ಮನೋಹರ ಗ್ರಂಥ ಮಾಲೆಯ ನಾಲ್ಕು ಹೊಸ ಪುಸ್ತಕಗಳು

ಮನೋಹರ ಗ್ರಂಥ ಮಾಲೆಯ ನಾಲ್ಕು ಹೊಸ ಪುಸ್ತಕಗಳು

ಮನೋಹರ ಗ್ರಂಥಮಾಲೆಯ ನಾಲ್ಕು ಹೊಸ ಪುಸ್ತಕಗಳ ಕಿರುಪರಿಚಯ ಇಲ್ಲಿದೆ. ನೀವು ಈ ಪುಸ್ತಕಗಳನ್ನು ಓದಿದ್ದೀರಾ?

1. ಎ.ಕೆ. ರಾಮಾನುಜನ್ ಆಯ್ದ ಪ್ರಬಂಧಗಳು
ಬೆಲೆ ರೂ. 300
ಅನ್ಯ ಭಾಷೆಗಳಲ್ಲಿರುವ ಯಾವುದೇ ಬರಹವನ್ನು ನಮ್ಮ ಭಾಷೆಗೆ ಅನುವಾದ ಮಾಡಿಕೊಳ್ಳುವುದೇ ಅದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ವಿಧಾನ.
ಸಾಹಿತ್ಯ ಚಿಂತನೆ, ಕ್ಲಾಸಿಕಲ್ ಸಾಹಿತ್ಯ, ಜಾನಪದ, ಹೆಣ್ಣು, ಭಾಷೆ ಮತ್ತು ನಿರೂಪಣೆಯ ಲಕ್ಷಣ, ಅನುವಾದ, ಸಂಸ್ಕೃತಿ ವಿಚಾರ, ತೌಲನಿಕ ಅಧ್ಯಯನ ಈ ಎಲ್ಲಾ ವಲಯಗಳಿಗೆ ರಾಮಾನುಜನ್ ಅವರ ಕೊಡುಗೆ ಮುಖ್ಯವಾದದ್ದು. ರಾಮಾನುಜನ್ ಅವರ ಚಿಂತನೆಯ ಹಲವು ಅಂಶಗಳು ಕನ್ನಡದ ಪ್ರಮುಖ ಲೇಖಕರ ಮಾತುಗಳಲ್ಲಿ ಹೊಳೆದು ಕನ್ನಡಿಗರಿಗೆ ಪರಿಚಿತವಾಗಿರುವುದು ಬೇರೆ.
ಸಂರಚನಾವಾದಕ್ಕೆ, ಪಠ್ಯದ ನಿಕಟ ಓದು ಮತ್ತು ವಿಶ್ಲೇಷಣೆಗೆ ಒಲಿದವರು ರಾಮಾನುಜನ್. ಸಹಾನುಭೂತಿ ಮತ್ತು ವಿಮರ್ಶಾತ್ಮಕ ಅಂತರಗಳನ್ನಿಟ್ಟುಕೊಂಡು ನಮ್ಮನ್ನು ನಾವು ಇರುವಂತೆ ಲೋಕಕ್ಕೆ ಕಾಣಿಸುವ ನಾವು ಲೋಕದ ದೃಷ್ಟಿಗೆ ಹೇಗೆ ಕಾಣಬಹುದೆಂಬುದನ್ನು ತೋರಿಸಿಕೊಡುವ ಎರಡೂ ಅಪರೂಪದ ಕೆಲಸಗಳನ್ನು ರಾಮಾನುಜನ್ ಬರವಣಿಗೆ ಮಾಡುತ್ತದೆ.
-ಅನುವಾದಕರು: ಓ.ಎಲ್. ನಾಗಭೂಷಣ ಸ್ವಾಮಿ

2. ಹೆಗ್ಗುರುತು(ಕಥೆಗಳು)
ಲೇಖಕರು: ಕೆ.ಸತ್ಯನಾರಾಯಣ.
ಬೆಲೆ ರೂ. 120
ಸತ್ಯನಾರಾಯಣ ಅವರ ಕಥೆಗಳು ವಾಸ್ತವ ಬದುಕಿನ ಅನೇಕ ಮಗ್ಗುಲುಗಳ, ನೆಲೆಗಳ ಅನ್ವೇಷಣೆಗೆ ತೊಡಗಿಕೊಳ್ಳುತ್ತದೆ. ನವ್ಯೋತ್ತರ ಕಥಾ ಪ್ರಪಂಚವನ್ನು ತಮ್ಮ ಸಮೃದ್ಧ ಕಥನದಿಂದ ಶ್ರೀಮಂತಗೊಳಿಸುತ್ತಿರುವ ಸತ್ಯನಾರಾಯಣ ಒಬ್ಬ ಪ್ರಮುಖ ಕಥೆಗಾರರು. ವಿಭಿನ್ನ ಓದು ಪರಿಶೀಲನೆಗಳನ್ನು ಬೇಡುವಂಥ ಹಲವು ಶಕ್ತ ಕಥೆಗಳು ಈ ಸಂಕಲನದಲ್ಲಿದೆ.(ಪ್ರೊ.ಮಲ್ಲಿಕಾರ್ಜುನ-ಮುನ್ನುಡಿಯಲ್ಲಿ)

3. ಆಚಾರ್ಯ ಪ್ರಹಸನ ಮತ್ತು ಏನ್ ಹುಚ್ಚೂರೀ... (ಎರಡು ಪ್ರಹಸನಗಳು)
ಬೆಲೆ ರೂ. 120.

ಇವೆರಡೂ ನಾಟಕಗಳಿಗೆ ಪ್ರೇರಣೆ ಫ್ರೆಂಚ್ ಪ್ರಹಸನಕಾರ ಮೊಲಿಯನರದ್ದು, 'ಆಚಾರ್ಯ ಪ್ರಹಸನವು' ಮೊಲಿಯರನ 'ಲೆ ತಾರ್ ತೂಫ್' ನಾಟಕದಿಂದಲೂ, 'ಏನ್ ಹುಚ್ಚೂರೀ..' ನಾಟಕವು 'ಬೂರ್ಜ್ವಾ ದಿ ಜಂಟಲ್‌ಮೆನ್' ನಾಟಕದಿಂದಲೂ ಪ್ರಭಾವಿತವಾಗಿವೆ.
ಇವು ಎರಡೂ ನಟರ ನಾಟಕಗಳು ಪ್ರಹಸನಗಳನ್ನು ಅಭಿನಯಿಸುವುದು ಸುಲಭ ಮಾತಲ್ಲ. ನಟರ ತಂತ್ರಗಾರಿಕೆ ಹಾಗೂ ಅನುಭವಗಳೆರಡೂ ಗಟ್ಟಿಮುಟ್ಟಾಗಿರಬೇಕಾಗುತ್ತದೆ. ಈ ಅರ್ಥದಲ್ಲಿ ನಿರ್ದೇಶಕನಾಗಿ ಹಾಗೂ ನಾಟಕಕಾರನಾಗಿ ಕೂಡ ನನಗೆ ಸವಾಲೊಡ್ಡಿದ ನಾಟಕಗಳು ಇವೆರಡು. ನಟರೊಟ್ಟಿಗೆ ಕೆಲಸ ಮಾಡುತ್ತಾ ನಟರ ಮೂಲಕ ಮಾತ್ರವೇ ನಮ್ಮನ್ನು ಅಭಿವ್ಯಕ್ತಿಗೊಳಿಸಿಕೊಳ್ಳುವಂತೆ ನಾಟಕಕಾರ ಹಾಗೂ ನಿರ್ದೇಶಕನ ಮೇಲೆ ಕಲಾತ್ಮಕ ನಿರ್ಬಂಧ ಹೇರಬಲ್ಲ ಗಟ್ಟಿ ಕೃತಿಗಳಿವು.

