ಹಾಸನದಲ್ಲಿ ವಿವೇಕಾನಂದ 150ನೇ ಜನ್ಮ ವರ್ಷ ಅಭಿಯಾನ ಉದ್ಘಾಟನೆ

ಹಾಸನದಲ್ಲಿ ವಿವೇಕಾನಂದ 150ನೇ ಜನ್ಮ ವರ್ಷ ಅಭಿಯಾನ ಉದ್ಘಾಟನೆ

ದಿನಾಂಕ: 12-01-2013,

ಹಾಸನ: ಸ್ವಾಮಿ ವಿವೇಕಾನಂದ 150ನೇ ಜನ್ಮ ವರ್ಷಾಚರಣೆ ಅಭಿಯಾನದ ಹಾಸನ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಸ್ಥಳೀಯ ವಾಸವೀ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ರಾಜಗೋಪಾಲ ಶ್ರೇಷ್ಠಿಯವರು ಉದ್ಘಾಟಿಸಿ ಅಭಿಯಾನಕ್ಕೆ ಶುಭ ಹಾರೈಸಿದರು. 

ಅಭಿಯಾನದ ಜಿಲ್ಲಾ ಸಂಯೋಜಕರಾದ ಶ್ರೀ ಅನಂತನಾರಾಯಣ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಸಾಮಾಜಿಕವಾದ ಐದು ಕ್ಷೇತ್ರಗಳಲ್ಲಿ ಅಭಿಯಾನದ ಕೆಲಸದ ಬಗ್ಗೆ ವಿವರಿಸಿ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಅಭಿಯಾನದ ಅವಧಿಯಲ್ಲಿ ಜನರಲ್ಲಿ  ಚೈತನ್ಯವನ್ನು ತುಂಬುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ಪ್ರಮುಖ ಭಾಷಣಕಾರರಾಗಿ ಆಗಮಿಸಿದ್ದ  ಮೈಸೂರು ಮಹಾರಾಣಿ ಕಾಲೇಜಿನ ಪ್ರಾಧ್ಯಾಪಕರಾದ ಡಾ|ಬಿ.ವಿ.ವಸಂತ ಕುಮಾರ್ ಅವರು ಮಾತನಾಡುತ್ತಾ ಪ್ರಸ್ತುತ ನಮ್ಮ ದೇಶದ ಸಮಸ್ಯೆಗಳಿಗೆ ವಿವೇಕಾನಂದರು ಹೇಗೆ ಪ್ರಸ್ತುತರಾಗುತ್ತಾರೆಂಬುದನ್ನು ಎಳೆ ಎಳೆಯಾಗಿ ತಿಳಿಸಿ ವಿವೇಕಾನಂದರ ಸ್ಮರಣೆಯಿಂದ ಭಾರತವು ಎಚ್ಚೆತ್ತು ಅದರಿಂದ ವಿಶ್ವಮಂಗಲವಾಗಬೇಕಿದೆ ಎಂದು ಕರೆಯಿತ್ತರು. ಶ್ರೀಯುತರು ಶಿಕ್ಷಣದ ಬಗ್ಗೆ ಮಾತನಾಡುತ್ತಾ ಎಳೆಯ ವಯಸ್ಸಿನಲ್ಲಿ ರಾಷ್ಟ್ರಭಕ್ತಿಯ ಬಗ್ಗೆ ಶಾಲೆಗಳಲ್ಲಿ ತಿಳಿಸಲಾಗುತ್ತದೆ, ಆದರೆ ಕಾಲೇಜುಗಳಲ್ಲಿ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸುವ ಕೆಲಸಗಳು ಆಗದಿರುವುದರಿಂದ  ತೆನೆ ಬಂದ ಕಾಲಕ್ಕೆ ಬೆಳೆಗೆ ಹುಳು ಬಿದ್ದಂತಾಗಿದೆ ಎಂದು ವಿಷಾಧಿಸಿದರು. ನಮ್ಮ ಯುವಕರಿಗೆ ದೇಶದ ಬಗ್ಗೆ ಭಕ್ತಿ-ಶ್ರದ್ಧೆ ಮೂಡುವಂತಹ ಕಾರ್ಯುಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಕರೆ ನೀಡಿದರು.

ಆಶೀರ್ವಚನ ನೀಡಿದ  ಮೈಸೂರು ರಾಮಕೃಷ್ಣಾಶ್ರಮದ ಸ್ವಾಮೀಜಿ ವೀರೇಶಾನಂದಜಿ ಮಹಾರಾಜ್ ಅವರು ತಮ್ಮ ಆಶೀರ್ವಚನದಲ್ಲಿ  ಪ್ರಸ್ತುತ ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ, ನೈತಿಕ ಮೌಲ್ಯಗಳ ಅಧ:ಪತನಕ್ಕೆ ವಿವೇಕಾನಂದರ ವಿಚಾರಗಳನ್ನು ಮರೆತಿರುವುದೇ ಕಾರಣ ಎಂದರು.

ಸಭೆಯ ಆರಂಭದಲ್ಲಿ ಪ್ರಾಂತ ಸಮಿತಿಯ ಸದಸ್ಯರಾದ ಡಾ. ಜನಾರ್ಧನ್ ರವರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಪ್ರಾಂತ ಸಮಿತಿಯ ಮತ್ತೊಬ್ಬ ಸದಸ್ಯರೂ ಹಾಗೂ ಸ್ಥಳೀಯ ಅಮೋಘ್ ಮಾಹಿನಿ ಮತ್ತು ಜನಮಿತ್ರ ಪತ್ರಿಕೆಯ ಪ್ರಧಾನ ಸಂಪಾದಕರಾದ ಶ್ರೀ ಕೆ.ಪಿ.ಎಸ್. ಪ್ರಮೋದ್ ಅವರು ವಂದನೆಗಳನ್ನು ಸಲ್ಲಿಸುತ್ತಾ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು. ಕಾರ್ಯಕ್ರಮಕ್ಕೆ ಮೊದಲು “ದೇಶದ ಪ್ರಸ್ತುತ ಪರಿಸ್ಥಿತಿಗಳಿಗೆ ವಿವೇಕಾನಂದರ ವಿಚಾರಗಳ ಅಗತ್ಯತೆ” ಬಗ್ಗೆ ಸ್ಥಳೀಯ ಅಮೋಘ್ ವಾಹಿನಿಯಲ್ಲಿ ಲೇಖಕ ಹರಿಹರಪುರ ಶ್ರೀಧರ್ ರವರು ಡಾ. ಬಿ.ವಿ.ವಸಂತ್ ಕುಮಾರರೊಡನೆ ಚರ್ಚೆ ನಡೆಸಿಕೊಟ್ಟರು.

ಸಂಘಟಕರಲ್ಲಿ ಒಬ್ಬನಾದ ನಾನು ಪುಸ್ತಕಗಲ ಪಕ್ಕದಲ್ಲಿ ಆಸೀನನಾಗಿರುವೆ

Rating
No votes yet

Comments

Submitted by ಗಣೇಶ Mon, 01/14/2013 - 00:19

>>>ಆದರೆ ಕಾಲೇಜುಗಳಲ್ಲಿ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸುವ ಕೆಲಸಗಳು ಆಗದಿರುವುದರಿಂದ ತೆನೆ ಬಂದ ಕಾಲಕ್ಕೆ ಬೆಳೆಗೆ ಹುಳು ಬಿದ್ದಂತಾಗಿದೆ ಎಂದು ವಿಷಾಧಿಸಿದರು. :) ಚಿತ್ರಲೇಖನ ಚೆನ್ನಾಗಿದೆ.-ಗಣೇಶ