ಕೆರೆಯಲಿ ಚಿನ್ನ ಕೆರೆಯೇ ಚಿನ್ನ-

ಕೆರೆಯಲಿ ಚಿನ್ನ ಕೆರೆಯೇ ಚಿನ್ನ-

ಪುಸ್ತಕದ ಲೇಖಕ/ಕವಿಯ ಹೆಸರು
ನಾಗೇಶ್ ಹೆಗಡೆ.
ಪ್ರಕಾಶಕರು
ಭೂಮಿ ಬುಕ್ಸ್
ಪುಸ್ತಕದ ಬೆಲೆ
50 ರೂ.

ಪರಿಸರ ಪತ್ರಕರ್ತ ಹಾಗೂ ವಿಜ್ಞಾನ ಅಂಕಣಕಾರ ನಾಗೇಶ ಹೆಗಡೆಯವರ ಈ ಕೃತಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನಿತ ಕೃತಿ. ೨೦ನೇ ಶತಮಾನದ ಸರ್ವಶ್ರೇಷ್ಠ ಮಕ್ಕಳ ಕತೆಗಳ ಸಾಲಿಗೆ ಸೇರ್ಪಡೆಯಾಗಿದೆ.

ಮನುಷ್ಯರಿಗೆ ಕೊಳವೆಬಾವಿಗಳು ಪರಿಚಿತವಾಗುವುದಕ್ಕಿಂತ ಮುಂಚೆ ಕೆರೆಗಳೇ ನೀರಿನಾಧಾರವಾಗಿದ್ದವು. ಜೀವನ ಶೈಲಿ ಬದಲಾಗುತ್ತಿದ್ದಂತೆ ಮನುಷ್ಯರು ಮಾಡುವ ಪರಿಸರ ಮಾಲಿನ್ಯಗಳು ಹೆಚ್ಚಾದುವು. ತೊಂಡೂರಿನ ಜನರ ಜೀವನಾಧಾರವಾಗಿದ್ದ ಹಾಗೂ ಕೆರೆಯಲ್ಲಿ ವಾಸಿಸುತ್ತಿದ್ದ ಅಸಂಖ್ಯಾತ ಜೀವಿಗಳ ವಾಸಸ್ಥಾನವಾದ ತೊಂಡೂರಿನ ಕೆರೆಯನ್ನು ಮನುಷ್ಯರು ಮಾಡುವ ಮಾಲಿನ್ಯದಿಂದ ಹೇಗಾದರೂ ರಕ್ಷಿಸಬೇಕೆಂಬುದು ಕೆರೆಯ ಜಲಚರ ಸಾಮ್ರಾಜ್ಯದ ಮುಖ್ಯ ಉದ್ದೇಶವಾಗಿತ್ತು. ಕೆರೆಯಲ್ಲಿನ ನೀರು ಕಲುಷಿತಗೊಂಡು, ಹೂಳು ತುಂಬಿ, ಇಡೀ ಕೆರೆಯೇ ಬತ್ತಿ ಹೋಗುವ ಸಂದರ್ಭ ಎದುರಾದಾಗ ಕೆರೆಯಲ್ಲಿನ ಜೀವಿಗಳೆಲ್ಲಾ ಒಟ್ಟು ಸೇರಿ ಸಭೆ ಕರೆದು, ಈ ಸಮಸ್ಯೆಗೆ ಪರಿಹಾರ ಹುಡುಕುತ್ತವೆ. ಈ ಜಲಚರಗಳ ಅತಿ ಬುದ್ದಿವಂತಿಕೆಯ ಯೋಜನೆಯಿಂದಾಗಿ ಆಗುವ ಎಡವಟ್ಟುಗಳು, ಮನುಷ್ಯರನ್ನು ಕೆರೆಯಿಂದ ಓಡಿಸಲು ಮಾಡುವ ತಂತ್ರ -ಕುತಂತ್ರಗಳು, ಕೀಟಲೆ, ತಮಾಷೆಗಳು ಹೀಗೆ ಮಕ್ಕಳ ಮಟ್ಟದಲ್ಲಿ ಹೆಣೆದ ಕಥೆ ಇದು. ಕಥೆಗಳೆಂದರೆ ಮಕ್ಕಳಿಗೆ ಆಸಕ್ತಿಯ ವಿಷಯ. ಪಾಠವನ್ನು ಕೇಳುವುದಕ್ಕಿಂತ ಹೆಚ್ಚು ಕಿವಿಗೊಟ್ಟು ಕಥೆಯನ್ನು ಕೇಳುತ್ತಾರೆ, ಬೇಗನೆ ಅರ್ಥೈಸಿಕೊಳ್ಳುತ್ತಾರೆ. ಮಕ್ಕಳಲ್ಲಿ ಕೆರೆಯ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ರಚಿತವಾದ ಕಥೆ. ಜೀವಸಂಕುಲದ ಬದುಕಿಗೆ ಆಧಾರವಾಗಬೇಕಿದ್ದ ಕೆರೆಯನ್ನು ಮನುಷ್ಯರು ಹಾಳುಗೆಡವುತ್ತಿರುವ ವಿಧಾನವನ್ನು ವೈಜ್ಞಾನಿಕ ವಿವರಣೆ ಹಾಗೂ ಪರಿಹಾರ ಯತ್ನಗಳನ್ನು ನೀಡುತ್ತಿರುವ ಈ ಕಥೆ ಪ್ರಸ್ತುತವೆನಿಸಿದೆ. ಏಡಿರಾಯ ಭಟ್ಟರನ್ನು ಓಡಿಸಿದ್ದು, ಚಿಪ್ಪು ಹಂದಿಯ ಬೆಪ್ಪು ಸಾಹಸ, ಕಾವಲುಗಾರರು ಕಂಗಾಲು,ಗೆದ್ದಲು ಸೈನ್ಯದ ಅಪ್ಪಿಕೋ ಪ್ರಸಂಗ ಇವುಗಳು ಅತ್ಯಂತ ತಮಾಷೆಯಾಗಿ ಮೂಡಿ ಬಂದಿವೆ. ಕೆರೆಯ ಆಸುಪಾಸಿನಲ್ಲಿ ವಾಸಿಸುವ ಕಪ್ಪೆ,ಆಮೆ,ಏಡಿ,ಬಕ,ನೀರೊಳ್ಳೆ ಹಾವು, ಮುಂಗುಸಿ,ಜಿಗಣೆ ಮುಂತಾದವುಗಳು ಒಟ್ಟಾಗಿ ಸೇರಿ ಮಾಡುವ ಉಪಾಯಗಳು, ಅದರಿಂದಾಗುವ ಫಜೀತಿಗಳು ಆದರೂ ಛಲಬಿಡದೆ ತಮ್ಮ ಕೆರೆಯನ್ನು ಉಳಿಸಿಕೊಳ್ಳಲು ಮಾಡುವ ಹರಸಾಹಸಗಳು ಓದುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಎಲ್ಲವನ್ನೂ ಸ್ವಂತವಾಗಿಸಿಕೊಳ್ಳಲು ಯತ್ನಿಸುತ್ತಿರುವ ಬುದ್ದಿಜೀವಿಯಾದ ಮನುಷ್ಯನನ್ನೇ ಈ ಜಲಚರಗಳು ತಮ್ಮ ಯುಕ್ತಿಯನ್ನುಪಯೋಗಿಸಿ ಹೋರಾಡಿ ಗೆದ್ದವು. ಕೊನೆಗೆ ತಮ್ಮ ವಾಸಸ್ಥಾನವಾದ ಕೆರೆಯನ್ನು ಮನುಷ್ಯನಿಂದ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾದವು. ಪರಿಸರ ಸಂರಕ್ಷಣೆಯ ಸಂದೇಶವನ್ನು ಹೊತ್ತ ಈ ಕಥೆಗಳಲ್ಲಿ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಅಳವಡಿಸಿ, ಸೊಗಸಾದ ಕಥೆಗಳ ಮೂಲಕ ಅವರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ.