ಕಾಬಾಳೆ ಮತ್ತು ಪ್ರೀತಿ

ಕಾಬಾಳೆ ಮತ್ತು ಪ್ರೀತಿ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ನಿರಂಜನ ವಾನಳ್ಳಿ
ಪ್ರಕಾಶಕರು
ಸಂಸ್ಕೃತಿ ಪಬ್ಲಿಷಿಂಗ್ ಹೌಸ್
ಪುಸ್ತಕದ ಬೆಲೆ
120

ಕನ್ನಡದ ನುಡಿಚಿತ್ರಕಾರರಲ್ಲಿ ನಿರಂಜನ ವಾನಳ್ಳಿಯವರದ್ದು ಗಮನಾರ್ಹ ಹೆಸರು. ಇವರ ಎಲ್ಲಾ ನುಡಿಚಿತ್ರಗಳಲ್ಲಿಯೂ ಜೀವನ ಪ್ರೀತಿ, ಮಾನವೀಯ ಅನುಕಂಪಗಳು ಎದ್ದು ಕಾಣುತ್ತವೆ. ಅವರ ಸುಸಂಸ್ಕೃತ ಮನಸ್ಸು ಹಾಗೂ ಕುತೂಹಲದ ಮನೋಭಾವ ಹಾಗೂ ಚಿಕಿತ್ಸಕ ದೃಷ್ಟಿಗಳು ಎಲ್ಲಾ ವರ್ಗದ ಓದುಗರನ್ನು ತಮ್ಮೆಡೆಗೆ ಸೆಳೆಯುತ್ತವೆ. ಕಾಬಾಳೆ ಮತ್ತು ಪ್ರೀತಿ ಅವರ ಆಯ್ದ ನುಡಿಚಿತ್ರಗಳ ಸಂಗ್ರಹ- ಪುಸ್ತಕ. 2009 ರಲ್ಲಿ ಪ್ರಕಟಗೊಂಡ ಈ ಪುಸ್ತಕದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಬೇರೆ ಬೇರೆ ಕಡೆಗಳಲ್ಲಿ ಪ್ರಕಟಗೊಂಡ ಆಯ್ದ ನುಡಿಚಿತ್ರಗಳನ್ನು ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ.
ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಎಂಬ ಮಾತಿನಂತೆ ನುಡಿಚಿತ್ರಗಳ ಅಥವಾ ಯಾವುದೇ ಬರಹಗಳ ವಸ್ತು ವಿಷಯಗಳನ್ನು ಸ್ವತಃ ಪರಾಮರ್ಶಿಸಿ ಬರೆಯುತ್ತಿರುವುದರಿಂದ, ಅವರ ಬರಹಗಳು ಓದುಗರನ್ನು ತನ್ನತ್ತ ಆಕರ್ಷಿಸುತ್ತವೆ. ಅವರು ಹುಟ್ಟಿ ಬೆಳೆದ ಹಳ್ಳಿಯ ಪರಿಸರವೇ ಅವರ ಬರಹಗಳಿಗೆ ಸ್ಪೂರ್ತಿ ಎನ್ನಬಹುದು. ಯಾವುದೇ ವಿಶೇಷತೆ ಇದ್ದರೂ ಆ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ವಿವರಗಳನ್ನು ಸಂಗ್ರಹಿಸಿ ಲೇಖನ ರೂಪದಲ್ಲಿ ಪ್ರಸ್ತುತಪಡಿಸುವುದು ಕರಗತ. ಸುಮಾರು 66 ನುಡಿಚಿತ್ರ ಬರಹಗಳಿರುವ ಈ ಪುಸ್ತಕದ ಹೆಚ್ಚಿನ ನುಡಿಚಿತ್ರಗಳು, ಹಳ್ಳಿಯ ಪರಿಸರ, ಜೀವನ ಶೈಲಿ, ಆಚರಣೆಗಳು, ನಂಬಿಕೆಗಳು, ಇವುಗಳೇ ಆಗಿವೆ.
