ಡಾ. ಎಚ್. ಎಸ್. ವೆಂಕಟೇಶ ಮೂರ್ತಿಯವರ ’ಉತ್ತರಾಯಣ ಮತ್ತು..’

ಡಾ. ಎಚ್. ಎಸ್. ವೆಂಕಟೇಶ ಮೂರ್ತಿಯವರ ’ಉತ್ತರಾಯಣ ಮತ್ತು..’

ಡಾ. ಎಚ್ಚೆಸ್ವಿಯವರ 'ಉತ್ತರಾಯಣ ಮತ್ತು ..' ದಲ್ಲಿ 'ಒಂದು ಕಥೆ' ಮೂರ್ತಿಯವರ ವೈವಾಹಿಕ  ಜೀವನದ ಸ್ಪಷ್ಟ ಚಿತ್ರಣವನ್ನು ನಮ್ಮ ಮುಂದೆ ತೆರೆದಿಡುತ್ತದೆ.  'ಉತ್ತರಾಯಣ' ದ ಸಾಲುಗಳು ಅತ್ಯಂತ ಹೃದಯಸ್ಪರ್ಶಿ ಅನುಭವವನ್ನು ಓದುಗರಿಗೆ ಕೊಡಲು ಸಮರ್ಥವಾಗಿವೆ. ಪುಸ್ತಕದಲ್ಲಿ  ಹಲವಾರು ಬೇರೆ ಬೇರೆ ಕವನಗಳಿವೆ. ಆಪ್ತಗೀತ,  ಹಾಗೂ ಶ್ರೀ ಸಂಸಾರಿ' ಮತ್ತಿತರ  ಕವನಗಳು, ಒಂದು ಹೊಸಲೋಕಕ್ಕೆ ನಮ್ಮನ್ನು ಕರೆದೊಯ್ಯುತ್ತವೆ. ಮೂರ್ತಿಯವರ ಸುಂದರ ಅಭಿವ್ಯಕ್ತಿಗೆ ಅವು  ಉತ್ತಮ ಉದಾಹರಣೆಗಳಾಗಿವೆ. 

 
ಎಚ್. ಎಸ್. ವೆಂಕಟೇಶ ಮೂರ್ತಿಯವರ ಮಾತುಗಳಲ್ಲಿ ...
 
ಬದುಕಿನುದ್ದಕ್ಕೂ ಅಭೇದ್ಯ ಎನ್ನುವಂತೆ ಅಂಟಿಕೊಂಡಿದ್ದ ಆಪ್ತ ಜೀವ ಶಾಶ್ವತವಾಗಿ ಅಗಲಿಬಿಟ್ಟಾಗ ಶೂನ್ಯಕ್ಕೆ ಬೇರೆಯದೇ ಅರ್ಥ ಹೊಳೆದಂತಾಯಿತು. ಲಕ್ಷೋಪಲಕ್ಷ ನಕ್ಷತ್ರಗಳಿಗೆ ಆಸರೆ ನೀಡಿರುವ ಆಕಾಶವನ್ನು ಶೂನ್ಯವೆಂದು ಕರೆಯಲಾದೀತೆ ಬೆಳಿಗ್ಯೆ ಖಾಲಿ ನೀಲಿಯಾಗಿದ್ದ ಗಗನ ರಾತ್ರಿ ಎಣಿಸಲಾರದಷ್ಟು ನಕ್ಷತ್ರಗಳನ್ನು ಮಿನಿಗಿಸುತ್ತಾ ಶೂನ್ಯದ ಅರ್ಥ ತಿಳಿಯಿತಾ ಎಂದು ಹುಸಿ ನಗುತ್ತದೆ ಶೂನ್ಯವೆಂದರೆ  ಎನೂ ಇಲ್ಲದ್ದು ಅಲ್ಲ. ಎಲ್ಲವೂ ಉಳ್ಳದ್ದು ಎಂಬ ವಿಲಕ್ಷಣ ಅನುಭೂತಿ ಇಂಥ ವೇಳೆ ಮನಸ್ಸನ್ನು ಗಾಳಿಕೈಯಲ್ಲಿ ಸವರಿಕೊಂಡು ಹೋಗುತ್ತದೆ. ನಿರಾಕಾರವಿಲ್ಲದೆ ಆಕಾರಕ್ಕೆ ಆಶ್ರಯವೆಂಬುದು ಎಲ್ಲಿ ತಾನೇ ದಕ್ಕೀತು ಬಯಲಾಗುವುದು ಎಂದರೆ ಬಯಲಲ್ಲಿ ಆಗುವುದು . ಅಮೂರ್ತವು ಅಸ್ಪಸ್ಥವೂ ಆದ ಅನುಭವವನ್ನು ಭಾಷೆಯ ಪ್ರತಿನಿಧಾನದ ಮೂಲಕ ಆಕೃತಿಗೊಳಿಸುವುದು ಲೇಖಕರ ಸವಾಲು ಎಂಬುದನ್ನು ನಾವು ಬಲ್ಲೆವು. ಆದರೆ ಮೂರ್ತವೆಂಬುದು  ಅಮೂರ್ತದಲ್ಲಿ ಕರಗಿ ಹೋಗುವ ಮೂಲಕವೇ ತನ್ನ ಅಸ್ತಿತ್ವ ಸಾಧಿಸುವುದು ಕಾವ್ಯ ಕ್ರಿಯೆಗೆ ತದ್ವಿರುದ್ಧವಾದ ಒಂದು ಅತಿಕ್ರಮ ವೃತ್ತಿ. ಹೀಗೆ ಆಲಯವು ಬಯಲಲ್ಲಿ ಲಯವಾಗುವುದಕ್ಕೆ ಎರಡು ಅನುಸಂಧಾನಗಳಿವೆ. ಒಂದು, ಅದು ಬಯಲಿನಗಲಕ್ಕೂ ಹಿಗ್ಗಿಕೊಳ್ಳಬೇಕು.  ಎರಡು, ಅದು ಬಯಲಲ್ಲಿ ಬಯಲಾಗುವಂತೆ  ಕುಗ್ಗಿಕೊಳ್ಳಬೇಕು. ಹಾಗಾದರೆ ಬಯಲಾಗುವುದೆಂದರೆ  ಲಯಗೊಳ್ಳುವುದು; ಲಯವನ್ನು ತನ್ನ ಆಲಯ ಮಾಡಿಕೊಳ್ಳುವುದು ಇರಬಹುದೇ -ಎಂಬ ಪ್ರಶ್ನೆಒಂದೆ ಸಮನೆ  ನನ್ನನ್ನು ಕಾಡತೊಡಗಿತು. ಇದಕ್ಕೆ ಉತ್ತರವನ್ನಲ್ಲವಾದರೂ, ಉತ್ತರದ ದಾರಿಯನ್ನಾದರೂ ಶೋಧಿಸುವುದು  ಆಗ ಅನಿವಾರ್ಯವೆನಿಸಿತು. ಅದರ ಫಲ-ಉತ್ತರಾಯಣ ಕವಿತೆ. ತೀರಿದವರನ್ನು ಮರೆಯುವುದು ಎಂದರೆ, ಅವರನ್ನು ಎರಡನೇ  ಬಾರೀ ಕೊಂದಂತೆ ಎಂದು ಒಬ್ಬ ಲೇಖಕ ಹೇಳಿದ ಮಾತು ನನಗೆ ಇಲ್ಲಿ  ಜ್ಞಾಪಕಕ್ಕೆ ಬರುತ್ತದೆ. 
 
