“ಹಿಂದು” ಈ ದೇಶದ ಹೆಸರು

“ಹಿಂದು” ಈ ದೇಶದ ಹೆಸರು

ಮತ ಎಂದರೇನು? ಚುನಾವಣೆ ಬಂದಾಗ ಸಹಜವಾಗಿ ಕೇಳುವ ಮಾತು " ನಿಮ್ಮ ಮತ ಯಾರಿಗೆ? " ಅಂದರೆ ನೀವು ಯಾರನ್ನು ಒಪ್ಪುತ್ತೀರಿ? ನಿಮ್ಮ ಅಭಿಪ್ರಾಯವೇನು? ಮತ-ಧರ್ಮದ ಹೆಸರು ಬಂದಾಗಲೂ ಇದೇ ಆಧಾರದಲ್ಲಿ ಅರ್ಥಮಾಡಿಕೊಳ್ಳಬೇಕು. ಮತ ಎಂದೊಡನೆ ಅದಕ್ಕೊಬ್ಬ ಸ್ಥಾಪಕ/ಪ್ರವಾದಿ.        

[ ಪ್ರವಾದಿ ಎಂದರೆ   ವಿಶೇಷ ವಾಗಿ ವಿಚಾರ ಮಂಡಿಸುವವನು] ಅದಕ್ಕೊಂದು ಆಧಾರ ಗ್ರಂಥ.

ಹೀಗೆ  ವಿಚಾರ ಮಾಡುವಾಗ ನಮ್ಮ ಮುಂದೆ ಕ್ರೈಸ್ತ, ಇಸ್ಲಾಮ್, ಜೈನ, ಬೌದ್ಧ...ಹೀಗೆ ಹಲವು ಮತಗಳು ಕಣ್ಣೆದುರು ಬರುತ್ತ್ತವೆ. ಕ್ರೈಸ್ತ ಮತದ ಪ್ರವಾದಿ ಏಸೂಕ್ರಿಸ್ತ, ಆಧಾರ ಗ್ರಂಥ ಬೈಬಲ್,ಅನುಯಾಯಿಗಳು ಕ್ರೈಸ್ತರು,  ಇಸ್ಲಾಮ್ ಸ್ಥಾಪಕ/ಪ್ರವಾದಿ ಮೊಹಮದ್ ಪೈಗಂಬರ್.ಆಧಾರಗ್ರಂಥ ಖುರಾನ್. ಅನುಯಾಯಿಗಳು ಮುಸಲ್ಮಾನರು. ಹೀಗೆಯೇ ಜೈನರು, ಬೌದ್ಧರು, ಸಿಕ್ಖರು..ಮುಂತಾದ ಉದಾಹರಣೆಗಳು ಬರುತ್ತವೆ. 

ಆದರೆ ಹಿಂದು ಹೆಸರು ಬಂದಾಗ ಇದು ಮತವೇ? ಇದರ ಸ್ಥಾಪಕರಾರು? ಇದರ ಧರ್ಮಗ್ರಂಥ ಯಾವುದು? ಎಂದು ವಿಚಾರ ಮಾಡಿದಾಗ  ಒಬ್ಬ ಪ್ರವಾದಿಗೆ ,ಒಂದು  ಮತಗ್ರಂಥಕ್ಕೆ ಇದು ಸೀಮಿತವಾಗುವುದಿಲ್ಲ. ಹಾಗಾಗಿ ಇದು ಒಂದು ಮತವೇ ಅಲ್ಲ, ನಿಜವಾದ ಮತವೆಂದರೆ ಕ್ರೈಸ್ತ, ಇಸ್ಲಾಮ್ ಉಳಿದವರೇನಿದ್ದರೂ ನೂರಾರು ಜಾತಿಗಳಲ್ಲಿ ಹಂಚಿಹೋಗಿರುವವರು ಎಂದು ವಾದ ಮಾಡುವ ಜನರಿದ್ದಾರೆ. 

ಹಾಗಾದರೆ   " ಹಿಂದು "  ಎಂದರೇನು? 

ಹಿಂದು ಎಂಬುದು ಈ ದೇಶದ ಹೆಸರು, ಇಲ್ಲಿನ ಸಂಸ್ಕೃತಿಯ ಹೆಸರು, ಇಲ್ಲಿನ ಪರಂಪರೆಯ ಹೆಸರು. ಇಲ್ಲಿನ ಧರ್ಮದ ಹೆಸರು. ಧರ್ಮ ಎಂದೊಡನೆ ವಿಚಲಿತರಾಗುವ ಅಗತ್ಯವಿಲ್ಲ. ಧರ್ಮ ಎಂದರೆ ಜೀವನ ಪದ್ದತಿ. ಮಾನವೀಯ ಮೌಲ್ಯಗಳನ್ನು ಧರಿಸಿಕೊಂಡು ನಡೆಸುವ ಜೀವನ ಪದ್ದತಿ ಯೇ ಧರ್ಮ. ಆದರೆ ದುರ್ದೈವ ವೆಂದರೆ ಧರ್ಮದ ಹೆಸರಲ್ಲಿ ಈ ದೇಶದಲ್ಲಿ ಸಂಘರ್ಷ ನಡೆಯುತ್ತದೆ. 

ಸಾವಿರಾರು ಋಷಿಮುನಿಗಳು ತಪಸ್ಸನ್ನು ಮಾಡಿ ಕಂಡುಕೊಂಡ ಜೀವನ ಮಾರ್ಗವೇ ಧರ್ಮ. ಯಾಕೆ ಇದನ್ನು ಹಿಂದು ಧರ್ಮವೆಂದು ಕರೆದರು? ಯಾಕಾಗಿ ಇದನ್ನು ಹಿಂದು ದೇಶವೆಂದು ಕರೆದರು?

ಆಧಾರ ವಿದೆ..   ಬೃಹಸ್ಪತಿ ಆಗಮದಂತೆ  ಹಿಮಾಲಯ ಪದದ “ಹಿ” ಮತ್ತು ಇಂದು ಸರೋವರದ  “ಇಂದು” ಪದಗಳೆ ಸೇರಿ “ಹಿಂದು” ಆಗಿದೆ. ಇವೆರಡೂ ಕೂಡಿ ನಮ್ಮ ಮಾತೃಭೂಮಿಯ ವಿಸ್ತಾರವನ್ನು ಹೇಳುತ್ತದೆ.

ಹಿಮಾಲಯಮ್ ಸಮಾರ್ಭ್ಯ ಯಾವದಿಂ ದು   ಸರೋವರಮ್

ತಮ್ ದೇವ ನಿರ್ಮಿತಮ್ ದೇಶಂ ಹಿಂದುಸ್ಥಾನಮ್ ಪ್ರಚಕ್ಷತೇ||

 

ಅಂದರೆ ದೇವತೆಗಳಿಂದ ನಿರ್ಮಿತಿಗೊಂಡು ಉತ್ತರದ ಹಿಮಾಲಯದಿಂದ ದಕ್ಷಿಣದ  ಹಿಂದು ಮಹಾಸಾಗರದ ವರಗೆ ಪಸರಿಸಿರುವ ಈ ನಾಡನ್ನು ಹಿಂದುಸ್ಥಾನ ಎಂದು ಕರೆಯುತ್ತಾರೆ.

ಅಂದರೆ ಈ ದೇಶದ ಹೆಸರು “ಹಿಂದುಸ್ಥಾನ”. ಇಲ್ಲಿರುವವರು “ಹಿಂದುಗಳು” .ಅಷ್ಟೆ. very simple. ಆದರೆ  “ಹಿಂದು” ಎಂಬ ಶಬ್ಧಕ್ಕೆ  ಯಾಕೆ ಇಷ್ಟು ಸಂಘರ್ಷ? ನಮ್ಮ ಒಬ್ಬ ನಾಯಕರಂತೂ ಹೇಳಿಯೇ ಬಿಟ್ಟರು “ ನನ್ನನ್ನು    ಕತ್ತೆ ಎಂದು ಬೇಕಾದರೂ ಕರೆಯಿರಿ, ನನ್ನನ್ನು “ಹಿಂದು” ಎಂದು ಮಾತ್ರ ಕರೆಯಬೇಡಿ. ಅವರನ್ನು ಕತ್ತೆ ಎಂದೇ ಜನರುಬೇಕಾದರೆ ಕರೆದುಕೊಳ್ಳಲಿ. ನಮ್ಮ ಮತ್ತೊಬ್ಬ ನಾಯಕರು ಹೇಳಿದ್ದರು “ Un fortunately I took birt as Hindu” ನಮ್ಮ ಧರ್ಮ ಶಾಸ್ತ್ರಗಳು ಹೇಳುತ್ತವೆ “ “ಇದು ದೇವ ನಿರ್ಮಿತ ದೇಶ-ಹಿಂದುಸ್ಥಾನ”  ಆದರೆ ನಮ್ಮ ನಾಯಕ ಶಿರೋಮಣಿ ಇಲ್ಲಿ ದುರ್ದೈವದಿಂದ ಹುಟ್ಟಿದರಂತೆ.

ಅಂದರೆ ರಾಜಕಾರಣಿಗಳು “ಎಲ್ಲಿ ಮುಸ್ಲಿಮ್ ಮತಗಳು ತಮಗೆ ಬರುವುದಿಲ್ಲವೋ ಎಂದು ಹೆದರಿ ಮುಸಲ್ಮಾನರನ್ನು ಓಲೈಸಲು “ ನಾನು ಹಿಂದುವೇ ಅಲ್ಲ, ನಾನು ಹಿಂದುವಾಗಿರುವುದು ನನ್ನ ದುರ್ದೈವ” ಎನ್ನುವ  ಇವರನ್ನು  ಮುಸಲ್ಮಾನರೂ ನಂಬುವುದಿಲ್ಲವೆಂಬ ಸತ್ಯ ಇವರಿಗೆ ಗೊತ್ತಿಲ್ಲ. “ ನಮ್ಮ ಓಟಿಗಾಗಿ ತಮ್ಮವರನ್ನೇ ಹೀಯಾಳಿಸುವ ಇವನನ್ನು ಗೆಲ್ಲಿಸಿದರೆ  ನಮಗೆ ಒಳ್ಳೆಯದು ಮಾಡುತ್ತಾನೆಂಬ ನಂಬಿಕೆ ಏನು? ಎಂದು ಮುಸಲ್ಮಾನರೂ ಇವನನ್ನು ದೂರವಿಡುವ ಕಾಲ ದೂರವಿಲ್ಲ.

