ಮತ್ತೆ ಮತ್ತೆ ಕೂಗು ಮಾರಿ

ಮತ್ತೆ ಮತ್ತೆ ಕೂಗು ಮಾರಿ

ಪುಸ್ತಕದ ಲೇಖಕ/ಕವಿಯ ಹೆಸರು
ನಾಗೇಶ ಹೆಗಡೆ
ಪ್ರಕಾಶಕರು
ಭೂಮಿ ಬುಕ್ಸ್
ಪುಸ್ತಕದ ಬೆಲೆ
99 ರೂ.

ನಮ್ಮ ಎಲ್ಲಾ ಕೆಲಸಗಳ ಉದ್ದೇಶವೂ ಅಂತಿಮವಾಗಿ ಸಾರ್ಥಕತೆ, ಸಂತಸ, ಉಲ್ಲಾಸವೇ ಆಗಿದ್ದರೂ ಆ ಉದ್ದೇಶ ಈಡೇರಿದೆಯೋ ಇಲ್ಲವೋ ಎಂಬುದನ್ನು ನೋಡಲು ನಮಗೆ ಬಿಡುವಿಲ್ಲ. ಅಂದರೆ ನಿಜ ಜೀವನದ ಹಲವಾರು ಒತ್ತಡಗಳಲ್ಲಿ ನಮ್ಮ ಬಗ್ಗೆ ಒಂದೈದು ನಿಮಿಷ ಚಿಂತಿಸಲು ಸಮಯ ಇಲ್ಲದಾಗುತ್ತದೆ. ಮನೋವಿಜ್ಞಾನದ ಪ್ರಕಾರ ವ್ಯಕ್ತಿ ಅದೆಷ್ಟೇ ಶ್ರೀಮಂತನಾಗಿದ್ದರೂ ತನಗಿಂತ ಶ್ರೀಮಂತರನ್ನು ಕಂಡಾಗ ಆತನದಲ್ಲಿದ್ದ ಉತ್ಸಾಹ, ತೃಪ್ತಿ, ಸಂತೋಷ ಕಡಿಮೆಯಾಗುತ್ತದೆ. ಲೇಖಕ ನಾಗೇಶ ಹೆಗಡೆಯವರ "ಮತ್ತೆ ಮತ್ತೆ ಕೂಗು ಮಾರಿ" ಪುಸ್ತಕದ 'ಹೊಸವರ್ಷಕ್ಕೆ ಹರ್ಷದ ಹೊಸಮಂತ್ರ' ಲೇಖನದ ಕೆಲವು ಸಾಲುಗಳಿವು. ಹೌದು ದೀರ್ಘವಾಗಿ ಈ ಸಾಲುಗಳ ಬಗ್ಗೆ ಚಿಂತಿಸುತ್ತಾ ಹೋದರೆ ನಾವು ವೈಯಕ್ತಿಕವಾಗಿ ದಿನದ ಎಷ್ಟು ಸಮಯವನ್ನು ಬಳಸಿಕೊಳ್ಳುತ್ತೇವೆ ಎಂಬದನ್ನು ಲೆಕ್ಕಹಾಕಿಕೊಳ್ಳಬೇಕು. ಆಗ ಮಾತ್ರ ದೈನಂದಿನ ಜೀವನದಲ್ಲಿ ನಮ್ಮ ಸಮಯವನ್ನು ಸ್ವಂತಕ್ಕಾಗಿ ಎಷ್ಟು ಬಳಸಿಕೊಳ್ಳುತ್ತೇವೆ ಎಂಬುದರ ಅರಿವಾಗುತ್ತದೆ. ಜತೆಗೂ ಆಶ್ಚರ್ಯವೂ ಕೂಡಾ. ಕಾರಣ ಸಮಯದ ಕಾಲು ಭಾಗವನ್ನೂ ಕೂಡಾ ತಮ್ಮ ಸ್ವಂತಕ್ಕಾಗಿ ಉಪಯೋಗಿಸಿಕೊಳ್ಳವುದು ಬಹಳ ಅಪರೂಪ. ದಿನನಿತ್ಯದ ಜೀವನದಲ್ಲಿ ನಾವು ಅನೇಕ ರೀತಿಯಲ್ಲಿ ಪರೋಕ್ಷವಾಗಿ ಇತರರಿಗಾಗಿಯೇ ನಮ್ಮ ಸಮಯವನ್ನು ಮೀಸಲಿಟ್ಟಿರುತ್ತೇವೆ. ಕಚೇರಿಯಲ್ಲಿ ದುಡಿಯುವಾಗ, ಮನೆಯ ಸದಸ್ಯರೊಂದಿಗೆ ಬೆರೆಯುವಾಗ ಅವರ ಯೊಗಕ್ಷೇಮವನ್ನು ವಿಚಾರಿಸಿಕೊಳ್ಳುತ್ತಾ , ಅಥವಾ ಕಾರ್ಯಕ್ರಮಗಳಿಗೆ ಹೋದಾಗ ಇತ್ಯಾದಿ. ನಾವು ನಮ್ಮ ಬಗ್ಗೆಯೇ ಯೋಚಿಸುತ್ತಾ ಕುಳಿತುಕೊಳ್ಳುವುದು ಅಪರೂಪ. ಪ್ರತಿಯೊಂದನ್ನೂ ವಿಜ್ಞಾನದೊಂದಿಗೆ ಸಮೀಕರಿಸಿ ಬರೆಯುವ ನಾಗೇಶ ಹೆಗಡೆಯವರ ಲೇಖನಗಳು ಒಂದಕ್ಕಿಂತ ಒಂದು ವಿಭಿನ್ನ.