To forget the dead would be akin
to killing them a second time.
 
-Elie wiesel
 
ಪ್ರಸ್ತಾವನೆಯಲ್ಲಿ, ಡಾ. ಚಿಂತಾಮಣಿ ಕೊಡ್ಲೆಗೆರೆಯವರು ಹೇಳುತ್ತಾರೆ....
 
'ಒಂದು ಕಥೆ'  ಎಚ್.ಎಸ್.ವಿ.ಯವರ ಪತ್ನಿಯ ಸಾವಿನ ಹಿನ್ನೆಲೆಯಲ್ಲಿ ಆ ಬದುಕನ್ನೊಂದು ಕಥೆಯಾಗಿ ಕಟ್ಟುವ ಪ್ರಯತ್ನ. ರಾಮಗಿರಿ ಊರಿನಲ್ಲೊಬ್ಬಳು  ಹುಡುಗಿ ರಾಜಮ್ಮ. ಅವಳನ್ನು ಮೆಚ್ಚಿ ಮದುವೆಯಾದ ಒಬ್ಬ ಹುಡುಗ. ಮುಂದೆ ಅವರ 'ಹತ್ತಾರು ತಿರುವುಗಳ' ಜೀವನ "ಉರುಳುರುಳಿ ಸಮೆದಿತ್ತು ಚಕ್ರ. " ಕಥೆ ಇನ್ನೂ ಇದೆ ಎನ್ನುವಷ್ಟರಲ್ಲೆ  ರಾಜಮ್ಮ ತಣ್ಣಗೆ ಮಲಗಿದ ದೃಶ್ಯವನ್ನು ಕವಿತೆ ತೋರಿಬಿಡುತ್ತದೆ. ಬರೆದಾಯಿತೆಂದು ಕತೆಗಾರ ನೆಟಿಗೆ ಮುರಿದನಂತೆ. ಇಲ್ಲಿಗೆ ಕಥೆ  ಏನೋ  ಮುಗಿಯಿತು. ಕವಿತೆ ಮುಂದುವರೆದು ಹೇಳುತ್ತದೆ.
 
ಕಥೆ ಮುಗಿಯುವಾಗ ಚಡಪಡಿಕೆ ಪಾತ್ರ  ಕಷ್ಟೆ 
 
ಕೃತಿ ಮುಗಿದ ತೃಪ್ತಿ  ಬರೆದವಗೆ 
 
ಇಷ್ಟುದಿನ ಎಡೆಬಿಡದೆ ಬರೆದ  ಬೆರಳಿಗೆ ಬಿಡುವು 
 
ಹೊರೆ ಇಳಿದ ಗೆಲುವು ಮುಖದೊಳಗೆ  
 
ಒಂದು ಬದುಕು ಒಂದು ಕಥೆಯಾಗಬಹುದು. ಕವಿತೆಯಾಗಬಹುದು. ಕತೆಗಾರನ ಪಾಲಿಗೆ ಕಥೆ ಮುಗಿಯಿತೆಂದರೂ,  ಆ ಕಥೆಯ ಉಳಿದ ಪಾತ್ರಗಳು, ಇವೆಲ್ಲದರ ಅರ್ಥವೇನೆಂದು ಚಿಂತಿಸತೊಡಗುವುದು ಸ್ವಾಭಾವಿಕ. ಒಂದು ಕಥೆ ಬರೆದಾದ ಮೇಲೆ ಅದು ಓದುಗರಿಗೆ ಮಾತ್ರವಲ್ಲ, ಆ ಕಥೆಯ ಪಾತ್ರಗಳಿಗೂ ಸೇರಿದ್ದು ಎಂದೆಲ್ಲ ಈ ಕವಿತೆ ಹೇಳುವಂತಿದೆ.
 
'ಉತ್ತರಾಯಣ' ಒಂದು ದುಖಃಗೀತ,ಇಪ್ಪತ್ನಾಕು ಪುಟ್ಟ ಭಾಗಗಳು ನೋವಿನ ಹಲವು ತಂತಿಗಳನ್ನು ಮೀಟುವಂತಿವೆ. ಜೊತೆಯಲ್ಲಿ ದೀರ್ಘಕಾಲ ಬದುಕಿದ ಸಂಗಾತಿ ಅನಿರೀಕ್ಷಿತವಾಗಿ ವಿದಾಯ ಹೇಳಿದಾಗ ಹುಟ್ಟಿದ ಸಂಕಟದ,  ನೆನಹಿನ ಚಿತ್ರಗಳಿವು. ಸುಮಾರು ೧೦ ತಿಂಗಳ ಅವಧಿಯಲ್ಲಿ ಕವಿ ಈ ಭಾವಚಿತ್ರಗಳನ್ನು ಉದ್ವಿಗ್ನಗೊಳ್ಳುತ್ತಲೂ, ಶಾಂತರಾಗಲು  ಯತ್ನಿಸುತ್ತಲೂ ನಿರ್ಮಿಸುತ್ತ ಆಕ್ರಮಿಸಿದ ಅನುಭವದ ಆಘಾತವನ್ನು ಅರಗಿಸಿಕೊಳ್ಳಲು-ಪಕ್ರಮಿಸಿದ್ದಾರೆ. ಅಡಿ ತೀರದ ದುಖಃವನ್ನು ಕವಿತೆಯಂಥ ಭಾವಶಿಲ್ಪದ ಸೃಷ್ಟಿಯಿಂದಲಾದರೂ ಮೀರಲು ಹವಣಿಸುವ ಪ್ರಯತ್ನಗಳು ಇಂಥ ದುಖಃಗೀತೆಗಳ ಪ್ರೇರಣೆ. ಇದಲ್ಲದೆ ಅಥವಾ ಇದಕ್ಕಿಂತ ಮುಖ್ಯವೆನಿಸುವ  ಇನ್ನೊಂದು ನಿಯೋಗ ಈ ಕವಿತೆಗಿದೆ. ಮೃತ್ಯುಭಯದಿಂದ ದೇವತೆಗಳು ಛಂದಸ್ಸಿನೊಳಕ್ಕೆ ಪ್ರವೇಶಿಸಿದರೆಂದು ಉಪನಿಷತ್ತು ಹೇಳುತ್ತದೆ. ಒಂದು ಸಂಗತಿಯನ್ನು ಛಂದೊಬದ್ಧಗೊಳಿಸುವುದರಿಂದ ಅದನ್ನು ಮೃತ್ಯುವಿನಿಂದ  ಬಿದುಗಡೆಗೊಳಿಸಬಲ್ಲೆವು. ತನ್ನ ಕೈಯಳತೆಯಾಚೆಗೆ ಹಾರಿಹೋದ  ಜೋಡಿಹಕ್ಕಿಯನ್ನು ರಕ್ಷಿಸಿಕೊಳ್ಳುವ ಉಪಾಯವೆಂದರೆ ಇಂಥದೊಂದು ಕಾವ್ಯದಲ್ಲಿ, ಅದರ ಛಂದಸ್ಸಿನ ಉದ್ಯಾನದಲ್ಲಿ ಅವಳ ಚಿತ್ರವನ್ನು ಕಾಪಿಡುವುದು. ನೆನಪು ಭಂಗುರವಾದ್ದು ಮತ್ತು ವೈಯಕ್ತಿಕ. ಸೀಮಿತ ತಾತ್ಕಾಲಿಕತೆಯನ್ನು ಮೀರಬೇಕೆಂದರೆ ಅದೊಂದು ಕಲಾಕೃತಿಯಾಗಬೇಕು. 
 
ಪು. ೧೮ ದ  'ಉತ್ತರಾಯಣ' ಕವಿತೆ ಹೀಗಿದೆ :
 
ಒಂದು ಕಥೆ 
 
ರಾಮಗಿರಿ ಊರಲ್ಲಿ ರಾಮಣ್ಣನವರಿಗೆ 
 
ರಾಜಮ್ಮ ಅಕ್ಕರೆಯ ಮಗಳು. 
 
-ಹೀಗೆ ಕಥೆ  ಶುರುವಾಗಿ ದಿನದಿನಕ್ಕಷ್ಟು ಪುಟ,
 
ನಿಂತ ಮಳೆ, ನಡು  ನಡುವೆ ಮುಗಿಲು. 
 
 
ಬರೆಯುತ್ತ ಹೊಡೆಯುತ್ತ ಕಾಟು ಚಿತ್ತುಗಳಲ್ಲಿ 
 
ಕಥೆ ಸಾಗುತ್ತಿತ್ತು ಪ್ರತಿನಿತ್ಯ. 
 
ಹಾಲುಗುಂಬಳ ಕೊರಳು ; ಬೆನ್ನುದ್ದಕೂ  ಹೆರಳು. 
 
