ಪ್ರೇಮಕ್ಕೊಂದು ದಿನ ಬೇಕೆ? ಪ್ರೇಮಕ್ಕೊಂದೇ ದಿನ ಸಾಕೆ?

ಪ್ರೇಮಕ್ಕೊಂದು ದಿನ ಬೇಕೆ? ಪ್ರೇಮಕ್ಕೊಂದೇ ದಿನ ಸಾಕೆ?

ಪವಿತ್ರ ಸಮ್ಮಿಲನದಿಂದ ಅವಳ ಗರ್ಭದಲ್ಲಿ ಉದಿಸಿದ ನಮ್ಮನ್ನು ಜತನದಿಂದ ಕಾಪಿಟ್ಟು, ಉಸಿರಿರುವವರೆಗೂ ಪೊರೆವ ಅಮ್ಮನಿಗೊಂದು ದಿನ! ಹಗಲಿರುಳು ದುಡಿಯುತ್ತಾ ಕಣ್ಣಲ್ಲಿ ಕಣ್ಣಿಟ್ಟು ಬದುಕನ್ನು ರೂಪಿಸುವ ಅಪ್ಪನಿಗೊಂದುದಿನ!
ಭೂಮಿಗೊಂದುದಿನ! ನೀರಿಗೊಂದು! ಕೊನೆಗೆ,  ಮಧುರವಾದ ತೀರಾ ಖಾಸಗಿ ಅನುಭೂತಿ ಪ್ರೇಮಕ್ಕೂ ಒಂದುದಿನ! ಉಡುವುದು, ಉಣ್ಣುವುದು, ಶಿಕ್ಷಣ, ಸ್ವೇಚ್ಛಾಚಾರ, ಎಲ್ಲದರಲ್ಲೂ ಪಾಶ್ಚಾತ್ಯರನ್ನ ಅನುಕರಿಸುತ್ತಿರುವ ನಾವು, ನಮ್ಮ ಭಾವನೆಗಳನ್ನೂ ಅವರಲ್ಲಿ ಒತ್ತೆ ಇಟ್ಟಿದ್ದೇವೆ!
                
                 ಫೆ.14 ಪ್ರೇಮಿಗಳ ದಿನ! ಉಸಿರಿನ ಬಿಸಿ ವ್ಯತ್ಯಾಸವಾದರೆ, ಮಾತಿನ ಓಘದಲ್ಲಿ ಏರಿಳಿತವಾದರೆ, ಕೊನೆಗೆ ದೂರದಲ್ಲೆಲ್ಲೋ ಇರುವಾಗಲೂ, ತನ್ನದಾದ ಹೃದಯಕ್ಕಾಗಿ ಮಿಡಿವ, ಬದುಕಿನ ಪ್ರತಿಕ್ಷಣವನ್ನೂ ಒಬ್ಬರು ಮತ್ತೊಬ್ಬರ ಏಳ್ಗೆಗಾಗಿಯೇ ಆಲೋಚಿಸುವ ವರ್ಣಿಸಲಾಗದ ಅನುಭೂತಿಯೇ ಪ್ರೇಮ! 
ಪ್ರೇಮಕ್ಕೊಂದು ದಿನ ಬೇಕೆ? ಪ್ರೇಮಕ್ಕೊಂದೇ ದಿನ ಸಾಕೆ?
              
 ನಿಷ್ಕಲ್ಮಷ ಕೊಡುಕೊಳ್ಳುವಿಕೆಯಿಂದ ಉಂಟಾಗುವ ಸ್ವಾರ್ಥರಹಿತ ಬಾಂಧವ್ಯವೇ ಪ್ರೇಮ! ಆದರೆ ಅದನ್ನೊಂದು ಆಚರಣೆಯ ಚೌಕಟ್ಟಿಗೆ ತಂದು ಪ್ರದರ್ಶಕ ಕಲೆಯ ಲೇಪ ಹಚ್ಚಿದಾಗ, ಅದೊಂದು ತಾನೇ ತಾನಾಗಿ ಹುಟ್ಟುವ ಸಾತ್ವಿಕ ಅನುಭೂತಿಯಾಗದೆ, ಅಹಂಕಾರ, ಒತ್ತಡ, ಅಪ್ರಬುದ್ಧ ಮನಸ್ಥಿತಿಯ ಮನರಂಜನೆಯ ವಸ್ತುವಾದೀತು ಎಂಬುದೇ ನನ್ನ ಆತಂಕ! ಹಾಗೇ ಆಗಿದೆ ಕೂಡ ಎಂಬುದು ನಾವು ಒಪ್ಪಲೇ ಬೇಕಾದ ಸತ್ಯ!
 