ಓಟಿನ ರಾಜಕಾರಣ ಬದಿಗಿರಲಿ. ಆದರೆ “ನಾನು ಹಿಂದು” ಎನ್ನಲು ನಾಚಿಕೆ ಪಡಬೇಕೇ?

ಈ ವಿಷಯವನ್ನು  ಭಾರತೀಯರೆಲ್ಲರೂ ಗಟ್ಟಿಮಾಡಿಕೊಳ್ಳಬೇಕು.  ಈ ದೇಶದಲ್ಲಿ ಹುಟ್ಟಿರುವ ನಾನು ಮೊದಲು “ಹಿಂದು” ಅಂದರೆ ಹಿಂದುಸ್ಥಾನದ ಪ್ರಜೆ. ಭಾರತೀಯನೆಂದರೂ ತಪ್ಪಿಲ್ಲ. ನಾವೇಕೆ ಭಾರತೀಯರೆಂದು ಕರೆಯಲ್ಪಡುತ್ತೇವೆಂಬುದಕ್ಕೆ  ಇಲ್ಲಿ ನೋಡಿ

                                                          ಉತ್ತರಮ್ ಯತ್ಸಮುದ್ರಸ್ಯ  ಹಿಮಾದ್ರೇಶ್ಚೈವ ದಕ್ಷಿಣಮ್

ವರ್ಷಮ್ ತದ್ ಭಾರತಮ್ ನಾಮ ಭಾರತೀ ಯತ್ರ ಸಂತತಿ:

 

ಸಾಗರದಿಂದ ಉತ್ತರಕ್ಕೆ ಹಿಮಾಲಯದಿಂದ ದಕ್ಷಿಣಕ್ಕೆ ಇರುವ ಭೂಮಿಗೆ ಭಾರತ ಎಂದು ಕರೆಯುತ್ತೇವೆ. ಭಾರತದಲ್ಲಿ ವಾಸಿಸುವವರು ಭಾರತೀಯರು. ಅಷ್ಟೆ.  ಹಿಂದುಸ್ಥಾನವೆಂದರೆ ಭಾರತ ,ಹಿಂದು ಎಂದರೆ ಭಾರತೀಯ. ಅಷ್ಟೆ. very simple.

ಹೀಗೆ ಋಷಿ ಮುನಿಗಳ   ತಪಸ್ಸಿನಿಂದ ದತ್ತವಾದ ಹಿಂದು ಧರ್ಮ ಏನು ಹೇಳುತ್ತದೆ....

"ಏಕಂ ಸತ್ ವಿಪ್ರಾ: ಬಹುದಾ ವದಂತಿ"

ಸತ್ಯ ಎಂಬುದು ಒಂದೇ, ಅದನ್ನು ಪಂಡಿತರು ಬೇರೆ ಬೇರೆ ರೀತಿಯಲ್ಲಿ ಹೇಳುತ್ತಾರೆ. ಬಹಳ ಸರಳವಾದ ಮಾತಿದು. ಅದರರ್ಥ ಭಗವಂತನೆಂಬುವನು ಒಬ್ಬನೇ. ಅವನನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುವರು."ದೇವನೊಬ್ಬ ನಾಮ ಹಲವು" ಎಂದರೂ ಇದೇ ಅರ್ಥ ತಾನೇ.

 ನಮ್ಮ ಋಷಿ ಮುನಿಗಳು ಕಂಡುಕೊಂಡ   ಸತ್ಯವಿದು.  ದೇವರನ್ನು ಯಾವ ಹೆಸರಿಂದಲಾದರೂ ಕರೆಯಿರಿ. ಅವನನ್ನು ಬ್ರಹ್ಮ, ವಿಷ್ಣು, ಮಹೇಶ್ವರ ನೆನ್ನಿ. ಕ್ರಿಸ್ತನೆನ್ನಿ. ಕೃಷ್ಣನೆನ್ನಿ. ಅಲ್ಲಾ ಎನ್ನಿ,...ಮಾರಮ್ಮನೆನ್ನಿ ಯಾವ ಹೆಸರಿನಲ್ಲಾದರೂ ಕರೆಯಿರಿ  "ಏಕಂ ಸತ್" .ಸತ್ಯ ಮಾತ್ರ ಒಂದೇ. ಆ ಭಗವಂತ ಮಾತ್ರ ಒಬ್ಬನೇ. ಇದು ಹಿಂದುಧರ್ಮದ  ವೈಶಿಷ್ಠ್ಯ. 

ನನ್ನನ್ನು ನಂಬು, ನನ್ನಿಂದ ಮಾತ್ರವೇ ಮೋಕ್ಷ, ಎಂಬ ವಿಚಾರಕ್ಕೆ ಹಿಂದು ಧರ್ಮದಲ್ಲಿ ಆಸ್ಪದವೇ ಇಲ್ಲ.  ವೇದವು ಕರೆ ಕೊಡುತ್ತದೆ..