ಛಳಿಜ್ವರಕ್ಕೆ ತಿಳಿ ಸಾರ ಪಥ್ಯ.
 
 
ತಲೆಗೆ ಹತ್ತದ ಗಣಿತ; ಕೈ ಕೊಡುವ ಕಾಗುಣಿತ. 
 
ಹುಡುಗ ಮೆಚ್ಚಿದ್ದು ಮೈಮಾಟ. 
 
ಮೈಕೈಯಿ ತುಂಬಿ ತತ್ತರವೆನುವ ಹಾಲ್ಗಿಂಡಿ  
 
ಜೋಳಿಗೆಯ ತುಂಬಾ ತುಳುಕಾಟ. 
 
 
ಹತ್ತಾರು ತಿರುವುಗಳ ಹಸಗೆಟ್ಟ  ಹಾದಿಯಲ್ಲಿ  
 
ಉರುಳುರುಳಿ ಸಮೆದಿತ್ತು ಚಕ್ರ.
 
ಚಿತ್ರಸಂಪುಟದ ಪುಟಪುಟದ ಒಳಗಡೆಯೆಲ್ಲ 
 
ಹೊಸಬಣ್ಣ. ಅದೆ  ಹಳೇ  ಚಿತ್ರ. 
 
 
ದೀಲಾದ ರವಿಕೆ ; ಹೆಗಲಿಂದ  ಜಗುಳುವ ಕುಬುಸ.
 
ಮೈತುಂಬ ಲೇಖನಿಯ ಚಿತ್ತು. 
 
ಮರದಲ್ಲಿ ಮರಹುಟ್ಟಿ  ಮರ ಚಕ್ರ ಮಣ್ಣಾಗಿ 
 
ಮರ ಏನನ್ನೋ ನೆನೆಯುತ್ತಿತ್ತು.
 
 
ಈಗ ಮಲಗಿದ್ದಾಳೆ ಏದುಸಿರು ಹಾಕುತ್ತ 
 
ತಣ್ಣಗಾಗುತ್ತ  ಇವೆ  ಕಾಲು. 
 
ಕೊನೆಗೆ ಮೂಗಿನ ಹೊಳ್ಳೆ ನಿಷ್ಪಂದವಾಯಿತು.
 
ಬರೆದಾತ ಮುರಿದ ಕೈಬೆರಳು. 
 
 
ಕಥೆ ಮುಗಿಯುವಾಗ ಚಡಪಡಿಕೆ ಪಾತ್ರಕ್ಕಷ್ಟೆ. 
 
ಕೃತಿ ಮುಗಿದ ತೃಪ್ತಿ  ಬರೆದವಗೆ.
 
ಇಷ್ಟು ದಿನ ಎಡೆಬಿಡದೆ ಬರೆದ  ಬೆರಳಿಗೆ ಬಿಡುವು.
 
ಹೊರೆ ಇಳಿದ ಗೆಲುವು ಮುಖದೊಳಗೆ.  
 
 
ಕವಿತೆಗಳನ್ನು ಕುರಿತು ಕೆಲವು  ಓದುಗರ  ಅನಿಸಿಕೆ :
 
1. ಒಟ್ಟಾರೆಯಾಗಿ ನಿಮ್ಮ 'ಉತ್ತರಾಯಣ' ಕವನ ಎಷ್ಟು ಹೃದಯಸ್ಪರ್ಶಿಯಾಗಿದೆಯೆಂದರೆ ಅದರ ಬಗ್ಗೆ ಬರೆಯುವುದಕ್ಕೆ ಸ್ವಲ್ಪ ಕಾಲ ಬೇಕಾಯಿತು. ನಾವು ಪ್ರೀತಿಸುವವರು ಹಲವು ದಶಕಗಳು ನಮ್ಮೊಡನೆ ಪ್ರತಿಕ್ಷಣವೂ ಇದ್ದು ಒಮ್ಮೆಗೇ  ಇಲ್ಲದಂತಾದಾಗ ಜನ್ಮಿಸುವ ಗೊಂದಲ, ದುಖಃ, ಅಸಹಾಯಕಯತೆ, ಅಪರಾಧಿ ಭಾವನೆ ಅಶ್ಚರ್ಯ, ಭ್ರಮೆ, ಇತ್ಯಾದಿ ಭಾವನೆಗಳೆಲ್ಲವೂ ರೂಪಿಸುವ ಒಂದು ಸಂಕೀರ್ಣ ಅನುಭವವನ್ನು ಕವನ ಓದುಗರಿಗೆ ಕೊಡುತ್ತದೆ. ನಿರಂತರ ನೆಪ್ಪಿನ ನಾಟಕವನ್ನು ದಾಖಲಿಸುವ ಇಡೀ ಕವನ ಮತ್ತೆ ಮತ್ತೆ ಓದುವಂತಿದ್ದರೂ ಭಾಗ ೩, ೭ ಮತ್ತು ೧೭ ಬಹಳ ಪರಿಣಾಮಕಾರಿಯಾಗಿವೆ ಎಂದು ತೋರಿತು. ಸಾವು ನಮ್ಮಲ್ಲಿ ಹುಟ್ಟಿಸುವ ದಿಗ್ಭ್ರಮೆ ಸತ್ತವರ ರೂಪಕ್ಕಾಗಿ ನಡೆಯುವ ಹುಡುಕಾಟ, ಭಾರವಾದ ನೆನಪುಗಳು ಇವೆಲ್ಲವೂ ಸೇರಿ, ವೈಯಕ್ತಿಕ  ನೆಲೆಯಿಂದ ಸಾವಿನ ಸುತ್ತಾ ಎಲ್ಲರಿಗು ಇರುವಂತಹ ಸಾರ್ವತ್ರಿಕ ಅನುಭವವನ್ನು ಕವನ ಸಮರ್ಥವಾಗಿ ಸೃಷ್ಟಿಸುತ್ತದೆ.
 
