ಬೆಟ್ಟದ ಜೀವ

ಬೆಟ್ಟದ ಜೀವ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ.ಕೆ.ಶಿವರಾಮ ಕಾರಂತ
ಪ್ರಕಾಶಕರು
ಎಸ್ ಬಿ ಎಸ್ ಪಬ್ಲಿಷರ್ಸ್
ಪುಸ್ತಕದ ಬೆಲೆ
65

'ವಸಂತ' ಎಂಬ ಮಾಸಪತ್ರಿಕೆಯನ್ನು ನಡೆಯಿಸತೊಡಗಿದ್ದಾಗ, ವಾಚಕರ ಅಭಿರುಚಿಯನ್ನು ಚಿಗುರಿಸುವ ಸಲುವಾಗಿ ಅದರಲ್ಲಿ ಕಥೆ,ಕಾವ್ಯ,ಕಾದಂಬರಿಗಳನ್ನು ಬರೆದು ತುಂಬಿಸಬೇಕಾಗಿ ಬಂತು. ಹೀಗೆ ಶಿವರಾಮ ಕಾರಂತರಿಗೆ ಬರಹ ಅನಿವಾರ್ಯವಾಗಿತ್ತು. ಅನಂತರ ಪತ್ರಿಕಾರಂಗದ ಉದ್ಯೋಗ ಅವರನ್ನು ಒಂದೇ ಕಡೆ ಕುಳಿತುಕೊಳ್ಳಲು ಬಿಡಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಒಳಗೂ ಹೊರಗೂ ಅಲೆದಾಡುತ್ತಾ ಸುತ್ತಲಿನ ಜನಜೀವನದೊಂದಿಗೆ ಬೆರೆತು, ಅಲ್ಲಿನ ಜನ, ಆಚಾರ-ವಿಚಾರ, ಪ್ರಾಕೃತಿಕ ಸೌಂದರ್ಯ,ವಿಸ್ಮಯಗಳನ್ನು ಅನುಭವಿಸುವ ಸಂದರ್ಭ ಒದಗಿ ಬಂತು. ಇಂತಹ ಅನುಭವಗಳಿಂದ ಪ್ರೇರಿತವಾಗಿ ಮೂಡಿಬಂದ ಮೊದಲ ಕಥೆಯೇ ಚೋಮನ ದುಡಿ. ಮುಂದೆ ಪುತ್ತೂರಿನಲ್ಲಿ ನೆಲೆಸಿ ಸುತ್ತಲಿನ ಕೃಷಿಕ ಜೀವನ, ನಿತ್ಯ ಜೀವನ, ಇವುಗಳೆಲ್ಲವನ್ನು ನೋಡಿ ಬರೆಯಲು ಸ್ಪೂರ್ತಿ ಪಡೆದುದೇ -ಬೆಟ್ಟದ ಜೀವ.
