ಲಂಡನ್ ಮಕ್ಕಳ ಸಂಸ್ಕೃತ ಪ್ರೇಮ

ಲಂಡನ್ ಮಕ್ಕಳ ಸಂಸ್ಕೃತ ಪ್ರೇಮ

"ಬೈ ಡ್ಯಾಡ್, ಬೈ ಮಾಮ್, ಬೈ ತಾತ್"

     ಒಂದನೆಯ ತರಗತಿಯಲ್ಲಿ ಓದುತ್ತಿರುವ ನನ್ನ ಮೊಮ್ಮಗಳು ಪುಸ್ತಕದ ಮೂಟೆಯನ್ನು ಹೊತ್ತುಕೊಂಡು ಶಾಲೆಯ ಬಸ್ಸಿಗೆ ಹತ್ತುವಾಗ ಕೈಬೀಸಿ ಹೇಳಿದ್ದು ಹೀಗೆ. ಅವಳು ನನ್ನನ್ನು 'ತಾತ್' ಎಂದು ಕರೆಯುವುದಕ್ಕೆ ಕೊಟ್ಟಿದ್ದ ವಿವರಣೆ: "ತಾತಾ, ಗ್ರ್ಯಾಂಡ್ ಫಾದರ್, ಗ್ರ್ಯಾಂಡ್ ಪಾ ಈಸ್ ಟೂ ಲಾಂಗ್. ಸೋ ಐ ಕಾಲ್ ಯು ತಾತ್!" ಲಕ್ಷಗಟ್ಟಲೆ ಡೊನೇಶನ್ ಪಡೆದು ಸೇರಿದ್ದ ಆ ಪ್ರತಿಷ್ಠಿತ  ಶಾಲೆಯಲ್ಲಿ ಕನ್ನಡ ಮಾತನಾಡುವಂತಿರಲಿಲ್ಲ. ಎಲ್ಲಾ ಇಂಗ್ಲಿಷಿನಲ್ಲೇ ಆಗಬೇಕು. ಬೆಂಗಳೂರಿನಲ್ಲಿ ಕೆಲವು ದಶಕಗಳ ಹಿಂದೆ ಮಕ್ಕಳು ಮಾತ್ರ ಇಂಗ್ಲಿಷಿನಲ್ಲಿ ಮಾತನಾಡುತ್ತಿದ್ದವು. ಈಗ ಆ ಮಕ್ಕಳೂ ದೊಡ್ಡವರಾಗಿದ್ದಾರೆ. ಈಗ ಎಲ್ಲರೂ, ಎಲ್ಲೆಲ್ಲೂ ಇಂಗ್ಲಿಷಿನಲ್ಲೇ ಮಾತನಾಡುತ್ತಾರೆ. ಬೆಂಗಳೂರಿನಲ್ಲಿ ಅವಿದ್ಯಾವಂತರೂ ಸಹ ಇಂಗ್ಲಿಷಿನಲ್ಲಿ ಸರಾಗವಾಗಿ ಮಾತನಾಡಬಲ್ಲರು. ಅದೇ ಕನ್ನಡ ಮಾತನಾಡಬೇಕಾದರೆ ಕನ್ನಡಿಗರೇ ಬಹಳ ಕಷ್ಟಪಡುತ್ತಾರೆ. ಕನ್ನಡ ಬಾರದಿದ್ದವರು ಮಾತನಾಡುವ ಕನ್ನಡದ ಉಚ್ಛಾರದಂತೆ ಕನ್ನಡಿಗರೇ ಮಾತನಾಡುವುದನ್ನು ಕಂಡು ಅಚ್ಚರಿಪಟ್ಟಿದ್ದೇನೆ. ಹಿಂದೆ ಲಾರ್ಡ್ ಮೆಕಾಲೆ ಹೇಳಿದ್ದ, "ಈ ರೀತಿಯ ವಿದ್ಯಾಭ್ಯಾಸ ಕ್ರಮದಿಂದ ಇನ್ನು ಕೆಲವು ದಶಕಗಳಲ್ಲಿ ಇಂಡಿಯಾದಲ್ಲಿ ಕರಿಚರ್ಮದ ಬ್ರಿಟಿಷರು ಇರುತ್ತಾರೆ" ಎಂಬ ಮಾತು ನಿಜವಾಗಿದೆ. ಆದರೆ ಯಾವ ದೇಶದ ಗುಲಾಮಗಿರಿಯ ಕಾಣಿಕೆಯಾದ ಇಂಗ್ಲಿಷನ್ನು ಹೆಮ್ಮೆಯಿಂದ ಆಡುತ್ತೇವೋ, ಆ ದೇಶದ ರಾಜಧಾನಿ ಲಂಡನ್ನಿಗೆ ಸಂಬಂಧಿಸಿದ ಸಂಗತಿಯನ್ನು ನಿಮ್ಮೊಡನೆ ಹಂಚಿಕೊಳ್ಳುವೆ.



