ಶಾಮರಾಯರು ಇದ್ದಾರೋ?
ಫೋನು ಟ್ರಿನ್ ಗುಟ್ಟಿತು .. ನಿಶಬ್ದವಾದ ಮನೆಯಲ್ಲಿ ಇದ್ದಕ್ಕಿದಂತೆ ಆದ ಸದ್ದಿಗೆ ಒಮ್ಮೆ ನವಿರಾಗಿ ಬೆಚ್ಚಿ ನಂತರ ಫೋನು ಕೈಗೆತ್ತಿಕೊಂಡ ರಂಗ
"ಹಲೋ"
"ಹಲೋ, ಯಾರು ಶಾಮರಾಯರಾ?"
"ಅಲ್ಲ ಕಣ್ರೀ ... ನಾನು ರಂಗ"
"ಇರಲಿ ... ನಾನು ಶಾಮರಾಯರ ಬಾಲ್ಯ ಸ್ನೇಹಿತ ... ತುಂಬಾ ದಿನವಾಯ್ತು ಅಂತ ಕಾಲ್ ಮಾಡಿದೆ. ಎಲ್ಲಿ ಹೋಗಿದ್ದಾರೆ?"
"ಅವರು ಸಂಸಾರ ಸಮೇತ ಕಾಶೀಯಾತ್ರೆಗೆ ಹೋಗಿದ್ದಾರೆ."
"ಪುಣ್ಯಾತ್ಮರು ... ಪುಣ್ಯಾತ್ಮರು. ಎಲ್ಲಕ್ಕೂ ಕೇಳಿಕೊಂಡು ಬಂದಿರಬೇಕು. ಬರೋದು ಎಂದು?"
"ಮುಂದಿನ ಗುರುವಾರ ರಾತ್ರಿ ಹಾತು ಘಂಟೆ ಟ್ರೈನಿಗೆ ಬರ್ತಾರೆ"
"ಸರಿ ಸರಿ ... ನೀವು ಹೋಗಿ ಕರ್ಕೊಂಡ್ ಬರ್ತೀರೋ?"
"ನಾನಾ?"
"ಸುಮ್ನೆ ಮಾತಿಗೆ ಕೇಳಿದೆ ಅಷ್ಟೇ !"
"ಓ.. ಹಂಗೆ "
"ಹತ್ತು ಘಂಟೆ ಟ್ರೈನು ಅಂದ್ರೆ ಮನೆಗೆ ಬರೋಷ್ಟರಲ್ಲಿ ಹನ್ನೆರಡಾಗಿರುತ್ತೆ. ಕಾಶಿಯಿಂದ ಬೆಂಗಳೂರಿಗೆ ಬರೋದು ಸುಲಭ. ಸ್ಟೇಷನ್ ಇಂದ ಮನೆಗೆ ಬರೋದೇ ತ್ರಾಸ ನೋಡಿ"
"ಸತ್ಯವಾದ ಮಾತು. ನಿಮ್ಮ ಹೆಸರೇನು ಹೇಳಲೇ ಇಲ್ಲವಲ್ಲ !"
"ಅಯ್ಯೋ, ಅದೇ ನೋಡೀ ಐನಾತಿ ಮಾತು ... ನಾನು ರಾಮರಾಯ ಅಂತ. ನಾನೂ ಶ್ಯಾಮೂ ಬಾಲ್ಯ ಸ್ನೇಹಿತರು"
"ಬಾಲ್ಯ ಸ್ನೇಹಿತ ಅಂದ್ರೆ ಯಾವ ರೀತಿ?"
"ನಾವು ಚಾಮರಾಜಪೇಟೆಯಲ್ಲಿ ಅಕ್ಕ-ಪಕ್ಕದ ಮನೆಯಲ್ಲಿ ಇದ್ದವರು. ಆಮೇಲೆ ನಮ್ಮಪ್ಪ ಮನೆ ಕಟ್ಟಿಸಿಕೊಂಡು ಜಯನಗರಕ್ಕೆ ಬಂದರೆ ಶ್ಯಾಮೂ ಅಪ್ಪನಿಗೆ ವರ್ಗಾವಣೆ ಆಗಿ ಮುಂಬೈ’ಗೆ ಹೋದ. ಎಷ್ಟೊ ವರ್ಷ ಸಂಪರ್ಕವೇ ಇರಲಿಲ್ಲ. "
"ಮತ್ತೆ ಹೇಗೆ ಸಿಕ್ಕರೂ?"
"ಹೋದ ವರ್ಷ ಗಾಂಧೀ ಬಜಾರ್’ನಲ್ಲಿ ಭೇಟಿಯಾಯ್ತು. ನಾನು ತಿಂದ ಎಸೆದ ಬಾಳೆಹಣ್ಣಿನ ಸಿಪ್ಪೆ ಮೇಲೆ ಕಾಲಿಟ್ಟು ಬೀಳಲಿದ್ದ. ಗಬಕ್ಕಂತ ಹಿಡ್ಕೊಂಡೆ. ದೇವರ ಹಾಗೆ ಬಂದು ಕಾಪಾಡಿದಿರಿ ಅಂತ ನುಡಿದ ಮನುಷ್ಯನ್ನ ನೋಡಿದರೆ ಶ್ಯಾಮು !"