ಯತ್ ಪೂರ್ವ್ಯಂ  ಮರುತೋ ಯಚ್ಚ ನೂತನಂ ಯದುದ್ಯತೇ  ವಸವೋ ಯಚ್ಚ ಶಸ್ಯತೇ|

ವಿಶ್ವಸ್ಯ ತಸ್ಯ ಭವಥಾ ನವೇದಸ: ಶುಭಂ ಯಾತಾಮನು ರಥಾ ಅವೃತ್ಸತಾ||

ಮನುಷ್ಯನು ಸುಖವಾಗಿ ನೆಮ್ಮದಿಯಿಂದ ಸುಂದರ ಬದುಕನ್ನು ಹೊಂದಬೇಕಾದರೆ ಯಾವ ಮಾರ್ಗದಲ್ಲಿ ಹೋಗಬೇಕೆಂಬುದನ್ನು ಈ ವೇದಮಂತ್ರವು ಅತ್ಯಂತ ಮನೋಜ್ಞವಾಗಿ ತಿಳಿಸಿಕೊಡುತ್ತದೆ. ಮಂತ್ರದ ಭಾವಾರ್ಥ ನೋಡಿ… 

ಹೇ ಮನುಜರೇ, ನಿಮ್ಮ ಬದುಕು ಹೇಗೆ ಸಾಗಿದರೆ ಸುಂದರವಾಗಬಲ್ಲದೆಂಬುದಕ್ಕೆ ಈ ಕೆಲವು ವಿಚಾರಗಳನ್ನು ಗಮನವಿಟ್ಟು ಕೇಳಿ..

ಯಾವುದು ಪ್ರಾಚೀನವೋ ಮತ್ತು ಯಾವುದು ನೂತನವೋ?, ಯಾವುದು  ನಿಮ್ಮ ಅಂತ:ಕರಣದಿಂದ ಉದ್ಭವಿಸುವುದೋ, ಹಾಗೂ   ಯಾವುದು ಶಾಸ್ತ್ರರೂಪದಲ್ಲಿ ಉಪದೇಶಿಸಲ್ಪಡುತ್ತದೋ ಎಲ್ಲಕ್ಕೂ ಕಿವಿಗೊಡು….ಆದರೆ ಯಾವುದು ನಿಮ್ಮನ್ನು ಕಲ್ಯಾಣಮಾರ್ಗದಲ್ಲಿ ನಡೆಸುತ್ತದೋ ಅದರ ಹಿಂದೆ ನಿಮ್ಮ ಜೀವನ ರಥಗಳು ಸಾಗಲಿ…

ವೇದದ ಈ ಕರೆ ಯಾರಿಗೆ ಬೇಡ ?  ಯಾವ ಕಾಲಕ್ಕೆ ಬೇಡ ?  ಯಾವ ದೇಶಕ್ಕೆ ಬೇಡ? .. ಯಾವುದೇ ಮತ ಗ್ರಂಥಗಳು ಕೊಡುವ ಕರೆಗೂ ವೇದದ ಕರೆಗೂ ತುಲನೆ ಮಾಡುವುದು ಕಷ್ಟವೇನಲ್ಲಾ! ಅಲ್ಲವೇ?  ಈ ಮಾರ್ಗದಲ್ಲಿ ಹೋದರೆ ಮಾತ್ರ ನಿನಗೆ ಮುಕ್ತಿ! ಎಂದು ವೇದವು ಕರೆ ಕೊಡಲಿಲ್ಲವೆಂಬುದನ್ನು ವಿಚಾರವಂತರು ಗಮನಿಸಬೇಕು. ಅಲ್ಲವೇ?

 ವೇದವನ್ನಾಗಲೀ ಇತರ ಯಾವುದೇ ಪ್ರಾಚೀನ ಗ್ರಂಥವನ್ನಾಗಲೀ ನೋಡಿದಾಗ  ಇಡೀ ವಿಶ್ವದ ಜನರು ಒಂದೇ ಕುಟುಂಬದವರು ಎಂದು ಸಾರುತ್ತದೆ. " ಸರ್ವೇ ಭದ್ರಾಣಿ ಪಶ್ಯಂತು ,ಮಾ ಕಷ್ಚಿತ್ ದು:ಖ ಭಾಗ್ಭವೇತ್" ಎಂದು ಕರೆಕೊಡುವ ಮಂತ್ರಗಳಲ್ಲಿನ ಅರ್ಥ ಬಲು ವಿಶಾಲ ಮನೋಭಾವನೆ ಹೊಂದಿದೆ.

“ಹಿಂದು” ಮತವಾಗಿದ್ದು ಯಾವಾಗ?

ನಾನು ಮುಂಚೆಯೇ ತಿಳಿಸಿದಂತೆ  ಹಿಂದು ಎನ್ನುವುದು  ನಮ್ಮ ರಾಷ್ಟ್ರೀಯತೆಯ ಹೆಸರು. ಈ ರಾಷ್ಟ್ರದ ಹೆಸರು. ಹಿಂದುಸ್ಥಾನದಲ್ಲಿ ಹುಟ್ಟಿದವ ಹಿಂದು ಅಷ್ಟೆ.  ಹಾಗಾದರೆ ಇಲ್ಲಿ ಮುಸಲ್ಮಾನರು, ಕ್ರೈಸ್ತರು, ಸಿಕ್ಖರು, ಭೌದ್ಧರು ಮುಂತಾದವರು ಈ ದೇಶದಲ್ಲಿ ಹುಟ್ಟಿಲ್ಲವೇ? ಅವರೆಲ್ಲಾ ಹಿಂದುಗಳೇ?

