

ಹಾಸಿಗೆ ಬಿಟ್ಟೇಳುವ ಮೊದಲೇ ಸ್ಮಾರ್ಟ್‌ಫೋನ್ ದರ್ಶನ

 ಹಾಸಿಗೆ ಬಿಟ್ಟೇಳುವ ಮೊದಲೇ ಸ್ಮಾರ್ಟ್‌ಫೋನ್ ದರ್ಶನ
ಸ್ಮಾರ್ಟ್‌ಫೋನ್ ಬಳಸುವ ಬಹುಮಂದಿ ಯುವಜನ ಹಾಸಿಗೆ ಬಿಟ್ಟೇಳುವ ಮೊದಲೇ ಸ್ಮಾರ್ಟ್‌ಫೋನ್ ಬಳಸಿಯಾಗಿರುತ್ತದೆ.ಹೀಗೆ ಸಮೀಕ್ಷೆಯ ವರದಿಯೊಂದು ತಿಳಿಸುತ್ತದೆ.ಭಾರತದ ಯುವಜನರೂ ಕೂಡಾ ಇದಕ್ಕೆ ಹೊರತಲ್ಲ.ಇನ್ನು ತಾಸಿಗೊಮ್ಮೆಯಾದರೂ ಮಿಂಚಂಚೆ,ಸಂದೇಶ,ಸಾಮಾಜಿಕ ಜಾಲತಾಣಗಳನ್ನು ಪರಿಶೀಲಿಸುವುದು ಒಂದು ಜಾಢ್ಯವೇ ಆಗಿಬಿಟ್ಟಿದೆ.ಹಾಗೆ ಮಾಡಲಾಗದಿದ್ದರೆ,ಯುವಜನತೆ ಕಂಗಾಲಾಗುತ್ತಾರೆ.ಸಮೀಕ್ಷೆಯಲ್ಲಿ ಹತ್ತಿರ ಹತ್ತಿರ ಎರಡುಸಾವಿರ ಜನ,ಹದಿನೆಂಟರಿಂದ ಮೂವತ್ತು ವರ್ಷದೊಳಗಿನ ಕಾಲೇಜು ವಿದ್ಯಾರ್ಥಿಗಳು ಮತ್ತು ಐಟಿ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದವರನ್ನು ಸಂದರ್ಶಿಸಿ,ಸಮೀಕ್ಷೆ ಸಿದ್ಧಪಡಿಸಲಾಗಿದೆ.ಇದರಲ್ಲಿ ಹದಿನೆಂಟು ದೇಶದವರು ಇದ್ದರು.ಈ ಚಾಳಿ ಹುಡುಗಿಯರಲ್ಲಿ ಹುಡುಗರಿಗಿಂತಲೂ ಹೆಚ್ಚಾಗಿರುವ ಆಶ್ಚರ್ಯಕರ ವಿಷಯವೂ ಹೊರಬಂದಿದೆ.
