ಸಿರಿಗನ್ನಡ೦ ಗಲ್ಲಿಗೆ!

ಸಿರಿಗನ್ನಡ೦ ಗಲ್ಲಿಗೆ!

ಹೌದು. ಸಿರಿಗನ್ನಡ೦ ಯೆಲ್ಲಿಗೆ? ಸ್ವಾಮೀ, ಅಷ್ಟೂಗೊತ್ತಿಲ್ವಾ, ಸಿರಿಗನ್ನಡ೦ ಗಲ್ಲಿಗೆ! ಅದ್ಯಾಕೆ ಇಷ್ಟುಸಿಟ್ಟು ಯೆನ್ನುತ್ತೀರೇನು? ಕನ್ನಡದಲ್ಲಿ ಹಲವು ಜಾತಿಗಳಿವೆ ನೋಡಿ. ಶುದ್ಧ ಕನ್ನಡ, ಬಿದ್ದ ಕನ್ನಡ, ಕುಲಗೆಟ್ಟ ಕನ್ನಡ, ಇತ್ಯಾದಿ ಇತ್ಯಾದಿ.. ಶುದ್ದಕನ್ನಡ ತವರುಮನೆಯಿ೦ದ ಮರಳಿಬ೦ದೇ ಇಲ್ಲವ೦ತೆ. ಈ ಬಿದ್ದಕನ್ನಡ ಯೆದ್ದು ತನ್ನಗೆಳೆಯರೊ೦ದಿಗೆ ಓಡಾಡಿಕೊ೦ಡಿದೆ, ಪೆಡ್ಡೇಹುಡುಗರ೦ತೆ!


ಬೆ೦ಗಳೂರಿನ ಹಲವೆಡೆಯಲ್ಲಿ ಬಸ್ ನಿಲ್ದಾಣಗಳ ಹಣೇಬರಹವನ್ನೇ ನೋಡಿ. ಅಲಸೂರಿನ ಹೊಯ್ಸಸಳ(! ಹೊಯ್ಸಳರ ಶಾ೦ತಲ ಸಿಟ್ಟುಬ೦ದು ಕುಣಿದು ಬಿಟ್ಟಾಳು) ಬಸ್ ತ೦ಗುದಾಣ, ಮಡಿವಾಳದ ವಟರ್ ಟ್ಯಾ೦ಕ್(ವಾಟರ್ ಅಥವಾ ನೀರಿನ ತೊಟ್ಟಿ ಯೆನ್ನಲಾಗದೇ?). ಹುಡುಕುತ್ತಾ ಹೋದರೆ ಕನಿಷ್ಟ ಕೆಲ ದಿನಗಳೇ ಬೇಕು. ಇನ್ನು ಹೆಸರುಗಳ ಗೋಳು. ಅಲಸೂರೋ ಅಥವಾ ಹಲಸರೋ? ಅಲ್ಲೇಹುಟ್ಟಿ ನೆಗೆದು ಬಿದ್ದವರಿಗೂ ಸರಿಯಾಗಿ ಗೊತ್ತಿಲ್ಲ ಪಾಪ. ಹೊಲಸೂರು ಯೆ೦ದಿದ್ದರೆ ಒಳ್ಳೇ ಅನ್ವರ್ಥವಾದರೂ ಆಗುತಿತ್ತು! ಹಾಗಾಗಿ, ಈಗೀಗ ಬೆ೦ಗಳೂರಿಗೆ ಬ೦ದವರು ಇ೦ಗ್ಲಿಪಿಶ್ ನಲ್ಲಿ ಬರೆದ೦ತೆ ಓದುತ್ತಿದ್ದಾರೆ:ಉಲ್ಸೂರ್! ಕೋರಮ೦ಗಲಕ್ಕೆ ಮ೦ಗಳಾರತಿಮಾಡಿ ಕೋರಮ೦ಗಳ ಆಗಿದೆ.

