ಅವಸಾನ... (ಕಥೆ)

ಅವಸಾನ... (ಕಥೆ)

ನಾನು ಓದಿದ ಈ ಶಾಲೆಯ ಮುಂದಿನ ರಸ್ತೆ ಬದಿಯಲ್ಲಿ ಒಂದು ಆಲದಮರವಿತ್ತು. ಅಷ್ಟಗಲ ಹರಡಿಕೊಂಡಿದ್ದ ಹಳೇಕಾಲದ ಮರದ ಕೆಳಗಿನ ಕಲ್ಲಿನಕಟ್ಟೆಯ ಮೇಲೆ ದಿನಕ್ಕೆ ನೂರಾರು ಜನಗಳು ಮಲಗಿ ಮೈಕೈ ನೋವನ್ನು ನೀಗಿಸಿಕೊಳ್ಳುತ್ತಿದ್ದರು. ಹೊಲ ಗದ್ದೆಗಳಿಗೆ ಕೂಲಿ ಕಂಬಳಕ್ಕೆ ಹೋಗುತ್ತಿದ್ದ ಹೆಂಗಸರು ತೂಕಲಿಗೆ ಮುದ್ದೆ ಮುರಿದುಕೊಂಡು ಇದೇ ಜಾಗದಲ್ಲಿ ಮೊದಲು ಸೇರಿ ನಂತರ ಕೆಲಸ ಹಂಚಿಕೊಂಡು ಸಾಗುತ್ತಿದ್ದರು. ಭಾನುವಾರ ಬಂತೆಂದರೆ ಸಾಕು ಇದೇ ಮರದ ಕೆಳಗೆ ಒದ್ದಾಡುವುದೇ ನಮ್ಮ ಕೆಲಸವಾಗುತ್ತಿತ್ತು. ಹತ್ತದಿನೈದು ವರ್ಷದ ಹಿಂದೆ ಗೋಲಿ ಆಟಕ್ಕೆ ಅಗೆದಿದ್ದ ಗುಂಡಿ ಇಂದು ಮುಚ್ಚಿಹೋಗಿದೆ, ಆ ಕಲ್ಲಿನ ಮೇಲೆ ಹುಲಿಮನೆ ಆಟವಾಡಲು ಕೊರೆದಿದ್ದ ತ್ರಿಭುಜಾಕಾರದ ಚಿತ್ರ ಮಸಕು ಮಸಕಾಗಿ ಹಾಗೇ ಇದೆ. ಜಿದ್ದಿಗೆ ಬಿದ್ದು ನನ್ನೊಂದಿಗೆ ಆ ಆಟವಾಡುತ್ತಿದ್ದ ಸಿದ್ಧರಾಜು ಇಂದಿಲ್ಲ. ಈ ಜಾಗವನ್ನೇ ಆವರಿಸಿಕೊಂಡು ನೆರಳು ನೀಡಿ ನೂರಾರು ಜನರನ್ನು, ದಣಿದವರನ್ನು ತನ್ನ ಮಡಿಲಿನಲ್ಲಿ ಮಲಗಿಸಿಕೊಂಡ ಮರವೂ ಇಲ್ಲ. ಈ ಮೊದಲು ಊರಿಗೆ ಬಂದು ಐದು ವರ್ಷವಾದ ಕಾರಣವೋ ಏನೋ ಈ ಜಾಗವೆಲ್ಲ ನನಗೆ ಬೋಳು ಬೋಳಾಗಿ ಕಾಣುತ್ತಿದೆ. ಆಲದ ಮರ ಆವರಿಸಿಕೊಂಡಿದ್ದ ಜಾಗವನ್ನೆಲ್ಲ ಇಂದು ಮೊಬೈಲ್ ಟವರ್ ಗಳು ನುಂಗಿಹಾಕಿವೆ. ಆ ಮರದಡಿಯಲ್ಲಿ ಜೊತೆಗೆ ಅಡ್ಡಾಡಿದ ಒದ್ದಾಡಿದ ಗೆಳೆಯರು ಎದೆಯಲ್ಲಿ ಒಂದು ನೆನಪನ್ನು ಕೊರೆದಿಟ್ಟು ಅದೆಲ್ಲೆಲ್ಲಿಗೋ ಹೊರಟುಹೋಗಿದ್ದಾರೆ. ಕೆಲವರು ಅಕಾಲಿಕವಾಗಿ ಸತ್ತುಹೋಗಿದ್ದಾರೆ. ‘ಕಾಳಯ್ಯ ಈಜಲು ಹೋಗಿ ತೀರಿಕೊಂಡ’ ಎಂಬ ಮಾತು ಬಾಯಿಂದ ಬಾಯಿಗೆ ಹರಡಿ ಪಟ್ಟಣದಲ್ಲಿದ್ದ ನನ್ನ ಕಿವಿಗೆ ಬಿದ್ದರೂ ಅದಾವ ಸೋಮಾರಿತನದ ಹಿಡಿತವೋ ಏನೋ ಆತನ ಮುಖವನ್ನು ನೋಡಲು ಬರಲಾಗಲಿಲ್ಲ. ಅರ್ಧರಾತ್ರಿಯಾದೊಡನೆ ಎಚ್ಚರಗೊಳ್ಳುತ್ತಿದ್ದ ಸಿದ್ಧರಾಜು ಕಾಡಿನಿಂದ ಶ್ರೀಗಂಧ ಕದ್ದೊಯ್ಯುತ್ತಿರುವಾಗ ಅದಾರದೋ ಹೊಲದ ಕರೆಂಟ್ ತಂತಿಗೆ ಕಾಲುಕೊಟ್ಟು ಕೊನೆಗೆ ಕತ್ತಿಗೆ ಹಗ್ಗ ಸುತ್ತುಕೊಂಡಂತೆ ಬೆಟ್ಟದ ತಪ್ಪಲಿನ ಮರದ ಕೆಳಗೆ ದೊರಕಿದಾಗಲೂ ಕೆಲಸದ ನೆಪದಿಂದ ಬರಲಿಲ್ಲ. ಈ ಕಲ್ಲಿನ ಎದೆಯಲ್ಲಿರುವ ಹುಲಿಮನೆ ಆಟದ ಪಂಜರದ ಮೇಲೆ ಅವನ ಕೈ ಗುರುತಿದೆ, ನನ್ನ ಅವನ ಬುದ್ಧಿವಂತಿಕೆ ಚತುರತೆ ಎದ್ದು ಕಾಣುತ್ತದೆ. 