--------------------------------
ಟೂಜಿ:ಇಪ್ಪತ್ತು ಸಾವಿರ ಕೋಟಿ ನಿರೀಕ್ಷೆ
ಮಾರ್ಚ್ ಮೊದಲು ಮುಗಿಸುವ ನಿರೀಕ್ಷೆಯಿರುವ ಎರಡನೇ ಹಂತದ,ಟೂಜಿ ಸ್ಪೆಕ್ಟಂ ಹರಾಜಿನಿಂದ ಇಪ್ಪತ್ತು ಸಾವಿರ ಕೋಟಿ ರೂಪಾಯಿ ಆದಾಯವನ್ನು ಸರಕಾರ ನಿರೀಕ್ಷಿಸಿದೆ.ಈಗಾಗಲೇ ಮುಗಿದಿರುವ ಮೊದಲನೇ  ಹಂತದ ಹರಾಜಿನಲ್ಲಿ,ನೀರಸ ಪ್ರತಿಕ್ರಿಯೆಯಿಂದ ಹತ್ತು ಸಾವಿರಕ್ಕೂ ಕಡಿಮೆ ಆದಾಯ ಸರಕಾರಕ್ಕೆ ಸಿಕ್ಕಿತ್ತು.ಈಗ ಹರಾಜಿನಲ್ಲಿ ಮುಂಬೈ,ದೆಹಲಿ,ಕರ್ನಾಟಕ ಮತ್ತು ರಾಜಾಸ್ಥಾನ್ ವೃತ್ತಗಳ ಒಂಭೈನೂರು ಮತ್ತು ಸಾವಿರದೆಂಟುನೂರು ಮೆಗಾಹರ್ಟ್ಸ್ ಸ್ಪೆಕ್ಟ್ರಮ್ ಹರಾಜಿಗಿದೆ.ಈ ಸಲ ಸ್ಪೆಕ್ಟ್ರಂನ ಮೂಲಬೆಲೆಯಲ್ಲಿ ಮೂವತ್ತು ಶೇಕಡಾ ಕಡಿತ ಮಾಡಿ,ಐದು ಮೆಗಾಹರ್ಟ್ಸ್‌ಗೆ ಐದುಸಾವಿರ ಕೋಟಿ ಬೆಲೆಯನ್ನು ನಿಗದಿಪಡಿಸುವ ನಿರ್ಧಾರವನ್ನು ಸರಕಾರ ಪ್ರಕಟಿಸಿದೆ.
-----------------------------------
ಬ್ರಾಡ್‌ಬ್ಯಾಂಡ್ ಇನ್ನೂ ಗುರಿಮುಟ್ಟಿಲ್ಲ
ಭಾರತದಲ್ಲಿ ಇಂಟರ್ನೆಟ್ ಬಳಕೆ ಹೆಚ್ಚುತ್ತಿದ್ದರೂ,ಅದರ ಬೆಳವಣಿಗೆ ದರ ನಿರೀಕ್ಷಿಸದಷ್ಟಿಲ್ಲ.ಕಳೆದ ವರ್ಷಾಂತ್ಯಕ್ಕೆ ಭಾರತದಲ್ಲಿ ಬ್ರಾಡ್‌ಬ್ಯಾಂಡ್ ಬಳಕೆದಾರರ ಸಂಖ್ಯೆ ಇಪ್ಪತ್ತಮೂರು ದಶಲಕ್ಷಕ್ಕೆ ತುಸು ಕಡಿಮೆಯಿತ್ತು.ಅದರ ಹಿಂದಿನ ವರ್ಷ ಈ ಸಂಖ್ಯೆ ಇಪ್ಪತ್ತು ದಶಲಕ್ಷಕ್ಕಿಂತ ತುಸು ಕಡಿಮೆಯಿತ್ತು.ಸರಕಾರವು ಈ ಅವಧಿಯಲ್ಲಿ ನಲುವತ್ತು ದಶಲಕ್ಷ ಬ್ರಾಡ್‌ಬ್ಯಾಂಡ್ ಸಂಪರ್ಕಗಳನ್ನು ನೀಡಬೇಕಿತ್ತೆಂಬ ಗುರಿ ಹೊಂದಿತ್ತು.ಆದರೆ ಖಾಸಗಿ ವಲಯ ಇಂಟರ್ನೆಟ್ ಸೇವಾದಾತೃಗಳ ನೀರಸ ಪ್ರತಿಕ್ರಿಯೆಯಿಂದ ಗುರಿಗಿಂತ ತೀರಾ ಹಿಂದುಳಿಯಲು ಕಾರಣವಾಗಿದೆ.ಹಳ್ಳಿಗಳಿಗೆ ಕೇಬಲ್ ಜಾಲ ಹಾಕಲು ಹೆಚ್ಚು ಖರ್ಚು ಬರುವುದು,ಕೈಕೊಡುವ ವಿದ್ಯುತ್ ,ದುಬಾರಿ ಬ್ರಾಡ್‌ಬ್ಯಾಂಡ್ ದರ,ಕಂಪ್ಯೂಟರ್ ಅಲಭ್ಯತೆ,ಅನಕ್ಷರತೆ ಇವೆಲ್ಲಾ ಕಾರಣದಿಂದ ದೇಶದ ಜನತೆಯು ಇಂಟರ್ನೆಟ್ ಬಳಸಲು ಅಡ್ಡಿಯಾಗಿರುವುದು ಸ್ಪಷ್ಟ.
