ಪ್ರವಾಸಿಗಳಿಗೆ ಉಪಯುಕ್ತವಾದ ವಿಕಿವಾಯೇಜ್

ಪ್ರವಾಸಿಗಳಿಗೆ ಉಪಯುಕ್ತವಾದ ವಿಕಿವಾಯೇಜ್

ಟೆಲಿಕಾಮ್:ಚಂದಾದಾರರ ಸಂಖ್ಯೆಯಲ್ಲಿ ಕುಸಿತ

ಸೇವಾದಾತೃಗಳು ಚಂದಾದಾರರ ಸಂಪರ್ಕವನ್ನು ಕಡಿತ ಮಾಡಿದ ಕಾರಣ ದೇಶದಲ್ಲಿ ಕಳೆದ ತಿಂಗಳಲ್ಲಿ ಮೊಬೈಲ್ ಚಂದಾದಾರರ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಹಾಗಾಗಿ ತೊಂಭತ್ತಮೂರು ಕೋಟಿ ಇದ್ದ ಬಳಕೆದಾರರ ಸಂಖ್ಯೆ ಇದೀಗ ತೊಂಭತ್ತೆರಡು ಕೋಟಿಗಿಳಿದಿದೆ. ಒಂದಕ್ಕಿಂತ ಹೆಚ್ಚು ಸಿಮ್ ಹೊಂದಿ,ಅದನ್ನು ದೀರ್ಘಕಾಲ ಬಳಸದಿರುವುದು, ತಮ್ಮ ವಾಸಸ್ಥಾನ, ನಾಗರಿಕ ಎನ್ನುವುದರ ಪುರಾವೆ ಒದಗಿಸದಿರುವುದು, ಹಣಪಾವತಿಸದಿರುವುದು ಮುಂತಾದ ಕಾರಣಗಳಿಗಾಗಿ ಸೇವಾದಾತೃಗಳು ಸಂಪರ್ಕ ಕಡಿತ ಮಾಡುತ್ತಿದ್ದಾರೆ. ಭಾರ್ತಿ ಏರ್‌ಟೆಲ್, ವೊಡಾಫೋನ್, ಐಡಿಯಾ, ಬಿಎಸ್‌ಎನ್‌ಎಲ್, ಟಾಟಾ ಟೆಲಿ ಸಹಿತ ಹಲವು ಸೇವಾದಾತೃಗಳ ಚಂದಾದಾರರ ಸಂಖ್ಯೆಯಲ್ಲಿ ಇಳಿಕೆ ಕಂಡಿದೆ. ಇದಕ್ಕೆ ರಿಲಾಯನ್ಸ್ ಕಮ್ಯುನಿಕೇಶನ್ ಮಾತ್ರಾ ಅಪವಾದವಾಗಿದ್ದು, ಅದರ ಚಂದಾದಾರರ ಸಂಖ್ಯೆಯಲ್ಲಿ ಒಂದು ದಶಲಕ್ಷಕ್ಕಿಂತ ಹೆಚ್ಚು ಜನ ಏರಿಕೆಯಾಗಿದೆ. ಕೋರ್ಟು ತೀರ್ಪಿನ ಕಾರಣ ಲೈಸೆನ್ಸ್ ಕಳೆದುಕೊಂಡ ಹಲವು ಸೇವಾದಾತೃಗಳು ಕಳೆದ ವರ್ಷಾಂತ್ಯ ನಡೆದ ಸ್ಪೆಕ್ಟ್ರಮ್ ಹರಾಜಿನಲ್ಲಿ ಭಾಗವಹಿಸದ ಕಾರಣ, ಅವರುಗಳು ಸೇವೆಯನ್ನು ಒದಗಿಸಲಾಗದ ಸ್ಥಿತಿಯನ್ನು ತಲುಪಿದ್ದಾರೆ. ಅವರುಗಳ ಚಂದಾದಾರರ ಸ್ಥಿತಿ ತ್ರಿಶಂಕು ಸ್ಥಿತಿಯಾಗುವುದನ್ನು ತಪ್ಪಿಸಲು, ಮರು ಹರಾಜು ನಡೆಯುವ ವರೆಗೆ ಅವರುಗಳ ಸೇವೆ ಮುಂದುವರಿಸಲು ಅನುಮತಿ ಕೇಳಿ, ಸರಕಾರವು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ. ಒಂದುವೇಳೆ ಅರ್ಜಿ ತಿರಸ್ಕೃತವಾದರೆ,ತಾತ್ಕಾಲಿಕ ಲೈಸೆನ್ಸ್ ಮಂಜೂರು ಮಾಡುವ ಪ್ರಸ್ತಾಪವೂ ಸರಕಾರದ ಮುಂದಿದೆ. ಸಿಡಿಎಂಎ ಸ್ಪೆಕ್ಟ್ರಮ್ ಮೂಲಬೆಲೆಯನ್ನು ಹಿಂದೆ ನಿರ್ಧರಿಸಿದ್ದಕ್ಕಿಂತ ಅರೆವಾಸಿ ಇಳಿಸಲು ಸಚಿವರ ಸಮಿತಿ ಶಿಫಾರಸು ಮಾಡಿದೆ. ಸಿಡಿಎಂಎ ಸ್ಪೆಕ್ಟ್ರಂ ಹರಾಜಿನಲ್ಲಿ ಯಾರೂ ಭಾಗವಹಿಸದೆ, ದೂರವುಳಿದದ್ದೇ ಇದಕ್ಕೆ ಕಾರಣವಾಗಿದೆ. ಆದಾಯತೆರಿಗೆ ಇಲಾಖೆಯು ವೊಡಾಫೋನ್ ಕಂಪೆನಿಯಿಂದ ಆದಾಯಕರವಾಗಿ ಹದಿನಾಲ್ಕು ಸಾವಿರ ಕೋಟಿ ಮೊತ್ತಕ್ಕೆ ಕೇಳಿಕೆ ಸಲ್ಲಿಸಿದ ಪ್ರಕರಣವೂ ಸುಖಾಂತ್ಯವಾಗುವ ಲಕ್ಷಣ ಕಂಡು ಬರುತ್ತಿದೆ. ಹಚಿನ್ಸನ್ ಇಸ್ಸಾರ್ ಕಂಪೆನಿಯಿಂದ, ವೊಡಾಫೋನ್ ಕಂಪೆನಿಯು ಮೊಬೈಲ್ ಸೇವೆ ಲೈಸೆನ್ಸ್ ಖರೀದಿಸಿದಾಗ ನೀಡಿದ ಹಣದ ಮೇಲೆ ಆದಾಯಕರವನ್ನು ಹೇರಿ ಆದಾಯಕರ ಇಲಾಖೆ ತಕರಾರು ತೆಗೆದಿತ್ತು. ವೊಡಾಫೋನ್ ಕಂಪೆನಿಯು ತಾನು ಆದಾಯಕರ ನೀಡಬೇಕಾದ ಅಗತ್ಯವಿಲ್ಲವೆಂದು ವಾದಿಸಿ, ಪ್ರಕರಣವನ್ನು ನ್ಯಾಯಾಲಯಕ್ಕೆ ಒಯ್ಯುವ ಯೋಚನೆಯಲ್ಲಿತ್ತು. ಇದೀಗ ಹಣಕಾಸು ಸಚಿವಾಲಯ ವೊಡಾಫೋನ್ ಕಂಪೆನಿಯ ವಾದವನ್ನು ಆಲಿಸಲು ಮಾತುಕತೆಯ ಪ್ರಸ್ತಾಪವನ್ನು ಇರಿಸಿದ್ದು,ವೊಡಾಫೋನ್ ಕೂಡಾ ಇದಕ್ಕೆ ಸಮ್ಮತಿಸಿದೆ.

ಅಮೆರಿಕಾದ ಶೇರು ಮಾರುಕಟ್ಟೆಯಲ್ಲಿ ವ್ಯವಹಾರ ಸ್ಥಗಿತ ಮಾಮೂಲಿಯಾಗಿದೆ

 

ಅಮೆರಿಕಾದಲ್ಲಿ ಶೇರು ಮಾರುಕಟ್ಟೆಯಲ್ಲಿ ತಂತ್ರಜ್ಞಾನ ವೈಫಲ್ಯ ಹೊಸವರ್ಷದಲ್ಲಿ ಏರಿಕೆ ಕಂಡಿದೆ. ಬ್ಯಾಟ್ಸ್ ಗ್ಲೋಬಲ್ ಮಾರ್ಕೆಟ್ಸ್ ದಲ್ಲಾಳಿಯು, ನಾಲ್ಕುಲಕ್ಷಕ್ಕೂ ಹೆಚ್ಚು ವ್ಯವಹಾರಗಳು ತಪ್ಪು ಬೆಲೆಯಲ್ಲಿ ನಡೆದಿವೆ. ಇದರಿಂದ ಗ್ರಾಹಕರು ನಷ್ಟ ಮಾಡಿಕೊಂಡಿದ್ದಾರೆ. ನ್ಯಾಷನಲ್ ಸ್ಟೋಕ್ ಎಕ್ಸ್ಚೇಂಜ್ ಒಂದು ಗಂಟೆ ಅವಧಿಗೆ ವ್ಯವಹಾರ ಸ್ಥಗಿತಗೊಳಿಸಬೇಕಾದ ಪ್ರಮೇಯವೂ ಬಂತು. ಇನ್ನು ನ್ಯೂಯಾರ್ಕ್ ಶೇರು ವಿನಿಮಯ ಕೇಂದ್ರವು ಹಲವು ಬಾರಿ ಹದಿನೈದು ನಿಮಿಷಗಳ ಅವಧಿಯ ವ್ಯವಹಾರ ನಿಲುಗಡೆ ಮಾಡಬೇಕಾದ ಸ್ಥಿತಿ ಉದ್ಭವವಾಯಿತು. ನಾಸ್ಡಾಕ್‌ನಲ್ಲೂ ವ್ಯವಹಾರ ನಿಲುಗಡೆಯಾಯಿತು. ಹಿಂದೆಯೂ ಇಂತಹ ತೊಂದರೆಗಳು ಕಂಡುಬಂದಿದ್ದರೂ, ಈಗೀಗ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ. ಶೇರು ಖರೀದಿಯ ಸಂಖ್ಯೆಯಲ್ಲಿ ಏರಿಕೆ, ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಗುಣಮಟ್ಟದ ನಿಯಂತ್ರಣದ ಕೊರತೆ ಇತ್ಯಾದಿ ಕಾರಣಗಳು ಈ ಗೊಂದಲಕ್ಕೆ ಕಾರಣವಾಗಿವೆ. ಈ ಸವಾಲನ್ನು ಎದುರಿಸಲು ಶೇರು ವಿನಿಮಯ ಕೇಂದ್ರಗಳ ತಂತ್ರಜ್ಞಾನವನ್ನು ನಿಯಂತ್ರಣಕ್ಕೊಳಪಡಿಸುವ ಪ್ರಸ್ತಾಪವೂ ಇದೆ.

 

ಸಾಧನಗಳು ರಫ್ ಮತ್ತು ಟಫ್

ಕೈಯಲ್ಲಿ ಹಿಡಿದು ಬಳಸುವ ಸ್ಮಾರ್ಟ್‌ಫೋನ್,ಟ್ಯಾಬ್ಲೆಟ್ ಅಂತಹ ಸಾಧನಗಳು ಅಕಸ್ಮಾತ್ ನೀರಿಗೆ ಬಿದ್ದು ಹಾಳಾಗಬಾರದು. ಅದೇ ರೀತಿ ಮರಳಿನ ಕಣವು ಅದರ ತೆರೆಯ ಮೇಲೆ ಗೀರಿದಾಗ, ತೆರೆಯ ಮೇಲೆ ಗೀಚಿದ ಗೆರೆಗಳು ಮೂಡಬಾರದು ಎಂದು ಗ್ರಾಹಕ ಅಪೇಕ್ಷಿಸುವುದು ಸಾಮಾನ್ಯ ತಾನೇ?ಲಾಸ್‌ವೇಗಸ್‌ನಲ್ಲಿ ನಡೆದಿರುವ ಇಲೆಕ್ಟ್ರಾನಿಕ್ಸ್ ಸಾಧನಗಳ ಪ್ರದರ್ಶನದಲ್ಲಿ, ಇಂಥಹ ರಫ್ ಮತ್ತು ಟಫ್ ಸಾಧನಗಳನ್ನು ಪ್ರದರ್ಶಿಸಲಾಗುತ್ತಿದೆ.ಈಜುಕೊಳಕ್ಕೆ ಬಿದ್ದರೂ ತಡೆದುಕೊಳ್ಳುವ ಮೊಬೈಲ್, ನೆಲಕ್ಕೆ ಬಿದ್ದರೂ ಕ್ಯಾರೇ ಎನ್ನದ ಟ್ಯಾಬ್ಲೆಟ್, ಸುತ್ತಿಗೆ ಹೊಡೆತವನ್ನೂ ತಡೆದುಕೊಳ್ಳುವ ಸಾಧನಗಳನ್ನಿಲ್ಲಿ ತಯಾರಕರು ಪ್ರದರ್ಶಿಸುತ್ತಿದ್ದಾರೆ.

ಪ್ರವಾಸಿಗಳಿಗೆ ಉಪಯುಕ್ತವಾದ ವಿಕಿವಾಯೇಜ್
ವಿಶ್ವಕೋಶ ವಿಕಿಪೀಡಿಯಾದ ಇನ್ನೊಂದು ಅಂಗವಾಗಿ ವಿಕಿವಾಯೇಜ್‌ನ ಬೀಟಾ ಆವೃತ್ತಿ ಸಿದ್ಧವಾಗಿದ್ದು, ಮಕರಸಂಕ್ರಾಂತಿಯ ದಿನವದನ್ನು ಲಭ್ಯವಾಗಿಸುವ ತಯಾರಿ ನಡೆದಿದೆ. ವಿಕಿವಾಯೇಜ್‌ನಲ್ಲಿ ಸುಮಾರು ಇಪ್ಪತ್ತೈದು ಸಾವಿರ ಬರಹಗಳಿವೆ. ಅವು ಪ್ರವಾಸಿ ಸ್ಥಳಗಳ ಬಗ್ಗೆ ಇರುವುದೇ ಹೆಚ್ಚು. ಪ್ರವಾಸಿಗಳಿಗೆ ಪ್ರವಾಸಿ ಸ್ಥಳಗಳ ವಿವರಗಳು, ಸ್ಥಳ ಚರಿತ್ರೆ-ಪುರಾಣ, ಹವಾಮಾನ, ಸಾರಿಗೆ-ಊಟ-ವಸತಿ ಇತ್ಯಾದಿ ವಿವರಗಳನ್ನಿಲ್ಲಿ ಒದಗಿಸಲಾಗುತ್ತದೆ. ವಿಕಿವಾಯೇಜನ್ನು ಬಹುಸಾಧನಗಳ ಮೂಲಕ ಪಡೆಯಲು ಸಾಧ್ಯವಾಗಿಸಲಾಗಿದೆ.

