ಸತ್ಯ ದರ್ಶನ (ಕಥೆ)
ಧರ್ಮೇಗೌಡರಿಗೆ ತಮ್ಮ ಮಗಳನ್ನು ಸ್ನಾತಕೋತ್ತರ ಪದವಿಗಾಗಿ ಮೈಸೂರಿಗೆ ಕಳುಹಿಸಿದ್ದೇ ತಪ್ಪಾಗಿಹೋಯಿತೇನೋ ಎಂದು ತೀವ್ರ ಕಳವಳವಾಗಿತ್ತು. ಇದ್ದ ಒಬ್ಬಳೇ ಮಗಳು ನಿರ್ಮಲಾ ಸ್ನಾತಕೋತ್ತರ ಪದವಿಯ ಜೊತೆಗೆ ಗೌಡರಿಗೆ ಭಾವೀ ಅಳಿಯನನ್ನೂ ಹುಡುಕಿ ಕರೆತಂದಿದ್ದಳು. ಹುಡುಗನೇನೋ ಲಕ್ಷಣವಾಗಿದ್ದ. ಜೊತೆಗೆ ಬುದ್ಧಿವಂತ. ಸ್ನಾತಕೋತ್ತರ ಪದವಿಯಲ್ಲಿ ಮೂರು ಚಿನ್ನದ ಪದಕ ಪಡೆದವನು. ಆದರೆ ಗೌಡರಿಗೆ ಅವನು ತಮಗಿಂತ ಕೀಳು ಜಾತಿಯವನೆನ್ನುವುದು ನುಂಗಲಾರದ ತುತ್ತಾಗಿತ್ತು. ಯಾವುದೇ ಕಾರಣದಿಂದಲೂ ಈ ಮದುವೆಗೆ ಒಪ್ಪಲು ಸಾಧ್ಯವಿಲ್ಲ ಎನ್ನಿಸಿ ತಮ್ಮ ದೃಢನಿರ್ಧಾರವನ್ನು ಮಗಳಿಗೆ ಸ್ಪಷ್ಟವಾಗಿ ತಿಳಿಸಿದ್ದರು. ಆದರೆ ಮಗಳು ತಂದೆಗಿಂತ ಹಠಮಾರಿ. ತಾನು ಅಂದುಕೊಂಡಿದ್ದನ್ನು ಸಾಧಿಸಬಲ್ಲ ಪ್ರವೀಣೆ. ಮದುವೆಯಾದರೆ ಅವನನ್ನೇ ಎಂದು ಹಠ ಹಿಡಿದು ಕುಳಿತ ನಿರ್ಮಲಾಳಿಗೆ ಪ್ರತ್ಯುತ್ತರವಾಗಿ ಆಗೊಮ್ಮೆ ನೀನು ನಿನ್ನ ಹಠವನ್ನೇ ಮುಂದುವರಿಸಿ ಅವನನ್ನೇ ಮದುವೆಯಾದರೆ ಮರುದಿನವೇ ನನ್ನ ಮತ್ತು ನಿನ್ನ ಅಮ್ಮನ ಶವಗಳ ಅಂತ್ಯಸಂಸ್ಕಾರ ಒಟ್ಟಿಗೇ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.
