ಸ್ಮಾರ್ಟ್ ಫೋನ್ ಗೆ ಉಬುಂಟು ಆಪರೇಟಿಂಗ್ ವ್ಯವಸ್ಥೆ

ಸ್ಮಾರ್ಟ್ ಫೋನ್ ಗೆ ಉಬುಂಟು ಆಪರೇಟಿಂಗ್ ವ್ಯವಸ್ಥೆ

ಸ್ಮಾರ್ಟ್ ಫೋನ್ ಗೆ  ಉಬುಂಟು ಆಪರೇಟಿಂಗ್ ವ್ಯವಸ್ಥೆ
ಉಬುಂಟು ಕೆನೋನಿಕಲ್ ಕಂಪೆನಿಯ ಮುಕ್ತ ಆಪರೇಟಿಂಗ್ ವ್ಯವಸ್ಥೆ.ಇದುವರೆಗೆ ಈ ಆಪರೇಟಿಂಗ್ ವ್ಯವಸ್ಥೆ ಡೆಸ್ಕ್‌ಟಾಪ್,ಸರ್ವರ್‌ಗಳಿಗೇ ಸೀಮಿತವಾಗಿತ್ತು.ಇದೀಗ ಉಬುಂಟುವಿನ ಸ್ಮಾರ್ಟ್‌ಫೋನ್ ಆಪರೇಟಿಂಗ್ ವ್ಯವಸ್ಥೆಯೂ ಲಭ್ಯವಾಗುತ್ತದೆ.ವಿಶೇಷವೆಂದರೆ,ಒಂದೇ ಆಪರೇಟಿಂಗ್ ವ್ಯವಸ್ಥೆಯು,ಅಳವಡಿಸಿದ ಸಾಧನಕ್ಕೆ ಸರಿಯಾಗಿ ನಿರ್ವಹಿಸಲು ಸಮರ್ಥವಾಗುತ್ತದೆ. ಪ್ರತ್ಯೇಕವಾಗಿ,ಬೇರೆ ಬೇರೆ ಸಾಧನಗಳಿಗೆ ಆಪರೇಟಿಂಗ್ ವ್ಯವಸ್ಥೆಯ ಬೇರೆ ಬೇರೆ ಆವೃತ್ತಿಗಳನ್ನು ಉಬುಂಟು ಒದಗಿಸಿಲ್ಲ. ಒಂದೇ ವ್ಯವಸ್ಥೆಯು ಸಾಧನಕ್ಕೆ ಸರಿಯಾಗಿ ಕೆಲಸ ಮಾಡುತ್ತದೆ. ಹಾಗಾಗಿ ಸ್ಪರ್ಶಸಂವೇದಿ ತೆರೆಯಿರುವ ಸಾಧನದಲ್ಲಿ ಉಬುಂಟು,ಅದನ್ನು ಬಳಸಲು ಅನುವು ಮಾಡುತ್ತದೆ. ಹಾಗೆಯೇ ಡೆಸ್ಕ್‌ಟಾಪ್ ಕಂಪ್ಯೂಟರಿನಲ್ಲದು ಇಲ್ಲದಿದ್ದರೆ,ಕೀಲಿಮಣೆ,ಮೌಸ್ ಸಾಧನಗಳ ಬಳಕೆಗೆ ಸ್ಪಂದಿಸುತ್ತದೆ. ಉಬುಂಟುವು ಗೂಗಲ್ ಆಂಡ್ರಾಯಿಡ್,ಆಪಲ್‌ನ ಇಓಎಸ್,ಮುಂಬರಲಿರುವ ಮೊಜಿಲ್ಲಾದ ಫೈರ್‌ಫಾಕ್ಸ್ ಆಪರೇಟಿಂಗ್ ವ್ಯವಸ್ಥೆಗಳ ಜತೆ ಸ್ಪರ್ಧಿಸಬೇಕಿದೆ.

ಹೊಸವರ್ಷದಲ್ಲಿ ಏನು ಹೊಸತು?