-ಡಾ. ಸಿ. ಏನ್. ರಾಮಚಂದ್ರನ್,
 
2. ನಿಮ್ಮ ಕವಿತೆ 'ಆಪ್ತಗೀತ' ವನ್ನು ಈಗ ತಾನೇ ಓದು ಮುಗಿಸಿದೆ.  ಬಹಳ ದಿನಗಳ ನಂತರ ಒಳ್ಳೆಯ ಕವನವೊಂದನ್ನು ಓದಿದ  ಹಿತಕರವಾದ ಅನುಭವ. ಕೃಷ್ಣನ ಮೇಲೆ, ಅಂತೆಯೇ ನಮ್ಮ ಕಾಲದ ಬದುಕಿನ ಧ್ವಂಧ್ವಗಳ ಮೇಲೆ ಕನ್ನಡದಲ್ಲಿ ಬಂದಿರುವ ಅತ್ಯುತ್ತಮ ಕವಿತೆ ಇದು.  ಆಪ್ತವಾಕ್ಯದ ಧಾಟಿಯಲ್ಲಿರುವ ತಿಳಿವಳಿಕೆ ಮತ್ತು ವಿಷಾದಗಳು ನಮ್ಮೆಲ್ಲರ ಭಾವಲೋಕದ ಭಾಗಗಳೇ ಅಲ್ಲವೇ ? ಇರಲಿ. ಕಾಲ ಕಳೆಯುತ್ತದೆ ; ಕವಿತೆ ಉಳಿಯುತ್ತದೆ. ಅಭಿನಂದನೆ ಮತ್ತು ಪ್ರೀತಿ.
 
-ಡಾ. ಎಚ್. ಎಸ್. ರಾಘವೇಂದ್ರರಾವ್,
 
3. ಸಂಸಾರ, ಸಮಾಜ, ವ್ಯಕ್ತಿ ಈ ಮೂರೂ ಸೇರುವ ಬಿಂದು ಎಚ್. ಎಸ್. ವಿ.ಅವರ ಕಾವ್ಯದ ಈಚಿನ ಧ್ಯಾನ ಕೆಂದ್ರ, ವ್ಯಕ್ತಿಗೆ ಸಂಸಾರ ಸಮಾಜಗಳ ಜತೆ ಉಂಟಾಗುವ ತಿಕ್ಕಾಟವೂ ಈ ಮೂರರ ಸಮನ್ವಯದ ಸಮಾನ ಬಿಂದುಗಳ ಅರಿವಿನಲ್ಲಿ ಪರಿಹಾರವಾಗಬೇಕು. ಶ್ರೀರಾಮನು ಸೀತಾ, ಲಕ್ಷ್ಮಣ, ಹನುಮಂತ ಸಮೆತನಾದ ಶ್ರೀ ಸಂಸಾರಿ. ಸಮಾಜಕ್ಕೆ ಸಂಸಾರದ ಮೂಲಕವೇ ಉತ್ತರ ಕೊಟ್ಟವ. 'ಉತ್ತರಾಯಣ'ದಲ್ಲಿ ಜೋಡಿಹಕ್ಕಿಗಳ ಸಂಸಾರ ಮುಗಿದ ಬಳಿಕ ಕಪ್ಪು ಹಕ್ಕಿಯನ್ನು ಕರೆಯುವ ಕವಿ 'ಸರ್ವಾಪರಾಧವನ್ನು ಕ್ಷಮಿಸಿ ಮುಟ್ಟು  ಮಿಟ್ಟಿಗೆ ಅಣ್ಣ' ಎಂದು ಬೇಡಿಕೊಳ್ಳುತ್ತಾನೆ. ಇವು ಅನುಭವ ಅರಿವಾಗಿ ಇಳಿದು ಜ್ಞಾನವಾಗಿ ಮಾರ್ಪಡುವುದನ್ನು ಕಾಣಿಸುವ ಕವನಗಳು.
 
-ಎಸ್. ಆರ್. ವಿಜಯಶಂಕರ 
 
 
4. ವಿಷಾದದ ಅಂಚಿನಲ್ಲೇ ಓಡುತ್ತಾ 'ಉತ್ತರಾಯಣ' ಪದ್ಯ ಓದುಗರನ್ನು  ಪ್ರೀತಿಯ  ಬೃ ಹತ್ ಸಾಗರಕ್ಕೆ ಸೇರಿಸಿಬಿಡುತ್ತದೆ. ಪ್ರೀತಿಯ ಉದಾತ್ತತೆ, ಪ್ರಶಾಂತತೆ,  ಮತ್ತು ಸಣ್ಣ ಪುಟ್ಟ ಘಟನೆಗಳಲ್ಲಿ  ಅದು  ಮೂಡಿಸುವ ಜೀವನ ದರ್ಶನ ಈ ಕವಿತೆಯಲ್ಲಿ ಹರಳುಗಟ್ಟಿದೆ.
 