ಆ ಕಲ್ಲಿನ ಮೇಲೆ ಕುಳಿತುಕೊಂಡೊಡನೆ ಒಂದು ರೀತಿಯ ಭಾವುಕತೆ ಮತ್ತು ಖಾಲಿತನ ನನ್ನನ್ನು ಆವರಿಸಿಕೊಂಡು ಒಂದು ಹತ್ತು ಹೆಜ್ಜೆಯ ಮುಂದಿನ ಪ್ರಪಂಚ ಬೇಡವಾಯಿತು. ಮರದ ನೆರಳ ತಂಪು ನೆತ್ತಿಗೆ ಬೀಳಲಿಲ್ಲವೆಂಬುದೇ ಬೇಸರ.
 
“ಏನಪ್ಪಾ, ಚೆನ್ನಾಗಿದಿಯಾ?” ಯಾರೋ ಕೇಳಿದರು. ಕಣ್ಣು ಕಾಣದ ವಯಸ್ಸಿನಲ್ಲೂ ಆತ ನನ್ನನ್ನು ಗುರುತಿಸಿಕೊಂಡರೂ ನನಗೆ ಆತನ ಸುಳಿವು ಹತ್ತಿರಕ್ಕೆ ಹೋಗುವವರೆವಿಗೂ ದೊರಕಲಿಲ್ಲ. ಕಪ್ಪಾಗಿರುವ ಕಾರಣದಿಂದ ಎಲ್ಲರೂ ಆತನನ್ನು ‘ಕರಗಣ್ಣ’ ಎಂದು ಕರೆಯುತ್ತಿದ್ದರು. ಆ ಕಾಲದಲ್ಲಿ ಅಷ್ಟು ಸದೃಢನಾಗಿದ್ದವನು ಈಗ ತೀವ್ರ ಕೃಶನಾಗಿದ್ದಾನೆ. ಒಂದು ಕಾಲದಲ್ಲಿ ಷರ್ಟಿನ ಎರಡು ಜೇಬಿನ ತುಂಬಾ ಬರಿ ಕಾಗದಗಳನ್ನೇ ತುಂಬಿಕೊಂಡು ಒಂದೈದು ಪೆನ್ನುಗಳನ್ನು ತುರುಕಿಕೊಂಡಿರುತ್ತಿದ್ದ. ಕೈಯಲ್ಲಿ ಒಂದು ರೇಡಿಯೋ ಹಿಡಿದುಕೊಂಡು ಕನ್ನಡ, ತಮಿಳು, ತೆಲುಗು, ಇಂಗ್ಲೀಷ್, ಹಿಂದಿ ವಾರ್ತೆಯನ್ನೆಲ್ಲಾ ಗಮನವಿಟ್ಟು ಕೇಳಿ ಅರ್ಥವಾಗದಿದ್ದರೂ ಏನೇನೋ ಭಾಷಾಂತರಿಸಿ ಊರಿನ ಜನರಿಂದ ಸೈ ಎನಿಸಿಕೊಂಡಿದ್ದವ. ಇಟ್ಟುಕೊಂಡ, ಕಟ್ಟುಕೊಂಡವರ ಒಡೆದ ಸಂಸಾರಗಳನ್ನೆಲ್ಲಾ ಚಾವಡಿಯ ಮೇಲೆ ಕುಳಿತು ತೀಕ್ಷ್ಣವಾಗಿ ಮಾತನಾಡಿ ಪರಿಹರಿಸುತ್ತಿದ್ದವ, ಸಾಧ್ಯವಾಗದಿದ್ದಾಗ ಹೆಂಡತಿಗೆ ಗಂಡನ ಕಡೆಯಿಂದ ಐದು ಸಾವಿರ ಕೊಡಿಸಿ ತಾಳಿ ಕೀಳಿಸಿಬಿಡುತ್ತಿದ್ದ.
 