     ಅದು ಲಂಡನ್ನಿನ ಸೈಂಟ್ ಜೇಮ್ಸ್ ಜೂನಿಯರ್ ಸ್ಕೂಲ್. ಅಲ್ಲಿ ೧೯೭೫ರಿಂದಲೂ ಸಂಸ್ಕೃತವನ್ನು ಕಲಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಸಂಸ್ಕೃತ ಕಲಿಯುತ್ತಿರುವವರ ಸಂಖ್ಯೆ ಇಂಗ್ಲೆಂಡಿನಲ್ಲಿ ಮಿತಿಯನ್ನು ಮೀರಿ ಬೆಳೆಯುತ್ತಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಇಂಗ್ಲಿಷ್ ಮಾತನಾಡುವವರಿಗೆ ಸಂಸ್ಕೃತದ ಉಚ್ಛಾರ ಕಷ್ಟವಾದರೂ ಅಲ್ಲಿ ಸಂಸ್ಕೃತ ಕಲಿಯಲು ಬರುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ವಾರ್ಷಿಕ ಸಂಸ್ಕೃತ ಸಂಭಾಷಣಾ ಸ್ಪರ್ಧೆಯಲ್ಲಿ ತಮ್ಮ ಪುಟಾಣಿಗಳು ಭಾಗವಹಿಸಿ, ವೇದ ಮಂತ್ರ, ಉಪನಿಷತ್ತಿನ ಶ್ಲೋಕಗಳನ್ನು ಹೇಳುತ್ತಿದ್ದರೆ ಅದನ್ನು ಕೇಳುವ ಪೋಷಕರು, ತಂದೆ-ತಾಯಿಗಳು ಹೆಮ್ಮೆಯಿಂದ ಚಪ್ಪಾಳೆ ತಟ್ಟಿ ಹುರಿದುಂಬಿಸುತ್ತಾರೆ. ಸಂಸ್ಕೃತ ವಿಭಾಗದ ಮುಖ್ಯಸ್ಥ ವಾರ್ವಿಕ್ ಜೆಸೊಪ್, "ಸಂಸ್ಕೃತ ಭಾಷೆ ಅದ್ಭುತವಾಗಿದೆ. ಸಂಸ್ಕೃತದ ಸಾಹಿತ್ಯ ಸ್ಫೂರ್ತಿದಾಯಕವಾಗಿದೆ ಮತ್ತು ತತ್ವಾದರ್ಶಗಳಿಂದ ಕೂಡಿದೆ. ಅದಕ್ಕಾಗಿ ಅದನ್ನು ಮಕ್ಕಳಿಗೆ ಕಲಿಸಿಕೊಡುತ್ತಿದ್ದೇವೆ" ಎನ್ನುತ್ತಾರೆ. ಇದೇ ಮಾತನ್ನು ಇಲ್ಲಿ ಯಾರಾದರೂ ಹೇಳಿದರೆ ವಿಚಾರವಂತರೆಂದು ಹಣೆಪಟ್ಟಿ ಹಚ್ಚಿಕೊಂಡವರು ಏನು ಹೇಳಬಹುದೆಂಬುದು ನಿಮಗೇ ಬಿಟ್ಟ ವಿಷಯ. ಸಂಸ್ಕೃತ ಕಲಿಯುವ ಮಕ್ಕಳನ್ನು ಕೇಳಿದರೆ ಅವರು ಹೇಳುವುದೇನೆಂದರೆ, "ಅದು ನಮಗೆ ಬಹಳ ಖುಷಿ ಕೊಡುತ್ತದೆ. ಅದು ನಮ್ಮ ಮೆಚ್ಚಿನ ಭಾಷೆ!"

