ಮಹನೀಯರ ಮತಿಹೀನ ಹೇಳಿಕೆಗಳು!
ಇತ್ತೀಚೆಗೆ ಎಲ್ಲ ಕಡೆ ಚರ್ಚಿತವಾಗುತ್ತಿರುವ ಒಂದೇ ವಿಷಯವೆಂದರೆ,ದೆಹಲಿಯಲ್ಲಿ ನಡೆದ ನತದೃಷ್ಟ ವಿದ್ಯಾರ್ಥಿನಿಯ ಅತ್ಯಾಚಾರ. ಅದೆಷ್ಟೊ ಜನ ಪ್ರತಿಭಟಸಿ ತಮ್ಮ ಕಳಕಳಿಯನ್ನು ಪ್ರಾಮಾಣಿಕವಾಗಿ ವ್ಯಕ್ತ ಪಡಿಸಿದರೆ,ಇನ್ನು ಕೆಲವರು ಅಂಥಹ ದ್ರೋಹಿಗಳಿಗೆ ಕೊಡಬಹುದಾದ ಶಿಕ್ಷೆ ಯಾವತರಹದ್ದಾಗಿರಬೇಕು? ಎಂಬುದರ ಕುರಿತು ವಿವರಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಆಗಲಿ ಈಗಲಾದರೂ ಇದೊಂದು ಗಂಭೀರವಾದ ಸಾಮಾಜಿಕ ಪೀಡನೆ ಎಂಬುದನ್ನು ಜನ ಮನಗೊಳ್ಳುತ್ತಿದ್ದಾರಲ್ಲಾ ಎಂದು ಕೊಳ್ಳುತ್ತಿದ್ದಾಗಲೇ, ವಿವಿಧ ಮಾಧ್ಯಮಗಳಲ್ಲಿ ದಿಕ್ಕು ತಪ್ಪಿಸುವ ಮೂರ್ಖ ಹೇಳಿಕೆಗಳನ್ನು ಕೊಡುತ್ತಿರುವ ಸಮಾಜದ ಗಣ್ಯವ್ಯಕ್ತಿಗಳನ್ನು ನೋಡಿದರೆ ನಗಬೇಕೊ.. ಅಳಬೇಕೊ.. ತಿಳಿಯುತ್ತಿಲ್ಲ. ಶಿಕ್ಷೆ ಅತ್ಯಾಚಾರಿಗಳಿಗೆ ಕೊಡುವದಕ್ಕಿಂತ ಮೊದಲು ಇವರಿಗೇ ಕೊಡುವುದು ಒಳ್ಳೆಯದು ಅನ್ನಿಸುತ್ತದೆ. ಮೊನ್ನೆ ಮೊನ್ನೆಯಷ್ಟೆ ಮಾಧ್ಯಮವೊಂದರಲ್ಲಿ ಮಹನೀಯರೊಬ್ಬರ ತಿಪ್ಪೆಸಾರಿಸುವ ಹೇಳಿಕೆ ಹೀಗಿತ್ತು.`ಅತ್ಯಾಚಾರಿಗಳು ಮೈಮೇಲೆ ಎರಗುವ ಮೊದಲು ಅವಳು ನೀವು ನನ್ನ ಸಹೋದರರು ಎಂದು ಅಂಗಲಾಚಿದ್ದರೆ ಈ ರೀತಿ ನಡೆಯತ್ತಲೇ ಇರಲಿಲ್ಲ'. ಅಷ್ಟೆ ಅಲ್ಲ ` ಅತ್ಯಾಚಾರಗಳು ಇಂಡಿಯಾ (ಅಂದರೆ ಅಕ್ಷರಸ್ತರು ವಾಸಿಸುವ ಪಟ್ಟಣ) ದಲ್ಲಿ ಮಾತ್ರ ನಡೆಯುತ್ತಿವೆಯೆ ಹೊರತೂ ಭಾರತ( ಮುಗ್ಧರು ವಾಸಿಸುವ ಹಳ್ಳಿ)ದಲ್ಲಿ ನಡೆಯುತ್ತಿಲ್ಲ'. ಆಹಾ! ಎಂಥಹ ಅದ್ಭುತ ಹೇಳಿಕೆ!. ಹುಟ್ಟಿಸಿದ ಅಪ್ಪನಿಂದಲೇ ಅದೆಷ್ಟೋ ಹೆಣ್ಣುಮಕ್ಕಳು ಶೀಲ ಕಳೆದುಕೊಂಡು ನಲುಗುತ್ತಿರುವಾಗ, ಈ ಸಹೋದರತ್ವದ ಬಗ್ಗೆ ಅದೂ ಅಂಥಹ ದುರಾತ್ಮರಲ್ಲಿ ಎಂಥಹ ಪರಿವರ್ತನೆ ತಂದೀತು?. ಇನ್ನು ಹಳ್ಳಿಗಳ ಸ್ಥಿತಿ ಪಟ್ಟಣಕ್ಕಿಂತಲೂ ಘೋರವಾಗಿರುವುದು ಇಂಥವರ ಗಮನಕ್ಕೆ ಬರುವುದು ಹೇಗೆ ಸಾಧ್ಯ?. ಅಲ್ಲಿಯ ಹರಟೆ ಕಟ್ಟೆಗಳಲ್ಲಿ ತುಂಬಿಕೊಂಡಿರುವ ಸೋಂಬೇರಿ ಉಂಡಾಡಿ ಗುಂಡರ, ಹಾದಿ ಬೀದಿಯಲ್ಲಿ ಅಡ್ಡಗಟ್ಟುವ ಬೀದಿ ಕಾಮಣ್ಣರ ಕಣ್ಣು ಕೈ ತಪ್ಪಿಸಿಕೊಂಡು ಸುರಕ್ಷಿತವಾಗಿ ತಿರುಗಾಡಲು ಅಲ್ಲಿಯ ಹೆಣ್ಣುಮಕ್ಕಳು, ಶಾಲಾ ಕಾಲೇಜುಗಳಿಗೆ ಹೋಗುವ ಬಾಲಕಿಯರು ಅದೆಷ್ಟು ಮಾನಸಿಕ ಹಿಂಸೆ ಅನುಭವಿಸಬೇಕಾಗಿದೆ ಗೊತ್ತೆ? ಅಕಸ್ಮಾತ್ ಅವರ ಕೈಯ್ಯಲ್ಲಿ ಸಿಕ್ಕಿದರೆ ಮುಗಿದೇ ಹೋಯಿತು. ಅಲ್ಲಿಯವರಿಗೆ ಮಗಳ ಶೀಲಕ್ಕಿಂತ ಕುಟುಂಬದ ಗೌರವವೇ ಹೆಚ್ಚಾಗಿರುವದರಿಂದ ಅವಳು ಸತ್ತರೂ ಈ ಅನ್ಯಾಯದ ಬಗ್ಗೆ ಸೊಲ್ಲೆತ್ತುವ ಧೈರ್ಯ ವನ್ನೇ ತೋರಲಾರರು. ಇವೆಲ್ಲವೂ ಹೋಗಲಿ ಎಂದು ಕೊಂಡರೆ, ಮಹಾನ್ ಧರ್ಮಗುರುಗಳು ಎನ್ನಿಸಿ ಕೊಂಡವರ ಹೇಳಿಕೆ ಓದಿ ನಖ ಶಿಖಾಂತ ಉರಿದು ಹೋಯಿತು. `ಹೆಣ್ಣು ಮನೆಯಲ್ಲೇ ಇದ್ದು ಪುರುಷನ ಅಗತ್ಯಗಳನ್ನು ಪೂರೈಸುವಲ್ಲಿ ಮಾತ್ರ ಗಮನಹರಿಸುವದರಿಂದ ಈ ರೀತಿ ಸಮಸ್ಯಗಳೇ ಬರುವುದಿಲ್ಲ. 