ಹಸಿರೇ ಉಸಿರಾದ ನನ್ನೂರು ಬೆಳ್ಳಾಲ

ಹಸಿರೇ ಉಸಿರಾದ ನನ್ನೂರು ಬೆಳ್ಳಾಲ

ಡೆದಷ್ಟೂ ದಾರಿಯೇ, ಯಾವ ಕಡೆಗೆ ಹೋದರೂ ಎರಡು ನದಿಯನ್ನು ದಾಟಲೇ ಬೇಕು, ಆಗೆಲ್ಲಾ ಒಂದು ದ್ವಿ ಚಕ್ರ ವಾಹನ ನೋಡಬೇಕಾದರೂ ಎರಡು ಮೈಲಿ ನಡೆದು ಒಂದು ಹೊಳೆ ದಾಟಲೇಬೇಕು. ಅದಕ್ಕೇ ಹಬ್ಬ ಹರಿದಿನಗಳು, ಅತಿಥಿ ಅಭ್ಯಾಗತರು ಬಂದಾಗ ನಮ್ಮೆಲ್ಲರ ಸಂಭ್ರಮ ವರ್ಣನಾತೀತ.  ಹಸಿರು ಹುಲ್ಲು ಗಿಡ ಮರಗಳ ಸಂಭ್ರಮದ ಸಿರಿ ನನ್ನೂರು ಬೆಳ್ಳಾಲ. ಆಗೆಲ್ಲಾ ಕೇಜಿ ಸ್ಕೂಲುಗಳಿರಲಿಲ್ಲವಲ್ಲ, ಅದಕ್ಕೇ ನನಗೆ ನನ್ನ ಶಾಲೆ ಆರಂಭ ವಾದದ್ದು ನನ್ನ ೬ ನೇವರ್ಷದಲ್ಲಿ, ನನ್ನ ಚಿಕ್ಕಪ್ಪನೇ ನನ್ನ ಗುರು, ಮನೆಯಿಂದ ನಾಲ್ಕು ಮೈಲಿಗಳ ದೂರದಲ್ಲಿತ್ತು ನನ್ನ ಮೊದಲ ಶಾಲೆ ಕುಳ್ಳಂಬಳ್ಳಿಯಲ್ಲಿ. ನಮ್ಮಲ್ಲಿ ತಂದೆ ಚಿಕ್ಕಪ್ಪ ಇಬ್ಬರೂ ಅಧ್ಯಾಪಕರೇ. ಅದಕ್ಕೆ ಮನೆಯಲ್ಲಿ ಒಂದು ಪಕ್ಕಾ ಶಿಸ್ಥಿನ ವಾತಾವರಣ. ಶಾಲೆಗೆ ಹೋಗಿ ಬಂದ ಕೂಡಲೇ ಅದೇ ಬಟ್ಟೇ ಹಾಕಿಕೊಂಡು ಮನೆ ಒಳಕ್ಕೆ ಹೋಗೋ ಹಾಗಿಲ್ಲ.  ಸಂಜೆ ಆರು ಆರೂವರೆಗೆ ಭಜನೆ ಮಾಡಲೇ ಬೇಕು. ಭಜನೆಯ ಅವಧಿ ಎಂದರೆ ಊದುಕಡ್ಡಿ. ಅಂದರೆ ಒಮ್ಮೆ ಹಚ್ಚಿದ ಊದು ಕಡ್ಡಿ ಉರಿದು ಮುಗಿಯುವವರೆಗೆ ಭಜನೆ ಮಾಡಲೇ ಬೇಕು,ಕನಕದಾಸರು, ಪುರಂದರ ದಾಸರು ಅವರದೆಲ್ಲಾ ದೊಡ್ದ ದೊಡ್ಡ ಭಜನೆ ಪುಸ್ತಕಗಳಿರುತ್ತಿದ್ದವು ಮನೆಯಲ್ಲಿ. ರಾಗ ರೋಗ ಏನೂ ಇಲ್ಲ, ಗಟ್ಟಿಯಾಗಿ ಹಾಡಿದೆವೆಂದರೆ ಅದೇ ಭಜನೆ. ಕಾಪಿ ತಿಂಡಿ ಅಂದ್ಕೊಂಡು ನಗಾಡುತ್ತಿದ್ದೆವು ರಾಗದ ಬಗೆಗೆ.ಸಂಜೆ ಆಯಿತೆಂದರೆ ಎಲ್ಲರೂ ವೃತ್ತಾಕಾರವಾಗಿ ದೇವರ ಇದಿರು ಕುಳಿತು ಸರದಿಯಲ್ಲಿ ಹಾಡಬೇಕಿತ್ತು.


ಸಣ್ಣವರಿರುವಾಗ ಕಥೆಗಳು ಅಂದರೆ ಪ್ರಾಣ.ಎಲ್ಲರೂ ಕಥೆ ಹೇಳಲೇ ಬೇಕು ಅಪ್ಪ, ಅಮ್ಮ, ಚಿಕ್ಕಮ್ಮ, ಚಿಕ್ಕಪ್ಪ, ಮತ್ತೆ ಮನೆಗೆ ಅತಿಥಿಗಳಾಗಿ ಬಂದವರು ಎಲ್ಲರಿಗೂ ಈ ಶಿಕ್ಷೆಯೇ. ಅಮ್ಮ ರಂಜನೀಯವಾಗಿ ಕಥೆ ಹೇಳುತ್ತಿದ್ದಳು.  ನನ್ನ ಆಸಕ್ತಿ ನೋಡಿ ಚಿಕ್ಕಪ್ಪ ಶಾಲೆಯಿಂದಲೇ ಕಥೆ ಪುಸ್ತಕ ತಂದು ಓದಲು ಕೊಡುತ್ತಿದ್ದರು. ಅಪ್ಪಯ್ಯ ೧೯೫೬ ರಿಂದ ೧೯೬೬ ರ ವರೆಗೆ ಚಂದಮಾಮ ತರಿಸುತ್ತಿದ್ದರು. ಅದನ್ನು ಹನ್ನೆರಡು ಪುಸ್ತಕಗಳ ಒಂದು ಕಟ್ಟು ಮಾಡಿ ಇಟ್ಟಿದ್ದರು.ಮುಂದೆ ಮಕ್ಕಳಿಗೆ ಓದಲು ಬೇಕಾಗುತ್ತೆ ಅಂತ. ಅದಕ್ಕೇ ನಾನು ೫-೬ ವರ್ಷದವನಿರುವಾಗಲೇ ಅಜ್ಜಿಗೆ ಚಂದಮಾಮ ಓದಿ ಹೇಳುತ್ತಿದ್ದೆ.ಆಗ ಅದೇ ಬಹು ದೊಡ್ಡ ವಿಷಯ, ಮಾಸ್ಟ್ರಮಗ ಅಜ್ಜಿಗೆ ಚಂದಮಾಮ ಓದಿ ಹೇಳ್ತಿದ್ದ ಅಂತೆ.


ಸುತ್ತಲೂ ಹಸಿರು ಗುಡ್ಡಗಳು,ಸೊಂಪಾದ ಮರಗಿಡಗಳು ಪ್ರಕೃತಿಯೇ ಸೌಂದರ್ಯ ಮೈತಳೆದಂತೆ,ಪ್ರಾಯಶಃ ಎಲ್ಲರಿಗೂ ತಮ್ಮ ತಮ್ಮಹಳ್ಳಿ ಅಥವಾ ಹುಟ್ಟಿದೂರು ನನಗನ್ನಿಸಿದ ಹಾಗೆಯೇ ಅನ್ನಿಸಬಹುದು. ನಮ್ಮೂರು ನಮ್ಮೂರೇ. ನಾ ಹುಟ್ಟಿದೂರು ಮೂರುಕಡೆ ಗುಡ್ಡ ಒಂದು ಕಡೆ ಮಾತ್ರ ನೋಟದುದ್ದಕ್ಕೂ ಬಯಲು. ಎತ್ತ ನೋಡಿದರತ್ತ ಕಾಣುವ ಹಸಿರು ಆ ತೋಟ ಹೊಲಗದ್ದೆ ನೆನಪಾದಾಗಲೆಲ್ಲ ಅರ್ಧ ದಣಿವನ್ನಾರಿಸುವಂತ ಚೇತೋಹಾರಿ ವಿಸ್ಮಯ. ಗದ್ದೆ ಬಯಲಲ್ಲೆಲ್ಲಾ ನಡೆದೋಡುವಾಗ ಮರಗಿಡಗಳಲ್ಲಿ ಹೂ ಬಸಿರ ಹೊತ್ತಾಗ ಮಾವಿನ  ಸುರಗಿ ಗೋವೆ ಹೂಗಳ ಘಮಲು ನನ್ನ  ನಾಸಿಕಾಘ್ರದಲ್ಲಿ ಇನ್ನೂ. ಅದರ ಪರಿಮಳಕ್ಕೇ ನನ್ನ ಮನಸ್ಸು ನನ್ನ ಬಾಲ್ಯಕ್ಕೋಡುತ್ತೆ ಈಗಲೂ.