ಅಪರಾಧಿ ಹಂತಕನಾಗುವನೇ?:ಊಹನೆಗೆ ತಂತ್ರಾಂಶ 
ಅಪರಾಧ ಪ್ರಕರಣಗಳಲ್ಲಿ ಕಂಬಿ ಎಣಿಸುವವರು ಮುಂದೆ ಮಾನವಹತ್ಯೆಯಂತಹ ಅಪರಾಧ ಎಸಗುವ ಪ್ರವೃತ್ತಿಯವನೇ ಎನ್ನುವುದನ್ನು ಲೆಕ್ಕ ಹಾಕಲು ಸಾಮರ್ಥ್ಯವಿರುವ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗಿದೆ. ಇದುವರೆಗೆ ಜೈಲಿನ ಅಧಿಕಾರಿಗಳು,ಈ ಬಗ್ಗೆ ವರದಿ ಸಿದ್ಧ ಪಡಿಸಲು ತಮ್ಮ ಅನುಭವ ಮತ್ತು ಸಾಮಾನ್ಯಜ್ಞಾನ, ಅಪರಾಧಿಯ ಹಿನ್ನೆಲೆ ಇವುಗಳನ್ನು ಗಮನಿಸಿ, ತೀರ್ಮಾನಕ್ಕೆ ಬರಬೇಕಿತ್ತು. ಯಾವನೇ ಆದರೂ ಮುಂದೆ ಮಾನವಹತ್ಯೆಯಂತಹ ಕುಕೃತ್ಯಗಳಲ್ಲಿ ಭಾಗವಹಿಸಬಹುದು ಎನ್ನುವ ಅನುಮಾನ ಬಂದರೆ, ಅವರ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಾಗುತ್ತದೆ. ಬ್ಯಾಂಕ್ ಸಾಲ ನೀಡುವ ಮುನ್ನ ವ್ಯಕ್ತಿಯ ಅರ್ಹತೆಯನ್ನು ನಿರ್ಧರಿಸಲು ಕಂಪ್ಯೂಟರ್ ಬಳಸುವಂತೆ, ಮಾನವ ಸ್ವಭಾವದ ವಿಶ್ಲೇಷಣೆಗೆ ಹೆಚ್ಚು ಹೆಚ್ಚು ಕಂಪ್ಯೂಟರ್ ಬಳಸುವುದು ಈಗ ಮಾಮೂಲಿಯಾಗಿದೆ. ಹಳೆಯ ಪ್ರಕರಣಗಳಲ್ಲಿ ಸಿಲುಕಿದವರ ಚರಿತ್ರೆಯನ್ನು ವಿಶ್ಲೇಷಿಸಿ, ತನ್ಮೂಲಕ ಈ ರೀತಿಯ ನಿರ್ಧಾರಕ್ಕೆ ಬರಲು ಮಾಹಿತಿ ತಂತ್ರಜ್ಞಾನದಲ್ಲಿ ಅವಕಾಶವಿದೆ. ಈ ರೀತಿ ದತ್ತಾಂಶಗಳ ಮೂಲಕ ಮಾಹಿತಿ, ಮಾಹಿತಿಯಿಂದ ಜ್ಞಾನ, ತಿಳುವಳಿಕೆಯನ್ನು ಪಡೆಯುವ ವಿಧಾನವು ದಿನೇ ದಿನೇ ಅಭಿವೃದ್ಧಿಯಾಗುತ್ತಿದೆ.

