ಕಡೂರಿನ ದಿನಗಳು - ಶಂಕ್ರು ಅಂಗಡಿ!

ಕಡೂರಿನ ದಿನಗಳು - ಶಂಕ್ರು ಅಂಗಡಿ!

ಶಂಕ್ರು, ಕೋಟೆ ಜನಗಳಿಗೆ (ಬ್ರಾಹ್ಮಣರೇ ಬಹುಪೈಕಿ) ಸಹಾಯವಾಗಲಿ ಅಂತ ತುಂಬಾ ದಿನದಿಂದ ಯೋಜನೆ ಹಾಕಿಕೊಂಡು ಕಡೆಗೊಂದು ಸಲ ಧಿನಸಿ ಅಂಗಡಿ ಶುರು ಮಾಡೇ ಬಿಟ್ರು. ಶುರು ಮಾಡುವ ಮುಂಚೆ ಎಲ್ಲರೂ ಸಲಹೆಗಳನ್ನು ಕೊಟ್ಟರೇ ಕೊಟ್ಟರು, ಆದರೆ ತುಂಬಾ ದಿನ ಬಾಳುವ ಅನುಮಾನವನ್ನೂ ಮಾತ್ರ ಯಾರೂ ಹೇಳಲಿಲ್ಲ ಇರಬೇಕು. ಆದ್ರೂ ಏನಾದ್ರೂ ಒಂದು ಕೆಲಸ ಮಾಡಬೇಕು, ಅದೂ ಅಲ್ಲದೇ ಕೋಟೇನಲ್ಲಿ ಒಂದೂ ಧಿನಸಿ ಅಂಗಡಿ ಇಲ್ಲ, ಅಕ್ಕಿ, ಬೇಳೇ, ಎಣ್ಣೆ, ಬೆಲ್ಲ, ಕಾಯಿ, ಮೆಣಸಿನಕಾಯಿ ಮುಂತಾದ ಸಾಮಾನುಗಳೆಲ್ಲವನ್ನೂ ಪೇಟೆಯಿಂದಲೇ ತರಬೇಕು. ಹಬ್ಬ - ಹುಣ್ಣಿಮೆ ಎಂದರೆ ಏನಾದ್ರು ತರಕ್ಕೆ ಮರೆತು ಹೋದ್ರೆ, ಮತ್ತೆ ಕೋಟೆ ಯಿಂದ ಪೇಟೆ ಶೆಟ್ಟರ ಅಂಗಡಿವರೆಗೆ ಹೋಗಬೇಕು. ಹೀಗಾಗಿ ಒಂದು ಅಂಗಡಿ ಕೋಟೆಗೆ ಬೇಕೇ ಆಗಿತ್ತಲ್ಲದೆ, ವ್ಯಾಪಾರನೂ ಚೆನ್ನಾಗಿ ಕುದುರುವ ಸಂಶಯದ ಸುಳಿವಿರಲಿಲ್ಲ. ಬ್ರಾಹ್ಮಣರು ಸಾಲ, ಸೋಲನೋ ಮಾಡಿ ಹಬ್ಬದ ದಿನ ಒಬ್ಬಟ್ಟು ಮಾಡೇ ತೀರಿ ಹಬ್ಬ ಆಚರಿಸುವವರು, ಹಾಗಂದಮೇಲೆ ವ್ಯಾಪರಕ್ಕೇನು ಕಡಿಮೆ ಇಲ್ಲ. ಆದರೆ, ಈಗಿನ ಕಾಲದ ಮೇರೆಗೆ ಹೇಳಬೇಕಾದರೆ, "ಅಕೌಂಟ್ಸ್ ರಿಸೀವಬಲ್" ಅನ್ನೋ ಅಕೌಂಟ್ ಮಾತ್ರ ಮಿತಿಮೀರಿ ಎತ್ತರದಲ್ಲಿತ್ತು ಶಂಕ್ರುಗೆ. ಶಂಕ್ರುಗೆ ಹೇಗಿದ್ರು ಮದುವೆ ಆಗಿರಲಿಲ್ಲ ಅಂಗಡಿ ಶುರು ಮಾಡಿದಾಗ. ಹಾಗಾಗಿ ಸಾಲನ ಜನ ಇನ್ನೂ ಜಾಸ್ತಿದಿನ ಪೋಷಿಸಿ ಇಡುತ್ತಿದ್ದರು. ಅದು ಏನೇ ಇರಲಿ...