     ಸಂಸ್ಕೃತ ಕಲಿಯುತ್ತಿದ್ದ ಒಬ್ಬ ವಿದ್ಯಾರ್ಥಿಯ ಹೃದಯದ ಮಾತಿದು: "ಸಂಸ್ಕೃತ ಕಲಿಯುವುದು ಒಂದು ವಿಶೇಷ ಅನುಭವ. ಅದನ್ನು ಕಲಿಯಲು ನನಗೆ ಬಹಳ ಆನಂದವಾಗುತ್ತದೆ, ಏಕೆಂದರೆ ಸಂಸ್ಕೃತ ಕಲಿಸುತ್ತಿರುವ ಕೆಲವೇ ಶಾಲೆಗಳಿದ್ದು, ಅದರ ಪೈಕಿ ನಾವೂ ಒಬ್ಬರು ಎಂಬುದು. ಅದು ನಮಗೆ ಹಲವಾರು ರೀತಿಯಲ್ಲಿ ಉಪಯೋಗವಾಗಿದೆ. ನಮ್ಮ ಉಚ್ಚಾರಣೆ ಸುಧಾರಿಸುತ್ತದೆ ಮತ್ತು ಪದಸಂಪತ್ತನ್ನು ಹೆಚ್ಚಿಸುತ್ತದೆ. ಪಾರಮಾರ್ಥಿಕ ಅನುಕೂಲಗಳೂ ಇವೆ. ರಾಮಾಯಣ ಮತ್ತು ಮಹಾಭಾರತದಂತಹ ಹಲವಾರು ಕಥೆಗಳಿದ್ದು, ಹಿಂದೆ ಪ್ರಪಂಚದಲ್ಲಿ ಏನೆಲ್ಲಾ ಆಯಿತು ಎಂಬುದನ್ನೂ ತಿಳಿಯಲು ಸಹಾಯ ಮಾಡುತ್ತದೆ."

     ಈ ಶಾಲೆಯಲ್ಲಿ ೪ ರಿಂದ ೧೮ ವರ್ಷಗಳವರೆಗೆ ಸಂಸ್ಕೃತ ಕಲಿಯಲು ಸೌಲಭ್ಯವಿದೆ. ನಂತರದಲ್ಲಿ ಪ್ರತಿಷ್ಠಿತ ಶಾಲೆಗಳಾದ ಆಕ್ಸ್ ಫರ್ಡ್, ಕೇಂಬ್ರಿಡ್ಜ್, ಎಡಿನ್ ಬರೋ ಮುಂತಾದ ಶಾಲೆಗಳಲ್ಲಿ ಮುಂದುವರೆದ ಸಂಸ್ಕೃತ ವಿದ್ಯಾಭ್ಯಾಸ ಮಾಡಬಹುದಾಗಿದೆ. ಲಂಡನ್ ಶಾಲೆಗೆ ಸಂಬಂಧಿಸಿದ ಒಂದು ಕಿರುವಿಡಿಯೋ ಅನ್ನು ಈ ಲಿಂಕಿನಲ್ಲಿ ನೋಡಬಹುದು: http://vedajeevana.blogspot.in/2013/01/blog-post_14.html

     ನಾನು ಕೇವಲ ಇಂಗ್ಲೆಂಡಿನ ಉದಾಹರಣೆ ನೀಡಿದ್ದರೂ, ಅಮೆರಿಕಾ ಸೇರಿದಂತೆ ಹಲವಾರು ವಿದೇಶಿ ರಾಷ್ಟ್ರಗಳಲ್ಲಿ ಸಂಸ್ಕೃತ ಕಲಿಕೆ ಗಣನೀಯವಾಗಿ ಹೆಚ್ಚಿದ್ದು, ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದು ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವವರ ಸಂಖ್ಯೆ ಕಡಿಮೆಯಲ್ಲ. ಊರು ಕೊಳ್ಳೆ ಹೋದ ನಂತರದಲ್ಲಿ ನಮ್ಮವರಿಗೆ ಎಚ್ಚರವಾಗಬಹುದು.
 