ನಿರ್ಮಲಾಳನ್ನು ತನ್ನ ತಂದೆಯ ಮಾತುಗಳು ಅಧೀರಳನ್ನಾಗಿಸಿದವು. ಒಂದು ಕಡೆ ತಾನು ತನ್ನ ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಹುಡುಗ ಕೈ ಬೀಸಿ ಕರೆಯುತ್ತಿದ್ದರೆ, ಮತ್ತೊಂದೆಡೆ ತನಗೆ ಜನ್ಮ ಕೊಟ್ಟು ಚಿಕ್ಕಂದಿನಿಂದಲೂ ಯಾವುದೇ ಕೊರತೆಯಾಗದಂತೆ ಮುದ್ದಿನಿಂದ ಸಾಕಿ ಸಲುಹಿದ್ದ ತಂದೆ-ತಾಯಿಯರ ಮುಖಗಳು ಕಾಣಿಸಿ ತೀವ್ರ ಮಾನಸಿಕ ತೊಳಲಾಟ ಪ್ರಾರಂಭವಾಯಿತು. ಏನೊಂದೂ ನಿರ್ಧಾರ ತೆಗೆದುಕೊಳ್ಳಲಾಗದೇ ಸಮಯವೇ ಇದಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ನಿರ್ಧರಿಸಿಕೊಂಡು ಖಾಸಗಿ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿ ಕೆಲಸಕ್ಕೆ ಸೇರಿ ತನ್ನ ಪ್ರಿಯಕರನಿಗೆ ಮೊಬೈಲಿನ ಮೆಸೇಜುಗಳ ಮೂಲಕ ಒಲವಿನ ಓಲೆಗಳನ್ನು ಕಳುಹಿಸುತ್ತಾ, ಸಹನೆಯ ಶಾಂತಿಮಂತ್ರ ಜಪಿಸುತ್ತಾ ಮಂಕು ಕವಿದ ಮನಸ್ಸಿನೊಂದಿಗೆ ದಿನ ಕಳೆಯತೊಡಗಿದಳು. ಮನೆಯಲ್ಲಿ ಅಪ್ಪ ಮಗಳ ಮುಸುಕಿನ ಗುದ್ದಾಟ ನಡೆದೇ ಇತ್ತು.
ಬೆಳಗಾದರೆ ಬಾನಿನಲ್ಲಿ ಉದಯಿಸಿ ಸಂಜೆಯಾದರೆ ಕಣ್ಮರೆಯಾಗುತ್ತಿದ್ದ ಸೂರ್ಯನೊಂದಿಗೆ ದಿನಗಳು ಕಳೆಯುತ್ತಿದ್ದವೇ ಹೊರತು ತನ್ನ ಸಂಕಷ್ಟಕ್ಕೆ ಯಾವುದೇ ಪರಿಹಾರ ನಿರ್ಮಲಾಳಿಗೆ ಸದ್ಯದಲ್ಲಿ ಕಾಣಿಸಲಿಲ್ಲವಾಗಿ ಅವರ್ಣನೀಯ ಆತಂಕವೊಂದು ಅವಳನ್ನು ಕಾಡತೊಡಗಿತು.
ಕೊನೆಗೊಂದು ದಾರಿ ಕಂಡಂತಾಗಿ ತಮ್ಮ ಕುಟುಂಬ ವ್ಶೆದ್ಯೆಯಾಗಿದ್ದ ಶಾರದಾದೇವಿಯರನ್ನು ಭೇಟಿ ಮಾಡಿ ತನ್ನ ಅಂತರಾಳವನ್ನು ಅವರ ಇದಿರಿಗೆ ತೆರೆದಿಟ್ಟು ಪರಿಹಾರ ಸೂಚಿಸುವಂತೆ ಅಲವತ್ತುಕೊಂಡಳು. ನಿರ್ಮಲಾಳ ಮಾನಸಿಕ ತೊಳಲಾಟವನ್ನು ಅರ್ಥ ಮಾಡಿಕೊಂಡ ಶಾರದಾದೇವಿಯವರು ಪ್ರತಿಯೊಬ್ಬ ವ್ಯಕ್ತಿಗೆ ಅವರವರ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಸಂಪೂರ್ಣ ಸ್ವಾತಂತ್ರ್ಯವಿದೆ. ನೀನು ಮಾಡಿರುವುದು ಅಪರಾಧವೇನಲ್ಲ, ಆದರೆ ಇದರಿಂದ ಉದ್ಭವಿಸಬಹುದಾದ ಕೌಟುಂಬಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ತೀವ್ರ ಎಚ್ಚರಿಕೆಯಿಂದ ನಿಭಾಯಿಸಬೇಕು. ಏನೋ ಮಾಡಲು ಹೋಗಿ ಎಲ್ಲಾ ಗೊಂದಲಮಯವಾಗಿ ಕೊನೆಗೆ ನಿರಂತರ ಮಾನಸಿಕ ಅಶಾಂತಿಗೆ ಸಿಲುಕಿಕೊಳ್ಳುವುದು ಬೇಡ. ಇತ್ತೀಚೆಗೆ ಜಾತಿಯೆಂಬ ಹುಚ್ಚು ಕಲ್ಪನೆಗೆ ಒಳಗಾಗಿ ಕೆಲವು ಅಜ್ಞಾನಿಗಳು ಅಂತರ್ಜಾತಿ ವಿವಾಹವಾದ ಹುಡುಗ-ಹುಡುಗಿಯರನ್ನೇ ಮನೆತನದ ಮರ್ಯಾದೆ ಎಂಬ ಪ್ರತಿಷ್ಠೆಗೆ ಬಲಿಕೊಡುತ್ತಿರುವ ಅಲ್ಲೊಂದು ಇಲ್ಲೊಂದು ಪ್ರಕರಣಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇವೆ. ಆದುದರಿಂದ ಆತುರಪಡದೆ ಸಹನೆಯಿಂದ ಕಾಯುವುದೊಂದೇ ನಿನಗಿರುವ ದಾರಿ, ನಿನ್ನ ತಂದೆಯವರನ್ನೊಮ್ಮೆ ಕಂಡು ಈ ವಿಷಯವಾಗಿ ಮಾತನಾಡುತ್ತೇನೆ ಎಂದು ಹೇಳಿ ಸಮಾಧಾನಪಡಿಸಿ ಕಳುಹಿಸಿದರು.
