ದ್ವೀಪವ ಬಯಸಿ

ದ್ವೀಪವ ಬಯಸಿ

ಪುಸ್ತಕದ ಲೇಖಕ/ಕವಿಯ ಹೆಸರು
ಎಂ.ಆರ್.ದತ್ತಾತ್ರಿ
ಪ್ರಕಾಶಕರು
ಛಂದ ಪುಸ್ತಕ ಪ್ರಕಾಶನ
ಪುಸ್ತಕದ ಬೆಲೆ
150

ಯಾರೂ ನಮಗೆ ಸೇರಿದವರಲ್ಲ, ಯಾರನ್ನಾದರೂ ಹುಡುಕಲು ಹೊರಟರೆ ನಮಗೆ ನಾವೇ ವೃತ್ತದ ಕೇಂದ್ರವೆನ್ನುವ ಭ್ರಮೆಯಲ್ಲಿ ಬೀಳುತ್ತೇವೆ. ಕಥಾ ನಾಯಕ ಸಣ್ಣವನಿದ್ದಾಗಲೇ ತನ್ನಿಂದ ದೂರಾದ ತಮ್ಮನನ್ನು ಹುಡುಕಹೊರಟು ಭಾವಾವೇಶಕ್ಕೆ ಒಳಗಾಗಿ ತನ್ನ ಸಹೋದ್ಯೋಗಿಯ ಕಣ್ಣುಗಳಲ್ಲಿ ಆತನ ಬಿಂಬವನ್ನು ಕಂಡು ಭ್ರಮಾಲೋಕಕ್ಕೆ ಹೋಗುತ್ತಾನೆ. ನಂತರ ತನ್ನ ತಮ್ಮನಂತೆಯೇ ಆತನನ್ನು ಕಾಣುತ್ತಾನೆ. ಅದಕ್ಕೆ ತಾಳೆಯಾಗುವಂತೆ ಛಾಯಾಚಿತ್ರಕಾರನೊಬ್ಬ ತನ್ನ ಚಿತ್ರಗಳಲ್ಲಿ"ಎಲ್ಲೋ ದೂರದ ದ್ವೀಪವ ಬಯಸಿ" ಏನನ್ನೋ ಹುಡುಕ ಹೊರಟ ಚಿತ್ರಣ.
ಪೋಷಕರ ಅಸಮ್ಮತಿಯನ್ನೂ ಲೆಕ್ಕಿಸದೆ, ವಾರ್ ರಿಪೋರ್ಟರ್ ಆಗಿ ಅಫ್ಘಾನಿಸ್ತಾನಕ್ಕೆ ಹೋಗಬೇಕೆಂದು ದಿಟ್ಟ ನಿರ್ಧಾರವನ್ನು ತಳೆದ ಸಣ್ಣವಯಸ್ಸಿನ ಹುಡುಗ(ಮಹಿಂದ)ನ ಆತ್ಮಸ್ಥೈರ್ಯ,ಕನಸ್ಸನ್ನು ಬೆನ್ನಟ್ಟಿ ಹೋಗುವ ಕೆಚ್ಚು, ಲೋಕದಿಂದ ಬೇರೆಯಾಗಿದ್ದರೂ ಸರಿ, ಹೃದಯದಿಂದ ಹತ್ತಿರವಾಗಿರಬೇಕೆಂಬ ಅವನ ನಿಲುವು, ಅವನ ಕಣ್ಣುಗಳಲ್ಲಿ ತುಂಬಿದ್ದ ಅಗಾಧ ಆತ್ಮವಿಶ್ವಾಸ. ಕಥಾ ನಾಯಕ ಶ್ರೀಕಾಂತ ಹಾಗೂ ನಾಯಕಿ ವಾಣಿ ಪಾತ್ರದಾರಿಗಳ ಮೂಲಕ ಈ ಎಲ್ಲಾ ಸನ್ನಿವೇಶಗಳ ಪರಿಚಯ ನಮಗಾಗುತ್ತದೆ. ಆರಂಭದಲ್ಲಿ ಅಮೇರಿಕಾದ ಗಗನಚುಂಬಿ ಕಟ್ಟಡಗಳ ಮೇಲೆ ನಡೆದ ವೈಮಾನಿಕ ದಾಳಿಯ ಪ್ರಸ್ತಾಪವಿದ್ದರೂ ಅದು ಸಾಂದರ್ಭಿಕ. ಕಥಾ ನಾಯಕ ಹಾಗೂ ನಾಯಕಿ ವಿದೇಶಕ್ಕೆ ತೆರಳಲು ಪ್ರಥಮವಾಗಿ ಕಾಯ್ದಿರಿಸಿದ್ದ ವಿಮಾನ ದಾಳಿಯಲ್ಲಿ ಅಹುತಿಯಾಗಿದ್ದದ್ದೇ ಆಗಿತ್ತು. ನಂತರ ಅವರು ವಿದೇಶ ಪ್ರಯಾಣದ ತಯಾರಿಯನ್ನು ಮುಂದೂಡಿದ್ದರಾದರೂ ವೈಮಾನಿಕ ದಾಳಿ ನಡೆಸಿದ ವಿಮಾನ ತಾವು ಟಿಕೆಟ್ ಕಾಯ್ದಿರಿಸಿದ್ದು ಎಂದು ಗೊತ್ತಾಗಿ, ಒಂದು ವೇಳೆ ಅದೇ ವಿಮಾನದಲ್ಲಿ ನಾವು ಪ್ರಯಾಣಿಸುತ್ತಿದ್ದರೆ? ಯೋಚಿಸಲೂ ಸಾಧ್ಯವಾಗದೆ ಆಗುವ ಅಭೂತಪೂರ್ವ ಅನುಭವ.
ಇಂಜಿನಿಯರಿಂಗ್ ಕ್ಷೇತ್ರದ ಉದ್ಯೋಗಕ್ಕಾಗಿ ಸ್ವದೇಶವನ್ನು ತೊರೆದು ಪ್ರತಿಭಾವಂತನೊಬ್ಬ ವಿದೇಶಕ್ಕೆ ಹೋಗುವ ಸಂದರ್ಭ. ಆತ ಅಲ್ಲಿ ಎದುರಿಸಬೇಕಾಗಿರುವ ಸವಾಲುಗಳು. ಅಲ್ಲಿನ ಪರಿಸರ ಜೀವನ ವ್ಯವಸ್ಥೆ ಎಲ್ಲಕ್ಕೂ ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ. ಇವೆಲ್ಲವನ್ನೂ ಕಥಾ ನಾಯಕ ಶ್ರೀಕಾಂತ ಹಾಗೂ ನಾಯಕಿ ವಾಣಿ ಪಾತ್ರದಾರಿಯ ಮುಖಾಂತರ ಲೇಖಕರು ಬಿಂಬಿಸಿದ ವಾಸ್ತವ ಪ್ರಪಂಚ ಹಾಗೂ ಕಲ್ಪನಾ ಪ್ರಪಂಚದ ಆಗುಹೋಗುಗಳ ಪ್ರತಿಬಿಂಬವೇ ದ್ವೀಪವ ಬಯಸಿ.
ಜಾಗತಿಕ ಲೋಕದ ಬದಲಾವಣೆಗಳ ಪರಿಣಾಮದಿಂದಾಗಿ ಐಟಿ-ಬಿಟಿ ಕ್ಷೇತ್ರದಲ್ಲಿ ಉಂಟಾಗುವ ಅಸ್ಥಿರತೆಯಿಂದಾಗಿ ಅಲ್ಲಿನ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವಂತಹ ಭಯದಿಂದ ಬದುಕುವ ಹಾಗೂ ಆ ಸವಾಲನ್ನೆದುರಿಸಿ ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಅವರು ಪಡುತ್ತಿರುವ ಯಾತನಾಮಯ ಸ್ಥಿತಿಯನ್ನು ಈ ಕಾದಂಬರಿ ಧ್ವನಿಸುತ್ತದೆ. ಜೀವನದೊಂದಿಗಿನ ಪ್ರತಿ ಮುಖಾಮುಖಿಯೂ ಸುಖ ಮತ್ತು ದುಖ:ಗಳ ಎರಡು ಮುಖಗಳನ್ನು ಹೊತ್ತಿರುತ್ತದೆ. ಪ್ರವಾಹದ ವಿರುದ್ದ ಈಜಿ ಹಣ್ಣಾಗುವುದಕ್ಕಿಂತ ಬಂದದ್ದನ್ನು ಬಂದಂತೆಯೇ ಸ್ವೀಕರಿಸಿ ಪ್ರವಾಹದ ದಿಕ್ಕಿನಲ್ಲೇ ತೇಲುತ್ತಾ ಹೋಗುವುದು ಹಿತಕರ ಎಂಬ ಯುವ ಮನಸ್ಸುಗಳ ನಿರ್ಧಾರ. ಇಷ್ಟು ವಿಶಾಲ ಲೋಕವಿರುವಾಗ ನಾವೊಂದು ನೀರಿನ ಗುಳ್ಳೆಯೊಳಗೆ ಬದುಕು ಸವೆಸಬೇಕೇ? ದಿನಬೆಳಗಾದರೆ ಆ ಗುಳ್ಳೆ ಒಡೆಯುತ್ತದೆಂಬ ಅಂಜಿಕೆಯಲ್ಲಿ ಕಾಲ ಕಳೆಯಬೇಕೇ? ಯಾವ ಕಾರಣಕ್ಕಾಗಿ ಪರಿಮಿತಿಯ ಜೀವನ ಸಾಗಿಸಬೇಕು? ಯಾವ ಕಾರಣಕ್ಕಾಗಿ ಉದ್ಯೋಗವೆನ್ನುವುದು ಮುಸ್ಸಂಜೆಯ ನೆರಳಿನಂತೆ ನಮಗಿಂತಲೂ ಉದ್ದವಾಗಿ ಬೆಳೆಯಬೇಕು?
ತಾನು ಹುಟ್ಟಿ ಬೆಳೆದ ಗೊಲ್ಲರಹಳ್ಳಿಯ ನೆನಪು,ಅಲ್ಲಿನ ಜೀವನ ಸ್ಥಿತಿ, ಗೊಲ್ಲರ ಹಳ್ಳಿಯ ಬದುಕನ್ನೇ ಮೂಲವಾಗಿಟ್ಟುಕೊಂಡು ಬರುತ್ತಿರುವ ನಾಯಕನ ಮಾತುಗಳು ಬಾವಾವೇಶಗಳು. ಬೇಲೂರು ಮತ್ತು ಚಿಕ್ಕಮಗಳೂರು ಮಧ್ಯೆ ಯಗಚಿ ನದಿಗೆ ಅಣೆಕಟ್ಟು ಕಟ್ಟಿದಾಗ ಆ ಹಳ್ಳಿಯ ಜನರೆಲ್ಲಾ ಸರಕಾರದಿಂದ ಪರ್ಯಾಯ ಪರಿಹಾರ ತೆಗೆದುಕೊಂಡು ಬೇರೆ ಊರಿಗೆ ಹೋಗಿ ನೆಲೆಸಿದರಾದರೂ ಶ್ರೀಕಾಂತನ ತಂದೆ ತನ್ನ ಕೊನೆಯ ಮಗನ ಜತೆ ಆ ಊರಲ್ಲೇ ಉಳಿದುಕೊಂಡರು. ಊರೆಲ್ಲಾ ಖಾಲಿಯಾಗಿ ಜನರಿಲ್ಲದೆ ಸ್ಮಶಾನದಂತಾದಾಗ ಇನ್ನೂ ಹದಿನಾಲ್ಕರ ಹರೆಯದ ಕೃಷ್ಣ ಅಲ್ಲಿರಲು ಭಯವಾಗಿ, ಜತೆಗೆ ವಿದ್ಯೆಯೂ ಆತನ ತಲೆಗೆ ಹತ್ತದೆ ಹೋದಾಗ,ಶಾಲೆಯಲ್ಲಿ ಗೆಳೆಯರು ಮಾಡುವ ಹಾಸ್ಯದಿಂದಾಗಿ ಅಲ್ಲಿಗೂ ಹೋಗಲು ಹಿಂಜರಿದು ಕೊನೆಗೊಂದು ದಿನ ಯಾರಿಗೂ ಹೇಳದೆ ಅಷ್ಟು ಸಣ್ಣ ವಯಸ್ಸಿನಲ್ಲೇ ಊರು ಬಿಟ್ಟು ಹೋಗುವ ಸಂದರ್ಭ. ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನವಾಗಿ ವ್ಯಕ್ತವಾಗಿದೆ.