ಹಿಂದೆ ಹುಟ್ಟೂರಾದ ವಾನಳ್ಳಿಗೆ ಹೋಗಲು ಸಿರ್ಸಿ ಬಸ್ ನಿಲ್ದಾಣದಿಂದ ಇದ್ದ ಒಂದೇ ಒಂದು ಬಸ್ಸಿನ ಕಥೆಯನ್ನು ಒಂದು ಉತ್ತಮ ಬರಹವಾಗಿ ರೂಪಿಸಿದ್ದಾರೆ. ವಾನಳ್ಳಿಗೆ ಹೋಗಲು ಸಿರ್ಸಿ ಬಸ್ ನಿಲ್ದಾಣದಿಂದ ಜಡ್ಡೀಗದ್ದೆಯ ಬಸ್ ಹತ್ತಿ ಕಸರತ್ತು ಮಾಡಿ ಒಳಗೆ ತೂರಿಕೊಳ್ಳುವುದು ಅನಿವಾರ್ಯ. ಈ ಬಸ್ಸು ನೂಕುನುಗ್ಗಲಿಗಾಗಿ, ಪಿಕ್ ಪಾಕೆಟ್ಗಾಗಿ, ಕುಡುಕರ ಗೌಜಿಗಾಗಿ ಸಿರ್ಸಿ ಬಸ್ ಸ್ಟ್ಯಾಂಡಿನಲ್ಲಿ ಬಹಳ ಫೇಮಸ್ಸು. ಬಸ್ಸೇ ಕಂಡಿರದ ಆ ಊರಿಗೆ ಪ್ರಾರಂಭದಲ್ಲಿ ಒಂದೇ ಬಸ್ಸು ಅಲ್ಲಿಗೆ ಸಂಚರಿಸುತ್ತಿದ್ದರಿಂದ ಅಲ್ಲಿನ ಜನರು ಯಾವ ಕಡೆಯಿಂದ ಹತ್ತುವುದು ಎಂದು ತಿಳಿಯದೆ ಬಸ್ಸಿನ ಸುತ್ತಲೂ ಓಡುವುದು, ಮಕ್ಕಳನ್ನು ಊಟ ಮಾಡಿಸಲು-ಅಳು ನಿಲ್ಲಿಸಲು ಬಸ್ಸಿನ ಹಾರನ್ ಹಾಕಲು ಚಾಲಕರಿಗೆ ಸೂಚಿಸುವುದು, ಕುಡಿದ ಮತ್ತಿನಲ್ಲಿ ಬಸ್ಸಿನಲ್ಲೇ ಕುಡುಕರ ಗಲಾಟೆ ಹೀಗೆ ಪ್ರತಿದಿನವೂ ಹಲವಾರು ಸಿಹಿ-ಕಹಿ ಘಟನೆಗಳಿಗೆ ಈ ಬಸ್ಸು ಸಾಕ್ಷಿಯಾಗುತ್ತಿತ್ತು. ಈ ಅನುಭವಗಳನ್ನು ಒಟ್ಟಾಗಿ ಪೋಣಿಸಿಕೊಂಡು ರಚಿಸಿದ್ದೇ "ಜಡ್ಡೀಗದ್ದೆ ಬಸ್ಸು".
ಯಂಕನ ಮಕ್ಕಳು ಶಾಲೆಗೆ ಸೇರಿದ್ದು- ಶಾಲೆ ಬಿಟ್ಟದ್ದು ಈ ಎರಡು ಲೇಖನಗಳು ಹಳ್ಳಿಯ ಸಂಪೂರ್ಣ ಚಿತ್ರಣವನ್ನು ನೀಡುತ್ತವೆ. ಯಂಕ ಅನಕ್ಷರಸ್ಥ. ತನ್ನ ಮಕ್ಕಳಾದರೂ ನಾಲ್ಕಕ್ಷರ ಕಲಿತುಕೊಳ್ಳಲಿ ಎಂಬುದು ಆತನ ಮಹದಾಸೆ. ಅದಕ್ಕಾಗಿ ಆತನ ಮಕ್ಕಳನ್ನು ಹೇಗೋ ಕಷ್ಟಪಟ್ಟು ಶಾಲೆಗೆ ಕಳುಹಿಸಿದ. ಆ ದಿನದ ಅವರ ಸಂಭ್ರಮವನ್ನು ನೋಡಿಯೇ ಮನ ತಣಿಯುತ್ತಿತ್ತು. ಹಳ್ಳಿಗಾಡಿನ ಮೂವರು ಮಕ್ಕಳು ರಾಮ, ಕೃಷ್ಣ, ನಾಣಿ ವಾನಳ್ಳಿಯಲ್ಲಿ ಸಣ್ಣ ಗುಡಿಸಲು