ಮಳೆಗಾಲವಂತೂ ಸ್ವರ್ಗ. ಪಿರಿ ಪಿರಿ ಬೀಳುವ ಮಳೆಗೆ ಹೊರಗೆ ಬಯಲಲ್ಲಿ ದೊಡ್ದವರ ಕಣ್ಣು ತಪ್ಪಿಸಿ ನೆನೆಯುವ ಆಸೆ ಮಕ್ಕಳಿಗಿದ್ದರೆ ಅವರನ್ನು ಹೊರಗೆ ಹೋಗದ ಹಾಗೆ ಬಿಡುಗಣ್ಣಿಂದ ಕಾಯುವ ಕೆಲಸ ದೊಡ್ದವರಿಗೆ, ಎಲ್ಲಿ ನೆನೆದು ಖಾಯಿಲೆ ಕಸಾಲೆ ಅಂಟಿಸಿಕೊಂಡು ಬಂದರೆ? ವೈದ್ಯರನ್ನು ನೋಡಲೂ ಹತ್ತು ಕಿ ಮೀ ನಡೆಯ ಬೇಕಲ್ಲ. ದೊಡ್ದವರ ಕೈಯ್ಯ ಹುಣಿಸೆ ಬರಲು ರೆಡಿಯಾಗಿರುತ್ತೆ. ಆದರೂ ಮಳೆಯಲ್ಲಿ ನೆನೆಯಲು ಒಮ್ಮೆಯಾದರೂ ಚಾನ್ಸ್ ಸಿಗದೇ ಇರೋದೇ ಇಲ್ಲ, ಅಷ್ಟೂ ತಲಬು ಮಕ್ಕಳಿಗೆ. ಗುಡುಗು  ಬಂದು ಮಳೆ ಜೋರಾದರೆ ಸಿಗುವ ರಜಾದ ಮಜವೇ ಬೇರೆ. ಹೊರಗಡೆ ಮಳೆಯ ಆರ್ಭಟವಾದರೆ ನಾವೆಲ್ಲಾ ಒಳಗಡೆ ಅಡುಗೆ ಮನೆಯಲ್ಲಿ ಅಮ್ಮ ಸುಟ್ಟು ಕೊಡುವ ಹಲಸಿನ, ಗೆಣಸಿನ ಹಪ್ಪಳ, ಅಥವಾ ಸುಟ್ಟ ಗೆಣಸು, ಬೇಯಿಸಿದ ಅವಡೆ ಕೋಡು, ಹುರಿದ ನೆಲಗಡಲೆಯ ತಲುಬು ಈಗಲೂ ಬಾಯಲ್ಲಿ ನೀರು ಬರಿಸುತ್ತದೆ. ಕಂಬಳಿ ಹೊದೆದಾದರೂ ಮಳೆಯಲ್ಲಿ ನೆನೆಯಲು ನಾವೆಲ್ಲಾ ತಯಾರೇ ಅದೂ ದೊಡ್ದವರು ಬಿಟ್ಟರೆ.
ಈಗಿನ ಧಾವಂತದ ಸದಾ ಮುಂದೋಡುತ್ತಿರುವ  ಕಾಲಚಕ್ರದಲ್ಲಿ ಇವೆಲ್ಲವೂ ಸದಾ ಹಸಿರು ನೆನಪುಗಳೇ ಮನದ ಆ ಮೂಲೆಯಲ್ಲಿನ ಸದಾ ಜಿನುಗುವ ಅಮೃತಧಾರೆ.


