ಸಾರ್ಥಕ ವಾರಾಂತ್ಯ- ಐದನೆಯ ಸಂಪದ ಸಮ್ಮಿಲನ

Submitted by gopinatha on Mon, 12/31/2012 - 21:01

ಸಾರ್ಥಕ ವಾರಾಂತ್ಯ- ಐದನೆಯ ಸಂಪದ ಸಮ್ಮಿಲನ  ತಾ ೩೦.೧೨.೨೦೧೨  ಸಾರಂಗ ಕಚೇರಿಯಲ್ಲಿ

ಸಂಪದವನ್ನು ನಾಡಿಗರು ಹೇಗೆ ಮತ್ತು ಯಾವ ಉದ್ದೇಶಕ್ಕಾಗಿ ಹುಟ್ಟು ಹಾಕಿದರು ಎಂಬುದು ಕೇಳಿ ಈ ಮೂವತ್ತೆರಡರ ಯುವಕನಾದ ಹರಿಪ್ರಸಾದ ನಾಡಿಗರ ಮೇಲಿನ ನನ್ನ ಗೌರವ ಮತ್ತೂ ನೂರ್ಮಡಿಯಾಯ್ತು. ಆಗ ನಮ್ಮಲ್ಲಿ ಬ್ಲಾಗ್ ಅನ್ನುವ ಶಬ್ದವೇ ಅಪರಿಚಿತವಾಗಿತ್ತು. ಅದರಲ್ಲೂ ಎಲ್ಲ ಕಂಗ್ಲೀಷ್ ಮಯವಾಗಿದ್ದುದನ್ನು ಕಂಡು ಕನ್ನಡದಲ್ಲಿ ಬರೆಸಲೇ ಬೇಕೆಂಬ ಅವರ ಹಂಬಲವೇ ಸಂಪದವನ್ನು ಹುಟ್ಟು ಹಾಕಲು ಸಹಕಾರಿಯಾಗಿತ್ತು.

ಏಳು ವರುಷ ಹಿಂದಿನ ಈ ಮಾಧ್ಯಮ ಒಂದು ಸಮೂಹ ಮಾಧ್ಯಮವಾಗಿ ಬ್ರಹದಾಕಾರವಾಗಿ ಬೆಳೆಯುತ್ತ ಬಂದಿರುವುದು ಅವರಿಗೇ ಅಪಾರ ಉತ್ಸಾಹ ಮತ್ತು ಖುಷಿಯನ್ನು ತಂದಿದೆ. ಮೂವತ್ತಾರು ಸಾವಿರ ಮುನ್ನೂರಕ್ಕೂ ಹೆಚ್ಚು ಪುಟಗಳಿರುವ, ಒಂದು ಲಕ್ಷ ಎಪ್ಪತ್ತೇಳು ಸಾವಿರ ಪ್ರತಿಕ್ರಿಯೆಗಳಿರುವ ಸಂಪದ ಜಗತ್ತಿನ ಅತಿ ದೊಡ್ಡ ಕನ್ನಡ ಅಂತರ್ಜಾಲ ತಾಣಗಳಲ್ಲೊಂದಾಗಿ ಬೆಳೆದಿದೆ. ಬೇಕಿದ್ದಲ್ಲಿ ಒಂದನೇ ಪ್ರತಿಕ್ರಿಯೆಯಿಂದ ಒಂದು ಲಕ್ಷ ಎಪ್ಪತ್ತೇಳು ಸಾವಿರದೊಂದನೆಯ ಪ್ರತಿಕ್ರಿಯೆಯನ್ನೂ ನೋಡ ಬಹುದಾಗಿದೆಯೆಂದರೆ ಇದರ ಅಗಾಧತೆಯನ್ನು ನೀವೇ ಊಹಿಸಿಕೊಳ್ಳಬಹುದು. ಏರಿಳಿತದ ದಾರಿಯಲ್ಲಿ ಏಳು ವರ್ಷಗಳನ್ನೇ ದಾಟಿದೆ! ಈ ಖುಷಿಯನ್ನು ವ್ಯಕ್ತ ಪಡಿಸುವುದನ್ನು ನೋಡಿದ ನನಗೆ ಇವತ್ತಿನ ಸಮ್ಮಿಲನಕ್ಕೆ ಬರುತ್ತೇವೆಂದು ನಿರ್ಧರಿಸಿಯೂ ಬರಲಾಗದವರ ಮೇಲೆ ಕರುಣೆ ಉಕ್ಕಿತು.