“ಚೆನ್ನಾಗಿದ್ದೇನೆ, ನೀವು ಹೇಗಿದ್ದೀರಿ” ಎಂದೆ. 
“ಶಿವ ಮಡಗ್ದಂಗಿದ್ದೀನಪ್ಪ” ಎಂದವನೇ ತಲೆ ಕೆರೆದುಕೊಂಡ.
“ಹೇಳಿ” ಎಂದೆ.
“ಒಂದೈದ್ರುಪಾಯಿ ಇದ್ರೆ ಕೊಡಪ್ಪ, ಒಂದ್ ಕಟ್ಟು ಗಣೇಶ ಬೀಡಿ ತಕ್ಕೋತಿನಿ” ಅಂದ. ಆತನ ಮನೆಯಲ್ಲಿ ನಾನು ಅದೆಷ್ಟೋ ಬಾರಿ ಹೊಟ್ಟೆ ತುಂಬಾ ಉಪ್ಹೆಸರು ಮುದ್ದೆ ತಿಂದಿದ್ದೇನೆ. ಒಂದು ದಿನವೂ ಬೇಸರಿಸಿಕೊಳ್ಳದೆ ಬಡಿಸಿದವರು ಇಂದು ಕೇವಲ ಐದು ರೂಪಾಯಿಗೆ ಕೈಚಾಚಿದ್ದು ಕಂಡು ಬೇಸರವಾದರೂ ಕೊನೆಗೆ ಖರ್ಚಿಗೆ ಇಟ್ಟುಕೊಳ್ಳಿ ಎಂದು ಐವತ್ತು ರೂಪಾಯಿಯನ್ನೇ ಕೊಟ್ಟೆ.
“ನಿಮ್ಮ ಮಗ ಧಾಮೋಧರ ಹೇಗಿದ್ದಾನೆ, ಎಲ್ಲಿದ್ದಾನೆ ಈಗ?” ದುಡ್ಡು ಸಿಕ್ಕಿದ್ದೇ ಖುಷಿಯಾದ ಆತನನ್ನು ಕೇಳಿದೆ.
“ಅಯ್ಯೋ, ಅವನು ಆ ಕೆಳ್ಗಲ್ ಕೇರಿ ಮೂಲೆ ಮನೆ ವೆಂಕ್ಟನ್ ಹೆಂಡತಿ ಜೊತೆ ಓಡಿಹೋಗಿ ತಮಿಳುನಾಡು ಕಾಫಿ ತೋಟದಲ್ಲಿ ಸೇರಿಕೊಂಡವ್ನೆ ಅಪ್ಪ, ಈ ಊರಿಗೆ ಬಂದ್ರೆ ಅವನನ್ನ ಬುಟ್ಟಾರ ಜನಗೋಳು” ಎಂದಾಗ ಈ ರೀತಿಯ ಎಡವಟ್ಟುಗಳಿಗೆ ತಲೆಕೊಟ್ಟು ಊರು ಬಿಟ್ಟುಹೋದ, ಪವಿತ್ರವಾಗಿ ಪ್ರೀತಿಸಿ ಕೊನೆಗೆ ಇಟ್ಟುಕೊಂಡವರು ಎಂಬ ಪಟ್ಟ ಹೊತ್ತುಕೊಂಡ ಎಷ್ಟೋ ಗೆಳೆಯರು ನೆನಪಿಗೆ ಬಂದರು.
 
