ಕೋಣೆಯೊಳಗೆ ಆನೆ

ಕೋಣೆಯೊಳಗೆ ಆನೆ

ಕೋಣೆಯೊಳಗೆ ಆನೆ. ಕಣ್ಣ ಮುಂದೆ ಧುತ್ತೆಂದು ಪ್ರತ್ಯಕ್ಷ ವಾಗಿದ್ದರೂ, ಅಥವಾ ಕಂಡೂ ಕಾಣದಂತೆ ಇದ್ದು ಅದರ ಉಪಸ್ಥಿತಿ ಕೋಣೆ ಯಲ್ಲಿ ಇಲ್ಲ ಎನ್ನುವ ಭ್ರಮೆಯನ್ನು ಪ್ರದರ್ಶಿಸುವುದಕ್ಕೆ, ಆಂಗ್ಲ ಭಾಷೆಯಲ್ಲಿ elephant in the room ಎನ್ನುತ್ತಾರೆ. ಏಕೆಂದರೆ ಕೋಣೆಯೊಳಗೆ ಅಕಸ್ಮಾತ್ ಆನೆಯೊಂದಿದ್ದರೆ ಅದನ್ನು ನಮ್ಮ ಕಣ್ಣಿಗೆ ಕಾಣದಂತೆ ವರ್ತಿಸುವುದು ಅಸಾಧ್ಯ. ಆನೆಯ ಗಾತ್ರ ಅಂಥದ್ದು ನೋಡಿ.

'ವಿಕಿ' ಯಲ್ಲಿ ಸಿಕ್ಕ ಮಾಹಿತಿಯಂತೆ 'ಆಕ್ಸ್ ಫರ್ಡ್' ಆಂಗ್ಲ ನಿಘಂಟಿನ ಪ್ರಕಾರ 'ಕೋಣೆಯೊಳಗೆ ಆನೆ' ಗಾದೆಯನ್ನು ಪ್ರಪ್ರಥಮವಾಗಿ ಉಪಯೋಗಿಸಿದ್ದು ೧೯೫೯ ರಲ್ಲಿ new york times ಅಂಕಣದಲ್ಲಿ. ಶಾಲೆಗಳಿಗೆ ಧನಸಹಾಯ ದ ಬಗೆಗಿನ ಚರ್ಚೆಯಲ್ಲಿ ' ಈ ಸಮಸ್ಯೆ ಕೋಣೆಯೊಳಗಿನ ಆನೆಯ ಥರ, ಇದು ಎಷ್ಟು ದೊಡ್ಡದು ಎಂದರೆ ನಿಮ್ಮಿಂದ ಇದನ್ನ ನಿರ್ಲಕ್ಷಿಸಲು ಸಾಧ್ಯವಿಲ್ಲ" ಎನ್ನುವ ಮಾತನ್ನು ಉಪಯೋಗಿಸಲಾಯಿತು. ಇನ್ನು ನಮ್ಮ ಕನ್ನಡದಲ್ಲಿ ಇದಕ್ಕೆ ಪರ್ಯಾಯವಾಗಿ ಜಾಣ ಕುರುಡು ಎನ್ನುತ್ತಾರೆ. ಆದರೆ ಜಾಣ ಕುರುಡು ಎನ್ನುವ ಮಾತು 'ಎಲಿಫಂಟ್ ಇನ್ ದ ರೂಂ' ನಷ್ಟು ಪರಿಣಾಮಕಾರಿಯಲ್ಲ. ನಮಗೆ ಆನೆಯ ಉಪಮೆಯೇ ಮೇಲು. ಚಿಕ್ಕ ಪುಟ್ಟ, ದೊಡ್ಡ ವಿವಾದ ಎಬ್ಬಿಸದ ವಿಷಯದ ಬಗ್ಗೆ ಜಾಣ ಕುರುಡನ್ನು ಪ್ರದರ್ಶಿಸಿ, ಹೆ..ಹೆ ಎಂದು ಹಲ್ಲು ಕಿರಿದು ತಪ್ಪಿಸಿ ಕೊಳ್ಳಬಹುದು. ಸಾಕ್ಷಾತ್ ಆನೆಯೇ ಕೋಣೆಯೊಳಗೆ ವಕ್ಕರಿಸಿ ಕೊಂಡಾಗ ಚರ್ಮ ಉಳಿಸಿ ಕೊಳ್ಳುವುದು ಸ್ವಲ್ಪ ಕಷ್ಟದ ಪಾಡೇ ಸರಿ.