ಪಾಕಿಸ್ತಾನಿ ಪರಮಾಣು ವಿಜ್ಞಾನಿಯನ್ನು ಬಂಧಮುಕ್ತ ಮಾಡಿದರೆ ಇಡೀ ಭೂಗೃಹ ಅಪಾಯದತ್ತ ಹೊರಳುತ್ತದೆಯೋ ಎಂಬ ಆತಂಕ. ಭೋಪಾಲದ ಶಿಕ್ಷಕರೊಬ್ಬರ ಮಗನಾಗಿ ಜನಿಸಿದ ಎ.ಕ್ಯೂ.ಖಾನ್ ನಾಯಕ- ಖಳನಾಯಕನಾಗಿ ಬೆಳೆದ ಈ ವಿಜ್ಞಾನಿ ಮನುಕುಲದ ಅವಸಾನಕ್ಕೆ ಕಾರಣವಾಗುವಂತಿದ್ದರೆ ಅದಕ್ಕೆ ಆ ವಿಜ್ಞಾನಿಯನ್ನು ಮಾತ್ರ ದೂಷಿಸುವುದು ಸರಿಯಲ್ಲ. ಆತನನ್ನು ಆ ಮಟ್ಟಕ್ಕೆ ಬೆಳೆಸಿದವರನ್ನೂ ನೋಡಬೇಕಾಗುತ್ತದೆ. ವಿಜ್ಞಾನವೇ ಮುಂದುವರಿದು ಭ್ರೂಣದ ಲಿಂಗ ಪತ್ತೆಯ ಸಾಧನಗಳನ್ನು ,ಹಲವಾರು ತಂತ್ರಗಳನ್ನು ಆವಿಷ್ಕರಿಸಿದ್ದೂ ಅಲ್ಲದೆ ವೈದ್ಯಕೀಯ ನೆರವಿನಿಂದ ಸಮಾಜ ತಪ್ಪು ದಾರಿ ಹಿಡಿದು ತೀರಾ ಮುಂದೆ ಸಾಗಿದಾಗ ಅದನ್ನು ತಡೆಹಿಡಿಯಲು ಮತ್ತೆ ವಿಜ್ಞಾನವೇ ಮುಂದೆಬರುತ್ತದೆ. ತಂತ್ರಜ್ಞಾನವನ್ನು ನಿಷೇಧಿಸುವುದು ಕಷ್ಟವೆಂದು ತಿಳಿದಾಗ ಮನುಷ್ಯನ ಚರ್ಯೆಯನ್ನೇ ತಿದ್ದುವ ಯತ್ನಗಳು ಅಲ್ಲಲ್ಲಿ ನಡೆಯುತ್ತವೆ. ಅದನ್ನೇ ಲೇಖಕರು ಬೀದಿಯಲ್ಲಿ ಸ್ತ್ರೀ ವಾದ ಲ್ಯಾಬಿನಲ್ಲಿ ಭ್ರೂಣಮೇಧ ಎಂಬ ಶೀರ್ಷಿಕೆ ನೀಡಿ ವಿವರಿಸಿದ್ದಾರೆ. ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯಲು ಅದೆಷ್ಟೋ ಸಂಘಟನೆಗಳು, ಸ್ತ್ರೀ ವಾದಿಗಳು ಬೀದಿ ಬೀದಿಗಳಲ್ಲಿ ಹೋರಾಟವನ್ನು ನಡೆಸುತ್ತಿದ್ದರೂ, ಲ್ಯಾಬಿನ ಒಳಗಡೆ ವಿಜ್ಞಾನಿಗಳು ಅದಾಗಲೇ ಇನ್ನೊಂದು ಹೊಸ ಸಂಶೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.