ಐಐಟಿ ಚೆನ್ನೈಯಿಂದ "ಕೃತಕ ರಕ್ತ" ತಯಾರಿ
ಪ್ರಯೋಗಾಲಯದಲ್ಲಿ ರಕ್ತವನ್ನು ತಯಾರಿಸಲು ಐಐಟಿಯ ಸಂಶೋಧಕರು ಯಶಸ್ಸು ಕಂಡಿದ್ದಾರೆ. ಸ್ಟೆಮ್ ಕೋಶಗಳನ್ನು ಬಳಸಿ, ಕೆಂಪು ರಕ್ತಕಣಗಳನ್ನು ಅಭಿವೃದ್ಧಿ ಪಡಿಸಲವರಿಗೆ ಸಾಧ್ಯವಾಗಿದೆ. ಕೆಂಪುರಕ್ತಕಣಗಳಲ್ಲಿರುವ ಹಿಮೋಗ್ಲೋಬಿನ್, ಆಮ್ಲಜನಕವನ್ನು ದೇಹದ ಬೇರೆ ಬೇರೆ ಭಾಗಗಳಿಗೆ ತಲುಪಿಸಲು ಅವಶ್ಯವೆನ್ನುವುದು ತಿಳಿದ ವಿಚಾರವೇ ಆಗಿದೆ. ರಕ್ತದ ಕೊರತೆಯನ್ನು ಹೋಗಲಾಡಿಸಲು ಈ ವಿಧಾನ ನೆರವಾಗಬಹುದು. ಇನ್ನು ಮೂರು ವರ್ಷಗಳಲ್ಲಿದನ್ನು ಜನರಲ್ಲಿ ಬಳಸಲು ಸಾಧ್ಯವಾಗಬಹುದು ಎನ್ನುವುದು ಈಗಿನ ನಿರೀಕ್ಷೆ. ಸದ್ಯದ ರಕ್ತದ ಬೆಲೆಯ ಅರ್ಧ ಬೆಲೆಗೆ ಕೃತಕ ರಕ್ತವನ್ನು ತಯಾರಿಸಲು ಸಾಧ್ಯವೆನ್ನುವುದು ಸಂಶೋಧಕರ ಹೇಳಿಕೆ. ರಕ್ತದಿಂದ ಹರಡುವ ರೋಗದ ಭಯವನ್ನೂ ಈ ಕೃತಕರಕ್ತ ನೀಗಿಸಲಿದೆ. ಇಂಜಿನಿಯರಿಂಗ್ ವಿನ್ಯಾಸ ವಿಭಾಗದ ಸಂಶೋಧಕರು ಕೃತಕ ರಕ್ತವನ್ನು ಅಭಿವೃದ್ಧಿ ಪಡಿಸಿದ್ದಾರೆ.

ಅಗ್ಗದ ಸ್ಮಾರ್ಟ್‌ಫೋನ್‌ಗಳು ಜನಪ್ರಿಯ
ನೋಕಿಯಾ ಕಂಪೆನಿಯು ಆಶಾ ಎನ್ನುವ ಅಗ್ಗದ ಸ್ಮಾರ್ಟ್‌ಫೋನು, ಲುಮಿಯಾ ಎನ್ನುವ ದುಬಾರಿ ಸ್ಮಾರ್ಟ್‌ಫೋನು ಬಿಡುಗಡೆ ಮಾಡಿದಾಗ ಅವು ಮಾರಾಟವಾದ ಸಂಖ್ಯೆಗಳು ಅಜ-ಗಜಾಂತರದಲ್ಲಿವೆ. ಆಶಾ ಹದಿನಾಲ್ಕು ದಶಲಕ್ಷ ಸಂಖ್ಯೆಯಲ್ಲಿ ಮಾರಾಟವಾಗಿದ್ದರೆ, ಲುಮಿಯಾ ನಾಲ್ಕೂವರೆ ದಶಲಕ್ಷವಷ್ಟೇ ಮಾರಾಟವಾಗಿದೆ. ಅಗ್ಗದ ಫೋನಿನಲ್ಲಿ ಕಡಿಮೆ ಗುಣಮಟ್ಟದ ಕ್ಯಾಮರಾ, ಸಣ್ಣತೆರೆ ಇತ್ಯಾದಿ ಇರುವುದು ಸ್ವಾಭಾವಿಕ. ಅವು ಸಾಮಾಜಿಕ ಜಾಲತಾಣಗಳನ್ನು ಸಂಪರ್ಕಿಸಲು ಅವಕಾಶ ನೀಡುತ್ತವೆ. ಇಂಟರ್‌ನೆಟ್ ಜಾಲಾಟ ಸಾಧ್ಯವಾದರೂ, ಅವು ದುಬಾರಿ ಫೋನುಗಳಲ್ಲಿ ಸಾಧ್ಯವಾಗುವಷ್ಟು ಸುಖಾನುಭವ ನೀಡದು. ಆದರೆ ಅವುಗಳ ಬೆಲೆಯಲ್ಲಿ ಹತ್ತು ಪಟ್ಟು ವ್ಯತ್ಯಾಸವೂ ಇರುತ್ತವೆ ಎನ್ನುವುದು ಗ್ರಾಹಕನಿಗೆ ಪ್ರಿಯವಾಗಲು ಮುಖ್ಯ ಕಾರಣವಾಗುತ್ತದೆ.

UDAYAVANIEPAPER