ವಿವೇಕಾನಂದ ಜಯಂತಿ ಆಚರಣೆ -ಒಂದು ಸ್ಮರಣೆ.
ಪದವಿ ತರಗತಿಯಲ್ಲಿರುವಾಗ ಜನವರಿ ತಿಂಗಳು ಬಂತೆಂದರೆ ನಮಗೆ ಎಲ್ಲಿಲ್ಲದ ಸಂತಸ. ಅದಕ್ಕೆ ಹಲವಾರು ಕಾರಣಗಳು. ಹೊಸ ವರ್ಷದ ಸಂಭ್ರಮ, ಸಂಕ್ರಾಂತಿ ಹಬ್ಬ, ಗಣರಾಜ್ಯ ದಿನ, ಸ್ವಾಮಿ ವಿವೇಕಾನಂದ ಜಯಂತಿ ಹೀಗೆ ಹಲವಾರು ಸಂಭ್ರಮಾಚರಣೆಗಳು.
ನಾನು ಪದವಿ ಓದಿದ ಕಾಲೇಜಿನ ಹೆಸರೇ "ವಿವೇಕಾನಂದ ಕಾಲೇಜು". ಇಲ್ಲಿ ಕಾಲೇಜಿನ ವಾರ್ಷಿಕೋತ್ಸವ ಸಂಭ್ರಮಾಚರಣೆ ಹಾಗೂ ವಿವೇಕಾನಂದರ ಹುಟ್ಟುಹಬ್ಬವನ್ನು ಬಹಳ ಸಂಭ್ರಮದಿಂದ ಜತೆಯಾಗಿಯೇ ಆಚರಿಸುತ್ತಿದ್ದೆವು. ಸಂಸ್ಕೃತಿ ಆಚರಣೆಗಳಿಗೆ ಹೆಸರಾದ ಕಾಲೇಜಾಗಿತ್ತು. ಅಂದು ದಿನಾ ಸಮವಸ್ತ್ರ ಧರಿಸಿ ಕಾಲೇಜಿಗೆ ಬರಬೇಕು ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಆಗಿನ ಪ್ರಾಂಶುಪಾಲರು ಜಾರಿಗೆ ತಂದಾಗ, ಬಣ್ಣ ಬಣ್ಣದ ಬಟ್ಟೆಗಳನ್ನು ಹಾಕುವ ಸ್ವಾತಂತ್ರ್ಯವನ್ನೂ ಕಿತ್ತುಕೊಂಡರಲ್ಲ ಎಂಬ ಭಾವನೆ ಬಂದಿತ್ತಾದರೂ, ಶ್ರೀಮಂತ ಬಡವ ಎಂಬ ಭೇದ-ಬಾವ ಬರಬಾರದೆಂದು ಒಟ್ಟಿಗೆ ಕಲಿಯುತ್ತಿರುವವರು ಎಲ್ಲರೂ ಸಮಾನರೆಂಬ ಅವರ ಯೋಚನೆ ಒಪ್ಪುವಂತಿತ್ತು.
ಹೊಸ ವರುಷದ ಶುಭಾರಂಭದಲ್ಲೇ ವಿದ್ಯಾರ್ಥಿಗಳಿಗೆ ಅತ್ಯಂತ ಸಂಭ್ರಮ ತರುವಂತಹ ಕಾಲೇಜು ವಾರ್ಷಿಕೋತ್ಸವದ ತಯಾರಿ, ಜತೆಗೆ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಗೆ ಸಿದ್ಧತೆ ಇವೆರಡೂ ಜತೆಯಾಗಿಯೇ ಸಾಗುತ್ತಿದ್ದವು. ನಮ್ಮ ತರಗತಿಯ ಕನ್ನಡ ಪ್ರಾಧ್ಯಾಪಕರೊಬ್ಬರು, ನಾವೆಲ್ಲಾ ವೈಯಕ್ತಿಕವಾಗಿ ನಮ್ಮ ಹುಟ್ಟುಹಬ್ಬಗಳನ್ನು ಬಹಳ ಅದ್ದೂರಿಯಾಗಿ ಆಚರಿಸುತ್ತಿರುತ್ತೇವೆ. ಇದು ಕೇವಲ ನಮ್ಮ ತರಗತಿ, ಸ್ನೇಹಿತರು ಹಾಗೂ ಕುಟುಂಬಕ್ಕೆ ಸೀಮಿತವಾಗಿರುತ್ತದೆ. ಆದರೆ ರಾಷ್ಟ್ರಕ್ಕೇ ಮಾದರಿಯಾದಂತಹ ವಿವೇಕಾನಂದರ ಜನ್ಮದಿನಾಚರಣೆಯನ್ನು ನಾವೆಲ್ಲರೂ ಜತೆಗೂಡಿ ಆಚರಿಸುತ್ತೇವೆ ,ಅವರ ಚಿಂತನೆ,ಆದರ್ಶ, ಇವೆಲ್ಲವೂ ನಮಗೆ ಮಾದರಿ ಎನ್ನುತ್ತಿದ್ದರು. "ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ, ಯುವಶಕ್ತಿಯೇ ರಾಷ್ಟ್ರಶಕ್ತಿ" ಎಂದು ಯುವಜನತೆಯನ್ನು ಹುರಿದುಂಬಿಸುತ್ತಾ, ಚಿಕಾಗೋ ಭಾಷಣದಲ್ಲಿ - ಅಮೇರಿಕಾದ ನನ್ನ ಸಹೋದರ ಸಹೋದರಿಯರೇ" ಎಂದು ಹೇಳಿ ಇಡೀ ವಿಶ್ವಕ್ಕೇ ಭಾರತದ ಸಂಸ್ಕೃತಿಯನ್ನು ಸಾರಿ ಹೇಳಿದ ಮಹಾತ್ಮ.
