" ಸಿನೆಮಾ " (ಕಥೆ) --- ಅಂತಿಮ ಭಾಗ

" ಸಿನೆಮಾ " (ಕಥೆ) --- ಅಂತಿಮ ಭಾಗ

   ಕಾರಿನಿಂದಿಳಿದ ಮಾದೇವ ಒಮ್ಮೆ ಸುತ್ತಲೂ ಕಣ್ಣಾಡಿಸಿದ. . ತನ್ನ ಬಾಲ್ಯದ ದಿನಗಳಲ್ಲಿ ಕಂಡ ದಟ್ಟ ಮರ ಗಿಡಗಳು ಕವಳೆ ಪರಗಿ ಇತ್ಯಾದಿ ಕಾಡಿನ ಹಣ್ಣುಗಳ ಫೌಳಿಗಳ ನಾಮಾವಶೇಷವಾಗಿತ್ತು. ಅವುಗಳ ಜಾಗವನ್ನು ನೀಲಗಿರಿ ಪ್ಲಾಂಟೇಶನ್ನು ಆವರಿಸಿಕೊಂಡಿತ್ತು. ಬ್ರಿಟೀಷರ ಕಾಲದಲ್ಲಿ ಹಾಕಿದ್ದ ಬೇಲಿ ತನ್ನ ಗತ ದಿನಮಾನಗಳನ್ನು ನೆನಪಿಸಿ ಕೊಂಡು ನಿಂತಂತ್ತಿತ್ತು. ಸ್ವಲ್ಪ ದೂರ ಸಾಗುವಷ್ಟರಲ್ಲಿ ದೊಡ್ಡದಾದ ಸ್ವಾಗತ ಕಮಾನು ಅವರನ್ನು ಸ್ವಾಗತಿಸಿತು. ಅದನ್ನು ದಾಟಿ ಒಳಗೆ ಹೋದರೆ ಏನಿದೆ ಅಲ್ಲ್ಲಿ..? ಅಲ್ಲಿ ಒಂದು ದಟ್ಟವಾದ ಕಾಡು ಇತ್ತು ಎನ್ನುವುದಕ್ಕೆ ಒಂದೂ ಕುರುಹೂ ಇರಲಿಲ್ಲ. ಎಲ್ಲ ಹಕ್ಕಲು ಜಮೀನಾಗಿ ಪರಿವರ್ತನೆ ಹೊಂದಿತ್ತು. ಒಂದು ಏರು ಜಾಗದಲ್ಲಿ ಅಗಸ್ತೇಶ್ವರ ಗುಡಿ ನೀರಸ ಪರಿಸರದ ಮಧ್ಯೆ ಹಾಳು ದೇಗುಲವೊಂದು ನಿಂತಂತೆ ಇತ್ತು. ಸರ್ವಋತುಗಳಲ್ಲಿಯೂ ಹರಿಯುತ್ತಿದ್ದ ನೀರಿನ ತೊರೆಗಳು ಈಗ ಅಲ್ಲಿಲ್ಲ. ಆ ಜಾಗಗಳಲ್ಲಿ ಕೊಳಕು ನೀರು ಮಾತ್ರ ನಿಂತುಕೊಂಡಿದೆ. ನಮ್ಮ ಬಾಲ್ಯದ ದಿನಗಳಲ್ಲಿ ಬಿರು ಬೇಸಿಗೆಯ ಮೇ ತಿಂಗಳಲ್ಲಿಯೂ ಸಹ ನೀರು ಸಣ್ಣಗೆ ಹರಿಯುತ್ತಿತ್ತು. ಆ ತೊರೆಗಳ ಮೂಲ ದೂರದ ಕಾಶಿಯೆಂದು ಪ್ರತೀತಿ ಇತ್ತು. ಆ ನೀರಿನ ಮೂಲ ಭೂಮಿಯ ಒಳ ಭಾಗದಲ್ಲಿ ಹರಿದು ಬರುವ ದಾರಿ ಯೋಚಿಸಿಯೆ ನಮಗೆ ತಲೆ ಕೆಡುತ್ತಿತು. ತಣ್ಣನೆಯ ನೀರು ಕುಡಿದರಾಯಿತು ಅದು ಹರಿದು ಬರುವ ದಾರಿಯ ಕುರಿತು ನಮಗೇಕೆ ಯೋಚನೆ..! ಎನ್ನುವುದು ನಮ್ಮ ಆಲೋಚನಾ ಸರಣಿ ಯಾಗಿರುತ್ತಿತ್ತು.

     ಮುಂದೆ ಸಾಗಿ ನೋಡಿದರೆ ಸಿಹಿ ನೀರಿನ ಕೆರೆ ಸಹ ತನ್ನ ಅಸ್ತಿತ್ವ ಕಳೆದು ಕೊಂಡಿದೆ ಎನ್ನಬೇಕು. ಅದರ ಸುತ್ತಲೂ ಇದ್ದ ವಿಶಾಲ ದರ್ಬೆ ಹುಲ್ಲಿನ ತಾಣಗಳು ಈಗ ಇಲ್ಲ. ನೀರು ಕೆಳ ಭಾಗದಲ್ಲಿ ಸ್ವಲ್ಪ ಪ್ರಮಾಣದಲ್ಲಿದ್ದು ಕೊಚ್ಚೆಯಾಗಿದೆ. ಹಾಗೆಯೆ ಮುಂದೆ ನೋಡಿದ ಮಾದೇವನಿಗೆ ಮಾತನಾಡುತ್ತ ಸಾಗುತ್ತಿದ್ದ ದೀಪಕ, ಸದಾಶಿವ ಮತ್ತು ಪುಟ್ಟಣ್ಣಯ್ಯ ಕಾಣಸಿಕ್ಕರು. ಅವರನ್ನನುಸರಿಸಿ ಹಾಗೆಯೆ ಮುಂದೆ ಸಾಗಿದ ಅತನಿಗೆ ಪಕ್ಕದಲ್ಲಿ ಕೊಳಚೆ ಹೊಂಡದ ಒಂದು ಬದಿ ಕಳ್ಳಿಯ ಜಾತಿಗೆ ಸೇರಿದ ನಾಲ್ಕೈದು ಮೆಳೆಗಳು ಮತ್ರ ಇದ್ದವು. ಅಲ್ಲಿ ವಿಸ್ತಾರವಾದ ಪ್ರದೇಶ ದಲ್ಲಿ ಸಾವಿರಾರು ಕೇದಿಗೆಯ ಫಳಿಗಳು ಇದ್ದುದನ್ನು ನೋಡಿದ್ದ ಮಾದೇವ.

     ' ಸದಾಶಿವ ಇಲ್ಲಿ ಕೇದಿಗೆಯ ಬನ ಇತ್ತಲ್ಲ ?' ಎಂದು ಪ್ರಶ್ನಿಸಿದ.

     ' ಈಗ ಅಲ್ಲಿ ನಿನ್ನೆದುರು ನಿಂತಿರುವ ನಾಲ್ಕೈದು ಮೆಳೆಗಳಿರುವ ಪ್ರದೇಶವೆ ಈಗಿರುವ ಕೇದಿಗೆಯ ಬನ ' ಎಂದು ನಿರ್ವಿಕಾರವಾಗಿ ಉತ್ತರಿಸಿದ. ಈ ವರ್ತನೆ ಮಾದೇವನನ್ನು ಯೋಚನೆಗೆ ಹಚ್ಚಿತು. ಕಣ್ಣೆದುರು ಇದ್ದದ್ದು ಇಲ್ಲವಾಗುವ  ಸ್ಥಿತಿ ಇವನನ್ನು ಕಾಡುವುದಿಲ್ಲವೆ ಎನಿಸಿತು. ಹಿಂದಿದ್ದ ವಿಸ್ತಾರ ನಾಗರಬನ ಅಲ್ಲೆಲ್ಲ ಹುಣ್ಣಿಮೆಯ ರಾತ್ರಿಗಳಲ್ಲಿ ನಾಗ ಕನ್ನಿಕೆಯರು ಮನುಷ್ಯ ರೂಪದಲ್ಲಿ ಬಂದು ಹಾಡಿ ನರ್ತಿಸುತ್ತಾರೆ ಜಲಕ್ರೀಡೆಯಾಡುತ್ತಾರೆ ಎಂಬ ಕಥೆಗಳು, ಅವು ಗಳನ್ನು ನಂಬುತ್ತಿದ್ದ ನಮ್ಮಂಥ ಎಳೆಯರು, ನಮಗೆ ಒಮ್ಮೆಯಾದರೂ ಅವರು ಕಾಣಬಹುದೆ ಎಂಬ ಕುತೂಹಲ.!. ಬಾಲ್ಯದ ನೆನಪುಗಳು ಎಷ್ಟು ರೋಚಕ ಅಲ್ಲವೆ ಎಂದು ತನ್ನೊಳಗೆ ತಾನು ಅಂದು ಕೊಳ್ಳುತ್ತ ಮಾದೇವ ಮುನ್ನಡೆದ.

     ಅಲ್ಲಿಂದ ಮುಂದೆ ಸಾಗಿದಂತೆ ಸದಾಶಿವ ' ಅಲ್ಲೆ ತೆಳಗ ನೋಡು ಅದು ಯಾ ಜಗ ನೆನಪಾತನು ' ಎಂದ. ಮಾದೇವ ಊಹ್ಞೂಂ ಎಂದೆ ತಲೆಯಾಡಿಸಿದ.

     ' ಅದು ನೀನು 1961 ನೇ ಇಸ್ವಿಯೊಳಗ ಎರಡು ಹುಲಿ ಮರಿ ನೋಡಿ ಓಡಿ ಬಂದಿದ್ದೆಲ್ಲ ಆ ಜಾಗ ಅದು ' ಎಂದ. ಎಲ್ಲಿ ದಟ್ಟವಾದ ಮರ, ಗಿಡ, ಪೊದೆ ಕಂಟಿಗಳಿಂದ ಆವೃತವಾಗಿದ್ದ ಸೂರ್ಯಕಿರಣಗಳೆ ಪ್ರವೇಶಿಸಲು ಭಯ ಪಡುತ್ತಿದ್ದ ಆ ಕಾನನದ ಜಿಗ್ಗು ಈಗ ವಿಶಾಲ ಭತ್ತದ ಗದ್ದೆಗಳಿಂದ ಕೂಡಿದೆ. ಆ ಬೃಹತ್ತ ಕಾಡಿನ ಅಸ್ತಿತ್ವ ಬರಿ ನೆನಪಿನ ಕೋಶಗಳಲ್ಲಿ ಮಾತ್ರ ಇದೆ. ಬರಿ ಐವತ್ತು ವರ್ಷಗಳಲ್ಲಿ ಏನೆಲ್ಲ ಬದಲಾವಣೆ, ಕೋಟ್ಯಾಂತರ ವರ್ಷಗಳ ಹಿಂದೆ ಸೃಷ್ಟಿ ಕ್ರಿಯೆಯಲ್ಲಿ ಹುಟ್ಟಿ ನಿಂತ ಕಾಡು ಐವತ್ತು ವರ್ಷಗಳಲ್ಲಿ ವಿನಾಶ. ಈ ಪರಸರದ ಹಾನಿ ಯಾರಿಗೂ ಕಾಣುತ್ತಿಲ್ಲವೆ ಎಂದು ಯೋಚಿಸುತ್ತ ಸಾಗಿದ ಮಾದೇವ, ಸದಾಶಿವ ಮತ್ತು ಉಳಿದವರ ಜೊತೆ ಕಾರ್ಯಕ್ರಮ ನಡೆಯಲಿದ್ದ ಅಗಸ್ತ್ಯ ತಪೋವನದ ಗಾಯತ್ರಿ ಸಭಾ ಭವನದ ಮುಂದೆ ನಿಂತಿದ್ದ.

     ರಸ್ತೆಯಿಂದ ಸಭಾ ಭವನದ ವರೆಗೆ ತಳಿರು ತೋರಣಗಳ ಶೃಂಗಾರ. ಅಲ್ಲಲ್ಲಿ ಬೃಹತ್ತ ಗಾತ್ರದಲ್ಲಿ ತಲೆಎತ್ತಿ ನಿಂತಿದ್ದ ಮಂತ್ರಿ ಮಹೋದಯರ ಕಟೌಟ್ಗಳು, ಜಿಲ್ಲಾ ಮತ್ತು ತಾಲೂಕು ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ, ಹಾಗೂ ದಾನಿಗಳು ಕಾರ್ಯಕ್ರಮಕ್ಕೆ ಶುಭ ಕೋರುವವವರ ದೊಡ್ಡ ದೊಡ್ಡ ಪೋಸ್ಟರುಗಳು. ಇವರಗಳನೆಲ್ಲ ತಮ್ಮ ಬೆರಗುಗಣ್ಣುಗಳಿಂದ ನೋಡುತ್ತ ನಿಂತ ಸಣ್ಣ ಸಣ್ಣ ಶಾಲಾ ಬಾಲಕ ಬಾಲಕಿಯರು, ಸಭಾ ಭವನದ ಎದುರಿನಲ್ಲಿ ನಿಂತಿದ್ದ ಕಾರ್ಯಕ್ರಮದ ಆಯೋಜಕರು ಇವರಿಗೆ ವಂದಿಸಿ ಅವರಿಗಾಗಿ ನಿಗದಿ ಪಡಿಸಿದ ಸ್ಥಳಗಳಲ್ಲಿ ಒಯ್ದು ಕೂಡ್ರಿಸಿದರು. ಆಗಲೆ ಡೊಳ್ಳು ಕುಣಿತ, ವೀರಗಾಸೆ, ಕೋಲಾಟಗಳ ತಂಡಗಳು ತಮ್ಮ ಕಲೆಯನ್ನು ಸಂಭ್ರಮದಿಂದ ಪ್ರದರ್ಶಿಸುತ್ತ ಬಹು ಉದ್ದದ ದಾರಿಯನ್ನು ಕ್ರಮಿಸಿ ಸ್ವಾಗತ ಕಮಾನಿನ ಬಳಿ ನಿಂತು ಜನರ ಗಮನ ಸೆಳೆದಿದ್ದರು. ಜಿಲ್ಲಾ ಉಸ್ತುವಾರಿ ಮಂತ್ರಿ, ಶಾಸಕರು ಪರಿಷತ್ ಸದಸ್ಯರು ನಿಗಮ ಮಂಡಳಿಗಳ ಅಧ್ಯಕ್ಷರು ಅಲ್ಲದೆ ಹಿರಿ ಕಿರಿ ಮರಿ ಪುಡಾರಿಗಳ ಶುಭ್ರ ವಸನಗಳ ಧರಿಸಿ ಮಿಂಚುತ್ತಿದ್ದರು. ದುರ್ಗಾಪುರದ ವಿರಕ್ತ ಮಠದ ಸೋಮಶೇಖರ ಮಹಾಸ್ವಾಮಿಗಳು ವೇದಿಕೆಯಲ್ಲಿ ಎತ್ತರದ ಜಗುಲಿಯ ಮೇಲೆ ನಿರ್ಮಿಸಿದ ಸಿಂಹಾಸನ ರೂಪದ ಪೀಠವನ್ನಲಂಕರಿಸಿದ್ದರು. ಸಭಾ ಮಂಟಪ ಪ್ರವೇಶಿಸಿದ ಉಸ್ತುವಾರಿ ಮಂತ್ರಿಗಳು ಮಹಾಸ್ವಾಮಿಗಳ ಪಾದಕ್ಕೆ ಅಡ್ಡ ಬೀಳುತ್ತಿದ್ದಂತೆ ಎಲ್ಲ ಪುಡಾರಿಗಳು ಆ ಕ್ರಮ ಅನುಸರಿಸಿದರು. ಕೆಮರಾ ಮತ್ತೂ ವೀಡಿಯೋಗಳಿಗೆ ವಿಧ ವಿಧದ ಭಾವ ಭಂಗಿಗಳನ್ನು ನೀಡಿದರು.

     ನಾಡಗೀತೆ, ಸ್ವಾಗತಗೀತೆ, ಅತಿಥಿಗಳ ಪರಿಚಯ ಕಾರ್ಯಕ್ರಮದ ಪ್ರಸ್ತಾವನೆ ಹಾವಳಿ, ನಂತರ ಗಣ್ಯರ ಸಮ್ಮುಖದಲ್ಲಿ ಜ್ಯೋತಿ ಬೆಳಗುವ ಕಾರ್ಯಕ್ರಮ ನಡೆದು, ಆ ಒಡ್ಡೋಲಗದ ಗಣ್ಯಾತಿ ಗಣ್ಯರ ಪ್ರವಾಹ ರೂಪದ ಭಾಷಣಗಳ ಸುರಿಮಳೆಯ ನಂತರ ಸಮಾರಂಭದ ಕೇಂದ್ರಬಿಂದು ಸ್ಥಳೀಯ ಗಣ್ಯ ಸಾಹಿತಿಗಳ ಭಾಷಣ ಮುಗಿದಾಗ ಮಧ್ಯಾನ್ಹ ಎರಡು ಗಂಟೆ. ಊಟದ ನಂತರ ಮತ್ತೆ ಸರಿಯಾಗಿ ಮಧ್ಯಾನ್ಹ ಮೂರು ಗಂಟೆಗೆ ವೇದಿಕೆ ಕಾರ್ಯಕ್ರಮ ಪ್ರಾರಂಭವಾಯಿತು. ಮಂತ್ರಿ ಮಹೋದಯರ ಜೊತೆ ಅವರ ಒಡ್ಡೋಲಗದ ಸದಸ್ಯರೂ ಸ್ಥಳದಿಂದ ಕಾಲ್ಕಿತ್ತಿದ್ದರು.