'ಅಂದರೆ? ಹೆಣ್ಣು ಕೇವಲ ಪುರುಷನ ಭೋಗ್ಯ ವಸ್ತುವೆ? ಅವಳಿಗೆ ಸ್ವಂತ ಅಸ್ತಿತ್ವವೇ ಇಲ್ಲವೆ? ಒಂದು ವೇಳೆ ಮಹನೀಯರ ಮಾತಿನಂತೆ ನಡೆದುಕೊಂಡರೆ, ಉದ್ಯೋಗಸ್ತ ಹುಡುಗಿಯನ್ನೇ ಕೈ ಹಿಡಿಯಬೇಕೆಂದಿರುವ ಗಂಡಸರೆಲ್ಲಾ ಬ್ರಹ್ಮಚಾರಿಗಳಾಗಿ ಇರಬೇಕಾದೀತು ಹುಶಾರ್!. ಸ್ವಾಮೀಜೀ ಒಂದು ಮಾತು ಮರೆಯಬೇಡಿ ಇಂದು ಎಷ್ಟೊ ಮನೆಯಲ್ಲಿ ಒಲೆ ಉರಿಯುವುದೇ ಹೆಣ್ಣು ದುಡಿದು ತಂದಾಗ. ಇಂದು ನಾವು ನೀವು ವಾಸಿಸುವ ಸಮಾಜದಲ್ಲಿ ಕೇವಲ ಸ್ಥಿತಿವಂತ ಗಂಡ, ಸಂತೃಪ್ತ ಹೆಂಡತಿ ಅಷ್ಟೇ ಇಲ್ಲ. ಗಂಡು ದಿಕ್ಕಿಲ್ಲದ ತಂದೆತಾಯಿಯನ್ನು ಸಾಕಿ ಸಲಹುವ ಜವಾಬ್ದಾರಿ ಹೊತ್ತ ಅವಿವಾಹಿತೆಯರು, ಗಂಡನನ್ನು ಕಳೆದುಕೊಂಡು ಮಕ್ಕಳ ಭವಿಷ್ಯಕ್ಕಾಗಿ ಹಗಲಿರುಳು ಒಳಗೆ ಹೊರಗೆ ದುಡಿಯುವ ಅನಿವಾರ್ಯತೆಯಿರುವ ವಿಧವೆಯರು, ಗಂಡನಿಂದ ಪರಿತ್ಯಕ್ತರಾದ, ತಂದೆತಾಯಿಗಳನ್ನು ಕಳೆದುಕೊಂಡ ತಬ್ಬಲಿ ಹೆಣ್ಣುಮಕ್ಕಳು, ಗಂಡನ ಬಿಡಿಗಾಸು ಸಂಬಳಕ್ಕೆ ಮನೆ ನಡೆಯಲಾರದೇ ಅನಿವಾರ್ಯವಾಗಿ ಹೊರಗೆ ದುಡಿಯುವ ಗೃಹಿಣಿಯರು ಮುಂತಾದವರೇ ಅತ್ಯಧಿಕವಾಗಿ ಇಲ್ಲಿ ಬದುಕುತ್ತಿದ್ದಾರೆ. ಹಾಗಾದರೆ ಇವರಿಗೆಲ್ಲರಕ್ಷಣೆ ಕೊಡಬೇಕಾದ್ದು ಸಮಾಜದ ಹೊಣೆಯಲ್ಲವೆ? ಸಾಧ್ಯವಾದರೆ ಸಮಸ್ಯೆಗೆ ಆರೋಗ್ಯಕರ ಪರಿಹಾರ ಹುಡುಕಿ.ಇಲ್ಲ ವಾದರೆ ಮೌನವಾಗಿದ್ದು ಗೌರವ ಉಳಿಸಿಕೊಳ್ಳಿ.