Comments

Submitted by partha1059 Mon, 01/14/2013 - 18:48

ನಾಗರಾಜರೆ ಈಗ ಭಾರತದಲ್ಲಿ ಸಂಸ್ಕೃತ ಎಂದರೆ ಪುರೋಹಿತಶಾಯಿಯ ಭಾಷೆ, ಬೇರೆಯವರನ್ನು ವಂಚಿಸಿದ ಭಾಷೆ ಹೀಗೆ ಏನೇನೊ, ಪ್ರತಿ ವಿಷಯಕ್ಕು ವಾಗ್ವಾದ, ಜಗಳ , ಅದು ಸತ್ತ ಬಾಷೆ ಎಂದು ಹೇಳುವರು, ಕೆಲಕಾಲದ ನಂತರ ಅಮೇರಿಕನ್ನರು ಸಂಸ್ಕೃತವನ್ನು ಪೇಟೆಂಟ್ ಮಾಡಿ ಅದು ನಮ್ಮದು ಎಂದು ಹೇಳುವರು ಆಗ ಭಾರತದಲ್ಲಿರುವರು ಸಂಸ್ಕೃತವನ್ನು ಅಮೇರಿಕನ್ನರಿಂದ ಕಲಿಯುವರು ಬಿಡಿ, ಇಲ್ಲಿ ಯಾವಾಗಲು ಹಾಗೆ ನಮ್ಮದು ಎಂದರೆ ತಿರಸ್ಕೃತ , ಪರರಿಂದ ಬಂದರೆ ಅಮೃತ . ಒಂದೆರಡು ದಿನ ಕಾಯಿರಿ ನಿಮ್ಮ 'ಈ' ಲೇಖನಕ್ಕೆ 'ಆ' ರೀತಿಯ ಪ್ರತಿಕ್ರಿಯೆ ಬರಬಹುದು
Submitted by Prakash Narasimhaiya Wed, 01/16/2013 - 10:53

In reply to by kavinagaraj

ಯಾರು ಎನೇ ಹೇಳಿದರೂ ಸಂಸ್ಕೃತಕ್ಕೆ ಇರುವ‌ ಸ್ಥಾನಮಾನ‌ ಇದ್ದೇ ಇದೆ. ಅದನ್ನು ಇಲ್ಲಿ ಅಲ್ಲದಿದ್ದರೆ ಗುರುತಿಸುವವರು ಎಲ್ಲಿಯಾದರು ಗುರುತಿಸುತ್ತಾರೆ. ಆದ್ದರಿ0ದಲೆ ಇನ್ನೂ ಜೇವ0ತ‌ವಾಗಿರುವುದು.
Submitted by kavinagaraj Wed, 01/16/2013 - 20:13

In reply to by Prakash Narasimhaiya

ಆತ್ಮೀಯ ಪ್ರಕಾಶರೇ. ನಮ್ಮ ಕನ್ನಡದಲ್ಲೇ ಇರುವ ಬಹುತೇಕ ಪದಗಳು ಸಂಸ್ಕೃತಮೂಲದವೇ ಆಗಿವೆ. ಈ ಮಾತು ಇತರ ಭಾಷೆಗಳಿಗೂ ಅನ್ವಯವಾಗುತ್ತದೆ. ಹಾಗಾಗಿ ಸಂಸ್ಕೃತಕ್ಕೆ ಸಾವೆಲ್ಲಿ? ಧನ್ಯವಾದಗಳು.
Submitted by CanTHeeRava Thu, 01/17/2013 - 04:23

