ಕಥೆ : ಗಂಡನ ಮನೆಯ ಮೊದಲ ಬೆಳಗು
ಕಥೆ : ಗಂಡನ ಮನೆಯ ಮೊದಲ ಬೆಳಗು
=======================
ಸುಮಾ ಎಚ್ಚೆತ್ತಾಗ ಹೊರಗೆ ಪಕ್ಷಿಗಳ ಕಲರವ ಕೇಳುತ್ತಿತ್ತು. ಹೊಂಬೆಳಕು ಕಿಟಕಿಗೆ ಹಾಕಿದ ಬಣ್ಣದ ಪರದೆಗಳ ಸಂದಿಯಲ್ಲಿ ಇಣುಕಿತ್ತಿತ್ತು. ಹಾಸಿಗೆ ಮೇಲೆ ಕುಳಿತು ಸುತ್ತಲು ನೋಡಿದಳು. ಎಂತದೊ ಹೊಸ ವಾತವರಣ ಅವಳ ನೆನಪಿಗೆ ತಕ್ಷಣ ಬಂದಿತು, ತಾನೀಗ ಅಮ್ಮನ ಮನೆಯಲ್ಲಿಲ್ಲ. ಗಂಡನ ಮನೆಯಲ್ಲಿ ಇರುವುದು. ಮದುವೆಯಾದ ಮರುದಿನ ಅಪ್ಪ ಅಮ್ಮ ಜೊತೆಯಲ್ಲಿಯೆ ಬಂದು, ಗಂಡನ ಮನೆಯಲ್ಲಿ ತನ್ನನ್ನು ಬಿಟ್ಟು, ನಿನ್ನೆ ಸಂಜೆ ಹೊರಟಾಗ, ಅಮ್ಮನ ಕಣ್ಣಿನಲ್ಲಿಯು ನೀರು , ಅಪ್ಪನ ಮುಖವು ಸಪ್ಪೆ ಸಪ್ಪೆ.
ಸುಮಾ ಮಂಚದಿಂದ ಕೆಳಗಿಳಿದು, ತನ್ನ ಕೆದರಿದ ಕೂದಲು ಸರಿಪಡಿಸಿಕೊಂಡು, ಹಿಂದೆ ನೋಡಿದಳು. ತನ್ನ ಗಂಡ ಮಧು ಕಣ್ಮುಚ್ಚಿ ಮಲಗಿರುವ. ಅವನನ್ನು ಎಬ್ಬಿಸಲೆ ಎಂದು ಕೊಂಡವಳು, ಏಕೊ ಸಂಕೋಚದಿಂದ ಸುಮ್ಮನಾದಳು . ಮಧು ಮೊದಲಿನಿಂದಲು ಕಂಡವನೇನಲ್ಲ. ಸೋದರತ್ತೆಗೆ ಪರಿಚಯದವರ ಮೂಲಕ, ಬಂದು ತನ್ನನ್ನು ನೋಡಿ ಒಪ್ಪಿ ಮದುವೆ ಆದವನು. ಮದುವೆಗೆ ಮೊದಲು ಎರಡು ಮೂರು ಬಾರಿ ಅವನ ಜೊತೆ ಮಾತನಾಡಿದಾಗ ತುಂಬ ಒಳ್ಳೆಯವನು ಅನ್ನಿಸಿದ್ದಿದ್ದೆ. ಈಗ ಅವನನ್ನು ಏನೆಂದು ಕೂಗಿ ಎಬ್ಬಿಸುವುದು. ಒಮ್ಮೆ ಅಲುಗಾಡಿಸಿದರೆ, ನಿದ್ದೆ ಕಣ್ಣಲ್ಲಿ ಏನಾದರು ರೇಗಿ ಬಿಟ್ಟರೆ ಎಂದು ಭಯವಾಯಿತು. ಹಾಗೆಮುಂದೆ ಬಂದು, ಕನ್ನಡಿಯ ಎದುರು ನಿಂತ ಮುಖವನ್ನೊಮ್ಮೆ ನೋಡಿ, ಬಾಗಿಲ ಹತ್ತಿರ ಬಂದು ಶಬ್ದವಾಗದಂತೆ ಬೋಲ್ಟ್ ತೆಗೆದು ನಿದಾನಕ್ಕೆ ಬಾಗಿಲು ಅರ್ದ ತೆಗೆದು, ಹೊರಗೆ ಯಾರಾದರು ಕಾಣುವರ ಎಂದು ದಿಟ್ಟಿಸಿದಳು.
ಹೊರಗೆ ಹಾಲಿನಲ್ಲಿ ಸುಮಾನ ಮಾವ ನಾಗರಾಜರಾಯರು ಪೇಪರ್ ಓದುತ್ತ ಕಾಫಿ ಕುಡಿಯುತ್ತಿದ್ದರೆ, ಅವರ ಪಕ್ಕದಲ್ಲಿ ಸುಮಾಳ ನಾದಿನಿ ರುಕ್ಮಿಣಿ ಕುಳಿತು ಕಾಫಿ ಸವಿಯುತ್ತಿದ್ದಳು. ಸುಮಾಗಿ ಕಸಿವಿಸಿ ಶುರುವಾಯಿತು, ತಾನು ಎದ್ದಿದ್ದು ತಡವಾಯಿತೇನೊ, ಆಗಲೆ ಮಾವ , ನಾದಿನಿ ಇಬ್ಬರು ಎದ್ದಾಗಿದೆ, ಅತ್ತೆಯವರು ಎದ್ದಿರುತ್ತಾರೆ, ಅಮ್ಮ ಹೋಗುವಾಗಲೆ ಹೇಳಿಹೋಗಿದ್ದಳು, ನೀನು ನಮ್ಮ ಮನೆಯಂತೆ ಒಂಬತ್ತರವರೆಗು ಮಲಗಿರಬೇಡ, ಇದು ಅತ್ತೆಯ ಮನೆ , ಆದಷ್ಟು ಎಲ್ಲರಿಗು ಹೊಂದಿಕೊ. ಎದಿರುಮಾತನಾಡಲು ಹೋಗಬೇಡ, ಇತ್ಯಾದಿ ಏನೇನೊ, ತಾನು ತಲೆಯಾಡಿಸಿದ್ದೆ. ಮೊದಲ ದಿನವೆ ಹೀಗಾಯಿತೆ. ತಟ್ಟನೆ ಬಾಗಿಲು ಹಾಕಿಬಿಟ್ಟಳು. ಅವಳಿಗೆ ಈಗ ಹೊರಗೆ ಹೇಗೆ ಹೋಗುವದೆಂಬ ಕಸಿವಿಸಿ ಕಾಡಿತು. ಗಂಡನ ಕಡೆ ನೋಡಿದಳು, ಅವನಿನ್ನು ಕಣ್ಣು ಮುಚ್ಚಿ ಮಲಗಿದ್ದಾನೆ, ಕಣ್ಣು ಮುಚ್ಚಿ ಮಲಗಿದ್ದರು ಮಧು ತನ್ನ ಹೆಂಡತಿಯ ಪರದಾಟ , ಅರ್ದ ಕಣ್ಣು ತೆರೆದೆ ಗಮನಿಸಿದ ಅವನ ಮುಖದಲ್ಲಿ ಮಾಸದ ಮುಗುಳ್ನಗೆ.
ಒಂದೆರಡು ಕ್ಷಣ ಕಾದು ಏನಾದರಾಗಲಿ, ಎಂದು ಕೊಳ್ಳುತ್ತ ಮತ್ತೆ ಬಾಗಿಲನ್ನು ತೆರೆದು ನಿದಾನ ತನ್ನ ಹೆಜ್ಜೆ ಹೊರಗೆ ಇಟ್ಟಳು. ಮಾವ ಹಾಗು ನಾದಿನಿ ಕುಳಿತಿರುವ ಸೋಪದ ಹಿಂಬಾಗದಿಂದ ಹಾದು , ರಾತ್ರಿ ನೋಡಿ ನೆನಪಿದ್ದ, ಬಚ್ಚಲು ಮನೆಯತ್ತ ಹೊರಟಳು.