ಕಾರಂತರು ಪುತ್ತೂರು ತಾಲೂಕಿನ ಕಡಬ  ಎಂಬ ಹಳ್ಳಿಯಲ್ಲಿ ನೆಲೆಸಿ "ಬಾಲಪ್ರಪಂಚ" ಬರೆಯಲು ತೊಡಗಿದ್ದಾಗ, ಆ ಗ್ರಾಮದ ಪೂರ್ವ ದಿಕ್ಕಿನಲ್ಲಿ ಕಣ್ಣಿಗೆ ಎದ್ದು ಕಾಣಿಸುತ್ತಿದ್ದ ಕುಮಾರ ಪರ್ವತ ಶಿಖರ. ತೆಂಕಣ ದಿಕ್ಕಿನಲ್ಲಿ ಕಳಂಜಿಮಲೆ ಎಂಬ ಬೆಟ್ಟದ ಸಾಲು. ಆ ಬೆಟ್ಟವನ್ನು ಹತ್ತಿ ಇಳಿಯುವ ಸಾಹಸವನ್ನು ಮಾಡಿದ್ದರಂತೆ. ಹೀಗಿರುವಾಗ ಕಾಡಿನ ಮಧ್ಯೆ ಒಂದು ವಿಶಾಲವಾದ ಅಡಿಕೆ ತೋಟ ಕಂಡಿತು. ದೇರಣ್ಣ ಗೌಡ ಎಂಬಾತ  ಏಳೆಂಟು ಎಕ್ರೆ ಕಾಡನ್ನು ಸವರಿ ಏಳೆಂಟು ಕೂಲಿಗಳ ಜತೆ ತಾನೊಬ್ಬನೇ ದುಡಿದು ಮಾಡಿದ ಆ ತೋಟ ಅಚ್ಚರಿ ಹುಟ್ಟಿಸಿತು. ಮುಂದೆ ಅದೇ ಪರಿಸರದಲ್ಲಿ ಅಲೆದಾಡಿದಾಗ ಕಟ್ಟ ಎಂಬಲ್ಲಿ ಗೋವಿಂದಯ್ಯ ಎಂಬ ಹಿರಿಯರು ಅತಿಸಾಹಸದ ಕೃಷಿಕರಾಗಿ ದುಡಿದುದನ್ನು ಕಂಡರು. ಮುಂದೊಂದು ದಿನ ಕೊಡಗಿನ ಮಿತ್ರ ಮಂಜುನಾಥಯ್ಯ ಎಂಬವರಲ್ಲಿ ಹೋದಾಗ ಅಲ್ಲೇ ಹತ್ತು ದಿನ ಕುಳಿತು ಗೋವಿಂದಯ್ಯನವರ ಬದುಕಿನ ಸ್ವಾರಸ್ಯವನ್ನು ಬರೆದು ಮುಗಿಸಿದರು, ಗೋವಿಂದಯ್ಯನೇ ಬೆಟ್ಟದ ಜೀವ- ಗೋಪಾಲಯ್ಯ.
ಶಿವರಾಮಯ್ಯನವರ ಮನೆಯ ಹಸು ಒಂದು ದಿನ ಮೇವಿಗೆ ಹೋದುದು ಮರಳಿ ಬರಲಿಲ್ಲ. ಜಾನುವಾರು ಸಂತೆಯ ಸಮಯದಲ್ಲಿ ಆ ಭಾಗದಲ್ಲಿ ಜಾನುವಾರುಗಳು ಕಳ್ಳತನವಾಗುತ್ತಿದ್ದುದು ಸಾಮಾನ್ಯ. 'ಯಾರೋ ಒಬ್ಬ ಒಂದು ಚಂದದ ದನವನ್ನು ಮೂಡಲಿಗೆ ಹೊಡೆದುಕೊಂಡು ಹೋಗುತ್ತಿದ್ದ' ಎಂಬ ಸೂಚನೆಯನ್ನು ಯಾರೋ ಒಬ್ಬರು ಕೊಟ್ಟರು. ಮನೆಯ ಆಳು ಮಂತ್ರವಾದಿಯಲ್ಲಿ ಕೇಳಿದಾಗ "ಅದು ಮೂಡಲಿಗೆ ಹೋದದ್ದೇ ನಿಜ. ಹಟ ಸಾಧಿಸಿದರೆ ಸಿಕ್ಕಿಯೇ ಸಿಗುತ್ತದೆ" ಎಂಬ ಭರವಸೆಯನ್ನೂ ಕೊಟ್ಟ. ಕಣ್ಣಿನ ಸಾಕ್ಷಿ ದೇವತೆಗಳು ನುಡಿದ ಭವಿಷ್ಯ ಇವೆರಡನ್ನೂ ನಂಬಿ ಪುತ್ತೂರಿನಿಂದ ಸುಬ್ರಹ್ಮಣ್ಯದ ಕಡೆಗೆ ಹೊರಟ ಶಿವರಾಮಯ್ಯನವರು. ಸುಬ್ರಹ್ಮಣ್ಯದಿಂದ ಪಂಜದ ಹಾದಿಯನ್ನು ಹಿಡಿಯಬೇಕೆಂಬ ಉದ್ದೇಶವನ್ನಿಟ್ಟುಕೊಂಡಿದ್ದ ಅವರಿಗೆ ಕಾಡಿನಲ್ಲಿ ದಾರಿ ತಪ್ಪಿ  ನಾಡಿಗೆ ಮಧ್ಯಭಾಗವಾಗಿದ್ದ ಗುತ್ತಿಗಾರು -ಸುಳ್ಯ ರಸ್ತೆಯ ದಟ್ಟ ಕಾಡಿನಲ್ಲಿ ಸಿಕ್ಕಿ ಹಾಕಿಕೊಳ್ಳುವಂತಾಯಿತು. ಹಿಂತಿರುಗಿ ಸುಬ್ರಹ್ಮಣ್ಯಕ್ಕೆ ಹೋಗೋಣವೆಂದರೆ ಆಗಲೇ ಸೂರ್ಯ ಮುಳುಗಿ ಹೊತ್ತು ಮೀರಿತ್ತು. ಯಾವ ಕಡೆ ಸಾಗಿದರೂ ಕತ್ತಲಲ್ಲಿ ಹೆಜ್ಜೆ ಹಾಕಲಾಗದೆಂದು ನಿರ್ಧರಿಸಿ ಯೋಚಿಸುತ್ತಿರುವಾಗ, ಯಾರೋ ಇಬ್ಬರು ಮಾತನಾಡುತ್ತಾ ಸಾಗುತ್ತಿರುವ ದೃಶ್ಯ ಕಂಡಿತು. ಕಾಡುದಾರಿಯಲ್ಲಿದ್ದ ಅಂಜಿಕೆಯಿಂದಲೇ ' ದಾರಿಹೋಕರನ್ನು ಓಯ್.. ಇಲ್ಲಿಂದ ಪಂಜಕ್ಕೆ ಎಷ್ಟು ದೂರ?  ಎಂದು ಕೇಳಿದರು. ಪಂಜ ಇಲ್ಲೆಲ್ಲಿ ಇದು ಗುತ್ತಿಗಾರು-ಸುಳ್ಯ ರಸ್ತೆಯಲ್ಲವೇ? ಎಂದು ಅವರಂದಾಗ ಇವರಿಗೆ ದಿಗಿಲು. ಏನೂ ತೋಚದಾಯಿತು. ಸುಬ್ರಹ್ಮಣ್ಯದಲ್ಲೇ ನಿಮಗೆ ಪಂಜದ ದಾರಿ ತಪ್ಪಿತು ಎಂದರವರು. ಹತ್ತಿರ ಯಾವ ಪೇಟೆಯೂ ಸಿಗಲಾರದು, ಇನ್ನೂ ಏಳೆಂಟು ಮೈಲಿ ದೂರ ನಡೆಯಬೇಕು ಎಂದರು. ಉಪಾಯ ಕಾಣದೆ ನಿಮ್ಮ ಜತೆಯಲ್ಲಿ ಒಂದು ರಾತ್ರಿ ಉಳಿದುಕೊಳ್ಳಲು ಅವಕಾಶ ಕೊಡುತ್ತೀರಾ..ಎಂದರು. ಅಯ್ಯೋ  ನೀವು ಬ್ರಾಹ್ಮಣರಂತೆ ಕಾಣುತ್ತೀರಿ, ನಾವು ಗೌಡರು. ನನ್ನ ಮನೆಯಲ್ಲದಿದ್ದರೆ ಹೋಗಲಿ, ಒಂದು ಸೂಡಿ ಹಿಡಿದುಕೊಂಡು ನಿಮ್ಮನ್ನು ನಮ್ಮ ಭಟ್ಟರ ಮನೆಯವರೆಗೆ ಮುಟ್ಟಿಸಿಬರುತ್ತೇನೆ ಎಂದನೊಬ್ಬ.
