'ಉತ್ತರಾಯಣ ಮತ್ತು ...'
'ಉತ್ತರಾಯಣ ಮತ್ತು .. ಎಂಬ ಕಾವ್ಯ ಗುಚ್ಛ ಡಾ. ಎಚ್. ಎಸ್. ವೆಂಕಟೇಶ ಮೂರ್ತಿಯವರು ಬರೆದ ಇತ್ತೀಚಿನ ಅತ್ಯುತ್ತಮ ಪುಸ್ತಕಗಳಲ್ಲೊಂದು !
ಸಹಜತೆಯಿಂದ ಫಳ ಫಳಿಸುವ ಹಲವಾರು ಅತ್ಯುತ್ತಮ ಪದ್ಯಗಳ ಗೊಂಚಲನ್ನು ಹೊಂದಿರುವ 'ಉತ್ತರಾಯಣ ಮತ್ತು ..ಎಂಬ ಕವನ ಮಾಲೆ, ನಮ್ಮ ಹಿಂದಿನ ಪರಂಪರೆ ಮತ್ತು ಕಣ್ಣ ಮುಂದೆ ನಲಿದಾಡುತ್ತಾ, ಕುಣಿದಾಡುತ್ತಾ ವಿಜೃಂಭಿಸುತ್ತಾ ನಾಗಾಲೋಟದಿಂದ ಓದುತ್ತಿರುವ ಆಧುನಿಕತೆಯ ನೆಲೆಯನ್ನೂ ಸಂಭಾಳಿಸಿಕೊಂಡು ಮುನ್ನುಗ್ಗುವ ಕೌಶಲ್ಯವನ್ನು ತೋರುಗೊಡುತ್ತದೆ. ಪುಸ್ತಕದ ಪ್ರತಿ ಕವನವೂ ಬಳಸುವ ಭಾಷೆ, ಕವಿಯ ಕಾವ್ಯ ಪ್ರೌಢಿಮೆಗಳ ಸತ್ವದಿಂದ ತನ್ನದೇ ಆದ ಸ್ವಯಂ ಪ್ರಭೆಯಿಂದ ಪ್ರಜ್ವಲಿಸುತ್ತಿವೆ.
ಜಾರುಬೆಣ್ಣೆಯಿದೆ ಕೈಯೊಳಗೆ
ಜಾರು ಬೆಣ್ಣೆಯಿದೆ ಕೈಯೊಳಗೆ
ಅಂಬೆಗಾಲನಡೆ ! ಧೂಳಡರಿದ ಮೈ !
ಮೊಸರಿನ ಕೊಸರಿದೆ ಮುಖದೊಳಗೆ ||
ಕನ್ನಡಿ ಕೆನ್ನೆ ! ನೇರಿಲೆ ಕಣ್ಣು !
ಹಣೆಯಲಿ ಗೋರೋಜನ ತಿಲಕ !
ನೊಸಲಿನ ತುಂಬ ಗುಂಗುರಿನುಂಗುರ
ಮುಖಕಮಲಕೆ ಕವಿದಿವೆ ಭೃಂಗ ||
ಕೊರಳಲಿ ತಾಯತಿ ! ಹುಲಿಯುಗುರಿನ ಸರ !
ಬರುತಿದೆ ಶ್ಯಾಮಾಂಗನ ಡೋಲಿ !
ಗಾಳಿಗಾಡುತಿದೆ ಸಿರಿ ಮುಂಗುರುಳು
ಮಧು ಹೀರಿದ ದುಂಬಿಯ ಹೋಲಿ ||
'ಆಪ್ತ ಗೀತ' ಶ್ರೀ ಕೃಷ್ಣಾರ್ಜುನರ ನಡುವೆ ಜರುಗಿದ ಹೊಸ ಸಂವಾದ : ಅದಕ್ಕಾಗಿ ಅದನ್ನು ಹೊಸ ಒಡಂಬಡಿಕೆ ಎಂದು ಕರೆಯಲಾಗಿದೆ.