-ಲೇಖಕರು: ಪ್ರಸನ್ನ

4. ಬೆಂದ ಕಾಳು ಅನ್ ಟೋಸ್ಟ್( ನಾಟಕ)
ಬೆಲೆ ರೂ. 70.
ಲೇಖಕರು: ಗಿರೀಶ್ ಕಾರ್ನಾಡ್
 ಬೆಂಗಳೂರು ಮಹಾನಗರದ ಒಡಲಿನಲ್ಲಿ ಹುದುಗಿರುವ ಉದ್ವಿಗ್ನತೆ, ನೋವು ನಲಿವನ್ನು, ಮರೆ-ಮೋಸವನ್ನು, ತಲಸ್ಪರ್ಶಿಯಾಗಿ ಚಿತ್ರಿಸುತ್ತಿರುವ  ಈ ನಾಟಕದ ಸಾಮಾಜಿಕ ವ್ಯಾಪ್ತಿ, ವಿಸ್ತಾರ, ಬೆರಗು ಹುಟ್ಟಿಸುವಂತಿದೆ. ನಿರ್ದಿಷ್ಟವಾಗಿ ಬೆಂಗಳೂರಿನ ಬದುಕಿಗೆ ಸಂಬಂಧಿಸಿರುವಂತಿದ್ದರೂ, ಈ ನಾಟಕದ ಕನ್ನಡಿಯಲ್ಲಿ ಭಾರತದ ಯಾವುದೇ ಮಹಾನಗರ ಕಾಣಿಸುವಂತಿದೆ. ದಿಗ್ಬ್ರಮೆ ಕವಿಸುವಂತೆ ಬೆಳೆಯುತ್ತಿರುವ ಮಹಾನಗರಗಳು ಬಿತ್ತುತ್ತಿರುವ ಕನಸು, ನಿರಾಸೆ,ಕಂಬನಿ, ಹಾಸ್ಯ, ಸಂಭ್ರಮಗಳೆಲ್ಲಾ ಇಲ್ಲಿವೆ. ಇದು ಸಂಪೂರ್ಣವಾಗಿ ಇಪ್ಪತ್ತೊಂದನೆಯ ಶತಮಾನಕ್ಕೆ ಸೇರಿದ ನಾಟಕ. ಗಟ್ಟಿಮುಟ್ಟಾದ  ವಸ್ತು ರಚನೆ, ಪಾತ್ರ ರಚನೆಯ ಮೂಲಕವೇ ಅತ್ಯಂತ ಸಂಕೀರ್ಣವಾದ ಇಂದಿನ ಬದುಕನ್ನು ಕಟ್ಟಿ ಕೊಡಲಾಗಿದೆ ಎಂಬುದೇ ಇಲ್ಲಿ ಮಹತ್ವದ ವಿಚಾರವಾಗುತ್ತದೆ.

- ಕೆ. ಮರುಳಸಿದ್ದಪ್ಪ. (ಬೆನ್ನುಡಿಯಲ್ಲಿ)
 

Comments

Submitted by ರಾಮಕುಮಾರ್ Tue, 01/15/2013 - 11:45

ಪುಸ್ತಕಗಳ ಪರಿಚಯಕ್ಕಾಗಿ ಬಹಳ ಧನ್ಯವಾದಗಳು ಎ.ಕೆ. ರಾಮಾನುಜನ್ ಬರಹಗಳನ್ನು ಬಹಳ ಇಷ್ಟ ಪಡುವ ನಾನು "ಎ.ಕೆ. ರಾಮಾನುಜನ್ ಆಯ್ದ ಪ್ರಬಂಧಗಳು" ಓದಲು ಕಾತರನಾಗಿದ್ದೇನೆ. ಈ ಪುಸ್ತಕಗಳು ಮನೋಹರ ಗ್ರಂಥಮಾಲೆಯ ಚಂದಾದಾರರಿಗೆ ಮಾತ್ರ ಲಭ್ಯವೇ ಅಥವಾ ಪುಸ್ತಕದ ಅಂಗಡಿಗಳಲ್ಲಿ ಕೊಳ್ಳಲು ದೊರಕುವವೆ ? ದಯವಿಟ್ಟು ತಿಳಿಸಿ ನಾನು ಕೆ ವಿ ಸುಬ್ಬಣ್ಣನವರು ಮಾಡಿದ ಎ.ಕೆ. ರಾಮಾನುಜನ್ ರ ಕೆಲ ಪ್ರಬಂಧಗಳ ಅನುವಾದ ಓದಿದ್ದೇನೆ. ಎ.ಕೆ. ರಾಮಾನುಜನ್ ರ ಒಂದು ಸೊಗಸಾದ ಪ್ರಬಂಧ ಇಲ್ಲಿದೆ. http://www.openthem…