ನಿಜ ! ಐದು ವರುಷದ ಹಿಂದೆ ಇಂಗ್ಲೀಷಿನಲ್ಲಿರುವ ವಿಕಿಪೀಡಿಯದಲ್ಲಿ ತಮಗೆ ಗೊತ್ತಿರುವ ವಿಷಯವನ್ನು ವ್ಯಕ್ತ ಪಡಿಸಿ ಯಾರು ಬೇಕಾರೂ ವಿಶದೀಕರಿಸುವಂತೆ ಮಾಡುವ ಮಾಧ್ಯಮ ಕನ್ನಡದಲ್ಲಿಯೂ ಇದ್ದರೆ ಎಷ್ಟು ಚೆನ್ನ ಎಂದೆಣಿಸಿದಾಗ ಉಧ್ಭವಿಸಿದ ಕಿರು ಆಶಯವೇ ಈ ಸಂಪದ. ಮಾತನಾಡಿದಂತೆ ಬರೆಯಲೂ ಸಹಾ, ನಮಗನ್ನಿಸಿದ್ದನ್ನು ಅನ್ನಿಸಿದ ಹಾಗೆ ಬರೆಯಲು ಮತ್ತು ಅದನ್ನೇ ನಾಲ್ಕು ಜನರಿಗೆ ಉಪಯೋಗವಾಗುವಂತೆ ಮಾಡುವ ಕನಸು ಕಂಡ ನಾಡಿಗರು ಅದಕ್ಕೆ ಅನುಗುಣವಾಗಿ ಪ್ರಯತ್ನಿಸಿ ನಮಗೆಲ್ಲಾ ಕಂಡರಿಯದ ಕೇಳರಿಯದ ಸಂಪದಿಗ ಸ್ನೇಹವನ್ನು ಸಂಪಾದಿಸಿಕೊಟ್ಟರು.

ಇದರಲ್ಲಿನ ಎಲ್ಲರ ಬರವಣಿಗೆಯನ್ನು ಬಲ ಪಡಿಸಿ ಪ್ರಪಂಚದಲ್ಲೆಲ್ಲಾ ಸ್ನೇಹಿತರನ್ನು ಹುಟ್ಟು ಹಾಕಿದ ಕೀರ್ತಿ ಸಂಪದದ್ದು. ಕಳೆದ ಸುಮಾರು ಸಮಯಗಳಿಂದ ನನಗೆ ಸಂಪದದತ್ತ ತಲೆ ಹಾಕಲಾಗಿರಲಿಲ್ಲ, ಅದಕ್ಕೆ ನನ್ನ ಕೆಲಸದ ಬಾಹುಳ್ಯವೂ ಅಲ್ಪ ಸ್ವಲ್ಪ ಉದಾಸೀನವೂ ಕಾರಣವಾಗಿತ್ತೆಂದರೆ ಅದರಲ್ಲಿ ಅತಿಶಯೋಕ್ತಿ ಇಲ್ಲ. ಇವತ್ತಿನ ಈ ಸಮ್ಮೇಳನದಲ್ಲಿ ತಾಂತ್ರಿಕ ವಿಷಯ ನಿರೂಪಣೆ ನಾಡಿಗರೇ ಹೇಳುವ ಹಾಗೆ ಸರ್ವರಿಗೂ ಅರ್ಥವಾಗದಿದ್ದರೂ ತಮ್ಮ ಅಷ್ಟೆಲ್ಲಾ ಕೆಲಸ ಕಾರ್ಯಗಳನಡುವೆಯೂ ಸಮಾಜಕ್ಕಾಗಿ ಒಂದು ಉತ್ತಮ ಸಮೂಹ ಮಾಧ್ಯಮವನ್ನು ಅರ್ಪಿಸಿದ ಕೀರ್ತಿಯು ಅವರನ್ನು ಸಂಪದಿಗರೆಲ್ಲರ ಹೃದಯದಲ್ಲಿ ಶಾಶ್ವತ ಸ್ಥಾನ ಕಲ್ಪಿಸಿರುವುದಂತೂ ನಿಜ. ನನ್ನಂತಹ ಅನೇಕ ಕಿರು ಸಾಹಿತಿಗಳಿಗೆ ಬರೆಯುವ ಗೀಳು ಹುಟ್ಟಿಸಿರುವ ಈ ಸಂಪದ, ಶ್ರೀಯುತ ಓ ಎಲ್ ಎನ್ ಸ್ವಾಮಿ, ಶಾಸ್ತ್ರಿ, ಡಿ ಎಸ್ ರಾಮಸ್ವಾಮಿ, ಶ್ರೀವತ್ಸ ಜೋಶಿ, ಸೋಮಯಾಜಿಯವರಂತಹ ದಿಗ್ಗಜರನ್ನೂ ತಾವೇ ಬರೆಯುವಂತೆ ಪ್ರೇರೇಪಿಸಿ ಶೀಲವಂತ, ಪಾಲ ರಂತವರ ಮಾಹಿತಿಪೂರ್ಣಲೇಖನಗಳನ್ನೂ ಸದಸ್ಯರೆಲ್ಲರಿಗೂ ಉಣ್ಣಿಸಿ ಸಂಪದಿಗರನ್ನು ಭಾಗ್ಯವಂತರನ್ನಾಗಿ ಮಾಡಿದೆ.

ನನಗಂತೂ ಇವತ್ತಿನ ಸಮ್ಮಿಲನ ಮಾಹಿತಿ ಪೂರ್ಣ ಕಣಜವಾಗಿತ್ತು, ನಾಡಿಗರ ಉದ್ದೇಶ ಸಫಲವಾಗಿ ತಾನೇ ಬೆಳೆದ ಈ ಬ್ಲಾಗಲ್ಲದ ಮಾಧ್ಯಮ ತನ್ನ ಸಹಾಯವೂ ಇಲ್ಲದೇ ತಾನೇ ನಡೆಯುವಂತಾಗಲೀ ಎನ್ನುವುದು ಅವರ ಮೂಲ ಆಶಯ ಎನ್ನುವುದನ್ನು ಅವರ ಬಾಯಿಯಿಂದ ಕೇಳಿದ ನನಗೆ ಕನ್ನಡ ತನ್ನಿಂದಲೇ ನಡೆಯುವುದು, ಬೆಳೆಯುವುದು ಎಂದುಕೊಂಡಿರುವ ರಾಜಕೀಯ ಧುರೀಣರ ಮಾತಿಗೂ, ಯಾವುದೇ ರೀತಿಯ ಪ್ರಚಾರವನ್ನು ಅಪೇಕ್ಷಿಸದೇ ತನ್ನ ಸ್ವಪ್ರಯತ್ನದಿಂದಲೇ ಕಾಯಾ ವಾಚಾ ಮನಸಾ ಬೇರೆ ಯಾರ ಸಹಾಯವಿಲ್ಲದೇ ಸಂಪದದ ಮೂಲಕ ಕನ್ನಡ ಕಟ್ಟುತ್ತ ನಡೆಸುತ್ತಿರುವ ಬೆಳೆಸುತ್ತಿರುವ ನಾಡಿಗರ ಈ ಪರೋಪಕಾರೀ ಕಾರ್ಯದ ರೀತಿ ಕಣ್ಣಿಗೆ ಕಟ್ಟಿತು ಮನಕ್ಕೆ ತಟ್ಟಿತು.

ಹಲಕೆಲವೊಮ್ಮೆ ಇದನ್ನು ನಿಲ್ಲಿಸಬೇಕೆಂಬ ಮನಸ್ಥಿತಿ ಬಂದಿತ್ತಾದರೂ ಇಡೀ ಪ್ರಥ್ವಿಯ ಉದ್ದಗಲಕ್ಕೂ ಹರಡಿಕೊಂಡಿರುವ ಸಂಪದಿಗರ ಉತ್ಸಾಹ ಅವರಿಗೆ ಪ್ರತಿ ಬಾರಿಯೂ ಅಂತಹ ಬೇಸರವನ್ನು ಮೆಟ್ಟಿ ಮೇಲೆ ಬರಲು ಸಹಕಾರಿ ಆಯ್ತೆಂಬುದನ್ನೂ ಅವರು ಹೇಳಿದ್ದರು. ಇವತ್ತಿನವರೆಗೆ ನೊಂದಾಯಿಸಿದವರು ೨೫ ಆಗಿದ್ದರೂ ೮- ೧೦ ಜನರು ಬಂದಿದ್ದರಿಂದ ಕಾರ್ಯಕ್ರಮವನ್ನು ಮೊಟಕುಗೊಳಿಸ ಬೇಕಾಗಿತ್ತಾದರೂ ಸಂಪದಲ್ಲಿನ ಬೆಳವಣಿಗೆ ಸಂಪದಿಗರೆಲ್ಲರ ಆಸಕ್ತಿ, ಬರಹಗಳು ಎಲ್ಲವೂ ಸಂಪದಿಗರ ಪರಿಚಯದೊಂದಿಗೆ ಆರಂಭವಾಗಿ ತಮ್ಮ ತಮ್ಮ ಅನಿಸಿಕೆಯನ್ನೂ ಸಂಪದದೊಂದಿಗಿನ ಅವಿನಾಭಾವ ಸಂಬಂಧವನ್ನೂ ವಿವರಿಸಿದ ರೀತಿ ಖುಷಿ ತಂದಿತು.

ಶ್ರೀಯುತ ಅಡ್ಡೂರು ಕೃಷ್ಣ ರಾವ್ ಅವರು ಬರವಣಿಗೆ ಹೇಗಿರಬೇಕು? ಹೇಗೆಲ್ಲಾ ಬರೆದರೆ ಚೆನ್ನ, ಯಾವುದರ ಬಗ್ಗೆ ಬರೆಯಬೇಕು ಎಂಬುದನ್ನು ತಾನು ಬರೆದ ಬರೆಯುತ್ತಿರುವ ವಿಷಯಗಳನ್ನು ಹೇಳುತ್ತಾ ನಮಗೆಲ್ಲಾ ವಿವರಿಸುತ್ತಾ ಹೋದರು. ನನಗಂತೂ ಈ ವಿಷಯಗಳು ಹೊಸತಾಗಿ ಬರೆಯುವವರಿಗೂ ಬರವಣಿಗೆ ಹವ್ಯಾಸವನ್ನಾಗಿ ಮಾಡಿಕೊಳ್ಳಬೇಕೆಂದು ಕೊಳ್ಳುವವರಿಗೂ ತುಂಬಾನೇ ಸಂಗ್ರಾಹ್ಯ ಮಾತುಗಳು ಅನ್ನಿಸಿತು. ಇದುವರೆವಿಗೂ ಯಾರೂ ಬರೆಯದ ವಿಷಯಗಳನ್ನು ಬರೆಯ ಬೇಕು, ಮತ್ತು ಬರೆಯುವ ಮತ್ತು ಓದುವ ಹವ್ಯಾಸ ಒಂದು ಹತ್ತರ ದಾಮಾಶಯದಲ್ಲಿದ್ದರೆ ಚೆನ್ನ. ಇಂತಹ ಮಹತ್ತರ ಟಿಪ್ಪಣಿಗಳನ್ನು ಅವರು ನೀಡಿದ್ದರು.

ಇದನ್ನು ನಾನು ನನ್ನ ಯು-ಟ್ಯೂಬ್ ನಲ್ಲಿ ಸಂಗ್ರಹಿಸಿದ್ದೇನೆ.

ಸಂಪದ ಪಾಡ್ ಕಾಸ್ಟ್ ನಲ್ಲಿ ಅದನ್ನು ನೀವು ನೋಡಬಹುದೆನ್ನಿಸುತ್ತೆ.

ಮುಂದಿನ ದಿನಗಳಲ್ಲಿ ಸಂಪದ ಇನ್ನೂ ಚೆನ್ನಾಗಿ ಇನ್ನೂ ಹಲವಾರು ಸೌಕರ್ಯಗಳನ್ನೊಳಗೊಂಡು ಸರ್ವಾಂಗ ಸುಂದರ(ವಾ)ಳಾಗಿ ಕಾಣಲಿದೆ ಎಂಬುದನ್ನೂ ನಾಡಿಗರು ವಿವರಿಸಿದರು. ಪ್ರಾಯಶಃ ಅದನ್ನು ನಾವೆಲ್ಲರೂ ಶೀಘ್ರವೇ ಕಾಣ ಬಹುದಾಗಿದೆ.

ಮಧ್ಯಾಹ್ನದ ರುಚಿ ರುಚಿಯಾದ ಊಟವನ್ನು ಮುಗಿಸಿ ನವೆಂಬರ್ ತಿಂಗಳಲ್ಲಿಯೇ ಪ್ರತಿ ವರ್ಷ ಸಂಪದ ಸಮ್ಮಿಲನವನ್ನು ಒಂದು ನಿಗದಿತ ದಿನದಲ್ಲಿಯೇ ಮಾಡಬಹುದು ಎಂದೂ ನಿರ್ಧರಿಸಲಾಯ್ತು. ಸಂಪದದ ಉತ್ಕೃಷ್ಟ ಬರಹಗಳನ್ನು ಪ್ರಕಟಿಸುವ ಯೋಜನೆಯನ್ನೂ ನಾಡಿಗರು ತಿಳಿಸಿದರು.

ಕೆಲವು ಆಸಕ್ತ ಸಂಪದಿಗರ ಗುಂಪನ್ನು ಆರಿಸಿಕೊಂಡು ಅವರಿಂದ ಸಂಪದದ ಬರಹಗಳನ್ನು ಆರಿಸುವ ಕೆಲಸವಾಗಬೇಕಾಗಿದೆ ಅದಕ್ಕೆ ಆಸಕ್ತ ಸಂಪದಿಗರು ಸಂಪದವನ್ನು ಸಂಪರ್ಕಿಸ ಬೇಕೆಂದೂ ಕೋರಲಾಗಿದೆ.

ನಮ್ಮೆಲ್ಲರ ಕಣ್ಮಣಿ ಹರಿ ಪ್ರಸಾದ ನಾಡಿಗರಿಗೂ ಸಂಪದಕ್ಕೂ ಮತ್ತೊಮ್ಮೆ ಶರಣು.