ಶಾರದಾದೇವಿಯವರು ತಮ್ಮ ಕೆಲಸ ಕಾರ್ಯಗಳ ನಡುವೆ ಬಿಡುವು ಮಾಡಿಕೊಂಡು ಒಂದು ದಿನ ಸಂಜೆ ಧರ್ಮೇಗೌಡರ ಮನೆಗೇ ಹೋದರು. ಗೌಡರಿಗೆ ಅವರನ್ನು ಕಂಡರೆ ಅತೀವ ಗೌರವವಿತ್ತು. ಮೊದಲಿನಿಂದಲೂ ತಮ್ಮ ಕುಟುಂಬದ ಆರೋಗ್ಯದ ವಿಷಯವಾಗಿಯೇ ಅಲ್ಲದೆ ಕೆಲವಾರು ಸಾಮಾನ್ಯ ಕೌಟುಂಬಿಕ ಸಮಸ್ಯೆಗಳಿಗೆ ವ್ಶೆದ್ಯೆಯ ಮೂಲಕ ಪರಿಹಾರ ಕಂಡುಕೊಂಡಿದ್ದರು. ಧರ್ಮೇಗೌಡರೇನೂ ಅನಕ್ಷರಸ್ಥರಾಗಿರಲಿಲ್ಲ. ಪದವೀಧರರಾಗಿ ಸರ್ಕಾರಿ ನೌಕರಿ ಪಡೆದು ಉನ್ನತ ಹುದ್ದೆಯಲ್ಲಿದ್ದರು. ಶಾರದಾದೇವಿಯವರು ನಿರ್ಮಲಾಳ ವಿಷಯವನ್ನು ಪ್ರಸ್ತಾಪಿಸಿದಾಗ ಏನೊಂದೂ ಹೇಳಲು ತೋಚದೇ ಆಲೋಚನಾಮಗ್ನರಾದರು. ಅವರಿಗೆ ಎಷ್ಟೇ ಯೋಚಿಸಿದರೂ ಕೀಳುಜಾತಿಯ ಹುಡುಗನನ್ನು ಅಳಿಯನನ್ನಾಗಿ ಮಾಡಿಕೊಳ್ಳಲು ಅವರ ಮನಸ್ಸು ಒಪ್ಪಲಿಲ್ಲ. ಶಾರದಾದೇವಿಯವರು ಅವರಿಗೆ ಪರಿಪರಿಯಾಗಿ ಮಾನವ ಜೀವಿಯ ಹುಟ್ಟು ಸಾವುಗಳ ಬಗ್ಗೆ ವ್ಶೆಜ್ಞಾನಿಕವಾಗಿ ವಿವರಿಸಿ ಹೇಳಿದರು. ಜಾತಿ ಮತ ಪಂಥಗಳು ಮಾನವನಿರ್ಮಿತ. ದೇಹವೆಂಬುದು ದೇವನಿರ್ಮಿತವಾದದ್ದು. ನಮ್ಮಲ್ಲಿ ಎಲ್ಲರಲ್ಲೂ ಹರಿಯುತ್ತಿರುವುದು ಒಂದೇ ರಕ್ತ, ನಾವು ಹುಟ್ಟುವಾಗ ಯಾವುದೇ ಜಾತಿಯ ಪ್ರತಿನಿಧಿಗಳಾಗಿರುವುದಿಲ್ಲ. ನಮ್ಮ ಸುತ್ತಮುತ್ತಲ ಸಾಮಾಜಿಕ ವ್ಯವಸ್ಥೆ ನಮಗೊಂದು ಜಾತಿಯನ್ನು ನೀಡಿ ಮೇಲು-ಕೀಳೆಂಬ ಭೇದಭಾವವನ್ನು ಸೃಷ್ಟಿಸಿದೆ. ಇತ್ತೀಚೆಗೆ ಜಾತಿಯ ಪ್ರಭಾವ ಸಾಕಷ್ಟು ಕಡಿಮೆಯಾಗಿ ಸಮಾಜದ ಪ್ರಜ್ಞಾವಂತ ಜನ ಅಂತರ್ಜಾತೀಯ ವಿವಾಹಗಳಿಗೆ ಮಾನ್ಯತೆ ನೀಡುತ್ತಿದ್ದಾರೆ ಎಂಬುದನ್ನು ಉದಾಹರಣೆಗಳ ಮೂಲಕ ವಿವರಿಸಿದರೂ ಗೌಡರು ಜಗ್ಗಲಿಲ್ಲ. ‘ಗೌಡರೇ ಕೆಲವು ಪಟ್ಟಭದ್ರ ಹಿತಾಸಕ್ತ್ತಿಗಳು ಮಾತ್ರ ತಮ್ಮ ಸ್ವಾರ್ಥಕ್ಕಾಗಿ ಇಂದಿಗೂ ಜಾತಿವ್ಯವಸ್ಥೆಯನ್ನು ಪೋಷಿಸಿಕೊಂಡು ಬರುತ್ತಿವೆ. ದಯವಿಟ್ಟು ಯೋಚಿಸಿ ನೋಡಿ. ನಾವೆಲ್ಲಾ ನಮ್ಮ ಸುತ್ತಾ ಕಟ್ಟಿಕೊಂಡಿರುವ ಜಾತಿಯೆಂಬ ಬೇಲಿಯಿಂದ ನಮ್ಮ ಮಕ್ಕಳಾದರೂ ಹೊರಗೆ ಬಂದು ಮುಕ್ತರಾಗಿ ಸೌಹಾರ್ದಯುತವಾದ ಸಮಾಜವನ್ನು ನಿರ್ಮಿಸಲಿ’ ಎಂದು ಏನೇ ಹೇಳಿದರೂ ಗೌಡರು ಮನಸ್ಸು ಬದಲಿಸಲಿಲ್ಲ.
ಶಾರದಾದೇವಿಯವರಿಗೂ ಅವರನ್ನು ಒತ್ತಾಯಪೂರ್ವಕವಾಗಿ ಇಕ್ಕಟ್ಟಿಗೆ ಸಿಲುಕಿಸುವ ಉದ್ದೇಶವೂ ಇರಲಿಲ್ಲ. ಗೌಡರು ‘ದಯವಿಟ್ಟು ಬೇಸರಪಟ್ಟುಕೊಳ್ಳಬೇಡಿ ಮೇಡಂ, ಎಷ್ಟೇ ಯೋಚಿಸಿದರೂ ನನಗೆ ಈ ಸಂಬಂಧ ಇಷ್ಟವಾಗುತ್ತಿಲ್ಲ’ ಎಂದಾಗ ‘ಪರವಾಗಿಲ್ಲ ಗೌಡರೇ.. ಮತ್ತೊಮ್ಮೆ ಸಾವಧಾನವಾಗಿ ಯೋಚಿಸಿ ನೋಡಿ.. ನಿಮ್ಮ ನಿರ್ಧಾರ ನಿಮ್ಮದು’ ಎಂದು ತಿಳಿಸಿ ಹೊರಟರು.