ಲಾಸ್‌ವೇಗಸ್‌ನಲ್ಲಿ ಮುಂದಿನವಾರ ತಂತ್ರಜ್ಞಾನದ ಬಗೆಗಿನ ಪ್ರದರ್ಶನಕ್ಕೆ ಏರ್ಪಾಡುಗಳು ನಡೆದಿವೆ. ಇದರಲ್ಲಿ2013ರಲ್ಲಿ ಹೊಸತಾಗಿ ಯಾವ ಸಾಧನಗಳು ಬರಬಹುದು ಎನ್ನುವುದರ ಮುನ್ಸೂಚನೆ ಸಿಗುತ್ತದೆ. ಸ್ಮಾರ್ಟ್‌ಫೋನುಗಳ ಮಟ್ಟಿಗೆ ಹೇಳುವುದಾದರೆ ಚೀನಾದ ಹ್ಯುವೈ,ಜಪಾನಿನ ಸೋನಿ ಕಂಪೆನಿಗಳ ಸ್ಮಾರ್ಟ್‌ಫೋನ್ ಪ್ರದರ್ಶನಗೊಳ್ಳುವುದು ಖಚಿತವಾಗಿದೆ. ಆದರೆ,ಆಪಲ್‌ ಹೊಸ ಐಪ್ಯಾಡ್ ಮಿನಿ ಪರಿಚಯಿಸಲಿದೆ ಎನ್ನುವ ವದಂತಿಗಳಿದ್ದರೂ,ಖಚಿತ ಮಾಹಿತಿ ಲಭ್ಯವಿಲ್ಲ. ಕೊರಿಯಾದ ಕಂಪೆನಿಗಳಾದ ಸ್ಯಾಮ್‌ಸಂಗ್,ಎಲ್ಜಿಗಳು ಓ ಎಲ್ ಇ ಡಿ ಟಿವಿಗಳನ್ನು ಪ್ರದರ್ಶಿಸಬಹುದು ಎಂದು ವರದಿಗಳಿವೆ. ದೊಡ್ಡಗಾತ್ರದ ಮೂರು ಆಯಾಮದ ದೃಶ್ಯ ಪ್ರದರ್ಶಿಸುವ ಟಿವಿಯ ಪ್ರದರ್ಶನ ಇರಬಹುದು. ಅಲ್ಟ್ರಾ ಹೈಡೇಫಿನಿಶನ್ ಟಿವಿಗಳ ಪ್ರದರ್ಶನವಿರುವ ಸಾಧ್ಯತೆಯಿದೆ.ಇನ್ನು ಪಾರದರ್ಶಕ ಟಿವಿ,ಮಡಚಲಾಗುವ ತೆರೆಯ ಟಿವಿಗಳೂ ನಿರೀಕ್ಷಿತವಾದರೂ ಈ ವರ್ಷ ಅಂತಹ ಟಿವಿಗಳು ಮಾರುಕಟ್ಟೆಗೆ ಬರುವ ಮಾತಂತೂ ಇಲ್ಲ. ಧರಿಸುವ ಕಂಪ್ಯೂಟರ್‌ನ ಕೆಲವು ಮಾದರಿಗಳೂ ಪ್ರದರ್ಶಿತವಾಗುವ ಸಾಧ್ಯತೆಯಿದೆ. ಇಂಟರ್ನೆಟ್ ಸಂಪರ್ಕವಿರುವ ಕನ್ನಡಕ,ವಾಚ್ ಇಂತಹ ಸಾಧನಗಳು ನಾವಿರುವ ಪರಿಸರಕ್ಕೆ ಹೊಸ ಉಪಯುಕ್ತ ಮಾಹಿತಿಯನ್ನು ಸೇರಿಸಿ ಒದಗಿಸುವ ಆಗ್ಮೆಂಟೆಡ್ ರಿಯಾಲಿಟಿ ವ್ಯವಸ್ಥೆಗಳ ಮಾದರಿಗಳು ಪ್ರದರ್ಶಿತವಾದಾವು. ಸ್ವಂತವಾಗಿ ಚಲಿಸಬಲ್ಲ,ಹೋಗಬೇಕಾದ ಸ್ಥಳಕ್ಕೆ ಸಾಗುವ ರಸ್ತೆಯನ್ನು ಗೂಗಲ್ ಮ್ಯಾಪ್ ಮೂಲಕ ತಿಳಿದುಕೊಂಡು ಸಾಗುವ ಸ್ವಯಂಚಾಲಿ ವ್ಯವಸ್ಥೆಯಿರುವ ಕಾರ್‌ಗಳ ಪ್ರದರ್ಶನ ನಿರೀಕ್ಷಿತ. ಸುರಕ್ಷಿತ ಲೇನ್ ಬದಲಾವಣೆಯ ಸಾಮರ್ಥ್ಯ ಪಡೆದ ಕಾರುಗಳ ಮಾದರಿಗಳಿಲ್ಲಿರಬಹುದು. ಸ್ಪರ್ಶ ಸಂವೇದಿ ಕಂಪ್ಯೂಟರುಗಳ ಜತೆ,ಧ್ವನಿಗೆ ಸ್ಪಂದಿಸುವ ಕಂಫ್ಯೂಟರುಗಳ ಪ್ರದರ್ಶನದ ಸಾಧ್ಯತೆಯಿದೆ. ಇದೇ ವೇಳೆ ಎಲ್ಜಿ ಕಂಪೆನಿಯು ಐವತ್ತೈದು ಇಂಚಿನ ಒ ಎಲ್ ಇ ಡಿ ಟಿವಿಗಳನ್ನು ಮಾರಾಟಕ್ಕೆ ಬಿಡುಗಡೆ ಮಾಡಿದೆ.