ಕಟ್ಟಿಕೊಂಡು, ತಾವೇ ಅಡುಗೆ ಮಾಡಿಕೊಂಡು ಅದ್ಹೇಗೋ ತಮ್ಮ ಅನ್ನವನ್ನು ತಾವೇ ಬೇಯಿಸಿಕೊಂಡು ತಿನ್ನುತ್ತಿದ್ದರು. ಆದರೆ ಮೊದಮೊದಲು ಶಾಲೆಗೆ ತಪ್ಪದೆ ಹೋಗುತ್ತಿದ್ದರಾದರೂ, ಕಾಡಿನಿಂದ ಪೇಟೆಗೆ ಬಂದ ಮಕ್ಕಳು ಅಲ್ಲಿನ ವೈವಿಧ್ಯಗಳಿಗೆ ಮರುಳಾದರು. ಶಾಲೆಗೆ ಹೋಗದೆ ಅಲ್ಲಿ ಇಲ್ಲಿ ಕೆಲಸ ಮಾಡಿಕೊಂಡು ಅವರು ಕೊಡುವ ಊಟ,ಪಲ್ಯ,ಸಾರು ಇವುಗಳನ್ನೇ ತಿಂದು ಬೆಳೆಯತೊಡಗಿದರು. ಹೀಗೆ ಯಂಕನ ಮಕ್ಕಳ ಶಾಲೆಯ ಸಂಭ್ರಮ ಇಲ್ಲಿಗೆ ಕೊನೆಗೊಂಡಿತು. ಇದು ಒಂದು ನಿದರ್ಶನ, ಆದರೆ ಇಂತಹ ಅನೇಕ ಯಂಕನ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ನಗರಗಳಿಗೆ ಬಂದು ಅಲ್ಲಿನ ಶೋಕಿ ಜೀವನದ ಚಟಗಳ ದಾಸರಾಗಿ ತಮ್ಮ ಭವಿಷ್ಯವನ್ನೇ ಹಾಳುಮಾಡಿಕೊಳ್ಳುತ್ತಿರುವ ಸಂದರ್ಭಗಳು ಇಂದಿಗೂ ಸಾಮಾನ್ಯ.
ಹೀಗೆ ವಾನಳ್ಳಿಯವರ ಬರಹಗಳು ಹಳ್ಳಿಗಳಲ್ಲಿನ ವಾಸ್ತವ ಬದುಕಿಗೆ ಹಿಡಿದ ಕೈಗನ್ನಡಿಗಳಾಗಿವೆ. ಮಂಕಿ ಗಾಡಿಗೆ ಮೆಲ್ಲನೆ ವಿದಾಯ, ನಾಗಜ್ಜಿಯ ಬಿಡಾರ ಪ್ರಕರಣ, ಜಲರಾಶಿ ಮಧ್ಯೆ ದಾಹ! ದಾಹ!, ನಮ್ಮೊಳಗೊಬ್ಬ ನಿಜ ಹರ್ಷ!, ಮೇಪಲ್ ಎಂಬ ಮೋಹಕ ವೃಕ್ಷ, ಜತ್ರೋಫಾದತ್ತ ಜಾಗತಿಕ ಚಿತ್ತ, ವಾಕಿಂಗ್ನಲ್ಲಿ ಕಂಡ ವಿಶ್ವ ರೂಪ, ಮಾರ್ಜಾಲ ಪುರಾಣ ಹೀಗೆ ಒಂದಕ್ಕೊಂದು ಮಿಗಿಲಾದ ನುಡಿಚಿತ್ರ ಬರಹಗಳು ಈ ಪುಸ್ತಕದಲ್ಲಿವೆ. ಕಣ್ಣ ಮುಂದಿರುವ ಯಾವುದೇ ವಸ್ತವನ್ನಾದರೂ ಸರಿ, ಅದರ ಜತೆಗಿನ ಒಡನಾಟವನ್ನು ಬರಹದ ಮೂಲಕ ವ್ಯಕ್ತಪಡಿಸುವ ನೈಪುಣ್ಯತೆ ಇವರಲ್ಲಿದೆ. ಮನೆಯ ಸಾಕುಪ್ರಾಣಿಗಳಾದ, ಬೆಕ್ಕು,ಎಮ್ಮೆ, ನಾಯಿ ಇತ್ಯಾದಿ, ಹಾಗೂ ಮನೆಯ ಮುಂದಿನ ಹೂ ತೋಟ, ಇವೆಲ್ಲವೂ ಬರಹದ ವಿಷಯಗಳೇ.
ಕಾಬಾಳೆ ಮತ್ತು ಪ್ರೀತಿ- ಪೀಚು ಹೂ ಬಿಡುವ ಕಾಬಾಳೆ ಬೀಜವನ್ನು ವಾನಳ್ಳಿಯವರ ಗೆಳೆಯರೊಬ್ಬರು ಕೊಟ್ಟಿದ್ದರು. ಬಹಳ ಚೆಂದಾಗಿ ಹೂ ಬಿಡುತ್ತದೆ ಎಂದು ಹೇಳಿ ಗೆಳೆಯ ಕೊಟ್ಟ ಬೀಜವನ್ನು ತಂದು ಪೆನ್ ಸ್ಟ್ಯಾಂಡಿನಲ್ಲಿ ಇಟ್ಟಿದ್ದರು. ತನ್ನ ಪುಟ್ಟ ಮಗಳ ಕೈಗೆ ಅದು ಹೇಗೋ ಸಿಕ್ಕಿ ಇನ್ನೇನು ಬಾಯಿಗೆ ಹಾಕಿಕೊಳ್ಳುವಳು ಅಂದಾಗ, ಉಪಾಯದಿಂದ ಆಕೆಯ ಕೈಯಿಂದ ತಪ್ಪಿಸಿ ಮನೆಯೆದುರಿನ ಕುಂಡವೊಂದಕ್ಕೆ ಬಿಸಾಡಿದರು. ಐದಾರು ತಿಂಗಳ ನಂತರ ಬೀಜ ಮೊಳಕೆಯೊಡೆದಿತ್ತು. ಮೊದಲ ಬಾರಿಗೆ ಮೊಳಕೆಯೊಡೆದ ಹೊಸ ಸಸ್ಯವನ್ನು ಆರೈಕೆ ಮಾಡಿ, ಅದು ಬಿಡುವ ಹೂವಿಗಾಗಿ ಕಾಯುತ್ತಿದ್ದರು. ಇವ ರ ನಿರೀಕ್ಷೆಗೂ ಮೀರಿ ಆ ಗಿಡ ಬೆಳೆಯುತ್ತಿತ್ತು, ಮೊಗ್ಗೂ ಕಾಣಿಸಿಕೊಂಡಿತು. ಮರುದಿನ ಗಿಡದ ತುದಿಗೆ ರಕ್ತವರ್ಣದ ಎರಡು ದಳಗಳ ಪೀಚು ಹೂವೊಂದು ಅರಳಿ ನಗುತ್ತಿತ್ತು. ಆ ಹೂವಿನ ಬಗೆಗೆ ಇವರಿಗಿದ್ದ ಕುತೂಹಲ, ನೋಡುವ ಉತ್ಸಾಹ-ಉಬ್ಬಿದ ಬಲೂನಿಗೆ ತೂತು ಮಾಡಿದಂತಾಯಿತು. ಪೀಚಾದರೇನು ಹೂ ಬಿಟ್ಟಿದ್ದು ಸುಳ್ಳೆ? ಎಂದು ಸಮಾಧಾನ ಪಟ್ಟುಕೊಂಡರಾದರೂ ಅದಕ್ಕಿಂತ ಮುಖ್ಯವಾಗಿ ಗೆಳೆಯನೊಬ್ಬನ ನೆನಪಿನ ಕೊಂಡಿಯಾಗಿ ಆ ಹೂವು ನಗುತ್ತಿತ್ತು.
ಪ್ರಾಧ್ಯಾಪಕರಾಗಿ, ಅಂಕಣಕಾರ, ಬರಹಗಾರ, ನುಡಿಚಿತ್ರಕಾರನಾಗಿ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡ ನಿರಂಜನ ವಾನಳ್ಳಿಯವರು ನಿತ್ಯ ಜೀವನದ ಅತಿ ಸೂಕ್ಷ್ಮ ವಿಷಯಗಳನ್ನೂ ಅಷ್ಟೇ ಗ್ರಹಿಕೆಯಿಂದ ನೋಡಿ, ಅವುಗಳನ್ನು ಬರಹದ ರೂಪದಲ್ಲಿ ಚಿತ್ರಿಸುವ ಗುಣ ಇವರ ಲೇಖನಿಗಿದೆ.