ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ? - (ರಾಗ ಮೋಹನ, ಭಾಗ ಐದು, ಅಂತೂ ಮುಗಿಯಿತು!)
ಮೋಹನ ಮುರಳಿಯ ಕರೆಯ ಬಗ್ಗೆ ವಿಚಿತ್ರಾನ್ನದ ಶ್ರೀವತ್ಸಜೋಷಿಯವರು ಮೊನ್ನೆ ಬರೆದಿದ್ದರು. ಆಗಲೇ ನಾನು ನನ್ನ ಮೋಹನ ರಾಗದ ಬಗ್ಗೆಯ ಟಿಪ್ಪಣಿ ಇನ್ನೂ ಮುಗಿಸಲೇ ಇಲ್ಲ ಎಂಬುದು ನೆನಪಾಯಿತು. ಇರಲಿ, ನಾನು ನನ್ನ ವಿವರಣೆ ಬರೆಯದಿದ್ದರೆ, ಮೋಹನಕ್ಕಾದ ಹಾನಿ ಏನೂ ಇಲ್ಲ. ಆದರೂ. ಸರಿಯಾದ ಮುಕ್ತಾಯಕ್ಕೆ, ಇದು ಬೇಕೆನ್ನಿಸಿತು.
ಹಿಂದೇ ಹೇಳಿದಂತೆ, ಕರ್ನಾಟಕ ಸಂಗೀತದಲ್ಲಿ, ಮೋಹನ ಬಹಳ ಪ್ರಖ್ಯಾತ ರಾಗ. ಅಷ್ಟೇ ಅಲ್ಲ, ಬಹಳ ಕಾಲದಿಂದಲೂ ಬಳಕೆಯಲ್ಲಿರುವ ರಾಗ. ಅದಕ್ಕೆ ಹಿಂದೆ ರೇವಗುಪ್ತಿ, ರೇಗುಪ್ತಿ, ಡೊಂಬಕ್ರಿಯ, ಭೂಪಾಲ ಮೊದಲಾದ ಹೆಸರುಗಳಿದ್ದವು. ಅಣ್ಣಮಾಚಾರ್ಯರ ರಚನೆಗಳಿರುವ ತಿರುಪತಿ ತಾಮ್ರಶಾಸನಗಳಲ್ಲಿ ಇದು ರೇವಗುಪ್ತಿ ಎಂಬ ಹೆಸರಿನಲ್ಲಿದೆಯಂತೆ. ಪುರಂದರದಾಸರ ಹಲವು ರಚನೆಗಳನ್ನೂ ಸಾಂಪ್ರದಾಯಿಕವಾಗಿ ಮೋಹನದಲ್ಲೇ ಹಾಡಿಕೊಂಡುಬರಲಾಗುತ್ತಿದೆ. ಆದರೂ, ಆಶ್ಚರ್ಯವೆಂದರೆ, ರಾಗಗಳ ಹೆಸರುಗಳು ಬರುವ ನನಗೆ ತಿಳಿದಿರುವ ಕೆಲವು ಪುರಂದರ ದಾಸರ ದೇವರನಾಮಗಳಲ್ಲಿ, ಮತ್ತೆ ಶ್ರೀಪಾದರಾಯರ ದೇವರನಾಮಗಳಲ್ಲಿ ಮೋಹನದ ಹೆಸರು ಕಂಡುಬರುವುದಿಲ್ಲ.