“ಅದ್ಸರಿ, ನೀನು ಮದುವೆ ಆಗೋದಿಲ್ವೇ?, ಪಟ್ಟಣಕ್ಕೆ ಸೇರಿ ನೀನು ಇನ್ನೂ ಹೀಗೆ ಉಳ್ಕೊಂಡಿದ್ಯಾ, ನೀನು ಆಗ ಹೊತ್ತು ತಿರುಗಾಡ್ತಿದ್ದ ಕೂಸುಗಳಿಗೆಲ್ಲಾ ಈಗ ಒಂದೊಂದು ಮಕ್ಕಳಾಗಿದೆ” ಆತ ಕೇಳಿದ
“ಆಗೋಣ ಬಿಡಿ ಅಣ್ಣಯ್ಯಾ, ಅವರೆಲ್ಲಾ ಅವಸರಕ್ಕೆ ಬಿದ್ದು ಮದುವೆ ಆದವರು. ನಾವು ಪಟ್ಟಣದಲ್ಲಿರುವವರು ಅವರಂತೆ ಅವಸರಕ್ಕೆ ಬೀಳಲು ಸಾಧ್ಯವೇ” ಎಂದು ಹೇಳಿದನೇ ಮತ್ತೆ ಆ ಕಲ್ಲಿನ ಮೇಲೆ ಕುಳಿತುಕೊಂಡೆ.
 
ಮದುವೆ ಎಂಬ ಈ ಪದ ನನ್ನ ಕಿವಿಗೆ ಬಿದ್ದರೆ ರೇಖಾ ನೆನಪಾಗುತ್ತಾಳೆ. ಇದೇ ಶಾಲೆಯ ಆವರಣದಲ್ಲಿ ಒಬ್ಬರಿಗೊಬ್ಬರು ಮದುವೆಯ ಆಟ ಆಡಿದ್ದೆವು. ನಮ್ಮಿಬ್ಬರನ್ನು ಹಸೆಮಣೆ ಮೇಲೆ ಕೂರಿಸಿ ಮದುವೆ ಮಾಡಿದ್ದ ಇತರೆ ಗೆಳೆಯರು ಆಟವೆಂಬುದನ್ನು ಮರೆಯುವಷ್ಟು ಗಂಭೀರವಾಗಿ ಆಗಾಗ ಈ ಮದುವೆಯನ್ನು ನೆರವೇರಿಸುತ್ತಿದ್ದರು. ಪ್ರೀತಿ ಪ್ರೇಮ ಎಂಬ ಕಿಂಚಿತ್ತೂ ಅರಿವಿಲ್ಲದ ಆ ಕಾಲದಲ್ಲಿ ಆಕೆಗೆ ಹಳೆಯ ಜಾಮೆಟ್ರಿ ಬಾಕ್ಸ್ ಜೊತೆಗೆ ನಾಲ್ಕಾಣೆಯ ಒಂದು ಪಾವಲಿಯನ್ನು ನೀಡಿದ್ದೆ. ಬಹುದಿನಗಳವರೆವಿಗೂ ಆಕೆ ಅದನ್ನು ತನ್ನೊಡನೆ ಇಟ್ಟುಕೊಂಡಿದ್ದಳು. ನಂತರದ ದಿನಗಳಲ್ಲಿ ನಮ್ಮಿಬ್ಬರ ನಡುವೆ ಬಿರುಗಾಳಿಯಾಗಿ ಬಂದವನು ಲಕ್ಷ್ಮಣ್. ನಿನ್ನೆ ಬಸ್ಸಿನಿಂದ ಹೊರಗೆ ಹೆಜ್ಜೆ ಇಟ್ಟಾಗ ಆತ ತೂರಾಡಿಕೊಂಡು ಮೇಲೆ ಬಿದ್ದಾಗ ಯಾಕೋ ತುಂಬಾ ಕನಿಕರ ಹುಟ್ಟಿತ್ತು. ಇದೇ ಲಕ್ಷ್ಮಣ್,  ಆಕೆ ತುಂಬಾ ಜೋಪಾನವಾಗಿಟ್ಟುಕೊಂಡಿದ್ದ ನವಿಲುಗರಿಯೊಂದನ್ನು ತುಂಡು ಮಾಡಿ ನನ್ನ ಪುಸ್ತಕದಲ್ಲಿ ಇಟ್ಟಿದ್ದ. ಇದೇ ವಿಚಾರವಾಗಿ ಮುನಿಸಿಕೊಂಡಿದ್ದ ಆಕೆ ಆ ನಾಲ್ಕಾಣೆ ಪಾವಲಿಯನ್ನು ನನ್ನ ಮುಖಕ್ಕೆ ಎಸೆದುಹೋಗಿದ್ದಳು. 
 