ಐದು ಪರಿಚ್ಛೇದಗಳಲ್ಲಿ ಗೀತಾಚಾರ್ಯನು ತಾನೊಬ್ಬ ಗೊಲ್ಲನಾಗಿ, ಪ್ರಿಯ ಸಖನಾಗಿ ಕ್ಷತ್ರಿಯನಾಗಿ, ತಾತ್ವಿಕನಾಗಿ, ಪಾರ್ಥ ಸಾರಥಿಯಾಗಿ ಬಾಳಿನ ಜವಾಬ್ದಾರಿಗಳನ್ನು ಹೇಗೆ ನಿರ್ವಹಿಸಿದೆ ಎನ್ನುವುದನ್ನು ಅರ್ಜುನನಿಗೆ ವಿವರಿಸುತ್ತಾ ಸಾಗುತ್ತಾನೆ. ಕೊಳಲೂದುವುದು ಕೇವಲ ಜಡಗೊಂಡ ನಮ್ಮ ಸಂವೇದನೆಗಳನ್ನು ಹೊಡೆದೆಬ್ಬಿಸಲು ಮಾತ್ರ ಬಳಸಿದಂತಿದೆ. ಕೊನೆಯ ಐದನೆಯ ಭಾಗದಲ್ಲಿ ಚಾತುರ್ವರ್ಣದ ಪರಿಭಾಷೆಯ ಪ್ರಸ್ತಾಪ ಬರುತ್ತದೆ. ಪಂಚಮ ನಿಮ್ನ ಸ್ಥಿತಿಯಾದರೆ, ಉತ್ತಮ ಸಂಗೀತದಲ್ಲಿ ಅದು ಅತಿ ಮಧುರ ಸ್ವರದ ತಾಣದಂತಿದೆ. ಚಾತುರ್ವರ್ಣಗಳಲ್ಲಿ ಭೇದವಿಲ್ಲ. ಅವೆಲ್ಲಾ ಒಂದೇ ವ್ಯಕ್ತಿತ್ವದ ನಾಲ್ಕು ನೆಲೆಗಳು ಎಂದು ಪ್ರತಿಪಾದಿಸುತ್ತಾನೆ. ಗಾಂಡೀವವನ್ನು ಕೆಳಗಿರಿಸಿ, ಸೇವಾ ಕಾರ್ಯ ಕ್ಷೇತ್ರಕ್ಕೆ ಇಳಿಯಲು ಪ್ರಚೋದನೆ ಮೊದಲಿನ ಮೂರು ಹಂತಗಳು ಸಿದ್ಧಗೊಳಿತ್ತವೆ. ಬದಲಾಗುತ್ತಿರುವ ಹೊಸ ವಿಶ್ವದಲ್ಲಿ ಬಾಳಲು ಹೊಸ ಒಡಂಬಡಿಕೆಯ ಅಗತ್ಯವನ್ನು ಕವಿ ಮನಗಾಣುತ್ತಾನೆ. ಇದೇ ಕಾರಣಕ್ಕಾಗಿ ಕಪಟನಾಟಕ ಸೂತ್ರಧಾರಿಯು, ಪುನಃ-ಪುನಃ, ಕಾಲಕ್ಕೆ ತಕ್ಕಂತೆ ವೇಷ ತೊಡುವ ಅನಿವಾರ್ಯತೆಯನ್ನು ಗಮನಕ್ಕೆ ತರುತ್ತಾನೆ, ಅದಕ್ಕಾಗಿಯೆ ಈ ಹೊಸ ಒಡಂಬಡಿಕೆ !
