ಶ್ರಾದ್ಧ

ಶ್ರಾದ್ಧ

ಅರಿತವರು ಹೇಳಿಹರು ಅಚ್ಚರಿಯ ಸಂಗತಿಯ
ಆತ್ಮಕ್ಕೆ ಅಳಿವಿಲ್ಲ ಹುಟ್ಟು ಸಾವುಗಳಿಲ್ಲ |
ಬದಲಾಗದ ಬೆಳೆಯದ ನಾಶವಾಗದ 
ಚಿರಂಜೀವ ನಿತ್ಯ ಶಾಶ್ವತವು ಮೂಢ ||

     ಸಾಮಾನ್ಯವಾಗಿ ಶ್ರಾದ್ಧ ಎಂದಾಕ್ಷಣ ನೆನಪಿಗೆ ಬರುವುದು ಮೃತರಾದ ಹಿರಿಯರ ನೆನಪಿನಲ್ಲಿ ಮಾಡುವ ಕ್ರಿಯಾಕರ್ಮಗಳು. ಶ್ರಾದ್ಧ ಪದದ ಅರ್ಥವೆಂದರೆ ಶ್ರದ್ಧೆಯಿಂದ ಮಾಡುವುದು ಎಂದು. ನಾವು ಶ್ರಾದ್ಧದ ಹೆಸರಿನಲ್ಲಿ ಮಾಡುವ ಕ್ರಿಯಾಕರ್ಮಗಳಿಂದ ಮೃತರಿಗೆ ನಿಜವಾಗಿಯೂ ಉಪಯೋಗವಾಗುವುದೇ ಎಂಬುದು ವಿಚಾರಾರ್ಹ ವಿಷಯ. ಮಾಡಬಾರದ ಪಾಪಗಳನ್ನು ಮಾಡಿ ದೇವರಿಗೆ 'ಕ್ಷಮಿಸಪ್ಪಾ' ಎಂದು ಕೇಳಿಕೊಂಡಾಕ್ಷಣ ಪಾಪ ಪರಿಹಾರವಾಗುತ್ತದೆ ಎಂದು ನಂಬುವಂತಹವರಿಗೆ ಇದು ಚರ್ಚಾರ್ಹ ವಿಷಯವೇ ಅಲ್ಲ. ದೇಹದಲ್ಲಿ ಪ್ರಾಣವಿರುವವರೆಗೂ ದೇಹಕ್ಕೆ ಅರ್ಥವಿರುತ್ತದೆ. ನಂತರದಲ್ಲಿ ಅದು ವ್ಯಕ್ತಿಯೆಂದು ಗುರುತಿಸಲ್ಪಡದೆ ವ್ಯಕ್ತಿಯ ದೇಹ(ಹೆಣ)ವೆಂದು ಕರೆಯಲ್ಪಡುತ್ತದೆ. ಸತ್ತ ನಂತರದಲ್ಲಿ ಜನರು ದೇಹವನ್ನು  ಸುಡುವುದೋ, ಹೂಳುವುದೋ, ಇತ್ಯಾದಿ ತಮ್ಮ ಸಂಪ್ರದಾಯಗಳಿಗನುಸಾರವಾಗಿ ಮಾಡುತ್ತಾರೆ. ಹಿಂದೂಗಳು ಪುನರ್ಜನ್ಮವನ್ನು ನಂಬುತ್ತಾರೆ. ಭಗವದ್ಗೀತೆಯಲ್ಲಿ, ವೇದದ ಉಲ್ಲೇಖಗಳಲ್ಲಿ ತಿಳಿಸಲ್ಪಟ್ಟಿರುವ ಪ್ರಕಾರ ಆತ್ಮ ಅವಿನಾಶಿ, ಅನಂತ. ಮರಣಾನಂತರ ಆತ್ಮ ತನ್ನ ಕರ್ಮಾನುಸಾರವಾಗಿ ಇನ್ನೊಂದು ಜೀವಿಯಾಗಿ ಜನ್ಮ ತಾಳುತ್ತದೆ, ಹಳೆಯ, ಹರಿದ ಅಂಗಿಯನ್ನು ತೊರೆದು ಹೊಸ ಅಂಗಿಯನ್ನು ತೊಡುವಂತೆ ಆತ್ಮ ಜೀರ್ಣ ಶರೀರ ತೊರೆದು ಇನ್ನೊಂದು ಶರೀರಧಾರಣೆ ಮಾಡುತ್ತದೆ ಎಂಬುದು ಪ್ರಚಲಿತ ನಂಬಿಕೆ. ಮೃತ ಶರೀರವನ್ನು ಉತ್ತರಕ್ರಿಯಾಕರ್ಮಗಳಿಂದ ಪಂಚಭೂತಗಳಲ್ಲಿ ಲೀನಗೊಳಿಸಲಾಗುತ್ತದೆ. ಆತ್ಮ ಅವಿನಾಶಿಯಾದ್ದರಿಂದ ಸಂಬಂಧಿಸಿದ ವ್ಯಕ್ತಿ ಅಪೇಕ್ಷೆ ಪಟ್ಟಿದ್ದಲ್ಲಿ ಅವನ ಇಚ್ಛೆಯಂತೆ ಆತನ ಮೃತಶರೀರವನ್ನು ವಿಲೇವಾರಿ ಮಾಡಿದರೆ ಅದರಲ್ಲಿ ತಪ್ಪಿಲ್ಲವೆಂದು ನನ್ನ ವೈಯಕ್ತಿಕ ಅನಿಸಿಕೆ. ಆತ್ಮದ ಸದ್ಗತಿ ಕೋರಿ ಮಾಡುವ ಇತರ ಕರ್ಮಗಳನ್ನು ಸಂಬಂಧಿಕರು ಅವರು ಬಯಸಿದಲ್ಲಿ ಮಾಡಿಕೊಳ್ಳಬಹುದು. ಶ್ರಾದ್ಧಾದಿ ಕಾರ್ಯಗಳು ಮಾಡುವವರು ತಮ್ಮ ಹಿರಿಯರನ್ನು ನೆನೆಸಿಕೊಂಡು ಸಲ್ಲಿಸುವ ಕೃತಜ್ಞತೆಯೆನ್ನಬಹುದಷ್ಟೆ. ಅದರ ಫಲವೇನಿದ್ದರೂ ಮಾಡುವವರಿಗಷ್ಟೆ.  ಯಾವುದೇ ವ್ಯಕ್ತಿಗೆ ಆತನ ಕರ್ಮಾನುಸಾರ ಫಲಗಳು ಸಿಕ್ಕುವುದೆಂಬುದು ತಿಳಿದವರು ಹೇಳುವರು. ಹೀಗಿರುವಾಗ ಅವನಿಗೆ ಅವನ ಮರಣದ ನಂತರ ಇತರರು ಒಳ್ಳೆಯ ಫಲ ದೊರೆಯುವಂತೆ ಮಾಡುವುದು ಹೇಗೆ ಸಾಧ್ಯ? ಪ್ರಳಯ, ಪ್ರವಾಹ, ಇತ್ಯಾದಿ ನೈಸರ್ಗಿಕ ಕಾರಣಗಳಿಂದ ಉತ್ತರಕ್ರಿಯೆ ಮಾಡುವವರೂ ಇಲ್ಲದಂತೆ ನಾಶವಾಗುವ ಸಹಸ್ರಾರು ಜೀವಗಳಿಗೆ ಸದ್ಗತಿ ದೊರೆಯುವುದಿಲ್ಲವೆಂದು ಹೇಳಲಾಗುವುದೆ? ಈಗಿನ ರೂಢಿಗತ ಸಂಪ್ರದಾಯ ಬಲವಾಗಿ ಬೇರೂರಿರುವ ಕಾಲಮಾನದಲ್ಲಿ  ಮುಂದಕ್ಕೆ ಯೋಚಿಸುವವರು ಸಾಮಾನ್ಯವಾಗಿ ಅಪಾರ್ಥಕ್ಕೆ ಒಳಗಾಗುತ್ತಾರೆ ಎಂಬ ಅರಿವು ನನಗಿದೆ. ಅಪಾರ್ಥಕ್ಕೆ ಒಳಗಾದರೂ ಪರವಾಗಿಲ್ಲ, ಸತ್ತ ನಂತರದಲ್ಲಿ ನನ್ನ ಶ್ರಾದ್ಧವನ್ನು ನನ್ನ ಮಕ್ಕಳು ಮಾಡದಿರಲಿ, ಬೇಕಾದರೆ ಬದುಕಿದ್ದಾಗ ಮಾಡಲಿ ಎಂಬುದು ನನ್ನ ಆಶಯ.

