ನನ್ನೂರ 'ಕೆಡ್ಡಸ'ದ ನೆನಪುಗಳು
ತುಳುನಾಡು ಹಲವಾರು ಸಂಸ್ಕೃತಿ, ವಿವಿಧ ವೈಶಿಷ್ಟ್ಯಗಳು, ಆಚರಣೆಗಳ ಬೀಡು. ಅದಕ್ಕೆ ತನ್ನದೇ ಆದ ಒಂದು ರೂಪುರೇಖೆಗಳು. ಅಲ್ಲಿನ ಹಬ್ಬಗಳ ಹೆಸರುಗಳೇ ಕೇಳಲು ಬಲು ಚಂದ. ಮಾರ್ನೆಮಿ - ನವರಾತ್ರಿಯ ಒಂಭತ್ತು ದಿನಗಳಲ್ಲಿ ವೇಷ ಹಾಕಿಕೊಂಡು ಮನೆಮನೆಗೆ ಬರುವವರನ್ನು ಮಾರ್ನೆಮಿ ವೇಷದವರು ಎನ್ನುತ್ತಾರೆ. ಆಟಿಡೊಂಜಿ ದಿನ - ಆಷಾಡ ಮಾಸದಲ್ಲಿ, ಪತ್ರೊಡೆ,ಹಾಗೂ ಇನ್ನಿತರ ತಿಂಡಿಗಳನ್ನು ಮಾಡಿ ಒಂದು ದಿನ ಸಂಭ್ರಮಿಸುವುದು. ಎಲ್ಲಾ ತುಳುವರೂ ಒಗ್ಗಟ್ಟಾಗಿ ಆಚರಿಸುವ ಆಚರಣೆ. ಹಾಗೆಯೇ ಹೊಸದಾಗಿ ಮದುವೆಯಾದ ವಧುವನ್ನು ಮೊದಲ ಆಷಾಢ ಮಾಸದಲ್ಲಿ ತವರು ಮನೆಗೆ ಕರೆಸಿಕೊಂಡು ನಾಲ್ಕು ದಿನ ಕುಳ್ಳಿರಿಸಿ, ಆಕೆಯ ಉಡಿ ತುಂಬಿ ಕಳುಹಿಸುವ ಆಚರಣೆ ಬಹಳ ಪ್ರಸಿದ್ದಿ. "ಆಟಿ ಕುಲ್ಲುನ" (ಆಷಾಡದಲ್ಲಿ ತವರುಮನೆಗೆ ಬರುವುದು) ಎಂದು ಹೇಳುತ್ತಾರೆ. ಈ ಸಂದರ್ಭದಲ್ಲಿ ಆಟಿ ಕಳೆಂಜನೂ, ಕರಂಗೋಲು, ಮನೆಮನೆಗೆ ಬರುವ ಸಂಪ್ರದಾಯವೂ ಇಂದಿಗೂ ಇದೆ. ಕೋಟಿ-ಚೆನ್ನಯ ಕಂಬಳ ಬಹು ಪ್ರಸಿದ್ಧ ಕ್ರೀಡೆ.
ತುಳುವರಿಗೆ ಕ್ಯಾಲೆಂಡರ್ ವರ್ಷದ ಪ್ರಕಾರ ಬರುವ ಮೊದಲ ಹಬ್ಬವೇ "ಕೆಡ್ಡಸ". ಈ ಹಬ್ಬಕ್ಕೆ ಬಹಳ ಮಹತ್ವವಿದೆ ನಮ್ಮೂರಲ್ಲಿ. ಹೆಚ್ಚಾಗಿ ಫೆಬ್ರವರಿ ತಿಂಗಳ ೧೦ ಅಥವಾ ೧೧ ನೇ ತಾರೀಖಿನಂದೇ( ನನಗೆ ತಿಳಿದಂದಿನಿಂದ) ಈ ಆಚರಣೆ ಅಥವಾ ಹಬ್ಬ ಬರುತ್ತದೆ. ನಮ್ಮ ಊರಿನ ಸುಬ್ರಹ್ಮಣ್ಯ ದೇವರ ಜಾತ್ರೆಯೂ ಇದೇ ಮೂರು ದಿನಗಳ ಕಾಲ ವರ್ಷಂಪ್ರತಿ ನಡೆಯುವುದರಿಂದ ಊರಲ್ಲೆಲ್ಲಾ ಹಬ್ಬದ ವಾತಾರವರಣ. ಆದಿತ್ಯವಾರ ಅಂದರೆ ನಿನ್ನೆಯಿಂದ ಪ್ರಾರಂಭವಾದ ಈ ಆಚರಣೆ ನಾಳೆಯವರೆಗೂ ಇರುತ್ತದೆ. ಈ ಹಬ್ಬಕ್ಕೆ ಅದರದ್ದೇ ಆದ ಮಹತ್ವವೂ ಇದೆ.