ಸೈನಿಕರು ಶಿಸ್ತಿನ ಕಾವಾಯತು ನಡೆಸುವಂತೆ ( ಆಗೆಲ್ಲಾ ಅವಿಭಕ್ತ ಕುಟುಂಬ) ಹಸಿರು ಗದ್ದೆ ಬಯಲಲ್ಲಿ ಶಾಲೆಗೆ ಹೋಗುತ್ತಿರುವುದನ್ನು ಈಗಲೂ ನನ್ನ ಕಣ್ಣು ಕನಸು ಕಂಡು ನಲಿಯುತ್ತಿರುತ್ತದೆ. ನಮ್ಮರ್ಧದೆತ್ತರದ ಟಿಫಿನ್ ಬಾಕ್ಸ್ ಮಧ್ಯಾನ್ನ ದೂಟ ಬಾಳೆಯೆಲೆಯ ಮೇಲೆ ಆ ತಣಿದ ಕುಚ್ಚಲಕ್ಕಿಯ ಮಜ್ಜಿಗೆಯ ಮಿಶ್ರಿತ ಕಂಪು ಒಟ್ಟಿಗೆ ಕುಳಿತುಣ್ಣುವಾಗಿನ ಮಜ..?? " ಬರಿನೆನೆದರೇನುಂಟು, ಮತ್ತೆ ದೊರೆಯುವರೇ ಆ ತೌರಿನವರೂ". ಶಾಲೆಗೆ ಹೋಗಲು ಬೇಸರವಾದರೆ, ನಿಧಾನವಾಗಿ ಹಿಂದೆ ಹಿಂದೆ ನಿಂತು, ಮಧ್ಯದಲ್ಲಿಯೇ ವಾಅಪಾಸ್ಸು ಮನೆಗೆ ಬಂದು ಅಮ್ಮನಿಗೆ ತೋಡಿನಲ್ಲಿ( ಹಳ್ಳದಲ್ಲಿ) ನೀರು ಬಂತು ಹೋಗಲಾಗದೆ ವಾಪಾಸ್ಸು ಬಂದೆವು ಅಂತ ಸುಳ್ಳು ಹೇಳಿ, ಅದು ಸಂಜೆ ನಮ್ಮವರೆಲ್ಲಾ ವಾಪಾಸ್ಸು ಶಾಲೆಯಿಂದ ಬರುವವರೆಗೆ ಮಾತ್ರ, ಅನಂತರ ಅಮ್ಮನ ಮೂಡಿನಂತೆ ಹುಣಿಸೆ ಬರಲೋ, ಮಾಫಿಯೋ. ಅದೆಲ್ಲಾ ಈಗಿನ ಮಕ್ಕಳಿಗೆಲ್ಲಿ ನಸೀಬು. ಒಮ್ಮೆ ದಾರಿಯಲ್ಲೇ ಚಡ್ಡಿಯೆಲ್ಲಾ ಮಾಡಿಕೊಂಡು ಮುಂದಿನ ಹಳ್ಳ ಬರುವರೆಗೆ ನಡೆದು ಅಕ್ಕನಿಂದ ಬೈದು ಒಗೆಸಿಕೊಳ್ಳುವ ಮಜ. ಮಳೆಗಾಲದಲ್ಲಿ ಹೊಸ ಧಿರುಸು ತೊಟ್ಟು ದೊಡ್ಡವರು ಬೇಡವೆಂದರೂ ಕೇಳದೇ ಬೆತ್ತಲ ದಾರಿಯಲ್ಲಿ ಓಡಿ ಜಾರಿ ಬಿದ್ದು ಕೆಸರು ಮಾಡಿಸಿಕೊಂಡುಹಿರಿಯರಿಗೆ ಧರ್ಮ ಸಂಕಟ ತಂದ ಪರಿ ಈಗಲೂ ನಗೆಯುಕ್ಕಿಸುತ್ತೆ.


ಮಳೆಗಾಲದಲ್ಲಿ ನಮ್ಮ ಊರನ್ನು ಸುತ್ತುವರಿದ ವಾರಾಹಿ ಮತ್ತು ಚಕ್ರ ನದಿಗಳದ್ದೇ ಆರ್ಭಟ. ಕೆಲವೊಮ್ಮೆ ಮನೆಗೆ ಬಂದ ನೆಂಟರಿಗೆ ಹೋಗಲಾಗದ ಹಾಗೆ ಮಾಡಿನಮಗೆ ಸಂತಸ ತಂದದ್ದೂ ಇದೆ. ತುಂಬಿ ಹರಿಯುವ ಕೆಂಪು ನೀರು ನೋಡುವಾಗಲೆಲ್ಲಾ ಅದರಲ್ಲಿ ತೇಲಿ ಬರುವ ಕಸ, ಮರದ ಕೊಂಬೆ, ಎಲ್ಲವೂ ಈಗಲೂ ನೆನಪಾಗುತ್ತೆ. ನಾವೂ ಹಲಕೆಲವೊಮ್ಮೆ ಸಿಕ್ಕಿ ಹಾಕಿಕೊಂಡದ್ದು, ಮತ್ತೆ ಕೆಲವೊಮ್ಮೆ ದೋಣಿ ನಡೆಸುವನಿಲ್ಲದೇ ನಾವೇ ನಡೆಸುವ ಹುಚ್ಚು ಧೈರ್ಯ  ಮಾಡಿ ಅಭ್ಯಾಸವಿಲ್ಲದೇ ಇದ್ದುದರಿಂದ  ನದಿಯ ನೀರಿನ ಸೆಳೆತದೊಂದಿಗೇ ಸಾಗುತ್ತಾ ಪ್ರಾಣಾಪಾಯದಲ್ಲಿ ಸಿಲುಕಿದ್ದೂ ಇದೆ. ಈ ಘಟನೆಗಳೆಲ್ಲಾ  ನನ್ನ ತ್ಯಾಂಪ ಸೀನಾಯಣದಲ್ಲಿ ಬರುತ್ತಿರುತ್ತವೆ.