ಭಾಷೆ ಮತ್ತು ಅದು ಒಳಗೊಳ್ಳುವ ಗಾದೆ ಉಪಯೋಗ ಪ್ರಸಕ್ತ ಪರಿಸ್ಥಿಗೆ, ಬೆಳವಣಿಗೆಗೆ ಅಳವಡಿಸಿದಾಗ ಅದರ ಪರಿಣಾಮ ಮನ ಮುಟ್ಟುವಂತಿರುತ್ತದೆ. ವಿಚಾರವನ್ನು ಸಲೀಸಾಗಿ ಗ್ರಹಿಸಲೂ ಸಾಧ್ಯವಾಗುತ್ತದೆ. ಮಾತುಗಳಲ್ಲಿ ಗಾದೆಯನ್ನು ಒಳಪಡಿಸಿ ಕೊಂಡು ಮಾತನ್ನಾಡುವ ರಾಜಕಾರಣಿ, ಜನರನ್ನು ಮಂತ್ರ ಮುಗ್ಧ ಗೊಳಿಸಲು ಸಮರ್ಥನಾದಾಗ ಅವನು 'ಒರೇಟರ್' ಎನಿಸಿ ಕೊಳ್ಳುತ್ತಾನೆ, ತನ್ನ ರಾಜಕೀಯ ಅಥವಾ ವೈಚಾರಿಕ ಧಂಧೆಯಲ್ಲಿ ಯಶಸ್ಸು ಕಾಣುತ್ತಾನೆ.

