ಮಲ್ಲಿಗೆ ಮರೆಯಾಗುತ್ತಿದೆಯೇ.. ಮೆಲ್ಲಗೆ

Submitted by ಮಮತಾ ಕಾಪು on Tue, 01/29/2013 - 16:34

ಹೂ ಎಲ್ಲರಿಗೂ ಪ್ರಿಯವಾದ ವಸ್ತು . ಅದು ಯಾವುದೇ ಆಗಿರಲಿ ಅದರ ಅಂದ- ಚೆಂದ, ವಾಸನೆ-ಸುವಾಸನೆ, ಬಣ್ಣ, ವಿವಿಧ ರೀತಿಯ ಆಕಾರಗಳು ಹೀಗೆ ಒಂದಲ್ಲ ಒಂದು ವಿಧದಿಂದ ನಮ್ಮನ್ನು ಅವುಗಳತ್ತ ಆಕರ್ಷಿಸುತ್ತದೆ.  ಸಾಮಾನ್ಯವಾಗಿ ನಮ್ಮಲ್ಲಿ ಅತೀ ಹೆಚ್ಚಾಗಿ ಬಳಕೆಯಾಗುತ್ತಿರುವ ಹೂವುಗಳೆಂದರೆ ಗುಲಾಬಿ, ಮಲ್ಲಿಗೆ, ಸೇವಂತಿಗೆ. ಮಲ್ಲಿಗೆಯ ಕಂಪು ಎಲ್ಲರ ಮನವನ್ನೂ ಮುದಗೊಳಿಸುವಂತದ್ದು. ಮನೆಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮದಲ್ಲೂ ಇದು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಮಾರುಕಟ್ಟೆಗಳಲ್ಲಿ ಅಂದವಾಗಿ ನೇಯ್ದು ಜೋಡಿಸಿದ ಮಲ್ಲಿಗೆಗಳನ್ನು ಖರೀದಿಸಲು ಹೋದಾಗ ಆದರ ಬೆಲೆ ಕೇಳಿ ಇಷ್ಟೊಂದು ಬೆಲೆಯಾ? ಎನ್ನುವಂತಿರುತ್ತದೆ. ಹಬ್ಬ ಹರಿದಿನ,ಮದುವೆ ಸಮಾರಂಭಗಳಲ್ಲಿ ಎಷ್ಟೇ ದುಬಾರಿಯಾದರೂ ಕೊಂಡುಕೊಳ್ಳಲೇಬೇಕಾದಂತಹ ಅನಿವಾರ್ಯತೆ. ಹಳ್ಳಿಗಳಲ್ಲಿ ಹೆಚ್ಚಾಗಿ ಎಲ್ಲರ ಮನೆಯಲ್ಲೂ ಕನಿಷ್ಠ ಒಂದಾದರೂ ಮಲ್ಲಿಗೆ ಗಿಡ ನೆಡುವುದು ರೂಢಿ, ಅದು ಸೂಸುವ ಸುಗಂಧಕ್ಕಾಗಿ. ಮಲ್ಲಿಗೆಯಾ ಕಂಪು.. ಮನಸ್ಸಿಗೆ ಇಂಪು..ಮನೆಬಾಗಿಲಿಗೆ ಯಾರಾದರೂ ಬಂದಾಗ ಒಳ್ಳೆ ಸುವಾಸನೆ ಇರಲಿ ಎಂಬುದು ಅವರ ಆಶಯ.