ಹೀಗೆ ಹಲವಾರು ವಿಜ್ಞಾನದ ವಿಷಯಗಳನ್ನು ಅತ್ಯಂತ ಸರಳ ಭಾಷೆಯಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ತಮ್ಮ ಲೇಖನಗಳಲ್ಲಿ ಪ್ರಸ್ತುತಪಡಿಸುವುದೇ ಲೇಖಕರ ಮುಖ್ಯ ಉದ್ದೇಶ. 'ಫ್ಲೂ ಎಂಬ ಕೂಗು ಮಾರಿ ಆಗದಿರಲಿ ಮಹಾಮಾರಿ', 'ಎರಡು ಗುಡುಗುಗಳ ನಡುವೆ ಕೊಂಚ ಮಿಂಚು', 'ದಡ್ಡರ ಯುಗದಲ್ಲಿ ಯುಗರತ್ನಾ', 'ಚಂದ್ರನಲ್ಲಿ ತೀರ್ಥೋದ್ಭವ, ನಾಸಾದಲ್ಲಿ ಹರ್ಷೋದ್ಭವ', 'ಒಂದೆಡೆ ಒಡೆಯುವ ಇನ್ನೊಂದೆಡೆ ಬೆಸೆಯುವ ಯತ್ನ', 'ಮೂಕ ಪೃಥ್ವಿಗೆ ಮಾತು ಕೊಡುವ ಯತ್ನ'. ಹೀಗೆ ಹಲವಾರು ರೀತಿಯ ಲೇಖನಗಳಿಗೆ ವೈಜ್ಞಾನಿಕ ವಿಶ್ಲೇಷಣೆಯನ್ನು ನೀಡಿ ಜನರಲ್ಲಿ ಅರಿವು, ಜಾಗೃತಿ ಮೂಡಿಸುತ್ತಿದ್ದಾರೆ.
೨೦೧೨ರ ಢೋಂಗಿ ಪ್ರಳಯ ಮತ್ತು ಭೋಗಸ್ ಭೀತಿ ಎಂಬ ಲೇಖನವು ಪ್ರಳಯದ ಬಗ್ಗೆ ಜನರಲ್ಲಿ ಉಂಟಾಗಿರುವ ಭೀತಿಯನ್ನು ಪ್ರಸ್ತುತಪಡಿಸುತ್ತದೆ. ನಿಗೂಢ ಮಾಯಾನ್‌ ಪಂಚಾಂಗದ ಪ್ರಕಾರ ೨೦೧೨ ಡಿಸೆಂಬರ್ ಅಂತ್ಯದಲ್ಲಿ ಪ್ರಳಯವಾಗುತ್ತದೆಯಂತೆ. ಪ್ರಳಯದ ಭಯಕ್ಕೆ ಸಿಲುಕಿದವರೆಲ್ಲಾ ಪ್ರಳಯದ ಭಯದ ಬೀಜವನ್ನು ಎಲ್ಲೆಡೆ ಬಿತ್ತಿ, ತಲೆಯಲ್ಲಿ ಇನ್ನಷ್ಟು ವೈರಾಣುಗಳನ್ನು ತುಂಬಿಕೊಂಡು ಭಯ ಪ್ರಸಾರ ಮಾಡುತ್ತಾರೆ. ಜಗತ್ತಿನ ಹಠಾತ್ ಅಂತ್ಯದ ಬಗ್ಗೆ ಸಿನೆಮಾ ಕೂಡಾ ಬಂದಾಗಿದೆ. ಜನರಲ್ಲಿ ಭೋಗಸ್ ಭೀತಿಯನ್ನು ಸೃಷ್ಟಿಸಲು ಇಷ್ಟು ಸಾಕಲ್ಲವೇ? ವರ್ಷವಿಡೀ ಕದ ತಟ್ಟಿದ ಎಂಥೆಂಥವೋ ಕೂಗುಮಾರಿಗಳು, ವಿಜ್ಞಾನಿಗಳು ಕಂಡುಹಿಡಿಯುತ್ತಿರುವ ಅವುಗಳ ಭಯಾನಕ ಹೆಸರುಗಳು ಎಲ್ಲವೂ ಮುಗ್ಧ ಜನರ ಎದೆನಡುಗಿಸುವಂತದ್ದು. ಕೂಗುಮಾರಿ ಎಂದರೆ ಒಂದು ಕಾಲ್ಪನಿಕ ದುಷ್ಟದೇವತೆ. ನಡುರಾತ್ರಿಯ ಕರಾಳ ಕತ್ತಲಲ್ಲಿ ಅದು ಬಾಗಿಲು ಬಡಿದು ವಿಕಾರ ಕೂಗುತ್ತದೆ. ಒಳಗಿದ್ದವರನ್ನು ಕಂಗಾಲು ಮಾಡುತ್ತದೆ. ಬಾಗಿಲು ತೆರೆದರೆ ಎಲ್ಲರಿಗೂ ಕಾಟ ಕೊಡುತ್ತದೆ. ಹಟಮಾರಿ ಮಕ್ಕಳನ್ನು ಹೆದರಿಸಲೆಂದೇ ಸೃಷ್ಟಿಯಾದ ಈ ಕೂಗುಮಾರಿಯ ಕುರಿತು ಹಳ್ಳಿಗಳಲ್ಲಿ ದೊಡ್ಡವರೂ ನಂಬುತ್ತಾರೆ. ಹೆದರಿದವರಿಂದ ಹಣ ಕೀಳಲು ಹೊಂಚು ಹಾಕುವ ಮಂತ್ರವಾದಿಗಳು ಈ ನಂಬಿಕೆಯನ್ನು ಜೀವಂತ ಇಟ್ಟಿರುತ್ತಾರೆ. ವಿಜ್ಞಾನ ರಂಗದಲ್ಲಿಯೂ ಇಂತಹ ಕೂಗು ಮಾರಿಗಳು ಆಗಾಗ ಕಾಣಿಸಿಕೊಂಡು ಮುಗ್ದ ಜನರ ಎದೆ ನಡುಗಿಸುತ್ತಿರುತ್ತದೆ ಎಂಬುದು ಲೇಖಕರ ಮಾತು.
ಹೀಗೆ ವರ್ಷವಿಡೀ ಕದ ತಟ್ಟಿದ ಕೂಗುಮಾರಿಗಳ ಚಿತ್ರಣವನ್ನು ತಮ್ಮ ಲೇಖನಗಳಲ್ಲಿ ಬಿಡಿಬಿಡಿಯಾಗಿ ಬಿಂಬಿಸಿದ್ದಾರೆ. ಅರಿವಿಲ್ಲದವರಿಗೆ ತಿಳಿ ಹೇಳುವ ಬದಲು ಜನರನ್ನು ಮತ್ತಷ್ಟು ಹೆದರಿಸಿ ಹಣ ಕೀಳುವ ಆಧುನಿಕ ಯುಗದ ಹೈಟೆಕ್ ದಂಧೆಯ ನಾನಾ ರೂಪಗಳ ವಿಸ್ತೃತ ಬರಹಗಳು ಈ ಪುಸ್ತಕದಲ್ಲಿವೆ. ವಿಜ್ಞಾನದ ವಿದ್ಯಮಾನಗಳು ತಮ್ಮ ಬದುಕನ್ನು ಯಾವ ರೀತಿಯಾಗಿ ಬಂಧಿಸುತ್ತದೆ ಎಂಬುವುದನ್ನು ಓದುಗರಿಗೆ ಮನಮುಟ್ಟುವಂತೆ, ಬಹಳ ಅರ್ಥವತ್ತಾಗಿ ಈ ಪುಸ್ತಕದಲ್ಲಿ ವಿವರಿಸುತ್ತಾರೆ.