ಹೌದು , ಮೊದಲು ಎಲ್ಲರೂ ಹಿಂದುವೇ, ಆನಂತರ  ಅವರವರ ಮತವನ್ನು ಹೇಳಿಕೊಳ್ಳುವುದರಲ್ಲಿ ತಪ್ಪಿಲ್ಲ. “ನಾನು ಹಿಂದು” ನನ್ನ ಪೂಜಾಪದ್ದತಿಯಂತೆ ನಾನು ಕ್ರೈಸ್ತ, ನಾನು ಮುಸ್ಲಿಮ್...ಯಾರು ಬೇಡವೆಂದವರು. “ಏಕಂ ಸತ್, ವಿಪ್ರಾ ಬಹುದಾ ವದಂತಿ” ಎಂದು ತಾನೇ ನಮ್ಮ ಋಷಿಮುನಿಗಳು ಹೇಳಿರುವುದು. ಯಾರೇ ಆಗಲೀ ನಾನು  ಕ್ರೈಸ್ತ ಮತೀಯ, ನಾನು ಮುಸ್ಲಿಮ್ ,ಎಂದು ಹೇಳಿಕೊಳ್ಳುವುದರಲ್ಲಿ ತಪ್ಪಿಲ್ಲ. ಅದು ಅವರ ಪೂಜಾ ಪದ್ದತಿ. “ದೇವನೊಬ್ಬ ನಾಮ ಹಲವು, ಅಷ್ಟೆ. ಕೃಷ್ಣನೆನ್ನುವರು ಕೃಷ್ಣ ನೆನ್ನಲಿ, ಕ್ರಿಸ್ತ ನೆನ್ನುವರು ಕ್ರಿಸ್ತ ಎನ್ನಲಿ. ಆದರೆ ಎಲ್ಲರೂ ಭಾರತೀಯ ಎನ್ನಬಹುದು ಅಥವಾ ಹಿಂದು ಎನ್ನಬಹುದು. ಎರಡೂ ಅಷ್ಟೇ ಸಮಾನ ಪದಗಳು.

ಸಾಮಾನ್ಯವಾಗಿ  ಪೂರ್ವದಿಂದಲೂ ನಮ್ಮನ್ನು ಆರ್ಯರು, ಸನಾತನಿಗಳು, ವೈದಿಕರು ಎನ್ನುವ ರೂಢಿಯಿತ್ತು. ಆರ್ಯ ಎಂದರೆ ಶ್ರೇಷ್ಠ ಎಂದು ಅರ್ಥ ಅಷ್ಟೆ. ದೇವನಿರ್ಮಿತ ದೇಶದಲ್ಲಿರುವವರೆಲ್ಲರೂ ಆರ್ಯರೇ ಹೌದು. ನಮ್ಮದು ಅತ್ಯಂತ ಪುರಾತನವಾದ  ಸಂಸ್ಕತಿಯಾದ್ದರಿಂದ “ಸನಾತನಿ” ಎನ್ನುವ ಹೆಸರು ಬಂತು. ವೇದವನ್ನು ನಂಬುವವರಾದ್ದರಿಂದ ವೈದಿಕರೆಂದೂ ಕರೆಯುತ್ತಾರೆ.

ಸರಿ, ಹಾಗಾದರೆ ಹಿಂದು ಮತವಾಗಿದ್ದು, ಯಾವಾಗ?

ಯಾವಾಗ  ಕ್ರೈಸ್ತರು,  ಮುಸ್ಲ್ಮಾನರು, ತಮ್ಮ ತಮ್ಮ ಮತಗಳಿಗೆ ಇಲ್ಲಿನ ಸನಾತನಿಗಳನ್ನು ಮತಾಂತರ ಮಾಡುತ್ತಾ ಹೋದರು, ಆಗ ಅನಿವಾರ್ಯವಾಗಿ ತಮ್ಮನ್ನು ತಾವು “ಹಿಂದು ಮತೀಯ ” ಎಂಬ ಮತದ ಹೆಸರಲ್ಲಿ ಸಂಘಟಿತರಾಗುತ್ತಾ ಹೋದರು. ಆದರೆ ಇಂದು “ಹಿಂದು” ಎಂಬುದು ರಾಷ್ಟ್ರವಾಚಕವಾಗುವುದರ ಬದಲು  ಮತದ ಹೆಸರಲ್ಲಿ ಹೆಚ್ಚು ಉಪಯೋಗವಾಗುತ್ತಿದೆ.

ಆದರೆ ಈ ದೇಶದಲ್ಲಿಹುಟ್ಟಿರುವ ಎಲ್ಲರೂ ಕೂಡ ಅವರ ಪೂಜಾ ಪದ್ದತಿ ಯಾವುದೇ ಇರಲಿ, ತಮ್ಮನ್ನು ತಾವು  ರಾಷ್ಟ್ರವಾಚಕವಾದ “ಹಿಂದು” ಎಂದು ಕರೆದುಕೊಳ್ಳುವುದರಲ್ಲಿ ಹೆಮ್ಮೆ ಪಡಬೇಕು. ಕಾರಣ ಅಂಥಹ ದೇವನಿರ್ಮಿತ ದೇಶದಲ್ಲಿ ನಮ್ಮ ಜನ್ಮ ವಾಗಿದೆ.  ಇಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. 