     ಶ್ರಾದ್ಧದ ಕುರಿತು ಪಂ. ಸುಧಾಕರ ಚತುರ್ವೇದಿಯವರ ಏನು ಹೇಳಿದ್ದಾರೆ, ನೋಡೋಣ:

 

     ಪಿತೃಯಜ್ಞ - ಈ ವಿಷಯದಲ್ಲಿ ಜನಸಾಮಾನ್ಯಕ್ಕೆ ಬಹಳ ಭ್ರಾಂತಿಯಿದೆ. ತೀರಿಹೋದ ತಂದೆ-ತಾಯಿಗಳಿಗೆ ಶ್ರಾದ್ದ ಮಾಡಿ, ಪಿಂಡದಾನ - ತಿಲತರ್ಪಣ ಕೊಡುವುದೇ ಪಿತೃಯಜ್ಞವೆಂಬ ಬುದ್ಧಿವಿರುದ್ದವೂ, ಅವೈದಿಕವೂ ಆದ ನಂಬಿಕೆ ಬಹುಮಂದಿಗಿದೆ. ಪ್ರತಿಯೊಬ್ಬ ಜೀವನೂ ತನ್ನ ಸತ್ಕರ್ಮ - ದುಷ್ಕರ್ಮಗಳಿಗೆ ಉತ್ತರದಾತೃ; ಪ್ರತಿಯೊಬ್ಬ ಜೀವನಿಗೂ ಅವನವನ ಕರ್ಮಾನುಸಾರ ಜನ್ಮಾಂತರದಲ್ಲಿ ಊರ್ಧ್ವಗತಿ-ಅಧೋಗತಿಗಳು ಪ್ರಾಪ್ತವಾಗುತ್ತವೆ. ಈ ವಿಷಯದ ಬಗೆಗೆ ಅನ್ಯರು ಮಾಡುವ ಯಾವ ಕರ್ಮವೂ ಭಗವಂತನ ಕರ್ಮಫಲದಾನದ ನ್ಯಾಯಸಿದ್ಧಾಂತವನ್ನು ಪರಿವರ್ತಿಸಲಾರದು. ಮೃತರಾದ ತಂದೆ-ತಾಯಿಗಳು ಪುಣ್ಯಾತ್ಮರಾಗಿದ್ದ ಪಕ್ಷದಲ್ಲಿ ಅವರ ಊರ್ಧ್ವಗತಿಗೆ ಇಲ್ಲಿ ಹಾಕುವ ಪಿಂಡ, ತಿಲತರ್ಪಣಗಳು ಅನಾವಶ್ಯಕ. ಅವರು ಪಾಪಾತ್ಮರಾಗಿದ್ದ ಪಕ್ಷದಲ್ಲಿ, ಅವರ ಅಧೋಗತಿಯನ್ನು ಇಲ್ಲಿನ ಶ್ರಾದ್ಧಕರ್ಮಗಳಿಂದ ತಪ್ಪಿಸಲು ಸಾಧ್ಯವಿಲ್ಲ. ಹೀಗೆ ಮೃತರ ಶ್ರಾದ್ಧ ಒಂದು ಅರ್ಥರಹಿತವಾದ ಆಡಂಬರ ಕ್ರಿಯೆ ಮಾತ್ರ. 