ರಾತ್ರೆ ಕೆಲವೊಮ್ಮೆಅನಿವಾರ್ಯವಾದಾಗ ತಂಬಿಗೆ ತಕೊಂಡು ಹೊರಗಡೆ ಹೋದಾಗರಾತ್ರೆಯ ಕತ್ತಲಲ್ಲಿ ಮರಗಳೇ ಚಿತ್ರವಿಚಿತ್ರ ಧರಿಸಿ ಬಂದ ರಾಕ್ಷಸರಾಗಿ ಬಂದ ಕಾರ್ಯ ಮರೆತೂ ವಾಪಾಸ್ಸು ಓಡಿ ಹಿರಿಯರಿಂದ ಬೈಸಿಕೊಂಡದ್ದೂ ಇದೆ. ಡಾಕ್ಟರ್ ಹತ್ರ ಕರೆದುಕೊಂಡು ಹೋಗಿ ಅಪ್ಪಯ್ಯ ಅಂತ ಅಳುತ್ತಿದ್ದ ನನ್ನ ತಂಗಿಯೊಬ್ಬಳು ಹೀಗಿನ ಜಡಿ ಮಳೆಯ ರಾತ್ರಿಯಲ್ಲೇ ನಮ್ಮನ್ನೆಲ್ಲಾ ತೊರೆದು ಹೋಗಿಯೇ ಬಿಟ್ಟಿದ್ದಳು,ಹೃದಯ ದೃವಿಸುವ ಆ ಘಟನೆ ನೆನಪಾದಾಗಲೆಲ್ಲಾ ಈಗಲೂ ಕಣ್ನಂಚು ಮಡುಗಟ್ಟುತ್ತದೆ.ಇದೇ ಕಾರಣಕ್ಕಾಗಿ ತಂದೆ ಬೆಳ್ಳಾಲ ಬಿಟ್ಟು ಸಿದ್ದಾಪುರಕ್ಕೆ ಬಂದಿದ್ದರು..ಹೀಗೇ ಒಮ್ಮೊಮ್ಮೆ ನನಗೆ ನಾನೇ ಅಂತರ್ಮುಖಿಯಾದಾಗಲೆಲ್ಲಾ ಮನಸ್ಸು ಪುನರ್‍ ಚೇತೋಹಾರಿಯಾಗಲು ನಾನು ನನ್ನೂರಿನ ಬಾಲ್ಯಕ್ಕೇ ಶರಣು ಹೋಗುತ್ತಿರುತ್ತೇನೆ.
ಮೊನ್ನೆ ಮೊನ್ನೆ ಊರಿಗೆ ಹೋದಾಗ ಮತ್ತೊಮ್ಮೆ ಅದೇ ನೆನಪು ಹಸಿಯಾಯ್ತು. ನನ್ನ ಭಾಷಣದಲ್ಲಿ ಅದನ್ನೆಲ್ಲಾ ನೆರೆದ ಊರವರೊಡನೆ ಹಂಚಿಕೊಂಡಾಗ ಅವರೂ ಚಪ್ಪಾಳೆ ತಟ್ಟಿ ನನ್ನ ಆ ಮಧುರ ಅನುಭವಗಳನ್ನು ಸ್ವಾಗತಿಸಿದರು. ನನ್ನ ಊರಿನ ಜತೆ ನನ್ನ ಹೆಸರು ತಳುಕು ಹಾಕಲು ಕಾರಣ ನನ್ನ ಅಪ್ಪಯ್ಯನೇ, ಈಗಲೂ ಊರ ಕಡೆ ಹೋದಾಗ ಅಲ್ಲಿನ ಪ್ರತೀ ಮರ ಗಿಡಗಳೂ ನನ್ನೊಡನೆ ಸಂಭಾಶಿಸುವಂತಾಗುತ್ತದೆ, ಅಪ್ಪಯ್ಯ ನನ್ನ ಜತೆ ಈಗ ಇಲ್ಲ, ಆದರೆ ಅಪ್ಪಯ್ಯನ ಜತೆ ಕಳೆದು ಸವಿದಳಿದ ಆ ಸುವರ್ಣ ಕಾಲವನ್ನು ಇನ್ನೂ ನನ್ನ ಜತೆಗೆ ಅವುಗಳೆಲ್ಲಾ ಮೌನ ರಾಗದಲ್ಲಿ ಹಂಚಿಕೊಂಡಭಾಸ ಈಗಲೂ. ಬಾಲ್ಯದ ಆ ಹಸಿರು ಯುಗವನ್ನು ಮತ್ತೆ ಕಣ್ಣಿಗೆ ಸವಿಸುವ ಆತ್ಮೀಯ ಗೆಳೆಯರೆಂದೆನಿಸುತ್ತದೆ ಎಂದೆಂದಿಗೂ. ಆದರೆ ಆ ನನ್ನ ಊರಿಗಿನ್ನೂ ವಿದ್ಯುತ್ ಸಂಪರ್ಕವಿಲ್ಲ, ಸರಿಯಾದ ಟಾರು ರಸ್ತೆಯಿಲ್ಲ ಅದಕ್ಕೇ ಬಸ್ ಸಂಪರ್ಕವೂ, ಅದಕ್ಕಾಗಿಯೇ ನನ್ನೂರು ಯಾವುದೇ ಋಣಾತ್ಮಕತೆ ಕಲಿತಿಲ್ಲ, ನಾನು ಚಿಕ್ಕಂದಿನಲ್ಲಿರುವಾಗಿನ ಹಾಗೇಯೇ ಇದೆ. ಅಷ್ಟೇ ಅಸ್ಖಲಿತವಾಗಿ, ಸರ್ವಾಂಗ ಸುಂದರವಾಗಿ.


