ನಾನೇಕೆ ಬರೆಯುತ್ತೇನೆ?
ಖ್ಯಾತ ಸಾಹಿತಿ ಎಸ್.ಎಲ್ ಭೈರಪ್ಪ ಅವರ ಕೃತಿ. ಬರಹಗಾರರು ತಾವು ಇಂಥದೇ ಕಾರಣಕ್ಕಾಗಿ ಬರೆಯುತ್ತೇವೆಂದು ನಿರ್ದಿಷ್ಟ ಕಾರಣವನ್ನು ಹೊಂದಿರುವುದು ಕಷ್ಟ ಸಾಧ್ಯ. ವಿಷಯದ ಆಯ್ಕೆಗಳು ಪೂರ್ವಯೋಜಿತವಾಗಿದ್ದರೂ ಬರಹವೂ ಇದೇ ರೀತಿ ಸಾಗಬೇಕೆಂದು ಅಂದುಕೊಂಡಿದ್ದರೂ ಬರವಣಿಗೆ ಸಂದರ್ಭದಲ್ಲಿ ಅವುಗಳ ತಿರುವುಗಳು ಬದಲಾಗಿಯೇ ಆಗುತ್ತವೆ. ಹೀಗೆ ಆದಂತಹ ಬದಲಾವಣೆಗಳು ಯಾವುದೇ ಎಗ್ಗಿಲ್ಲದಂತೆ ಸಾಗಿ ಬರಹಗಾರನ ವಿಚಾರ ಲಹರಿಯನ್ನು ತನ್ನ ಕೃತಿ ಅಥವಾ ಬರಹದಲ್ಲಿ ಅಭಿವ್ಯಕ್ತಗೊಳಿಸುತ್ತದೆ.
ಬರಹ ಮುಗಿಸಿದ ಮೇಲೆ ಅಥವಾ ಪ್ರತಿಯೊಬ್ಬ ಬರಹಗಾರನಿಗೂ ಈ ಪ್ರಶ್ನೆ ಒಂದು ಬಾರಿಯಾದರೂ ತನ್ನ ಮನದಲ್ಲಿ ಈ ಪ್ರಶ್ನೆ ಮೂಡುವುದು ಸಹಜ. ಖ್ಯಾತ ಸಾಹಿತಿ ಎಸ್.ಎಲ್ ಭೈರಪ್ಪ ಅವರಿಗೂ ಈ ಪ್ರಶ್ನೆ ಕಾಡದಿರಲಿಲ್ಲ. ಇದರಿಂದಾಗಿಯೇ ಮೂಡಿ ಬಂದ ಕೃತಿಯೇ "ನಾನೇಕೆ ಬರೆಯುತ್ತೇನೆ?". ಕಳೆದ ಸುಮಾರು ಹತ್ತು ವರ್ಷಗಳಿಂದ ಬರೆದ ಲೇಖನಗಳ ಸಂಗ್ರಹ ಇದು. ನಾನೇಕೆ ಬರೆಯುತ್ತೇನೆ ಎಂಬುದನ್ನು ಅವರದೇ ಮಾತಿನಲ್ಲಿ ಕೇಳುವುದಾದರೆ, " ತಾವು ಇಂಥದೇ ಕಾರಣಕ್ಕಾಗಿ ಬರೆಯುತ್ತೇವೆಂದು ಎಲ್ಲ ಲೇಖಕರೂ ತಮ್ಮ ಜೀವನದುದ್ದಕ್ಕೂ ಮಾರ್ಗದರ್ಶಿಯಾಗುವಂಥ ಗುರಿಯನ್ನು ಖಚಿತ ಮಾಡಿಟ್ಟುಕೊಂಡಿರುವುದು ಸಾಧ್ಯವಿಲ್ಲ. ಉಳಿದವರ ಮಾತು ಹೋಗಲಿ. ನನ್ನ ಬರವಣಿಗೆಯ ಗೊತ್ತುಗುರಿಗಳು ಇನ್ನು ಒಂದು ವಾರದ ನಂತರ ಯಾವ ಧಾಟಿಯಲ್ಲಿ ಹೋಗುತ್ತವೆ ಎಂದು ಈ ದಿನ ನಿಶ್ಚಯವಾಗಿ ಹೇಳಲಾರೆ. ಕಳೆದ ಹದಿನೇಳು ವರುಷದಿಂದ, ಎಂದರೆ ೧೯೫೯ ರಿಂದ ಬರೆಯುತ್ತಿದ್ದೇನೆ. ಈ ಅವಧಿಯಲ್ಲಿ ನನ್ನ ಬರವಣಿಗೆಯ ಯಾಕೆ, ಏನುಗಳನ್ನು ಹಲವು ಬಾರಿ ವಿಮರ್ಶಿಸಿಕೊಂಡಿದ್ದೇನೆ. ಬದಲಿಸಿಕೊಂಡಿದ್ದೇನೆ. ಎಷ್ಟೋ ಸಲ ನಾನು ಪ್ರಜ್ಞೆಯ ಮಟ್ಟದಲ್ಲಿ ಆಲೋಚಿಸಿದ್ದ ರೀತಿಯನ್ನು ಮೀರಿ ಕೃತಿಗಳು ಸ್ವರೂಪ ತಳೆದಿವೆ. ಅವುಗಳ ಹೊಸ ಬೆಳಕಿನಲ್ಲಿ ನನ್ನ ಬರವಣಿಗೆಯ ದಿಕ್ಕು ಯಾವುದು ಎಂಬುದನ್ನು ಪುನರ್ವಿಮರ್ಶಿಸಿಕೊಂಡಿರುವುದೂ ಉಂಟು. ಈ ಅರ್ಥದಲ್ಲಿ ನಾನೇಕೆ ಬರೆಯುತ್ತೇನೆ ಎಂಬ ಪ್ರಶ್ನೆಯ ಉತ್ತರವು ಸಮಗ್ರವಾಗಿ ನನಗೇ ಪೂರ್ತಿಯಾಗಿ ಅರಿವಿಗೆ ಬಂದಿಲ್ಲವೆಂದೂ ಹೇಳಬಹುದು. ನನ್ನ ಬರವಣಿಗೆಯ ಆರಂಭಬಿಂದುವಿನಿಂದ ಇದುವರೆಗೆ ಬದಲಾದ ಕೆಲವು ಮುಖ್ಯ ತಿರುವುಗಳನ್ನು ಸಮೀಕ್ಷಿಸಿ ಈಗ ಯಾವ ನಿಲುವಿಗೆ ಬಂದಿರುವೆನೆಂದು ಸೂಚಿಸುವ ಪ್ರಯತ್ನವನ್ನಷ್ಟೆ ಇಲ್ಲಿ ಮಾಡುತ್ತೇನೆ."
ಇಲ್ಲಿಯವರೆಗೆ ಬರೆದಿರುವ ಎಲ್ಲ ಕೃತಿಗಳನ್ನು ಬರೆಯುವ ಸಂದರ್ಭದಲ್ಲಿ ಯಾವ ರೀತಿಯಾದಂತಹ ಸವಾಲುಗಳು ಹಾಗೂ ಬರಹದ ತಿರುವುಗಳನ್ನು ಎದುರಿಸಬೇಕಾಗಿ ಬಂತು ಎಂಬುದನ್ನು ಈ ಕೃತಿಯಲ್ಲಿ ವಿವರವಾಗಿ ಚಿತ್ರಿಸಿದ್ದಾರೆ. ಸಮಾಜವನ್ನು ಸಾಹಿತ್ಯದ ಮೂಲಕ ತಿದ್ದುವೆನೆಂಬ ಮಹಾತ್ವಾಕಾಂಕ್ಷೆಯಿಂದ ಮೊಟ್ಟ ಮೊದಲ ಕೃತಿ ಧರ್ಮಶ್ರೀಯನ್ನು ಬರೆದರು. ಪ್ರಕಟಿಸಿದ ನಂತರ ಕಾದಂಬರಿಯನ್ನು ಓದಿ ಯಾರೂ ಬದಲಾಗಲಿಲ್ಲ. ಸಮಾಜ ತನ್ನ ಪಾಡಿಗೆ ತಾನು ಹೋಗುತ್ತಿದೆ ಎಂಬ ಭ್ರಮನಿರಸನವೂ ಅಷ್ಟರಲ್ಲಿ ಅವರಿಗೆ ಆಗಿತ್ತು. ನಂಬಿಕೆ ಆಚಾರ ವಿಚಾರಗಳ ಒಂದು ಯುಗವು ಕಳೆದು ಮತ್ತೊಂದು ಯುಗವು ಬರುವಾಗಿನ ಸ್ಥಿತ್ಯಂತರ ಕಾಲದಲ್ಲಿ ಬದುಕುವ ವ್ಯಕ್ತಿಗಳ ನೋವು, ಘರ್ಷಣೆ ಮೊದಲಾದವನ್ನು ಚಿತ್ರಿಸುವುದೇ ಸಾಹಿತ್ಯದ ಗುರಿಯಾಗಬೇಕು ಎನ್ನಿಸಿ 'ವಂಶವೃಕ್ಷ'ವನ್ನು ಬರೆದರು. ಸ್ಥಿತ್ಯಂತರ ಕಾಲದ ಯಾವ ಹೊರೆಯೂ ಇಲ್ಲದೆ ಸಮಕಾಲೀನ ಜೀವನದ ಒಂದು ಮುಖವನ್ನು ವಾಸ್ತವತೆಯ ಹದದಲ್ಲಿ ಹಿಡಿಯುವ ಪ್ರಯತ್ನವೇ 'ಮತದಾನ'. ಹೀಗೆ ಸಮಾಜದ ವಿವಿಧ ಸ್ಥರಗಳನ್ನು ನೇರವಾಗಿ ನೋಡಿ ಅದರ ನಾಡಿಯ ಮಿಡಿತವನ್ನು ಸಾಹಿತ್ಯದಲ್ಲಿ ಮೂಡಿಸುವುದೇ ಅವರ ಗುರಿಯಾಗಿತ್ತು.
