ದೇವರ ಹುಚ್ಚು

ದೇವರ ಹುಚ್ಚು

ಪುಸ್ತಕದ ಲೇಖಕ/ಕವಿಯ ಹೆಸರು
ಜೋಗಿ
ಪ್ರಕಾಶಕರು
ಅಂಕಿತ ಪುಸ್ತಕ ಪ್ರಕಾಶನ
ಪುಸ್ತಕದ ಬೆಲೆ
95

ದುಕಿ ತೋರಿಸ್ತೀನಿ ನೋಡೋ,

ದೇವರನ್ನು ದಿಕ್ಕರಿಸಿ ಬದುಕ್ತೀನಿ.

-ರಂಗನಾಥ.

ಇಂದಿಗೂ ಜೀವಂತವಾಗಿರುವ ಜಾತಿ ವ್ಯವಸ್ಥೆ , ದೇವರ ಬಗೆಗಿನ ಆಸ್ತಿಕ ಹಾಗೂ ನಾಸ್ತಿಕ ವಿಚಾರಗಳ ಎರಡು ಮನಸ್ಸಿನ ಗೊಂದಲಗಳು, ನಂಬಿಕೆ, ಸಮಾಜದ ವ್ಯವಸ್ಥೆಗಳನ್ನು ಒಪ್ಪಿಕೊಳ್ಳಲೂ ಆಗದೆ, ಇತ್ತ ಒಪ್ಪದೆ ಇರಲೂ ಆಗದಂತಹ ಇಕ್ಕಟ್ಟಿನ ಸ್ಥಿತಿಯಲ್ಲಿ ಏಕಾಂಗಿಯಾಗಿ ಹೋರಾಡುತ್ತಿರುವ ಎರಡು ಮನಸ್ಸುಗಳ ಕಥೆಯೇ ದೇವರ ಹುಚ್ಚು.  ರಂಗನಾಥ ಹಾಗೂ ರಾಜಶೇಖರ ಈ ಕಾದಂಬರಿಯ ಕೇಂದ್ರ ಬಿಂದುಗಳು. ಈ ಎರಡು ಪಾತ್ರಧಾರಿಗಳ ಸುತ್ತ ಲೇಖಕರು ತಮ್ಮ ಕಥೆಯನ್ನು ಹೆಣೆಯಲು, ಅದಕ್ಕೊಂದು ನಿರ್ದಿಷ್ಟ ರೂಪ ಕೊಡಲು ಯಶಸ್ವಿಯಾಗಿದ್ದಾರೆ. ನಮ್ಮ ಸುತ್ತಲೂ ಇಂತಹ ಅನೆಕ ರೀತಿಯ ವಿಷಯಗಳು ಕಂಡರೂ ಅವುಗಳನ್ನು ಗಣನೆಗೆ ತೆಗೆದುಕೊಳ್ಳದೆ ನಮ್ಮ ಪಾಡಿಗೆ ನಾವಿದ್ದು ಬಿಡುತ್ತೇವೆ, ಇಂತಹ ವಿಚಾರಗಳನ್ನು ಹಿಡಿದಿಟ್ಟು ಅದಕ್ಕೆ ಕಾದಂಬರಿಯ ರೂಪ ಕೊಟ್ಟು ಓದುಗರ ಮನಮುಟ್ಟುವಲ್ಲಿ ಲೇಖಕ ಜೋಗಿಯವರು ಯಶಸ್ವಿಯಾಗಿದ್ದಾರೆ.  
ರಂಗನಾಥ (ಬ್ರಾಹ್ಮಣ) ಹಾಗೂ ರಾಜಶೇಖರ (ಕ್ಷೌರಿಕನ ಮಗ) ಬಾಲ್ಯ ಸ್ನೇಹಿತರು. ಇಬ್ಬರೂ ಜತೆಯಾಗಿಯೇ ಶಾಲೆಗೆ ಹೋಗುತ್ತಿದ್ದರು. ರಾಜಶೇಖರನ ಜತೆ ಇದ್ದುದರಿಂದ ಮೈಲಿಗೆ ಎಂಬ ಕಾರಣಕ್ಕಾಗಿ ರಂಗನಾಥನ ಅಮ್ಮ ಶಾಲೆಯಿಂದ ಬಂದ ಮಗನನ್ನು ಸ್ನಾನ ಮಾಡಿಸಿಯೇ ಒಳ ಕರೆಸಿಕೊಳ್ಳುತ್ತಿದ್ದುದು. ಈ ಪದ್ದತಿಯನ್ನು ಪ್ರತಿಭಟಿಸಿದರೆ ಭಯ, ಬೆತ್ತದ ರುಚಿ ನೋಡಬೇಕಾಗುತ್ತಿತ್ತು.  