ಅವಳು ನಿದಾನಕ್ಕೆ ನಡೆದು ಹೋಗಿದ್ದು, ಅವಳು ಬಾಗಿಲು ತೆರೆದು ಮುಚ್ಚಿದ್ದು ಎಲ್ಲವನ್ನು ಗಮನಿಸಿದ್ದ ಅವಳ ನಾದಿನಿ ರುಕ್ಮಿಣಿಗೆ ಒಳಗೆ ನಗು, ನಗು. ಅವಳು ತನ್ನ ಅತ್ತಿಗೆ ಕಡೆಗೆ ಬೆನ್ನು ತಿರುಗಿಸಿ ಕುಳಿತಳು. ಗಂಭೀರವಾಗಿ ಪೇಪರ್ ಓದುತ್ತ ಕುಳಿತಿದ್ದ, ನಾಗರಾಜರಾಯರು ಮಗಳ ಮುಖವನ್ನು ನೋಡಿದಾಗ ಅವರ ಮುಖದಲ್ಲು ಒಂದು ಮುಗುಳ್ನಗೆ ಮೂಡಿತು.
ಸ್ವಚ್ಚವಾಗಿ ಮುಖತೊಳೆದು ಒರೆಸಿ, ಹಣೆಗೆ ಒಂದು ಕುಂಕುಮವಿಟ್ಟು, ನಿದಾನವಾಗಿ ಅಡುಗೆ ಮನೆಗೆ ನಡೆದಳು ಸುಮಾ.
ಸುಮಾಳ ಅತ್ತೆ ಇಂದಿರ ಆಗಲೆ ಬೆಳಗಿನ ತಿಂಡಿಯ ಯೋಚನೆಯಲ್ಲಿದ್ದರು ಅನ್ನಿಸುತ್ತೆ. ಸ್ಟವ್ ಹಚ್ಚಿ ಉಪ್ಪಿಟ್ಟಿಗೆ ರವೆ ಹುರಿಯುತ್ತಿದ್ದರು . ಹೊರಗಿನ ಕಿಟಕಿಯಿಂದ ಒಳಗೆ ಇಣುಕುತ್ತಿದ್ದ, ಸೂರ್ಯ ರಶ್ಮಿ ಅವರ ಮೇಲೆ ಬೀಳುತ್ತಿತ್ತು. ಸುಮಾ ಸುಮ್ಮನೆ ನಿಂತಳು, ಅತ್ತೆಯವರನ್ನು ಏನೆಂದು ಕರೆಯುವುದು. ತಾನೀಗ ಏನು ಕೆಲಸ ಮಾಡಬೇಕು ಅವಳಿಗೆ ತೋಚಲಿಲ್ಲ. ಹಾಗೆ ಒಂದು ಕ್ಷಣ ನಿಂತ ಅವಳು ಪುನಃ ದೈರ್ಯ ಮಾಡಿ
"ಅಮ್ಮಾ" ಎಂದು ಕೂಗಿದಳು.
ಸುಮಾಳ ಅತ್ತೆ ಇಂದಿರರವರಿಗೆ ಸುಮಾ ಅಲ್ಲಿ ಬಂದಿದ್ದು ತಿಳಿಯುತ್ತಿತ್ತು. ಅವರು ಹಾಗೆ ರವೆ ಹುರಿಯುವ ಕಡೆ ಗಮನ ಕೊಟ್ಟಿದ್ದರು, ಒಂದೆ ಕ್ಷಣವಾದರು ಸುಮಾಳ ದ್ವನಿ ಇಲ್ಲದ್ದನ್ನು ಕಂಡು, ’ಒಂದು ನಿಮಿಷ ತಡಿಯಮ್ಮ ಕಾಫಿ ಕೊಡುವೆ ’ ಎಂದು ಅನ್ನುವ ಮೊದಲೆ , ಹಿಂದಿನಿಂದ ’ಅಮ್ಮಾ’ ಎನ್ನುವ ದ್ವನಿ ಕೇಳಿ , ಸ್ಟವ್ ಆರಿಸಿ , ಒಮ್ಮೆ ಹಿಂದೆ ತಿರುಗಿ ನೋಡಿದರು.