'ಆಪ್ತಗೀತ'
(ಹೊಸ ಒಡಂಬಡಿಕೆ)
ಉವಾಚ : 1
ಗೋಪಾಲನೆಯೆಂದರೆ ಬರೀ ಕೊಳಲೂದುವುದಲ್ಲ
ಅರ್ಜುನಾ ಬೆಳಗಾದರೆ ಹಸುಗಳನ್ನು ಕೊಟ್ಟಿಗೆಯಿಂದ
ಹೊರಕ್ಕಟ್ಟಿ ಗೋದಲೆ ಬಾಚಬೇಕು. ದುರ್ನಾತ
ಹೊಡೆವ ಮುಸುರೆ ಬಾನಿ ಖಾಲಿಮಾಡಿ, ಗಸಗಸ ತಿಕ್ಕಿ
ಶುಚಿಮಾಡಬೇಕು. ಎರಡೂ ಕೈ ಬಳಸಿ ಸೆಗಣಿ-
ಎತ್ತಬೇಕು. ಮುಚ್ಚದೇ ಮೂಗು, ಚಿಪ್ಪಲ್ಲಿ ಮೊಗೆಮೊಗೆದು ಗ್ವಾತ
ಕೊಟ್ಟಿಗೆ ಮೂಲೆಯ ಕುಡಿಕೆ ಖಾಲಿಮಾಡಬೇಕು;
ಆಮೇಲೆ ಹತ್ತಾರು ಕೊಡ ನೀರು ಹೊಯ್ದು, ಕಡ್ಡಿ-
ಪೊರಕೆಯಲ್ಲಿ ಕರಕರ ಬಳಿದು, ಕಲ್ಲು ಹಾಸಿದ ಕೊಟ್ಟಿಗೆ
ಶುಚಿಮಾಡಬೇಕು. ಗೊದಲೆಯ ಮೆದೆ
ಹುಲ್ಲ ಹಾಕಿ ಕಟ್ಟಬೇಕು ಎಳೆಗರುಗಳನ್ನೆಳೆದು.
ಬಳಿಕ ತಂಗಳು ರೊಟ್ಟಿ ನಾಷ್ಟ ಬೆಣ್ಣೆ ಸಮೇತ ಮುಗಿಸಿ
ಗಡಿಬಿಡಿಯಿಂದ, ಕೊಳಲು ಸಿಕ್ಕಿಕೊಂಡು ಟೊಂಕಕ್ಕೆ, ನವಿಲ
ಗರಿ ಇಟ್ಟುಕೊಂಡು ಕೋರೆರುಮಾಲಲ್ಲಿ ಮಳೆಗಿಳೆಗಿರಲೆಂದು
ಹೊದ್ದು ಬಣ್ಣಕಂಬಳಿ ಕೌದಿ, ನಡೆಯಬೇಕು ಮಂದೆಯ ಹಿಂದೆ
ಹಸಿರುಗಪ್ಪಿನ ಕಾಡಕಣಿವೆಗೆ. ಥಳ ಥಳ ಹರಿಯುತ್ತಿದ್ದಾಳಲ್ಲಿ
ಯಮುನೆ ಹಸುಗಳನ್ನಿಳಿಸಿ ನೀರಿಗೆ, ಕೌಪೀನ
ಮಾತ್ರರಾಗಿ ಹಾರಿ ಹೊಳೆಗೆ, ನುಣ್ಣನೆ ಬೆಣಚುಕಲ್ಲಲ್ಲಿ
ಕಪಿಲೆ ಕಾಳಿಯರ ಮೈಯುಜ್ಜಬೇಕು. ಕಿವಿಯ ಗಿಮಿಟು
ತೆಗೆದು, ಕೋಡ ನಡುವಿನ ಕೊಳೆತಿಕ್ಕಿ,ರಕ್ತ
ಹೀರುವ ಕರಿಯುಣ್ಣೆ ಕಿತ್ತು, ತೊಡೆಗೆ ಮೆಟ್ಟಿದ
ಸೆಗಣಿಕರೆ ತೊಳೆದು ಕಣ್ಣಿನ ಪಿಸುರು, ನೀರಲ್ಲಿ
ಕಾಲು ಹಗುರಾಗುವಂತೀಜಿಸಿ ಹಸುಕರು ಮುಂದೆ,
ಮುಂದೆ, ಹಸಿರು ಚಿಗುರೋದೆದತ್ತ ನಡೆಸಬೇಕು.