ಬೆಂಗಳೂರಿನ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಶ್ರೀಕಾಂತನಿಗೆ ವಾಣಿಯ ಪರಿಚಯವಾಗಿ,ನಂತರ ಆಕೆಯನ್ನೇ ಮದುವೆಯಾಗಿ ಸಂಸಾರ ಮಾಡುವ ನಾಯಕನ ಜೀವನದ ತಿರುವು, ಆತ ಕೆಲಸ ಮಾಡುತ್ತಿದ್ದ ಹೈಪರ್ ಲಿಂಕ್ ಸಾಫ್ಟ್ವೇರ್ ಕಂಪೆನಿಯನ್ನು ಅಮೇರಿಕಾದ ಇನ್ಫೋವಾಯೇಜ್ ಕಂಪೆನಿ ಕೊಂಡದ್ದು, ಆತನನ್ನು ಅಮೇರಿಕಾದ ಆಫೀಸಿಗೆ ವರ್ಗಾವಣೆ ಮೇಲೆ ಬರುವಂತೆ ಕೇಳಿಕೊಂಡದ್ದು, ಕ್ರಿಸ್ಟೋಪರ್ ಗ್ರೆವೆಲ್ ಎನ್ನುವ ಮನುಷ್ಯ ಅವರು ಹೊರಡಬೇಕಾಗಿದ್ದ ವಿಮಾನ ಪ್ರಯಾಣದ ಹಾದಿಯನ್ನು ಬದಲಾಯಿಸಿದ್ದು ಎಲ್ಲವೂ ಒಂದರ ಹಿಂದೊಂದು ಸರಪಣಿಯ ಕೊಂಡಿಯಲ್ಲಿ ಅಂಟಿಕೊಂಡಂತೆ ನಡೆದ ಘಟನೆಗಳು ಓದುಗನನ್ನು ಭ್ರಮಾಲೋಕಕ್ಕೆ
ಕೊಂಡೊಯ್ಯತ್ತದೆ.
ಇಟಲಿಯ ಜಾನಪದ ಕಥೆ, ಅಲ್ಲಿನ ಯೊಸಿಮಿಟಿ ಎನ್ನುವ ನಗರದ ಪ್ರಕೃತಿ ಸೌಂದರ್ಯದಲ್ಲಿ ನಾಯಕ ನಾಯಕಿ ಪಡೆಯುವ ರಸಮಯ ಅನುಭವ, ನಿಸರ್ಗದ ಮಡಿಲಲ್ಲಿ ಮಗುವಾಗಿ ಕಳೆದ ದಿನಗಳು, ಲೈಫ್ ಆಫ್ ಪೈ ಕಥೆ, ಐಟಿಬಿಟಿ ಕಂಪೆನಿಗಳ ಅಚಾನಕ್ ಲೇ ಆಫ್‌ಗಳು,ಅಮೇರಿಕಾದ ಮೇಲಾದ ವೈಮಾನಿಕ ದಾಳಿಯಿಂದಾದ ಪರಿಣಾಮಗಳು, ವಿದೇಶದಲ್ಲಿದ್ದರೂ ಮಾತೃಭಾಷೆಯ ಅಭಿಮಾನದಿಂದಾಗಿಯೋ ಸಾಹಿತ್ಯ ಪ್ರೇಮದಿಂದಾಗಿಯೋ ಓದುತ್ತಿದ್ದ ಕಾದಂಬರಿಗಳು, ಪುಸ್ತಕಗಳು, ಗೊಲ್ಲರ ಹಳ್ಳಿಯಿಂದ-ಲಾಸ್ ಏಂಜಲೀಸ್‌ ವರೆಗಿನ ಸಂಬಂಧಗಳ ಕಥೆಗಳು ಓದುಗನ ಮನಸ್ಸನ್ನು ತಲ್ಲಣಗೊಳಿಸುವಂತಿದೆ. ವರ್ತಮಾನದ ಜೀವನಶೈಲಿಯ ವಾಸ್ತವತೆಯನ್ನು ಇಂಚು-ಇಂಚಾಗಿ ಬಿಂಬಿಸುವ ಕಾದಂಬರಿ "ದ್ವೀಪವ ಬಯಸಿ", ಲೇಖಕರು ಕಾದಂಬರಿಯ ಮೂಲಕ ಹೇಳಹೊರಟಿರುವ ವಾಸ್ತವದ ವಿಚಾರಗಳು ಓದುಗನ ಸ್ಮೃತಿಪಟಲದಲ್ಲಿ ಅಚ್ಚಾಗಿ ಮೂಡುವುದರಲ್ಲಿ ಸಂಶಯವಿಲ್ಲ.