     ಅಂದಿನ ಗಣ್ಯ ಅತಿಥಿ ಸಮಾರಂಭದ ಅಧ್ಯಕ್ಷರಾಗಿ ಸ್ಥಳೀಯ ಶಿವಯ್ಯನವರು ಆಸೀನರಾಗಿದ್ದರು. ನಿರೂಪಕ ಮಾದೇವ ಅವರ ಹೆಸರನ್ನು ಕೂಗಿ ಕರೆದ, ಮಾದೇವ ಹೋಗಿ ವೇದಿಕೆ ಏರಿದ. ಆತನ ಪರಿಚಯಮಾಡಿ ಹೊಗಳಿ ದರು. ನಂತರ ಆ ದಿನದ ಕಾವ್ಯ ಗೋಷ್ಟಿಯ ಕವಿಗಳನ್ನು ಕರೆದರು. ಎಲ್ಲರೂ ಬಂದು ಆಸೀನರಾದರು, ಅವರನ್ನು ಅವಲೋಕಿಸಿದರೆ ಅಲ್ಲಿದ್ದ ಇಪ್ಪತ್ತು ಜನರ ಪೈಕಿ ಐದು ಜನರೂ ಯುವ ಪ್ರತಿಭೆಗಳಿರಲಿಲ್ಲ. ಇದನ್ನು ಗಮನಿಸಿದರೆ ಯುವ ಕವಿ ಗೋಷ್ಟಿ ಎಂದು ಅದನ್ನು ಕರೆಯುವ ಅಗತ್ಯವಿಲ್ಲ ಎನ್ನುವಂತಿತ್ತು. ನಿರೂಪಕ ಇದೊಂದು ವಿಶೇಷ ಗಮವಿಟ್ಟು ಕೇಳಿ ಎಂದ. ಎಲ್ಲರೂ ಕುತೂಹಲದ ಕಿವಿಗಳಾದರು. ಇದು ಒಂದು ದಿನದ ಕಾರ್ಯಕ್ರಮ ಎಲ್ಲರೂ ತಮ್ಮ ಒಂದೇ ಒಂದು ಮತ್ತು ಕಡಿಮೆ ಸಾಲುಗಳಿರುವ ಕವನಗಳನ್ನೆ ಓದಬೇಕು. ಕವನದ ಸಾಲುಗಳನ್ನು ಪುನರುಚ್ಚರಿಸಿ ಸಮಯ ಹಾಳು ಮಾಡಬಾರದು. ಮುಂದೆ ಮನರಂಜನ ಕಾರ್ಯಕ್ರಮಗಳಿಗೆ ಬಾಲಕ ಬಾಲಕಿಯರು ತಯಾರಾಗಿ ಬೆಳಗಿನಿಂದ ಕೂತಿದ್ದಾರೆ. ದಯವಿಟ್ಟು ಎಲ್ಲ ಸಹಕರಿಸಿ ಎಂದರು. ನನ್ನ ಪಕ್ಕ ಕುಳಿತಿದ್ದ ಕಾರ್ಯಕ್ರಮದ ಆಯೋಜಕರು ದಯವಿಟ್ಟು ಹತ್ತು ನಿಮಿಷಗಳಲ್ಲಿ ಆಶು ಭಾಷಣ ಮುಗಿಸಿ ಎಂದರು. ಕಾರ್ಯಕ್ರಮದ ನಿರೂಪಕ ಮಾದೇವನನ್ನು ಆಶು ಭಾಷಣಕ್ಕೆ ಕರೆದು ಐದೇ ಐದು ನಿಮಿಷದಲ್ಲಿ ಭಾಷಣ ಮುಗಿಸಲು ಕೋರಿದ. ಆತನಿಗೆ ಕಷ್ಟಕ್ಕಿಟ್ಟು ಕೊಂಡಿತು. ಅರ್ಧಗಂಟೆಯ ಭಾಷಣ ಹದಿನೈದು, ಹತ್ತು, ಕೊನೆಗೆ ಐದು ನಿಮಿಷ ತಲುಪಿದ್ದು ಕಂಡು ಆತನಿಗೆ ಗಾಬರಿ ಯಾಯಿತು. ಆದರೂ ಧೈರ್ಯ ಮಾಡಿ ಭಾಷಣ ಪ್ರಾರಂಭಿಸಿದ. ಸಂಕ್ಷಿಪ್ತವಾಗಿ ಭಾಷಣ ಮುಗಿಸುವ ಇರಾದೆ ಆತನದಾಗಿತ್ತು. ಕವನಾಸಕ್ತ ಯುವ ಜನರ ಆಸಕ್ತಿಯ ಕುರಿತು ಪೀಠಿಕೆಯಾಗಿ ನಾಲ್ಕು ಮಾತುಗಳನ್ನಾಡಿ ಕನ್ನಡ ಸಾಹಿತ್ಯ ಪರಂಪರೆ ಸಾಗಿ ಬಂದ ಕುರಿತು ಮಾತನಾಡಿ ಯುವ ಬರಹಗಾರರ ಕುರಿತ ಮಾತಿಗೆ ಬರುತ್ತಿದ್ದಂತೆ ಆಯೋಜಕರು ಒಂದು ಚೀಟಿ ಕಳಿಸಿದರು. ಆತನಿಗೆ ಅರ್ಥವಾಯಿತು ಐದು ನಿಮಿಷ ಸಮಯದ ಪರಿಮಿತಿಯನ್ನು ತಾನು ಮೀರಿದ್ದೇನೆ ಎಂದು. ಹಾಗೆಯೆ ಅಲ್ಲಿದ್ದ ಕವಿ ಗೋಷ್ಟಿಯ ಕವಿ ಕವಿಯಿತ್ರಿಗಳೆಡೆಗೆ ಕಣ್ಣಾಡಿಸಿದ. ಐದು ಜನ ಯುವ ಕವಿ, ಕವಿಯಿತ್ರಿಗಳನ್ನು ಬಿಟ್ಟರೆ ಎಲ್ಲರೂ ಹರಟೆಗಳಲ್ಲಿ ಮಗ್ನರಾಗಿದ್ದರು. ನೆರೆದಿದ್ದ ಮಕ್ಕಳು ಹೆಂಗಸರು ಮುಂದಿನ ಮನರಂಜನಾ ಕಾರ್ಯಕ್ರಮದ ನಿರೀಕ್ಷೆಯಲ್ಲಿದ್ದಂತೆ ಕಂಡು ಬಂತು. ಇವರೆಲ್ಲರನ್ನು ಮೀರಿಸುವಂತೆ ಭಾರತೀಯ ನಾರಿಯ ಪ್ರತೀಕ ವಾಗಿದ್ದ ಗಜ ಗಾತ್ರದ ಕವಿಯಿತ್ರಿಯೊಬ್ಬರು ತಾವು ಆಸೀನರಾಗಿದ್ದ ಪೀಠದಲ್ಲಿ ಮಿಸುಕಾಡುತ್ತಿದ್ದರು. ಮುಖದಲ್ಲಿ ಅಸಹನೆ ಎದ್ದು ಕಾಣುತ್ತಿತು. ಅದನ್ನು ತಮ್ಮ ಜೊತೆ ಕುಳಿತ ಇನ್ನೊಬ್ಬ ಕವಿಯಿತ್ರಿ ಜೊತೆ ಹಂಚಿಕೊಳ್ಳುತ್ತಿರುವಂತೆ ಕಂಡು ಬಂತು. ಇನ್ನು ಪ್ರಯೋಜನವಿಲ್ಲವೆಂದು ಕವಿ ಗೋಷ್ಟಿಯ ಕುರಿತ ಮಾದೇವ ತನ್ನ ಆಶುಭಾಷಣವನ್ನು ಮುಂದೆ ಒಂದೇ ನಿಮಿಷದಲ್ಲಿ ಮುಗಿಸಿದ. ನಿರೂಪಕ ಆತನನ್ನು ಅಭಿನಂದಿಸಿದ. ಅಂದಿನ ಸಮಾರಂಭದ ಅಧ್ಯಕ್ಷರಿಂದ ಮಾಲಾರ್ಪಣೆ ಮತ್ತು ಒಂದು ನೆನಪಿನ ಕಾಣಿಕೆ ಕೊಟ್ಟರು. ಫೋಟೋಗೆ ಭಂಗಿಯನ್ನು ಸಹ ನೀಡಿದ. ಅಧ್ಯಕ್ಷರಿಗೆ ಮತ್ತು ಕಾರ್ಯಕ್ರಮದ ಆಯೋಜಕರಿಗೆ ಹಸ್ತಲಾಘವ ನೀಡಿ ತನ್ನ ಸ್ಥಾನದಲ್ಲಿ ಅಸೀನ ನಾದ.

     ನಂತರದಲ್ಲಿ ಕವಿ ಗೋಷ್ಟಿ ಪ್ರಾರಂಭವಾಯಿತು. ಅಲ್ಲಿ ಕವನ ವಾಚನ ಮಾಡಿದ ಇಪ್ಪತ್ತು ಜನರ ಪೈಕಿ ಐದು ಜನ ಯುವ ಕವಿ, ಕವಿಯಿತ್ರಿ ಯರನ್ನು ಬಿಟ್ಟರೆ ಯಾರೂ ನಿರೂಪಕರ ಆಯೋಜಕರ ಸಲಹೆ ಸೂಚನೆಗಳನ್ನು ಪಾಲಿಸ ಲಿಲ್ಲ. ಆದರೆ ಈ ಎಲ್ಲರನ್ನು ಮೀರಿಸಿದ ಆ ಕವಿಯಿತ್ರಿ ಕವನಗಳ ಸಾಲುಗಳನ್ನು ಪುನರುಚ್ಚರಿಸುತ್ತ, ಗಮನವಿಟ್ಟು ಕೇಳುವಂತೆ ಸಭಿಕರನ್ನು ಅದರಲ್ಲೂ ವಿಶೇಷವಾಗಿ ಮಕ್ಕಳನ್ನು ಎಚ್ಚರಿಸುತ್ತ ಸುಧೀರ್ಘವಾದ ಕವನಗಳನ್ನು ವಾಚಿಸಿಯೆ ತಮ್ಮ ಪೀಠದೆಡೆಗೆ ಸಾಗಿದ್ದು. ಮಾದೇವ ಆಯೋಜಕರೆಡೆಗೆ ನೋಡಿದ, ಅವರು ಮುಖ ಆಚೆ ತಿರುಗಿಸಿದರು. ಯುವಕರು ತಮ್ಮ ಮಿತಿಯಲ್ಲಿಯೆ ಉತ್ತಮವಾದ ಕವನಗಳನ್ನು ವಾಚಿಸಿದ್ದರು. ಅಲ್ಲಿ ವಾಚಿಸಲಾದ ಕವನಗಳ ಕುರಿತು ಒಬ್ಬರು ಮಾತನಾಡಿ ಯುವಕರು ಯುವತಿಯರು ಇನ್ನೂ ಬೆಳೆಯಬೇಕು ಕನ್ನಡ ಸಾಹಿತ್ಯದ ಓದು ಪ್ರಧಾನವಾಗಬೇಕು ಅದು ಇದು ಎಂದು ದೀರ್ಷವಾಗಿ ಮಾತನಾಡಿದರು. ವಿಶೇಷವಾಗಿ ಆ ಕವಿಯಿತ್ರಿಯ ಕವನಗಳನ್ನು ಅವರ ವಾಚನ ವೈಖರಿಯನ್ನು ಸಿಕ್ಕಪಟ್ಟೆಯಾಗಿ ಹೊಗಳಿದರು ಕೂಡ. ಅವರ ಮುಖವಂತೂ ಸಂತೃಪ್ತ ಭಾವದಿಂದ ತುಂಬಿತ್ತು. ಅಂತೂ ಕಾರ್ಯಕ್ರಮ ಮುಗಿದು ಕವಿ ಗೋಷ್ಟಿಗೆ ತೆರೆ ಬಿತ್ತು. ಮಾದೇವ ವೇದಿಕೆಯಿಂದ ಹೊರಬಿದ್ದ. ಆಯೋಜಕರು ಆತನನ್ನು ಮನರಂಜನಾ ಕಾರ್ಯಕ್ರಮಕ್ಕೂ ಉಪಸ್ಥಿತನಿರುವಂತೆ ಕೋರಿ ಕೊಂಡರು. ಆತ ಒಪ್ಪಿಗೆ ಸೂಚಿಸಿ ವೇದಿಕೆಯಿಂದ ಕೆಳಗೆ ಇಳಿದು ಮತ್ತೊಮ್ಮೆ ಸಣ್ಣದಾಗಿ ಊರು ಸುತ್ತಿ ಸದಾಶಿವನ ಜೊತೆ ಮನೆಗೆ ತೆರಳಿದ.

     ಮಾರನೆ ದಿನ ಮಾದೇವ ಸದಾಶಿವನಿಂದ ವಿದಾಯ ಪಡೆದು ಅವರು ಎಲ್ಲರೂ ಒಮ್ಮೆ ಆತನೂರಿಗೆ ಬರ ಬೇಕೆಂದು ಒತ್ತಾಸೆಯಿಂದ ಹೇಳಿದ. ಸದಾ ಇನ್ನು ಕೆಲ ದಿನ ಇರಲು ಒತ್ತಾಯ ಮಾಡಿದ, ಮಾದೇವ ತನ್ನ ತೊಂದರೆಗಳನ್ನು ಅವನಿಗೆ ವಿವರಿಸಿ ಅಪ್ಪಣೆ ಪಡೆದು ಹೊರಟ. ಆಯೋಜಕರಿಗೆ ಒಂದು ಮಾತು ಹೇಳಿ ಹೋಗು ಎಂದ ಆತ ಅವರ ಫೋನ್ಗೆ ಟ್ರೈ ಮಾಡಿದ. ಆ ಕಡೆಯಿಂದ ನಿಮ್ಮ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ವಯ್ಯಾರ ವಾಗಿ ನುಡಿದ ಜಂಗಮವಾಣಿ ಪದೆ ಪದೆ ಕೇಳಿ ಬಂತು. ಅವರು ರಾತ್ರಿಯೆಲ್ಲ ನಿದ್ದೆಗೆಟ್ಟಿದ್ದಾರೆ ನಾನು ಕೇಳಿದೆಯೆಂದು ನೀನೆ ಹೇಳು ಎಂದು ಹೇಳಿ ಬಸ್ ನಿಲ್ದಾಣದ ಕಡೆಗೆ ನಡೆದ. ಸದಾಶಿವನನೂ ಆತನನ್ನು ಅನುಸರಿಸಿ ಬಂದ. ಅರಾಮ ವಾಗಿರುವ ಬಸ್ಸನ್ನು ಏರಿ ಹುಬ್ಬಳ್ಳಿಗೆ ಪಯಣಿಸಿದ. ಆಗ ದೀಪಕ ನೆನಪಿಗೆ ಬಂದ, ಆತನಿಗೂ ತನ್ನ ನಮನಗಳನ್ನು ತಿಳಿಸು ಎಂದು ಸದಾಶಿವನಿಗೆ ಹೇಳಬೇಕಿತ್ತು ಎನಿಸಿತು. ಹುಬ್ಬಳ್ಳಿಯ ರಸ್ತೆ ಬದಲಾಗಿತ್ತು. ಚತುಷ್ಪಥ ರಸ್ತೆಗುಂಟ ಶರವೇಗದಿಂದ ಧಾವಿಸುತ್ತಿದ್ದ ವಾಹನಗಳು. ದೇಶ ಬದಲಾಗುತ್ತಿದೆ ವೇಗದ ಧಾವಂತವಿದೆ ಎನಿಸಿತು, ಯಾವುದರೆಡೆಗಿನ ಧಾವಂತ, ಯಾವುದರೆಡೆ ವೇಗ.? ಆತನಿಗೆ ಆರ್ಥವಾಗಲಿಲ್ಲ. ಕೇವಲ ಅರ್ಧಗಂಟೆಯಲ್ಲಿ ಹುಬ್ಬಳ್ಳಿಯ ಹಳೆಯ ಬಸ್ ನಿಲ್ದಾಣ ತಲುಪಿದ್ದ,