ಹೀಗೆ ಹೋಗಿ ಸೇರಿದುದೇ ಗೋಪಾಲಯ್ಯನವರ ಮನೆಗೆ. ಮನುಷ್ಯರ ಸುಳಿವೇ ಇರದಿದ್ದ ಆ ಮನೆಗೆ ಅಪರೂಪದ ಅಪರಿಚಿತ ಅತಿಥಿಗಳಾಗಿ ಹೋದವರಿಗೂ ದೊರಕಿದ ಮನ್ನಣೆ, ಮುಂದೆ ಅಲ್ಲಿನ ಅತಿಥಿ ಸತ್ಕಾರ, ಮಾತಿನ ಉಪಾಚಾರ, ಪ್ರಕೃತಿ ಸೌಂದರ್ಯದ ಸೊಬಗು, ಇವೆಲ್ಲವೂ ಅವರನ್ನು ನಾಲ್ಕೈದು ದಿನಗಳವರೆಗೆ ಕಟ್ಟಿಹಾಕುವಂತೆ ಮಾಡಿತ್ತು. ದಿನದ ಆಶ್ರಯಕ್ಕಾಗಿ ಬಂದ ಅತಿಥಿ ಮರುದಿನ ಹೊರಟು ನಿಂತಾಗ, ಮನುಷ್ಯರೇ ಸುಳಿಯದ ಆ ಕಾಡಿನ ಮನೆಗೆ ಬರುವವರು ಯಾರೂ ಇಲ್ಲವೆಂದೂ, ಒಂದೆರಡು ದಿನವಾದರೂ ಇದ್ದು ತಮ್ಮ ಜತೆ ಕಷ್ಟ-ಸುಖ ಹಂಚಿಕೊಂಡು ಹೋಗಬೇಕೆಂದು ಒತ್ತಾಯ ಮಾಡಿದಾಗ ಉಳಿಯದೇ ವಿಧಿಯೇ ಇಲ್ಲವೆನ್ನುವಂತಾಯಿತು. ಜತೆಗೆ ಅಪರಿಚಿತನಿಗೆ ಇಷ್ಟೊಂದು ಅಕ್ಕರೆ ತೋರುವ ಈ ಬೆಟ್ಟದ ಜೀವಗಳಿಗೆ ಆ ಕಾಡಿನ ವಾಸದಲ್ಲಿದ್ದು ಮನುಷ್ಯರನ್ನು ಕಾಣಲು-ಜತೆ ಬೆರೆಯಲು ಎಷ್ಟೊಂದು ಆಸೆ  ಇದೆ ಎಂದು ಅಚ್ಚರಿಯೂ ಆಯಿತು. ಯಾವುದೇ ರೀತಿಯ ಗದ್ದಲಗಳಿಲ್ಲದೆ, ಮನುಷ್ಯರ ಒಡನಾಟವಿಲ್ಲದೆ ಇಲ್ಲಿ ಹೇಗಪ್ಪಾ ದಿನ ಕಳೆಯುವುದು ಎಂಬ ಯೋಚನೆ ಹತ್ತಿತ್ತು. ಮುಂದೆ ಕಾಡಿನ ವಾಸ ಅಭ್ಯಾಸವಾಗಿದ್ದ ಗೋಪಾಲಯ್ಯನವರ ಜತೆ, ಸಮಯ ಕಳೆಯಲು ತಾನೂ ಕಾಡಿನಲ್ಲಿ ಅಲೆದಾಡುವಂತಾಯಿತು. ಕೈಗತ್ತಿಯೊಂದನ್ನು ಹಿಡಿದುಕೊಂಡು ಅವರು ಶಿವರಾಮಯ್ಯನವರ ಮಾರ್ಗದರ್ಶಕರಾದರು.