ವಿಕಿಪೀಡಿಯಾಕ್ಕೆ ಸಂಪಾದಕರ ಕೊರತೆ
ವಿಕಿಪೀಡಿಯಾವೆನ್ನುವುದು ಜನರ ಸಹಭಾಗಿತ್ವದಲ್ಲಿ ಅಭಿವೃಧ್ಧಿಯಾಗುವ ವಿಶ್ವಕೋಶವೆನ್ನುವುದು ಜನಜನಿತವಾದ ವಿಷಯ. ಹಲವು ಭಾಷೆಗಳಲ್ಲಿ ಈ ವಿಶ್ವಕೋಶದ ಆವೃತ್ತಿಗಳು ಇಂಟರ್ನೆಟ್‌ನಲ್ಲಿ ಲಭ್ಯವಿವೆ. ಗುಂಪಿಗೆ ಗುತ್ತಿಗೆಯೆನ್ನಾಬಹುದಾದ ನವೀನ ಸಹಕಾರ ತತ್ತ್ವವೇ ಇದಕ್ಕೆ ಮೂಲಾಧಾರ. ನೋಂದಾಯಿಸಿದ ಜನರು ವಿಕಿಪೀಡಿಯಾಕ್ಕೆ ಬರಹಗಳನ್ನು ಸೇರಿಸಬಹುದು. ಆದರೆ ವಿಷಯದ ಆಯ್ಕೆ,ಬರೆಯುವ ರೀತಿ ಬಗ್ಗೆ ಬಿಗಿಯಾದ ನಿಯಮಗಳನ್ನು ಅಳವಡಿಸಲಾಗಿದೆ. ಸತ್ಯಸಂಗತಿಗಳನ್ನು ಇದರಲ್ಲಿ ಸೇರಿಸಬೇಕೇ ವಿನ: ನಮ್ಮ ಅನಿಸಿಕೆ,ಕಲ್ಪನೆ,ಉತ್ಪ್ರೇಕ್ಷೆಗಳಿಗೆ ಇಲ್ಲಿ ಸ್ಥಾನವಿಲ್ಲ. 2007ರಲ್ಲಿ ಐವತ್ತುಸಾವಿರದ ಆರುಸಾವಿರವಿದ್ದ ಸಂಪಾದಕರ ಸಂಖ್ಯೆ ಕಳೆದವರ್ಷಾಂತ್ಯಕ್ಕೆ ಮೂವತ್ತೈದುಸಾವಿರಕ್ಕೆ ಇಳಿದಿದೆ. ಮಿನ್ನೆಸೋಟಾ ವಿಶ್ವವಿದ್ಯಾಲಯದವರು ಕೈಗೊಂಡ ಸಮೀಕ್ಷೆಗಳು ಈ ವಿಷಯವನ್ನು ಖಚಿತಪಡಿಸಿವೆ. ಮಾಹಿತಿಯ ವಿಶ್ವಾಸಾರ್ಹತೆ,ಖಚಿತತೆಯನ್ನು ಉಳಿಸಲು ಮಾಡಿರುವ ಹಲವು ನಿಯಮಗಳು,ಹೊಸ ಬರಹಗಳನ್ನು ತಿರಸ್ಕರಿಸುವ ಕಾರಣ ಹೊಸ ಸಂಪಾದಕರಿಗೆ ನಿರಾಶೆ ಮೂಡಿಸಿ, ಕಾರಣ,ಅವರು ವಿಕಿಪೀಡಿಯಾದಿಂದ ದೂರವಾಗುವಂತೆ ಮಾಡುವುದೇ ಈ ಹಿನ್ನಡೆಗೆ ಕಾರಣವಾಗಿದೆ. ಈಗ ಗಣಕಾಧಾರಿತ ತಂತ್ರಾಂಶಗಳನ್ನು ಸಂಪಾದನಾ ಕಾರ್ಯದಲ್ಲಿ ತೊಡಗಿಸಿರುವುದರಿಂದ ನಿಯಮಗಳು ಬಿಗಿಯಾಗಿ ಪಾಲಿಸಲ್ಪಡುವುದರಿಂದ,ಬರಹಗಳು ತಿರಸ್ಕೃತವಾಗುವುದೂ ಹೆಚ್ಚು. ಇನ್ನು ಭಾರತೀಯ ಭಾಷೆಗಳ ಪೈಕಿ ಕನ್ನಡ ವಿಕಿಪೀಡಿಯಾವು ದಶಮಾನೋತ್ಸವ ಆಚರಿಸಿದೆ. ಆದರೆ ಇಲ್ಲಿ ಸಂಪಾದಕರುಗಳ ಸಂಖ್ಯೆ ಮೂವತ್ತರಷ್ಟಿರಬಹುದು. ಒಟ್ಟು ಹತ್ತುಸಾವಿರ ಬರಹಗಳಷ್ಟೇ ಕನ್ನಡ ವಿಕಿಪೀಡಿಯಾಕ್ಕೆ ಸೇರಿವೆ. ಇಂಗ್ಲೀಷ್ ವಿಕಿಪಿಡಿಯಾದ ಬರಹಗಳನ್ನು ಕನ್ನಡಕ್ಕೆ ಅನುವಾದಿಸುವ ಮೂಲಕ ಕನ್ನಡ ವಿಕಿಪೀಡಿಯಾವನ್ನು ಬೆಳೆಸುವುದು ಸುಲಭ. ಹೆಚ್ಚು ಸಂಪಾದಕರು ಇದರಲ್ಲಿ ತೊಡಗಿಕೊಂಡರೆ,ಕನ್ನಡ ವಿಕಿಪೀಡಿಯಾವು ಬೆಳೆದೀತು.

ಸೇಫ್‌ಟ್ರ್ಯಾಕ್:ಚಲನವಲನ ಪತ್ತೆಗೆ ತಂತ್ರಾಂಶ
ಕಾಲೇಜಿಗೆ ಹೋಗುವ ಹುಡುಗಿಯರು ತಮ್ಮ ಮೊಬೈಲಿನಲ್ಲಿ ಸೇಫ್‌ಟ್ರ್ಯಾಕ್ ಎಂಬ ಕೃತಿ ಲ್ಯಾಬ್ ಕಂಪೆನಿಯು ಅಭಿವೃದ್ಧಿ ಪಡಿಸಿದ,ತಂತ್ರಾಂಶವನ್ನು ಅಳವಡಿಸಿದ್ದರೆ,ಆಕೆಯ ಚಲನವಲನ ಗಮನಿಸಲು ಇತರರಿಗೆ ಸಾಧ್ಯವಾಗುತ್ತದೆ.ಆ ಹುಡುಗಿಯ ಮೊಬೈಲ್ ಇಂಟರ್ನೆಟ್‌ಗೆ ಸಂಪರ್ಕ ಹೊಂದಿ,ಜಿಪಿಎಸ್ ವ್ಯವಸ್ಥೆ ಚಾಲೂ ಆಗಿರಬೇಕು.ಗೂಗಲ್ ಮ್ಯಾಪಿನಲ್ಲಿ,ಆಕೆಯಿರುವ ಜಾಗ ಪ್ರದರ್ಶಿತವಾಗುತ್ತಿರುತ್ತಿರುತ್ತದೆ. ಹುಡುಗಿಯ ಅಮ್ಮನೂ ತನ್ನ ಮೊಬೈಲಿನಲ್ಲಿ ಸೇಫ್‌ಟ್ರ್ಯಾಕ್ ಹಾಕಿಕೊಂಡಿದ್ದರೆ,ಮಗಳ ಚಲನವಲನ ಆಕೆಗೂ ಕಾಣಿಸುತ್ತದೆ. ದಿನಕ್ಕಿಂತ ಭಿನ್ನವಾದ ಮಾರ್ಗಹಿಡಿದರೆ,ಅಪಾಯದ ಸಂಕೇತ ಎಂದು ಭಾವಿಸಿ,ಎಚ್ಚರಿಕೆ ವಹಿಸಬಹುದು. ಹುಡುಗಿ,ನಿಗದಿತ ಕೀಲಿ ಒತ್ತಿ,ತಾನು ಅಪಾಯದಲ್ಲಿರುವುದನ್ನು ಸೂಚಿಸಿದರೆ,ಬಳಕೆದಾರ ನಿಗದಿಪಡಿಸಿದ ಸಂಖ್ಯೆಗೆ ಎಸ್ ಎಂ ಎಸ್,ಕರೆಗಳು ಹೋಗುವಂತೆ ಸೇಫ್‌ಟ್ರ್ಯಾಕ್ ಮಾಡುತ್ತದೆ. ಸದ್ಯ ಗೂಗಲ್ ಆಂಡ್ರಾಯಿಡ್ ಪೋನುಗಳಿಗೀ ಆಪ್ ಲಭ್ಯವಿದೆ.