     ಆತ ಬಾಲ್ಯದಲ್ಲಿ ಕಂಡ ಹುಬ್ಬಳ್ಳಿ ಅದಾಗಿರಲಿಲ್ಲ. ಅಲ್ಲಿಯೆ ಅರ್ಥ ಗಂಟೆ ಕುಳಿತ. ಕರೆವೆಣ್ಣುಗಳ ಇಶಾರೆ, ಪಿಂಪ್ಗಳ ಹಾವಳಿ ಆತನನ್ನ್ನು ಒಮ್ಮೆ ಯೋಚಿಸುವಂತೆ ಮಾಡಿತು. ನಮ್ಮ ಸಮಾಜಕ್ಕೆ ಸರಕಾರಕ್ಕೆ ಮತ್ತು ವ್ಯವಸ್ಥೆಗಳಿಗೆ ಏನಾಗಿದೆ? ಹಾಗೆಯೆ ಎದ್ದು ಒಮ್ಮೆ ಆತ ತಾನು ಕಾಲೇಜು ದಿನಗಳಲ್ಲಿ ಅಡ್ಡಾಡಿದ ರಸ್ತೆಗಳ ಗುಂಟ ಸಾಗಿ ಬರಬೇಕು ಎನಿಸಿತು. ಅದಕ್ಕೆ ಕಾರಣ ದೀಪಕನ ಬಾಳನ್ನು ಇನ್ನೂ ಆವರಿಸಿರುವ ಐವತ್ತು ವರ್ಷಗಳ ಈ ದೀರ್ಘ ಬದುಕು, ಇನ್ನೂ ಆತನ ಆಸಕ್ತಿಯ ಕೇಂದ್ರಗಳಾಗಿರುವ ಅಲ್ಲಿನ ಸಿನೆಮಾ ಥಿಯೇಟರ್ಗಳು ಅವೆಲ್ಲವನ್ನು ಗಮನಿಸುತ್ತ ಕೊಪ್ಪಿಕರ ರಸ್ತೆಗುಂಟ ನಡೆದು ಕನ್ನಡ ಎರಡನೆ ನಂಬರ್ ಸಾಲಿಯ ಹತ್ತಿರ ಎಡಕ್ಕೆ ತಿರುಗಿ ಸ್ಟೇಶನ್ ರಸ್ತೆಗುಂಟ ಸಾಗಿದ. ಎಲ್ಲ ಕಡೆಗೂ ಕೊಳೆತು ನಾರುವ ಚರಂಡಿ ರಸ್ತೆಗಳು. ದೀಪಕ ಹೇಳಿದ ಹಾಗೆ ಹುಬ್ಬಳ್ಳಿಯ ಮೊಟ್ಟ ಮೊದಲ ಸಿನೆಮಾಸ್ಕೋಪ್ ಪರದೆ ಹೊಂದಿದ್ದ ಎರಡು ಸಲ ನವೀಕರಣ ಗೊಂಡಿದ್ದ ಮಲ್ಲಿಕಾಜರ್ಜುನ, ಗಣೇಶ, ಸುದರ್ಶನ ಟಾಕೀಸುಗಳು ಮುಚ್ಚಿ, ದೊಡ್ಡ ದೊಡ್ಡ ಕಾಂಪ್ಲೆಕ್ಸ್ಗಳು ತಲೆ ಎತ್ತಿವೆ. ಎರಡು ಸಲ ನವೀಕರಣಗೊಂಡು ಜನಪ್ರಿಯ ಚಿತ್ರಗಳನ್ನು ಪ್ರದರ್ಷಿಸಿದ ಮೋಹನ, ಡೆಕ್ಕನ್ಗಳು ಮುಚ್ಚಿವೆ. ಅಲ್ಲಿಯೂ ಕಾಂಪ್ಲೆಕ್ಸ್ಗಳು ತಲೆಎತ್ತಬಹುದು. ಹಳೆಯ ಸ್ಥಿತಿಯಲ್ಲಿ ಇರುವುದು ಚಂದ್ರಕಲಾ ಟಾಕೀಸ್ ಒಂದೆ.

     ನಮ್ಮ ಗ್ರಾಮಾಂತರದ ಟೂರೀಂಗ್ ಟಾಕೀಸ್, ಸೆಮಿ ಪರ್ಮನಂಟ್ ಥಿಯೇಟರ್ಗಳು ಶೇಕಡಾ ತೋಂಭತ್ತು ಭಾಗ ಮುಚ್ಚಿವೆ. ಇನ್ನುಳಿದವೂ ಸಹ ಮುಚ್ಚುವ ಹಂತ ತಲುಪಿವೆ. ದುಬಾರಿ ಥಿಯೇಟರ್ ಭಾಡಿಗೆ, ಟಲಿವಿಜನ್ ಜಾಲಗಳು ಮತ್ತು ನಕಲಿ ಕ್ಯಾಸೆಟ್ಹಾವಳಿ, ಹೆಚ್ಚಿದ ಥಿಯೇಟರ್ ಪ್ರವೇಶ ದರ, ಸರ್ಕಾರ, ಫಿಲಂ ಚೇಂಬರ್, ನಟ ನಟಿಯರು, ನಿರ್ಮಾಪಕ ಮತ್ತು ನಿರ್ದೇಶಕರ ನಿರ್ಲಕ್ಷ್ಯ, ರೀಮೇಕ್ ಸಿನಿಮಾಗಳು ಇವೆಲ್ಲವೂ ಕಾರಣವಾಗಿವೆ. ಇವರೆಲ್ಲರೂ ಒಟ್ಟಾಗಿ ಕುಳಿತು ಆಲೋಚಿ ಸಿದರೆ ಈ ಸಮಸ್ಯೆ ಬಗೆಹರಿಯಬಹುದು. ಇತ್ತಿತ್ತಲಾಗಿ ಗ್ರಾಮಾಂತರ ಪ್ರದೇಶದಲ್ಲಿ ಸಿನೆಮಾ ಪ್ರದರ್ಶಕರು ಬರಿ ವಿತರಕರಿಗೆ ಹಣ ತಲುಪಿಸಿ ಥಿಯೇಟರ್ ಸಿಬ್ಬಂದಿಗೆ ವೇತನ ಮತ್ತು ಪ್ರದರ್ಶನ ವೆಚ್ಚ ಭರಿಸಿ ಬರಿಗೈಲಿ ಹೋಗಬೇಕಾಗಿ ಬಂದ ಪರಿಸ್ಥಿತಿ ಈ ಸಿನೆಮಾ ಮಂದಿರಗಳು ಮುಚ್ಚಲು ಪ್ರಮುಖ ಕಾರಣಗಳಾಗಿರಬಹುದೆ ? ಇವುಗಳಲ್ಲದೆ ಟೆಲಿವಿಜನ್ ಬಂದ ನಂತರದ ಯುವ ಪೀಳಿಗೆ ಸಣ್ಣ ಪರದೆಗೆ ಹೊಂದಿ ಕೊಂಡು ಬಿಟ್ಟಿದ್ದಾರೆ, ದೊಡ್ಡ ಪರದೆ ಕಾಡುವುದು ದೀಪಕಂತಹ ಹಿರಿಯ ತಲೆಮಾರಿನವರನ್ನು ಮಾತ್ರವೆ ? ಎನ್ನುವುದು. ಇನ್ನು ಥಿಯೆಟರುಗಳಲ್ಲಿ ಅನಾಗರಿಕ ಪ್ರೇಕ್ಷಕರು ಮಹಿಳೆಯರು ಮತ್ತು ಚಿಕ್ಕವರೊಂದಿಗೆ ವರ್ತಿಸುವ ಅನಾಗರಿಕ ರೀತಿ,  ಧರ್ಮದ ಕಟ್ಟು ಪಾಡುಗಳು ಮತ್ತೆ ವಿಜ್ರಂಭಿಸುತ್ತಿರುವುದು ಅವರನ್ನೆಲ್ಲ ಟೆಲಿವಿಜನ್ ಪರದೆಗೆ ಅಂಟಿಕೊಳ್ಳುವಂತೆ ಮಾಡಿವೆಯೆ ಎಂಬುದು ಒಂದು ಅಧ್ಯಯನ ಯೋಗ್ಯ ವಿಚಾರ ಎನಿಸುತ್ತಿದೆ. ಹೀಗೆ ಯೋಚಿಸುತ್ತ ಸಾಗಿದ ಮಾದೇವ ರೂಪಂ ಟಾಕೀಸ್ ಎದುರಿನ ಪ್ರಕಾಶ ರೇಸ್ಟೋರಂಟ್ಗೆ ಹೋಗಿ ಚಹಾ ಕುಡಿದು ಗತಕಾಲದ  ನೆನಪುಗಳನ್ನು ನವೀಕರಿಸಿ ಕೊಂಡು ಬಸ್ ಸ್ಟ್ಯಾಂಡ್ಗೆ ಸಾಗಿದ. ರಾತ್ರಿಯ ಊಟ ಮುಗಿಸಿ ತನ್ನ ಊರಿಗೆ ಮರುಪ್ರಯಾಣ ಬೆಳೆಸಿದ.
     