ಮುಂದೆ ಪ್ರಾಪ್ತ ವಯಸ್ಕನಾದಾಗ, ದೇವರಿರುವನೆಂಬ ನಂಬಿಕೆಯನ್ನು ಅಲ್ಲಗಳೆಯುತ್ತಲೇ ಬಂದ ರಂಗನಾಥ, ಮನೆಯಲ್ಲಿ ನಡೆಯುತ್ತಿರುವ ಸತ್ಯನಾರಾಯಣ ಪೂಜೆಯ ಸಂದರ್ಭದಲ್ಲಿ  "ನೋಡೋ ನಾನು ಪೂಜೆಗೆ ಕೂತ್ಕೋಬೇಕಂತೆ..ಅದಕ್ಕೆ ಸ್ನಾನ ಮಾಡಿ ಮಡಿ ಉಟ್ಟು ಬಂದಿದ್ದೀನಿ. ಪೂಜೆ ಮುಗಿಯೋ ತನಕ ನಮ್ಮ ಮನೆಯವರನ್ನೂ ನಾನು ಮುಟ್ಟೋ ಹಾಗಿಲ್ಲ. ಆದ್ರೆ ನಿನ್ನ ಮುಟ್ತಿದ್ದೀನಿ. ನಿನ್ನನ್ನು ಮುಟ್ಟಿಯೇ ಹೋಗೋಣ ಅಂತ ಬಂದೆ. ಹೀಗೇ ಹೋಗಿ ಪೂಜೆ ಮಾಡ್ತೀನಿ, ಅದೇನಾಗುತ್ತೋ ನೋಡ್ತೀನಿ..ನಡಿಯೋ, ನೀನೂ ಬಾ ಅಂದವನೆ, ರಾಜಶೇಖರನ ಕೈ ಹಿಡಕೊಂಡು ಎಳಕೊಂಡೇ ಹೋದ". ಆಗಬಾರದ್ದೇನೂ ಆಗಲಿಲ್ಲ.
ಹೀಗೆ ಜಾತಿ ಹುಟ್ಟಿಸಿರುವ ಸಾವಿರಾರು ಬಂಧನಗಳ ಸುತ್ತಲಿನ ಸಮಗ್ರ ಚಿತ್ರಣವೇ ಈ ಕಾದಂಬರಿ.
"ಯಾವುದಕ್ಕೂ ನಾವು ಅಪರಿಚಿತರು ಅನ್ನೋದನ್ನ ತೋರಿಸ್ಕೋಬಾರ್ದು. ಹೆದರಿಸುತ್ತೆ. ಜೀವನಾನೂ ಅಷ್ಟೇ. ಗೊತ್ತು ಬಿಡಯ್ಯಾ ಅಂತ ಬದುಕ್ತಿರಬೇಕು. ನಡೀತಾ ಹೋದ್ರೆ ರಸ್ತೆ ತೆರಕೊಳ್ಳುತ್ತಾ ಹೋಗತ್ತೆ ಶೇಖರ. ಹೊಸ ಅನುಭವ ಅಂತ ಹಿಂಜರಿಕೆ ತೋರಿಸ್ತೀಯ. ನೀನು ಅನುಭವಿ ತರ ಹೋದ್ರೆ ಅದೇ ಹಿಂಜರಿಯುತ್ತೆ." ಕಾದಂಬರಿಯಲ್ಲಿನ ಈ ಸಾಲುಗಳು ವಾಸ್ತವ ಬದುಕಿಗೆ ಹಿಡಿದ ಕೈಗನ್ನಡಿಯಂತಿದೆ. ಸಮಾಜದಲ್ಲಿ ನಾವು ಹೆದರುತ್ತಾ ಬದುಕುತ್ತಿದ್ದರೆ ನಮ್ಮನ್ನು ಹೆದರಿಸೋರು ಜಾಸ್ತಿ ಆಗುತ್ತಾ ಹೋಗುತ್ತಾರೆ.