"ಹಂಗಾಯ್ತು ಅನ್ನಿ. ಮತ್ತೆ ಜಯನಗರದಲ್ಲಿ ಎಲ್ಲಿ ನಿಮ್ಮ ಮನೆ?"
"ಜಯನಗರ ಮೂರನೇ ಬ್ಲಾಕಿನಲ್ಲಿ. ಹೆಣ್ಣು ಮಕ್ಕಳ ಕಾಲೇಜು ಇದೆಯೆಲ್ಲ, ಅಲ್ಲಿಂದ ಎರಡನೇ ಕ್ರಾಸು, ಮೂರನೇ ಮನೆ. ವಾಸ್ತು ಪ್ರಕಾರ ಗಿಣಿ ಹಸಿರು ಬಣ್ಣದ ಮನೆಗೆ ಕೆಂಪು ಬಾಗಿಲು"
"ಹೆಚ್ಚು ಕಮ್ಮಿ ಗಿಣಿ ಹಾಗಿದೆ ನಿಮ್ಮ ಮನೆ ಅನ್ನಿ"
"ಹೌದು ಹೌದು ... ಆ ವಾಸ್ತು ಶಾಸ್ತ್ರ ಪಂಡಿತರು ಮೊದಲು ಗಿಣಿ ಶಾಸ್ತ್ರ ಹೇಳ್ತಿದ್ರಂತೆ ... ಅದಿರ್ಲೀ, ನೀವು ಯಾರು ಅಂದ್ರೀ?"
"ನಾನು ರಂಗ ಅಂತ"
"ಹೌದಾ! ಇಷ್ಟು ಆರಾಮವಾಗಿ ಮನೆಯಲ್ಲಿ ಇರೋದು ನೋಡಿದರೆ ಶಾಮು ಹೆಂಡತಿ ಕಡೆ ಸಂಬಂಧ ಅಂತ ಊಹಿಸಬಲ್ಲೆ! ಮತ್ತೆ, ಏನು ಮಾಡ್ಕೊಂಡಿದ್ದೀರಾ?"
"ಅಂಥಾದ್ದೇನಿಲ್ಲ ! ಸಮಾಜ ಸೇವೆ ಅಷ್ಟೇ ! ಮನೆ ಜನ ಇಲ್ಲದಾಗ ಅವರ ಮನೆ ನಾವು ನೋಡಿಕೊಳ್ಳುತ್ತೇವೆ."
"ಬಹಳ ಒಳ್ಳೇ ಕೆಲಸ. ಎಲ್ಲೆಲ್ಲೂ ದರೋಡೆಗಳು ಹೆಚ್ಚಿವೆ. ನಿಮ್ಮಂಥವರು ಬೇಕು. ನಾವೂ ಮುಂದಿನ ವರ್ಷ ಜೂನ್’ನಲ್ಲಿ ಒಂದು ತಿಂಗಳು ಬದರಿ ಯಾತ್ರೆಗೆ ಹೋಗಬೇಕೂ ಅಂದುಕೊಂಡಿದ್ದೇನೆ. ನಿಮ್ಮನ್ನ ಸಂಪರ್ಕಿಸುತ್ತೇನೆ"
"ನಾನೇ ಬರ್ತೀನಿ ಬಿಡಿ. ಇಷ್ಟು ಮಾಹಿತಿ ಕೊಟ್ಟಿದ್ದೀರಲ್ಲ ಸಾಕು"
"ಆಯ್ತಪ್ಪ. ಏನು ಕೆಲಸದಲ್ಲಿ ಇದ್ದರೋ ಏನೋ, ಸುಮ್ನೆ ನಿಮ್ಮ ಸಮಯ ಹಾಳು ಮಾಡಿದೆ ಅನ್ನಿಸುತ್ತೆ"
"ಅಂಥಾದ್ದೇನಿಲ್ಲ ... ಸುಮ್ನೆ ಕಳ್ಳತನ ಮಾಡ್ತಿದ್ದೆ ಅಷ್ಟೇ"
"ಒಳ್ಳೇ ತಮಾಷೆ ... ಫೋನ್ ಇಡ್ಲಾ?"
"ಆಯ್ತು .. ಇಟ್ಕೊಳಿ"
ರಂಗ ಫೋನ್ ಇಟ್ಟ .... ನಿಂಗ ಧಡ ಧಡ ಅಂತ ಬಂದ ....
"ಲೋ! ಮೂದೇವಿ ... ಫೋನ್’ನಲ್ಲಿ ಯಾರ ಜೊತೆ ಮಾತಾಡ್ತಾ ಇದ್ದೀ?"
