ಪತಂಜಲಿಯ ಯೋಗ ಭಾಗ ೮

ಪತಂಜಲಿಯ ಯೋಗ ಭಾಗ ೮

ಬರಹ
ಪತಂಜಲಿಯ ಯೋಗ ಭಾಗ ೮ ಎಂಟನೆಯ ಲೇಖನ ಪತಂಜಲಿಯ ಯೋಗದ ತೃತೀಯ ವಿಭೂತಿ ಪಾದ. ಮನಸ್ಸನ್ನು ಪರಿಶುಧ್ಧಿಗೊಳಿಸಿದಂತೆ ಅನೇಕ ಸಿಧ್ಧಿಗಳು ಬರಬಹುದು. ಸಿಧ್ಧಿಗಳು ಎಂದರೆ ಪವಾಡ ಮಾಡಬಲ್ಲ ಶಕ್ತಿ. ಆದರೆ ಅವುಗಳ ಬಗ್ಗೆ ಜಾಗ್ರತವಾಗಿದ್ದು ಯೋಗದ ಹಾದಿಯಲ್ಲಿ ಮುಂದುವರೆಯುವ ಬಗ್ಗೆ ವಿಭೂತಿಪಾದದಲ್ಲಿ ವಿವರಣೆ ಇದೆ. ಏಕೆಂದರೆ ಅವು ಯೋಗದ ಗುರಿಯನ್ನು ತಲುಪಲು ಇರುವ ಅಡ್ಡಿಗಳು. ಮನಸ್ಸನ್ನು ಒಂದು ಜಾಗದಲ್ಲಿ ನೆಲೆಗೊಳಿದಾಗ ಅದು ಧಾರಣೆ.ಯೋ.ಸೂ.ಪಾದ ೩. ಸೂತ್ರ.೧ ಮನಸ್ಸಿನಲ್ಲಿ ಒಂದೇ ಪ್ರತ್ಯಯವು (ಪ್ರತ್ಯಯವೆಂದರೆ ವೃತ್ತಿಗಳಿಂದ ಬರುವ ಜ್ಞಾನ) ಇದ್ದರೆ ಅದು ಧ್ಯಾನ ಯೋ.ಸೂ.ಪಾದ ೩. ಸೂತ್ರ.೨ ಧ್ಯಾನಕ್ಕೆ ಎರಡು ಉತ್ತಮ ಪ್ರತಿಮೆಗಳೆಂದರೆ ಎಣ್ಣೆ ಏಕಪ್ರಕಾರವಾಗಿ ಬೀಳುತ್ತಿರುವುದು; ಗಾಳಿ ಇಲ್ಲದ ಕಡೆ ದೀಪ ನಿಶ್ಚಲವಾಗಿ ಉರಿಯುತ್ತಿರುವುದು. ಈ ಎರಡು ಉದಾಹರಣೆಗಳಲ್ಲೂ ಬದಲಾವಣೆಯೇ ಇಲ್ಲವೆಂದು ಮೇಲ್ನೋಟಕ್ಕೆ ತೋರಿದರೂ ಬದಲಾವಣೆ ನಿರಂತರವಾಗಿ ಆಗುತ್ತಿರುತ್ತದೆ. ಅಂತೆಯೇ ಧ್ಯಾನದಲ್ಲಿಯೊ ಏಕಪ್ರಕಾರವಾದ ವೃತ್ತಿಗಳು ಒಂದರಹಿಂದೆ ಒಂದು ತಡೆಬಿಡದೆ ಏಳುತ್ತಿದ್ದರೂ ಆ ವೃತ್ತಿಗಳಿಂದ ಬರುವ ಜ್ಞಾನ ಒಂದೇ ಇರುತ್ತದೆ. ಧ್ಯಾನದಲ್ಲಿಯೇ ಜ್ಞಾನ ಒಂದೇ ಉಳಿದು ಸ್ವರೂಪಶೂನ್ಯವಾದ ಹಾಗೆ ಆದಾಗ ಅದು ಸಮಾಧಿ.