ಮಂದೆಯಲ್ಲಿರುತ್ತವೆ ಕಣ್ಣುತಪ್ಪಿಸಿ ಕಾಡಲ್ಲೆಲ್ಲೋ
ನುಗ್ಗಿಬಿಡುವ ಕಳ್ಳದನ. ಅವುಗಳ ಮೇಲೆ
ಸದಾ ಇರಬೇಕು ಒಂದು ಕಣ್ಣು.ಕಟ್ಟಬೇಕವನ್ನು
ಸಾದು ಹಸುಗಳ ಜೋಡಿ, ನಡುಹಗಲಲ್ಲಿ
ಅರಳಿಮರದಡಿಯ ನೆರಳಲ್ಲಿ ಕೂತು, ಬಿಚ್ಚಿ ಬುತ್ತಿ
ಉಂಡಾದ ಮೇಲೆ ಸಿಕ್ಕರೆ ಕೊಂಚ ಸಮಯ, ಕೊಳಲಿಂ-
ದೊಂದು ಸಣ್ಣ ಸ್ವರಮಾಲಿಕಾ ಸ್ಫುರಣೆ.
ನಾನಿದೆಲ್ಲ ಮಾಡಿದ್ದರಿಂದಲೇ -ಯಾದವ.
ಉವಾಚ : 2
ಮಿಧಿಲೆಯಾಳರಸ ಕಂಸ, ನನ್ನ ತಂದೆಯನ್ನೇ
ತಳ್ಳಿ ಸೆರೆಮನೆಗೆ, ಜಬರದಸ್ತಲ್ಲಿ ತಾನೇ
ಕೂತಿದ್ದಾನೆ ರಾಜ ಸಿಂಹಾಸನದಲ್ಲಿ. ತಂಗಿ ದೇವಕಿ
ಮತ್ತವಳ ಗಂಡ ವಸುದೇವನನ್ನ ಕಾರಾಗಾರಕ್ಕೆ
ನೂಕಿ, ಅವರುಳಿಮೆ ನಾಟಿನ ಬೀಜ ಮೊಳಕೆಯೊಡೆದು
ನಿಧಾನಕ್ಕೆತ್ತಿದಾಗ ತಲೆ, ನಿಷ್ಕರುಣೆಯಿಂದ ನಡೆಸಿ ಕುಯ್ಳು,
ಬಿಸಾಕುತ್ತ ತಿಪ್ಪೆಗುಂಡಿಗೆ ಕಸ,
ಬೆಳೆಸುತ್ತಿದ್ದಾನೆ ರಕ್ತ ಹುಯ್ದೂಹುಯ್ದೂ ಸ್ವಾಟಿ ಕೋರೆ.
ಅವನನ್ನೆದುರಿಸಲು ನಿತ್ಯ ಪಡೆಯಬೇಕಿತ್ತಿಲ್ಲಿ
ಮಟ್ಟಿಸಾಮು. ರಾಜಸರನ್ನ ಬಗ್ಗುಬಡಿಯಲಿಕ್ಕೆ
ರಾಸಕ್ರೀಡೆಯಷ್ಟೇ ಸಾಲದು ಅರ್ಜುನಾ. ಗೋವರ್ಧನವನ್ನೆತ್ತಿ
ಇಳಿಸಿ, ನಡೆಸಬೇಕು ಸಮಯ ಸಿಕ್ಕಾಗೆಲ್ಲಾ ಕಸರತ್ತು.
ಆಕಾಶದಿಂದಿಳಿಯಬಹುದು ಹಠಾತ್ ಕೇಡು; ನೆಲದಿಂದೇಳ-
ಬಹುದು ಧುತ್ತ್ ಎಂದು ಹುತ್ತ; ಸುಟ್ಟುರೆಗಾಳಿ ತಿತ್ತಿರಿ
ತಿರುಗುತ್ತೆತ್ತೊಯ್ಯಬಹುದು ಕತ್ತಮುಕಲೆತ್ತರಕ್ಕೆ ..
