ಓ ಮನಸೆ
ಕವನ
ಕೆದಕದಿರು ಮನಸೆ|
ಕಾಲಗರ್ಭದಲಿ ಕುಸಿದು ಕಳೆದಿಹ ನೆನಪ
ಕಂಬನಿಯ ಕರಿನೆರಳು ಕವಿದ ಕಹಿ ಕನಸುಗಳ
ಬೆದಕಿ ಕೆದಕದಿರು ಮನಸೆ|
ಕೆಡಿಸದಿರು ಮನಸೆ|
ಮನದಿ ತುಂಬಿದ ಪ್ರೀತಿ ವಿಶ್ವಾಸಕ್ಕೆ
ಹೃದಯ ತುಂಬಿದ ನಂಬಿಕೆಯ ನೆಂಟಸ್ತಿಕೆಗೆ
ಸಂಶಯದ ವಿಷ ಉಣಿಸಿ ಕೆಡಿಸದಿರು ಮನಸೆ |
ಕೆರಳದಿರು ಮನಸೆ|
ಫಲಿಸದ ಆಸೆಗಳ ಮೊಳೆಸಿ
ಪೊಳ್ಳು ಕನಸುಗಳ ಹೊಳೆಸಿ
ಈಡೇರದ ಬಯಕೆಗಾಗಿ ಕೆರಳದಿರು ಮನಸೆ|
ಕರುಬದಿರು ಮನಸೆ|
ನಿನಗಿಲ್ಲದ ಸೌಭಾಗ್ಯಕ್ಕಾಗಿ
ನೀ ಪಡೆಯದ ಬದುಕಿಗಾಗಿ
ಕುತ್ಸಿತ ಕಾರಣವ ತೆಗೆದು ಕರುಬದಿರು ಮನಸೆ|
ಕಂಗೆಡದಿರು ಮನಸೆ|
ಕಡಿದಾದ ಇರುಕಿರುವ ಬದುಕ ದಾರಿಯ ಕಂಡು
ಕ್ಷಣ ಕ್ಷಣಕು ಕುಣಿಯುತಿಹ ಭೂತ ಭವಿಷ್ಯವ ಕಂಡು
ಬದುಕ ನಗ್ನತೆಯ ಭಯಕೆ ಕಂಗೆಡದಿರು ಮನಸೆ|