ಹೊಸ ಮಾದರಿ ಇಲೆಕ್ಟ್ರಾನಿಕ್ ಮತಯಂತ್ರ:ಮತ ಯಾರಿಗೆ ಎಂಬ ಮುದ್ರಿತ ಚೀಟಿ ನೀಡಿಕೆ

ಹೊಸ ಮಾದರಿ ಇಲೆಕ್ಟ್ರಾನಿಕ್ ಮತಯಂತ್ರ:ಮತ ಯಾರಿಗೆ ಎಂಬ ಮುದ್ರಿತ ಚೀಟಿ ನೀಡಿಕೆ

ಹೊಸ ಮಾದರಿ ಇಲೆಕ್ಟ್ರಾನಿಕ್ ಮತಯಂತ್ರ:ಮತ ಯಾರಿಗೆ ಎಂಬ ಮುದ್ರಿತ ಚೀಟಿ ನೀಡಿಕೆ

ಭಾರತದಲ್ಲಿ ಉಪಯೋಗವಾಗುತ್ತಿರುವ ಇಲೆಕ್ಟ್ರಾನಿಕ್ ಮತಯಂತ್ರಗಳು ಅತ್ಯಂತ ಯಶಸ್ವಿಯಾದುವು. ಇವುಗಳು ದೇಶದಲ್ಲಿ ಮಾತ್ರವಲ್ಲದೆ ಪರದೇಶಗಳಲ್ಲೂ ಚುನಾವಣೆಗೆ ಬಳಕೆಯಾಗಿವೆ. ಬ್ಯಾಟರಿಚಾಲಿತ ಮತಯಂತ್ರಗಳಾದ ಕಾರಣ ವಿದ್ಯುಚ್ಛಕ್ತಿ ಇಲ್ಲದೆಡೆಯೂ ಉಪಯೋಗಿಸಬಹುದು, ಸುಲಭದಲ್ಲಿ ಚುನಾವಣಾ ಅಕ್ರಮಕ್ಕೆ ಅನುವು ಕೊಡದಿರುವ ವಿನ್ಯಾಸ, ಅಗ್ಗದ ದರ ಇವು ಈ ಯಂತ್ರದ ಹೈಲೈಟ್‌ಗಳಲ್ಲಿ ಮುಖ್ಯವಾದುವು. ಮತಯಂತ್ರಗಳನ್ನು ಬೇಕಾದ ಅಭ್ಯರ್ಥಿಗೆ ಮತ ಹೋಗುವಂತೆ ರಿಗ್ ಮಾಡುವುದು ಕಷ್ಟವಲ್ಲ ಎಂದು ಕೆಲವರು ಅಪಪ್ರಚಾರ ನಡೆಸಿ, ಜನರ ಮನಸ್ಸಲ್ಲಿ,ಈ ಮತಯಂತ್ರಗಳ ಬಗ್ಗೆ ಸಂಶಯದ ಬೀಜವನ್ನು ಬಿತ್ತಿದ್ದಾರೆ. ಈಗ ಭಾರತ್ ಇಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ತನ್ನ ಹೊಸ ವಿನ್ಯಾಸದ ಮತಯಂತ್ರವನ್ನು ತಯಾರು ಮಾಡಿದೆ. ಇದರಲ್ಲಿ ಮತದಾರ ಯಾರಿಗೆ ಮತಹಾಕಿದ್ದಾನೆ ಎನ್ನುವುದರ ಮುದ್ರಣ ಸೌಲಭ್ಯವನ್ನು ಒದಗಿಸಲಾಗಿದೆ. ಮತದಾರನಿಗೆ ಈ ಪ್ರಿಂಟೌಟ್ ನೀಡುವುದು ಸಾಧ್ಯವಾಗುತ್ತದೆ. ಹಲವು ಪಕ್ಷಗಳು ಈ ಬಗೆಯ ಸೌಲಭ್ಯ ಅಗತ್ಯವೆಂದು ಪ್ರತಿಪಾದಿಸಿದ್ದರಿಂದ, ಹೀಗೆ ಮಾಡಿರುವುದು ಸ್ಪಷ್ಟ. ಆದರೆ ಇದರ ದುರುಪಯೋಗವಾಗುವ ಸಂಭವವಿದೆ. ಮತಗಟ್ಟೆಯಿಂದ ಹೊರಬರುವ ಮತದಾರ, ತನ್ನ ಚೀಟಿ ತೋರಿಸಿ ತಾನು ಇಂತಹ ಪಕ್ಷಕ್ಕೆ ಮತ ಹಾಕಿದ್ದೇನೆ ಎನ್ನುವುದನ್ನು ಪ್ರದರ್ಶಿಸಿದರೆ, ಮತದಾನದ ಗೌಪ್ಯತೆ ಉಳಿಯದು. ಇಂತಹ ಚೀಟಿ ತೋರಿಸಿ, ಮತ ಹಾಕಿದ ಪಕ್ಷದಿಂದ ಹಣ ಪಡೆಯಬಹುದು ಎನ್ನುವ ಹೊಸ ಯೋಜನೆಗಳು ಹುಟ್ಟಿಕೊಂಡರೆ ಅಚ್ಚರಿ ಪಡಬೇಕಿಲ್ಲ. ಹೀಗಾಗಿ ಪಕ್ಷಗಳು ಮೊದಲೇ ಹಣ ನೀಡುವುದನ್ನು ಬಿಟ್ಟು, ಮತ ತಮಗೆ ಬಿದ್ದದ್ದನ್ನು ಖಚಿತ ಪಡಿಸಿಕೊಂಡೇ ಹಣ ನೀಡುವ ಪ್ರವೃತ್ತಿ ಬೆಳೆಯದಿರದು.

ಸಿಡಿಎಂಎ ಸ್ಪೆಕ್ಟ್ರಮ್ ಮೂಲಬೆಲೆ ಇಳಿಕೆ
ಸಿಡಿಎಂಎ ಸ್ಪೆಕ್ಟ್ರಮ್ ಹರಾಜಿನಲ್ಲಿ 800 ಮೆಗಾಹರ್ಟ್ಸ್ ಬ್ಯಾಂಡಿನಲ್ಲಿ ಮೂಲಬೆಲೆ ಹದಿನೆಂಟು ಸಾವಿರದಿನ್ನೂರು ಕೋಟಿ ರೂಪಾಯಿಗೆ ನಿಗದಿಗೊಳಿಸಲಾಗಿತ್ತು. ಆದರೆ ಅ ಬೆಲೆಯಲ್ಲಿ ಹರಾಜು ನಡೆದಾಗ ಟಾಟಾ ಟೆಲಿ ಸರ್ವೀಸ್, ರಿಲಾಯೆನ್ಸ್ ಕಮ್ಯುನಿಕೇಶನ್ಸ್ ಅಥವಾ  ಸಿಸ್ಟೆಮಾ ಶ್ಯಾಮ್ ಕಂಪೆನಿಗಳು ಹರಾಜಿನಲ್ಲಿ ಭಾಗವಹಿಸಲೇ ಇಲ್ಲ. ಈಗ ಮೂಲಬೆಲೆಯನ್ನು ಅರೆವಾಸಿ ಇಳಿಸಿ, ಮರು ಹರಾಜು ಪ್ರಕ್ರಿಯೆಯನ್ನು ನಡೆಸಲು ಟೆಲಿಕಾಂ ಇಲಾಖೆ ನಿರ್ಧರಿಸಿದೆ. ಅತ್ತ ನ್ಯಾಯಾಲಯವು ಟೆಲಿಕಾಂ ಸೇವೆ ನೀಡಲು ಪರವಾನಗಿಯನ್ನು ಕಳೆದುಕೊಂಡ ಕಂಪೆನಿಗಳು ತಾತ್ಕಾಲಿಕವಾಗಿ, ತಮ್ಮ ಸೇವೆ ಮುಂದುವರಿಸಲು ಅನುಮತಿ ನೀಡಿದೆ. ಮರುಹರಾಜು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಈ ಅವಧಿಯನ್ನು ಮುಂದುವರಿಸಬಹುದಾಗಿದೆ. ಹೀಗಾಗಿ,ಲೈಸೆನ್ಸ್ ಕಳೆದುಕೊಳ್ಳುವ ಅಪಾಯಕ್ಕೆ ತುತ್ತಾಗಿರುವ ಟೆಲಿಕಾಂ ಕಂಪೆನಿಗಳ ಚಂದಾದಾರರಿಗೆ ಸೇವೆಯಲ್ಲಿ ತಡೆ ಉಂಟಾಗುವ ಅಪಾಯ ತಪ್ಪಿದೆ.
ರಿಲಾಯೆನ್ಸ್ ಕಂಪೆನಿಯು ತನ್ನ ಮೊಬೈಲ್ ಗೋಪುರಗಳನ್ನು ಬೀದಿದೀಪವನ್ನಳವಡಿಸಲೂ ಆಗುವಂತೆ ವಿನ್ಯಾಸಗೊಳಿಸಿ, ಮಿತವ್ಯಯ ಸಾಧಿಸಲು ತೀರ್ಮಾನಿಸಿದೆ. ಮೊಬೈಲ್ ಟವರುಗಳನ್ನು ಬಹೂಪಯೋಗವಾಗಿಸಿ,ಅಧಿಕ ಆದಾಯಗಳಿಸುವುದು ಕಂಪೆನಿಯ ಹೊಸ ಹೆಜ್ಜೆಯಾಗಿದೆ. ಹೆಚ್ಚೆಚ್ಚು ಜನರು ಬಳಸುತ್ತಿರುವ ಮೊಬೈಲ್ ಮೂಲಕ ಸಕಾಲದಂತಹ ಸೇವೆಗಳನ್ನೊದಗಿಸಿ,ಜನಾನುರಾಗಿಯಾಗಲು ಕರ್ನಾಟಕದ ಸರಕಾರ ಹಲವು ಕ್ರಮಗಳನ್ನು ಕೈಗೊಂಡದ್ದು ಸ್ತುತ್ಯರ್ಹವೆನ್ನುವುದರಲ್ಲಿ ಎರಡು ಮಾತಿಲ್ಲ.ಇನ್ನೇಳು ವರ್ಷಗಳಲ್ಲಿ ಪ್ರತಿಯೋರ್ವ ವಯಸ್ಕ ಭಾರತೀಯನೂ ಮೊಬೈಲ್ ಬಳಸುವಂತಾಗಬೇಕೆಂಬ ರಾಷ್ಟ್ರೀಯ ಟೆಲಿಕಾಂ ನೀತಿ ರೂಪಿಸಲಾಗಿದೆ.

ಫ್ಲಿಪ್‌ಬೋರ್ಡ್:ಸ್ಮಾರ್ಟ್‌ಫೋನಲ್ಲೊಂದು ಮ್ಯಾಗಜೀನ್


ಫ್ಲಿಫ್‌ಬೋರ್ಡ್ ವೆಬ್ ತಾಣಕ್ಕೆ ಭೇಟಿಯಿತ್ತು,ಆಂಡ್ರಾಯಿಡ್ ಚಾಲಿತ ಸ್ಮಾರ್ಟ್‌ಫೋನ್‌ಗಳಿಗೆ ಅಭಿವೃದ್ಧಿಗೊಳಿಸಿದ ತಂತ್ರಾಂಶವನ್ನು ಇಳಿಸಿಕೊಳ್ಳಿ. ಹೀಗೆ ಮಾಡಿ,ನಿಮಗೆ ಆಸಕ್ತಿಯಿರುವ ವಿಷಯಗಳನ್ನು ತಂತ್ರಾಂಶಕ್ಕೆ ತಿಳಿಸಿದರೆ,ಅದು ಇಂಟರ್ನೆಟ್‌ನಲ್ಲಿ ಈ ಬಗ್ಗೆ ಪ್ರಕಟವಾಗಿರುವ ಬರಹಗಳನ್ನು ಒಟ್ಟು ಮಾಡಿ,ಸುಂದರ ಮ್ಯಾಗಜೀನ್ ಒಂದನ್ನು ನಿಮ್ಮ ಸ್ಮಾರ್ಟ್‌ಪೋನಿನಲ್ಲಿ ಲಭ್ಯವಾಗಿಸುತ್ತದೆ. ನೀವು ಮ್ಯಾಗಜೀನ್‌ನ ಪುಟ ಮಗಚುತ್ತಾ ಹೋದರೆ ಸಾಕು,ಬೇರೆ ಬೇರೆ ಇಂಟರ್ನೆಟ್ ತಾಣಗಳಿಗೆ ಭೇಟಿಕೊಡಬೇಕಿಲ್ಲ!ಒಟ್ಟಿನಲ್ಲಿ ಹೇಳಬೇಕೆಂದರೆ ಫ್ಲಿಫ್‌ಬೋರ್ಡ್ ಒಂದು ಸಾಮಾಜಿಕ ಸುದ್ದಿ ಪತ್ರಿಕೆಯಾಗಿದೆ. ದೇಶವಿದೇಶಗಳ ಪತ್ರಿಕೆಗಳಲ್ಲಿ ಸುದ್ದಿಗಳನ್ನು ಈ ಪತ್ರಿಕೆಯ ಮೂಲಕ ಪಡೆಯಬಹುದು. ಇದರಲ್ಲಿ ಆಡಿಯೋ,ವೀಡಿಯೋ,ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮವರು ನಿಮ್ಮ ಜತೆ ಹಂಚಿಕೊಂಡ ವಿಚಾರಗಳೂ ಅಡಕವಾಗಿರುತ್ತವೆ.