                   ಜಾತಿ ಮತ ಮೇಲುಕೀಳುಗಳಾಚೆಗೆ, ಸಂಕುಚಿತತೆಯ  ಸಂಕೋಲೆಯಾಚೆಗೆ ಸುಂದರ ಬದುಕನ್ನು ಕಟ್ಟಿಕೊಳ್ಳಲು ಶ್ರಮಿಸಿದ ಅದೆಷ್ಟೋ ಪ್ರೇಮಿಗಳನ್ನ ಆದರ್ಶವಾಗಿಟ್ಟುಕೊಂಡು ಅದನ್ನೇ ಅಸ್ತ್ರವಾಗಿ ಬಳಸುತ್ತಾ, ತಮ್ಮ ಕಾಮನೆಗಳನ್ನು ಸಮರ್ಥಿಸಿಕೊಳ್ಳುವ ಇಂದಿನ ಯುವಪೀಳಿಗೆಗೆ, ಪ್ರೇಮ-ಕಾಮ ಮೀರಿದ ಸಾಧನೆಯ ಹಾದಿಗೆ ದಿಕ್ಸೂಚಿಯೊಂದು ಬೇಕಾಗಿದೆ. ತಮ್ಮ ಶಕ್ತಿ, ಅನುಭವ, ವಿವೇಕ, ಸಾಮಾನ್ಯ ಪರಿಜ್ಞಾನದ ತಳಹದಿಯ ಮೇಲೆ ಬುದುಕು ಕಟ್ಟಿಕೊಳ್ಳುವ, ತನ್ಮೂಲಕ ಸುಭದ್ರ ಸಮಾಜ ಕಟ್ಟುವ ಮನೋದಾಢ್ರ್ಯ ರ್ಪ ಅವರಲ್ಲಿ ಬೆಳೆಸಬೇಕಿದೆ.
 
               ನಮ್ಮ ವೈಯಕ್ತಿಕ ಒತ್ತಡ, ರಾಜಕೀಯ, ಆರ್ಥಿಕ ಮುಗ್ಗಟ್ಟುಗಳು, ಎಲ್ಲವನ್ನೂ ಒಮ್ಮೆ ಬದಿಗಿಡೋಣ, ಹಿಡಿಯಷ್ಟು ನಸುನಗು, ಬೊಗಸೆಯಷ್ಟು ಪ್ರೀತಿ, ನರನರಗಳಲ್ಲಿ ವಾತ್ಸಲ್ಯ ತುಂಬಿಕೊಂಡು ಆಪ್ಯಾಯತೆಯಿಂದ ನಮ್ಮ ಮಕ್ಕಳನ್ನು ನೇವರಿಸೋಣ, ಅವರು ಯಾವ ವಯೋಮಾನದವರಾದರೂ ಆಗಿರಲಿ, ಪ್ರೀತಿಯ ಹಂಬಲಿಕೆ ಎಲ್ಲ ಮಕ್ಕಳ ಎದೆಯಲ್ಲೂ ಮಡುಗಟ್ಟಿರುತ್ತದೆ! ಅವರ ಸೋಲುಗಳಲ್ಲಿ ಸಾಂತ್ವನ ನೀಡಿ, ಗೆದ್ದಾಗ ಭುಜತಟ್ಟಿ, ಭವಿಷ್ಯದ ಭೀತಿಯಲ್ಲಿ ಸಾವಿನತ್ತ ಮುಖಮಾಡದಂತೆ ಬೆಚ್ಚನೆಯ ಮಡಿಲಲ್ಲಿ ಆಶ್ರಯವಿತ್ತು ಕಾಪಾಡೋಣ! ಹೊರಗಿನ ಆಕರ್ಷಣೆಗಳಿಂದ ನಮ್ಮ ಮಕ್ಕಳು ಹಟಮಾರಿಗಳಾಗಿ, ಅಸಂಬದ್ಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅಪಾಯದಿಂದ ಅವರನ್ನು ರಕ್ಷಿಸೋಣ. ಪ್ರೇಮಿಗಳದಿನದಂತಹ ಎರವಲು ಪಡೆದ ಆಚರಣೆಗಳು ಯುವ ಪೀಳಿಗೆಯ  ಹಕ್ಕು ಎಂಬಂತೆ ನಮ್ಮಲ್ಲಿ ನುಸುಳಲು ಕಾರಣ ಅವರಿಗೆ ನಾವು ಅರ್ಥ ಮಾಡಿಸದ ಸಂಬಂಧಗಳ ಗಟ್ಟಿತನ, ನಮಗೆ ನೀಡಲು ಸಮಯವಿಲ್ಲದ ಭಾವುಕ ಆಸರೆ, ನಮ್ಮ ನಮ್ಮ ಒತ್ತಡಗಳ ಕಾರಣ ಅಭಿವ್ಯಕ್ತಿಸದೆ ಎದೆಯಲ್ಲೇ ಹುದುಗಿಸಿಟ್ಟ ಮಮಕಾರ, ಜೊತೆಗೆ ಜಾಗತೀಕರಣದ ಭೋರ್ಗರೆತದಲ್ಲಿ, ನಮ್ಮ ಮಹತ್ವಾಕಾಂಕ್ಷೆಗಳಿಗೆ ನಲುಗಿಹೋಗುತ್ತಿರುವ ನಮ್ಮ ಮಕ್ಕಳ ಮನಸ್ಸುಗಳು, ನೈತಿಕ ನೆಲೆಗಟ್ಟಿಲ್ಲದ ಶಿಕ್ಷಣ ವ್ಯವಸ್ಥೆ, ಒಂದೇ? ಎರಡೇ? ನಾವು ನಮ್ಮ ತಪ್ಪುಗಳಿಂದಾಗಿ  ಹಾಕಿ ಕೊಟ್ಟ ರಹದಾರಿಗಳು ನೂರಾರು! ಅದನ್ನು ನಾವೇ ಇಂದು ಸರಿಪಡಿಸ ಬೇಕಿದೆ, ಅದಕ್ಕಾಗಿ ಇಂದೇ ಕಾರ್ಯೋನ್ಮುಖರಾಗೋಣ!