"ಸಿನೆಮಾ" (ಕಥೆ)- ಭಾಗ 12

"ಸಿನೆಮಾ" (ಕಥೆ)- ಭಾಗ 12

ಚಿತ್ರ

 ಒಂದರೆಡು ನಿಮಿಷ ಏನನ್ನೂ ಮಾತನಾಡದೆ ಎಲ್ಲೋ ಆಕಾಶದತ್ತ ಚಿತ್ತ ಕೀಲಿಸಿದಂತೆ ಕುಳಿತ ದೀಪಕ ಮತ್ತೆ ತನ್ನ ಗತ ಜೀವನದ ವಿವರಣೆಗೆ ತೊಡಗಿದ.

     ನಂತರ ನಾನು ಪೂನಾ ವಾಸ್ತವ್ಯದೊಳಗ ಒಂದ ವರ್ಷ ಕಳದೆ. ನಾನು ಮೈಮುರಿದು ಕೆಲಸ ಮಾಡ್ತಿದ್ದೆ. ನನ್ನ ಕೆಲಸಾನ ಮಹಾಲಕ್ಷ್ಮೀ ಟೇಲರ್ಸನ ಮಾಲಿಕರು ಒಪ್ಪಗೊಂಡ್ರು, ಅವರ ಒತ್ತಾಸೆಯ ಮೇಲೆ ಅವರ ಮನಿಗೆ ಊಟಕ್ಕೆ ಹೋಗ ತೊಡಗಿದೆ. ನನ್ನ ಬಗ್ಗೆ ವಿಚಾರಿಸಿದರು. ನಾನು ನನ್ನ ಎಲ್ಲ ವಿಷಯವನ್ನು ಅವರಿಗೆ ಹೇಳಿದೆ, ಆದರೆ ಅನೇಕ ವಿಷಯಗಳನ್ನು ಮುಚ್ಚಿಟ್ಟೆ, ನನಗೆ ಮದುವೆ ಯಾಗಿಲ್ಲ ಎಂದೆ, ಸಿನೆಮಾದ ತೀವ್ರ ವ್ಯಾಮೋಹದ ಬಗ್ಗೆ ಹೇಳಲಿಲ್ಲ, ಸಿಗರೇಟು ಕುಡಿತ ಎಲಡಿಕೆ ಚಟದ ಬಗ್ಗೆ ಹೇಳಲಿಲ್ಲ. ಅದನೆಲ್ಲ ನಾನು ಸಿನೆಮಾಕ್ಕ ಹೋಗೋಮುಂದನ ತೀರಿಸಿಕೊಂಡು ಹೋಗೊ ಹವ್ಯಾಸಗಳಾಗಿದ್ದವು. ನಮ್ಮ ಟೇಲರ್ ಶಾಪ್ನ ಮಾಲಿಕ ತುಕಾರಾಮ ರವರ ಮನೆಯಲ್ಲಿ ನಾನು ನನ್ನ ಈ ಯಾವ ದೌರ್ಬಲ್ಯಗಳ ಬಗ್ಗೆ ಕಿಂಚಿತ್ತೂ ಸಂಶಯ ಬರದಂತೆ ನಡೆದು ಕೊಳ್ಳುತ್ತಿದೆ. ತುಕಾರಾಮ ರವರಿಗೆ ಮೂವರು ಮಕ್ಕಳು. ಹಿರಿಯ ಮಗಳು ಸುಮಿತ್ರ, ಮಾಧವ ಮತ್ತು ಕೇಶವ ಗಂಡುಮಕ್ಕಳು . ಸುಮಿತ್ರ ನನಗಿಂತ ಐದು ವರ್ಷ ಚಿಕ್ಕವಳು ಎಸ್ಎಸ್ ಎಲ್ಸಿ ಯಲ್ಲಿ ಗವರ್ನಮೆಂಟ್ ಹೈಸ್ಕೂಲ್ನಲ್ಲಿ ಓದುತ್ತಿದ್ದಳು. ಮಾಧವ ಮತ್ತು ಕೇಶವ ಕ್ರಮವಾಗಿ ಏಳು ಮತ್ತು ಐದನೆ ತರಗತಿಗಳಲ್ಲಿ ಓದುತ್ತಿದ್ದರು. ಸುಮಿತ್ರ ಎಸ್ಎಲ್ಸಿ ಯಲ್ಲಿ ಪ್ರಥಮ ದರ್ಜೆಯಲ್ಲಿಯೆ ಪಾಸಾದಳು. ಅವಳಿಗೆ ಇನ್ನೂ ಓದುವ ಆಕಾಂಕ್ಷೆ ಇತ್ತು.
ಆದರೆ ಆಕೆಯ ತಂದೆ ತಾಯಿಗಳಿಗೆ ಮಗಳ ಮದುವೆ ಮಾಡಿ ಮುಗಿಸುವ ತರಾತುರಿಯಿತ್ತು. ಅಲ್ಲಿ ಇಲ್ಲಿ ವರ ನೋಡುವ ಶಾಸ್ತ್ರವೂ ಆಯಿತು. ಯಾವ ಸಂಬಂಧಗಳೂ ಹೊಂದಿಕೆಯಾಗಲಿಲ್ಲ. ಕೊನೆಗೆ ಆ ಕುಟುಂಬದವರ ದೃಷ್ಟಿ ನನ್ನ ಮೇಲೆ ಬಿತ್ತು. ದೀಪಕ ಒಳ್ಳೆಯ ಹುಡುಗ ಅವನಿಗೂ ಯಾರೂ ಇಲ್ಲ, ಅವರ ಗಂಡು ಮಕ್ಕಳೂ ಕಿರಿಯರು ಟೇಲರಿಂಗ್ ಉದ್ಯೋಗದಲ್ಲಿ ಒಳ್ಳೆಯ ಜ್ಞಾನವಿದೆ, ಮನೇ ಅಳಿಯನಾಗಿ ಇಲ್ಲಯೇ ಇರುತ್ತಾನೆ ಎನ್ನುವುದು ಅವರ ಅಭೀಕ್ಷೆಯಾಗಿತ್ತು.