- ಎಂ. ಆರ್. ದತ್ತಾತ್ರಿ.
 
5. ಕವಿಯು ಬದುಕಿನಿಂದ ಪಡೆದ ಖಾಸಗಿ ಸುಖ ದುಖಃಗಳು,  ಹೇಳಿಕೊಳ್ಳಲಾಗದ, ಆದರೆ ಹೇಳದೆ ಇರಲಾರದ ಭಾವ, ಆತನ ವೈಯಕ್ತಿಕ ಪರಿಧಿಯಿಂದ ಮುಕ್ತಿ ಪಡೆದು, ಒಂದು ಅರ್ಥಪೂರ್ಣ  ಸಾರ್ವತ್ರಿಕ ಪ್ರತಿಮೆಯಾಗಿ ಪರಿವರ್ತಿತಬೇಕಾಗುತ್ತದೆ. ಹಾಗೆ ಪರಿವರ್ತಿತವಾಗುವಲ್ಲಿ ಕವಿಯ ಶ್ರದ್ದೆ, ನಿಷ್ಥೆ, ಎಲ್ಲಕ್ಕೂ ಮಿಗಿಲಾಗಿ ಅನುಭವ ಪಡೆಯುವ ಕಾಲದಲ್ಲಿ ಅದರೊಂದಗಿದ್ದ   ಆತನ ತಲ್ಲೀನತೆಗಳು  ಕವಿಯ ಶಿಲ್ಪವನ್ನು ಮುಕ್ಕಿಲ್ಲದ ಮೂರುತಿಯನ್ನಾಗಿ ಮಾಡಬಲ್ಲವು.
 
ಪ್ರಯೋಗಶೀಲತೆ ಮತ್ತು ನಿರಂತರ ಹೊಸ ಅರ್ಥಗಳನ್ನು ಶೋಧಿಸುವ ಬತ್ತದ ಕಾವ್ಯೋತ್ಸಾಹಗಳಿಗೆ ಹೆಸರಾಗಿರುವ ಹಿರಿಯ  ಕವಿ, ಎಚ್.ಎಸ್ ವೆಂಕಟೇಶಮೂರ್ತಿಯವರ 'ಉತ್ತರಾಯಣ ' ಕವಿತೆ ಮೇಲಿನ ಮಾತುಗಳನ್ನು ಬರೆಯಲು ಪ್ರೇರೇಪಿಸುತ್ತಿದೆ. ಈ ಕವಿತೆಯನ್ನು ಕಟ್ಟುವಲ್ಲಿ, ಅವರ ಅನುಭವದ ಸಾಂದ್ರತೆ ಮತ್ತು ತೀವ್ರತೆ ಎಂಥದ್ದೆಂದರೆ  ಆ ಎರಕದಲ್ಲಿ ಉತ್ತರಾಯಣದಂಥ  ಪರಿಪೂರ್ಣವಿಗ್ರಹ ಮಾತ್ರ ಹೊರಬರಲು ಸಾಧ್ಯ.
 
-ಎಂ. ಆರ್. ಕಮಲಾ.
 
'ಉತ್ತರಾಯಣ' ಕವನ ಸಂಗ್ರಹ ಪುಸ್ತಕದ  ಕೊನೆಯ ಪುಟದಲ್ಲಿ ಡಾ. ಯು. ಆರ್. ಅನಂತ ಮೂರ್ತಿಯವರ ಪ್ರತಿಕ್ರಿಯೆ :
 
ಉತ್ಕಟವಾದ ಪ್ರೀತಿ ಮತ್ತುದುಃಖಗಳಲ್ಲಿ  ಬೆಂದು ಬಾಳಿದ ಯುವ ಕವಿ ಕೀಟ್ಸ್ ಈ ಪ್ರಪಂಚವನ್ನು ಒಂದು 'Vale of soul-making' ಎನ್ನುತ್ತಾನೆ. ವೆಂಕಟೇಶಮೂರ್ತಿಗಳ 'ಉತ್ತರಾಯಣ' ಓದುತ್ತಾ ಈ ಮಾತು ನೆನಪಾಯಿತು. ಬದುಕು ಪಡೆಯುವ ಜ್ಞಾನ, ಬರಿಯ ಜ್ಞಾನವಾಗಿ ಉಳಿಯದಂತೆ ಆತ್ಮದ ಗುಣವನ್ನಾಗಿ ಪರಿವರ್ತಿಸುವ ದಿವ್ಯ ಕಾವ್ಯದ್ದು. ಇದರ ಕ್ಷೇತ್ರ ಪ್ರಪಂಚವೆಂಬ ಫಲವತ್ತಾದ ಕಣಿವೆ. ಕೀಟ್ಸ್ ಕೇಳುತ್ತಾನೆ :  " Do you not see how necessary a world of pains and troubles is to school an intelligence and make it a Soul ?"ಈ ಸಂಕಲನ 'ಆಪ್ತಗೀತ' ದ ಕೃಷ್ಣ ಬೆಳೆಯುವುದೇ ಹೀಗೆ : ಯಾದವನಾಗಿ, ಕಾದವನಾಗಿ, ಶ್ರಾವಕನಾಗಿ, ಪ್ರೇಮಿಯಾಗಿ, ಸೇವಕನಾಗಿ...
 
