ಚಂದಿರನೆಡೆಗೆ

ಚಂದಿರನೆಡೆಗೆ

 



  
ಹಾರ ಹೊರಟಿರೆ ಶಬ್ದಕಿಂತಲು ವೇಗಪಯಣವು ನಿಚ್ಚಳ
ಮೇರು ಪರ್ವತದಿಂದ ಮೇಲಕೆ ಹೋಗುತಿದ್ದರೆ ಸಂತತ
ನೇರವಾಗಿಯೆ ಚಂದ್ರನಾಗುವ ಕ್ಷಣಕೆ ಕ್ಷಣಕೂ ಹತ್ತಿರ!
ಮಾರೆಯಿಂಬ್ರಿಯದಲ್ಲಿ ಇಳಿವೆನು ವಸತಿಯೊಂದನು ಹೂಡುತ

ಹಾರ ಹೊರಡಲು ಶಬ್ದಕಿಂತಲು ವೇಗಪಯಣವು ನಿಚ್ಚಳ
ಮೇರು ಪರ್ವತದಿಂದ ಮೇಲಕೆ ಹೋಗುತಿದ್ದರೆ ಸಂತತ
ನೇರವಾಗಿಯೆ ಚಂದ್ರನಾಗುವ ಕ್ಷಣಕೆ ಕ್ಷಣಕೂ ಹತ್ತಿರ
ಮಾರೆಯಿಂಜನಿಯಲ್ಲೆ ಇಳಿದರೆ ಇಳೆಯ ಮರೆವುದು ಖಂಡಿತ!

-ಹಂಸಾನಂದಿ

ಕೊ: ಸ್ವಲ್ಪ ದಿನಗಳ ಹಿಂದೆ ಪದ್ಯಪಾನದಲ್ಲಿ ಕೊಟ್ಟ ಚಿತ್ರಕ್ಕೆ ಬರೆದ ಎರಡು (ಎರಡಲ್ಲ, ಒಂದೂ ಕಾಲೇ) ಚೌಪದಿಗಳು -ಯಾಕಂದ್ರೆ ಎರಡನೆಯದರಲ್ಲಿ ಬದಲಾಗಿರೋದು ಒಂದೇ ಸಾಲು! ಚಿತ್ರ ಕೃಪೆ - ಪದ್ಯಪಾನ

ಶಬ್ದಕಿಂತಲು ವೇಗಪಯಣ = supersonic speed 

ಮೇರು ಪರ್ವತ = North Pole , ನಮ್ಮೆಲ್ಲ ಜ್ಯೋತಿಷ ಗ್ರಂಥಗಳ ಪ್ರಕಾರ ಮೇರು ಇರುವುದು ಉತ್ತರ ಧ್ರುವದಲ್ಲೇ. ನಾನು ಅದನ್ನು ಇಲ್ಲಿ ಪೋಲಾರ್ ಆರ್ಬಿಟಿಂಗ್ ಎನ್ನುವ ಅರ್ಥದಲ್ಲಿ ಬಳಸಿಕೊಂಡೆ. ಇಸ್ರೋ ನ ಪಿಎಸ್ಸೆಲ್ವಿ ನೆನೆಸಿಕೊಳ್ಳಿ

ಮಾರೆಯಿಂಬ್ರಿಯ = Mare Imbrium, ನಮಗೆ ಕಾಣುವ ಚಂದ್ರನ ಭಾಗದಲ್ಲಿನ ಒಂದು “ಸಮುದ್ರ” 

ಮಾರೆಯಿಂಜನಿ =  Mare Ingenii ನಮಗೆ ಕಾಣದ ಚಂದ್ರನ ಬೆನ್ನು ಮಗ್ಗುಲಲ್ಲಿರುವ ಒಂದು “ಸಮುದ್ರ”. ನಮಗೆ ಕಾಣದ ಭಾಗದಲ್ಲಿರುವುದರಿಂದ, ಅಲ್ಲಿಂದ ಭೂಮಿಯೂ ಕಾಣದು. ಹಾಗಾಗಿ ಅಲ್ಲಿ ಏನಾದರೂ ಇಳಿದರೆ, ಇಳೆಯನ್ನು ಮರೆಯದೇ ಗತಿಯಿನ್ನೇನು, ಅಲ್ವೇ?

ಅಂದಹಾಗೆ, Mare ಅನ್ನುವ ಪದವನ್ನು ಹೇಳುವುವು ಮಾರೇ ಎಂದೇ.

Rating
No votes yet