ಮುಂದೆ ಆ ದಟ್ಟ ಕಾಡಿನ ಪ್ರಕೃತಿ ಸೌಂದರ್ಯ, ಹಿಮದಂತೆ ಚಳಿಹಿಡಿಸುತ್ತಿದ್ದ ಅಲ್ಲಿನ ನದಿ ನೀರು, ಕಾಲಿಟ್ಟ ಕಡೆ ಅಂಟಿಕೊಳ್ಳುತ್ತಿದ್ದ ಜಿಗಣೆಗಳು, ಕಾಟುಮೂಲೆ ತೋಟ, ಕಬ್ಬಿನ ಗದ್ದೆ, ಬಂಡೆಗಳಿಂದ ಬಂಡೆಗೆ ಜಿಗಿಯುತ್ತ ಸಾಗುತ್ತಿರುವಾಗ  ಅವುಗಳ ಸಂದಿಯಲ್ಲಿ ಕಾಣಸಿಗುತ್ತಿದ್ದ ಹಾವುಗಳು, ಕಾಟಿ,ಕಾಡಾನೆ ಮುಂತಾದ ಕಾಡುಪ್ರಾಣಿಗಳ ಸಂಚಾರದ ಮಾರ್ಗ ಹೀಗೆ ಪ್ರಯಾಣದ ಅನುಭದಲ್ಲೇ ಈ ಕಾದಂಬರಿ ಸಾಗುತ್ತದೆ. ಗೋಪಾಲಯ್ಯನವರ ಜೀವನದ ಕಥೆ-ವ್ಯಥೆ ಇಲ್ಲಿ ವ್ಯಕ್ತವಾಗುತ್ತದೆ. ಗೋಪಾಲಯ್ಯನವರಿಗೆ ಇಬ್ಬರು ಮಕ್ಕಳು. ಹಿರಿಯ ಮಗಳು ವಾಗ್ದೇವಿ, ಕಿರಿ ಮಗ ಶಂಭು. ಅವರ ಜೀವನದ ಸಂತಸದ ದಿನಗಳನ್ನು ಕಂಡಿದ್ದೇ ಮಕ್ಕಳ ಬಾಲ್ಯದ ದಿನಗಳಲ್ಲಿ. ನಂತರ ಮಗಳ ಮದುವೆ ನಡೆದು ಹದನೈದು ವರ್ಷಕ್ಕೆ ಬಸಿರಾಗಿ ಮೊದಲ ಹೆರಿಗೆಗೆಂದು ಬಂದ ಆಕೆ ಮಗುವನ್ನು ಹೆತ್ತು ಜ್ವರ ಬಂದು ತೀರಿಕೊಂಡಳು. ಆಗ ಅಲ್ಲಿ ಯಾವುದೇ ವೈದ್ಯಕೀಯ ಸೌಕರ್ಯಗಳಾಗಲೀ ಆಥವಾ ಔಷಧಿಗಳಾಲೀ ಇರಲಿಲ್ಲ. ತಮ್ಮೆದುರಲ್ಲೇ ಆಡಿ ಬೆಳೆದ ಮಗಳ ಸಾವನ್ನು ಕಂಡ ಹೆತ್ತವರಿಗೆ, ಈ ಮುದಿ ಜೀವಗಳನ್ನು ಕರೆದುಕೊಂಡು ಇನ್ನೂ ಬಾಳಬೇಕಾಗಿದ್ದ ಆ ಜೀವವನ್ನು ಉಳಿಸಬಾರದಿತ್ತೇ ಎಂದು ಅನೇಕ ಬಾರಿ ಅಂದುಕೊಂಡದ್ದುಂಟು. ಆಗೆಲ್ಲಾ ಗೋಪಾಲಯ್ಯನವರೇ, ಹಣೆಯಲ್ಲಿ ಬರೆದುದನ್ನು ಅನುಭವಿಸಲೇ ಬೇಕೆಂದು ಸಮಾಧಾನ ತಂದುಕೊಳ್ಳುತ್ತಿದ್ದರು.