ಭೂಮಿಗೆ ಎಣ್ಣೆ ಹುಯ್ಯುವುದು:
ಜನಪದರ ಅಥವಾ ಗ್ರಾಮೀಣರು ಹಿಂದಿನಿಂದಲೂ ಆಚರಿಸಿಕೊಂಡು ಬಂದ ಈ ಆಚರಣೆಯ ವಿಶೇಷತೆ ಹೀಗಿದೆ. ಈ ಮೂರು ದಿನಗಳ ಯಾವುದೇ ಆಯುಧಗಳಿಂದ ಭೂಮಿಯನ್ನು ಆಗೆಯುವಂತಿಲ್ಲ. ಕೃಷಿ ಭೂಮಿಯನ್ನು ಅಗೆಯುವಂತಿಲ್ಲ. ಈಗಲೂ ಯಾರೂ ಮೂರು ದಿನಗಳ ಕಾಲ ಯಾವುದೇ ಆಯುಧವನ್ನು ಭೂಮಿ ಅಗೆಯಲು ಬಳಸುವುದಿಲ್ಲ.ಪೂರ್ವಜರ ಆಚರಣೆ ಅವರು ಹೇಳಿದಂತೆ " ಈ ಮೂರು ದಿನಗಳ ಕಾಲ ಭೂದೇವಿಯು ಋತುಮತಿಯಾಗಿರುತ್ತಾಳೆ. ಆದ್ದರಿಂದ ಭೂಮಿಯನ್ನು ಅಗೆಯಬಾರದು. ನಾವು ಉಳಿದ ಕಾರ್ಯಗಳತ್ತ ಗಮನಹರಿಸಿ ಸುಮ್ಮನಿರಬೇಕು. ಕೊನೆಯ ದಿನ ಅಂದರೆ ಮೂರನೇ ದಿನ ಮನೆಯ ಹಿರಿಯ ಮಹಿಳೆ ಮುಂಜಾನೆ ಬೇಗ ಎದ್ದು, ಮಿಂದು, ತುಳಸಿ ಕಟ್ಟೆಯ ಮುಂಭಾಗದಲ್ಲಿ ಸೆಗಣಿ ಸಾರಿಸಿ ಶುಭ್ರಗೊಳಿಸಿ,ದೀಪ ಹಚ್ಚಿ, ಅರಶಿನ, ಕುಂಕುಮ, ಸೀಗೆ,ಹಾಗೂ ಒಂದು ದೋಸೆಯನ್ನು ಇರಿಸಿ ಪೂಜಿಸಿ ನಂತರ ಅರಶಿನ, ಕುಂಕುಮ ಹಾಗೂ ಎಣ್ಣೆಯನ್ನು ಭೂಮಿಗೆ ಹುಯ್ಯುತ್ತಾರೆ. ನಂತರ ಮನೆಯ ಹೆಣ್ಣುಮಕ್ಕಳೆಲ್ಲಾ ನಮಸ್ಕರಿಸಿ ಅಂದಿನ ವಿಶೇಷತೆಯ ತಿಂಡಿ "ನನ್ಯರಿ" ಯನ್ನು ತಯಾರಿಸುವುದು ಹಬ್ಬದ ವೈಶಿಷ್ಟ್ಯ.
ಕೆಡ್ಡಸದ ವಿಶೇಷ "ನನ್ಯರಿ".
ಕುಚ್ಚಲಕ್ಕಿ, ಮೆಂತೆ ಇವುಗಳನ್ನು ಹುರಿದು ಪುಡಿ ಮಾಡಿ ನಂತರ ಬೆಲ್ಲ, ತುಪ್ಪ ಬೇಕಿದ್ದರೆ ತೆಂಗಿನಕಾಯಿ ಸೇರಿಸಿ ಮಾಡುವ ಕೆಡ್ಡಸದ ವಿಶೇಷ ತಿನಿಸು. ತುಂಬಾ ರುಚಿ ಹಾಗೂ ಆರೋಗ್ಯದಾಯಕ ತಿಂಡಿ. ಎಷ್ಟು ತಿಂದರೂ ಸಾಕೆನಿಸುವುದಿಲ್ಲ. ಕೆಡ್ಡಸದ ನಂತರದ ದಿನಗಳಲ್ಲಿ ಈ ತಿಂಡಿಯನ್ನು ಬೇಕೆಂದಾಗ ಮಾಡಿಕೊಳ್ಳಬಹುದು. ತೆಂಗಿನ ಕಾಯಿ ಸೇರಿಸದಿದ್ದರೆ ತುಂಬಾ ದಿನಗಳ ಕಾಲ ಇವುಗಳನ್ನು ಶೇಖರಿಸಿಟ್ಟು ಉಪಯೋಗಿಸಬಹುದು.