ಈಗ ಬನ್ನಿ, ಭಾಷೆಯ 'ಬಾಳೆಲೆ' ಯಿಂದ ರಾಜಕೀಯದ ಬಾಣಲೆಗೆ. ಪ್ರವಾಸಿಗರ ಅಚ್ಚುಮೆಚ್ಚಿನ ನಗರ ರಾಜಸ್ಥಾನದ ಜೈಪುರದಲ್ಲಿ ನಮ್ಮನ್ನಾಳು ತ್ತಿರುವ ಕಾಂಗ್ರೆಸ್ ಪಕ್ಷದ "ಚಿಂತನ್ ಶಿವಿರ್" ( ಚಿಂತನ ಶಿಬಿರ) ಸಮಾವೇಶ. ಇಲ್ಲಿ ಕಾಂಗ್ರೆಸ್ ನ ಯುವರಾಜ ಎಂದು ಗುರುತಿಸಲ್ಪಡುತ್ತಿರುವ ರಾಹುಲ್ ಗಾಂಧಿ ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾಯಿತರಾದರು. ನೆಹರೂ ಕುಟುಂಬದವರ ಕೈಯ್ಯಲ್ಲೇ ತಾನೇ ಕಾಂಗ್ರೆಸ್ ಇರೋದು. ಇದು ಬಹಿರಂಗ ಗುಟ್ಟು. ಪ್ರಶ್ನಿಸಿದರೆ, ಜನರೇ ಇದಕ್ಕೆ ಕ್ಯಾತೆ ತೆಗೆಯದೆ ತೆಪ್ಪಗಿರುವಾಗ ನೀವ್ಯಾರು ಪ್ರಶ್ನಿಸಲು ಎಂದು ಕಾಂಗ್ರೆಸ್ಸಿಗರ ಎದಿರೇಟು. ಸರಿ ರಾಹುಲ್ ಚುನಾಯಿತ ರಾದರು, ಮುಂದಿನ ಮಹಾ ಚುನಾವಣೆಯಲ್ಲಿ ಪಕ್ಷವನ್ನ ಮುನ್ನಡೆಸಲು. ಆದರೆ ಪ್ರಜಾಪ್ರಭುತ್ವದಲ್ಲಿ ವಂಶ ಪರಂಪರೆ ಬಗ್ಗೆ ದೇಶದ ಅತಿ ದೊಡ್ಡ ವಿರೋಧ ಪಕ್ಷ ಭಾಜಪ ತಕರಾರು ತೆಗೆಯುತ್ತಾ ನೇತಾರ ಅರುಣ್ ಜೆತ್ಲೀ ದೇಶವನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳಿಗೆ ಕಾಂಗ್ರೆಸ್ ಪಕ್ಷದಲ್ಲ್ಲಿ ಇರುವ ಉತ್ತರ ಎಂದರೆ ವಂಶಪರಂಪರೆಯನ್ನು ಪ್ರಜಾಪ್ರಭುತ್ವದ ಮೇಲೆ ಹೇರುವುದು ಮಾತ್ರ ಎಂದು ಟೀಕೆ ಮಾಡಿದರು. 'ಚಿಂತನ ಶಿಬಿರ' ನಮ್ಮ ದೇಶಕ್ಕೆ 'ಚಿಂತಾಜನಕ' ರಾಜಕಾರಣದ ಮುಂದುವರಿಕೆಗೆ ಎಡೆ ಮಾಡೀತೆಂದು ಪಂಡಿತರ ಅಳಲು. ಭಾಜಪ ದಿಂದ ಈ ಕಟು ಟೀಕೆ ಯನ್ನು ಕಾಂಗ್ರೆಸ್ಸಿಗರು ಖಂಡಿತ ನಿರೀಕ್ಷಿಸಿಯೇ ಇರುತ್ತಾರೆ. ಸ್ವತಂತ್ರ ಭಾರತದ ಬಹುಪಾಲು ಅವಧಿ ಇವರ ಆಳ್ವಿಕೆಯನ್ನೇ ತಾನೇ ದೇಶ ಕಂಡಿರೋದು. ಎಲ್ಲಾ ತಂತ್ರ ಕುತಂತ್ರಗಳ ವರಸೆಯೇ ಇವರಲ್ಲಿ ಇರುತ್ತದೆ. ರಾಹುಲ್ ರನ್ನು ಪಟ್ಟಾಭಿಷೇಕ ಮಾಡಿ ಭಾಜಪದ ತಕರಾರಿಗೆ ತನ್ನದೇ ಆದ ಮದ್ದನ್ನು ಅರೆಯಿತು ಕಾಂಗ್ರೆಸ್. ಅದೆಂದರೆ ನಮ್ಮ ದೇಶದಲ್ಲಿ ಭಾಜಪ-ಆರೆಸ್ಸೆಸ್ ನೇತೃತ್ವದಲ್ಲಿ ದೇಶವನ್ನು ಅಸ್ಥಿರಗೊಳಿಸಲು ಹಿಂದೂ ಭಯೋತ್ಪಾದನಾ ಕ್ಯಾಂಪ್ ಗಳು ಕೆಲಸ ಮಾಡುತ್ತಿವೆ ಎಂದು. ದೇಶದ ಭದ್ರತೆಯ ಜವಾಬ್ದಾರಿ ಹೊತ್ತ ಗೃಹ ಮಂತ್ರಿಗಳ ಬಾಯಿಂದ ಬಿತ್ತು ಸಿಡಿಲಿನಂಥ ಮಾತು. ಆದರೆ ಇಂಥ ಮಾತುಗಳು ಆಗಾಗ ಕೇಳಿ ಬರುತ್ತಾ ಇರುವುದು ನಾವು ಓದಿದ್ದೇವೆ. ಕಾಂಗ್ರೆಸ್ ನ ದಿಗ್ವಿಜಯ ಸಿಂಗ್ ರಿಂದ ಹಿಡಿದು ಮಾಜಿ ಗೃಹ ಮಂತ್ರಿ ಚಿದಂಬರಂವರೆಗೆ ಎಲ್ಲರೂ ಈ ಕುರಿತು ಹೇಳಿಕೆ ನೀಡಿದ್ದಾರೆ. ದೇಶದ ಹಲವೆಡೆ ಬಾಂಬ್ ಸ್ಫೋಟಗಳು ನಡೆದು ಅದರ ಹಿಂದಿನ ಕೈವಾಡವನ್ನು ಬಹಿರಂಗಗೊಳಿಸಿದ ಪೊಲೀಸ್ ಅಧಿಕಾರಿ ಹುತಾತ್ಮ ಹೇಮಂತ್ ಕರ್ಕರೆ ದೇಶವಾಸಿಗಳ ಹುಬ್ಬೇರುವಂತೆ ಮಾಡಿದ್ದರು. ಹೇಮಂತ್ ಕರ್ಕರೆ ನೇತೃತ್ವದಲ್ಲಿ ನಡೆದ ವಿಚಾರಣೆ ಹಲವು ಜನರ ಬಂಧನಕ್ಕೂ ಕಾರಣವಾಯಿತು. ವಿಚಾರಣೆಯಲ್ಲಿ ಕಹಿ ಸತ್ಯ ಸಹ ಹೊರ ಬಂದಿತು. ಆದರೆ ಭಾಜಪದ ಲಾಲ್ ಕೃಷ್ಣಾ ಅಡ್ವಾಣಿ ಯಾಗಲೀ ಪಕ್ಷದ ಬೇರಾವುದೇ ನಾಯಕರಾಗಲೀ ಈ ವಿಚಾರಣೆಯನ್ನು ಕಾಂಗ್ರೆಸ್ ಪ್ರೇರಿತ ಎಂದು ಟೀಕಿಸಿದ ರೇ ಹೊರತು ಆತ್ಮಾವಲೋಕನ ಮಾಡಿಕೊಳ್ಳುವ ಗೊಡವೆಗೆ ಹೋಗಲಿಲ್ಲ. ದೇಶದ ಅತೀ ಜವಾಬ್ದಾರೀ ಹುದ್ದೆಗಳಲ್ಲಿ ಇರುವ ಗೃಹ ಮಂತ್ರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು, ಇವರು ನಡೆಸಿದ ವಿಚಾರಣೆಗಳು ಮತ್ತು ಬಂಧಿತರು ನೀಡಿದ ಹೇಳಿಕೆಗಳು, ಇವೆಲ್ಲವೂ ಸುಳ್ಳಿನ ಸರಮಾಲೆಯಾಗಲು ಸಾಧ್ಯವೇ? ಎಂದು ಪ್ರಶ್ನಿಸಿ ಕೊಳ್ಳಲಿಲ್ಲ.