ಮುಂದೆ ಎಲ್ಲಾ ಮಕ್ಕಳೂ ಈಗ ಇಂಗ್ಲೀಷನ್ನೇ ಕಲಿಯುತ್ತಾರೆಂಬ ಹುಚ್ಚಿನಿಂದ ಶಂಭುವನ್ನು ಆಂಗ್ಲಮಾಧ್ಯಮ ಶಾಲೆಗೆ ಕಳುಹಿಸಿ, ನಂತರ ಅವನು ಹೆಚ್ಚಿನ ಓದಿಗಾಗಿ ದೂರದ ಊರುಗಳಿಗೆ ಹೋಗಿ ಮನೆಯ ಕಡೆ ತಿರುಗಿಯೂ ನೋಡದಿದ್ದಾಗ ಆ ಜೀವಗಳು ಇನ್ನೂ ಹಣ್ಣಾಗುವಂತಾಯಿತು. ತಂದೆಯೇನೋ ಆತನ ಹಂಬಲವನ್ನು ಬಿಟ್ಟು ಎಲ್ಲೋ ಅಲೆಯುತ್ತಿದ್ದ ನಾರಾಯಣ ಎಂಬ ಮಾಣಿಯನ್ನು ಕರೆದುಕೊಂಡು ಬಂದು ಆತನಿಗೊಂದು ಮದುವೆಯನ್ನು ಮಾಡಿಸಿದರು. ತನ್ನ ಕೈಯಾರೆ ಕಾಡುಗಳನ್ನು  ಸವರಿ ಬೆಳೆಸಿದ್ದ ಕಾಟುಮೂಲೆಯ ತೋಟವನ್ನು ನೋಡಿಕೊಳ್ಳುವಂತೆ ಅಲ್ಲೇ ಒಂದು ಗುಡಿಸಲನ್ನು ಮಾಡಿಕೊಟ್ಟರು. ಆತನಿಗೋ ಗೋಪಾಲಯ್ಯನೆಂದರೆ ದೇವರ ಸಮಾನ. ತನಗೆ ಬಂದ ಫಸಲಿನಲ್ಲಿ ಸಮಾನಾಗಿ ಹಂಚಿ ಉತ್ತಮ ರೀತಿಯಲ್ಲಿ ಸಂಸಾರ ಮಾಡಿಕೊಂಡು, ಪ್ರತಿದಿನ ಮಾವನೆಂದೇ ಕರೆಯುತ್ತಿದ್ದ ಗೋಪಾಲಯ್ಯನವರನ್ನು ಮಾತನಾಡಿಸಿಕೊಂಡು ಯೋಗ ಕ್ಷೇಮ ವಿಚಾರಿಕೊಂಡು ಹೆತ್ತ ಮಗನಿಗಿಂತಲೂ ಹೆಚ್ಚಾಗಿ ನೋಡಿಕೊಳ್ಳುತ್ತಿದ್ದ. ಮುಂದೆ ತನ್ನ ಹಿರಿಯರಿಂದ ಬಂದದ್ದು ಮಗನಿಗೇ ಇರಲಿ, ಸತ್ತ ಮೇಲಾದರೂ ಆತ ಬಂದು ಕೇಳಬಹುದು. ಆದರೆ ಈ ಕಾಟುಮೂಲೆಯನ್ನು ನಾರಾಯಣನ ಹೆಸರಿನಲ್ಲಿ ಬರೆಸಿ ಆತನಿಗೆ ಶಾಶ್ವತವಾಗಿ ಅಲ್ಲೇ ಇರುವಂತೆ ಹೇಳಿದ್ದರು. ಇದು ಈ ಕಾಡಿನಲ್ಲಿ ಜೀವಿಸುತ್ತಿರುವ ಆ ಜೀವಗಳ ಕಥೆಯಾದರೆ, ಕಾಡಿನ ಸಹವಾಸವೇ ಬೇಡ ಎಂದು ನಾಡಿನ ವ್ಯಾಮೋಹಕ್ಕೆ ಒಳಗಾಗಿ ನಾಡು ಸೇರಿದ ಶಂಭುವಿನ ಕಥೆ ಇನ್ನೊಂದು ರೀತಿಯದ್ದು.