ಕೆಡ್ಡಸದ "ಬೋಂಟೆ"(ಶಿಕಾರಿ).
ಭೂಮಿಯಲ್ಲಿ ಬೆಳೆಯುವ ಯಾವುದೇ ತರಕಾರಿಯನ್ನು ಅಗೆಯಲು ಅವಕಾಶ ಇಲ್ಲವಾದ್ದರಿಂದ ಈ ಮೂರು ದಿನಗಳಲ್ಲಿ ಗ್ರಾಮೀಣರೆಲ್ಲಾ ಒಟ್ಟಾಗಿ ಶಿಕಾರಿ ಹೋಗುವ ಆಚರಣೆಯೂ ಇದೆ. ಹಿಂದೆ ಈ ಬೋಂಟೆ ತುಂಬಾ ,ಮಹತ್ವದ್ದಾಗಿತ್ತು. ಎಲ್ಲರೂ ಭಾಗವಹಿಸುತ್ತಿದ್ದರು. ಈಗ ಅಲ್ಲಲ್ಲಿ ಮಾತ್ರ ಕಾಣಸಿಗುತ್ತವೆ. ಕಾರಣ ಕಾಡುಪ್ರಾಣಿಗಳೂ ಕಡಿಮೆ. ಹಾಗೂ ತಮ್ಮ ಬೆಳೆಗಳು ನಾಶವಾಗದಂತೆ ಭದ್ರವಾದ ಬೇಲಿಯನ್ನು ಹಾಕಿರುತ್ತಾರೆ, ವಿದ್ಯುತ್ ಬೇಲಿಗಳೂ ಲಭ್ಯ. ಹಿಂದೆ ಈ ರೀತಿಯಾದ ಸೌಕರ್ಯಗಳಿರಲಿಲ್ಲ. ಹಾಗಾಗಿ ತಾವು ಬೆಳೆದ ಬೆಳೆಯನ್ನು ಕಾಡುಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಅವುಗಳನ್ನು ಬೇಟೆಯಾಡುವ ಪದ್ಧತಿಯಿದ್ದಿರಬಹದು. ಈ ಮೂರು ದಿನಗಳ ಕಾಲ ಭೂಮಿಯಲ್ಲಿ ಯಾವುದೇ ರೀತಿಯ ಕೆಲಸ ಮಾಡುವಂತಿರಲಿಲ್ಲವಾದ್ದರಿಂದ ಎಲ್ಲರೂ ಒಟ್ಟಾಗಿ ಪ್ರಾಣಿಗಳ ಬೇಟೆಗೆ ಹೊರಡುತ್ತಿದ್ದರು ಎಂಬುದು ಹಿರಿಯರ ಮಾತು.
ಭೂತನರ್ತಕರ ಪಾಡ್ದನ:
ಈ ಹಬ್ಬದ ಒಂದು ವಾರಕ್ಕೆ ಮುಂಚೆಯೇ ತುಳುನಾಡಿನ ಆಯಾ ಗ್ರಾಮ ದೈವಗಳ ಭೂತನರ್ತಕರು ಈ ಹಬ್ಬದ ಪಾಡ್ದನಗಳನ್ನು ಹಾಡಿಕೊಂಡು ಮನೆಮನೆಗೆ ಭೇಟಿನೀಡುತ್ತಾರೆ. ಪಾಡ್ದನಗಳಲ್ಲಿ ಕೆಡ್ಡಸದ ವಿಶೇಷತೆಗಳನ್ನು ಹಾಡಿನ ರೂಪದಲ್ಲಿ ವಿವರಿಸುತ್ತಾ ಮನೆಮನೆಗೆ ಹೋಗುತ್ತಾರೆ. ಕೆಡ್ಡಸದಂದು ಆ ಊರಿನಲ್ಲಿ ನಡೆಯುವ ಕಟ್ಟುಪಾಡುಗಳು, ಭೂತಸ್ಥಾನದ ಬಾಗಿಲು ತೆಗೆದು ದೀಪ ಹಚ್ಚುವುದು, ತಂಬಿಲ ಕೊಡುವುದು, ಊರಿನ ಮಂದಿ ಶಿಕಾರಿಗೆ ತೆರಳುವುದು, ಮೂರು ದಿನಗಳ ಕಾಲ ಹಸಿ, ಒಣಗಿದ ಮರಗಳನ್ನು ಮುರಿಯಬಾರದು, ಭೂಮಿ ಅದುರಬಾರದು, ಹೀಗೆ ಮೂರು ದಿನಗಳ ಕಾಲದ ಸಂಪ್ರದಾಯವನ್ನು ವಿವರಿಸುತ್ತಾರೆ. ಹೀಗೆ ಬಂದವರಿಗೆ, ಮನೆಯವರು ಅಕ್ಕಿ, ತೆಂಗಿನಕಾಯಿ, ಬೆಲ್ಲ, ಮನೆಯಲ್ಲಿ ಬೆಳೆದ ಮೆಣಸು, ಹುಳಿ ಹೀಗೆ ಆಹಾರ ಪದಾರ್ಥಗಳನ್ನು ಕೊಟ್ಟು ಕಳಿಸುವುದು ರೂಢಿ.