-------------------------------------
ಜೀಮೇಲ್ ಬಾಧಿತ




ಜಿಮೇಲ್ ಮಿಂಚಂಚೆ ಸೇವೆಯು ವಾರವಿಡೀ ಸುದ್ದಿಯಲ್ಲಿತ್ತು.ಇದಕ್ಕೆ ಕಾರಣ,ಜಿಮೇಲ್‌ನ ಹೊಸ ಸೇವೆಗಳೇನೂ ಆಗಿರದೆ,ಅದರ ಸೇವೆಯಲ್ಲಿ ಕಾಣಿಸಿಕೊಂಡ ತೊಂದರೆಗಳಾಗಿತ್ತು.ಜಿಮೇಲ್ ಸೇವೆ ತುಸು ಹೊತ್ತು ಅಲಭ್ಯವಾಗಿದ್ದದ್ದು ಸೋಮವಾರ.ನಂತರ ಬುಧವಾರ,ಅದರ ಸೇವೆ ಅತಿ ನಿಧಾನವಾಗಿ,ಬಳಕೆದಾರರನ್ನು ಕಾಡಿತು.ಒಂದು ದಿನ ಮಿಂಚಂಚೆಯೊಂದಿಗೆ ಸೇರಿಸಿದ ಕಡತ ಸರಿಯಾಗಿ ಬಟವಾಡೆ ಆಗುತ್ತಿರಲಿಲ್ಲ.ಹೀಗೆ ವಾರವಿಡೀ ಜಿಮೇಲ್ ಬಳಕೆದಾರರು ಗೂಗಲ್ ಸೇವೆಯಲ್ಲಿ ತೊಂದರೆಗೀಡಾದರು.ಇದಕ್ಕೆ ಕಾರಣ ಸ್ಪಷ್ಟವಿಲ್ಲವಾದರೂ,ಗೂಗಲ್,ಇದನ್ನು ಸರಿಪಡಿಸಲು ಕ್ರಮಕೈಗೊಳ್ಳುವುದಾಗಿ ಬಳಕೆದಾರರಿಗೆ ಸಮಾಧಾನ ಹೇಳಿದೆ.
-----------------------------------------------
ಗೂಗಲ್ ಪ್ಲಸ್ಸಿನಲ್ಲಿ ಸುಧಾರಣೆ
ಗೂಗಲ್ ಪ್ಲಸ್ ಸಾಮಾಜಿಕ ಜಾಲತಾಣವು ತನ್ನ ಸೇವೆಗೆ ಗೂಗಲ್ ಮತ್ತಷ್ಟು ಸುಧಾರಣೆಗಳನ್ನು ಮಾಡಿದೆ.ಆಂಡ್ರಾಯಿಡ್ ಸಾಧನಗಳಿಂದ ಚಿತ್ರಗಳನ್ನು ಸೇರಿಸಲು,ಐದು ಗಿಗಾಬೈಟ್ ಸ್ಮರಣಶಕ್ತಿಯನ್ನು ಉಚಿತವಾಗಿ ನೀಡಲಾಗುವುದು.ಇನ್ನು ಸಾಮಾನ್ಯ ಚಿತ್ರಗಳನ್ನು ಸಾಮರ್ಥ್ಯದ ಮಿತಿಯಿಲ್ಲದೆ ಗೂಗಲ್ ಪ್ಲಸ್ಸಿನಲ್ಲಿ ಉಳಿಸಬಹುದು.ದೃಶ್ಯಗಳನ್ನು ಕ್ಯಾಮರಾದಿಂದ ಕ್ಲಿಕ್ಕಿಸಿ ತೆಗೆದ ಚಿತ್ರಗಳನ್ನು ಅನುಕ್ರಮವಾಗಿ ಜೋಡಿಸಿ,ಪನೊರಮಿಕ್ ವೀಕ್ಷಣೆಗೆ ಅವಕಾಶವಿರುವುದು,ಇನ್ನೊಂದು ಸವಲತ್ತು.