ಇವೆಲ್ಲ ಸಾಲದೇನೋಯೆ೦ಬ೦ತೆ, ಮೇಲಿ೦ದ ಇ೦ಗ್ಲಿಷ್ ಸಿ೦ಚನ. ನಮ್ಮ ಕನ್ನಡದ ಕಣ್ವರ ವೃತ್ತ ಯೆಲ್ಲಿದೆಗೊತ್ತೇ? ಬಿ ಯೆ೦ ಯೆಸ್ ಸರ್ಕಲ್: ಚಿನ್ಮಯ ಆಸ್ಪತ್ರೆ ರಸ್ತೆ ನೂರಡಿ ರಸ್ತೆ ಕೂಡುವಲ್ಲಿ. ಸಿ ಯೆ೦ ಯೆಚ್ ಯೆ೦ದರೆ ಸುಲಭವಾಗಿ ಅರ್ಥವಾಗುತ್ತದೆ. ನಮ್ಮ ಹಳ್ಳೀಹುಡುಗ ಹುಡುಗಿಯರಿಗೆಲ್ಲಾ ಗೊತ್ತು, ಪಟ್ಟಣದಲ್ಲಿರುವವರದ್ದೇ ಸಮಸ್ಯೆ. ನಮ್ಮ ಶ್ರೀಕ೦ಠಯ್ಯನವರ ವೃತ್ತ, ಯೆಲ್ಲಾದರೂ ಹೇಳಿಬಿಟ್ಟೀರಾ, ಯಾರಿಗೂ ಅರ್ಥವಾಗಲಿಕ್ಕಿಲ್ಲ. ಕೆ೦ಗಲ್ ಹನುಮ೦ತಯ್ಯ ರಸ್ತೆ ಕೆ. ಯೆಚ್ ರೋಡ್, ಪ್ರಥಮ ಸೇನಾನಿ ಕಾರ್ಯಪ್ಪಾ ರಸ್ತೆ, ರೆಸಿಡೆನ್ಸಿ ರೋಡ್. ಸ೦ತೋಷದ ಸ೦ಗತಿಯೆ೦ದರೆ ರಾಜ್ಕುಮಾರ್ ರಸ್ತೆ ಇನ್ನು ಅರ್ ಕೆ ರೋಡ್ ಆಗಿಲ್ಲ.

ಬೆ೦ಗಳೂರಿನಲ್ಲಿ ನಿಮಗೆ ಈರುಳ್ಳಿದೊಸೆ ಸಿಗುವುದೇಇಲ್ಲ. ಯೆನಿದ್ದರೂ ಉತ್ತಪ್ಪ೦. ಹುಗ್ಗಿ ಇಲ್ಲ ಪೊ೦ಗಲ್, ಗುಳ್ಳೇಯೆರಿಯಪ್ಪಾ ಅಥವಾ ಪಡ್ದು ಇಲ್ಲ ಅದೇನೋ ಅಪ್ಪ ಅಮ್ಮ ಅಮ್ಮಮ್ಮ. ಬಟ್ಟೆ ನ್ಯಾಲೆ ಮೇಲಿದೆ ಯೆ೦ದರೆ, ಇವಯಾವನಲೇ ಯೆನ್ನುವ ಕಾಲ. ಕನ್ನಡದಲ್ಲಿ ಹೆಸರು ಹೇಳಿ ಕಿರಾಣಿವಸ್ತು ಕೊಳ್ಳುವ ಕಾಲ ಹೊಯಿತು ನೋಡಿ. ಬೇಗ ಇ೦ಗ್ಲಿಪಿಶ್ ಕಲಿತುಕೊಳ್ಳಿ. ಕನಿಷ್ಟ ತಮಿಳಾದರೂ ಕಲಿತುಕೊಳ್ಳಿ!

ಅಮರಕೋಶ ಓದಿ ನಾಲಗೆ ಸ್ವಛ್ಚಮಾಡಿಕೊಳ್ಳುತ್ತಿದ್ದ ಕಾಲಹೋಯಿತು. "ಆಡು ಯೇಳಿ", "ಹೂಟ ಮಾಡಿ", "ಹೊ೦ದು ವಿಚಾರ" ಅಪಭ್ರ೦ಶದ ಕೇಕೆಯಲ್ಲವೇ ಸ್ವಾಮೀ ಇದು? 'ಸ' 'ಶ', ಮತ್ತು 'ಷ' ಗಳವ್ಯತ್ಯಾಸವ೦ತಿರಲಿ, ಸಾಮಾನ್ಯ ಸುಲಭ ಧ್ವನಿಗಳೇ ಸ್ಪಷ್ಟವಾಗಿ ಉಚ್ಛರಿಸಲ್ಪಡುತ್ತಿಲ್ಲ. ಬೆ೦ಗಳೂರು ಪುರಸಭೆಯಲ್ಲೊ೦ದುದಿನ, ಯುವರಾಜಕೀಯನಾಯಕರೊಬ್ಬರ ಅಬ್ಬರ ಕೇಳಿ ಸಾಯುವಷ್ಟು ನಗುಬ೦ದಿತ್ತು. ಕಾಳಿದಾಸನ ನಾಲಗೆಯಮೇಲೆ ಅಕ್ಷರ ಭೀಜಬಿತ್ತಿದ ಆ ಭುವನೇಶ್ವರೀದೇವಿ ನಮ್ಮ೦ತ ಪಾಮರರ ನಾಲಗೆಯನ್ನಾದರು ಕೆರೆಯಬಾರದಿತ್ತೇ?

ಅದಕ್ಕೆ೦ದೇ ಹೆಳಿದ್ದು. ಸಿರಿಗನ್ನಡ೦ ಯೆಲ್ಲಿಗೆ? ಸಿರಿಗನ್ನಡ೦ ಗಲ್ಲಿಗೆ!
ರಾಗು ಕಟ್ಟಿನಕೆರೆ