ಬಿ ಎಸ್ ಇ ಯಿಂದ ಇಂಡಸ್ಟ್ರೀ ವಾಚ್ ಸೇವೆ ಆರಂಭ
ಬೋಂಬೇ ಸ್ಟಾಕ್ ಎಕ್ಸ್‌ಚೇಂಜ್ ಶೇರು ಬೆಲೆಗಳನ್ನು ಹೋಲಿಸಿನೋಡಲು ಸುಲಭವಾದ ಸೇವೆಯನ್ನು ಆರಂಭಿಸಿದೆ. ಈ ಸೇವೆಯ ಪ್ರಕಾರ ಒಂದು ಉದ್ಯಮಕ್ಕೆ ಸೇರಿದ ಕಂಪೆನಿಗಳ ಶೇರು ಬೆಲೆಯನ್ನು ಒಂದು ಮೌಸ್ ಕ್ಲಿಕ್ ಮೂಲಕ ತಿಳಿಯಬಹುದು. ಹಿಂದಾದರೆ,ಪ್ರತಿ ಕಂಪೆನಿಯ ಬೆಲೆಯನ್ನು ಪ್ರತ್ಯೇಕವಾಗಿ ತಿಳಿಯಬೇಕಿತ್ತು. ಒಂದೊಂದು ಉದ್ಯಮ ವಲಯದ ಕಂಪೆನಿಗಳನ್ನು ಗುಂಪಾಗಿಸುವ ಮೂಲಕ,ಶೇರು ವಿನಿಮಯ ಕಂಪೆನಿ ಈ ಸೇವೆ ನೀಡುತ್ತಿದೆ. ಪ್ರಸ್ತುತ ಎಂಭತ್ತು ಉದ್ಯಮಗಳ ಪ್ರತ್ಯೇಕ ವಿಭಾಗಗಳಿವೆ. ಸುಮಾರು ಆರು ಸಾವಿರ ಕಂಪೆನಿಗಳ ವಿವರಗಳು ಇಲ್ಲಿ ಲಭ್ಯವಿವೆ. ಯಾವುದೇ ಕಂಪೆನಿಯು ಹಲವಾರು ವಲಯಗಳಲ್ಲಿ ವ್ಯವಹಾರ ನಡೆಸುತ್ತಿದ್ದರೆ,ಅದರ ಮುಖ್ಯ ಆದಾಯಮೂಲವಾದ ಉದ್ಯಮಕ್ಕದನ್ನು ಸೇರಿಸಲಾಗಿದೆ.