ಶಂಕ್ರು ಅಂಗಡಿಯ ವಿಷಯದಲ್ಲಿ ನನ್ನ ಮೆಚ್ಚಿನ ವಸ್ತುವೇ ಬೇರೆ. ಶಂಕ್ರು ಅಂಗಡಿ ಒಂದು ರಸಿಕತೆಯ ರಾಜ್ಯವೇ ಸರಿ. ಅಲ್ಲಿ ಸಾಮಾನು ತಗೊಳ್ಳಕ್ಕೆ ಬಂದವರ್ಯಾರೂ ನಗದೇ ಇದ್ದಿಲ್ಲ. ಸಾಮಾನು ತಗೊಳ್ಳದಿದ್ದರೂ ಕೆಲವರು ತಮಾಷೆ ಮಾಡಿ ನಗೋಕ್ಕೇ ಬಂದವರು ಹಲವರು. ಎಲ್ಲ ಸಣ್ಣ ಊರಿನ ಅಂಗಡಿಗಳಲ್ಲಿ ಸಾಮಾನ್ಯವಾಗಿ ಕಾಣುವ ಸಿಮೆಂಟ್ ಕಟ್ಟೆಯೇ ಎರಡೂ ಬದಿಯಲ್ಲಿ (ಸೋಮಾರಿ ಕಟ್ಟೆ ಬೆಂಚು) ಶಂಕ್ರು ಅಂಗಡಿಯಲ್ಲಿ ಸ್ವಲ್ಪ ದೊಡ್ಡದಾಗೇ ಇತ್ತು. ಅಣ್ಣ( ನಮ್ಮ ತಂದೆ), ಅಣ್ಣನ ಸ್ನೇಹಿತರು, ಮಂಜಣ್ಣ, ಭಟ್ಟರು, ಮೇಸ್ಟ್ರುಗಳು ಎಲ್ಲರೂ ಬಹಳ ಹೊತ್ತು ಹಾಗೂ ಹೀಗೂ ಅಲ್ಲೇ ಇರುತ್ತಿದ್ದರು. ಕೆಲಸವಿದ್ದಾಗ ಮನೆಗೆ ಬರುತ್ತಿದ್ದರು. ಸಂಭಾಷಣೆ, ಸಂವಾದ, ಜೋರು , ಸಣ್ಣ ಸಣ್ಣ ಗಲಾಟೆ ಎಲ್ಲ ಇರುತ್ತಿದ್ದವು. ನಾನೊಂದು ದಿನ ಹೀಗೇ ಅಂಗಡಿಗೆ ಹೋಗಿ ಸಾಮಾನು ತರುವಾಗ....ಶಂಕ್ರು ಯಾರಿಗೋ ಸ್ವಲ್ಪ ದೊಡ್ದವರ ಹತ್ತಿರ ಮಾತಾಡ್ತಾ ಕೇಳ್ತಾ ಇದ್ರು...."ನೆನ್ನೆ ಏನೋ ಹೆಗಲಮೇಲೆ ಹಾಕ್ಕೊಂಡ್ ತಗೊಂಡು ಹೋಗ್ತಿದ್ರೀ"?


ಅವರು: ಏನಿಲ್ಲ ಶಂಕ್ರು ಎರಡು ತೆಂಗಿನಕಾಯಿ ಆಕಡೆ - ಈಕಡೆ ಭುಜದ ಮೇಲೆ ಹಾಕ್ಕೊಂಡು ತಗೊಂಡ್ ಹೋಗ್ತಾ ಇದ್ದೆ ಅಷ್ಟೇ"

ಶಂಕ್ರು: "ಎರಡ್ ತೆಂಗಿನಕಾಯೇ? ಎಲ್ಲೋ ಮೂರ್ ತರ ಕಾಣಿಸ್ತಲ್ಲ?"

ಅವರು "ಇಲ್ಲಪ್ಪ, ಎರಡೇ. ಸಿಪ್ಪೆ ತೆಗೆದಕಾಯಿ ಅಷ್ಟೇ".

ಶಂಕ್ರು (ಸೀರಿಯಸ್ಸಾಗಿ): "ಅದು ಇನ್ನೊಂದು ಮಧ್ಯದಲ್ಲಿ ನಿಮ್ಮ ಬೋಡ್ ತಲೇನೇ ಹಾಗಾದ್ರೇ?, ದೂರದಿಂದ ಥೇಟ್ ಸಿಪ್ಪೇ ತೆಗೆದ ತೆಂಗಿನಕಾಯಿ ತರಹನೇ ಇತ್ತು, (ತಾಮ್ರ ಚೊಂಬಿನಂತೆ) ಅದಕ್ಕೇ ೩-ತೆಂಗಿನಕಾಯಿ ಇರಬೇಕ್ ಅಂತ ಕೇಳಿದ್ದು ಅನ್ಕೊಳ್ಳಿ" ಅಂತ ಹೇಳಿ ನನ್ನ ಕಡೆಗೆ ತಿರುಗಿ "ನಿನಗೇನು ಕಾಫಿ ಪುಡಿ ಬೇಕಾ"? ಅಂತ ಕೇಳಿದರು. ನನಗೆ ಇನ್ನೂ ತಾಮ್ರ ಚೊಂಬಿನ ವಿಷಯ ಕೇಳಿ ನಗುವೇ ಮುಗಿದಿರಲಿಲ್ಲ.

ನಾನು: ನಿಮಗೆ ಹೇಗ್ ಗೊತ್ತಾಯ್ತು ಶಂಕ್ರು? ನಮ್ಮ ಅಮ್ಮ ಕೂಗಿದ್ದು ಕೇಳುಸ್ತಾ? (ನಮ್ಮ ಮನೆ ಎದುರಿಗೇ ಇತ್ತು ಶಂಕ್ರು ಅಂಗಡಿ. ನಮ್ಮ ನಡುಮನೆಯ ಕಿಟಕಿ ಎದುರಿಗೇ ಶಂಕ್ರು ಅಂಗಡಿ. ಮಧ್ಯೆ ಕೋಟೆಯಿಂದ ಪೇಟೆಗೆ ಹೋಗುವ ಮಣ್ಣಿನ ದಾರಿ ಅಷ್ಟೇ).

ಶಂಕ್ರು: ನಿಮ್ಮ ಅಮ್ಮ ನಿಮ್ಮಗಳನ್ನು ಕೂಗಿ ಹೇಳೋದೂ ಕೇಳಿಸುತ್ತೆ.  ಆದರೆ, ಈ ಸಲ ಹಾಗಾಗಲಿಲ್ಲ. ನಿಮ್ಮನೇಲಿ ಕಾಫಿಪುಡಿ ತಗೊಂಡು ೨- ದಿನ ಆಯ್ತಲ್ಲ, ಇವತ್ ಹಾಜರ್ ಅಂತ ಗೊತ್ತಿತ್ತು.

ಅಷ್ಟೊತ್ತಿಗೆ ಅಣ್ಣನ ಫ್ರೆಂಡು ಮಂಜಣ್ಣ ಬಂದರು. ನನ್ನನ್ನು ನೋಡಿ ಮಾತಾಡಿಸಿದರು.

ಮಂಜಣ್ಣ: ಅಜ್ಜಿ ಹೇಗಿದೆ? ಅಜ್ಜಿ ಹುಶಾರಿಲ್ಲ ಅಂತಿತ್ತು?

ನಾನು: "ಸ್ವಲ್ಪ ಜ್ವರ ಅಷ್ಟೇ, ಹುಷಾರಾಗಿದೆ" ಅಂದೆ.

ಮಂಜಣ್ಣ: "ಅಜ್ಜಿಗೆ ಏನು ಫಲಹಾರ ಇವತ್ತು?" ಅಂದರು.

ಅಜ್ಜಿ ರಾತ್ರಿ ಹೊತ್ತು ಊಟ, ಅನ್ನ ತಿಂತಾ ಇರಲಿಲ್ಲ. ಏನಾದ್ರೂ ತಿಂಡಿ ತಿಂತಿತ್ತು. ಉಪ್ಪಿಟ್ಟು, ಅವಲಕ್ಕಿ, ಅಕ್ಕಿ ರೊಟ್ಟಿ, ಹೀಗೆ. ನಾನು ಉತ್ತರ ಕೊಡೋ ಮೊದಲೇ ಮಂಜಣ್ಣ ರಾಗವಾಗಿ ಪದ್ಯ ಶುರು ಮಾಡಿದರು.

ಮಂಜಣ್ಣ: (ಅವರದೇ ಕಾಂಪೊಸಿಶನ್ ಇರಬೇಕು?)
           "ಅಂಗಜ ಪಿತಹರ
           ಮುದುಕಿಗೆ ಚಳಿ - ಜ್ವರ
           ಅದಕೇನು ಫಲಾಹಾರ
           ಅವಲಕ್ಕಿ ಉಪಾಹಾರ"

ನಾನು: ನಗುತ್ತಾ, ನೀವೇ ಹೇಳ್ಬಿಟ್ರಲ್ಲ, ಅವಲಕ್ಕಿ ಅಂತಾ?
ಅಷ್ಟೊತ್ತಿಗೆ ನಮ್ಮ ಅಮ್ಮ ಕೂಗುದ್ರು: "ನೀರು ಕುದೀತು, ಕಾಫಿ ಪುಡಿ ಬೇಗ ತಗೊಂಡು ಬಾ" ಅಂತ.

ಮಂಜಣ್ಣ: ನಾನೂ ಬಂದೆ ಕಾಫಿಗೆ ಅಂತ ನನ್ನ ಹಿಂದೇ ಬಂದರು.

ಅಷ್ಟರಲ್ಲಿ, ವೆಂಕಟಲಕ್ಷ್ಮಿ ಮನೇ ಹಸು "ಲಕ್ಷ್ಮಿ" ಜೋರಾಗಿ ಸಗಣಿ ಹಾಕುತ್ತಾ ನಡೆದು ಬರುತ್ತಿತ್ತು...ಅದನ್ನ ನೋಡಿ ಮಂಜಣ್ಣನವರು ಅದಕ್ಕೊಂದು ತಮಾಷೆ ಮಾಡದೇ ಇರಲಿಲ್ಲ. ಅದರ ಮುಖ ಸವರಿ "ಏನಿದು ರಮಣಿ?...ಎಲ್ಲಾ ಸಗಣಿ" ಅಂದ್ರು ರಾಗವಾಗಿ. ನಮಗೆಲ್ಲ ನಗು ಬಂತು.

ಯಾಕೇ ನಗ್ತೀರಲ್ಲಾ? "ರಮಣಿ" ಅಲ್ವಾ ಅವಳು?, ಅವಳ ಹೆಸರು "ಲಕ್ಷ್ಮಿ", ಅವಳ ಪತಿ ರಮಣ. ಹಾಗಾಗಿ ಅವಳು "ರಮಣಿ" ಅಂತ ಅರ್ಥೈಸಿದರು.
ಹೀಗೆ ಶಂಕ್ರು ಅಂಗಡಿಲಿ ಫ್ರೀಯಾಗಿ ಸ್ಟಾಂಡ್ ಅಪ್ ಕಾಮಿಡೀ ಸಿಗುತ್ತಿತ್ತು ಎಲ್ಲರಿಗೂ. ರಸಿಕತೆಯ ರಾಜ್ಯವಾಗಿತ್ತು. ಕಡೆಗೂ ಶಂಕ್ರು ಸಾಲಗಾರರ ಕಾಟದಿಂದ ವ್ಯಾಪಾರ ಕುಸಿದು ಅಂಗಡಿ ಮುಚ್ಚಲೇಬೇಕಾಯಿತು ಅನ್ನುವುದು ಮಾತ್ರ ಒಂದು ಬೇಜಾರಿನ ವಿಷಯವಾಗಿತ್ತು.