"ಸುಮ್ನೆ ಟೈಮ್ ಪಾಸ್ ಫೋನ್ ಕಣೋ"
"ಏನಾದ್ರೂ ಹೇಳಿದ್ಯಾ?"
"ನಿಜ ಹೇಳಿದ್ರೂ ನಂಬೋಲ್ಲ ಗುರೂ ಜನ ... ರಾಜಕಾರಣಿಗಳು ರೀಲ್ ಬಿಟ್ರೂ ನಂಬ್ತಾರೆ ... ಜನಗಳ ವಿಷಯಾನೇ ಅರ್ಥವಾಗೋಲ್ಲ ... ಇರ್ಲಿ ಬಿಡು, ಇನ್ನೊಂದ್ ಆರ್ಡರ್ ಬಂತು, ಮುಂದಿನ ಜೂನ್’ಗೆ"
"ತಲೆಹರಟೆ! ಸುಮ್ನೆ ಬಂದ ಕೆಲಸ ಮುಗಿಸಿಕೊಂಡು ಹೋಗೋಣ ಅಂದ್ರೆ ನಿಂದೊಂದು ಬೇರೆ. ಬೇಗ ಬೇಗ ನಡಿ"
ಕಳ್ಳ ಕೊರಮರಾದ ರಂಗ-ನಿಂಗರ ಜೋಡಿ ಶ್ಯಾಮರಾಯರ ಮನೆ ಕೊಳ್ಳೆ ಹೊಡೆದು ಹಿಂದಿನ ಬಾಗಿಲಿನಿಂದ ಓಡಿ ಹೋದರು !
Comments
ಸಕ್ಕತ್ ! ಅದೆಲ್ಲ ಸರಿ ಓಡಿ ಹೋಗಲು
In reply to ಸಕ್ಕತ್ ! ಅದೆಲ್ಲ ಸರಿ ಓಡಿ ಹೋಗಲು by partha1059
ಹೂಂ. ಹೌದಲ್ವಾ? :))
In reply to ಹೂಂ. ಹೌದಲ್ವಾ? :)) by kavinagaraj
ಧನ್ಯವಾದಗಳು ಕವಿಗಳೇ
In reply to ಸಕ್ಕತ್ ! ಅದೆಲ್ಲ ಸರಿ ಓಡಿ ಹೋಗಲು by partha1059
ಧನ್ಯವಾದಗಳು ಪಾರ್ಥರೇ
In reply to ಧನ್ಯವಾದಗಳು ಪಾರ್ಥರೇ by bhalle
ಮೊದಲಿಗೆ ತಲೆ ಹರಟೆ ಬರಹ
In reply to ಮೊದಲಿಗೆ ತಲೆ ಹರಟೆ ಬರಹ by venkatb83
ವೆಂಕಟ್ ಅವರೆ
ತಮಾಷೆಯಾದರೂ ನಿಜ ಭಲ್ಲೆಯವರೇ
In reply to ತಮಾಷೆಯಾದರೂ ನಿಜ ಭಲ್ಲೆಯವರೇ by Shobha Kaduvalli
ಧನ್ಯವಾದಗಳು ಶೋಭಾ ಅವರೆ ...
ಭಲ್ಲೇಜಿ, ರಂಗ ಮನೆ ಕಾಯುವ ಕೆಲಸದವ
In reply to ಭಲ್ಲೇಜಿ, ರಂಗ ಮನೆ ಕಾಯುವ ಕೆಲಸದವ by ಗಣೇಶ
ಬಹಳ ಖುಷಿಯಾಯಿತು ಗಣೇಶ್’ಜಿ ...
ಸಖತ್ ಭಲ್ಲೆಯವರೇ ಅಂತೂ ರಂಗ-ನಿಂಗ
In reply to ಸಖತ್ ಭಲ್ಲೆಯವರೇ ಅಂತೂ ರಂಗ-ನಿಂಗ by sathishnasa
ಅದನ್ನೇ ಹೇಳೋದು ಸತೀಶ್ ’ಅದೃಷ್ಟ
ಸಖತ್ ಭಲ್ಲೇಜಿ, ಹ...ಹ...ಹ.
In reply to ಸಖತ್ ಭಲ್ಲೇಜಿ, ಹ...ಹ...ಹ. by RAMAMOHANA
ಹ ಹ ಹ ಹ .. ಚೆನ್ನಾಗಿರಿ
In reply to ಹ ಹ ಹ ಹ .. ಚೆನ್ನಾಗಿರಿ by bhalle
ಕಳ್ಳತನವನ್ನು glamorize ಮಾಡಿದ
In reply to ಕಳ್ಳತನವನ್ನು glamorize ಮಾಡಿದ by Shreekar
ನೀವು ಹೆಸರಿಸಿರುವವರು ಮಹಾನ್