ನಾವು ಯಂತ್ರಗಳ ದಾಸರಾಗಿದ್ದೇವೆಯೇ?
ನಾಲ್ಕು ದಶಕಗಳ ಹಿಂದಿನ ಒಂದು ಘಟನೆ ನೆನಪಾಗುತ್ತಿದೆ. ಡಿಸೆಂಬರ್ ತಿಂಗಳಲ್ಲಿ ಒಂದು ದಿನ ನಮ್ಮ ಹಳ್ಳಿಯಿಂದ ಹಾಸನಕ್ಕೆ ಬಂದು ರಾತ್ರಿ ಸರ್ಕಾರೀ ಪ್ರೌಢಶಾಲೆಯಲ್ಲಿ ಕೊರೆಯುವ ಛಳಿಯಲ್ಲಿ ಬೆಂಚಿನ ಮೇಲೆ ಮಲಗಿದ್ದು ಬೆಳಗಾಗೆದ್ದು ಜಿಲ್ಲಾ ಮಟ್ಟದ ಹಿಂದಿಯ ಡಿಬೆಟ್ ಕಾಂಪಿಟಿಶನ್ ನಲ್ಲಿ ಪಾಲ್ಗೊಂಡಿದ್ದೆ. ವಿಷಯ: “ವಿಜ್ಞಾನದ ವರದಾನದಿಂದ ದೇಶವು ಪ್ರಗತಿ ಸಾಧಿಸುತ್ತದೆ” ನಾನು ಅದಕ್ಕೆ ವಿರೋಧವಾಗಿ ಮಾತನಾಡಿ ರಾಜ್ಯಮಟ್ಟಕ್ಕೂ ಸೆಲೆಕ್ಟ್ ಆಗಿದ್ದೆ. ಈ ವಿಚಾರ ಇಂದು ಯಾಕೆ ನೆನಪಿಗೆ ಬಂತು ಅಂದರೆ ನಾಳೆ ಬೆಳಿಗ್ಗೆ ಬೆಂಗಳೂರಿಗೆ ಹೊರಟಿದ್ದೇವೆ. ಇವತ್ತು ಬೆಳಿಗ್ಗೆ ವಾಶಿಂಗ್ ಮಿಶನ್ ಕೆಟ್ಟು ನಿಂತಿತು. ಫುಲ್ಲೀ ಆಟೋಮ್ಯಾಟಿಕ್. ಬಟ್ಟೆ ತುಂಬಿ ಸ್ವಿಚ್ ಆನ್ ಮಾಡಿದರೆ ಸಾಕು, ಒಂದು ಗಂಟೆಯಲ್ಲಿ ನಮ್ಮ ಬಟ್ಟೆ ವಾಶ್ ಆಗಿ ಇಸ್ತ್ರಿಗೆ ರಡಿ. ಅರೆ, ನಾಳೆಗೆ ಬಟ್ಟೆ.. ದೇವರೇ ಗತಿ! ಬಟ್ಟೆಯನ್ನು ಕಲ್ಲಿನ ಮೇಲೆ ಒಗೆಯುವುದು ಮರೆತೇ ಹೋಗಿದೆಯಲ್ಲಾ! ಅಷ್ಟೇಕೆ? ನೀರಿನ ಪಂಪ್ ಆನ್ ಮಾಡಬೇಕಿಲ್ಲ. ಸಂಪಲ್ಲಿ ನೀರಿದ್ದರೆ ಓವರ್ ಹೆಡ್ ಟ್ಯಾಂಕ್ ಭರ್ತಿ ಆಗುತ್ತೆ! ಖಾಲಿಯಾದರೆ ತುಂಬಿಕೊಳ್ಳುತ್ತೆ. ನೀವೇನೂ ಯೋಚನೆ ಮಾಡಬೇಕಿಲ್ಲ. ಅಬ್ಭಾ! ಇನ್ನೂ ಏನೇನು ಬಂದಿದೆ, ಹಾಗೇ ಪಟ್ಟಿ ಮಾಡುತ್ತಾ ಹೋದರೆ…ಫ್ರಿಜ್,ಕುಕ್ಕರ್, ಟಿ.ವಿ, ಹೋಮ್ ತಿಯೇಟರ್ ಸಿಸ್ಟೆಮ್, ವಾಟರ್ ಪ್ಯೂರಿಫೈಯ್ಯರ್, ನೆಲ ಗುಡಿಸುವ-ಒರೆಸುವ ಮೆಶಿನ್, ಸೋಲಾರ್ ಹೀಟರ್, ಎಲಿಕ್ಟ್ರಿಕ್ ಗೀಸರ್, ಹೀಟರ್, ಗ್ಯಾಸ್ ಸ್ಟೌವ್, ಗ್ಯಾಸ್ ಗೀಸರ್, ಡಿ.ವಿ.ಡಿ ಪ್ಲೆಯರ್, ಕಂಪ್ಯೂಟರ್, ಮೊಬೈಲ್, ಏರ್ ಕಂಡೀಶನರ್, ರೂಮ್ ಹೀಟರ್……..ಇನ್ನೂ ಏನೇನೋ ಇದೆ.
ಎಲ್ಲವೂ ಸುಸ್ಥಿತಿಯಲ್ಲಿ ಕೆಲಸ ಮಾಡ್ತಾ ಇದ್ರೆ ನಿಮ್ಮ ಮಾನಸಿಕ ಸ್ಥಿತಿ ಸರಿಯಾಗಿರುತ್ತೆ. ಯಾವುದಾದರೂ ಒಂದು ಕೆಟ್ಟರೂ ಅವತ್ತು ಜೀವನ ವ್ಯತ್ಯಾಸ ಆಯ್ತು ಎಂದೇ ತಿಳಿಯಬೇಕು. ಎಲ್ಲವೂ ಯಂತ್ರಗಳೇ. ಒಂದಿಲ್ಲೊಂದು ಭಾಗಗಳು ಕೈ ಕೊಡುವುದು ಸಾಮಾನ್ಯ. ನಿತ್ಯವೂ ಒಬ್ಬನಲ್ಲಾ ಒಬ್ಬ ಮೆಖ್ಯಾನಿಕ್ ಹತ್ತಿರ ಅಲೆಯುವುದು ತಪ್ಪುವುದಿಲ್ಲ. ಸತ್ಯವಾಗಿ ಹೇಳಿ, ಈ ಉಪಕರಣಗಳಿಗೆ ದಾಸರಾಗಿರುವ ನಾವು ನಿರಾಳವಾಗಿ ಸುಖೀ ಜೀವನ ನಡೆಸುತ್ತಿದ್ದೀವೆಯೇ?
ಮೂರ್ನಾಲ್ಕು ದಶಕಗಳ ಹಿಂದಿನ ಜೀವನವನ್ನು ಒಮ್ಮೆ ಅವಲೋಕನ ಮಾಡೋಣ. ನಾವು ಚಿಕ್ಕವರಿದ್ದಾಗ ಬಚ್ಚಲು ಮನೆಯಲ್ಲಿ ಹಂಡೆ ಒಲೆ ಇರ್ತಾಇತ್ತು. ಸ್ನಾನಕ್ಕೆ ನೀರು ಕಾಯಿಸಲು ಒಲೆ ಹಚ್ಚಲೇ ಬೇಕಾಗಿತ್ತಲ್ಲಾ! ನಮ್ಮಮ್ಮ ಎರಡು ಬಿಡಿ ಮುತ್ತಗದ ಎಲೆ ತೆಗೆದು ಕೊಂಡು ರಾಗಿ ಹಿಟ್ಟೋ,ಜೋಳದ ಹಿಟ್ಟೋ, ಅಕ್ಕಿ ಹಿಟ್ಟೋ ,ಯಾವುದು ಮನೆಯಲ್ಲಿರುತ್ತಿತ್ತೋ ಆಹಿಟ್ಟನ್ನು ಕಲಸಿ ಎರಡು ಎಲೆಗಳ ಮಧ್ಯ ಉಂಡೆ ಮಾಡಿ ಇಟ್ಟು ಅದುಮಿದರೆ ಅದು ಅಪ್ಪಚ್ಚಿ ಯಾಗ್ತಾ ಇತ್ತು [ಅಪ್ಪಚ್ಚಿ ಅಂದರೆ ಗೊತ್ತಾಗಲಿಲ್ಲವೇನೋ ,ರೊಟ್ಟಿಯ ಶೇಪ್ ಬರುತ್ತಿತ್ತು. ಅದಕ್ಕೇ ಇರಬಹುದು , ಮಕ್ಕಳಿಗೆ ಅಪ್ಪಚ್ಚಿ ಕೊಡ್ತೀನಿ, ಅಳಬೇಡ ಅಂತಾ ಇದ್ರು.] ಅದನ್ನು ಬಚ್ಚಲು ಮನೆಯ ಒಲೆಯೊಳಗೆ ಹಾಕಿದರೆ ಎರಡು ನಿಮಿಷದಲ್ಲಿ ಬೆಳಗಿನ ತಿಂಡಿ ರಡಿ. ಅದನ್ನು ತಿಂದುಕೊಂಡು ಸ್ಕೂಲಿಗೆ ಹೋಗ್ತಾ ಇದ್ವು. ಅಪ್ಪನ ಜೊತೆಗೆ ಅಮ್ಮನೂ ಹೊಲಕ್ಕೋ ತೋಟಕ್ಕೋ ಹೋಗಿ ಕೆಲಸವನ್ನು ಮಾಡಿಕೊಂಡು ಬಂದು ನಮಗೆಲ್ಲಾ ಹುಣಸೇ ಸಾರೋ ಹುರುಳೀಕಾಳು ಸಾರೋ ,ಯಾವುದನ್ನಾದರೂ ಮಾಡಿ , ಅನ್ನವನ್ನು ಮಾಡಿ ಬಡಿಸ್ತಾ ಇದ್ರು. ಆಗಿನ ಕಾಲದಲ್ಲಿ ಈ ಮೇಲೆ ಹೇಳಿರುವ ಯಾವ ಉಪಕರಣವೂ ಇರಲಿಲ್ಲ. ಕೆಲವರ ಮನೆಯಲ್ಲಿ ರೇಡಿಯೋ ಇರ್ತಾ ಇತ್ತು. ಬೆಳಿಗ್ಗೆ ಸುಪ್ರಭಾತ ಹಾಕಿದರೆ ಬೀದಿಗೆಲ್ಲಾ ಕೇಳ್ತಾ ಇತ್ತು.
ಅಮ್ಮನಾದರೋ ನಮಗೆ ಊಟ ತಯಾರು ಮಾಡಿ,ಊರ ಮುಂದಿನ ಕೆರೆಗೆ ಹೋಗಿ ಬಟ್ಟೆ ಒಗೆದುಕೊಂದು, ಪಾತ್ರೆ ತೊಳೆದುಕೊಂಡು ಬಂದು ,ಅದೂ ಅಲ್ಲದೆ ತೋಟಕ್ಕೋ ಹೊಲಕ್ಕೋ ಹೋಗಿ ಹಸುವನ್ನು ಮೇಯಿಸಿ, ದನಗಳನ್ನು ಕಟ್ಟುವ ಕೊಟ್ಟಿಗೆ ಗುಡಿಸಿ, ಸಗಣಿಯನ್ನು ಹಿತ್ತಲಿಗೆ ಹಾಕಿ, ಇಷ್ಟೆಲ್ಲಾ ಮಾಡಿದರೂ ಒಂದು ದಿನವೂ ದೇವರ ಪೂಜೆ ತಪ್ಪಿಸ್ತಾ ಇರಲಿಲ್ಲ.