ಭಯೋತ್ಪಾದನೆಗೆ ಧರ್ಮದ ಲೇಪ ಬೇಡ ಎಂದು ಎಲ್ಲಾ ಪ್ರಜ್ಞಾವಂತರ ಅಭಿಪ್ರಾಯ. ಇಸ್ಲಾಮಿ ಭಯೋತ್ಪಾದನೆ, ಹಿಂದೂ ಭಯೋತ್ಪಾದನೆ ಎಂದು ಕೃತ್ಯ ಎಸಗಿದವರ ಧರ್ಮ ವನ್ನು ಸೇರಿಸಿ ವರ್ಣಿಸುವ ಅಗತ್ಯ ಇಲ್ಲ. ಯಾವ ಧರ್ಮವೂ ಹೊಡೀ, ಬಡೀ, ಕಡೀ ಎಂದು ಹೇಳಿ ಕೊಡುವುದಿಲ್ಲ. ಮುಸ್ಲಿಮರು ನಡೆಸಿದ ಹಿಂಸೆಯ ವಿರುದ್ಧ ಮುಸ್ಲಿಂ ವಿಧ್ವಾಂಸರು ಬಹಿರಂಗ ಹೇಳಿಕೆ ಕೊಟ್ಟಿದ್ದಾರೆ. ಸಮುದಾಯವನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಭಯೋತ್ಪಾದನೆ ಪರಿಹಾರವಲ್ಲ ಎನ್ನುವ ಕಿವಿ ಮಾತನ್ನೂ ಹೇಳಿದ್ದಾರೆ. ಈ ನಿಲುವು ಸ್ವಾಗತಾರ್ಹ. ಆದರೆ ಭಾಜಪ ಮತ್ತು ಅದನ್ನು ಬೆಂಬಲಿಸುವ ಸಂಘಟನೆಗಳು ಕೋಣೆಯೊಳಗಿರುವ ಆನೆಯ ರೀತಿ ಕುರುಡು ಭಾವವನ್ನು ತಳೆಯುವುದು ತರವಲ್ಲ. ಆನೆಯ ಇರುವು ಬಹಿರಂಗವಾಗಿದೆ. ಅದರ ಬಗ್ಗೆ ಮಾಡಬೇಕಾದ, ತಳೆಯಬೇಕಾದ ನಿಲುವಿನ ಬಗ್ಗೆ ಪಕ್ಷ ಗಂಭೀರವಾಗಿ ಯೋಚಿಸಿ ಕ್ರಮ ತೆಗೆದುಕೊಳ್ಳಬೇಕು. ನಿರಾಕಾರಣಾ ಮನೋಭಾವದಿಂದ ಯಾರಿಗೂ ಲಾಭವಾಗದು.