ಗೂಗಲ್ ಪ್ಲಸ್ಸಿನಲ್ಲಿ ಹ್ಯಾಂಗ್‌ಔಟ್ ಎನ್ನುವ ಸೇವೆಯಿದ್ದು,ಇಲ್ಲಿ ಸ್ನೇಹಿತರುಗಳೆಲ್ಲಾ ಕಲೆತು ಪಟ್ಟಾಂಗ ನಡೆಸಿ,ಕಡತ-ಚಿತ್ರ-ವಿಡಿಯೋಗಳ ಹಂಚಿಕೆ ಮಾಡಿಕೊಳ್ಳುವ ಸೌಲಭ್ಯಕ್ಕೆ ಕಡಿಮೆ ವೇಗದ ಇಂಟರ್ನೆಟ್ ಬಳಕೆದಾರರನ್ನು ಒಳಗೊಳ್ಳುವಂತೆ ಮರುವಿನ್ಯಾಸ ಮಾಡಲಾಗಿದೆ.ಒಟ್ಟಿನಲ್ಲಿ ಗೂಗಲ್ ತನ್ನ ಗೂಗಲ್ ಪ್ಲಸ್ ಸೇವೆಯು ಬಳಕೆದಾರರಿಗೆ ಹೆಚ್ಚು ಪ್ರಿಯವೆನಿಸುವಂತೆ ಪಡಲು ಹೆಚ್ಚಿನ ಒತ್ತು ನೀಡುತ್ತಿರುವುದು ಸ್ಪಷ್ಟವಾಗಿದೆ.
-----------------------------
ಬ್ಯಾಂಕ್ ಖಾತೆ ಕನ್ನಕ್ಕೆ ಸಿದ್ಧತೆ
ಅಮೆರಿಕನ್ ಬ್ಯಾಂಕ್‌ ಸಂಬಂಧಿ ಸೇವೆಗಳಾದ ಸಿಟಿಬ್ಯಾಂಕ್,ಚೇಸ್,ಪೇಪಾಲ್,ಇಬೇ ಮುಂತಾದ ತಾಣಗಳಲ್ಲಿ ನಡೆಯುವ ಹಣಕಾಸಿನ ವ್ಯವಹಾರವನ್ನು ಬೇಧಿಸಿ,ಖಾತೆಗಳಿಗೆ ಕನ್ನ ಹಾಕಲು ಅಂತಾರ್ರಾಷ್ಟ್ರೀಯ ಮಟ್ಟದ ಜಾಲ ಸಿದ್ಧವಾಗುತ್ತಿದೆ ಎಂದು ಮೆಕಾಫಿ ಎಚ್ಚರಿಸಿದೆ.ಇಎಮ್‌ಸಿ ಕಂಪೆನಿಯ ಅಧೀನದಲ್ಲಿರುವ ಮೆಕಾಫಿ ಖ್ಯಾತ ಪ್ರತಿವೈರಸ್ ತಯಾರಿಕೆಗೆ ಪ್ರಸಿದ್ಧಿಯಾದ ಕಂಪ್ಯೂಟರ್ ಭದ್ರತಾ ಕಂಪೆನಿ.ಹ್ಯಾಕರುಗಳಿಗೆ ಅವರು ತೋರಿಸುವ ಕೌಶಲದ ಆಧಾರದಲ್ಲಿ ಬ್ಯಾಂಕ್ ಖಾತೆಗಳಿಂದ ಕನ್ನ ಹಾಕಿದ ಹಣದಲ್ಲಿ ಪಾಲನ್ನು ನೀಡುವ ಆಮಿಷ ಒಡ್ಡಿ,ಅವರ ಕೌಶಲದ ಮೂಲಕ ಖಾತೆಗಳನು ವಶೀಕರಿಸಿಕೊಂಡು,ಹಣಕ್ಕೆ ಕನ್ನ ಹಾಕುವುದು ಈ ಗುಂಪಿನ ಸ್ಕೆಚ್.