ಅವರ ದೇವರ ಪೂಜೆ ,ದೇವರಿಗೆ ಮಾಡುತ್ತಿದ್ದ ನೈವೇದ್ಯ ಇದರ ಬಗ್ಗೆ ಬರೆದರೆ ನಿಮಗೆ ಆಶ್ಚರ್ಯ ಆಗುತ್ತೆ. ದೇವರ ಶ್ಲೋಕಗಳನ್ನು ಹೇಳ್ತಾ ಮನೆ ಕೆಲಸವನ್ನೆಲ್ಲಾ ಮಾಡ್ತಾ ಇದ್ರು, ಒಲೆಯ ಮೇಲಿಂದ ಅನ್ನದ ತಪ್ಪಲೆ ಕೆಳಗಿಳಿಸುತ್ತಲೇ “ಭಗವಂತಾ ನಿನಗೆ ಅರ್ಪಿತ” ಅಂತಾ ಹೇಳಿ ಒಂದು ಅಗಳು ಅನ್ನವನ್ನು ಒಲೆಗೆ ಹಾಕಿ ನೈವೇದ್ಯ ಮುಗಿಸಿ ಬಿಡ್ತಾ ಇದ್ರು. ಆದರೂ ಹಾಡು, ಹಸೆ, ಭಜನೆ, ಎಲ್ಲಕ್ಕೂ ಅವರಿಗೆ ಸಮಯ ಇರ್ತಾಇತ್ತು.
...ಇವತ್ತು ಎಲ್ಲಾ ಸೌಕರ್ಯಗಳೂ ಇವೆ. ಆದರೆ ಮನಸ್ಸಿಗೆ ನೆಮ್ಮದಿಯೇ ಇಲ್ಲವಲ್ಲಾ! ಒಂದಿಲ್ಲೊಂದು ಉಪಕರಣಗಳು ಕೆಟ್ಟು ನಿತ್ಯವೂ ಗೋಳು ತಪ್ಪಲಿಲ್ಲವಲ್ಲಾ..ಇನ್ನೆಲ್ಲಿಂದ ದೇವರ ಪೂಜೆಗೆ, ಭಜನೆ ಹಾಡಿಗೆ ಸಮಯ ಸಿಗಬೇಕು. ಇವತ್ತಿನ ಜನಕ್ಕೆ ದಿನದ ಇಪ್ಪತ್ನಾಲ್ಕು ಗಂಟೆ ಸಾಕಾಗುವುದಿಲ್ಲ. ಅಷ್ಟು ಬಿಸಿ. ತಪ್ಪದೇ ದಾರಾವಾಹಿಗಳನ್ನೆಲ್ಲಾ ನೋಡಲೇ ಬೇಕಲ್ಲಾ!..ಒಂದುದಿನ ನೋಡದಿದ್ದರೆ ಪಕ್ಕದ ಮನೆಯವರನ್ನು “ಇವತ್ತು ಏನ್ರೀ ಆಯ್ತು ಅವಳನ್ನೇ ಮದುವೆ ಯಾದನೋ ಅಥವಾ ಆ ಮಾಟಗಾತಿಯನ್ನೋ?” ದಾರವಾಹಿ ನೋಡದಿದ್ದರೆ ಪರಿತಪಿಸುವ ಈ ಜನರನ್ನು ನೋಡಿದಾಗ ಮರುಕ ಉಂಟಾಗುತ್ತದೆ.
ನೋಡೀ, ನಮ್ಮ ವಿಜ್ಞಾನದ ಕೊಡುಗೆಯನ್ನು ಹೇಗೆ ಉಪಯೋಗಿಸಿಕೊಳ್ತಾ ಇದೀವಿ! ಯಂತ್ರಗಳು ನಮ್ಮ ನಿಯಂತ್ರಣದಲ್ಲಿರಬೇಕೇ? ನಾವು ಅದರ ನಿಯಂತ್ರಣದಲ್ಲಿರಬೇಕೇ? ನಮ್ಮ ನಿಯಂತ್ರಣದಲ್ಲಿರಲಿ, ಎಂದು ಈ ಉಪಕರಣಗಳ ಸಂಶೋಧನೆಯಾಯ್ತು. ಆದರೆ ನಿಜವಾಗಿ ಅವುಗಳ ನಿಯಂತ್ರಣದಲ್ಲಿ ನಾವಿಲ್ಲವೇ? ಆತ್ಮಾವಲೋಕನ ಮಾಡಿಕೊಳ್ಳೋಣ.