ಈ ಶಾಲೆಯ ಗೋಡೆಗಳು ಇನ್ನೂ ಹಾಗೇ ಇವೆ. ಅಂದು ಎಳೆ ಹುಡುಗನಾಗಿದ್ದವನು ಇಂದು ಬೆಳೆದು ಮುಂದೆ ಕುಳಿತಿರಬಹುದು. ಆದರೆ, ಆ ಗೋಡೆಗೆ ನಾನಿನ್ನೂ ಚಿಕ್ಕವನೆ. ಪಾಳುಬಿದ್ದ ಶಾಲೆಯ ಈ ಸ್ತಬ್ಧಗೋಡೆಗಳು ನನ್ನ ಬುದ್ಧಿಯನ್ನು ತೀಡಿ ತೀಕ್ಷ್ಣಗೊಳಿಸಿದ ಗುರುಗಳನ್ನು ನೆನಪಿಸುತ್ತದೆ, ಈ ಅಂಗಳದಲ್ಲಿ ಚೆಲ್ಲಿಕೊಂಡಿದ್ದ ಗೆಳೆಯರು ಅಷ್ಟೇ ಚಿಕ್ಕವರಾಗಿ ನನ್ನನ್ನು ಕೂಗುತ್ತಿದ್ದಾರೆ. ಅಂದು ಇಲ್ಲೆಲ್ಲಾ ನಲಿದಾಡಿದ ಎದೆಯಲ್ಲಿ ಒಂದು ಗುರುತನ್ನು ಮೂಡಿಸಿದ ಹುಡುಗಿಯರ ಮಕ್ಕಳು ಇಲ್ಲಿಯೇ ಆಡುತ್ತಿವೆ ಎನಿಸುತ್ತಿದೆ. ಆದರೆ, ಈ ಮುಗ್ದ ಮಕ್ಕಳೊಂದಿಗೆ ನನ್ನ ಕುಡಿಗಳು ಸೇರಿಕೊಂಡು ಈ ತಂಪಿನಲ್ಲಿ ಎಲ್ಲಾ ಮರೆತು ಹಳ್ಳಿಯ ಸೊಗಡಿನಲ್ಲಿ ಬೆಳೆಯಲಿ ಎಂದುಕೊಳ್ಳಲಾರೆ. 
 
ಅಸಲಿಯಾಗಿ ಅದು ನನ್ನಿಂದ ಸಾಧ್ಯವೇ?
 
ನಿನ್ನೆ ಸಂಜೆ ಈ ಹಳ್ಳಿಗೆ ಬಂದು ಹತ್ತು ನಿಮಿಷವಾಗಿರಲಿಲ್ಲ, “ವಯಸ್ಸಾಗಿದೆ, ಮದುವೆ ಮಾಡಿಕೊಳ್ಳಲು ನಿನಗೇನು ದಾಡಿ” ಅಜ್ಜಿ ಒಂದೇ ಸಮನೆ ಸಂಚಿ ಹುಡುಕುತ್ತಾ ಗೊಣಗಿಕೊಂಡಳು.
“ಏನಪ್ಪಾ, ಹುಡುಗಿ ನೋಡೋದೇ? ಮೊನ್ನೆ ರಾಮಣ್ಣನ ಮದುವೆಗೆ ಹೋಗಿದ್ದಾಗ ಒಂದೊಳ್ಳೆ ಸಂಬಂಧ ಗೊತ್ತು ಮಾಡಿಬಂದಿದ್ದೇನೆ” ಅಣ್ಣ ಕೇಳಿಕೊಂಡ. 
“ಅವನು ಯಾರನ್ನಾದರೂ ಪ್ರೀತಿಸಿರಬಹುದು ಇಲ್ಲ ಪಟ್ಟಣದಲ್ಲಿ ನಮಗೆಲ್ಲರಿಗೂ ತಿಳಿಯದಂತೆ ಒಂದು ಸಂಸಾರ ಹೂಡಿರಬಹುದು, ಆದುದರಿಂದಲೇ ಮದುವೆಗೆ ಒಪ್ಪಿಗೆ ನೀಡದೆ ಈ ರೀತಿಯಾಗಿ ಆಡುತ್ತಿದ್ದಾನೆ” ಪಕ್ಕದ ಮನೆಯವಳು ತನ್ನದೂ ಒಂದು ಸೊಲ್ಲಿರಲಿ ಎಂದು ನನ್ನ ಮುಖ ನೋಡುತ್ತ ಹೇಳಿದಳು.
“ಮಗನೇ, ನಾ ಸಾಯುವ ಮೊದಲೇ ನಿನ್ನ ಮದುವೆ ನೋಡಿಬಿಡುತ್ತೇನೆ, ಈ ಹಳ್ಳಿಯಲ್ಲಿಯೇ ನಿನ್ನ ಮದುವೆಯಾಗಬೇಕು ಕಂದ”, ಗೂರಲು ರೋಗದಿಂದ ಬಳಲಿ ಮೇಲೆ ಹಾರುತ್ತಿದ್ದ ಜೀವಪಕ್ಷಿಯನ್ನು ಹಿಡಿದುಕೊಂಡ ಅಪ್ಪ ಕಷ್ಟಪಟ್ಟು ನುಡಿದ.
“ನಿನ್ನೆಯಷ್ಟೇ ಬಸಣ್ಣ ಫೋನ್ ಮಾಡಿದ್ದ, ಚಿಕ್ಕಕ್ಕನ ಮಗಳು ಓದಿಕೊಂಡಿದ್ದಾಳಂತೆ, ನೋಡಲೂ ಚೆನ್ನಾಗಿದ್ದಾಳೆ, ಅವರಲ್ಲಿ ಹತ್ತೆಕರೆ ಜಮೀನು ಒಳ್ಳೆ ಆಸ್ತಿ ಇದೆ. ನಿನ್ನೆ ಅವರ ಮನೆಗೆ ಹೋಗಿ ಮಾತನಾಡ್ಕೊಂಡು ಬಂದಿದ್ದೇನೆ, ನಿಮ್ಮ ಮಗಳೇ ನನ್ನ ಸೊಸೆ ಎಂದು ಹೇಳಾಗಿದೆ, ಅವರು ಬೆಳಗ್ಗೆಯಿಂದಲೂ ಫೋನಾಯಿಸಿ ‘ಬೇಗ ತಿಳಿಸಿ, ಅದ್ಯಾರೋ ಕಂಡಕ್ಟರ್ ಬಂದು ನೋಡಿಕೊಂಡು ಹೋಗಿದ್ದಾರೆ’ ಎಂದು ಕೇಳುತ್ತಲೇ ಇದ್ದಾರೆ. ನೀನು ಈ ರೀತಿ ಆಡ್ತಾ ಇರೋದಾದ್ರೂ ಯಾಕೆ ಅಂತ ಗೊತ್ತಾಗ್ತಾ ಇಲ್ಲಪ್ಪ?” ಸಿಟ್ಟು ಮಾಡಿಕೊಂಡ ಅಮ್ಮ ‘ಚೆ’ ಎಂದುಕೊಂಡಳು.
 