ಟೊಯೋಟಾದ ಚಾಲಕರಹಿತ ಕಾರು


ಚಾಲಕನಿಲ್ಲದೆಯೂ ಸಾಗಬಲ್ಲ ಕಾರನ್ನು ಟೊಯೊಟಾ ಕಂಪೆನಿಯು ಅಭಿವೃದ್ಧಿಪಡಿಸಿದೆ.ಇದು ಕಂಪ್ಯೂಟರ್ ನಿಯಂತ್ರಿತ. ರಾಡಾರ್ ಅಳವಡಿತ ಕಾರು,ಎದುರಿನಿಂದ ಬರುವ ವಾಹನಗಳನ್ನು ಗುರುತಿಸ ಬಲ್ಲುದು. ಸಿಗ್ನಲ್‌ಗಳಲ್ಲಿ ಬಣ್ಣವನ್ನು ಗುರುತಿಸಿ,ಅದರ ಪ್ರಕಾರ ವಾಹನ ಚಲಾವಣೆಯೂ ಸಾಧ್ಯವಾಗಲಿದೆ.ಪಾದಾಚಾರಿಗಳು ರಸ್ತೆ ದಾಟುತ್ತಿದ್ದರೆ,ಅದನ್ನು ಗುರುತಿಸಲೂ ಕಾರು ಸಮರ್ಥವಾಗಿದೆ. ಚಾಲಕನಿದ್ದರೆ,ಆತ ಅತ್ಯಂತ ಕನಿಷ್ಠ ಚಾಲನೆ ಮಾಡಬೇಕಾಗಬಹುದು. ಒಂದು ವೇಳೆ ಆತನಿಗೆ ಎಚ್ಚರವಿಲ್ಲದಿದ್ದರೆ,ಅದನ್ನು ಗುರುತಿಸಿ,ಸ್ವಯಂಚಾಲಿ ಚಾಲನಾ ವ್ಯವಸ್ಥೆಯು ಚಾಲೂ ಆಗುತ್ತದೆ.

ಕೀಲಿಮಣೆ;ವೈವಿಧ್ಯ
ಮೊಬೈಲ್‌ನಲ್ಲಿ ಒಂದು ಕೀಲಿಯನ್ನು ಹಲವು ಅಕ್ಷರಗಳಿಗೆ ಮೀಸಲಿಟ್ಟಿರುವುದರಿಂದ,ಟೈಪಿಂಗ್ ತಲೆನೋವಿನ ಕೆಲಸವಾಗುವುದು ಸಾಮಾನ್ಯ. ಹೀಗಾಗಿ,ಎಸ್ಸೆಮ್ಮೆಸ್ ಭಾಷೆಯು ಹೃಸ್ವರೂಪ ಪಡೆಯುತ್ತದೆ. ಆದರೆ ಸ್ಯಾಮ್‌ಸಂಗ್ ಕಂಪೆನಿಯು ಸ್ವೈಪ್ ಎನ್ನುವ ವಿಧಾನವನ್ನು ಅಭಿವೃದ್ಧಿ ಪಡಿಸಿದ್ದು,ಇದರಲ್ಲಿ ಕೀಲಿಮಣೆ ಬಳಸದೆ ಅಕ್ಷರಗಳನ್ನು ಮೂಡಿಸಿದರೆ ಸಾಕು,ಅದು ಪದವನ್ನು ಪ್ರದರ್ಶಿಸುತ್ತದೆ. ಒಂದು ಪದದ ನಂತರ ಒಂದು ಅಕ್ಷರದ ಖಾಲಿ ಜಾಗವನ್ನು ಬಿಡುವ ಜಾಣ್ಮೆ ಅದಕ್ಕಿದೆ. ಇದರಲ್ಲಿ ಪದಗಳನ್ನು ಊಹಿಸಿ ಮೂಡಿಸುವ ತಂತ್ರಾಂಶದ ಬುದ್ಧಿವಂತಿಕೆಯಿಂದ,ಟೈಪಿಸುವ ಕೆಲಸ ಸುಲಭವಾಗುತ್ತದೆ. ಹೀಗಾಗಿ ಎಸ್ ಎಮ್ ಎಸ್ ಸಂದೇಶದ ಭಾಷೆ ಬಳಸುವ ಅಗತ್ಯವಿಲ್ಲ.