     ನನ್ನ ಮನದಲ್ಲಿ ಹೊಯ್ದಾಟ ಪ್ರಾರಂಭವಾಗಿತ್ತು. ಲಕ್ಷ್ಮೀಯನ್ನು ತಂದು ಇಲ್ಲಿ ಸಂಸಾರ ಪ್ರಾರಂಭ ಮಾಡುವುದೆ ಇಲ್ಲ ದುರ್ವಾಪುರಕ್ಕೆ ಮರಳಿ ಹೋಗುವುದೆ ಎನ್ನುವ ಮನದ ತಾಕಲಾಟವದು. ಇನ್ನೊಂದೆಡೆ ಆಕರ್ಷಕ ರೂಪ ಲಾವಣ್ಯದ ಸುಮಿತ್ರೆ ಮೇಲಾಗಿ ಓದಿದವಳು ಈ ಮದುವೆಗೆ ಆಕೆ ಒಪ್ಪಿದ್ದಳಂತೆ ಕೂಡ. ಹೀಗಾಗಿ ನನ್ನ ಮನಸು ಸುಮಿತ್ರಳೆಡೆಗೆ ಆಕರ್ಷಿತವಾಗುತ್ತ ನಡೆಯಿತು. ಒಮ್ಮೊಮ್ಮೆ ಆತ್ಮ ಸಾಕ್ಷಿ ನನ್ನನ್ನು ಚುಚ್ಚುತ್ತಿತ್ತು. ಈ ವಿಷಯ ತಿಳಿದ ಹುಬ್ಬಳ್ಳಿಯ ಮಾಡರ್ನ ಟೇಲರ್ನ ಮಾಲಿಕರು ಪೂನಾಕ್ಕೆ ಬಂದವರು ಸಮಯ ಕಾದು ನನ್ನ ಎರಡನೆಯ ಮದುವೆಯ ವಿಷಯದ ಪ್ರಸ್ತಾಪ ಮಾಡಿ ಇದು ನಿಜವೆ ಎಂದರು. ಈ ಮದುವೆಯ ಪ್ರಸ್ತಾಪ ಬಂದಿದ್ದು ಅವರಿಂದ ನನ್ನಿಂದಲ್ಲ.

     ಅದಕ್ಕೆ ಅವರು ' ಇರಬಹುದು ಆದರೆ ನೀನು ನಿನ್ನ ಮೊದಲನೆಯ ಮದುವೆಯ ವಿಷಯ ಅವರಿಗೆ ಹೇಳಿಲ್ಲ, ಇಲ್ಲದಿದ್ದರೆ ಅವರು ಈ ಮದುವೆ ಪ್ರಸ್ತಾಪ ಮಾಡುತ್ತಿರಲಿಲ್ಲ, ನೀನು ಇಲ್ಲಿ ಆ ಎರಡು ಹೆಣ್ಣು ಜೀವಗಳಿಗೂ ಅನ್ಯಾಯ ಮಾಡುತ್ತ ನೀನೂ ತೊಂದರೆಗೆ ಸಿಲುಕಿ ಕೊಳ್ಳುತ್ತಿದ್ದಿ, ತುಕಾರಾಮ ಈ ವಿಚಾರ ನನ್ನಮುಂದೆ ಪ್ರಸ್ತಾಪ ಮಾಡಿದ್ದಾರೆ ಅದಕ್ಕೆ ನಾನು ನನಗೆ ಅವರ ಕೌಟುಂಬಿಕ ವಿಷಯದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ ಎಂದಿದ್ದೇನೆ. ವಿಚಾರ ಮಾಡಿ ನೋಡು ಇನ್ನೊಮ್ಮೆ ನನ್ನ ಕೇಳಿದರೆ ನೀನು ಮದುವೆಯಾಗಿರುವ ವಿಷಯ ಅವರಿಗೆ ತಿಳಿಸಿ ಬಿಡುತ್ತೇನೆ ಎಂದರು '. ಅದಕ್ಕೆ ನಾನು ಇಲ್ಲಿಯೂ ಇರುವುದಿಲ್ಲ ಬೇರೆಲ್ಲಿಗಾದರೂ ಹೊರಟು ಹೋಗುತ್ತೇನೆ ಎಂದೆ. ಏನಾದರೂ ಮಾಡಿಕೋ ನಿನ್ನ ಖಾಸಗಿ ವಿಷಯ ಎಂದು ಬೇಸರಗೊಂಡು ಹೋದರು.

     ನನ್ನ ಭಾವಿ ಮಾವ ತುಕರಾಮರವರ ಮನೆಯಲ್ಲಿ ಅವರ ಹೆಂಡತಿ ಸುಮಂಗಲಾ ರವರು ನಾವೂ ನಿನ್ನ ಜೊತೆ ನಿಮ್ಮೂರಿಗೆ ಈ ಮದುವೆ ಪ್ರಸ್ತಾಪಕ್ಕೆ ಬರುತ್ತೇವೆ ಎಂದರು. ನನಗೆ ದಿಕ್ಕು ತೋಚದಂತಾಯಿತು ಆಗಲೆ ನನ್ನ ಹೆಂಡತಿ ಲಕ್ಷ್ಮೀ ಮರೆಯಗಿ ನನ್ನ ಮನದ ತುಂಬ ಸುಮಿತ್ರಾ ಆವರಿಸಿಕೊಂಡು ಬಿಟ್ಟಿದ್ದಳು. ವಿವೇಕ ಹಿಂದಾಗಿತ್ತು. ನಾನೇ ಅವರಿಗೆ ಒಮ್ಮೆ  ಊರಿಗೆ ಹೋಗಿ ವಿಷಯ ತಿಳಿಸಿ ಆ ನಂತರ ನಿಮ್ಮನ್ನು ಊರಿಗೆ ಕರೆದೊಯ್ಯುತ್ತೇನೆ ಎಂದೆ. ಅದನ್ನು ಅವರು ನಂಬಿದರು. ಕೈಯಲ್ಲಿ ಒಂದಷ್ಟು ಹಣ ಇಟ್ಟುಕೊಂಡು ಹುಬ್ಬಳ್ಳಿಗೆ ಬಂದೆ. ಮಾಡರ್ನ ಟೇಲರ್ನ ಮಾಲಿಕರು ಪುನಃ ನನಗೆ ಬುದ್ಧಿ ಹೇಳಿದರು. ವಿಷಯ ತಿಳಿಸಿ ಅವರೆ ನನ್ನಪ್ಪನನ್ನು ಬರಮಾಡಿಕೊಂಡರು. ಅಪ್ಪ ಬಂದವನೆ

     ' ಸೂ.....ಮಗನೆ ಮದುವೆಯಾದ ಹೆಂಡತಿ ಮಗ ಇರೋ ನೀನು ಅದ್ಯಾಂಗ ಇನ್ನೊಂದು ಮದುವೆ ಮಾಡಿಕೋತಿ ನಾನೂ ನೋಡೆ ಬಿಡತೀನಿ, ಪೂನಾ ನನಗೇನು ಗೊತ್ತಿಲ್ಲದಲ್ಲ ನಿನಗ ಹೆಣ್ಣು ಕೊಡಾಕ ತಯಾರಾಗ್ಯಾರಲ್ಲ ಅವರ ಮುಂದನ ನಿನ್ನ ಜಾತಕಾನೆಲ್ಲ ಬಿಡಸಿ ಇಡತೇನಿ ಅದ್ಯಾಂಗ ಅವರೂ ಮದುವೆ ಮಡತಾರ ನಾನೂ ನೋಡತೀನಿ ' ಎಂದರು.

     ಅದಕ್ಕ ಮಾಡರ್ನ ಟೇಲರ್ ಮಾಲಿಕರು ' ಅವರಿಗೆ ಇಂವ ತನಗ ಮದುವೆ ಆಗಿರೋ ವಿಷಯ ಹೇಳೆ ಇಲ್ಲ , ಆ ವಿಷಯ ಅವರಿಗೆ ತಿಳಿ ಬೇಕದರೂ ಹ್ಯಾಂಗ ' ಎಂದರು. 

     ' ಅಂವ ಹಾಳಾಗಲಿಕ್ಕೆ ನೀವ ಕಾರಣ ಅಂವಗ ಸಣ್ಣ ವಯಸ್ಯ್ನಾಗ ರೊಕ್ಕದ ರುಚಿ ತೋರಸಿ ದಾರಿ ಬಿಡೋ ಹಂಗ ಮಾಡಿದ್ದ್ರಿ ' ಎಂದು ನಮ್ಮಪ್ಪ ಅವರ ಮ್ಯಾಲೇನ ತಿರಗಿ ಬಿದ್ದ.

     ಅವರಿಗೂ ಬ್ಯಾಸರಾತು 'ನಿಮ್ಮ ಮನಿ ವಿಷಯ ನಿಮಗ ಹ್ಯಾಂಗ ಬೇಕೋ ಹಂಗ ಮಾಡಿಕೋರಿ, ಇದ್ದ ವಿಷಯಾನ ನಿಮ್ಮ ಮುಂದನ ಸಮಕ್ಷಮ ಹೇಳೆನಿ ' ಎಂದರು. ನಾನು ಹಣ ಖರ್ಚಾಗೋ ತನಕ ಹುಬ್ಬಳ್ಯಗ ಚೈನಿ ಹೊಡದು ಹೊಳ್ಳಿ ಪೂನಾಕ್ಕ ಹೋದೆ. ವಿಷಯ ಏನಾತು ಅಂದ್ರು. 'ಇಲ್ಲೆ ನಮ್ಮೂರ ಹತ್ರನ ದೂರದ ಸಂಬಂಧದಾಗ ಒಂದು ಹೆಣ್ಣು ನೋಡೇವಿ ಇಲ್ಲಿಗೆ ಬಂದು ಬಿಡು ಅಂದರು'ಎಂದು ಹೇಳಿದೆ

     ' ನೀವೇನು ಮಾಡ್ತೀರಿ ' ಎಂದರು ನಮ್ಮ ಮಹಾಲಕ್ಷ್ಮಿ ಟೇಲರಿಂಗ್ ಶಾಪ್ನ ಮಾಲಿಕ ತುಕಾರಾಮ.

     ಸಿನೆಮಾ ನೋಡಿ ನೋಡಿ ಭಾಳ ನಾಟಕೀಯತೆ ನಾನೂ ಕಲ್ತಿದ್ದೆ ಅಂತ ಕಾಣ್ತದ ' ನನಗೇನು ಮಾಡ್ಬೇಕು ಅಂತಾನ ತೋಚ್ತಾ ಇಲ್ಲ, ಅಪ್ಪ ಅಮ್ಮಗ ಬ್ಯಾಸರ ಮಾಡೋದಕ್ಕಿಂತ ಅಲ್ಲಿಗೆ ಹೋಗಿ ಇರೋದ ವಾಸಿ ಅಂತ ಒಮ್ಮೆ ಅನಸ್ತದ, ಇನ್ನೊಮ್ಮೆ ಅದು ಸಣ್ಣ ಹಳ್ಳಿ ಅಲ್ಲಿ ಟೇಲರಿಂಗ್ ದಂಧೆ ಮಾಡಿ ಜೀವನ ಸಾಗಸೋದು ಕಷ್ಟ ಅದಕ್ಕ ನಿಮ್ಮಲ್ಲಿ ಟೇಲರೀಂಗ್ ಕಲಿಯಾಕ ಬಂದೆ, ಇಲ್ಲಿಂದ ಹುಬ್ಬಳ್ಳಿಗೆ ಹೋಗಿ ಒಂದು ಹೊಸಾ ಅಂಗಡಿ ಮಾಡೋಣ ಅಂತ ಒಮ್ಮೊಮ್ಮೆ ಅನಸ್ತದ ' ಅಂತ ನಾಜೂಕಾಗಿ ಉತ್ತರ ಕೊಟ್ಟೆ. ಅದು ಪರಿಣಾಮ ಮಾಡ್ತು.

     ಅದಕ್ಕ ನನ್ನ ಭಾವಿ ಮಾವ ಮತ್ತು ಅತ್ತೆ ನೀನು ಇಲ್ಲೆ ಇರು ನಾವು ನಿಮಗೆಲ್ಲ ಸಹಾಯ ಮಾಡ್ತೇವಿ ನೀವು ನಮಗ ಇನ್ನೊಬ್ಬ ಗಂಡು ಮಗ ಇದ್ಹಂಗ ಅಂದರು. ವಿವೇಚನೆ ಹಿಂದಾಗಿತ್ತು ರೊಟ್ಟಿ ,ಜಾರಿ ತುಪ್ಪದಾಗ ಬಿತ್ತು ಅಂತ ನಾನು ಆ ಕ್ಷಣಕ್ಕ ಭಾವಿಸಿದ್ದೆ. ಆದ್ರ ಅದು ಮುಂದ ತರೋ ಕಷ್ಟಗಳ ವಿಷಯದ ತಿಳವಳಿಕಿ ನನಗ ಆಗ ಆಗಲಿಲ್ಲ. ಮಾಡರ್ನ ಟೇಲರ್ ಮಾಲಿಕರಾದ ರಾಜಾರಾಮ ಅವ್ರು ಹೇಳಿದ ವಿವೇಕ ನನಗ ತಾಗಲಿಲ್ಲ. ಮುಂದ ಒಂದಾರು ತಿಂಗಳಿಗೆ ನಮ್ಮಿಬ್ಬರ ಮದುವಿ ಫಿಕ್ಸಾತು. ಆಗ ನನ್ನ ಭಾವಿ ಮಾವ ತುಕರಾಮ ರಾಜರಾಮ ಅವ್ರಿಗೆ ದೀಪಕ ಮತ್ತು ಸುಮಿತ್ರಾರ ಮದುವೆ ನಿಶ್ಚಯ ಕಾರ್ಯ ಇಟಗೊಂಡೇವಿ ಬರ್ರಿ ಅತ ಇವರು ಕಾಗದ ಬರದ್ರು ಇದಕ್ಕ ಅವರು ಈ ಮದುವಿ ಬಗ್ಗೆ ಇನ್ನೊಮ್ಮೆ ವಿಚಾರಾ ಮಾಡ್ರಿ ಅಂತ ಹೊಳ್ಳಿ ಕಾಗದ ಬರದ್ರು, ಆಗಲೆ ಮದುವಿ ನಿಶ್ಚಯ ಆಗಿ ಹೋತು. ಮಾಡರ್ನ ಟೇಲರ್ ಮಾಲಿಕ ರಾಜಾರಾಮ ದೂವರ್ಪುರಕ್ಕೆ ಬಂದು ನಮ್ಮ ಮನ್ಯಾಗ ಈ ವಿಷಯ ತಿಳಿಸಿ ಪೂನಾಕ್ಕ ನಿಮ್ಮ ಸೊಸೀನ ಕರ್ಕೊಂಡು ಹೋಗಿ ಎರಡನೆ ಮದ್ವೀಗೆ ಹರಕತ್ತು ಮಾಡ್ರಿ ಅಂದ್ರಂತ. ಅದಕ್ಕ ನನ್ನ ಹೆಂಡತಿ ಒಲ್ಲದ ಗಂಡನ ಜೊತಿ ಸಂಸಾರ ಆಗತದನು ನಾನು ನಿಮ್ಮ ಮನಿಗೆ ಬಂದೇನಿ ಎರಡ್ಹೊತ್ತು ಊಟಾ ಹಾಕ್ರಿ ನಿಮ್ಮನಿ ಕೆಲಸದಾಕಿ ಅಂತ ತಿಳಿಕೋರಿ ನನ್ನ ಮಗನ್ನ ಸಾಕತೇನಿ, ಮುಂದ ಅವನರ ನನಗ ಒಂದು ದಿಕ್ಕಾದ್ರ ಆಗ್ಲಿ ಇಲ್ಲ ಅಂದ್ರ ಹೋಗ್ಲಿ, ನನ್ನ ಹಣೆಬರಾನ ಇಷ್ಟ ಅದ ಮದುವಿ ಗಿದವಿ ನಿಲ್ಸಾಕ ನಾ ಬರೋದುಲ್ಲ ನೀವೂ ಹೋಗಬ್ಯಾಡ್ರಿ ಅಂದ್ಲಂತ, ಹಿಂಗಾಗಿ ಆ ಆತಂಕ ತನಗ ತಾನ ದೂರಾಗಿ ಹೋತು ಮದುವೆ ಭಾಳ ಚೆಂದಾತು. ಆದರ ಮದಿವಿಗೆ ಹುಬ್ದಳ್ಳಿ ಮಾಡರ್ನ ಟೇಲರ್ನ ಮಾಲಿಕರಾದ ರಾಜಾರಾಮ ಬರಲಿಲ್ಲ. ಅದು ನನಗೂ ಒಂದ ರೀತಿ ಒಳ್ಳೇದನ ಆತು ಅನಿಸ್ತು.

     ' ಆದರ ನಿನಗ ನೀ ಮಡ್ತಾ ಇದ್ದೇನಿ ಅಂತ ಅನಸಲಿಲ್ಲನು ' ಎಂದು ಮಾದೇವ ಅಡ್ಡ ಪ್ರಶ್ನೆ ಹಾಕಿದ.