ವಾಹನವನ್ನೂ ಆನ್‌ಲೈನಿನಲ್ಲಿ ಖರೀದಿಸಿ
ಮಹೀಂದ್ರ ಮತ್ತು ಮಹೀಂದ್ರ ಕಂಪೆನಿಯು ಆನ್‌ಲೈನ್  ಮಾಲ್ http://www.snapdeal.com ಜತೆ ಮಾಡಿಕೊಂಡಿರುವ ಒಪ್ಪಂದದ ಕಾರಣ ದ್ವಿಚಕ್ರ ವಾಹನವನ್ನು ಇಂಟರ್ನೆಟ್ ಮೂಲಕ ಖರೀದಿಸಬಹುದು.ಇದರ ಮುಖ್ಯ ಆಕರ್ಷಣೆಯೆಂದರೆ ಬೆಲೆಯಲ್ಲಿ ಸುಮಾರು ಆರು ಸಾವಿರ ಕಡಿತವಾಗುತ್ತದೆ. ಹಣವನ್ನು ಒಮ್ಮೆಲೇ ಪಾವತಿಸದೆ,ಮಾಸಿಕ ಕಂತುಗಳಲ್ಲಿ ಪಾವತಿಸುವ ಸವಲತ್ತನ್ನೂ ನೀಡಲಾಗಿದೆ. ಒಮ್ಮೆ ನೋಂದಾಯಿಸಿಕೊಂಡ ಗ್ರಾಹಕ,ವಾಹನ ಖರೀದಿಸುವ ಪ್ರಕ್ರಿಯೆ ಆರಂಭಿಸಿದರೆ,ಅಗತ್ಯ ದಾಖಲೆಪತ್ರಗಳಿಗಾಗಿ,ಕಂಪೆನಿಯ ಪ್ರತಿನಿಧಿ ಗ್ರಾಹಕನನ್ನು ಸಂಪರ್ಕಿಸುತ್ತಾನೆ. ಸದ್ಯಕ್ಕೆ ದೆಹಲಿ,ಮುಂಬೈ,ಕೊಲ್ಕತ್ತಾ,ಚೆನ್ನೈ ಮತ್ತು ಬೆಂಗಳೂರಿನ ಗ್ರಾಹಕರಿಗೆ ಸೇವೆ ಸೀಮಿತವಾಗಿದೆ.

ಲಾಗಿನ್ ಆಗಲು ಪಾಸ್‌ವರ್ಡ್ ಜತೆಗೆ ಯಂತ್ರಾಂಶದ ಬಳಕೆ
ಪಾಸ್‌ವರ್ಡ್ ಮರೆಯುವುದು,ಕಳೆದುಕೊಳ್ಳುವುದು,ಕದಿಯಲ್ಪಡುವುದು ಇತ್ಯಾದಿ ಸಮಸ್ಯೆಗಳಿಂದ ಪಾಸ್‌ವರ್ಡ್ ಮೂಲಕ ಬಳಕೆದಾರನ ಗುರುತು ಹಿಡಿಯುವುದು,ಸಾಕಷ್ಟು ಭದ್ರತೆ ಒದಗಿಸುತ್ತಿಲ್ಲ.ಇದಕ್ಕೆ ಪರಿಹಾರವಾಗಿ,ಪಾಸ್‌ವರ್ಡ್ ನೀಡಿದ ಬಳಿಕ ಬಳಕೆದಾರನು ಸ್ಮಾರ್ಟ್‌ಪೋನ್ ಅಂತಹ ಯಂತ್ರಾಂಶ ಹೊಂದಿರುವುದನ್ನು ಖಚಿತ ಪಡಿಸಿಕೊಂಡ ಬಳಿಕವೇ ಲಾಗಿನ್ ಆಗಿಸುವ ಪ್ರಕ್ರಿಯೆಯನ್ನು ಗೂಗಲ್ ಪ್ರತಿಪಾದಿಸುತ್ತಿದೆ. ಪಾಸ್‌ವರ್ಡ್ ಸರಿ ಆದರೆ,ಸ್ಮಾರ್ಟ್‌ಫೋನಿಗೆ ಸಂಖ್ಯೆಯೊಂದನ್ನು ರವಾನಿಸಿ,ಅದನ್ನು ಬಳಕೆದಾರ ಸರಿಯಾಗಿ ನೀಡಿದರೆ ಮಾತ್ರಾ ಲಾಗಿನ್ ಆಗಲು ಅವಕಾಶ ನೀಡುವುದು, ಈ ವ್ಯವಸ್ಥೆಯ ತಿರುಳಾಗಿದೆ.ಆದರೆ,ಮೊಬೈಲ್ ಸಂಪರ್ಕ ಇಲ್ಲವಾದೆಡೆ,ಅಥವಾ ಸಂಕೇತಗಳು ಸಿಗದಲ್ಲಿ ಇದರಿಂದ ಸಮಸ್ಯೆಯಾಗಬಹುದು. ಉಂಗುರ ಅಥವಾ ಆಭರಣದಲ್ಲಿ ಅಳವಡಿಸಿದ ಸ್ಮಾರ್ಟ್‌ಕಾರ್ಡ್ ವೈಫೈ ಅಥವಾ ಬ್ಲೂಟೂತ್ ಸಂಪರ್ಕದ ಮೂಲಕ ಗುರುತಿಸಲ್ಪಡುವ ಮೂಲಕ ಯಂತ್ರಾಂಶ ಲಾಗಿನ್ ಸಾಧ್ಯತೆಯನ್ನೂ ಗೂಗಲ್ ಪರಿಶೀಲಿಸುತ್ತಿದೆ.