“ದಯವಿಟ್ಟು ಸ್ವಲ್ಪ ಸಮಯ ಕೊಡಿ, ಅವಸರ ಬೇಡ, ನಾನೇನೂ ಈಗ ಹುಚ್ಚನಂತೆ ಬೀದಿ ಬೀದಿ ಅಲೆಯುತ್ತಿಲ್ಲವಲ್ಲ, ನೆರೆ ಕೂದಲು ಬಂದು ಚರ್ಮವೆಲ್ಲಾ ಸುಕ್ಕುಗಟ್ಟಿಹೋಯಿತೇನೋ ಎಂಬಂತೆ ಆಡುವುದೇಕೆ? ಕೂಡಲೇ ಮದುವೆ ಬಗ್ಗೆ ತಿಳಿಸುತ್ತೇನೆ” ಎಂದು ಹೇಳಿ ಮನೆಯಿಂದ ಹೊರ ನಡೆದಿದ್ದೆ.
 
“ಏನಪ್ಪಾ, ಪಟ್ಟಣಕ್ಕೆ ಹೋದದ್ದೇ ನಮ್ಮನ್ನ ಮರೆತುಬುಟ್ಟಾ?” ಯಾವುದೋ ಪರಿಚಿತ ಧ್ವನಿ ಕಿವಿಗೆ ಬಿದ್ದಿತು. ಕೂಲಿ ಮುಗಿಸಿ ಬರುತ್ತಿದ್ದ ನಮ್ಮ ಬೀದಿಯ ಹೆಂಗಸರ ದಂಡೆ ನನ್ನ ಹಿಂದೆ ನಿಂತಿತ್ತು. 
“ಚೆನ್ನಾಗಿದ್ದೇನೆ, ನೀವುಗಳು?” ಎಂದೆ.
“ನಮ್ಮದೇನಪ್ಪ, ಕೂಲಿ ಮಾಡಿದರೆ ಉಣ್ಣುವುದು, ಇಲ್ಲದಿದ್ದರೆ ಶಿವನಿಷ್ಟ ಅಂದ್ಕೊಂಡು ನೀರು ಕುಡಿಯುವುದು” ಎಂದಳೊಬ್ಬಳು.
“ಪಟ್ಣಕ್ಕೆ ಹೋಗಿ ನೀನು ಕೆಡಲಿಲ್ಲ, ಒಂದು ಸೈಟ್ ತೆಗೆದುಕೊಂಡಿದ್ದಿಯಂತೆ, ಅದೆಷ್ಟೋ ಲಕ್ಷ ದುಡ್ಡನ್ನ ಬ್ಯಾಂಕಿನಲ್ಲಿಟ್ಟಿದ್ದೀಯಂತಲ್ಲಪ್ಪ, ತಣ್ಗಿರು” ಎಂದಳು ಗಂಗವ್ವ. ಈಕೆ ನಮ್ಮ ನೆರೆಮನೆಯಾಕೆ. ನಮ್ಮಮ್ಮ ದಿನಕ್ಕೊಮ್ಮೆಯಾದರೂ ಈಕೆಯ ಬಳಿ ನನ್ನ ವಿಚಾರವೆತ್ತಿ ಬರಿ ಈ ರೀತಿಯ ಸುಳ್ಳನ್ನು ಹೇಳುವುದೇ ಆಯಿತು.
"ಇದೇಕೆ? ಮದುವೆ ಆಗೋಲ್ವೇ?" ಮತ್ತದೇ ಪ್ರಶ್ನೆ ಎದುರಾಗಿದ್ದೇ "ನೀವೆಲ್ಲಾ ನಡೆಯಿರಿ, ಬೀದಿಗೇ ಬಂದು ಮಾತನಾಡುತ್ತೇನೆ" ಎಂದು ಕಳುಹಿಸಿದೆ.
 