ಎಂದಿನಂತೆ ದಿನಗಳು ಉರುಳತೊಡಗಿದವು. ನಿರ್ಮಲಾ ತನ್ನ ಭವಿಷ್ಯದ ಬಗ್ಗೆ ಚಿಂತಿಸುತ್ತಾ ದಿನೇ ದಿನೇ ಮಾನಸಿಕವಾಗಿ ಕುಗ್ಗತೊಡಗಿದಳು. ದೈಹಿಕವಾಗಿ ಕೃಶವಾಗತೊಡಗಿದಳು. ಏನು ಮಾಡಬೇಕೆಂದು ತೋಚದೆ ಯಾವಾಗಲೂ ಖಿನ್ನಳಾಗಿರುತ್ತ್ತಿದ್ದಳು. ತೀವ್ರವಾಗಿ ಬಾಡಿಹೋದ ಮಗಳ ಮುಖ ಕಂಡು ಧರ್ಮೇಗೌಡರಿಗೆ ಮನದಲ್ಲಿ ‘ಅಯ್ಯೋ’ ಎನಿಸಿ ಮರುಕ ಹುಟ್ಟಿದರೂ ಅವರ ಮನಸ್ಥಿತಿ ಬದಲಾಗಲಿಲ್ಲ. ಅವರ ಪತ್ನಿ ಜಾನಕಮ್ಮನವರಿಗೆ ಒಂದು ಕಡೆ ಮಗಳ ಹಠ ಇನ್ನೊಂದು ಕಡೆ ಗಂಡನ ಕಠಿಣ ನಿರ್ಧಾರದಿಂದ ಮನೆಯೇ ಒಂದು ಮರುಭೂಮಿಯಾಗಿದೆಯೇನೋ ಎನ್ನಿಸತೊಡಗಿತು. ಅವರು ಕೆಲವೊಮ್ಮೆ ಮಗಳಿಗೆ, ಇನ್ನೊಮ್ಮೆ ಗಂಡನಿಗೆ ನಯವಾಗಿ ಬುದ್ಧಿವಾದ ಹೇಳುವ ಪ್ರಯತ್ನ ಮಾಡಿದರೂ ಅವರ ಯಾವ ಪ್ರಯತ್ನಗಳೂ ಯಶಸ್ವಿಯಾಗಲಿಲ್ಲ. ಮದುವೆಯಾಗಿ ಮೈಮನಗಳನ್ನು ತಣಿಸಿಕೊಂಡು ಸುಖವಾಗಿರಬೇಕಾದ ವಯಸ್ಸಿನಲ್ಲಿ ಮಗಳು ಮೌನವಾಗಿ ಸವೆದು ಹೋಗುತ್ತಿರುವುದನ್ನು ಕಂಡು ಜಾನಕಮ್ಮನವರಿಗೆ ದಿನವೂ ತಮ್ಮ ತಲೆಯ ಮೇಲೆ ಭಾರವಾದ ಕಲ್ಲು ಹೊತ್ತುಕೊಂಡು ತಿರುಗುತ್ತಿರುವಂತೆ ಭಾಸವಾಗತೊಡಗಿತು.
ಎಲ್ಲದಕ್ಕೂ ಪರಿಹಾರವನ್ನು ನೀಡುವ ಸಮಯ ಧರ್ಮೇಗೌಡರಿಗಾಗಿಯೇ ಹೀಗೊಂದು ಸನ್ನಿವೇಶವನ್ನು ಸೃಷ್ಟಿ ಮಾಡಿತು. ಅವರ ವಯಸ್ಸಾದ ತಂದೆ-ತಾಯಂದಿರು ಹಳ್ಳಿಯಲ್ಲಿ ತೋಟ ಹೊಲ ಮನೆ ನೋಡಿಕೊಂಡು ಆರೋಗ್ಯವಂತರಾಗಿ ಯಾವುದೇ ತೊಂದರೆಯಿಲ್ಲದಂತೆ ತಮ್ಮ ಇಳಿವಯಸ್ಸನ್ನು ಕಳೆಯುತ್ತಿದ್ದರು. ಇದ್ದಕ್ಕಿದ್ದಂತೆಯೇ ಅವರ ತಂದೆಗೆ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡು ದಿನೇ ದಿನೇ ನೋವು ತೀವ್ರವಾಗಿ ತಡೆದುಕೊಳ್ಳಲಾಗದೆ ಮಗನಿಗೆ ಕರೆ ಮಾಡಿದರು. ಧರ್ಮೇಗೌಡರು ಹಳ್ಳಿಗೆ ಹೋಗಿ ತನ್ನ ತಂದೆಯನ್ನು ಕಾರಿನಲ್ಲಿ ಕರೆದುಕೊಂಡು ಬಂದು ಎಂದಿನಂತೆ ತಮ್ಮ ಕುಟುಂಬ ವೈದ್ಯರಾದ ಶಾರದಾದೇವಿಯರಲ್ಲಿ ತೋರಿಸಿದರು.