     ' ನನಗ ವಿವೇಕ ಎಲ್ಲಿತ್ತು ಹೇಳೋ ಅಂಥಾ ಆತ್ಮೀಯರು ಯಾರಾದ್ರು ಹೇಳಿದ್ರೂ ಕೇಳೋ ಅಂಥಾ ಸ್ಥಿತ್ಯಾಗ ನಾನಿದ್ನ್ಯಾ ಖಂಡಿತಾ ಇಲ್ಲ, ಮುಂದ ವಿಧಿ ಬರದ ಹಣೆ ಬರಹ ಯಾರಿಗೆ ಗೊತ್ತಿರ್ತದ ಹೇಳು ? ಆದರ ನನಗಂತೂ ಗೊತ್ತಾಗಲಿಲ್ಲ, ಆದರ ಆ ಎರಡನೆ ಸಂಸಾರದ ಸುಖ ಭಾಳ ದಿವಸ ಉಳಿಲಿಲ್ಲ.' ಎಂದ ದೀಪಕ.

     ' ಮುಂದ ನೀ ನಿಮ್ಮೂರಿಗೆ ಹೋಗಲೆ ಇಲ್ಲ, ಅಪ್ಪ ಅಮ್ಮ ಮತ್ತ ಹೆಂಡತಿ ಮಗನ ಗತಿ 'ಎಂದ ಮಾದೇವ.

     ' ಆ ಬಗ್ಗೆ ನಾ ಯೋಚನಿ ಮಾಡಿದ್ರ ಪೂನಾಕ್ಕ ಹೋಗ್ತಿರಲಿಲ್ಲ, ಹೋದರೂ ಹೆಂಡತಿ ಮಗನ್ನ ಕರಕೊಂಡು ಹೋಗ್ತಿದ್ದೆ , ಹಿಂಗಾಗಿ ನನಗ ಅಪ್ಪ ಅಮ್ಮ ತಮ್ಮ ಹೆಂಡತಿ ಮಗ ಯಾರ ಯೋಚ್ನಾನೂ ಬರ್ಲಿಲ್ಲ ನೋಡು,. ನನ್ನ ಸುಖಕ್ಕೊಸ್ಕರಾನ ನಾ ಬದುಕಿ ಬಿಟ್ಟೆ. ಅಂತ ಈಗೀಗ ಅನಸಲಿಕ್ಕೆ ಹತ್ತೇದ ' ಎಂದ ದೀಪಕ.