ಈ ಕೆಲಸಕ್ಕೆ ನಕಲಿ ಸೈಟುಗಳು,ಕೀಲಿಮಣೆಯ ಒತ್ತುವಿಕೆಯನ್ನು ದಾಖಲು ಮಾಡಿ ಪಾಸ್‌ವರ್ಡ್‌ನಂತಹ ಮಾಹಿತಿ ಕದಿಯುವುದು,ಬ್ಯಾಂಕ್‌ಗಳ ಗಮನಕ್ಕೆ ಬಾರದಂತೆ,ಗ್ರಾಹಕನ ಐಪಿ ವಿಳಾಸದಿಂದಲೇ ಖಾತೆಗೆ ಪ್ರವೇಶ ಪಡೆಯುವಂತೆ ಭ್ರಮೆ ಹುಟ್ಟಿಸುವುದೇ ಮೊದಲಾದ ಹಲವಾರು ಸಂಚುಗಳನ್ನು ಈ ಗುಂಪು ಯೋಜಿಸಿದೆ.ಇದರ ಬಗ್ಗೆ ಮೊದಲೇ ಮಾಹಿತಿ ಹೊಂದಿದ್ದರೆ,ಭದ್ರತಾ ಕ್ರಮಗಳನ್ನು ಹೆಚ್ಚಿಸಿ,ತುಸುವಾದರೂ ಇಂತಹ ದಾಳಿಗಳಿಗೆ ಹಿನ್ನಡೆ ಕಾಣಿಸುವುದು ಸಾಧ್ಯ.
------------------------------
ಐಫೋನಿಗೆ ಮತ್ತೆ ಗೂಗಲ್ ಮ್ಯಾಪ್ ಸೇವೆ
ಐಫೋನು ಮತ್ತು ಐಪ್ಯಾಡುಗಳಲ್ಲಿ ಗೂಗಲ್ ಮ್ಯಾಪ್ ಸೇವೆಗಳ ಬದಲಿಗೆ,ಆಪಲ್ ತನ್ನದೇ ನಕ್ಷೆಗಳನ್ನು ಒದಗಿಸಲು ಆರಂಭಿಸಿತ್ತು.ಮೊದಲಿನ ದಿನದಿಂದಲೇ ಆಪಲ್ ನಕ್ಷೆಗಳ ಬಗ್ಗೆ ಬಳಕೆದಾರರು ಟೀಕಾಪ್ರಹಾರ ಮಾಡಲಾರಂಭಿಸಿದರು.ಅದರಲ್ಲಿ ಸ್ಥಳಗಳ ಗುರುತಿಸುವಿಕೆ ತಪ್ಪಾಗಿರುತ್ತಿದ್ದು,ಬಳಕೆದಾರರಿಗೆ ಗೊಂದಲ ಹುಟ್ಟಿಸುವಂತಿತ್ತು.ಎಷ್ಟೋ ಪ್ರಕರಣಗಳಲ್ಲಿ ಆಪಲ್ ನಕ್ಷೆಯು,ಗಮ್ಯಕ್ಕಿಂತ ದೂರಕ್ಕೆ ಜನರಿಗೆ ಮಾರ್ಗದರ್ಶನ ಮಾಡಿ ಕಿರಿಕಿರಿ ಹುಟ್ಟಿಸಿತ್ತು.ಇತ್ತೀಚೆಗೆ ಕೆಲವು ಚಾರಣಿಗರು ಆಪಲ್ ನಕ್ಷೆಗಳ ಮಾರ್ಗದರ್ಶನದಂತೆ ಸಾಗಿ ದುರ್ಗಮ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡ ನಂತರ,ಆಪಲ್ ಎಚ್ಚೆತ್ತುಕೊಂಡು,ಐಓಎಸ್ ಬಳಸುವ ಸಾಧನಗಳಲ್ಲಿ ನಕ್ಷೆ ಸೇವೆಗೆ ಮತ್ತೆ ಗೂಗಲ್ ಮ್ಯಾಪನ್ನು ಲಭ್ಯವಾಗಿಸಿದೆ.ಗೂಗಲ್ ಮಟ್ಟಿಗೆ ಅದರ ಮ್ಯಾಪ್ ಸೇವೆಗಳ ಗುಣಮಟ್ಟದ ಬಗೆಗಿನ ಶಹಭಾಸ್‌ಗಿರಿ ಎಂದರೆ ತಪ್ಪಿಲ್ಲ.