ಬೋಯಿಂಗ್ ಕಂಪೆನಿಗೆ ಬ್ಯಾಟರಿಯ ಕಾಟಾರೀ...
ಬೋಯಿಂಗ್ ಕಂಪೆನಿಯ ಡ್ರೀಮ್‌ಲೈನರ್ ವಿಮಾನಗಳ ಹಾರಾಟವನ್ನು ನಿಲ್ಲಿಸಿರುವುದು ಈಗ ಹಳೆಯ ಸುದ್ದಿ. ಏರ್‌ ಇಂಡಿಯಾ ಕಂಪೆನಿಯೂ ಇದಕ್ಕೆ ಹೊರತಾಗಿಲ್ಲ. ಬೋಯಿಂಗ್ 787 ವಿಮಾನಗಳಲ್ಲಿ ಬಳಸಿರುವ ಲಿಥಿಯಂ ಅಯಾನ್ ಬ್ಯಾಟರಿಗಳು ಹೆಚ್ಚು ಚಾರ್ಜ್ ಆದರೆ ಬೆಂಕಿ ಕಾಣಿಸುವ ಅಪಾಯ ಇರುವುದೇ ಈ ಹಾರಾಟ ಸ್ಥಗಿತಕ್ಕೆ ಕಾರಣ. ಸತು ಮತ್ತು ಗಂಧಕಾಮ್ಲದ ಬ್ಯಾಟರಿ,ಸೀಸ ಮತ್ತು ಕ್ಯಾಡ್ಮಿಯಂ ಬಳಸುವ ಬ್ಯಾಟರಿಗಳು ಬಲು ತೂಕ ಹೊಂದಿರುತ್ತವೆ.ವಿಮಾನವನ್ನು ಹಗುರವಾಗಿಸಿ,ಇಂಧನ ದಕ್ಷತೆ ಹೆಚ್ಚಿಸಲು ಲೀಥಿಯಂ ಅಯಾನು ಬ್ಯಾಟರಿಗಳನ್ನು ಬಳಸಲು ಬೋಯಿಂಗ್ ತೀರ್ಮಾನಿಸಿತ್ತು.ಒಮ್ಮೆ ಈ ಬ್ಯಾಟರಿಗಳಲ್ಲಿ ಬೆಂಕಿ ಕಾಣಿಸಿದರೆ,ಸಾಮಾನ್ಯ ಬೆಂಕಿ ಆರಿಸುವ ಸಾಧನಗಳು ಪ್ರಯೋಜನಕ್ಕೆ ಬಾರವು-ವಿಶೇಷ ಸಾಧನಗಳು ಬೇಕು. ಇಲ್ಲವಾದರೆ ಬೆಂಕಿ ತನಗೆ ತಾನೇ ಆರಿಹೋಗುವುದನ್ನು ಕಾಯಬೇಕಾಗುತ್ತದೆ.ಸುಧಾರಿತ ಲಿಥಿಯಂ ಅಯಾನು ಬ್ಯಾಟರಿಗಳನ್ನು ಬೋಯಿಂಗ್ ವಿಮಾನಗಳಿಗೆ ಅಳವಡಿಸುವ ಪ್ರಸ್ತಾಪವನ್ನು ಕಂಪೆನಿ ಹೊಂದಿದೆ.