ಶಿವರಾಮಯ್ಯನವರನ್ನು ನೋಡಿದ ಆ ದಂಪತಿಗಳಿಗೆ ತನ್ನ ಮಗನ ನೆನಪು ಪದೇ-ಪದೇ ಕಾಡುತ್ತಿತ್ತು. ಆತ ನೋಡಲು ನಿಮ್ಮಂತೆಯೇ ಇದ್ದ, ವಯಸ್ಸೂ ನಿಮ್ಮಷ್ಟೇ ಇರಬಹುದು ಎಂದು ಹೇಳಿ ಭಾವುಕರಾಗುತ್ತಿದ್ದ ಅವರ ಪತ್ನಿ ಶಂಕರಮ್ಮನನ್ನು ಕಂಡು, ಊರೂರು ಅಲೆಯುತ್ತಿರುವ ನಾನು  ನಿಮ್ಮ ಮಗನನ್ನು ಕಂಡುಹಿಡಿಯುವ  ಜವಾಬ್ದಾರಿ ನನ್ನದು ಎಂಬ ಮಾತನ್ನಿತ್ತರು ಶಿವರಾಮಯ್ಯನವರು.
ಯೋಚಿಸುತ್ತಿದ್ದ ಹಾಗೆ ಶಂಭು ಎನ್ನುವ ಆತನ ಮುಖ ತಾನೆಲ್ಲೋ ನೋಡಿದ, ಆತನೊಡನೆ ಮಾತನಾಡಿದ ಅನುಭವವನ್ನು ನೆನಪಿಸಿಕೊಳ್ಳುತ್ತಲೇ ಇದ್ದರು. ಮುಂದೆ ಅಡಿಕೆ ಸಾಗಿಸಲೆಂದು ಗಾಡಿ ಬರುವುದಿತ್ತಾದ್ದರಿಂದ ನಡೆಯುವ ಬದಲು ಅದರಲ್ಲೇ ಹೋಗುವ ತೀರ್ಮಾನವಾಗಿ, ಹೊರಡುವ ಸಂದರ್ಭದಲ್ಲಿ ನಿಮ್ಮ ಮಗನ ಭಾವಚಿತ್ರ ಇದ್ದರೆ ತೋರಿಸಬಹುದೇ ಎಂದು ಕೇಳಿದರು. ನೋಡಿದ ಕೂಡಲೇ ಭಾವುಕರಾಗುತ್ತಿದ್ದ ಆ ಫೊಟೋವನ್ನು ಗೋಡೆಯಿಂದ ತೆಗೆದು ಇನ್ನೆಲ್ಲೋ ಇಟ್ಟಿದ್ದ ಅದನ್ನು ತಂದು ತೋರಿಸಿದರು. ಭಾವಚಿತ್ರವನ್ನು ನೋಡಿದ ಕೂಡಲೇ ತಾನು ಹಿಂದೊಮ್ಮೆ ಪುಣೆಯಲ್ಲಿ ಭೇಟಿ ಮಾಡಿದ ಹುಡುಗ ಈತನೇ ಎಂದೂ ಮದುವೆಯಾಗಿದ್ದು,  ಇಂಗ್ಲೀಷಿನಲ್ಲೇ ಮಾತನಾಡುತ್ತಿದ್ದ ಆತನ ಹೆಂಡತಿಯೂ ಇವರಿಗೆ ಅತಿಥಿ ಸತ್ಕಾರ ಮಾಡಿದ್ದನ್ನು ನೆನೆದು ಗೋಪಾಲಯ್ಯನವರಲ್ಲಿ ತಾನು ಖಂಡಿತವಾಗಿಯೂ ಇದರ ಸಲುವಾಗೇ ಆತನ ಮನೆಗೆ ಇನ್ನೊಮ್ಮೆ ಭೇಟಿ ನೀಡಿ ಮನೆಗೆ ಭೇಟಿ ನೀಡುವಂತೆ ಮಾಡುತ್ತೇನೆ ಎಂದು ಮಾತು ಕೊಟ್ಟು ಹೊರಟರು. ಜತೆಗೆ ಭಟ್ಟರೂ ಕೂಡ, ಎಂಬಲ್ಲಿಗೆ ಕಾದಂಬರಿಯು ಮುಕ್ತಾಯಗೊಳ್ಳುವುದು.