ಈ ಕೆರೆ ನೋಡಿ, ಮಳೆಗಾಲ ಬಂದಾಗ ತುಂಬಿಕೊಳ್ಳುತ್ತದೆ, ಬೇಸಿಗೆ ಬಿಸಿಗೆ ಬೆತ್ತಲಾಗಿ ನೆಲ ಬಿರಿಯುತ್ತದೆ. ಅಲ್ಲಿದ್ದ ಕೆಲವು ಜೀವರಾಶಿಗಳು ಅವಸಾನಗೊಳ್ಳುತ್ತವೆ. ಹಾವು, ಚೇಳುಗಳು ಬಿಲ ಸೇರಿಕೊಳ್ಳುತ್ತವೆ. ಅದೆಲ್ಲಿಗೋ ಜೀವ ಹಾರಿ, ಮಾಂಸ ಕರಗಿ ಬಿದ್ದಿರುವ ಕಪ್ಪೆಯ ಅಸ್ಥಿಪಂಜರ ಈ ಜಗತ್ತಿಗೆ ಅಕಾರಣವಾಗಿ ಬಂದ ಒಂದು ಜೀವ ಕಾರಣವಿಲ್ಲದೇ ಕುಣಿದಾಡಿ, ನೆಗೆದಾಡಿ ಕೊನೆಗೆ ಕಾರಣ ಉಳಿಸದೇ ಸತ್ತುಹೋಗುವ ಕುರುಹನ್ನಿಟ್ಟುಕೊಂಡಿದೆ. ಅದೆಲ್ಲಿಂದ ಬಂತು, ಹೋದದ್ದಾದರೂ ಎಲ್ಲಿಗೆ ಎಂಬ ಪ್ರಶ್ನೆಗೆ ಆ ಎಲುಬು ಉತ್ತರಿಸದು, ಬದಲಾಗಿ ಈ ಜೀವನದ ಖಾಲಿತನವನ್ನು, ಇಂದು ನಮ್ಮನ್ನೆಲ್ಲಾ ಅಪ್ಪಿಕೊಂಡು ಬಿಗಿದಿರುವ ಸಂಬಂಧಗಳೊಳಗಿನ ಕೆಲವು ದಿನಮಾತ್ರದ ಆಕರ್ಷಣೆಯನ್ನು ಕನ್ನಡಿಯಾಗಿ ತೋರಿದೆ. 
 