     ' ಹಂಗಾರ ಪೂನಾದ ಜೀವನ ಯಾವತ್ತಿಗೆ ಕೊನೆ ಆತು ' ಎಂದು ಮಾದೇವ ಮರು ಪ್ರಶ್ನಿಸಿದ,

    
     ಹೊಸಾ ಮದುವಿ ಛಂದನ ಹೆಂಡತಿ ಮದ್ಲ ಮದ್ಲ ಸಂಸಾರ ಭಾಳ ಛೊಲೋನ ಇತ್ತು. ನಮ್ಮ ಸಂಸಾರಕ್ಕ ನಾಲ್ಕು ವರ್ಷಕ್ಕ ಎರಡು ಮಕ್ಕಳಾದ್ವು. ಸಂಜೀವ ಮತ್ತು ರಾಜೀವ ಅಂತ ಹೆಸರಿಟ್ವಿ ಮುದ್ದಾದ ಮಕ್ಳು. ಆದರ ನಾನು ನನ್ನ ಹವ್ಯಾಸಗಳ ಬಗ್ಗೆ ನಿಯಂತ್ರಣ ಮಾಡಿಕೋಲಿಲ್ಲ. ನನ್ನ ಹೆಂಡತಿ ತಮ್ಮಂದ್ರು ದೊಡ್ಡವರಾಗಿದ್ರು. ಮಾಧವ ಟೇಲರಿಂಗ್ ಅಂಗಡಿ ನೋಡ್ಕೊಳ್ಳೋಕ ನಿಂತ. ನನಗೂ ಅದರ ಅರ್ಧ ಹೊರಿ ಕಡಿಮಿ ಆತು. ಸಣ್ಣವ ಕೇಶವ ಎ.ಎಸ್ಸಿ ಅಗ್ರಿ ಮಾಡಿದ ರತ್ನಾಗಿರಿಯಲ್ಲಿ ಕೆಲಸ ಪ್ರಾರಂಭಮಾಡಿದ ಮುಂದ ಅಮೇರಿಕಾಕಕ್ಕ ಹೋಗಿ ನೆಲೆ ನಿಂತ. ನನ್ನ ಹೆಂಡತಿ ತಮ್ಮ ಮಾಧವ ಯಾವಾಗ ಮಹಾಲಕ್ಷ್ಮೀ ಟೇಲರ್ಸನ ಯಜಮಾನಿಕಿ ತುಗೊಂಡ್ನೋ ಆವಾಗ ನನಗ ಕಷ್ಟದ ದಿನಗಳು ಸುರುವಾದ್ವು.

     ' ಅಷ್ಟು ಕೆಟ್ಟ ಮನಸ್ಯನ ಅಂವ ' ಎಂದ ಮಾದೇವ.

                                                                 ( ಮುಂದುವರಿಯುವುದು )
 

Rating
No votes yet

Comments

Submitted by swara kamath Tue, 01/15/2013 - 13:06

ಪಾಟೀಲರಿಗೆ ನಮಸ್ಕಾರಗಳು. ನಿಮ್ಮ "ಸಿನೆಮಾ" ಕಥೆ ಓದುತ್ತಿರುವೆನಾದರೂ ನನಗೆ ಕೂಡಲೆ ಪ್ರತಿಕ್ರಿಯಿಸಲು ಸಾದ್ಯವಾಗಲಿಲ್ಲ. ಕಥೆಯಲ್ಲಿ ದೀಪಕನಿಗೆ ಅಂಟಿದ ಸಿನೆಮಾ ಗೀಳು ಅವನ ಜೀವನವನ್ನೇ ಅಧೊಗತಿಗೆ ಎಳಸುವಂತಾಗಿದ್ದನ್ನ ಅವರದೇ ಆಡುಭಾಷೆಯಲ್ಲಿ ಬರೆದಿರುವುದು ಓದಲು ಖುಷಿ ನೀಡಿತು. .........ವಂದನೆಗಳು.

Submitted by H A Patil Tue, 01/15/2013 - 20:31

In reply to by swara kamath

ರಮೇಶ ಕಾಮತರಿಗೆ ವಂದನೆಗಳು
ಕಥಾನಕದ ೀ ಭಾಗಕಗ್ಕೆ ನಿವು ಬರೆದ ಪ್ರತಿಕ್ರಿಯೆ ಓದಿದೆ. ಸಿನೆಮಾದ ಗೀಳು ಅಂಟಿಸಿಕೊಂಡು ತಮ್ಮ ವೈಯಕ್ತಿಕ ಬದುಕನ್ನು ಹಾಳು ಮಾಡಿಕೊಂಡವರ ಅನೇಕ ಉದಾಹರಣೆಗಳು ನಮ್ಮ ಸುತ್ತ ಮುತ್ತ ಇವೆ, ಬರಿ ಸಿನೆಮಾ ಒಂದೇ ಅಲ್ಲ ಯಕ್ಷಗಾನ ನಾಟಕ ಕ್ರೀಡೆ ಇತ್ಯಾದಿ ಕ್ಷೇತ್ರ ಗಳಿಗೂ ಈ ಮಾತು ಅನ್ವಯಿಸುತ್ತೆ, ಮೆಚ್ಚುಗೆಗೆ ಧನ್ಯವಾದಗಳು.