ಕಾಳಿಂದಿಯಲ್ಲಾಯೆಂದು ಬಾಯ್ದೆರೆಯಬಹುದು
ದರ್ಪಿಷ್ಟ ಘಟಸರ್ಪ ಕಾಲಗರ್ಭಕ್ಕೆಳೆವ
ಗಿಮಿದಿರುಗು ಗವಿಬಾಯಿ ! ಪಂಚಭೂತದ
ಹೊಂಚೆದುರಿಸಿ ಹಾಕಲಿಕ್ಕೇಬೇಕು ಇದಿರುಮೊಡಿ.
ಬರೀ ಹಾಡುಕುಣಿದರೆ ಮುಗಿಯಲಿಲ್ಲ ; ಕಾದಾಡಬೇಕು.
ಅರ್ಜುನಾ ಹಾಗೆ ಕಾದಿಯೇ ನಾನು-ಕಾದವ.
ಉವಾಚ : 3
ಬೆಣ್ಣೆ ಕದ್ದದ್ದುಂಟು ಜತೆಗಾರರೊಡಗೂಡಿ .
ಕಾಡಿದ್ದೂ ಉಂಟು ಬಣ್ಣಗಿಂಡಿಯ ಪುಟ್ಟಪುಟ್ಟ ಪುಟ್ಟಿಯರನ್ನ.
ಮೀಸೆ ಚಿಗುರೊಡೆದಾಗ ಆಸೆಪಟ್ಟಿದ್ದುಂಟು
ಹದಿಹರಯದ ಹೆಂಗಳ ತಕಪಕ ಪುಳಕ-
ಕ್ಕೆ, ತತ್ತರಗುಡೊ ತೊಡೆ, ಯಮುನೆಯ ಹೊನ್ನದಿಣ್ಣೆಗಳ
ನಿಮ್ನೋನ್ನತ ನಿತಂಬ ನಿರೀಕ್ಷಣೆಗೆ, ಕೈನಿಮಿರ
ಜಾರುಸ್ಪರ್ಶಕ್ಕೆ. ಆಡಿದ್ದುಂಟವರ ಜೋಡಿ ಚಿನ್ನಿಕೋಲು,
ಕೈಚಂಡು, ಗುಮ್ಮಟಬುಗರಿ, ಕಗ್ಗವಿಗತ್ತಲಲ್ಲಿ ಕಣ್ಣುಮುಚ್ಚಾಲೆ.
ನುಗ್ಗಿದ್ದೂ ಉಂಟು ಒಬ್ಬನೇ ಪಾತಾಳಗಹ್ವರದಾಳಕ್ಕೆ
ಹನಿಮಿನುಗು ನಕ್ಷತ್ರದೀಪ್ತಿಯಲಿ ಮೈಮರೆತು
ಏಕಾಂಗಿ ಧ್ಯಾನಿಸಿದ್ದುಂಟು ಕಾಣದ್ದನ್ನು ಕಾಣಲಿಕ್ಕೆ
ಮೈಯೆಲ್ಲ ಕಿವಿಯಾಗಿ ಕಾದದ್ದುಂಟು ಕೇಳದ್ದನ್ನು ಕೇಳಲಿಕ್ಕೆ.
ಸಾಂದೀಪಿನೀಮುನಿಯ ಕಾಲಕೆಳಗರಳಿತ್ತು ಒಂದು ನಿಶ್ಯಬ್ದ
ನೀಲೊತ್ಪಲ ಪುಷ್ಪ ತುಂಬಿಯೋಂಕಾರ ಝಂಕೃತಿಯಲ್ಲಿ.
ಚಿಂತಿಸಿದ್ದುಂಟು ಕೈಗಂಟಿಸಿಕೊಳ್ಳದೆ ಬಿಡಿಸುವುದ ಹಲಸ.
ಒತ್ತೊತ್ತುಕತ್ತಲನು ಬೆಂಕಿಗೂಡಲಿ ಸುಟ್ಟು ನಕ್ಷತ್ರಮಾಡುವುದ.