ಯೋ.ಸೂ.ಪಾದ ೩. ಸೂತ್ರ.೩ ಧಾರಣ, ಧ್ಯಾನ, ಸಮಾಧಿ ಇವು ಮೊರೂ ಒಂದು ವಿಷಯದ ಮೇಲೆ ಆದಾಗ ಅದು ಸಂಯಮ.ಯೋ.ಸೂ.ಪಾದ ೩. ಸೂತ್ರ.೪ ಇದರಿಂದ ಪ್ರಜ್ಞಾಲೋಕ ಉದಯವಾಗುತ್ತದೆ.ಯೋ.ಸೂ.ಪಾದ ೩. ಸೂತ್ರ.೫ ಇದನ್ನು ಹಂತಹಂತವಾಗಿ ಉಪಯೋಗಿಸಬೇಕು.ಯೋ.ಸೂ.ಪಾದ ೩. ಸೂತ್ರ.೬ ಚಿತ್ತ ಚಾಂಚಲ್ಯ ಕಡಿಮೆಯಾಗಿ ಏಕಾಗ್ರತೆಯ ಉದಯವಾಗುವಾಗ ಆಗುವ ಮನಸ್ಸಿನ ಮೇಲಣ ಬದಲಾವಣೆಗಳಿಗೆ ಸಮಾಧಿಪರಿಣಾಮ ಎಂದು ಹೆಸರು. ಏಕಾಗ್ರತೆ ಹೆಚ್ಚಿ ಒಂದೇ ಪ್ರತ್ಯಯವು ಮನಸ್ಸಿನ ಮೇಲೆ ಮಾಡುವ ಪರಿಣಾಮವೇ ಏಕಾಗ್ರತಾ ಪರಿಣಾಮ. ಮನದಲ್ಲಿ ಯಾವ ವಿಧವಾದ ಪ್ರತ್ಯಯವೇ ಆಗಲಿ, ಜ್ಞಾನವೇ ಆಗಲಿ(ತನ್ನತನವೂ), ಇಲ್ಲದಂತಹ ಕ್ಷಣ ಮನಸ್ಸಿನ ಮೇಲೆ ನಿರೋಧ ಪರಿಣಾಮವನ್ನುಂಟು ಮಾಡುತ್ತದೆ. ಸಂಯಮದಿಂದ ಜ್ಞಾನ ಮತ್ತು ಅನೇಕ ಸಿದ್ಧಿಗಳನ್ನು ಪಡೆಯಬಹುದು. ಪ್ರಕೃತಿಯ ಮೇಲೆ ಹಿಡಿತ ಬರುತ್ತದೆ. ಆದರೆ ಇವು ಯೋಗದ ಪ್ರಗತಿಗೆ ಅಡಚಣೆಗಳು. ಇವುಗಳಲ್ಲೂ ವಿರಕ್ತಿ/ವೈರಾಗ್ಯ ಬೆಳಸಿಕೊಂಡಾಗ ಮನಸ್ಸಿನಲ್ಲಿರುವ ರಜಸ್ಸು ಮತ್ತು ತಮಸ್ಸು ನಾಶವಾಗಿ ಸತ್ವವೊಂದೇ ಉಳಿಯತ್ತದೆ.ಇದೇ ಕೈವಲ್ಯ. ಪತಂಜಲಿಯ ತೃತೀಯ ವಿಭೂತಿಪಾದದ ಮುಖ್ಯಸೂತ್ರಗಳನ್ನು ಯೋಗದಲ್ಲಿ ಪ್ರಾರಂಭಿಕ ಆಸಕ್ತಿ ಇರುವವರಿಗೆಂದು ಬರೆದ ಲೇಖನ. ನಾಲ್ಕನೆಯ ಪಾದದಲ್ಲಿ ಕೈವಲ್ಯದ ಬಗ್ಗೆ ಇನ್ನೂ ಹೆಚ್ಚಿನ ವಿವರಗಳಿವೆ. ಮುಂದುವರೆಯುವುದು... ೧೬/೯/೦೫