ಬಹುಷಃ ಇದು ಸಮಾಜದ ಜೊತೆ ಜೊತೆಗೇ ಹುಟ್ಟಿ ಬಂದಿರುವದರಿಂದ, ಈ ವ್ಯಾಧಿಗೆ ಮದ್ದರೆಯುವುದು ಅಷ್ಟು ಸುಲಭ ಸಾಧ್ಯವಲ್ಲವೆನ್ನಿಸುತ್ತದೆ. ಅಷ್ಟರ ನಡುವೆ ಇನ್ನೊಂದು ಪ್ರಶ್ನೆ ನನ್ನ ಮನವನ್ನು ಕಾಡುವುದೆಂದರೆ, ಕೇವಲ ದೈಹಿಕ ಅತ್ಯಾಚಾರವಷ್ಟೇ ಅತ್ಯಾಚಾರವೆ? ಇದು ಮೇಲ್ನೋಟಕ್ಕೆ ಕಂಡು ಬರುವದರಿಂದ ಇಲ್ಲಿ ಅತ್ಯಾಚಾರಿಗೆ ನಾವಂದುಕೊಂಡ ಶಿಕ್ಷೆ ಕೊಡಬಹುದು. ಆದರೆ ದಿನನಿತ್ಯ ರಸ್ತೆಯಲ್ಲಿ, ಬಸ್ಸಿನಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಓಡಾಡುವ, ಕಛೇರಿಯಲ್ಲಿ ಕೆಲಸಮಾಡುವ ಹೆಣ್ಣುಮಕ್ಕಳನ್ನು ಕೆಟ್ಟದಾಗಿ ನೋಡಿ ಮುಜುಗರ ಹುಟ್ಟಿಸುವ, ಅಕಸ್ಮಾತ್ ಎಂಬಂತೆ ಎಲ್ಲೆಂದರಲ್ಲಿ ಕೈಯಾಡಿಸಿ ಕಣ್ಣಲ್ಲಿ ನೀರು ತರಿಸುವ, ಅಶ್ಲೀಲ ಡೈಲಾಗ್ ಹೊಡೆಯುತ್ತ ಸನಿಹದಲ್ಲಿ ಹಾದು ಹೋಗಿ ಅವಮಾನಿಸುವ ಈ ವಿಕೃತ ಮನಸ್ಸಿನ ಪುರುಷರು ಎಸಗುವ ಮಾನಸಿಕ ಅತ್ಯಾಚಾರವೂ ಅತ್ಯಾಚಾರವೇ ಅಲ್ಲವೆ? ಆದರೆ ಇವರಲ್ಲಿ ಬಹುತೇಕರು ಸೂಟು ಬೂಟುಗಳಲ್ಲಿ, ಕೋಟು ಪ್ಯಾಂಟುಗಳಲ್ಲಿ ಅಡಗಿ, ಏಸಿಕಾರು ಬಂಗ್ಲೆಗಳಲ್ಲಿ ಮೆರೆಯುವವರು. ಹೆಂಗಳೆಯರ ದುಸ್ವಪ್ನವಾಗಿ ಕಾಡುತ್ತ ಆಡಲಾರದ, ಅನುಭವಿಸಲಾರದ ಇಂತಹ ನೋವುಗಳ ಹಿಂದಿರುವ ಈ ಮಾನಸಿಕ ಅತ್ಯಾಚಾರಿಗಳಿಗೆ ಶಿಕ್ಷೆಕೊಡುವವರು ಯಾರು? ಕಾಲವೇ ತಿಳಿಸಬೇಕು.
Comments
ರೂಪಾ ಅವರೆ, ಇಂದು
In reply to ರೂಪಾ ಅವರೆ, ಇಂದು by ಮಮತಾ ಕಾಪು
>>>ಹೆಣ್ಣುಮಕ್ಕಳನ್ನು ಮಾನಸಿಕ