ಹಿಂದೆ ನಮ್ಮ ಮನೆಯಲ್ಲೂ ಮಲ್ಲಿಗೆ ಹೂವಿನ ಒಂದು ಪುಟ್ಟದಾದ ತೋಟವಿತ್ತು. ನಾವೆಲ್ಲಾ ಸಣ್ಣವರಿದ್ದಾಗ ಶಾಲೆಯಿಂದ ಬಂದ ಕೂಡಲೇ ಮರುದಿನದ ಮೊಗ್ಗುಗಳನ್ನು ಆಯ್ದು ನಂತರ ಅವನ್ನು ದಾರದಿಂದ ನೇಯುತ್ತಿದ್ದೆವು. ಅಂದಿನ ಆ ದಿನಗಳಲ್ಲಿ ದೊಡ್ಡ ಬುಟ್ಟಿಯ ತುಂಬಾ ಈ ಮೊಗ್ಗುಗಳು ಸಿಗುತ್ತಿದ್ದವು. ಅವುಗಳನ್ನು ವಿಧ-ವಿಧ ವಾಗಿ ನೇಯ್ದು ಸಂತೋಷಪಡುತ್ತಿದ್ದೆವು. ಅಂದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಈ ಹೂವುಗಳು ಇರುತ್ತಿದ್ದರಿಂದ ಯಾರೂ ಮಾರುಕಟ್ಟೆಯಿಂದ ತರಬೇಕಾಗಿರಲಿಲ್ಲ. ಅಲ್ಲದೆ ಈಗಿನಂತಹ ಧಾರಣೆಯೂ ಇರಲಿಲ್ಲ. ಹಾಗಾಗಿ ಕಟ್ಟಿದ ಹೂವುಗಳನ್ನು ದೇವರ ಪೊಟೋಗಳಿಗೆ ಹಾಗೂ ಪೂಜೆಗೆ ಇಡುವುದು, ಇನ್ನುಳಿದಿದ್ದು ಶಾಲೆಗೆ ಹೋಗುವಾಗ ನಮ್ಮ ತಲೆಯಲ್ಲಿ ರಾರಾಜಿಸುತ್ತಿದ್ದುವು. ಮುಡಿತುಂಬ ಹೂ ಮಲ್ಲಿಗೆ ಮುಡಿದು ಶಾಲೆಗೆ ಹೋಗುವುದೆಂದರೆ ಅದೊಂದು ಸಂಭ್ರಮದ ಕ್ಷಣವಾಗುತ್ತಿತ್ತು. ಅದೇ ಇಂದು ಕೆಲವು ಶಾಲೆಗಳು ಹೂ ಮುಡಿದುಕೊಂಡು ಬರುವುದಕ್ಕೂ ಅವಕಾಶ ನೀಡುತ್ತಿಲ್ಲವಲ್ಲ ಎಂತಹ ವಿಪರ್ಯಾಸ ನೋಡಿ.