ನಮ್ಮ ಕಾಲೇಜಿನ ಪ್ರವೇಶ ದ್ವಾರದ ಬಳಿಯೇ ಇರುವ ವಿವೇಕಾನಂದರ ಬಹುದೊಡ್ಡ ಪ್ರತಿಮೆ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿರುವ ಸೌಮ್ಯ ಮೂರ್ತಿಯಂತಿದೆ. ಇವರ ಆದರ್ಶ, ಸಾಧನೆಗಳೇ ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಚಿಲುಮೆ. ವಿವೇಕಾನಂದ ಜಯಂತಿ ಪ್ರಯುಕ್ತ ಕಾಲೇಜಿನಲ್ಲಿ ಆನೇಕ ಸಾಂಸ್ಕೃತಿಕ, ಆಟೋಟ ಸ್ಪರ್ಧೆಗಳು ಹಾಗೂ ಇನ್ನಿತರ ಕ್ರಿಯಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಸ್ಪರ್ಧೆಗಳಲ್ಲಿ ಗೆಲ್ಲುವುದಕ್ಕಿಂತ "ಭಾಗವಹಿಸುವಿಕೆಗೆ" ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದುದು ಇದರ ವಿಶೇಷ. ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಾಗಿದ್ದುದರಿಂದ ಪ್ರತಿಯೊಂದು ಕಾರ್ಯಕ್ರಮಗಳ ಜವಾಬ್ದಾರಿಗಳು ನಮ್ಮ ತಂಡದಲ್ಲಿ ಹೆಚ್ಚಾಗಿತ್ತು.
ವಿವಿಧ ರೀತಿಯ ಕಾರ್ಯಕ್ರಮಗಳಿಂದ ವಿವೇಕಾನಂದ ಜಯಂತಿಯನ್ನು ಆಚರಿಸಲಾಗುತ್ತಿತ್ತು. ಈಗಲೂ ಈ ಆಚರಣೆ ಬಹಳ ಸಂಭ್ರಮದಿಂದಲೇ, ಅರ್ಥಪೂರ್ಣವಾಗಿ ನಡೆಯುತ್ತಿದೆ. ಅವರವರ ಸಾಂಪ್ರದಾಯಿಕ ಉಡುಪು ಅಂದಿನ ವಿಶೇಷತೆ. ಯಾವುದೇ ಆಧುನಿಕ ಉಡುಗೆಗಳನ್ನು ಯಾರೂ ಧರಿಸುತ್ತಿರಲಿಲ್ಲ. ಅದೊಂದು ರೀತಿಯ ಹಬ್ಬದ ವಾತಾವರಣವನ್ನೇ ಕಲ್ಪಿಸುತ್ತಿತ್ತು. ಗಣ್ಯರ ಭಾಷಣ, ಪ್ರಾಧ್ಯಾಪಕರುಗಳ ಹಿತನುಡಿಗಳು, ದೇಶ ಭಕ್ತಿಯನ್ನು ಸಾರುವಂತಹ ಕಾರ್ಯಕ್ರಮಗಳು ಯುವ ಮನಸ್ಸುಗಳಲ್ಲಿ ದೇಶ ಭಕ್ತಿಯನ್ನು ಜಾಗೃತಗೊಳಿಸಲು ಒಂದು ಉತ್ತಮ ಅವಕಾಶವಾಗಿ ರೂಪುಗೊಳ್ಳುತ್ತಿತ್ತು. ಇಂತಹ ಅರ್ಥಪೂರ್ಣ ಆಚರಣೆಗೆ ಇಂದು "150ರ ಸಂಭ್ರಮ".
ನಮ್ಮ ಕಾಲೇಜಿನಲ್ಲಿ ಇಂದು ಆಚರಿಸುತ್ತಿರುವ ವಿವೇಕಾನಂದ ಜಯಂತಿ -"150ರ ಸಂಭ್ರಮ"ದ ಕರೆಯೋಲೆಯಿದ್ದರೂ ಹೋಗಲಾಗುತ್ತಿಲ್ಲ. ಅರ್ಥಪೂರ್ಣ ಆಚರಣೆಯ ಸವಿ ನೆನಪು ಮಾತ್ರ ಎಂದಿಗೂ ಮನದಲ್ಲಿ ಶಾಶ್ವತ. ಶೈಕ್ಷಣಿಕ ಕಲಿಕೆಯ ಜತೆಗೆ ಜೀವನ ಪಾಠ ಹಾಗೂ ನೂರಾರು ಸುಂದರ ಅನುಭವಗಳ ನೆನಪುಗಳು ಮನದಲ್ಲಿ ಅಚ್ಚಳಿಯದಂತೆ ಮಾಡಿದ ವಿವೇಕಾನಂದ ಕಾಲೇಜಿಗೆ ಶಿರಸಾ ವಂದನೆಗಳು.
ಚಿತ್ರ ಕೃಪೆ: http://www.ovguide.com/vivekananda-degree-college,-puttur-9202a8c04000641f8000000007330cd8