     ಶ್ರಾದ್ಧ ಎಂದರೆ, ಶ್ರದ್ಧೆಯಿಂದ ಸಲ್ಲಿಸುವ ಸೇವೆ, ತರ್ಪಣ ಎಂದರೆ ತೃಪ್ತಿ ನೀಡುವ ಕಾರ್ಯ. ಇವೆರಡೂ ಸಶರೀರರಾದ ಜೀವಂತರಾದ ಮಾತಾ-ಪಿತೃಗಳಿಗೆ ಸಲ್ಲಬೇಕಾದ ಸೇವೆಗಳೇ ಹೊರತು, ಮೃತರಿಗಲ್ಲ. ಮೃತರಿಗೆ ನಾವು ಸದ್ಗತಿಯನ್ನು ಕೊಡಲಾರೆವು. ಅವರಿಂದ ನಮಗಾದ ಉಪಕಾರಗಳನ್ನು ಸ್ಮರಿಸುವುದು; ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಯಾವುದಾದರೂ ಸತ್ಕಾರ್ಯ ಮಾಡುವುದು ತಪ್ಪಲ್ಲ. ಆದರೆ ಕರ್ಮಗತಿಯನ್ನು ಪರಿವರ್ತಿಸಬಲ್ಲೆವೆಂದು ಮಾತ್ರ ಕನಸಿನಲ್ಲಿಯೂ ಭಾವಿಸಬಾರದು.

     ಪಿತೃಯಜ್ಞ, ವೈದಿಕ ಸಿದ್ಧಾಂತಾನುಸಾರ, ಜೀವಂತ ಮಾತಾ-ಪಿತೃಗಳಿಗೆ ಮಕ್ಕಳು ಸಲ್ಲಿಸುವ ಸೇವೆ. ಗುರುಕುಲದಲ್ಲಿರುವ ಬ್ರಹ್ಮಚಾರಿಗಳಿಗೂ, ವಾನಪ್ರಸ್ಥಿಗಳಿಗೂ, ಸಂನ್ಯಾಸಿಗಳಿಗೂ ಇದು ಸಂಬಂಧಿಸುವುದಿಲ್ಲ. ಇದು ಕೇವಲ ಗೃಹಸ್ಥರಿಗೆ ಮಾತ್ರ ಸಂಬಂಧಿಸಿದ ಯಜ್ಞ. ಋಗ್ವೇದ ಹೇಳುತ್ತಲಿದೆ:-

ಸ ವಹ್ನೀ ಪುತ್ರಃ ಪಿತ್ರೋಃ ಪವಿತ್ರವಾನ್ ಪುನಾತಿ ಧೀರೋ ಭುವನಾನಿ ಮಾಯಯಾ || (ಋಕ್.೧.೧೬೦.೩)

[ಪಿತ್ರೋಃ] ಮಾತಾ-ಪಿತೃಗಳನ್ನು, ಸೇವಾಶುಶ್ರೂಷೆಗಳಿಂದ, [ವಹ್ನಿಃ] ಎತ್ತಿ ಹಿಡಿಯುವವನೇ, [ಪುತ್ರಃ] ನಿಜವಾದ ಮಗನು. [ಸ ಧೀರಃ] ಆ ಮಾತಾ-ಪಿತೃಸೇವಕನಾದ, ಬುದ್ಧಿಯಿಂದ ಪ್ರೇರಿತನಾದ ಸುಪುತ್ರನೇ, [ಮಾಯಯಾ] ತನ್ನ ಪ್ರಜ್ಞೆಯಿಂದ [ಪವಿತ್ರವಾನ್] ಪವಿತ್ರಶಕ್ತಿಯುತನಾಗಿ [ಭುವನಾನಿ ಪುನಾತಿ] ಲೋಕಗಳನ್ನು ಪವಿತ್ರಗೊಳಿಸುತ್ತಾನೆ. 

ಮಾತಾ-ಪಿತೃಗಳಿಗೆ ಭಕ್ತಿ ತೋರದ ಪುತ್ರ ಕೃತಘ್ನ. ಅವನಲ್ಲಿ ಪವಿತ್ರ ಭಾವನೆಗಳೇ ಉದಿಸವು. ಇನ್ನು ಅವನು ಜಗತ್ತನ್ನು ಪಾವನಗೊಳಿಸುವುದಾದರೂ ಹೇಗೆ?

     ಗೃಹಸ್ಥ-ಗೃಹಿಣಿಯರು, ಮನೆಯಲ್ಲಿರುವ ತಂದೆ-ತಾಯಿಗಳನ್ನು ತ್ರಿಕರಣಶುದ್ಧಿ ಪೂರ್ವಕವಾಗಿ ಉಪಚರಿಸಬೇಕು. ಅವರ ಮನಸ್ಸಿಗೆ ನೋವಾಗದಂತೆ, ಶರೀರಗಳಿಗೆ ