ಇವರು ಯಾಕ್ರೀ ಹೀಗೆ?

ಇವರು ಯಾಕ್ರೀ ಹೀಗೆ?

ಒಂದು ಕಂಪನಿ ಅಂದ ಮೇಲೆ ಹಲವಾರು ರೀತಿ ಜನ ಇರುತ್ತಾರೆ, ಅದರಲ್ಲೇನೂ ವಿಶೇಷ ಇಲ್ಲ  ನಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲೂ ಅಷ್ಟೇ, ಆದರೆ ಇಲ್ಲಿನ ಕಥೆ ಸ್ವಲ್ಪ ಬೇರೆ.

ಹೀಗೆ ಒಮ್ಮೆ, ಒಬ್ಬ ವ್ಯಕ್ತಿಯಿಂದ ಮೀಟಿಂಗ್ ರಿಕ್ವೆಸ್ಟ್ ಬಂತು. ಯಾವುದೋ ಒಂದು ವಿಷಯದ ಬಗ್ಗೆ ಅವರಿಗಿದ್ದ ಹಲವಾರು ಪ್ರಶ್ನೆಗಳಿಗೆ ಉತ್ತರ ನನ್ನಲ್ಲಿದೆ ಎಂದು ಯಾರೋ ಉಸುರಿದ್ದರು ಎಂದು ಮೀಟಿಂಗ್ ಕರೆದಿದ್ದರು. ಹೆಸರನ್ನು ನೋಡಿದಾಗ ಎಂದೂ ಭೇಟಿಯಾದ ನೆನಪು ಬರಲಿಲ್ಲ, ಆದರೆ ನನ್ನ ದಿವ್ಯ ಮೆದುಳಿಗೆ ಹೊಳೆದದ್ದು ಅವರು ’ಚೈನಾ’ದವರು ಎಂದು.  ಸದ್ಯಕ್ಕೆ ಅವರ ಹೆಸರು ನೆನಪಿನಲ್ಲಿ ಇಲ್ಲದೆ ಇರುವುದರಿಂದ ಅವರನ್ನು "ಚಿಂಗಿ ಜಿಂಗ" ಎಂದು ಕರೆಯೋಣ.

ಮೀಟಿಂಗ್ ಸಮಯಕ್ಕೆ ಸ್ವಲ್ಪ ಮುಂಚಿತವಾಗಿ ನಿಗದಿತವಾದ ರೂಮನ್ನು ಹೊಕ್ಕೆ . . . ಯಾರೂ ಇರಲಿಲ್ಲ ! ಕಾದು ಕುಳಿತೆ . . . ಒಂದೆರಡು ನಿಮಿಷದಲ್ಲಿ ’ಚಿಂಗಿ ಜಿಂಗ’ ಬಂದರು. ಅರ್ರೇ.. ’ಚಿಂಗಿ ಜಿಂಗ’ ಈಸ್ ಎ ಗರ್ಲು !  ಮಹಿಳಾ ಮಣಿ ! ಹೆಸರನ್ನು ನೋಡಿದಾಗ ಹೆಣ್ಣೋ ಗಂಡೋ ಗೊತ್ತಿರಲಿಲ್ಲ. ಮುಂಚೇನೇ ಗೊತ್ತಿದ್ದರೆ ಸ್ವಲ್ಪ ಮುಖ ತೊಳೆದುಕೊಂಡು ಬಂದು ಕೂರುತ್ತಿದ್ದೆ.  ಹೋಗ್ಲಿ ಬಿಡಿ !
 
ಪರಸ್ಪರ ಪರಿಚಯವಾಯ್ತು . .  ಗಂಜಿ ಹಾಕಿ ಇಸ್ತ್ರಿ ಮಾಡಿದ ಬಿಳಿ ಶರ್ಟಿನಂತಹ ಮುಖ, ಸುಕ್ಕಿಲ್ಲದ ವದನ ಅಂತ ಹೇಳುತ್ತಿಲ್ಲ, ಏನೂ ಭಾವನೆ ಕಾಣದ ಮುಖ ಎಂದೆ !
 
ಯಾವುದೋ ಒಂದು 'ಸೆಮಿನಾರ್’ನಲ್ಲಿ ಒಂದು ವಿಷಯ ತಿಳಿದುಕೊಂಡಿದ್ದೆ. 'ಚೈನ’ದವರ ಸಂಸ್ಕೃತಿಯಲ್ಲಿ ಮುಖದ ಮೇಲೆ ಭಾವನೆ ವ್ಯಕ್ತಪಡಿಸುವುದು ತಪ್ಪು ಎಂದು. ಚೈನಾ ಮೂಲದವರೇ ಈ ವಿಷಯ ಹೇಳಿದ್ದರಿಂದ ನಾನು ನಂಬುತ್ತೇನೆ. ಅದೂ ಅಲ್ಲದೇ, ಭಾವನೆ ವ್ಯಕ್ತಪಡಿಸದೇ ಇರುವುದು ಒಂದು ಮುಖದ ತಾಂತ್ರಿಕ ದೋಷ ಇರಬಹುದು ಆದರೆ ಎಲ್ಲರದ್ದೂ ಆಗಿರಲು ಸಾಧ್ಯವಿಲ್ಲ, ಅಲ್ಲವೇ?
 
ಇರಲಿ, ಈಗ ’ಚಿಂಗಿ ಜಿಂಗ’ಳ ವಿಷಯಕ್ಕೆ ಬರೋಣ. ಒಂದು ಘಂಟೆಯ ಮೀಟಿಂಗು ಒಂದು ರೀತಿ ಅರ್ಜುನ-ಬಭ್ರುವಾಹನರ ಯುದ್ದದಂತೆ ನಡೆಯಿತು. ತಪ್ಪು ತಿಳೀಬ್ಯಾಡಿ, ಜಗಳ ಆಡಲಿಲ್ಲ. ಆಕೆ ಹೇಳಿದ ಮಾತು ನನಗೆ ಅರ್ಥಾವಾಗದೆ ನಾನು ತುಂಡರಿಸುತ್ತಿದ್ದೆ  ನನ್ನ ಭಾಷೆ ಅರ್ಥವಾಗದೆ ಆಕೆ ತುಂಡರಿಸುತ್ತಿದ್ದಳು. ಅಂತೂ ಇಂತೂ ಮೀಟಿಂಗ್ ಮುಗಿದು ಹೆಚ್ಚು ಕಮ್ಮಿ ಇಬ್ಬರಿಗೂ ಹಲವು ವಿಷಯಗಳು ಅರ್ಥವಾಗಿದ್ದರೂ ಹಲವಾರು ವಿಷಯಗಳು ಇನ್ನೂ ನಿಗೂಢವಾಗಿದ್ದು ಮತ್ತೊಂದು ಮೀಟಿಂಗ್’ಗೆ ದಿನ ಮತ್ತು ಸಮಯ ಗೊತ್ತು ಮಾಡಿಕೊಂಡು ಬೀಳ್ಕೊಟ್ಟೆವು.
ನಮ್ಮ ಟೀಮ್ ಮೀಟಿಂಗ್’ನಲ್ಲಿ ಈ ವಿಷಯ ಬಂದಾಗ, ಯಾರೋ ಆಕೆಗೆ ಸ್ವಲ್ಪ ಮರೆವು ಅಂದರು. ಇದೊಳ್ಳೇ ಕೆಲಸವಾಯ್ತಲ್ಲ ! ಪ್ರತೀ ಮೀಟಿಂಗ್’ನಲ್ಲೂ ಹೇಳಿದ ವಿಷಯಾನೇ ಹೇಳುತ್ತಿರಬೇಕಾ ಹಾಗಿದ್ರೆ ಅಂದುಕೊಂಡೆ.
 
ಇನ್ನೆರಡು ದಿನಕ್ಕೆ ಆಕೆಯೊಡನೆಯ ಮೀಟಿಂಗ್ ದಿನ, ಸಮಯ ಬಂತು. ಮೀಟಿಂಗ್ ರೂಮಿಗೆ ಹೋದರೆ ಆಗಲೇ ಆಕೆ ಕುಳಿತಿದ್ದಳು. ಇಬ್ಬರು ಹಾಯ್ ವಿನಿಮಯ ಮಾಡಿಕೊಂಡ ನಂತರ ಆಕೆ ಮಾತನಾಡಲು ಶುರು ಮಾಡಿಯೇ ಬಿಟ್ಟಳು.
ಎಂಥಾ ವಿಷಯ ಎಂದರೆ, ನನಗೆ ಏನೂ ಅರ್ಥವಾಗುತ್ತಿಲ್ಲ! ನಾವು ಯಾವ ವಿಷಯಕ್ಕೆ ಭೇಟಿಯಾಗಿದ್ದೇವೆ ಎಂದು ಈಕೆ ಮರೆತ ಹಾಗಿದೆ. ಹಾಗೂ ಹೀಗೂ ಕಷ್ಟಪಟ್ಟುಕೊಂಡೇ ಆಕೆಯ ಭಾಷೆ ಅರ್ಥಮಾಡಿಕೊಂಡು ನನಗೆ ಅರಿವಿದ್ದಷ್ಟು ವಿಷಯ ಆಕೆಗೆ ಹೇಳಿದೆ. ಆದರೆ ಈ ಮೀಟಿಂಗ್’ಗೂ ಹಿಂದಿನ ಮೀಟಿಂಗ್’ಗೂ ಯಾವ ಸಂಬಂಧವೂ ಇರಲಿಲ್ಲ. ಅರ್ಧ ಘಂಟೆಯಾದ ಮೇಲೆ ಆಕೆಗೆ ಬೇರೆ ಮೀಟಿಂಗ್ ಇದ್ದುದರಿಂದ ಹೊರಟು ಹೋದಳು.
 
ಸದ್ಯ ಮತ್ತೊಂದು ಮೀಟಿಂಗ್ ಎಂದು ಸಮಯ ನಿಗದಿ ಮಾಡಲಿಲ್ಲ. ಹೇಗಿದ್ದರೂ ಒಂದು ಘಂಟೆ ರೂಮ್ ಬುಕ್ ಮಾಡಿದ್ದರಿಂದ ಒಬ್ಬನೇ ಕುಳಿತು ಕೆಲಸ ಮಾಡುತ್ತಿದ್ದೆ.
 
ಬಾಗಿಲ ಬಳಿ ಯಾರೋ ಬಂದರು  ತಲೆ ಎತ್ತಿ ನೋಡಿದೆ  ’ಚಿಂಗಿ ಜಿಂಗ’ !.  ಮತ್ತೆ ಯಾಕೆ ಬಂದಿರಬಹುದು ಎಂದುಕೊಳ್ಳುವ ಮುನ್ನ ಆಕೆ "Sorry for the delay. my laptop crashed. I could not send an email also. can we have a discussion now?" ಅಂತ !
 
ಅಂದರೇ? ನಾನು ಅರ್ಧ ಘಂಟೆ ಮಾತನಾಡಿದ್ದು ’ಚಿಂಗಿ ಜಿಂಗ’ಳ ಜೊತೆ ಅಲ್ಲ!. ಅದು ಯಾರು?
 
ಪಾಪ, ಇನ್ನೊಬ್ಬಾಕೆ ಯಾರ ಜೊತೆ ಮಾತನಾಡಬೇಕು ಅಂತ ಅಂದುಕೊಂಡಿದ್ದರೋ ಗೊತ್ತಿಲ್ಲ! ಸುಮ್ನೆ ನನ್ ಜೊತೆ ಅವರ ಟೈಮ್ ವೇಸ್ಟ್ ಆಯ್ತು. ಇಷ್ಟಕ್ಕೂ ಆಕೆ ನಾನು ಬುಕ್ ಮಾಡಿದ ರೂಮಿನಲ್ಲಿ ಯಾಕೆ ಕೂರಬೇಕಾಯ್ತು?
 
ವಾಲಿ-ಸುಗ್ರೀವರ ನಡುವೆ ವ್ಯತ್ಯಾಸ ತಿಳಿಯದ 'ರಾಮ’ನಾಗಿದ್ದೆ ನಾನು.
 
ಅಲ್ರೀ! ಈ ಚೈನಾ’ದವರೆಲ್ಲ ಯಾಕ್ರೀ ಒಂದೇ ತರಹ ಇರ್ತಾರೆ?

 

Comments

Submitted by Prakash Narasimhaiya Wed, 01/16/2013 - 10:24

In reply to by kavinagaraj

ಆತ್ಮೀಯ ಭಲ್ಲೆಯವರೇ, ಚೀನಾದವರು ನೀವು confuse ಆದ್ರೆ ಹೇಗಿರುತ್ತಿರಾ ? ನೋಡೋಣಾಂತ ಒಂದೇ ತರ ಇರೋರಹಾಗೆ ನಿಮಗೆ ಕಾಣಿಸಿಕೊಳ್ಳುತ್ತಾರೆ!!!!!! ಹೆಂಗೆ ನಿಮ್ಮ ಜಿಂಗ ಜಿಂಗಿ?????????
Submitted by bhalle Wed, 01/16/2013 - 19:52

In reply to by kavinagaraj

ಕವಿಗಳೇ ಧನ್ಯವಾದಗಳು ... 'ಚಿಂಗಿ ಜಿಂಗ' ಗೆಜ್ಜೆ ನಾದಕೆ ನಿಮ್ಮ ಕಾಲುಗಳು ಹೆಜ್ಜೆ ಹಾಕಿದ ಹಾಗಿದೆ ... ಮಜವಾಗಿದೆ ಪ್ರತಿಕ್ರಿಯೆ :-)
Submitted by Premashri Wed, 01/16/2013 - 15:35

In reply to by sathishnasa

:) :)<<ಪ್ರತೀ ಮೀಟಿಂಗ್’ನಲ್ಲೂ ಹೇಳಿದ ವಿಷಯಾನೇ ಹೇಳುತ್ತಿರಬೇಕಾ ಹಾಗಿದ್ರೆ ಅಂದುಕೊಂಡೆ>> :) <<ವಾಲಿ-ಸುಗ್ರೀವರ ನಡುವೆ ವ್ಯತ್ಯಾಸ ತಿಳಿಯದ 'ರಾಮ’ನಾಗಿದ್ದೆ ನಾನು.>> :)
Submitted by ಗಣೇಶ Wed, 01/16/2013 - 23:49

:) :)ಭಲ್ಲೇಜಿ, ಈ ಬ್ರೂಸ್ಲೀ, ಕುಂಗು ಫೂ.. ಸಿನೆಮಾಗಳನ್ನು ನೋಡಿದಾಗ ಚೀನೀಯರೆಲ್ಲಾ ಯಾಕೆ ಹೀಗೆ ಒಂದೇ ತರಹ ಅನಿಸುತ್ತಿತ್ತು..; ಹಾಸ್ಯ ಸೂಪರ್.