ಹೀಗೆ ಸಿಹಿ (ಕಹಿ ತುಂಬಾನೇ ಕಡಿಮೆ) ಸಿಹಿ ನೆನಪುಗಳನ್ನೊಳಗೊಂಡ ಬಾಲ್ಯವು ಈ ಹಳ್ಳಿಯ ನೆನಪಿನೊಂದಿಗೇ ಇನ್ನೂ ಮಾರ್ದವವಾಗಿ ಫ್ರೆಷ್ ಆಗುತ್ತಲಿರುತ್ತದೆ. ಅದಕ್ಕೇ ನನ್ನ ಬಾಲ್ಯದ ಗೆಳೆಯ ಸೀನ ಮತ್ತು ತ್ಯಾಂಪ ಬರಹಗಳಲ್ಲಿ ಹಾಸು ಹೊಕ್ಕಾಗಿ ನನ್ನಜೀವನದ ಮತ್ತೊಂದೇ ಭಾಗವಾಗಿ ಸದಾ ನನ್ನನ್ನು ಉತ್ತೇಜಿಸುವ ಹಳ್ಳಿಯ ಸಂಕೇತವಾಗಿ ಬಿಟ್ಟಿದ್ದಾರೆ. ಅದಕ್ಕೇ ನನ್ನ ಮನದಲ್ಲೂ ಬರಹದಲ್ಲೂ ನನಗೆ ನನ್ನೂರು ತುಂಬಾ ತುಂಬಾ ತುಂಬಾನೇ ಇಷ್ಟ.
 

Comments

Submitted by RAMAMOHANA Thu, 01/31/2013 - 16:21

ಬಾಲ್ಯದ‌ ನೆನಪೇ ಹಾಗೆ ರಾಯರೆ, ಸವಿದಷ್ಟೊ ಸವಿಯಬೇಕೆನಿಸುವ‌, ತೇಯ್ದಷ್ಟೂ ಗಮ್ಮೆನ್ನುವ‌ ಸುವಾಸನೆಯ‌ ಸಮುದ್ರ. ನಮ್ಮನ್ನೂ ಬಾಲ್ಯಕ್ಕೆ ಎಳೆದೊಯ್ದ ತಮಗೂ, ತಮ್ಮ ನೆನಪಿನ‌ ಸರಮಾಲೆಗೆ ನನ್ನ ಧನ್ಯವಾದಗಳು. ತಮ್ಮವ‌ ರಾಮೋ.
Submitted by venkatb83 Fri, 02/01/2013 - 16:23