ಒಂದು ರೀತಿಯಲ್ಲಿ ಇದು ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳುವ ಸಂಧಿಕಾಲ. ಸ್ವರಾಜ್ಯ ಬಂದು ಆರು ದಶಕಗಳು ಕಳೆಯಿತು. ಇನ್ನೂ ನಮ್ಮಿಂದ ಗುಲಾಮೀ ಪ್ರವೃತ್ತಿ ದೂರವಾಗಿ ಸ್ವಂತಿಕೆಯ ಚಿಂತನೆ ಮಾಡುವ ಸಾಮರ್ಥ್ಯ ಬಂದೇ ಇಲ್ಲ. ಇನ್ನೂ ಹೊರದೇಶಗಳತ್ತ ಮುಖಮಾಡುವ ಹೀನಾಯ ನಡವಳಿಕೆ!
ವಿಜ್ಞಾನದ ಉಪಯೋಗದ ವಿಚಾರದಲ್ಲೂ ಅಷ್ಟೇ. ನಮ್ಮ ಜೀವನಕ್ಕೆ ಇಲ್ಲಿನ ಪರಂಪರೆಗೆ ವಿಜ್ಞಾನದ ಬಳಕೆ ಹೇಗೆ ಆಗಬೇಕೆಂಬ ಚಿಂತನ-ಮಂಥನ ನಡೆದೇ ಇಲ್ಲ. ಎಷ್ಟರ ಮಟ್ಟಿಗೆ ನಾವು ವಿಜ್ಞಾನದ ಉಪಯೋಗ ಪಡೆಯಬೇಕು, ನಾವು ಯಂತ್ರಗಳ ದಾಸರಾಗುವ ಬದಲು ನಮ್ಮ ನಿಯಂತ್ರಣದಲ್ಲಿ ಯಂತ್ರಗಳು ಇರಬೇಡವೇ? ನೀವೇನಂತೀರಾ?
Comments
ತಮ್ಮ ಮಾತು ಸತ್ಯ ಶ್ರೀಧರ ಅವರೆ,
ತಮ್ಮ ಮಾತು ಸತ್ಯ ಶ್ರೀಧರ ಅವರೆ, ನಾವಿ0ದು ಯ0ತ್ರಗಳ ದಾಸರು. ಮನಸನ್ನು ವಿಚಾರಕ್ಕೆ ಒಡ್ಡುವ ಲೇಖನ. ಧನ್ಯವಾದಗಳು. ರಾಮೋ.
ಶ್ರೀಧರ್ ಅವರೆ, ಪಾಪ..ಹೆಂಗಸರ
ಶ್ರೀಧರ್ ಅವರೆ, ಪಾಪ..ಹೆಂಗಸರ ಅರ್ಧ ಜೀವನವೇ "ಬಟ್ಟೆ ಒಗೆಯುವಲ್ಲಿ" ಮುಗಿಯುತ್ತಿತ್ತು. ಒಂದು ರಾಶಿ ಒಗೆದು, ಒಣಗಿಸಿ, ಮಡಚಿ ಇಡುವುದರೊಳಗೆ ಮಾರನೇ ದಿನದ ಬಟ್ಟೆಗಳು ತಯಾರು. ಹೀಗೇ ಅಡುಗೆ ಮಾಡಿ, ಪಾತ್ರೆ ರಾಶಿ ತೊಳೆದು ಇಡುವುದರೊಳಗೆ ಮುಂದಿನ ಅಡುಗೆ ತಯಾರಿ ಶುರು ಹಚ್ಚಬೇಕು. ಆ ಕಾಲದ ಹೆಂಗಸರು ಬಹಳ ಕಷ್ಟಪಟ್ಟಿದ್ದಾರೆ. ಈಗಿನವರೂ ಕಮ್ಮಿಯೇನಿಲ್ಲ. ಸ್ವಲ್ಪ ಜಾಸ್ತಿ ಸಮಯ ಸಿಕ್ಕಿದ್ದರಲ್ಲಿ ಟಿ.ವಿ. ನೋಡಿ ಖುಷಿ ಪಡಲಿ ಬಿಡಿ. ಕೈಬೆರಳ ತುದಿಯ ಆದೇಶಕ್ಕೆ ಸೇವಕರಂತೆ ಕೆಲಸ ಮಾಡುವ ಯಂತ್ರಗಳನ್ನು ತಯಾರಿಸಿದ ವಿಜ್ಞಾನಿಗಳಿಗೆ ನಮೋ ನಮಃ. ಯಂತ್ರಗಳನ್ನು ಪ್ರೀತಿಯಿಂದ ನೋಡಿಕೊಂಡರೆ ಹಾಳಾಗುವ ಪ್ರಶ್ನೆಯೇ ಇಲ್ಲ- ಉದಾ- ನನ್ನ "ಪರ್ಕಟ್ ಸ್ಕೂಟರ್", ಈಗ ಬರೆಯುತ್ತಿರುವ "ಕಂಪ್ಯೂಟರ್".