-------------------------------
ನಂಬಿಕೆ ಚ್ಯುತಿ ಬಾರದು
ಹೊಸ ಇಂಟರ್ನೆಟ್ ಜಾಲತಾಣಗಳು,ಟ್ವಿಟರ್ ಅಥವಾ ಫೇಸ್‌ಬುಕ್ ಖಾತೆಯ ಮೂಲಕ ತಮ್ಮ ಖಾತೆಗೆ ನೋಂದಾಯಿಸಲು ಅವಕಾಶ ನೀಡುತ್ತವೆ.ಬಳಕೆದಾರನ ಗುರುತು,ಆತನ ಹೆಸರು,ಮಿತ್ರರ ವಿಷಯ,ಆತನ ಆಸಕ್ತಿ ಇತ್ಯಾದಿಗಳನ್ನು ತಾಣವು ಫೇಸ್‌ಬುಕ್ ಅಥವಾ ಟ್ವಿಟರ್‌ನಿಂದಲೇ ಪಡೆಯುವುದರಿಂದ,ಬಳಕೆದಾರನಿಗೆ ತನ್ನ ಬಗ್ಗೆ ಮಾಹಿತಿ ನೀಡುವ ಕಷ್ಟ ತಪ್ಪುತ್ತದೆ.ಹೆಚ್ಚಿನ ತಾಣಗಳು ಹೀಗೆ ಸಂಗ್ರಹಿಸಿದ ಖಾಸಾ ಮಾಹಿತಿಗಳನ್ನು ದುರ್ಬಳಕೆ ಮಾಡವು.ಅವು ಅನಗತ್ಯ ಮಿಂಚಂಚೆ ಸಂದೇಶಗಳನ್ನು ಕಳಿಸುವುದಾಗಲಿ,ಮಾಹಿತಿಯನ್ನು ಇತರರಿಗೆ ನೀಡುವುದಾಗಲಿ ಮಾಡದೆ,ಬಳಕೆದಾರನ ನಂಬಿಕೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳಲು ಬದ್ಧವಾಗಿರುತ್ತವೆ.ಹೀಗಾಗಿ,ಬಳಕೆದಾರನು ತನ್ನ ಖಾಸಗಿ ಮಾಹಿತಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ.ತಾಣಗಳು ತಾವು ಸಂಗ್ರಹಿಸಿದ ಮಾಹಿತಿಯ ಆಧಾರದಲ್ಲಿ,ಬಳಕೆದಾರನ ಒಲವುಗಳ ಬಗ್ಗೆ ಧ್ಯಾನಹರಿಸಿ,ಅವನಿಗೆ ಬೇಕಾದ ಸೇವೆ ಅಥವಾ ಸುದ್ದಿಯನ್ನು ಒದಗಿಸಿ,ಆತನ ಜಾಲಾಟ ಅನುಭವಕ್ಕೆ ತಾಜಾತನ ಒದಗಿಸುತ್ತವೆ.
-------------------------
ಇಂಟ‌ರ್ನೆಟ್‌ನಲ್ಲಿ ಅಂಕಣ ಬರಹಗಳು: http://ashok567.blogspot.com
UDAYAVANI
EPAPER
*ಅಶೋಕ್‌ಕುಮಾರ್ ಎ

Comments

Submitted by krishnarajb Wed, 12/19/2012 - 15:28

<<ಇಎಮ್‌ಸಿ ಕಂಪೆನಿಯ ಅಧೀನದಲ್ಲಿರುವ ಮೆಕಾಫಿ >> ಮೆಕಾಫಿ ಇರೋದು ಇಂಟೆಲ್ ಅಧೀನ ಕಂಪೆನಿಯಾಗಿ