“ಈ ದೇವರು ಎಂಥ ಕಿಲಾಡಿ ನೋಡೋ , ನಾಸ್ತಿಕವಾದಕ್ಕೂ ತಾನೇ ಕಾರಣ ಅಂತ ಹೇಳ್ಕೋತಾನೇ.ಹಿರಣ್ಯಕಶಿಪು ದೇವರೇ ಇಲ್ಲ ನಾನೇ ದೇವರು ಅಂತಾನಲ್ಲ. ಅದಕ್ಕೂ ಜಯವಿಜಯರ ಶಾಪವೇ ಕಾರಣವಂತೆ . ಅದರ ಅರ್ಥ ಏನು ಹೇಳು ?ನಾಸ್ತಿಕವಾದವನ್ನು ಹುಟ್ಟು ಹಾಕಿದ್ದು ದೇವರೇ.ಇಷ್ಟೊಂದು ಪ್ರಭಾವಶಾಲಿಯಾದ ಅಸ್ತಿತ್ವವೊಂದು ಇರೋದಕ್ಕೆ ಸಾಧ್ಯವಾ ? ಈ ಪರಿಸರ , ಈ ದೇವಸ್ಥಾನ , ಆ ಭಕ್ತಿ ಇದೆಲ್ಲ ಇಲ್ಲದೇನೂ ಬದುಕೊಡಕ್ಕೆ ಆಗೋಲ್ವ ? ನಾನು ಬದುಕಿ ತೋರಿಸ್ತಿನಿ ನೋಡೋ .ದೇವರನ್ನು ದಿಕ್ಕರಿಸಿ ಬದುಕ್ತಿನಿ ಅಂದಿದ್ದ ರಂಗನಾಥ”. ರಂಗನಾಥನ ಸಾವಿನಿಂದ ಶುರುವಾಗುವ ಈ ಕಾದಂಬರಿ ಹಲವಾರು ಸೂಕ್ಷ್ಮ ವಿಷಯಗಳ ಸರಮಾಲೆಯನ್ನೇ ಹೊಂದಿದೆ.
“ನೀನು ಪೋಲೀಸ್ ಆಫೀಸರ್ ಆಗಬೇಕೂಂತ ನನ್ನಾಸೆ, ಆಧಿಕಾರ ಇರೋದು ಕಾನೂನಿನಲ್ಲಿ, ಧರ್ಮದಲ್ಲಿ ಅಲ್ಲ, ಧರ್ಮ ಕೊಡೋ ಅಧಿಕಾರಕ್ಕಿಂತ ಕಾನೂನು ಕೊಡೋ ಅಧಿಕಾರ ದೊಡ್ಡದು. ಹದಿನೆಂಟು ವರ್ಷ ದೇವರ ಒಟ್ಟಿಗಿದ್ದೋನು ನಾನು , ಅವನಿಲ್ಲ ಅಂತ ನಂಗೊತ್ತು.ಕಾನೂನಿನ ಒಟ್ಟಿಗೆ ತುಂಬಾ ವರ್ಷ ಇದ್ದರೆ ನಿಂಗೆ ಕಾನೂನು ಇಲ್ಲ ಅನ್ನೋದು ಗೊತ್ತಾಗುತ್ತೆ ಹೋಗು”. ಎಂದು ರಂಗನಾಥ ತನ್ನ ಗೆಳೆಯ ರಾಜಶೇಖರನಿಗೆ ಹೇಳುವ ಮಾತುಗಳಿವು.