In reply to ಶ್ರೀಧರ್ ಅವರೆ, ಪಾಪ..ಹೆಂಗಸರ by ಗಣೇಶ
ನೂರಕ್ಕೆ ನೂರು ಒಪ್ಪುವ ಮಾತು.
ನೂರಕ್ಕೆ ನೂರು ಒಪ್ಪುವ ಮಾತು.
ಆಗಿನ ಕಾಲದ ನಮ್ಮ ತಾಯ0ದಿರ ಜೀವನ ಹೇಗಿತ್ತು . ಮಸಿ ಹಿಡಿದ ಅಡಿಗೆಯ ಮನೆಯ ಲ್ಲಿ ಸೌದೆ ಒಲೆಯ ಹೊಗೆ ಕುಡಿದೇ ಜೀವನ ಕಳೆದವರನ್ನು ಯೋಚಿಸಿದರೆ ಅಯ್ಯೋ ಅನ್ನಿಸುತ್ತದೆ.
ಯ0ತ್ರಗಳು ಬ0ದಿದ್ದರಿ0ದ ಹೆ0ಗಸರ ಜೀವನ ಸ್ವಲ್ಪ ಸುಖವಾಯಿತು. ಅದಿಲ್ಲದಿದ್ದರೆ ನಮ್ಮ ಹೆಣ್ಣುಮಕ್ಕಳು ಇ0ದಿನ0ತೆ ಹೊರಗೆ ಹೋಗಿ ದಿನವಿಡೀ ಕೆಲಸ ಮಾಡುವುದು ಸಾಧ್ಯವಿತ್ತೇ?
ನಾರಾಯಣ
ವಾಶಿಂಗ್ ಮೇಶೀನ್ ಬಗ್ಗೆ ನೀವು
ವಾಶಿಂಗ್ ಮೇಶೀನ್ ಬಗ್ಗೆ ನೀವು ಹೇಳಿದ ವಿಷಯ ಓದಿದಾಗ ಅನ್ನಿಸಿದ್ದು "ಬಟ್ಟೆ ಒಗೆದು, ಒಣಗಿಸಿ, ಸ್ಟೀಮ್ ಹೀಟ್'ನಲ್ಲಿ ಹದವಾಗಿ ಇಸ್ತ್ರಿ ಮಾಡಿ, ಅದರ ಮುಂದೆ ನಿಂತಾಗ ಬಟ್ಟೆಯನ್ನೂ ತೊಡಿಸಿಬಿಡುವ" ಕಾಲ ದೂರವಿಲ್ಲ ಅಂತ. ಇರಲಿ ... ನಿಮ್ಮ ಬರಹದ ಟೈಟಲ್ "ನಾವು ಯಂತ್ರಗಳ ದಾಸರಿದ್ದೇವೆಯೇ?" ಅಂತ ... ಲೇಖನ ಓದಿದ ಮೇಲೆ ಅನ್ನಿಸಿದ್ದು "ನಾವು ಯಂತ್ರಗಳಾಗಿದ್ದೇವೆಯೇ?" ಅಂತ :-(