 

Rating
No votes yet

Comments

Submitted by ಗಣೇಶ Mon, 02/25/2013 - 00:24

In reply to by makara

ಹಿಂದೂ? ಹಿದು?ಶ್ರೀಧರ್‌ಜಿ, "ಹಿಮಾಲಯ"ದ ಮೊದಲ ಅಕ್ಷರ "ಹಿ" ಹಾಗೂ ಇಂದು ಸರೋವರದ ಕೊನೆಯ ಅಕ್ಷರ "ದು" ಸೇರಿದಾಗ "ಹಿದು" ಆಗಬೇಕು. "ಇಂದು ಸರೋವರ" ಎಂಬುದು ಗೂಗ್‌ಲ್ ಸರ್ಚ್ ಮಾಡಿದರೆ ಸಿಗಲಿಲ್ಲ. ಆ ಮಹಾಮಹಿಮರು "ಹಿಂದೂ ಮಹಾ ಸಾಗರ"ವನ್ನು "ಇಂದು ಸರೋವರ" ಎನ್ನಲು ಸಾಧ್ಯವೇ ಇಲ್ಲ. ಆದರೆ "ಬಿಂದು ಸರೋವರ" ಗುಜರಾತ್ನಲ್ಲಿದೆ.( http://www.gujarattourism.com/showpage.aspx?contentid=152&webpartid=1148 ) ಹಿಮಾಲಯದಿಂದ ಆರಂಭಿಸಿ ಬಿಂದುಸರೋವರದವರೆಗೆ ಅಂದರೆ ವಿದೇಶೀಯರು ಹೇಳಿದಂತೆ "ಸಿಂಧೂ ನದಿ"ಯ ಈ ಪಕ್ಕ "ಹಿಂದೂಸ್ಥಾನ" ( http://en.wikipedia.org/wiki/File:Indus.A2002274.0610.1km.jpg ) ಸರಿಯೆನಿಸುವುದು.
ಹಾಗಿದ್ದರೆ ಮಹರ್ಷಿಗಳು ಹೇಳಿದ "ಹಿಮಾಲಯ, ಇಂದು ಸರೋವರಗಳು" ಬೇರೆ ಇರಬಹುದಲ್ವಾ? ಪ್ರಸಿದ್ಧ (IA) ಫ್ರೆಂಚ್ ಇತಿಹಾಸಾಜ್ಞ S G NESH ಅವರ ಪ್ರಕಾರ ಹಿಮಾಲಯ ಅಂದರೆ ನಾವೆಲ್ಲಾ ಯೋಚಿಸಿದಂತೆ ಎವರೆಸ್ಟ್ ಶಿಖರ ಶ್ರೇಣಿಯಲ್ಲ! ಹಿಮ್ ಆಲಯ= ಹಿಮವೇ ತುಂಬಿರುವ "ಆರ್ಕ್‌ಟಿಕ್"! ಇಂದು ಸರೋವರ "ಅಂಟಾರ್ಕ್ಟಿಕಾ"ದಲ್ಲಿರುವ ಅಂದಾಜು ೪೦೦ ಸರೋವರಗಳಲ್ಲಿ ಒಂದು. ( http://en.wikipedia.org/wiki/Lake_Vostok ) ಆರ್ಕ್ಟಿಕ್‌ನಿಂದ ಅಂಟಾರ್ಟಿಕಾದವರೆಗೆ ಅಂದರೆ ಪೂರ್ತಿ ಭೂಮಿಯಲ್ಲಿರುವವರೆಲ್ಲಾ "ಹಿಂದು"!ಯಾಕೆಂದರೆ--"..ತಮ್ ದೇವ ನಿರ್ಮಿತಮ್.. ". ಅಂಟಾರ್ಕ್ಟಿಕಾದಲ್ಲಿರುವ ಸರೋವರಗಳಲ್ಲಿ ಯಾವುದು "ಇಂದು ಸರೋವರ" ಎಂಬುದನ್ನು ಪತ್ತೆಹಚ್ಚಲು ಇಬ್ಬರು ತಜ್ಞರ (B G RAY ಹಾಗೂ S G VASI)ಸಮಿತಿ ನೇಮಿಸಲಾಗಿದೆ. ವರದಿ ಇನ್ನೂ ಬರಬೇಕಷ್ಟೇ..
(ವಿ.ಸೂ: I A=ಇನ್ನೂ ಆಗಬೇಕಷ್ಟೇ; ಫ್ರೆಂಚ್ ಇತಿಹಾಸಾಜ್ಞ=ಇತಿಹಾಸ ಅವರಿಗೆ ಫ್ರೆಂಚ್ ಭಾಷೆಯಂತೆ; S G NESH=ಸಂಪದಿಗ ಗಣೇಶ್...) :)