ಇಂಗ್ಲೆಂಡ್ ನಲ್ಲಿ ಸಂಸ್ಕೃತ ಮಾತಾಡೋದು, ಕರ್ನಾಟಕದಲ್ಲಿ ಇಂಗ್ಲಿಷ್ ಮಾತಾಡೋದು.....ಎರಡೂ ಅತಿರೇಕವೇ. ಬೇರೆ ದೇಶದಲ್ಲಿರುವ ಕನ್ನಡಿಗರಿಗೆ ವಿಚಿತ್ರವಾದ ಭಾಷಾ ವಿರಹ ವೇದನೆ ಆಗುವುದು ಸಾಮಾನ್ಯ. ಕೆಲವರು ತಮ್ಮ ಮಕ್ಕಳಿಗೆ ಸಂಸ್ಕೃತ ಕಲಿಸಿ, ಚಪ್ಪಾಳೆ ತಟ್ಟುವುದು ಆ ವೇದನೆಯ ಲಕ್ಷಣಗಳಲ್ಲೊಂದು ಅನ್ನಿಸುತ್ತೆ. ಕರ್ನಾಟಕದಲ್ಲಿರುವ, ಲೇಖನದಲ್ಲಿ ಉಲ್ಲೇಖಿಸಲ್ಪಟ್ಟಿರುವ ಕೆಲ ಮಹಾನುಭಾವರು ಗಬ್ಬು ಗಬ್ಬಾಗಿ ಇಂಗ್ಲಿಷ್ ಮಾತಾಡಿದರೂ ಪರವಾಗಿಲ್ಲ...ಕನ್ನಡವನ್ನು ಕೆಡಿಸದಿದ್ದರೆ ಸಾಕು. ಸಂಸ್ಕೃತದ ಬಗ್ಗೆ ನನಗೆ ಗೌರವವಿದೆ.
Submitted by kavinagaraj Thu, 01/17/2013 - 10:38

In reply to by CanTHeeRava

ಧನ್ಯವಾದಗಳು. ಕರ್ನಾಟಕದಲ್ಲಿ ಇಂಗ್ಲಿಷ್ ಮಾತನಾಡುವುದಕ್ಕೆ ಇರುವ ಕಾರಣಗಳು ಮತ್ತು ಇಂಗ್ಲೆಂಡಿನಲ್ಲಿ ಸಂಸ್ಕೃತ ಕಲಿಯುತ್ತಿರುವುದರ ಹಿಂದಿನ ಕಾರಣಗಳು ಬೇರೆಯಾಗಿವೆ. ಕನ್ನಡ, ಇಂಗ್ಲಿಷ್, ಸಂಸ್ಕೃತ, ಯಾವುದೇ ಭಾಷೆ ಬೆಳೆಯಲಿ, ಪರಸ್ಪರ ಪೂರಕವಾಗಿ ಬೆಳೆಯಲಿ.
Submitted by CanTHeeRava Thu, 01/17/2013 - 14:47

In reply to by kavinagaraj

ನಿಮ್ಮ ಮಾತು ಒಪ್ಪತಕ್ಕದ್ದೇ. ಆದರೆ, ಕರ್ನಾಟಕದಲ್ಲಿ ಇಂಗ್ಲಿಷ್ ಮಾತನಾಡುವುದಕ್ಕೂ ಮತ್ತು ನಮ್ಮ-ನಿಮ್ಮಂಥವರು ಇಂಗ್ಲೆಂಡಿನ ಸಂಸ್ಕೃತ ಪಾಠವನ್ನು ಮೆಚ್ಚಿಕೊಳ್ಳುವುದಕ್ಕೂ ಇರುವ ಕಾರಣ ಒಂದೇ ಅಲ್ಲವೇ.
Submitted by kavinagaraj Thu, 01/17/2013 - 20:31

In reply to by CanTHeeRava

ಸ್ವಲ್ಪ ವ್ಯತ್ಯಾಸವಿದೆ. ಕರ್ನಾಟಕದಲ್ಲಿ ಇಂಗ್ಲಿಷ್ ಹಣ ಸಂಪಾದನೆಗೆ ಅಗತ್ಯವೆನಿಸಿದೆ. ಅಲ್ಲಿ ಸಂಸ್ಕೃತ ಕಲಿಯುವುದು ಹಣ ಸಂಪಾದನೆಗಾಗಿ ಅಲ್ಲ, ಆಸಕ್ತಿಯಿಂದ ಎಂದು ಅನ್ನಿಸುತ್ತದೆ.
Submitted by ಗಣೇಶ Thu, 01/17/2013 - 23:51