ಶಾರದಾದೇವಿಯವರು ನಗರದ ಸರ್ಕಾರಿ ಆಸ್ಪತ್ರೆಯ ಜನಪ್ರಿಯ ವೈದ್ಯರಾಗಿದ್ದರು. ಪ್ರಾಥಮಿಕ ಪರೀಕ್ಷೆಯ ನಂತರ ರೋಗಲಕ್ಷಣದ ತೀವ್ರತೆಯ ಬಗ್ಗೆ ಅನುಮಾನಗೊಂಡು ಅವರೇ ವೈಯುಕ್ತಿಕ ಮುತುವರ್ಜಿ ವಹಿಸಿ ಖುದ್ದಾಗಿ ನಿಂತು ತಮ್ಮ ಸಹದ್ಯೋಗಿ ತಜ್ಞವೈದ್ಯರಲ್ಲಿ ಗೌಡರ ತಂದೆಯನ್ನು ತಪಾಸಣೆ ಮಾಡಿಸಿದರು. ಹಲವಾರು ಪರೀಕ್ಷೆಗಳ ನಂತರ ರೋಗಿಯ ಹೊಟ್ಟೆಯಲ್ಲಿ ಸಣ್ಣ ಗಡ್ಡೆಯೊಂದು ಬೆಳೆದಿದೆಯೆಂದೂ ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಿಸಬೇಕೆಂದು ತಜ್ಞವೈದ್ಯರು ತಿಳಿಸಿ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಎರಡು ಬಾಟಲು ರಕ್ತದ ಅವಶ್ಯಕತೆಯಿದೆಯೆಂದು ತಿಳಿಸಿದರು. ಗೌಡರ ರಕ್ತದ ಗುಂಪು ಅವರ ತಂದೆಯ ರಕ್ತದ ಗುಂಪಿಗೆ ಹೊಂದಿಕೆಯಾಗಲಿಲ್ಲವಾದ್ದರಿಂದ ಆಸ್ಪತ್ರೆಯ ಬ್ಲಡ್‍ಬ್ಯಾಂಕಿನಿಂದ ಶಾರದಾದೇವಿಯವರು ರಕ್ತದ ಏರ್ಪಾಟು ಮಾಡಿದರು. ತಮ್ಮ ಸಹಾಯಕನಿಂದ ರಕ್ತದ ಎರಡು ಬಾಟಲುಗಳನ್ನು ತರಿಸಿಕೊಂಡು ತಮ್ಮ ಮೇಜಿನ ಮೇಲಿಟ್ಟು ಗೌಡರನ್ನು ಕರೆದು ಎದುರಿಗೆ ಕೂರಿಸಿಕೊಂಡು ‘ಗೌಡರೇ ಈ ಬಾಟಲುಗಳಲ್ಲಿರುವ ರಕ್ತ ಕೀಳುಜಾತಿಯ ಮನುಷ್ಯರು ನೀಡಿರುವುದು. ಇದು ನಿಮ್ಮ ತಂದೆಯವರ ದೇಹದಲ್ಲಿ ಸೇರಿಹೋಗಿ ಅವರೂ ಕೀಳು ಜಾತಿಯವರಾಗಿಬಿಡುತ್ತಾರೆ.. ಯೋಚಿಸಿ ನೋಡಿ.. ಈ ರಕ್ತವನ್ನು ನಿಮ್ಮ ತಂದೆಯವರ ದೇಹದಲ್ಲಿ ಸೇರಿಸಬೇಕೋ ಬೇಡವೋ ಎಂಬುದನ್ನು ತಕ್ಷಣವೇ ತಿಳಿಸಿ. ಶಸ್ತ್ರಚಿಕಿತ್ಸೆಗೆ ವಿಳಂಬವಾಗುತ್ತದೆ’ ಎಂದಾಗ ವೈದ್ಯೆ ಹೇಳಿದ ಮಾತಿನ ಅರ್ಥ ತಿಳಿದ ಧರ್ಮೇಗೌಡರು ಏನೊಂದೂ ಉತ್ತರಿಸಲಾಗದೇ ಚಡಪಡಿಸುತ್ತಾ ಕುಳಿತುಬಿಟ್ಟರು. ‘ಯಾಕೆ ಗೌಡರೇ ಸುಮ್ಮನಾದಿರಿ.. ನಿಮ್ಮ ಮಗಳು ಕೀಳುಜಾತಿಯ ಹುಡುಗನನ್ನು ಮದುವೆಯಾದರೆ ಹುಟ್ಟುವ ಮಗುವಿನಲ್ಲೂ ಇದೇ ರಕ್ತ ಹರಿಯುತ್ತಿರುತ್ತದಲ್ಲವೇ..’ ಎಂದು ವೈದ್ಯೆ ತುಸು ಮೊನಚಾಗಿಯೇ ಕೇಳಿದರು. ಗೌಡರು ಎದ್ದು ನಿಂತು ಕೈ ಮುಗಿದು ‘ಮೇಡಂ.. ನಿಮ್ಮ ಮಾತಿನ ಅರ್ಥ ಸಂಪೂರ್ಣವಾಗಿ ನನಗಾಗಿದೆ. ನೀವು ಇಂತಹ ಒಂದು ನೈಸರ್ಗಿಕ ಸತ್ಯದ ದರ್ಶನ ಮಾಡಿಸಿ ಜಾತಿಯೆಂಬ ಪೊರೆಯಿಂದ ಮುಚ್ಚಿದ್ದ ನನ್ನ ಕಣ್ಣುಗಳನ್ನು ತೆರೆಸಿದಿರಿ. ಇನ್ನೆಂದೂ ಯಾರು ಕೇಳಿದರೂ ನನ್ನ ಜಾತಿ ಮನುಷ್ಯಜಾತಿಯೆಂದೇ ತಿಳಿಸುತ್ತೇನೆ. ನನ್ನ ಮಗಳ ನಿರ್ಧಾರಕ್ಕೆ ತಲೆಬಾಗಿ ಯಾರು ಏನೇ ಅಂದರೂ ಲೆಕ್ಕಿಸದೆ ನಾನೇ ನಿಂತು ಅವಳು ಇಷ್ಟಪಟ್ಟಿರುವ ಹುಡುಗನೊಂದಿಗೆ ಮದುವೆ ಮಾಡುತ್ತೇನೆ. ದಯವಿಟ್ಟು ಶಸ್ತ್ರಚಿಕಿತ್ಸೆ ಮಾಡಿಸಿ ನನ್ನ ತಂದೆಯನ್ನು ಉಳಿಸಿಕೊಡಿ...’ ಎಂದು ದೈನ್ಯತೆಯಿಂದ ನುಡಿದಾಗ ಶಾರದಾದೇವಿಯವರ ಮುಖದಲ್ಲಿ ಮಂದಹಾಸ ಮಿನುಗುತ್ತಿತ್ತು.
Comments
ಕಥೆಯಲ್ಲಾದರೂ ಅವರ ಪ್ರೇಮ
In reply to ಕಥೆಯಲ್ಲಾದರೂ ಅವರ ಪ್ರೇಮ by ಮಮತಾ ಕಾಪು
ಮಮತಾರವರೇ ತಮ್ಮ ಸಾಮಾಜಿಕ
ಕಥೆ ಚೆನ್ನಾಗಿದೆ ... ಇಂದಿಗೂ
In reply to ಕಥೆ ಚೆನ್ನಾಗಿದೆ ... ಇಂದಿಗೂ by bhalle
ಕಾಲಕ್ರಮೇಣ ಹಠವಾದಿಗಳ
ಮನೋಹೊಂದಾಣಿಕೆ ಮಾನವರು ಮಾಡಬಹುದಾದ
In reply to ಮನೋಹೊಂದಾಣಿಕೆ ಮಾನವರು ಮಾಡಬಹುದಾದ by kavinagaraj
ಕವಿನಾಗರಾಜ್ ಸಾರ್.. ನಮಸ್ಕಾರ..