ಇಂದು ಈ ಆಚರಣೆಗಳಲ್ಲಿ ಸ್ವಲ್ಪ ವ್ಯತ್ಯಾಸವಾಗಿದ್ದರೂ, ಭೂಮಿಗೆ ಎಣ್ಣೆ ಹುಯ್ಯುವುದು,ನನ್ಯರಿ ತಿಂಡಿ ನಮ್ಮೂರಿನ ಎಲ್ಲರ ಮನೆಯಲ್ಲೂ ಇಂದಿಗೂ ಆಚರಣೆಯಲ್ಲಿವೆ. ಕೆಡ್ಡಸದ ದಿನ ಇವತ್ತು ಏನು ತಿಂಡಿ ಮಾಡಿದಿರಿ ಎಂದು ಯಾರೂ ಕೇಳುವುದಿಲ್ಲ. ಬಾಳೆಹಣ್ಣು ಮತ್ತು ನನ್ಯೆರಿ ಎಲ್ಲರ ಮನೆಯಲ್ಲೂ ರೆಡಿ. ಹಾಗೂ ಊರಿನ ಜಾತ್ರೆ ಇಂದೇ ಇರುವುದರಿಂದ ಊರಿನಿಂದ ಹೊರಗಡೆ ಇರುವವರೂ ಈ ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಎಲ್ಲರೂ ಬಹಳ ಸಂಭ್ರಮ ಹಾಗೂ ಅದ್ದೂರಿಯಿಂದ ಆಚರಿಸುವ ಹಬ್ಬವೇ ನಮ್ಮೂರ "ಕೆಡ್ಡಸ".
ನಿನ್ನೆ , ಇಂದು ,ನಾಳೆ ನಡೆಯುವ ಈ ವರ್ಷದ ಹಬ್ಬದಲ್ಲಿ ನಾನಂತೂ ಮಿಸ್. ಕಾರಣ ಹೇಳ್ಬೇಕಾಗಿಲ್ಲ ಅಲ್ವಾ. (ರಜಾ ಇಲ್ಲ). ನಮ್ಮೂರ ದೇವರ ಜಾತ್ರೆ ಹಾಗೂ ನನ್ಯೆರಿ ಅಂದ್ರೆ ನಂಗೆ ತುಂಬಾ ಇಷ್ಟ. ಬೆಂಗಳೂರಿಂದ ಒಂದು ದಿವಸಕ್ಕಾಗಿ ಹೋಗಿ ಬಂದರೂ ಸಮಧಾನವಿರುವುದಿಲ್ಲ. ಮುಂದಿನ ವರ್ಷದ ಹಬ್ಬವನ್ನು ಖಂಡಿತವಾಗಿಯೂ ಮಿಸ್ ಮಾಡಲ್ಲ.
ಚಿತ್ರ ೧: ಪಾಡ್ದನ ಹಾಡಿಕೊಂಡು ಸಣ್ಣ ಬ್ಯಾಂಡ್ (ಟೆಂಬರೆ) ಬಡಿಯುವಂತದ್ದು
ಚಿತ್ರ ೨: ಕರುಂಗೋಲು ನೃತ್ಯ
ಚಿತ್ರ ೩: ಆಟಿ ಕಳೆಂಜ ವೇಷ
ಚಿತ್ರ ಕೃಪೆ:
http://www.mangalorean.com/printarticle.php?arttype=broadcast&newsid=48622
Comments
ಕುತೂಹಲಕಾರಿ ಸಂಪ್ರದಾಯದ ವರ್ಣನೆ
In reply to ಕುತೂಹಲಕಾರಿ ಸಂಪ್ರದಾಯದ ವರ್ಣನೆ by kavinagaraj
ನಿಮ್ಮ ಪ್ರತಿಕ್ರಿಯೆ ಹಾಗೂ