Submitted by hariharapurasridhar Mon, 02/25/2013 - 12:27

In reply to by ಗಣೇಶ

ಪೂಜನೀಯ ಗುರೂಜಿ ಗೊಲ್ವಾಲ್ಕರ್ ಅವರ ಬಂಚ್ ಆಫ್ ಥಾಟ್ಸ್ ಗ್ರಂಥವನ್ನು ಕನ್ನಡಕ್ಕೆ ಅನುವಾದ ಮಾಡಿ "ಚಿಂತನಗಂಗಾ" ಎಂಬ ಗ್ರಂಥ ಪ್ರಕಟವಾಗಿರುವುದು ನಿಮಗೆ ತಿಳಿದಿರಬಹುದು. ಆ ಗ್ರಂಥದ 119 ನೇ ಪುಟದಲ್ಲಿ ಈ ವಿಚಾರ ಉಲ್ಲೇಖವಾಗಿದೆ. ನೀವು ಇನ್ನೂ ಹೆಚ್ಚು ಸಂಶೋಧನೆ ಮಾಡಿ ವಿಚಾರ ಮಂಡಿಸುವುದಾದರೆ ಸ್ವಾಗತ.

Submitted by venkatb83 Wed, 03/06/2013 - 19:07

ಇಲ್ಲಿ ಸ‌.ವಾ (sa.va) ಹೆಸ್ರು ಯಾಕ್ ಸೇರಿತು ಎನ್ದು ನೋಡಿದರೆ ವಿಷಯ‌ ಎನೋ ಇದೆ.ನನಗೆ ಆ ಬಗ್ಗೆ ಎನೇನೂ ಮಾಹಿತಿ ಇಲ್ಲ‌....
;()0)
ನಾವ್ ಓದುಗರು ಮಾತ್ರ‌...

ಒಳಿತಾಗಲಿ..