ಮೋಹನ ಸರ್ವಮೋಹಕವಾಗಿರುವುದರಿಂದ , ಎಲ್ಲ ಬಗೆಯ ಸಂಗೀತರಚನೆಗಳೂ ಈ ರಾಗದಲ್ಲಿ ದೊರೆಯುತ್ತವೆ. ಅಲ್ಲದೇ, ಇದು ಸುಲಭವಾದ ರಾಗವಾದ್ದರಿಂದ, ಸಂಗೀತ ಕಲಿಯುವವರಿಗೆ ಮೊದಮೊದಲೇ ಕಲಿಸುವ ರಾಗಗಳಲ್ಲೊಂದು ಮೋಹನ. ಆರಂಭದ ಸರಳೆ ವರಸೆ, ಜಂಟಿವರಸೆ, ಅಲಂಕಾರಗಳನ್ನೆಲ್ಲ ರೂಡಿಯಲ್ಲಿ ಮಾಯಾಮಾಳವಗೌಳರಾಗದಲ್ಲಿ ಕಲಿಸಲಾಗುತ್ತೆ. ಇವುಗಳೆಲ್ಲ ಬರೀ ಸ್ವರ ರಚನೆಗಳು. ಆಮೇಲೆ ಮುಂದಿನ ಹಂತ ಪಿಳ್ಳಾರಿಗೀತೆಗಳು. ಇವುಗಳನ್ನು, ಮಾಯಾಮಾಳವಗೌಳದಿಂದ ಹುಟ್ಟಿದ (ಅಥವ ಅದಕ್ಕೆ ಹೋಲಿಕೆ ಇರುವ ಎಂದರೂ ಸಾಕು) ಮಲಹರಿ ರಾಗದಲ್ಲಿ ಹೇಳಿಕೊಡಲಾಗುತ್ತೆ. ಈ ರಚನೆಗಳಲ್ಲಿ ಸ್ವರದೊಡನೆ ಸಾಹಿತ್ಯವೂ ಇರುತ್ತೆ. ಯಾರು ತಾನೇ ಪುರಂದರ ದಾಸರ ಲಂಬೋದರ ಲಕುಮಿಕರ ಎಂಬ ಹಾಡನ್ನು ಕೇಳಿಲ್ಲ? (ಕನ್ನಡವನ್ನೂ ಸೇರಿ, ಅಲ್ಲ ದಕ್ಷಿಣ ಭಾರತದ ಸಿನೆಮಾಗಳಲ್ಲಿ, ಮಕ್ಕಳ ಸಂಗೀತ ತರಗತಿಯ ದೃಶ್ಯವಿದ್ದರೆ ಇದನ್ನು ಕೇಳೇ ಇರುತ್ತೀರಿ! ಪಾಪ, ನಿರ್ದೇಶಕರಿಗೆ ಇನ್ನಾವುದೂ ಹೊಳೆಯದೆಂದು ತೋರುತ್ತೆ ;)) ಇಲ್ಲಿಂದ ಮಕ್ಕಳಿಗೆ ಮಾತು-ಧಾತು ಎಂಬ ಎರಡು ಭಾಗಗಳ ಪರಿಚಯ ಆಗುತ್ತೆ. ಇದರ ನಂತರ ಹೇಳಿಕೊಡುವ ಬೇರೆಬೇರೆ ರಾಗದಲ್ಲಿ ಸಂಯೋಜಿತವಾಗಿರುವ ಗೀತೆಗಳು - ಸಂಚಾರಿ ಗೀತೆಗಳು ಎಂದೂ ಕರೆಯುತ್ತೇವೆ ಇವನ್ನು. ಏಕೆಂದರೆ, ಬೇರೆಬೇರೆ ರಾಗಗಳಲ್ಲಿರುವ ಸ್ವರ ಸಂಚಾರವನ್ನು ತೋರಿಸಲು ಮಾಡಿರುವ ರಚನೆಗಳೆ ಇವು.
ಮಾತಿಗೆ ಮುನ್ನುಡಿಯೇ ಹೆಚ್ಚಾಯಿತು ಅನ್ನಿಸುತ್ತೆ. ಇದೆಲ್ಲ ಏಕೆ ಹೇಳಿದೆ ಎಂದರೆ, ಸಾಂಪ್ರದಾಯಿಕವಾಗಿ ಹೇಳಿಕೊಡುವ ಮೊದಲ ಗೀತೆ ಮೋಹನ ರಾಗದ ವರವೀಣಾ ಮೃದುಪಾಣೀ ಎಂಬುದು. ಸರಳವಾದ ಈ ರಚನೆಯ ವಿಶೇಷವೆಂದರೆ, ಇಲ್ಲಿ ವೀಣೆಯನ್ನು ಕೈಯಲ್ಲಿ ಹಿಡಿದವಳು ಲಕ್ಷ್ಮೀ, ಸರಸ್ವತಿಯಲ್ಲ!
ಪ್ರಾರಂಭದ ಪಾಠಗಳನ್ನು ಕಲಿತಮೇಲೆ, ವರ್ಣ ಎಂಬ ಪ್ರಕಾರವನ್ನು ಕಲಿಯುವುದು ರೂಢಿ. ವರ್ಣಗಳು ಒಂದು ರಾಗದ ಸಂಪೂರ್ಣ ಪರಿಚಯವನ್ನು ಮಾಡಲು ರಚಿಸಿರುವ ಸಂಗೀತಕ್ಕೆ ಪ್ರಾಮುಖ್ಯತೆ ಇರುವ ರಚನೆಗಳು. ಈಗ ಇಲ್ಲಿ ಮೋಹನ ರಾಗದ ಒಂದು ವರ್ಣವನ್ನು ಕೇಳೋಣ. ರಾಮನಾಡ್ ಶ್ರೀನಿವಾಸಯ್ಯಂಗಾರರ ಈ ವರ್ಣ ಬಹಳ ಜನಪ್ರಿಯತೆಯನ್ನು ಗಳಿಸಿರುವಂಥಾದ್ದು.