ತನ್ನ ಕಲ್ಪನಾ ಶಕ್ತಿಯ ವಿಲಾಸದಿಂದ ನಮ್ಮನ್ನು ಒಲಿಸಿಕೊಂಡಿದ್ದ ಕವಿ ಈ ಸಂಕಲದಲ್ಲಿ ಕೀಟ್ಸ್ ಪರಿಭಾವಿಸುವಂತೆ ಆತ್ಮದ ಸಿದ್ಧಿಯ ದಾರಿಯಲ್ಲಿ ಇದ್ದಾರೆ. ಪರಿಣಾಮವಾಗಿ ಈ ವರೆಗೆ ಕವಿ ಬರೆದ ಅತ್ಯುತ್ತಮ ಪದ್ಯಗಳು ಮಾತ್ರವಲ್ಲದೆ, ಕನ್ನಡ ಕಾವ್ಯದ ಕೆಲವು ಉತ್ತಮ ಪದ್ಯಗಳೂ ಇಲ್ಲಿವೆ. ಪರಂಪರೆಯನ್ನೂ, ಆಧುನಿಕತೆಯನ್ನೂ  ಒಳಗೊಳ್ಳಬಲ್ಲಂತೆ ವೆಂಕಟೇಶಮೂರ್ತಿ ಸತತ ಕೌಶಲದಿಂದ ಗಳಿಸಿಕೊಂಡ  ಇಲ್ಲಿನ ಕಾವ್ಯಭಾಷೆಯ ಪ್ರೌಢಿಮೆ, ಜೊತೆಗೇ  ಅದರ ಸಹಜತೆ, ವೆಂಕಟೇಶಮೂರ್ತಿಯವರ  ಈ ವರೆಗಿನ  ದೊಡ್ಡ ಸಾಧನೆಯೆನ್ನಿಸುತ್ತದೆ. 
 
-ಯು. ಆರ್. ಅನಂತ ಮೂರ್ತಿ.
 
ಸಂಪಾದಕ, ಡಾ. ರಾಘವೇಂದ್ರ ಪಾಟೀಲರ ಪ್ರತಿಕ್ರಿಯೆ :
 
 
ನವ್ಯೋತ್ತರದ  ಪ್ರಮುಖ ಕವಿಯಾಗಿರುವ ಎಚ್. ಎಸ್. ವೆಂಕಟೇಶಮೂರ್ತಿಯವರ ಕಾವ್ಯ  ಸೌಂದರ್ಯಕ್ಕೆ ಜನಪ್ರಿಯತೆಯ ಪಟ್ಟ ದೊರೆತಿದ್ದರೆ ಅದು ಸಹಜವಾದ ಜನಸ್ಪಂದನೆಯಾಗಿದೆಯಷ್ಟೇ ಅಲ್ಲದೆ ಜನಮನಕ್ಕೆ ಕಾವ್ಯ ಸಂವೇದನೆಯ ಪುನರ್ ದೀಕ್ಷೆ ದೊರೆಯುತ್ತಿರುವುದಕ್ಕೆ ಅದು ಸಾಕ್ಷಿಯಾಗಿದೆ. ಕಥನ, ಗೇಯತೆ,  ಪುರಾಣ ಸ್ಮೃತಿ ಮತ್ತು ಜನಸಾಮಾನ್ಯರ ಭಾವಕೋಶದೊಂದಿಗೆ ಗರಿಷ್ಠ ಪ್ರಮಾಣದಲ್ಲಿ ಸಂಬಂಧ ಇರಿಸಿಕೊಂಡಿರುವ ಎಚ್. ಎಸ್ .ವಿ.ಯವರ ಕಾವ್ಯದ ಜನಪ್ರಿಯತೆ ಒಟ್ಟು ಕನ್ನಡ  ಕಾವ್ಯ ಪರಂಪರೆಗೆ ಒದಗಿಸಿದ ಕಾಯಕಲ್ಪ ಎಂದು ತೆಗೆದುಕೊಳ್ಳಬಹುದು. ಈ ಕಾಯಕಲ್ಪಕ್ಕೆ ಕೇವಲ ಎಚ್. ಎಸ್. ವಿ. ಯವರ ಕೊಡುಗೆ ಮಾತ್ರವಿದೆ ಎಂದು ನಾನೇನೂ ಹೇಳುತ್ತಿಲ್ಲ.  ಎಚ್. ಎಸ್. ವಿಯವರು ಈ ದಿಸೆಯಲ್ಲಿ ಪ್ರಯತ್ನ ನಡೆಸಿದ ತಮ್ಮ ಸಮಕಾಲೀನ ಕವಿಗಳಲ್ಲಿ ಮುಖ್ಯರು  ಎಂದು ಮಾತ್ರ ನಾನು ಹೇಳುತ್ತಿದ್ದೇನೆ.
 