\|

Submitted by makara Wed, 03/06/2013 - 22:11

ಕಿರಾಣಿ ಅಂಗಡಿಯಲ್ಲಿ ಕಿರಾಣಿ ಸಿಕ್ಕುತ್ತದೆಯೇ? ಕಿರಾಣಿ ಎಂದರೆ ಅಕ್ಕಿಯೋ, ಬೇಳೆಯೋ , ಸಕ್ಕರೆಯೋ? ಎಲ್ಲವೂ ಒಟ್ಟುಗೂಡಿದರೆ ಕಿರಾಣಿ. ಹಾಗೆಯೇ ಹಿಂದೂ ಧರ್ಮದಲ್ಲಿರುವ ಎಲ್ಲ ಪಂಗಡಗಳೂ ಸೇರಿ ಹಿಂದೂ ಧರ್ಮ ಆಗುತ್ತದೆ. ದೇಹವೆಂದರೆ ಯಾವುದು ಅದು ಕೈಯೋ, ಕಾಲೋ, ತಲೆಯೋ? ಎಲ್ಲವೂ ಸೇರಿದರೆ ದೇಹವಾಗುತ್ತದೆ ಅದರಲ್ಲಿರುವ ಅಂಗಗಳಿಗೆ ಪ್ರತ್ಯೇಕ ನಾಮ, ರೂಪ ಮತ್ತು ಕಾರ್ಯಗಳಿದ್ದರೂ ಸಹ. ಹಿಂದೂ ಧರ್ಮವೂ ಹಾಗೆಯೇ. ನಾವು ಕಾಲಕ್ಕನುಗುಣವಾಗಿ ನಮ್ಮ ಅಭಿಪ್ರಾಯಗಳನ್ನು ಬದಲಾಯಿಸುತ್ತಾ ಹೋಗಿರುವುದರಿಂದಲೇ ಹಿಂದೂ ಧರ್ಮವೆನ್ನುವುದು ನಿಂತ ನೀರಾಗಿಲ್ಲ. ಇತರ ಧರ್ಮಗಳಲ್ಲಿ ಒಂದೇ ಧರ್ಮ ಗ್ರಂಥ ಒಬ್ಬನೇ ಪ್ರವಕ್ತ ಮತ್ತು ಒಬ್ಬನೇ ದೇವರು ಎಂದು ಹೇಳಿದರೂ ಸಹ ಇಂದು ಅವುಗಳಲ್ಲಿ ಸಾವಿರಾರು ಮತ ಪಂಥಗಳಿವೆ; ಏಕೆಂದರೆ ಒಬ್ಬೊಬ್ಬರು ಅವರ ಬುದ್ಧಿಮತ್ತೆಗೆ ತೋಚಿದಂತೆ ಅದನ್ನು ನಿರ್ವಚಿಸಿ ಅದಕ್ಕೆ ಅರ್ಥಕೊಟ್ಟು ಅದನ್ನು ಅನುಸರಿಸುತ್ತಿದ್ದಾರೆ. ಹಾಗಾದರೆ ಅವರಲ್ಲಿ ನಿಜವಾದ ಧಾರ್ಮಿಕರು ಯಾರು ಎನ್ನುವುದನ್ನು ಹೇಳಲಾದೀತೇ? ಅಲ್ಲಿ ಸಾಧ್ಯವಿಲ್ಲವೆಂದ ಮೇಲೆ ಅವೆಲ್ಲಾ ಧರ್ಮಗಳು ಸುಳ್ಳೇ? ಹೋಗಲಿ ದೇವರನ್ನು ನಂಬದ ಕಮ್ಯೂನಿಷ್ಟರನ್ನೇ ತೆಗೆದುಕೊಳ್ಳಿ ಅವರಲ್ಲಿಯೂ ಸಹ ಅದೆಷ್ಟು ಪಂಗಡಗಳಿಲ್ಲ? ಇವರಲ್ಲಿ ನಿಜವಾದ ಕಮ್ಯೂನಿಷ್ಟರು ಯಾರು? ಒಬ್ಬರದು ಸರಿಯೆಂದರೆ ಉಳಿದವರದೆಲ್ಲಾ ವಿತಂಡ ವಾದವೇ ಅಥವಾ ಅವರ ವಿಚಾರವೇ ತಪ್ಪಾ? ಇಂದಿನ ರಾಜಕೀಯ ಪಕ್ಷಗಳನ್ನೇ ತೆಗೆದುಕೊಳ್ಳಿ ಯಾವುದು ನಿಜವಾದ ಕಾಂಗ್ರೆಸ್? ಯಾವುದು ನಿಜವಾದ ಕಳಗಂ? ೩೦-೪೦ ವರ್ಷಗಳ ಇತಿಹಾಸದಲ್ಲೇ ಅದೂ ಇಷ್ಟೊಂದು ಚಾರಿತ್ರಿಕ ದಾಖಲೆಗಳಿರುವಾಗ ಇಷ್ಟೊಂದು ಗೊಂದಲಗಳಿರುವಾಗ ಅಂದು ಶೇಖಡ ೧೦%ಮಾತ್ರ ಅಥವಾ ಕೇವಲ ೧% ಎಂದರೂ ತಪ್ಪಾಗಲಾರದು ಅಂತಹ ಕಾಲದಲ್ಲಿ ಅದೆಷ್ಟು ಗೊಂದಲವಿರಲಿಕ್ಕಿಲ್ಲ? ಆಲೋಚನೆ ನಿಮ್ಮ ವಿವೇಚನೆಗೆ ಬಿಟ್ಟ ವಿಷಯ. ಹಿಂದೂ ಧರ್ಮವೊಂದೇ ಶಾಶ್ವತವಾಗಿದೆ ಎನ್ನುವುದಕ್ಕೆ ಕಾರಣ ಅದರ ಸಾರವೆಲ್ಲವೂ ವೇದಗಳಿಗೆ ಆಧೀನವಾಗಿದೆ ಅದನ್ನು ಕಾಲ ಕಾಲಕ್ಕೆ ತಕ್ಕಂತೆ ಹೊಸ ಹೊಸ ವಿಶ್ಲೇಷಣೆ ಮಾಡುತ್ತಿದ್ದಾರೆಯೋ ಹೊರತು ಯಾವ ಮತ ಸ್ಥಾಪಕನೂ ಅವುಗಳನ್ನು ಅಲ್ಲಗಳೆಯಲು ಹೋಗಿಲ್ಲ; ಹಾಗೊಂದು ವೇಳೆ ಅಲ್ಲಗಳೆದವನ ಮತಗಳು ಶಾಶ್ವತವಾಗಿ ಉಳಿದಿಲ್ಲ. ಒಂದು ಭಾಷೆಯಲ್ಲಿ ಒಂದು ಶಬ್ದಕ್ಕೆ ಕೆಟ್ಟ ಅರ್ಥವಿದೆ ಎಂದ ಮಾತ್ರಕ್ಕೆ ಅದನ್ನೇ ನಾವು ಅನ್ವಯಿಸಿಕೊಳ್ಳಬೇಕೇ? ನಮ್ಮ ಪಕ್ಕದ ರಾಜ್ಯದಲ್ಲಿಯೇ ಕೃಪೆ ಎನ್ನುವ ಶಬ್ದಕ್ಕೆ ಕನ್ನಡದಲ್ಲಿ ಉಚ್ಚಾರಣೆ ಮಾಡುವಾಗ ಸ್ವಲ್ಪ ಮಾರ್ಪಾಟಾದರೆ ಅತ್ಯಂತ ಕೆಟ್ಟ ಅರ್ಥ ಹೊಮ್ಮುತ್ತದೆ; ಆದ್ದರಿಂದ ಅದನ್ನೇ ಸರಿಯೆಂದು ಪಕ್ಕದ ರಾಜ್ಯದವರು ಸ್ವೀಕರಿಸುತ್ತಾರೆಯೇ?

ಅನೇಕತೆಯಲ್ಲಿ ಏಕತೆಯನ್ನು ಕಾಣುವುದೇ ಹಿಂದೂ ಧರ್ಮ,"ಏಕಂ ಸತ್ ವಿಪ್ರಾ ಬಹುಧಾ ವದಂತಿ" ಎನ್ನುವುದೇ ನಮ್ಮ ಧರ್ಮದ ವಿಶೇಷತೆ. ನಾವು ಬಾಹ್ಯದಲ್ಲಿ ಬೇರೆ ಎಂದು ಕಂಡರೂ ಅಂತರಂಗದಲ್ಲಿ ಒಂದೇ. ಇತರ ಧರ್ಮಗಳಲ್ಲಿ ಬಾಹ್ಯದಲ್ಲಿ ಒಂದೇ ಎಂದು ಕಂಡರೂ ಸಹ ಅಂತರಂಗದಲ್ಲಿ ಅವರುಗಳು ಬೇರೆ ಬೇರೆ!