                                                                        ( ಮುಗಿಯಿತು )

Rating
No votes yet

Comments

Submitted by swara kamath Sat, 01/26/2013 - 18:41

ಪಾಟೀಲರಿಗೆ ನಮಸ್ಕಾರಗಳು.
' ಸಿನೆಮಾ ' ಕಥೆಯ ಅಂತಿಮ ಭಾಗ ಓದಿದಮೇಲೆ ನನಗೆ ಅನಿಸಿದ್ದೇನೆಂದರೆ ಕಥೆಯು ಏಲ್ಲೋ ಒಂದೆಡೆ ತನ್ನ ಹಿಡಿತ ಕಳೆದು ಕೊಂಡು ಓದುಗರ ಅಭಿರುಚಿ ಕಳೆದುಕೊಂಡಿತೋ ಎಂಬ ಅನುಮಾನ ಬರುತ್ತದೆ. ಕಥೆಯ ವಸ್ತು ಚನ್ನಾಗಿದ್ದರೂ ಅದರ ನಿರೂಪಣಾ ಶೈಲಿ ಈ ಭಾರಿ ಓದುಗರಿಗೆ ಹಿಡಿಸಿಲ್ಲವೊ ಏನೊ ಗೊತ್ತಾಗುತ್ತಿಲ್ಲಾ. ಕಾರಣ ತಮ್ಮ 'ಅಪರಿಚಿತ ' ಕಥೆಯಲ್ಲಿನ ಕುತುಹಲ ,ನವಿರಾದ ಹಾಸ್ಯ ಇಲ್ಲಿ ಕಾಣದೆ ಸ್ವಲ್ಪ ನಿರಾಸೆ ಉಂಟಾಗುತ್ತದೆ. ಇರಲಿ ಬಿಡಿ, ತಮ್ಮ ಪ್ರಯತ್ನ ಹೀಗೆ ಮುಂದುವರೆಸಿ .ಶುಭಾಶಯಗಳು.

Submitted by H A Patil Thu, 01/31/2013 - 17:53

In reply to by swara kamath

ರಮೇಶ ಕಾಮತರಿಗೆ ವಂದನೆಗಳು
ತಮ್ಮ ಪ್ರತಿಕ್ರಿಯೆ ನೋಡಿದೆ, ತಮ್ಮ ಅಭಿಪ್ರಾಯ ಸರಿ ಇದ್ದರೂ ಇರಬಹುದು. ಕಥೆಯ ನಿರೂಪಣೆಯಲ್ಲಿ ದೋಷ ನನಗೆ ಕಂಡು ಬರುತ್ತಿಲ್ಲ, ಹಿಂದಿನ ಕಥಾನಕಗಳಿಗೆ ಹಾಕಿದ ಪರಿಶ್ರಮವನ್ನೆ ಇದಕ್ಕೂ ನೀಡಿದ್ದೇನೆ, ಕೆಲವೊಂದು ಸಲ ಹಾಗಾಗುತ್ತೆ ಯಾವುದೋ ಕಾರಣಕ್ಕೆ ಓದುಗರನ್ನು ಕಥಾ ವಸ್ತು ಸೆಳೆಯದೆ ಹೋಗಬಹುದು, ಮುಂದಿನ ಬರವಣಿಗೆಯ ಸಂಧರ್ಭದಲ್ಲಿ ತಮ್ಮ ಸಲಹೆಯನ್ನು ನೆನಪಿನಲ್ಲಿಟ್ಟು ಕೊಳ್ಳುವೆ. ನನ್ನ ಈ ಬರವಣಿಗೆಯ ಕುರಿತು ತಾವು ವ್ಯಕ್ತ ಪಡಿಸಿದ ಪ್ರಾಮಾಣಿಕ ಕಳಕಳಿಯ ಅಭಿಪ್ರಾಯಕ್ಕೆ ಧನ್ಯವಾದಗಳು.