ಬದಲಾಗುತ್ತಿರುವ ವಿಶ್ವ ರಾಜಕಾರಣದಲ್ಲಿ ಭಾರತದ ಪಾತ್ರ ಹಿರಿದು. ಪ್ರಜಾಪ್ರಭುತ್ವ, ಜಾತ್ಯಾತೀತ ಮೌಲ್ಯಗಳು ನಮ್ಮ ರಾಜಕಾರಣದಲ್ಲಿ ಪ್ರತಿಫಲಿಸಬೇಕು. ಅಸಹನೆ, ಮತಾಂಧತೆಯ ಸುಳಿಯಲ್ಲಿ ಸಿಕ್ಕ ದೇಶಗಳ ಅವಸ್ಥೆಯಲ್ಲಿ ನಮಗೂ ಪಾಠವೊಂದಿದೆ ಎನ್ನುವುದನ್ನು ಮನಗಾಣಬೇಕು.

Comments

Submitted by kavinagaraj Thu, 01/24/2013 - 10:31

ದೇಶದ ಗೃಹಮಂತ್ರಿಗಳು ಹೇಳಿಕೆ ನೀಡಿ ಸುಮ್ಮನಾಗಬಾರದು. ಅವರ ಸ್ಥಾನಕ್ಕೆ ಅದು ತಕ್ಕದ್ದಲ್ಲ. ಅವರ ಬಳಿ ಸಾಕ್ಷ್ಯವಿದ್ದರೆ ಕ್ರಮ ತೆಗೆದುಕೊಳ್ಳಲೇಬೇಕು. ಅವರೇ ಕ್ರಮ ತೆಗೆದುಕೊಳ್ಳದಿದ್ದರೆ ಇನ್ನು ಯಾರು ತೆಗೆದುಕೊಳ್ಳಬೇಕು? ಒಂದೋ ಅವರು ಕ್ರಮ ತೆಗೆದುಕೊಳ್ಳಬೇಕು ಅಥವ ಸುಳ್ಳು ಹೇಳಿದ್ದರೆ ಕ್ಷಮೆ ಯಾಚಿಸಬೇಕು. ದೇಶಹಿತ ಪ್ರಧಾನ!