In reply to by kavinagaraj

>>>ಕರ್ನಾಟಕದಲ್ಲಿ ಇಂಗ್ಲಿಷ್ ಹಣ ಸಂಪಾದನೆಗೆ ಅಗತ್ಯವೆನಿಸಿದೆ.---ನಾನು ಒಪ್ಪುವುದಿಲ್ಲ. ಕವಿನಾಗರಾಜರೆ,ಅಲ್ಲಿನವರಿಗೆ ಸಂಸ್ಕೃತದ ಎಬಿಸಿಡಿ ಗೊತ್ತಿಲ್ಲ. ಅಧ್ಯಯನ ಮಾಡಲಿ ಬಿಡಿ. ಸಂಸ್ಕೃತ ಇಲ್ಲೇ ಹುಟ್ಟಿ ಬೆಳೆದದ್ದಲ್ಲವಾ? ಅದರಲ್ಲಿರುವ ಸಾರವನ್ನೆಲ್ಲಾ ಹಿಂಡಿ ನಮ್ಮ ನಮ್ಮ ಭಾಷೆಗಳಿಗೆ ಭಟ್ಟಿ ಇಳಿಸಿಯಾಗಿದೆ. ತನ್ನ ಕೆಲಸ ಮುಗಿಸಿ ವಯಸ್ಸಾಗಿ ಪರಮಾತ್ಮನಲ್ಲಿ ಲೀನವಾಗಿರುವ( ಪಾರ್ಥರೆ, ಸತ್ತ ಭಾಷೆ ಅಂದಿಲ್ಲ :) ) ಭಾಷೆಯ ಪುನರ್ಜನ್ಮದ ವ್ಯರ್ಥ ಪ್ರಯತ್ನ ಯಾಕೆ? ಅದರ ಬದಲು "ಅಕಾಲ ಮರಣ"ದ ಹಾದಿಯಲ್ಲಿರುವ ಇತರ ಭಾಷೆಗಳ ಉಳಿವು +ಬೆಳವಣಿಗೆಗೆ ಪ್ರಾಮುಖ್ಯತೆ ಕೊಡುವುದು ಉತ್ತಮ ಅಲ್ಲವಾ?
Submitted by CanTHeeRava Fri, 01/18/2013 - 07:51

In reply to by ಗಣೇಶ

ಗಣೇಶ್ ನಿಮ್ಮ ವಾದ ಬಹಳ ಮಜಬೂತಾಗಿದೆ. ಕವಿನಾಗರಾಜರು ನಾನು ಈ ಹಿಂದೆ ಹೇಳಿದ ಮಾತಿನ ಒಳ ಮರ್ಮವನ್ನು ಗಮನಿಸಿರಬಹುದು. ಕರ್ನಾಟಕದಲ್ಲಿ ಕನ್ನಡಿಗರು ಇಂಗ್ಲಿಷ್ ಮಾತನಾಡುವುದಕ್ಕೂ, ಕನ್ನಡೇತರರು ಕನ್ನಡ ಕಲಿಯದೇ ಇರುವುದಕ್ಕೂ, ಮತ್ತು ಭಾರತೀಯರು ಪಾಶ್ಚಾತ್ಯರ ಸಂಸ್ಕೃತ ಕಲಿಕೆಯನ್ನು ಕಂಡು ಸಂತೋಷಿಸುವುದಕ್ಕೂ ಇರುವ ಕಾರಣ ಒಂದೇ. ಇಂಗ್ಲಿಷ್ ಹಣ ಸಂಪಾದನೆಗೆ ದಾರಿಯಾಗಿದೆ ಎಂದು ಭಾವಿಸುವುದಕ್ಕೂ ಕಾರಣ ಒಂದೇ. ಆ ಕಾರಣ ಖಂಡಿತ ಹಣ ಸಂಪಾದನೆಯಲ್ಲ. ಅದು ನಮ್ಮಲ್ಲಿರುವ "ಕೀಳರಿಮೆ". ಇದು ನಿಮಗೆ ವಿಚಿತ್ರವೆಂದು ತೋರಬಹುದು. ಪಾಶ್ಚಾತ್ಯರು ಸಂಸ್ಕೃತ ಕಲಿಯುವುದನ್ನು ಕಂಡು ಸಂತೋಷಿಸುವುದು (ಒಳ್ಳೆಯದು ಎಲ್ಲೇ ಇದ್ದರೂ ಅದನ್ನು ಪ್ರೋತ್ಸಾಹಿಸುವುದು ಒಳ್ಳೆಯದೇ ಆದರೂ) "ಕೀಳರಿಮೆ" ಹೇಗಾದೀತು? ನಾವು ನಮಗೆ ಗೊತ್ತಿಲ್ಲದಂತೆಯೇ ಕರಿ ಚರ್ಮದ ಬ್ರಿಟಿಷರಾಗಿರುವುದಕ್ಕೆ ಈ ಲೇಖನದಲ್ಲಿ ಲಂಡನ್ ವರೆಗೂ ಹೋಗಬೇಕಾಗಿದ್ದು ಉದಾಹರಣೆಯಷ್ಟೇ.
Submitted by kavinagaraj Fri, 01/18/2013 - 09:49