ಈ ಕೊಂಡಿ ತೆರೆಯುವ ಪುಟದಲ್ಲಿರುವ ಪಟ್ಟಿಯ ಕೊನೆಯಲ್ಲಿರುವ ಈ ವರ್ಣವನ್ನು ನುಡಿಸಿರುವವರು ಎಲ್.ಸುಬ್ರಮಣ್ಯನ್. ಇಲ್ಲಿ ತಮಿಳು ಚಿತ್ರಗಳನ್ನು ನೋಡುವವರು ಯಾರಾದರೂ ಇದ್ದರೆ, ಮಣಿರತ್ನಂ ಅವರ ಅಗ್ನಿನಟ್ಚತ್ತಿರಂ ಎಂಬ ಚಿತ್ರ ನೆನಪಿದೆಯೇ? ಅದರಲ್ಲಿ ನಿನ್ನುಕೋರಿ ಎಂಬ ಚಿತ್ರಗೀತೆಯೂ ಇದೇ ವರ್ಣದ ಮಟ್ಟನ್ನೇ ಆಧರಿಸಿ ಹೆಣೆದಿರುವ ಹಾಡು. ಇದರ ತೆಲುಗು ಅನುವಾದಕ್ಕೊಂದು ಕೊಂಡಿ ಇದೆ ಇಲ್ಲಿ. ಚಿತ್ರಾ ಅವರ ಧ್ವನಿಯಲ್ಲೊಂದು ಸುಂದರ ಮೋಹನ.
http://www.musicindiaonline.com/p/x/EqK_dO7k_S.As1NMvHdW/
(ಇಲ್ಲಿ ಬೇರೆ ಭಾಷೆಯ ಚಿತ್ರಗೀತೆಯನ್ನು ಹಾಕುವ ಉದ್ದೇಶವಿರಲಿಲ್ಲ. ಆದರೆ ಶ್ರೀನಿವಾಸಯ್ಯಂಗಾರರ ವರ್ಣ ಹೇಗೆ ಚಿತ್ರಗೀತೆಯೊಂದಕ್ಕೆ ಸ್ಫೂರ್ತಿ ಕೊಟ್ಟಿದೆ ಎಂದು ತೋರಿಸೋಣ ಎನ್ನಿಸಿತು - ಅದಕ್ಕೆ ಹಾಕಿದ್ದೇನೆ. ಎರಡೂ ರಚನೆಗಳು ಒಂದೇ ರೀತಿ ಪ್ರಾರಂಭವಾಗುವುದಷ್ಟೇ ಅಲ್ಲದೆ, ಬೇರೆ ಹಲವು ಕಡೆಗಳಲ್ಲೂ ಹೋಲಿಕೆ ಇದೆ. ಸುಬ್ರಮಣ್ಯಂ ಅವರು ಪಿಟೀಲಿನಲ್ಲಿ ನುಡಿಸಿರುವುದರಿಂದ ಪದಗಳು ಕೇಳದೇ ಹೋದರು, ಮಟ್ಟಿನಲ್ಲಿರುವ ಸಾಮ್ಯತೆ ತಿಳಿಯುತ್ತೆ , (ತಿಳಿಯಲಿ!) ಎನ್ನುವುದು ನನ್ನ ಆಶಯ)
ಈಗ ದಾಸರ ರಚನೆಗಳಿಗೆ ಬರೋಣ. ದಾಸರು ಅವರ ಕೃತಿಗಳನ್ನು ಹೇಗೆ ಹಾಡಿಕೊಳ್ಳುತ್ತಿದ್ದರೋ, ಅದರ ಮಟ್ಟು ಹೇಗಿತ್ತೋ ಎಂಬುದನ್ನು ತಿಳಿಯಲು, ಹೆಚ್ಚಿನ ಆಧಾರಗಳಿಲ್ಲ. ಏಕೆಂದರೆ, ಅವರ ಸಂಗೀತ ಬಾಯಿಂದ ಬಾಯಿಗೆ ಹರಿಯಿತೇ ಹೊರತು ಕೈಬರಹಕ್ಕೊಳಗಾಗಲಿಲ್ಲ. ಈ ಕಾರಣದಿಂದಲೇ, ಒಂದೇ ರಚನೆ ಬೇರೆಬೇರೆ ಮಟ್ಟಿನಲ್ಲಿ ಹಾಡುವುದನ್ನು ನಾವು ಕಾಣಬಹುದು. ಸಾಂಪ್ರದಾಯಿಕವಾಗಿ ಕೆಲವು ದೇವರನಾಮಗಳನ್ನು ಒಂದೇ ಧಾಟಿಯಲ್ಲಿ ಹೇಳುವುದೂ ಉಂಟು. ಈ ಧಾಟಿಗಳಲ್ಲಿ ಮುಕ್ಕಾಲುಪಾಲು ಹತ್ತೊಂಬತ್ತು-ಇಪ್ಪತ್ತನೆಯ ಶತಮಾನಗಳಲ್ಲಿ ಬೇರೆ ಬೇರೆ ಸಂಗೀತಗಾರರು ಸಂಯೋಜಿಸಿರುವುದು. ಹಾಗಾಗಿ, ಪುರಂದರದಾಸರು ಅಥವ ಕನಕದಾಸರು ಅವರ ರಚನೆಗಳನ್ನು ಹೇಗೆ ಹಾಡುತ್ತಿದ್ದಿರಬಹುದು ಎಂಬುದನ್ನು ನಾವು ಊಹಿಸಬಹುದು ಅಷ್ಟೇ. ದಾಸರುಗಳಲ್ಲಿ ಹಲವರು (ಪುರಂದರ, ಶ್ರೀಪಾದರಾಯ ಮೊದಲಾದವರು ಸಂಗೀತದಲ್ಲಿ ಭಾರೀ ಸಾಧನೆ ಮಾಡಿದ್ದವರೇ. ಹಾಗಾಗಿ, ಅವರು ತಮ್ಮ ರಚನೆಗಳನ್ನು ಅಂದಿನ ಪ್ರಸಿದ್ಧ ರಾಗಗಳಲ್ಲೇ ಹಾಡಿರಬೇಕು ಎಂದು ಊಹಿಸಬಹುದು. ಸಂಗೀತದಲ್ಲಿ ಹೆಚ್ಚು ಪರಿಶ್ರಮವಿಲ್ಲದವರು, ತಮ್ಮ ರಚನೆಗಳನ್ನು ಸ್ವಲ್ಪ ಸರಳವಾದ ಶೈಲಿಯಲ್ಲಿ ಹಾಡುತ್ತಿದ್ದಿರಲೂಬಹುದು.
ಈಗ ಮೋಹನದಲ್ಲಿ ಸಂಯೋಜಿತವಾದ ಕೆಲವು ದೇವರನಾಮಗಳನ್ನು ನೋಡೋಣ. ಮೊದಲಿಗೆ ಒಂದು ವಿಶಿಷ್ಟವಾದ ರಚನೆ. ಸಾಧಾರಣವಾಗಿ, ವಿದ್ಯಾರ್ಥಿ ಗುರುವಿನ ಸ್ತುತಿ ಮಾಡುವುದು ರೂಢಿ. ಆದರೆ ಇಲ್ಲಿ ಗುರುವೇ ಶಿಷ್ಯನನ್ನು ಹಾಡಿ ಹೊಗಳುತ್ತಾರೆ. ಹೌದು. ವಾಸರಾಯರು, ತಮ್ಮ ಶಿಷ್ಯರಾದ, ತಮಗಿಂತಲೂ ಕಿರಿಯರಾದ ಪುರಂದರದಾಸರನ್ನು ಹಾಡಿಹೊಗಳುವ ರಚನೆ ಇಲ್ಲಿದೆ. ಪಟ್ಟಿಯಲ್ಲಿ ಕೆಳಗಿನಿಂದ ಎರಡನೆಯ ಹಾಡಿದು.
http://www.udbhava.com/udbhava/songs.jsp?id=622
ಹಾಡನ್ನು ಸಂಯೋಜಿಸಿ, ಹಾಡಿರುವವರು ಪುತ್ತೂರು ನರಸಿಂಹ ನಾಯಕ ಅವರು. ಸರಳವಾದ ಸಂಗೀತ, ಉತ್ತಮ ಸಾಹಿತ್ಯ. ಕೇಳಲೇ ಬೇಕಾದಂತಹ ಹಾಡಿದು.
ಈಗ ಮತ್ತೆ ಇನ್ನೊಂದು ಪ್ರಸಿದ್ಧ ದೇವರನಾಮವನ್ನು ಕೇಳುವ. ಈಗ ಮೂರು ದಶಕಗಳ ಹಿಂದೆ ಈ ಹಾಡು ಹೆಚ್ಚು ಪ್ರಚಾರದಲ್ಲಿ ಇತ್ತೋ ಇಲ್ಲವೋ ನನಗೆ ತಿಳಿಯದು. ಆದರೆ, ೮೦ರ ದಶಕದಲ್ಲಿ ಧ್ವನಿಮುದ್ರಿಕೆಯಲ್ಲಿ ಬೆಳಕುಕಂಡ ಈ ರಚನೆ, ವಿದ್ಯಾಭೂಷಣ ಅವರ್ ಅತೀ ಪ್ರಸಿದ್ಧ ಗೀತೆ ಎಂದರೂ ತಪ್ಪಿಲ್ಲ. ಕರ್ನಾಟಕದಲ್ಲಿ ಈ ಹಾಡನ್ನು ಕೇಳದ ಯಾರಾದರೂ ಇರಬಹುದು ಎಂದೂ ನನಗನಿಸುವುದಿಲ್ಲ. ಅಷ್ಟು ಜನಪ್ರಿಯವಾಗಿದೆ ಇದು.
ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ?
http://www.udbhava.com/usearch/search.spring?qs=pillangovia&at=on&st=on&ly=on&md=on&ps=on&cat=0
ಮೋಹನರಾಗದ ಈ ಹಾಡು, ನನಗಂತೂ ಅಚ್ಚುಮೆಚ್ಚು. ಹಾಡೊಂದು ಸುಂದರವಾಗಿರಲು, ಮನಸ್ಸಿಗೆ ಮುಟ್ಟಲು ಹಿನ್ನೆಲೆ ಸಂಗೀತ, ಪಕ್ಕವಾದ್ಯಗಳ ವೈಭವ ಹೆಚ್ಚು ಬೇಡ ಎಂಬುದಕ್ಕೆ ನಿದರ್ಶನ ಈ ಗೀತೆ. ಸಂಗೀತ ರಚನೆಯೂ ಬಹಳ ಸರಳವಾಗಿದೆ. ನಡುವೆ ಬರುವ ಕೊಳಲಿನ ಹಿನ್ನಲೆ ಕೃಷ್ಣನ ಪಿಳ್ಳಂಗೋವಿಯನ್ನೇ ನೆನಪಿಸುತ್ತದೆ.
ಬೇರೆ ಬೇರೆ ರೀತಿಯ ರಚನೆಗಳಿಗೂ ಮೋಹನ ರಾಗ ಹೊಂದಿಕೊಳ್ಳುವ ಪರಿಯನ್ನು ಈ ಮೊದಲೇ ಪ್ರಸ್ತಾಪಿಸಿದ್ದೆ. ಬಹುಶಃ ದುಃಖದ ಸನ್ನಿವೇಶವೊಂದನ್ನು ಬಿಟ್ಟು ಇನ್ನೆಲ್ಲ ರಸಗಳಿಗೂ ಹೊಂದುತ್ತದೆ ಈ ರಾಗ.
ತ್ಯಾಗರಾಜರು ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲೊಬ್ಬರು.ಹರಿದಾಸರಂತೆಯೇ ಊಂಛವೃತ್ತಿಯ ದೀಕ್ಷೆ ತೆಗೆದುಕೊಂಡವರಿವರು. ರಾಮನ ಪರಮಭಕ್ತ. ಪುರಂದರ ದಾಸರನ್ನು ಮಾನಸಿಕ ಗುರುಗಳಾಗಿ ತೆಗೆದುಕೊಂಡ ಇವರು, ತಮ್ಮ ತಾಯಿಯವರಿಂದ ಪುರಂದರರ ಕೀರ್ತನೆಗಳನ್ನು ಕೇಳಿ ಪ್ರಭಾವಿತರಾದರೆಂಬ ಮಾತಿದೆ. ಎಷ್ಟೋ ರಚನೆಗಳಲ್ಲಿ ತ್ಯಾಗರಾಜರು ಹೇಳುವ ಮಾತುಗಳು ಪುರಂದರದಾಸರ ಮಾತುಗಳಂತೇ ತೋರುತ್ತದೆ. ತೆಲುಗು ಮತ್ತು ಸಂಸ್ಕೃತ ಎರಡೂ ಭಾಷೆಯಲ್ಲಿ ಇವರು ಕೃತಿರಚನೆ ಮಾಡಿದ್ದಾರೆ. ಸಂಸ್ಕೃತದಲ್ಲಿರುವ ರಚನೆಗಳು ಹೆಚ್ಚಾಗಿ ಸ್ತುತಿರೂಪದಲ್ಲಿದ್ದರೆ, ತೆಲುಗಿನ ಕೃತಿಗಳು ಹೃದಯಕ್ಕೆ ಹತ್ತಿರವಾಗುವ ಮನೋನಿವೇದನೆಯ ರೀತಿಯಲ್ಲಿವೆ. ಇವರ ಮಗಳ ಮದುವೆಯ ಸಮಯದಲ್ಲಿ ಅವರ ಶಿಷ್ಯರೊಬ್ಬರು ರಾಮನ ಚಿತ್ರಪಟವೊಂದನ್ನು ಉಡುಗೊರೆಯಾಗಿ ತಮ್ಮ ಹಳ್ಳಿಯಿಂದ ತಲೆಯಮೇಲೆ ಹೊತ್ತು ತಂದರಂತೆ. ಅದನ್ನು ಕಂಡ ತ್ಯಾಗರಾಜರು ಆನಂದ ತುಂಬಿ, ಈ ಮೋಹನ ರಾಗದ ಕೃತಿಯನ್ನು ಹಾಡಿದರೆಂದು ಹೇಳಿಕೆ.ನನ್ನು ಪಾಲಿಂಪ ನಡಚಿ ವಚ್ಚಿತಿವೋ ನಾ ಪ್ರಾಣನಾಥಾ! ನನ್ನ ಪಾಲಿಸಲು ನಡೆದು ಬಂದೆಯಲ್ಲೋ ! ತಾವರೆಕಣ್ಣವನೇ! ನಿನ್ನ ಮುದ್ದು ಮುಖವನ್ನು ನೋಡುತ್ತಿರುವುದೇ ನನ್ನ ಮನದಾಳದ ಬಯಕೆ ಎಂದು ಆತ್ಮೀಯವಾಗಿ ಹಾಡುತ್ತಾರೆ.
ಈ ಕೆಳಗಿನ ಕೊಂಡಿಯಲ್ಲಿ ವಿಜಯಲಕ್ಷ್ಮಿ ಸುಬ್ರಮಣ್ಯಂ ಅವರ ಧ್ವನಿಯಲ್ಲಿ ಈ ಕೃತಿಯನ್ನು ಕೇಳಿ. ಈ ಬರಹಗಳ ಉದ್ದೇಶವೇ, ಶಾಸ್ತ್ರೀಯ ಸಂಗೀತದ ರಸಾನುಭವನ್ನು ಹೆಚ್ಚಿಸಿಕೊಳ್ಳಲು ಆದ್ದರಿಂದ, ಕೃತಿಗೆ ಮೊದಲು ಇರುವ ಆಲಾಪನೆಯನ್ನೂ ಕೇಳುವಿರಿ ಎಂಬ ಆಶಯ ನನ್ನದು.
ಮೋಹನ ರಾಗದಲ್ಲಿ ತ್ಯಾಗರಾಜರ ಇತರ ರಚನೆಗಳಾದ ಭವನುತ, ಎಂದುಕೋ ಬಾಗ ತೆಲಿಯದು, ದಯರಾನೀ, ಎವರುರಾ ನಿನ್ನುವಿನಾ, ರಾಮಾ ನಿನ್ನು ನಮ್ಮಿನಾ, ಮೋಹನ ರಾಮ ಮೊದಲಾದವು ಪ್ರಸಿದ್ದವಾಗಿವೆ. ಒಂದೊಂದರಲ್ಲೂ ರಾಗದ ಬೇರೆ ಬೇರೆ ಅಂಶಗಳ ಬಗ್ಗೆ ಗಮನವೀಯುವ ಈ ಕೃತಿಗಳು ಮೋಹನರಾಗಕ್ಕೊಂದು ಕೈಪಿಡಿಯಾಗಿವೆ ಎನ್ನಬಹುದು. ಸಾಧಾರಣವಾಗಿ ರಾಗಮುದ್ರೆಯನ್ನು ಹೆಚ್ಚಾಗಿ ಉಪಯೋಗಿಸದ ತ್ಯಾಗರಾಜರು ತಮ್ಮ ಮೋಹನ ರಾಮ ಎಂಬ ಕೃತಿಯ ಪಲ್ಲವಿಯ ಮೊದಲ ಪದದಲ್ಲೇ ರಾಗಮುದ್ರೆ ಇಟ್ಟಿರುವುದೊಂದು ವಿಶೇಷ ಎನ್ನಬಹುದು.
ಈಗ ಎಂ.ಎಸ್.ಶೀಲಾ ಅವರ ಸುಮಧುರ ದ್ವನಿಯಲ್ಲಿ ಈ ಕೃತಿಯನ್ನು ಕೇಳಿ. ಕೃಪೆ. ಸಂಗೀತಪ್ರಿಯ.ಆರ್ಗ್.
ಮೊದಲೇ ಹೇಳಿದ್ದಂತೆ, ಆಲಾಪನೆ, ಸ್ವರ ಕಲ್ಪನೆಗಳ ಕಡೆಗೂ ಗಮನವೀಯುವುದನ್ನು ಮರೆಯದಿರಿ! ಈ ಎರಡೂ ರಚನೆಗಳು ಪ್ರಾರಂಭವಾಗುವುದು, ಹೆಚ್ಚಾಗಿ ಸಂಚಾರ ಮಾಡಿದ್ದು ರಾಗದ ಕೆಳ ಭಾಗಗಳಲ್ಲಿ. ಇದಕ್ಕೆ ಪೂರ್ವಾಂಗ ಪ್ರಧಾನ ಎನ್ನುತ್ತೇವೆ. ಈಗ ಒಬ್ಬರೇ ವಾಗ್ಗೇಯಕಾರರು ರಾಗವನ್ನು ಪರಿಪರಿಯಾಗಿ ಹೇಗೆ ಬಳಸಿಕೊಳ್ಳಬಲ್ಲರು ಎಂಬುದಕ್ಕೆ, ತ್ಯಾಗರಾಜರ ಇನ್ನೊಂದು ರಚನೆ ಇಲ್ಲಿದೆ. ಈ ರಚನೆ ಹೆಚ್ಚಾಗಿ ತಾರಸ್ಥಾಯಿಯ ಬಳಿಯಲ್ಲಿ ಸಂಚರಿಸುವುದನ್ನು ಗಮನಿಸಿ. ಹಾಡಿರುವವರು ಸಿ.ಸರೋಜ ಮತ್ತು ಸಿ. ಲಲಿತ.
ಎವರೂರಾ ನಿನ್ನು ವಿನಾ? (ಬಾಂಬೇ ಸಹೋದರಿಯರು)
ಈಗ ಇನ್ನೊಂದೆರಡು ಬೇರೆ ವಾಗ್ಗೇಯಕಾರರ ರಚನೆಗಳನ್ನು ನೋಡಿ, ಈ ಲೇಖನವನ್ನು ಮುಗಿಸಬಹುದು. ಉತ್ತುಕ್ಕಾಡು ವೆಂಕಟಸುಬ್ಬಯ್ಯರ್ ಅವರು ತ್ಯಾಗರಾಜರಿಗಿಂತ ಸ್ವಲ್ಪ ಮುಂಚೆ ಬಂದು ಹೋದ ಒಬ್ಬ ವಾಗ್ಗೇಯಕಾರ. ಕೃಷ್ಣನ ಬಗ್ಗೆ ಇವರ ರಚನೆಗಳು ಅವುಗಳ ಕಾವ್ಯಗುಣಕ್ಕೆ ಹೆಸರಾಗಿವೆ. ಅವರ ನೃತ್ಯಕ್ಕೆ ಹೇಳಿ ಮಾಡಿದಿದಂತಹ ಒಂದು ಸುಪ್ರಸಿದ್ಧ ರಚನೆ, ಮೋಹನ ರಾಗದಲ್ಲಿ, ಅರುಣಾ ಸಾಯಿರಾಮ್ ಅವರ ಕೊರಳಲ್ಲಿ.
ಸ್ವಾಗತಂ ಕೃಷ್ಣಾ (ಅರುಣಾ ಸಾಯಿರಾಮ್)
ಮೋಹನ ರಾಗ ಹಾಡುವುದರಲ್ಲಿ ಮಹಾರಾಜಪುರಂ ವಿಶ್ವನಾಥಯ್ಯರ್ ಅವರು ಎತ್ತಿದ ಕೈ. ಅವರ ಮಗ ಮಹಾರಾಜಪುರಂ ಸಂತಾನಂ ಅವರೂ ಈ ಪರಂಪರೆಯನ್ನು ಮುಂದುವರೆಸಿಕೊಂಡುಬಂದವರೇ. ಈಗ ಅವರ ಕಚೇರಿಯೊಂದರಿಂದ ಕೇಳಿ- ಮುತ್ತುಸ್ವಾಮಿ ದೀಕ್ಷಿತರ ಕೃತಿ- ರಕ್ತಗಣಪತಿಂ ವಂದೇ.(source. www.sangeethapriya.org)
ಮುತ್ತುಸ್ವಾಮಿ ದೀಕ್ಷಿತರ ಶೈಲಿಯ ಬಗ್ಗೆ ಮಾತಾಡಲು ಈಗ ಸರಿಯಾದ ವೇಳೆಯಲ್ಲ. ಅದಕ್ಕೇ ಹಲವಾರು ಬರಹಗಳನ್ನು ಬರೆದರೂ ಸಾಲದು. ತಿರುವಾರೂರಿನ ದೇವಾಲಯದಲ್ಲಿರುವ ಹದಿನಾರು ಗಣಪತಿ ವಿಗ್ರಹಗಳ ಬಗ್ಗೆ ಅವರು ರಚನೆ ಮಾಡಿದ್ದಾರೆ. ಅವುಗಳಲ್ಲಿ - ಬಾದಾಮಿ ಚಾಲುಕ್ಯರ ದೇವಾಲಯವೊಂದರಿಂದ ಕೊಂಡೊಯ್ಯಲಾಗಿದೆ ಎನ್ನಲಾಗುವ - ಪ್ರಸಿದ್ದ ಕೃತಿ ವಾತಾಪಿ ಗಣಪತಿಂ ಭಜೇ ಕೂಡ ಒಂದು. ರಕ್ತ ಗಣಪತಿಂ ಕೃತಿಯಲ್ಲಿ ರಾಗ ಮುದ್ರೆ ಬಂದಿರುವುದನ್ನು ಗಮನಿಸಿ. ಇದರಲ್ಲಿ ಬರುವ ಪರಶುರಾಮ ಕ್ಷೇತ್ರದ reference ಇಂದ ಇದು ಕೇರಳದ ದೇವಾಲಯವೊಂದರ ಗಣೇಶನ ಮೇಲಿನ ರಚನೆ ಎಂದೂ ಊಹೆ ಮಾಡಲಾಗಿದೆ.