ಕೃತಿಯಲ್ಲಿರುವ ವಿಚಾರ ಸಂಕಿರಣವೊಂದರ ಪ್ರಶ್ನೆಗೆ ಅವರ ಉತ್ತರ ಈ ರೀತಿಯಾಗಿರುತ್ತದೆ. ಪ್ರತಿಯೊಬ್ಬ ಲೇಖಕನ ಅನುಭವವೂ ಸೀಮಿತವಾದುದು. ನಮ್ಮ ದೇಶದಲ್ಲಿ ಜಾತಿ ಪಂಗಡಗಳು ನಮ್ಮ ಅನುಭವಕ್ಕೆ ಒಂದು ಮಿತಿಯನ್ನು ಹಾಕುತ್ತವೆ. ಜೊತೆಗೆ ನಮ್ಮ ಉದ್ಯೋಗ, ನಾವು ವಾಸಿಸುವ ಸ್ಥಳ, ಗ್ರಾಮ ನಗರ ಮೊದಲಾದ ಪರಿಸರ ಭೇದಗಳು, ಹೀಗೆ ಹಲವು ಮಿತಿಗಳಲ್ಲಿ ನಾವು ಬಾಳುತ್ತೇವೆ. ಪಶ್ಚಿಮದ ಲೇಖಕರ ಅನುಭವಕ್ಕೂ ಇಂಥ ಮಿತಿಗಳಿವೆ. ಈ ಮಿತವಾದ ಅನುಭವದಲ್ಲೂ ಹುದುಗಿರುವ ಸಂಕೇತ ಅಥವಾ ಧ್ವನಿಗಳನ್ನು ಹುಡುಕುವ ಮೂಲಕ ಮಾತ್ರ ಸಾಹಿತಿಯು ತನ್ನ ಮಿತಿಯಿಂದ ಮೇಲೆ ಏರಬಹುದು. ಜೀವನದ ಸಮಗ್ರತೆಯಲ್ಲಿ ಪಾಲ್ಗೊಳ್ಳುವ ದೃಷ್ಟಿಯಿಂದಲಾದರೂ ಲೇಖಕನು ಬಡತನ, ಅಜ್ಞಾನ,ದಲಿತತೆ ಮೊದಲಾದ ಇತರ ವರ್ಗ ಅಥವಾ ವಲಯಗಳಲ್ಲಿ ಬೆರೆತು ಅನುಭೂತಿಯನ್ನಾದರೂ ಪಡೆಯಬೇಕು. ಆಗ ಬರವಣಿಗೆಗೆ ಹೆಚ್ಚು ವೈಶಾಲ್ಯ ಬರುತ್ತದೆ. ವಿಶಾಲ ಜೀವನದೊಡನೆ ಸ್ಪಂದಿಸುವ ಗುಣ ಬರುತ್ತದೆ.
ಇಂತಹ ಹಲವಾರು ಲೇಖನಗಳು, ವಿಚಾರ ವಿಮರ್ಶೆಗಳು, ಸಾಹಿತ್ಯಿಕ ಮೌಲ್ಯಗಳ ಸಂಕಲಿತ ಕೃತಿಯೇ, "ನಾನೇಕೆ ಬರೆಯುತ್ತೇನೆ". ಪ್ರತಿಯೊಬ್ಬ ಬರಹಗಾರನಿಗೂ ಈ ಪ್ರಶ್ನೆ ಒಮ್ಮೆಯಾದರೂ ಮನದಲ್ಲಿ ಕಾಡುವಂತಾದ್ದು. ಕೃತಿಯನ್ನು ಓದಿದ ನಂತರ ನಾನೇಕೆ ಬರೆಯುತ್ತೇನೆ ಎಂಬ ಪ್ರಶ್ನಗೆ ಸ್ಪಷ್ಟ ಉತ್ತರ ಸಿಗಬಹುದು. ಹಾಗೂ ಉದಯೋನ್ಮುಖ ಬರಹಗಾರರಿಗೆ ಯಾವ ರೀತಿಯಾಗಿ ಬರೆಯಬೇಕು, ಬರವಣಿಗೆಯನ್ನು ಯಾವ ರೀತಿಯಾಗಿ ಉತ್ತಮಪಡಿಸಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ಸಿಗುವುದರಲ್ಲಿ ಸಂಶಯವಿಲ್ಲ. ಬರಹಗಾರರೆಲ್ಲರೂ ಒಮ್ಮೆಯಾದರೂ ಓದಲೇಬೇಕಾದಂತಹ ಉತ್ತಮ ಕೃತಿ. ಬರಹಗಾರನ ಬರಹದ ಪ್ರಮುಖ ಆದ್ಯತೆಯನ್ನು ಧ್ವನಿಸುತ್ತದೆ.