In reply to by ಗಣೇಶ

ಗಣೇಶರೇ, ನಮಸ್ಕಾರ. ಹಣ ಸಂಪಾದನೆಗಲ್ಲವಾದರೂ ವ್ಯಾವಹಾರಿಕ ಅಗತ್ಯತೆಗೆ ಇಂಗ್ಲಿಷ್ ಬೇಕೇ ಬೇಕು ಎಂಬ ಮನೋಭಾವ ಹೆಚ್ಚಾಗಿರುವುದಂತೂ ಸತ್ಯ. ದಿನನಿತ್ಯದ ಹೊಟ್ಟೆಪಾಡಿಗೂ ಕಷ್ಟಪಡುವಂತಹವರೂ ಕೂಡ ಹೊಟ್ಟೆ ಬಟ್ಟೆ ಕಟ್ಟಿ ಮಕ್ಕಳನ್ನು ಇಂಗ್ಲಿಷ್ ಕಾನ್ವೆಂಟಿಗೆ ಕಳುಹಿಸುತ್ತಿಲ್ಲವೇ? ಭಾಷೆಯ ಪುನರ್ಜನ್ಮದ ವಿಚಾರದಲ್ಲಿ ಹೀಬ್ರೂ ಭಾಷೆಯನ್ನು ಮರಳಿ ಜೀವಂತವಾಗಿರಿಸಿದ ಇಸ್ರೇಲಿನ ಉದಾಹರಣೆಯಿದೆ. ಯಾವುದೇ ಭಾಷೆ ಉಳಿಯುವುದು/ಅಳಿಯುವುದು ಅದರಲ್ಲಿನ ಸತ್ವದಿಂದ ಮತ್ತು ಬಳಕೆಯಿಂದ ಮಾತ್ರ. ಸತ್ವವಿದ್ದರೆ ಉಳಿಯುತ್ತದೆ, ಬಳಸಿದರೆ ಉಳಿಯುತ್ತದೆ, ಇಲ್ಲದಿದ್ದರೆ ಅಳಿಯುತ್ತದೆ. ಬಳಸಲು ಬಯಸುವವರು ಬಳಸಲಿ. ಉಳಿಸಲು ಬಯಸುವವರು ಉಳಿಸಲಿ. 'ಅಕಾಲ ಮರಣ'ದಿಂದ ತಪ್ಪಿಸುವ ಮಾತು ಸಂಸ್ಕೃತವೂ ಸೇರಿದಂತೆ ಎಲ್ಲಾ ಭಾಷೆಗಳಿಗೂ ಅನ್ವಯವಾಗಬೇಕು, ಸಂಸ್ಕೃತವನ್ನು ಹೊರತುಪಡಿಸಬಾರದು.