ಮಲ್ಲಿಗೆಯನ್ನು ಹಲವಾರು ರೀತಿಯಲ್ಲಿ ನೇಯಲಾಗುತ್ತಿತ್ತು. ಅತಿ ಸುಲಭ ವಿಧಾನವೆಂದರೆ ದಾರವನ್ನು ಸೂಜಿಗೆ ಪೋಣಿಸಿ ಹೂವಿನ ದಂಟನ್ನು ಅವುಗಳಿಂದ ಪೋಣಿಸುತ್ತಾ ಹೋಗುವುದು. ಇದು ಸಾಮಾನ್ಯವಾಗಿ ಎಲ್ಲರೂ ಮಾಡುವಂತಹ ಸುಲಭ ವಿಧಾನ. ಇನ್ನೊಂದು ಸರಳ ವಿಧಾನವೆಂದರೆ ಎಡದ ಕೈಯಲ್ಲಿ ದಾರವನ್ನು ಹಿಡಿದುಕೊಂಡು ಹೂವುಗಳನ್ನು ಅದರ ಮಧ್ಯದಲ್ಲಿಟ್ಟು ಬಲದ ಕೈಯಿಂದ ದಾರಗಳನ್ನು ಬೆರಳಿನ ನಡುವೆ ಸುತ್ತಿ ಹೂವಿನ ಸುತ್ತ ಉರುಳು ಹಾಕುವುದು. ಹೀಗೆ ಕಟ್ಟಿದ ಹೂವುಗಳು ಸಂಜೆಯವರೆಗೂ ಉದುರುತ್ತಿರಲಿಲ್ಲ. ಇನ್ನೊಂದು ತುಸು ಕಷ್ಟದ ವಿಧಾನ, ನೆಲದ ಮೇಲೆ ಕುಳಿತು  ದಾರದ ಒಂದು ತುದಿಯನ್ನು ಕಾಳಿನ ಹೆಬ್ಬೆರಳಿಗೆ ಸುತ್ತಿ, ಇನ್ನೊಂದು ತುದಿಯನ್ನು ಬಾಯಲ್ಲಿ ಕಚ್ಚಿ ಹಿಡಿದುಕೊಂಡು, ದಾರದ ಮಧ್ಯಭಾಗದಲ್ಲಿ ಹೂವುಗಳನ್ನಿಟ್ಟು, ಬಾಯಲ್ಲಿದ್ದ ದಾರದ ತುದಿಯಿಂದ ಪೋಣಿಸುತ್ತಾ ಬರುವುದು. ಈ ರೀತಿ ನೇಯ್ದರೆ ಆ ಹೂ ಮಾಲೆಗೆ ಬೇರೆಯದೇ ರೀತಿಯಾದ ಕಳೆ ಬರುತ್ತಿತ್ತು. ಆದರೆ ಇದು ನೋಡಲು ಮಾತ್ರ ಬಹು ಸುಂದರವಾಗಿ ಕಾಣುತ್ತಿತ್ತು, ಬೇಗನೆ ಹೂವುಗಳು ಸಡಿಗೊಂಡು ಉದುರುತ್ತಿದ್ದವು. ಹೀಗೆ ಹಲವಾರು ರೀತಿಯಲ್ಲಿ ಹೂವುಗಳನ್ನು ನೇಯಲಾಗುತ್ತಿತ್ತು. ಆದರೆ ಇದು ಎಲ್ಲರಿಂದಲೂ ಸಾಧ್ಯವಾಗುತ್ತಿರಲಿಲ್ಲ. ಗಂಡಾಗಲೀ ಹೆಣ್ಣಾಗಲೀ ಅತೀ ಚುರುಕಿನಿಂದ ಕಾರ್ಯನಿರ್ವಹಿಸುವ ಕೈಗಳಲ್ಲಿ ಮಾತ್ರ ಈ ಕೆಲಸ ಸಾಧ್ಯವಾಗುವುದು.
 ಯಾವುದಾದರೂ ಹಬ್ಬ -ಹರಿದಿನ, ಮದುವೆಗಳ ವಿಶೇಷತೆಯಿದ್ದರೆ ಹೂ ಕಟ್ಟುವುದೇ ಒಂದು ಸಂಭ್ರಮ. ಇಂದು ಹಳ್ಳಿಗಳಲ್ಲೂ ಮಲ್ಲಿಗೆ ಗಿಡಗಳು ಅಲ್ಲೊಂದಿಲ್ಲೊಂದು ಮಾತ್ರ ಕಾಣಸಿಗುತ್ತವೆ. ಉದ್ಯೋಗವನ್ನರಸುತ್ತಾ ಮಕ್ಕಳೆಲ್ಲಾ ಪಟ್ಟಣದತ್ತ ಮುಖ ಮಾಡುತ್ತಿದ್ದಂತೆ, ಅರಳಿದ ಹೂವುಗಳೂ ಗಿಡದಲ್ಲೇ ಬಾಡಿ ಹೋಗುತ್ತವೆ. ಹಾಗಂತ ಕಾಣಸಿಗುವುದೇ ಇಲ್ಲ ಎಂದಲ್ಲ. ಮೊದಲಿನ ಹಾಗೆ ಎಲ್ಲರ ಮನೆಯಲ್ಲೂ ಇಲ್ಲ, ಬದಲಾಗಿ ಅದನ್ನೇ ಕೃಷಿ ಮಾಡಿಕೊಂಡವರ ಬಳಿ ಮಾತ್ರ ಹೆಚ್ಚಾಗಿ ಕಾಣಸಿಗುವುದು. ರಾಸಾಯನಿಕ ಗೊಬ್ಬರಗಳ ಉಪಯೋಗ ಹಾಗೂ ಕೀಟನಾಶಕಗಳನ್ನು ಸಿಂಪಡಿಸುವುದರಿಂದ ಒಂದು ಬಾರಿ ಮಾತ್ರ ಒಳ್ಳೆಯ ಫಸಲು ಬರುವುದು ಅನಂತರ ಇದೂ ನಷ್ಟ ತರುವ ವ್ಯಾಪಾರ ಎಂಬುದು ನಮ್ಮ ನೆರೆಕರೆಯ ಮಲ್ಲಿಗೆ ಕೃಷಿಕರ ಮಾತು. ಸೇವಂತಿಗೆ, ಜಾಜಿ, ಕನಕಾಂಬರ, ನಕ್ಷತ್ರ ಹೂವು ಹೀಗೆ ಮನೆಯಂಗಳದ ತುಂಬಾ ಹರಡಿಕೊಂಡಿರುತ್ತಿದ್ದ ಬಗೆ-ಬಗೆಯ ಹೂವುಗಳು ಇಂದು ಬಲು ಅಪರೂಪ. ಹೂ ಕಟ್ಟುವವರೂ ಇಲ್ಲ..ಕಟ್ಟಿದರೂ ಮುಡಿಯುವವರಿಲ್ಲ ಅನ್ನುವ ಹಾಗೆ ಆಗಿದೆ.

ಚಿತ್ರಕೃಪೆ:   http://www.indiamart.com/flowerfactory/flowers.html