ವೆಂಕಟೇಶ ಮೂರ್ತಿಯವರ ಕಾವ್ಯವನ್ನು ಕುರಿತಂತೆ ಅನೇಕ ವಿಮರ್ಶಕರು ಅದರ ಸೌಂದರ್ಯಾತ್ಮಕ ನೆಲೆಗೆ ಸ್ಪಂದಿಸುತ್ತ ಅದರಲ್ಲಿ ಉದ್ಭೂತವಾಗುವ ತಾತ್ವಿಕತೆ ಮತ್ತು ವೈಚಾರಿಕತೆಗಳಿಗೆ  ಸ್ಪಂದಿಸದೆ  ಉಳಿಯುತ್ತಾರೆ.  ಇಂಥ ನಿಲುವನ್ನು ಕುರಿತಂತೆ ಮೂರ್ತಿಯವರು ತೋರಿದ ಕಾವ್ಯ ಪ್ರತಿಕ್ರಿಯೆ ಹೀಗಿದೆ :
 
ನಾನು ಕಂಡದ್ದೆಲ್ಲ  ನನ್ನೊಂದಿಗಿದ್ದಾವೆ;
 
ಹಳ್ಳಿ, ಪಟ್ಟಣ, ಕಡಲು, ಕಣಿವೆ, ಮೈದಾನ 
 
ನಾನು ಮುಟ್ಟಿದ್ದೆಲ್ಲ ನನ್ನೊಂದಿಗಿದ್ದಾವೆ 
 
ಹತ್ತಿ ಮೃದು, ಹೂ ನುಣುಪು, ಜಾರು ಸೋಪಾನ 
 
 
 
ಸವಿದ ರುಚಿ ನಾಲಗೆಯ ನಿರ್ಮಿಸಿದ್ದಾವೆ ;
 
ಕಡಲೆ, ಕೊಬ್ಬರಿ, ಹುಣಸೆ, ಮೆಣಸು, ಹುಳಿಸೊಪ್ಪು,
 
ನಾನು ಮೂಸಿದ ಗಂಧ ಮೂಗಿಗಂಟಿದ್ದಾವೆ; 
 
ಮಣ್ಣ ವಾಸನೆ, ತುಳಸಿ, ಬೆವರು, ಹೂಗಂಪು.
 
 
ನಾನು ಕೇಳಿದ್ದೆಲ್ಲ ನನ್ನ ಕರ್ಣಾಭರಣ;
 
ಶಬ್ದ-ಸಂಗೀತ-ಮೊರೆ-ಘನ ಮೌನತತ್ವ
 
ಕುಡಿಯಷ್ಟೆ  ದೀಪವೇ ? ಹಣತೆ ಎಣ್ಣೆ ಸಮೇತ 
 
ಶಾಖ ಬೆಳಗಿನ ಹಬ್ಬು-ದೀಪದಸ್ತಿತ್ವ
 
(ನಾನು : ಭೂಮಿಯೂ ಒಂದು ಆಕಾಶ)
 

Comments

Submitted by H A Patil Mon, 02/11/2013 - 20:07

ಹೊರಲಂ ವೆಂಕಟೇಶ ರವರಿಗೆ ವಂದನೆಗಳು ಕವಿ ಲೇಖಕ ಡಾ|| ಹೆಚ್.ಎಸ್.ವೆಂಕಟೇಶ ಮೂರ್ತರಿಯವರ ಕೃತಿ ' ಉತ್ತರಾಯಣ ಮತ್ತು..' ಕುರಿತು ತಾವು ಬರೆದೆ ವಿಮರ್ಶಾತ್ಮಕ ಲೇಖನ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಕೃತಿಯ ಕುರಿತು ಸಾಹಿತಿ ವಿಮರ್ಶಕರ ಅನಿಸಿಕೆಗಳ ದಾಖಲೆ ನಿಮ್ಮ ಲೇಖನದ ಗಹನತೆಯನ್ನು ಹೆಚ್ಚಿಸಿವೆ ಎನ್ನುವುದ ನಿರ್ವಿವಾದ. ಧನ್ಯವಾದಗಳು.
Submitted by venkatesh Mon, 02/11/2013 - 20:14

In reply to by H A Patil

ಅದರಲ್ಲಿ ನನ್ನ ಪಾಲು ಏನಿಲ್ಲ. ನಾನೆ ಕೆಲವು ವಿಚಾರ ಹೇಳುವ ಪ್ರಯತ್ನದಲ್ಲಿದ್ದೆ. ಆದರೆ ಅದನ್ನು ನನ್ನ ಗೆಳೆಯರು, ಮಹಾನ್ ಲೇಖಕರು, ವಿಮರ್ಶಕರು, ಹೇಳಿಮುಗಿಸಿದ್ದಾರೆ. ನಾನೊಬ್ಬ ಸಾಮಾನ್ಯ ಹೊರನಾಡಿನ ಓದುಗ ಅಷ್ಟೆ.
Submitted by H A Patil Tue, 02/12/2013 - 17:04

In reply to by venkatesh

ಹೊರಂಲ ವಂಕಟೇಶ ರವರಿಗೆ ವಂದನೆಗಳು. ನಿಮ್ಮ ಮರು ಪ್ರತಿಕ್ರಿಯೆ ಓದಿದೆ, ಅದು ನಿಮ್ಮ ವಿನಯವನ್ನು ಎತ್ತಿ ತೋರಿಸುತ್ತದೆ. ಮಹಾನ್ ಲೇಖಕರು ಮತ್ತು ವಿಮರ್ಶಕರು ಹೇಳಿದ್ದನ್ನು ದಾಖಲಿಸಿ ಒದುಗರಿಗೆ ಕೃತಿಯ ಗಹನತೆಯನ್ನು ಪರಿಚಯಿಸಿದ್ದೀರಿ, ಆ ಗುಣ ದೊಡ್ಡದು, ಈಗ ಹೊರನಾಡು ಒಳನಾಡು ಎಂಬ ಬೇಧ ಸಲ್ಲ.ಅಂತರ್ಜಾಲ ಎಲ್ಲ ಅಂತರವನ್ನು ಕಡಿಮೆ ಮಾಡಿದೆ, ಧನ್ಯವಾದಗಳು.