Comments

Submitted by hariharapurasridhar Thu, 01/17/2013 - 14:32

ಅಮೆರಿಕೆಯಲ್ಲಿ ಪುರಸತ್ತಾದಾಗ ಕಡೂರು ನೆನಪಾಗುತ್ತಲ್ವಾ? ಜನನೀ ನಜ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀ, ಅಂತಾ ಅದಕ್ಕೇ ನಮ್ಮ ಪೂರ್ವಜರು ಹೇಳಿದ್ದು. ಶಂಕ್ರು ಅಂಗಡೀ ಮುಂದೆ ನನಗೂ ನಿಂತ ಅನುಭವವಾಯ್ತು. ಧನ್ಯವಾದಗಳು
Submitted by rasikathe Thu, 01/17/2013 - 23:53

In reply to by hariharapurasridhar

ಧನ್ಯವಾದಗಳು ಶ್ರೀಧರ್ ಅವರೆ, ಪುರುಸೊತ್ತಾದಾಗ ಸ್ವಲ್ಪ ಬರೆಯುವುದು ಹಿತವಾಗುತ್ತೆ, ಸಂಪದದಲ್ಲಿ ಬರೆಯುವುದಕ್ಕೆ ತುಂಬಾ ಹೆಮ್ಮೆಯಾಗುತ್ತೆ!
Submitted by rasikathe Thu, 01/17/2013 - 23:56

In reply to by ಗಣೇಶ

ಧನ್ಯವಾದಗಳು ಗಣೇಷರೆ, ಸಂಪದದಲ್ಲಿ ಬರೆಯುವುದಕ್ಕೆ ತುಂಬಾ ಹೆಮ್ಮೆಯಾಗುತ್ತೆ! ನಿಮ್ಮೆಲ್ಲರ‌ ಪ್ರೋತ್ಸಾಹ‌ ಸಾಕಶ್ಹ್ಟೇ ಬರೆಯಲು....
Submitted by venkatesh Sat, 04/20/2013 - 17:26

In reply to by rasikathe

ನಿಮ್ಮ ಕಡೂರು ಕಥೆಗಳು ಚೆನ್ನಾಗಿವೆ. ಹಾ... ಅಲ್ಲಿ ನಮ್ಮ ದೊಡ್ಡಪ್ಪ, ಶಿ. ಎಚ್ ಆರ್. ರಾಮಸ್ವಾಮಯ್ಯ ಇದ್ದರು. ಅವರು ಶಿರಸ್ತೇದಾರ್ ಆಗಿದ್ದರು. ಅವರ ಮಗ, ವಿಶ್ವನಾಥ. ಸಿವಿಲ್ ಇಂಜಿನಿಯರ್ ಆಗಿದ್ದರು. ಇದು 1955 ರ ಸಮಯದ ಕಥೆ.
Submitted by rasikathe Sun, 04/21/2013 - 11:46

In reply to by venkatesh

ವೆಮ್ಕಟೆಷ್ ನಮಸ್ಕಾರ‌. ನಿಮ್ಮ‌ ಪ್ರತಿಕ್ರಿಯೆಗೆ ಧನ್ಯವಾದಗಳು! ನಾನು ಕಡೂರು ಅಮ್ತ‌ ಹೇಳಿದರೆ ಸಾಕು, ಎಲ್ಲರೂ ಒಬ್ಬರ‌ ಪರಿಛಯದವರು ಇದ್ದರು ಅಮ್ತ‌ ಹೇಳೇ ಹೇಳ್ತಾರೆ.... ಕಡೂರು ಒಮ್ದ್ ತರಹ‌ ಫೇಮಸ್ ಅಲ್ವಾ?...:) ನನ್ನೀ, ಮೀನಾ