"ಹೀಗೇ ಒಮ್ಮೊಮ್ಮೆ ನನಗೆ ನಾನೇ ಅಂತರ್ಮುಖಿಯಾದಾಗಲೆಲ್ಲಾ ಮನಸ್ಸು ಪುನರ್‍ ಚೇತೋಹಾರಿಯಾಗಲು ನಾನು ನನ್ನೂರಿನ ಬಾಲ್ಯಕ್ಕೇ ಶರಣು ಹೋಗುತ್ತಿರುತ್ತೇನೆ. ಮೊನ್ನೆ ಮೊನ್ನೆ ಊರಿಗೆ ಹೋದಾಗ ಮತ್ತೊಮ್ಮೆ ಅದೇ ನೆನಪು ಹಸಿಯಾಯ್ತು." >>>ನಾನೂ ಸಹಾ ಹೀಗೆಯೇ-ನಮ್ಮೂರಿಗೆ ಹೋಗಿ ಬಂದಾಗ ಏನೋ ಉತ್ಸಾಹ-ಹುಮ್ಮಸ್ಸು-ಖುಷಿ-ಆನಂದ ಹೊಸ ಜೀವನ ಪಡೆದ ಬಗೆ - ಅಲ್ಲಿಗೆ ...ನಿಮ್ಮ ನನ್ನ ಹಾಗೆ ಬಹುತೇಕರು ಅವರವರ ಇಷ್ಟದ ಸ್ಥಳಗಳಿಗೆ ಹೋಗಿ ಖುಷಿ ಆಗುತ್ತಾರೆ ಎಂದಾಯ್ತು...!! ಗೋಪಿನಾಥ ರಾಯರೇ - ಗೋರೂರು-ಎಂದ ಕೂಡಲೇ ರಾಮ ಸ್ವಾಮೀ ಅಯ್ಯಂಗಾರ್ ಅವರು ಗೋಕಾಕ ಎಂದಾಗ-ವಿನಾಯಕ ಕೃಷ್ಣ ಅವರು (ವಿ ಕೃ ಗೋಕಾಕ ) ಬೆಳಗೆರೆ ಎಂದಾಗ-ಕೃಷ್ಣ ಶಾಸ್ಹ್ತ್ರಿಗಳು ಹೀಗೆ ಆಯಾಯಾ ಊರುಗಳ ಹೆಸರುಗಳನ್ನೂ ತಮ್ಮ ಹೆಸರಿನ ಹಿಂದೆ ಮುಂದೆ ಸೇರಿಸಿಕೊಂಡು ತಾವೂ ದೊಡ್ಡ ಸಾಧನೆ ಮಾಡಿ- ಅವರ ಸಾಧನೆಗಳ ಕಾರಣವಾಗಿ ವ್ಯಕ್ತಿ ಪ್ರಸಿದ್ಧಿಯಿಂದ -ಊರೂ ಪ್ರಸಿದ್ಧಿ ಆಗಿರುವ ಹಲವು ಉದಾಹರಣೆಗಳು ಇವೆ... ಬಹುತೇಕ ಹಳ್ಳಿ-ಸಣ್ಣ ಪುಟ್ಟ ಪಟ್ಟಣಗಳ ಹಿನ್ನೆಲೆಯಿಂದ ಬಂದಿರುವ ಬರುವ ನಿಮ್ಮಂತ ನಮ್ಮಂತ ಜನರಿಗೆ ಈ ಹಳ್ಳಿ ಪ್ರದೇಶ -ವಾತಾವರಣ -ಪರಿಸರ -ಯಾವತ್ತೂ ಮರೆಯೋಕೆ ಸಾಧ್ಯವಿಲ್ಲ -ಅದು ಸದಾ ಹಸಿರಾಗಿ ನೆನಪಾಗುವುದು.. ನಿಮ್ಮ ಬರಹವನ್ನು ಓದಿದಾಗ ನಂಗೂ ಅದು ನಮ್ಮ ಊರಿನದೆ-ನನ್ನದೇ ಅನುಭವ ಅನ್ನಿಸಿತು.. ಈಗೀಗ ಕಾಲ ಬದಲಾಗಿದೆ ಎಂದು ಎಂದೂ ಹಾಗೆಯೇ ಇರುವ ಆ ಕಾಲಗಳನ್ನು ತೆಗಳುತ್ತ ನಾವ್ ಬದಲಾಗಿ ಪ್ರಕೃತಿಯನ್ನ ಪರಿಸರವನ್ನ ಅಸಮತೋಲನ ಮಾಡುತ್ತಾ -ಹಾಳು ಮಾಡುತ್ತಾ ಇರುವೆವು..:((( ತಾತ ಮುತ್ತಾತರ ಕಾಲದಿಂದ ಬದಲಾಗದ್ದು -ಈಗ್ಗೆ ಸ್ವಾತಂತ್ರ್ಯ ನಂತರ ಯಾಕೆ ಹೀಗಾಯ್ತೋ? ಅದೇ ಅಚ್ಚರಿ..!! ಈಗಲೂ ನನಗೆ ನಿಮ್ಮ ಹೆಸರಿಗಿಂತ ನಿಮ್ಮ ಊರಿನ ಹೆಸರೇ ಜಾಸ್ತಿ ನೆನಪು-ಮತ್ತು ಆ ತರಹದ ಹೆಸರು ಓದಿದಾಗ ನೀವೇ ನೆನಪು ಬರುವುದು.. ಊರಿನ -ನಮ್ಮ ನಂಟು ಹೀಗೆಯೇ ಇರಲಿ. ಶುಭವಾಗಲಿ.. \।/
Submitted by gopinatha Tue, 02/05/2013 - 03:44