ಮುಖದಲ್ಲಿ ಇನ್ನು ನಿನ್ನೆಯ ಆಯಾಸ ಮಾಸಿಲ್ಲ. ಅವಳ ಮುಖ ಪೂರ್ತಿ ತುಂಬಿದ ಸಂಕೋಚ, ಹೊಸಸ್ಥಳ ಹೊಸಜನ ಎಂಬ ಗಲಿಬಿಲಿ ಹೊತ್ತ ಭಾವ. ಈಗಿನ್ನು ಎದ್ದು ಬಂದಿರುವ ಸ್ನಿಗ್ದ ಭಾವ , ಎಲ್ಲವನ್ನು ನೋಡುತ್ತ ಅವರಿಗೆ , ಸುಮಾರು ಮೂವತ್ತು ವರ್ಷಗಳ ಹಿಂದೆ ತಾನು ಮದುವೆಯಾಗಿ ಗಂಡನ ಮನೆಗೆ ಬಂದ ಮೊದಲ ದಿನ ಇದೆ ರೀತಿ ನಿಂತಿದ್ದ ನೆನಪು ಹಾದು ಹೋಯಿತು. ಸೊಸೆಯನ್ನು ನೋಡುತ್ತ ಅವರಿಗೆ ಎಂತದೊ ಒಂದು ಮುಗ್ದ ಭಾವ ಮನದಲ್ಲಿ ಮೂಡಿದಂತೆ, ಅವಳನ್ನು ನೋಡುತ್ತ ಒಮ್ಮೆ ಮುಗುಳ್ನಕ್ಕರು.
ಸುಮಾ ಅತ್ತೆಯನ್ನೆ ನೋಡುತ್ತಿದ್ದಳು, ಬೆಳಗಿನ ಬೆಳಕು ಅವರ ಮುಖದ ಮೇಲೆಯೆ ಬೀಳುತ್ತಿತ್ತು, ಕಸಿವಿಸಿ, ಆತಂಕ ಹೊಸತನ ಎಲ್ಲ ತುಂಬಿದ್ದ ಅವಳ ಮನಸಿಗೆ, ತನ್ನ ಅತ್ತೆಯು ಮುಖದಲ್ಲಿ ಮೂಡಿದ ಮುಗುಳ್ನಗೆ ಕಾಣುತ್ತಲೆ, ಮನಸ್ಸು ಹಗುರವಾಯಿತು. ಎಂತದೋ ನೆಮ್ಮದಿ ಮೂಡಿತು. ಅವಳಿಗೆ ಅವಳ ತಾಯಿಯ ನೆನಪಾಯಿತು. ಸುಮಾಳಿಗೆ ಜೀವನ ಪೂರ್ತಿ ಸಾಕಗುವಷ್ಟು ಬೆಳಕು ಅ ಮುಗುಳ್ನಗೆಯಲ್ಲಿತ್ತು.
ಶುಭಂ.
(ಚಿತ್ರ : ಕಳೆದ ವರ್ಷ ಶೃಂಗೇರಿಗೆ ಹೋದಾಗ ತೆಗೆದಿದ್ದು)
Comments
ಕಥೆ ಸರಳವಾಗಿ, ಸೊಗಸಾಗಿ ಮೂಡಿ
ಕಥೆ ಸರಳವಾಗಿ, ಸೊಗಸಾಗಿ ಮೂಡಿ ಬ೦ದಿದೆ. ನೆನ್ನೆ ಸ೦ಪದ ಸಮ್ಮಿಲನ ಮುಗಿಸಿಕೊ೦ಡು ಹೊರಡುವಾಗ ನಾವಾಡಿದ ಮಾತುಗಳಲ್ಲೇ ಒ೦ದು ಸು೦ದರ ಕಥೆ ಎಣೆದಿರುವ ನಿಮ್ಮ ಪ್ರತಿಭೆ ಸೂಪರ್ ಸರ್ :)