ಪ್ರೀತಿ ಪ್ರೇಮ ಪ್ರಣಯಗಳೂ ಎಲ್ಲಿಂದಲೋ ಬಂದು ಹಾರಿ ಹೋಗುವ ಹಕ್ಕಿಗಳಂತೆ ಈ ಕಾದಂಬರಿಯಲ್ಲೂ ಹಾದುಹೋಗುತ್ತವೆ. ರಂಗನಾಥನ ಗಂಗತ್ತೆ ಎಳವೆಯಲ್ಲಿಯೇ ಗಂಡನನ್ನು ಕಳೆದುಕೊಂಡು ತವರುಮನೆಯಲ್ಲಿಯೇ ಇದ್ದಳು. ವಯೋಸಹಜ ಆಕರ್ಷಣೆಯಿಂದ ತನಗಿಂತ ಚಿಕ್ಕವನಾಗಿದ್ದ ರಾಜಶೇಖರನೊಂದಿಗೆ ಒಂದೆರಡು ಬಾರಿ ಮನೆಯವರ ಕಣ್ಣುತಪ್ಪಿಸಿ ತಿರುಗಾಡಿದ್ದಳೂ ಕೂಡ. ಆದರೆ ಮೂಢನಂಬಿಕೆಗಳು, ಜಾತಿ ವ್ಯವಸ್ಥೆ, ಆಚಾರಗಳಿಗೆ ಅವರ ಪ್ರೇಮವೂ ಸದ್ದಿಲ್ಲದೆ ಕರಗಿತ್ತು. ವ್ಯವಸ್ಥೆಯನ್ನು ಎದುರಿಸುವ ಧೈರ್ಯವನ್ನು  ಮಾಡಲು ಅವರಿಬ್ಬರಿಂದಲೂ ಆಗಲಿಲ್ಲ.
ಹೀಗೆ ಕಾದಂಬರಿಯುದ್ದಕ್ಕೂ ಎರಡು ವ್ಯಕ್ತಿತ್ವಗಳ ಸ್ವಂತ ನಿಲುವುಗಳು, ಅವುಗಳ ಹಾದಿಯಲ್ಲೇ ಸಾಗುವ, ಯಾರ ಮಾತನ್ನೂ ಕೇಳದ, ಎರಡು ವಿಭಿನ್ನ ವ್ಯಕ್ತಿಗಳ ದೃಷ್ಟಾಂತ. ಜ್ಯೋತಿಷಿಯೊಬ್ಬನಲ್ಲಿ ರಂಗನಾಥನ ಜಾತಕವನ್ನು ತೋರಿಸಿದಾಗ 68 ವರ್ಷ ಆಯಸ್ಸು ಅಂದಿದ್ದರಂತೆ ಆದರೆ ಅದನ್ನು ಹಾಸ್ಯ ಮಾಡುತ್ತಲೇ ಬಂದಿದ್ದ ಆತ ತನ್ನ ಬದುಕು ಸಾವು ನನ್ನ ಕೈಯಲ್ಲಿ, " ನನಗೀಗ ಐವತ್ತೆರಡು. ದೇವರು ನಿಗದಿ ಮಾಡಿದ ಅವಧಿಗೆ ಹದಿನಾರು ವರುಷ ಮೊದಲೇ ಸಾಯುತ್ತಿದ್ದೇನೆ. ಬದುಕಿಸುವ ಶಕ್ತಿ ಅವನಿಗಿದ್ದರೆ, ಅವನು ಬದುಕಿದ್ದರೆ ನನ್ನನ್ನು ಬದುಕಿಸಿಕೊಳ್ಳಬಹುದು." ಎಂದು  ಸಾಯುವಾಗಲೂ ತನ್ನ ವಾದವನ್ನು ಬಿಡದೆ, ರಾಜಶೇಖರನಿಗೆ ಬರೆದ ಪತ್ರದಲ್ಲಿ ತನ್ನ ತರ್ಕವನ್ನು ತಿಳಿಸಿರುತ್ತಾನೆ.
ಒಟ್ಟಿನಲ್ಲಿ ಕಾದಂಬರಿಯು ಯಾವುದೇ ಅಡಚಣೆಯಿಲ್ಲದೆ ಓದಿಸಿಕೊಂಡು ಹೋಗುತ್ತದೆ. ಕಾದಂಬರಿಯ ಬಹುಭಾಗ ವಾದ ಹಾಗು ತರ್ಕಗಳಲ್ಲಿ ಕಳೆಯುವಂತೆ ಮಾಡುತ್ತದೆ. ನೀವೂ ಓದಿ. ದೇವರ ಹುಚ್ಚು.