In reply to by venkatb83

ವೆಂಕಟೇಶರೇ ನಿಮ್ಮ ಮೆಚ್ಚುಗೆಯ ಮಾತುಗಳಿಗೆ ಕರಗಿ ಹೋದೆ, ಅಭಿಮಾನ ಪ್ರೀತಿ ಹೀಗೇ ಇರಲಿ, ಯಾಕೋ ಹಳ್ಳೀ ಜೀವನ ನನಗೆ ತುಂಬಾ ಮುದಕೊಡುತ್ತೆ, ಧನ್ಯೋಸ್ಮಿ.
Submitted by sasi.hebbar Tue, 02/05/2013 - 16:30

ನಿಮ್ಮೂರಿನ ಕುರಿತಾದ ನಿಮ್ಮ ಬರಹ ನನಗೆ ನನ್ನೂರಿನ ನೆನಪನ್ನು ಉಕ್ಕಿಸಿತು. ವ್ಯತ್ಯಾಸವೆಂದರೆ, ನನ್ನೂರು ನಾಗರಿಕ ಸೌಲಭ್ಯಗಳ ಹೊಡೆತದಲ್ಲಿ ಸಾಕಷ್ಟು ಬದಲಾಗಿದೆ - ನಿಮ್ಮೂರು ಹಾಗೇ ಇದೆ ಎಂದಿರಲ್ಲಾ, ಅದನ್ನು ಕೇಳಿ ಆಶ್ಚರ್ಯವೂ ಆಯಿತು. ಹಾಗೇ, ಸಿದ್ದಾಪುರದ ಕುರಿತು ಸಹಾ ಸ್ವಲ್ಪ ಬರೆಯುತ್ತೀರಿ ಅಂದುಕೊಂಡಿದ್ದೇನೆ.ಧನ್ಯವಾದ. - ಶಶಿಧರ ಹಾಲಾಡಿ.
Submitted by gopinatha Thu, 02/07/2013 - 05:51

In reply to by sasi.hebbar

ಶಶಿಧರ್ ನಿಮ್ಮ ಮೆಚ್ಚುಗೆಗೆ ಧನ್ಯ ನಾನು ಇನ್ನೂ ಬದಲಾಗದ ಬಾಲ್ಯದ ಕುರಿತು ಬೆಳ್ಳಾಲದ ಬಗೆಗೆ ಬರೆದಿದ್ದೆ, ಅದಕ್ಕೆ ಸಿದ್ದಾಪುರದ ಬಗ್ಗೆ ಅದರಲ್ಲಿ ಬರೆಯಲಿಲ್ಲ. ಹಾಲಾಡಿ ಮತ್ತು ಶಂಕರನಾರಾಯಣ ಗಳಿಗೂ ನನ್ನ ಜೀವನದಲ್ಲಿ ಮಹತ್ವದ ಸ್ಥಾನವಿದ್ದೇ ಇದೆ ನೀವು ಹೇಳಿದ ಮೇಲೆ ಅನ್ನಿಸಿತು,ಐತಿಹಾಸಿಕ ಮಹತ್ವವಿದ್ದ ಸಿದ್ದಾಪುರದ ಮತ್ತು ಸುತ್ತ ಮುತ್ತ ಬಗೆಗೆ ಬರೆಯಲೇ ಬೇಕು ಅಂತ. ಸಮಯ ಸಿಕ್ಕಾಗ ಬರೆಯುತ್ತೇನೆ.ಇನ್ನೊಮ್ಮೆ ವಂದನೆಗಳು