ಈಗ ದೀಕ್ಷಿತರ ಇನ್ನೊಂದು ಕೃತಿ ಕೇಳೋಣ - ಸುಪ್ರಸಿದ್ಧ ಹಾಡುಗಾರರಾದ ಬಾಲಮುರಳಿಕೃಷ್ಣರ ಧ್ವನಿಯಲ್ಲಿ.
ಈ ಕೃತಿಯೂ ಸಪ್ತಕದ ಉತ್ತರಾರ್ಧದಲ್ಲೇ ನೋಡಿ. ಇಂತಹವಕ್ಕೆ ಉತ್ತರಾಂಗ ಪ್ರಧಾನ ಎನ್ನುತ್ತೇವೆ.
ಸಂಗೀತಕಾರ್ಯಕ್ರಮಗಳನ್ನು ರೂಢಿಯಲ್ಲಿ ಮಂಗಳದೊಂದಿಗೋ, ಅಥವಾ ತಿಲ್ಲಾನದೊಂದಿಗೋ ಮುಗಿಸುವುದು ಪದ್ಧತಿ.ಇವತ್ತು ಮೋಹನದ ಮೋಡಿಯ ಮುಗಿತಾಯವನ್ನೂ , ಮೈಸೂರಿನ ಸುಪ್ರಸಿದ್ಧ ವಾಗ್ಗೇಯಕಾರ ಮುತ್ತಯ್ಯ ಭಾಗವತರ ತಿಲ್ಲಾನದೊಂದಿಗೆ ಮಾಡೋಣ. ಹಾಡುವವರು ಟಿ.ಎನ್. ಶೇಷಗೋಪಾಲನ್
ಮೋಹನದ ವಿವಿಧ ಮುಖಗಳನ್ನು ಪರಿಚಯಿಸಲು ಈ ಬರಹ ಸ್ವಲ್ಪ ಸಹಾಯ ನೀಡಿರಬಹುದೆಂದುಕೊಂಡಿದ್ದೇನೆ. ಏನೆನ್ನಿಸಿತೆಂದು, ಯಾವುದು ಉಪಯುಕ್ತ, ಯಾವುದು ಜಳ್ಳು ಎಂದು ನಾಲ್ಕು ಸಾಲು ಬರೆಯಿರಿ!
-ಹಂಸಾನಂದಿ
Comments
ಉ: ಮೋಹನ ರಾಮ ಮುಖಜಿತ ಸೋಮ - (ರಾಗ ಮೋಹನ, ಭಾಗ ಐದು, ಅಸಂಪೂರ್ಣ)
In reply to ಉ: ಮೋಹನ ರಾಮ ಮುಖಜಿತ ಸೋಮ - (ರಾಗ ಮೋಹನ, ಭಾಗ ಐದು, ಅಸಂಪೂರ್ಣ) by gangadharg
ಉ: ಮೋಹನ ರಾಮ ಮುಖಜಿತ ಸೋಮ - (ರಾಗ ಮೋಹನ, ಭಾಗ ಐದು, ಅಸಂಪೂರ್ಣ)
In reply to ಉ: ಮೋಹನ ರಾಮ ಮುಖಜಿತ ಸೋಮ - (ರಾಗ ಮೋಹನ, ಭಾಗ ಐದು, ಅಸಂಪೂರ್ಣ) by hamsanandi
ಉ: ಮೋಹನ ರಾಮ ಮುಖಜಿತ ಸೋಮ - (ರಾಗ ಮೋಹನ, ಭಾಗ ಐದು, ಅಸಂಪೂರ್ಣ)