ಸುಬ್ರಹ್ಮಣ್ಯದ ಆ ಕಾಡು, ಪ್ರಾಕೃತಿಕ ಸೌಂದರ್ಯ, ಅಲ್ಲಿನ ಪರ್ವತಗಳು, ಕಾಡು ಪ್ರಾಣಿಗಳ ವಿವರ, ಅಲ್ಲಿ  ಬೇಟೆಯಾಡಿದ ಹುಲಿ, ಅತಿಥಿ ಸತ್ಕಾರದ ಆತಿಥ್ಯಇವುಗಳನ್ನೆಲ್ಲಾ ಅಲ್ಲಿ ಹೋಗದೆಯೂ ಮನದಣಿಯೆ ಸವಿಯಬೇಕಾದರೆ ಕಾರಂತರ ಮಾತಿನಲ್ಲೇ ಕೇಳಬೇಕು. ಒಮ್ಮೆ ಈ ಕೃತಿಯನ್ನು ಹಿಡಿದು ಕೂತರೇ ಯಾವುದೇ ಅಡಚಣೆಯೂ ಇಲ್ಲದೆ ಓದಿಸಿಕೊಂಡು ಹೋಗಿ, ಒಂದು ಸುಂದರ ಪ್ರಾಕೃತಿಕ ಸೌಂದರ್ಯದ ಪರಿಚಯ ಮಾಡಿಸಿಕೊಡುತ್ತದೆ. ಇಂದಿನ ಪೀಳಿಗೆಯ ಜನರಿಗೆ ಈ ರೀತಿಯಾಗಿಯೂ ಜನ ಜೀವನ ಸಾಗಿಸುತ್ತಿದ್ದರೇ ಎಂಬ ಅಚ್ಚರಿ ಮೂಡಿಸುತ್ತದೆ. ಕಾರಂತರ ಬರಹವೆಂದರೆ ಕೇಳಬೇಕಾಗಿಲ್ಲ. ಎಂಥಹವರನ್ನೂ ಒಂದು ಕ್ಷಣ ತನ್ನದೇ ಲೋಕಕ್ಕೆ ಕೊಂಡೊಯ್ಯುತ್ತದೆ. ವಿಧಿಯ ಲೀಲೆಗೆ ತುತ್ತಾಗಿ ಮಗಳನ್ನು ಕಳೆದುಕೊಂಡ ದು:ಖದ ಜತೆಗೆ ಬದುಕಿದ್ದ ಮಗನೂ ತಮ್ಮಿಂದ ದೂರಾಗಿ, ಮನುಷ್ಯ ಪ್ರೀತಿಗಾಗಿ ಹಂಬಲಿಸುವ ಆ ಹಿರಿ ಜೀವಗಳ ಕಥೆಯೇ 'ಬೆಟ್ಟದ ಜೀವ'..