ಸಾಹಿತ್ಯ ಸಮ್ಮೇಳನವೆಂಬ ಮತ್ತೊಂದು ಮೆರವಣಿಗೆ

ಸಾಹಿತ್ಯ ಸಮ್ಮೇಳನವೆಂಬ ಮತ್ತೊಂದು ಮೆರವಣಿಗೆ

  ಕನ್ನಡ ಸಾಹಿತ್ಯ ಪರಿಷತ್ತಿನ ಮತ್ತೊಂದು ಸಮ್ಮೇಳನ ನಡೆಯಲಿದೆ. ಸಮ್ಮೇಳನದ ನಿಯೋಜಿತ ಅಧ್ಯಕ್ಷರನ್ನು ಸಂದರ್ಶಿಸುವ ಔಪಚಾರಿಕತೆಯನ್ನೂ ಪ್ರೆಸ್ ಕ್ಲಬ್ ಪೂರೈಸಿದೆ. (ಜ. ೩೦) ಇದರಿಂದ ‘ಕನ್ನಡಕ್ಕೆ' ಏನಾದರು ಆಗಲಿದೆಯೇ?

          ನಿಯತಕಾಲಿಕ ಸಮ್ಮೇಳನಾದಿಯಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಹುತೇಕ ಕಾರ್ಯಕ್ರಮಗಳು, ಸಾಹಿತ್ಯಿಕ ಔಪಚಾರಿಕತೆಯಾಗಿವೆ. ಇಲ್ಲಿ ಸಾಹಿತ್ಯದ ಅರ್ಥವೂ, ಸೃಜನಶೀಲ ವಿಮರ್ಶಾತ್ಮಕ ಬರವಣಿಗೆಗೆ ಸೀಮಿತವಾಗಿರುತ್ತವೆ. ಸಮಗ್ರ ‘ಕನ್ನಡತನ ಅಷ್ಟಕ್ಕೆ ಅಡಗಿರುವುದಲ್ಲ. ‘ಸಾಹಿತ್ಯ, ಪಂಡಿತಮಾನ್ಯರಿಗೆ, ‘ಸ’ ಹಿತವಾದದ್ದು, ಅಂದರೆ ರಸೋತ್ಕರ್ಷಕವಾದದ್ದು. ನಿಜವಾಗಿ ‘ಸಾಹಿತ್ಯ, ನಾಡಿನ ಎಲ್ಲೆಕಟ್ಟಿನ ಎಲ್ಲ ಜನ, ಯಾವೆಲ್ಲದರ ‘ಸಹಿತ’ ಬಾಳಬೇಕೋ, ಅದು ಅನಿವಾರ್ಯವೋ, ಅದು ‘ಸಾಹಿತ್ಯ’. ಹೀಗೆ ಅರ್ಥೈಸುವುದಾದರೆ, ಸಾಹಿತ್ಯ ಪರಿಷತ್ತು ಮತ್ತು ಸಮ್ಮೇಳನದ ಪೌರುಷ ಹಿಗ್ಗುತ್ತದೆ.

          ದೇಶ-ವಿದೇಶಗಳ ಹೈಟೆಕ್ ಪ್ರತಿಭೆಗಳು ಕರ್ನಾಟಕಕ್ಕೆ ಬರಲಿ; ಆದರಿದು ಕನ್ನಡ ಪ್ರಾಂತ್ಯವೂ ಹೌದು ಎನ್ನುವುದನ್ನು ಆಡಳಿತಗಾರರು ಮರೆತುಬಿಟ್ಟಿದ್ದಾರೆ. ಅತಿಥಿ-ಅಭ್ಯಾಗತರ ಮಕ್ಕಳಿಗಾಗಿ ಎಂದು ಸಿಬಿಎಸ್‌ಇ, ಐಸಿಎಸ್‌ಇ. ಶಾಲಾಶಿಕ್ಷಣಕ್ಕೇ ಇಲ್ಲಿ ಅವಕಾಶ; ಅದೇ ಕನ್ನಡದ ನಾಶ. ರಾಜ್ಯ ಸರಕಾರ, ಶಾಲಾಶಿಕ್ಷಣವನ್ನು ಕೈವಶಕ್ಕೆ ತೆಗೆದುಕೊಳ್ಳಬೇಕು; ಅದನ್ನು ನಾಡಿನ ಭಾಷೆಯಲ್ಲಿ ಮಾತ್ರಾ ನಡೆಸಬೇಕು. ಸಮ್ಮೇಳನ ಆ ಎಚ್ಚರ ತರದಿದ್ದರೆ, ಕನ್ನಡಿಗರಿಗೆ ಇನ್ನೆಷ್ಟೇ ಜ್ಞಾನಪೀಠಾಧಿಪತ್ಯ ಬಂದರೂ, ಈ ಮಣ್ಣಿನಲ್ಲಿ ಕನ್ನಡದ ಹುಲ್ಲು ಬೆಳೆಯುವುದಿಲ್ಲವೆನ್ನುವುದು ನಿಶ್ಚಯ.

Rating
No votes yet