ಈ ಕೆರೆಯೆಂಬುದೂ ಬದುಕಿನಂತೆ ಎಲ್ಲಾ ಬದಲಾವಣೆಗೆ ಹೊಂದಿಕೊಳ್ಳುವ ಒಂದು ವೃತ್ತಾಂತ, ಇದೇ ವೃತ್ತಾಂತದಲ್ಲಿ ಹುಟ್ಟಿ ಸಾಯುವ ಕಪ್ಪೆಯಂತೆ ನಾನೂ ಕೂಡ ಇದೇ ಹಳ್ಳಿಯಲ್ಲಿ ಬದುಕಿಬಿಡಬೇಕಾಗಿತ್ತು. ಪಟ್ಟಣದ ಗೊಂದಲದ ಕಾರಣವಾಗಿ ದಿನಕ್ಕೆ ಡಝನ್ ಗಟ್ಟಲೇ ಸಿಗರೇಟ್ ಸೇದುವ ಬದಲು, ನನಗೆ ಈಜು ಕಲಿಸಿದ ಈ ಕೆರೆಯ ದಂಡೆಯಲ್ಲಿ ಕುಳಿತು ಒಂದು ಮೋಟುಬೀಡಿ ಸೇದಿ ಸಂಜೆಯಾದಂತೆ ಉಂಡು ಪಡಸಾಲೆಯಲ್ಲಿ ಮಲಗಿಬಿಡಬಹುದಾಗಿತ್ತು. ಮೈಗಂಟಿಕೊಳ್ಳುವ ಈ ಪ್ಯಾಂಟ್ ಷರ್ಟ್ ಬದಲು ಒಂದೆರಡು ಪಂಚೆಯಲ್ಲಿ ಜೀವನ ಕಳೆಯಬಹುದಿತ್ತು. ಹಳ್ಳಿಬಿಟ್ಟು ಯೋಚಿಸದ ಯಾವಳೋ ಒಬ್ಬಳನ್ನು ಮದುವೆಯಾಗಿ ಈ ಹೊತ್ತಿಗೆ ಒಂದೆರಡು ಮಕ್ಕಳೊಂದಿಗೆ ಕಾಲ ಕಳೆಯಬಹುದಿತ್ತು. ಎಲ್ಲೆಲ್ಲಿಯೂ ಬಸ್ಸು, ಸ್ಕೂಟರ್ ತುಂಬಿಕೊಂಡು ಯಾವಾಗಲೂ ಹೊಗೆ ಉಗುಳುವ, ಸಣ್ಣ ಸಣ್ಣ ವಸ್ತುವಿನ ವ್ಯಾಪಾರಕ್ಕೂ ದೊಡ್ಡ ದೊಡ್ಡ ಮೋಸ ಮಾಡುವ, ಮುಖ ನೋಡಿ ಮಣೆ ಹಾಕುವ ಪಟ್ಟಣವನ್ನು ಕನಸಿನಲ್ಲಿ ತುಂಬಿಕೊಳ್ಳುವ ಹಳ್ಳಿಗರು ಹಳ್ಳಿಯ ಈ ಸುಪ್ತ ಆಪ್ತ ವಾತಾವರಣವನ್ನು ಮರೆತುಬಿಡುತ್ತಾರೆ. ಪ್ಯಾಂಟ್, ಟೀ ಷರ್ಟ್, ಬೆಲ್ಟ್ ಹಾಕಿಕೊಂಡು ಅಸ್ವಾಭಾವಿಕವಾಗಿ ಮಾತನಾಡುವುದನ್ನೇ ನಾಗರಿಕತೆಯ ಪರಮಾವಧಿ ಎಂದುಕೊಳ್ಳುತ್ತಾರೆ. ಅಲ್ಲಿನ ಖರ್ಚನ್ನು ಲೆಕ್ಕವಿಟ್ಟುಕೊಳ್ಳದೇ ಬಂಡಿಯಷ್ಟು ದುಡಿಯಬಹುದೆಂಬ ಭ್ರಮೆಯ ಅಲಗಿನರಮನೆಯಲ್ಲಿ ತೇಲುತ್ತಾರೆ. ಒಂದಷ್ಟು ಜನ ಉದ್ಧಾರವಾದರೆ, ಒಂದಷ್ಟು ಜನ ಹಳ್ಳಿಯ ಮಡಿಲನ್ನು ಮತ್ತೆ ಅಪ್ಪಿಕೊಳ್ಳುತ್ತಾರೆ. ಒಂದಷ್ಟು ಜನ ಮೆಜೆಸ್ಟಿಕ್‍ನಂತಹ ಕತ್ತಲ ಕೂಪದೊಳಗೆ ಮೈ ಬೆತ್ತಲು ಮಾಡಿಕೊಳ್ಳುತ್ತಾರೆ. ನನ್ನಂತೆ ಏಡ್ಸ್ ನಂತಹ ಮಹಾಮಾರಿಗೆ ಸುಲಭವಾಗಿ ತುತ್ತಾಗಿಬಿಡುತ್ತಾರೆ!
 
ಅಷ್ಟಕ್ಕೇ ದೊಡ್ಡಪ್ಪನ ಫೋನ್ ಬಂದಿತ್ತು. "ಹಲೋ" ಎಂದೆ.
"ಎಲ್ಲಿದ್ದೀಯಪ್ಪಾ? ಮನೆ ಹತ್ರ ಬೇಗ ಬಾ, ಮದುವೆ ಬಗ್ಗೆ ಮಾತನಾಡಬೇಕು" ಎಂದ ದೊಡ್ಡಪ್ಪನ ಮಾತು ಕೇಳಿ ಮತ್ತಷ್ಟು ಕಿರಿಕಿರಿಯಾಯಿತು.
ಏನೂ ಮಾತನಾಡದೆ ಫೋನಿಡುವಷ್ಟರಲ್ಲಿ "ಏಡ್ಸ್ ವಿರುದ್ಧ ಜಾಗೃತಿ ಮೂಡಿಸುವ ಶಿಬಿರಕ್ಕೆ ನಿಮ್ಮನ್ನು ಆಯ್ಕೆ ಮಾಡಿಕೊಳ್ಳಲಾಗಿದೆ" ಎಂಬ ಸಂದೇಶ ಬಂತು. ಖುಷಿಯಾಯಿತು!