ಧ್ಯಾನಿಸಿದ್ದುಂಟು ಆಗುವುದು ಹೇಗೆಂದು ಕೈಯಿಲ್ಲದವರ ಕೈ ;
ಬಟ್ಟೆಗೆಟ್ಟವರ ಬಟ್ಟೆ ; ಮೃತ್ಯುಪೀಡಿತರನ್ನೆತ್ತುವ
ಗರುತ್ಮಂತ ಕೊಕ್ಕಿನಿಕ್ಕುಳ; ಏಕಾಗ್ರಚಿತ್ತದಿಂದಾತ್ಮಾಹುತಿ ನಡೆಸುತ್ತ
ರಚಿಸುವುದು ಹೇಗೆಂದು ಕಗ್ಗಾಡಿನಲ್ಲೊಂದು ಕಾಲೋಣಿ
ಅರ್ಜುನಾ, ಈ ನಿದಿಧ್ಯಾಸನದಿಂದಲೇ ನಾನು -ಶ್ರಾವಕ.
ಉವಾಚ :4
ಸೇವೆಯೆಂದರೆ ಸೇವೆ. ನಿರಹಂಕಾರಿಯಾಗದೆ ಸಾಗದೆಂದಿಗೂ
ನಡಬಗ್ಗಿ ನಡೆ ಸುವೀ ಕೈಂಕರ್ಯ. ಭೃಗುವಿನ
ಕಾಲೊತ್ತಬೇಕು. ಯಾರದೋ ತೇರಗುದುರೆಯ ದೇಕುರೇಖು
ನಡೆಸಬೇಕು. ಕುರುಕ್ಷೇತ್ರದ ಮಡುವಲ್ಲಿಳಿಸಿ ಕುದುರೆ
ಕುಡಿಸಬೇಕು ತಣ್ಣನೆ ನೀರು. ಅದರ ಮೈ ತಿಕ್ಕಿತಿಕ್ಕಿ
ತೊಳೆಯಬೇಕು. ಹಲ್ಲಣದ ಧೂಳು ಝಾಡಿಸಿ, ಕಟ್ಟಿ ಗಾಯಕೆ ಬಟ್ಟೆ
ರಕ್ತಕಲೆಯೊರಸಿ, ಮೆತ್ತಗೆ ಅಕ್ಕರಾಸ್ಥೆಯಿಂದ ಕತ್ತಿನ
ಜೂಲಲ್ಲಾಡಿಸುತ್ತಾ ಕೈ, ಆದಾಗ ನಾನದರೊಂದು ಅವಿಭಾಜ್ಯ
ಅಂಗ, ಕಣ್ಣಲ್ಲೇಕೆ ತೆಳ್ಳಗೆ ತೇವವಾಡುವುದೋ ಕಾಣೆ.
ಗರಿಕೆಹುಲ್ಲು ತಿನ್ನಿಸುವಾಗ, ಹಚ್ಚನೆ ಹಸಿಹುಲ್ಲ ಕಂಪು
ಮೂಗಿಗಡರಿ, ಸ್ವಾಟೆಯಂಚಿಂದ ತೊಟ್ಟಿಕ್ಕುವ ಮರಕತ
ಮಣಿ ನಿಟ್ಟಿಸುತ್ತಾ ಮೈ ಮರೆತಾಗ ನಾನು, ನಿನಗೆ ತೂಕಡಿಕೆ
ಸೇವೆಯೆಂದರೆ ಹೀಗೇ ಮತ್ತೆ. ನಿರಹಂಕರಣಕ್ಕಗತ್ಯ-
ವೀ ಆತ್ಮೋನ್ನತಿಯ ರಾಜಮಾರ್ಗ. ರಾಜರದ್ದಲ್ಲ ಅರ್ಜುನಾ ..
ಸೇವಾಮಗ್ನರದ್ದು. ನೆನೆಸಿಕೋ ನಾನು ವಿದುರನ ಮನೆಯ ಹಂಚು
ಹಚ್ಚಿದ್ದ; ದ್ರೌಪದಿಯ ಅಕ್ಷಯ ಭಾಂಡಿ ತೊಳೆದಿದ್ದ ..
ಅನನ್ಯತನ್ಮಯತೆಯಿಂದ ಇಷ್ಟೆಲ್ಲ ಮಾಡಿದೆನೆಂದೇ ನಾನು-ಸೇವಕ.
ಉವಾಚ : 5
ಓದೋನು ಒಬ್ಬ, ಕಾದೋ ನು ಇನ್ನೊಬ್ಬ, ದನಿಯ ಮನೆಮುಂದೆ
ಕೈ ದೊಣ್ಣೆಕಾವಲ ಬಾಗಿಲ ಭಂಟ ಮತ್ತೊಬ್ಬ ಮಳೆ ತೊಳಿದಿಟ್ಟ
ಮಣ್ಣ ಪಾತ್ರೆಯನ್ನಕ್ಷಯಗೊಳಿಸಿ ಅಣ್ಣ ಬೆಳೆಯುವ ಕೃಷಿಕ
ಮಗದೊಬ್ಬ- ಖಂಡಿತ ಅಲ್ಲ ; ನಾಲಕ್ಕನ್ನೂ ಮಾಡಿದ್ದು ನಾನು-ಒಬ್ಬನೆ
ಇದೀಗ ಪಂಚಮಾಂಕದ ಸರದಿ. ಒಟ್ಟಿಗೆದೆಯೊಡ್ಡಿ ನಿಂತಿದ್ದೇನೆ
ಬರಿಗೈಬಂಟ. ಚಕ್ರವನ್ನಳವಡಿಸಿ ನೂತಿದ್ದಾಯ್ತು ಏಕಾಂತದೇ ಕಾಗ್ರ
ಧ್ಯಾನದ ಹುರಿ. ಉನ್ಮತ್ತ ಕತ್ತಲ ಮುಂದೆ ಚಾಚುತ್ತ ಕೊರಳು
ತನ್ನನ್ನು ತಾನೇ ಸುಟ್ಟುಕೊಳ್ಳುವ ಸತ್ಯಾಗ್ರಹದ ನಿಷ್ಕಂಪಿತಗ್ನಿಶಿಖೆ.
ತನ್ನ ತಾನೇ ರಕ್ಷಿಸುವ, ತನ್ನ ತಾನೇ ಸೇವಿಸುವ, ತನ್ನ ಮಲವನ್ನ ತಾನೇ
ತೊಳೆದು ನಿರ್ಮಲಗೊಳುವ ಪಂಚಮಾಂಕ -ಈಗ ನಾಕೂ
ಕಾಲೂರಿ ಚಾಲೂ. ಗಲ್ಲಕೆ ಕೈ ಹಚ್ಚಿ ಯೋಚಿಸು ಪಾರ್ಥ.
ಬೆವರಿ ನಾರದರ್ಥಕ್ಕಿಲ್ಲ ತೃಣಮಾತ್ರ ಪರಮಾರ್ಥ.
ಅನುವಾಗಿನ್ನು; ನಿರ್ಧನುವಾಗಿನ್ನು. ಬಂಧಮೋಕ್ಷದ ಸಂಗ್ರಾಮಕ್ಕೆ ಬೇಕಾದ್ದು
ಹೃದಯಪಕ್ಷಿಗೆ ವೈನತೇ ಯ ರೆಕ್ಕೆ ; ಉರಿ ಉರಿವ ಬೆಂಕಿಚರಿಗೆಗೆ ಸದಾ
ಸತ್ಯನಿಷ್ಟೆಯ ಅಸ್ಖಲಿತಧಾರೆ. ಎತ್ತೆತ್ತಿ ಇಡು ನಿಧಾನಕ್ಕೆ ಸಾವಿರ ಪಾದ
ಇರುವೆ ನೋಯದ ಹಾಗೆ ..ಪಂಚಮದ ಇಂಚರ ಎಷ್ಟು ಮಾತ್ರಕ್ಕೂನೂ
ಒಡೆಯದಂತೆ.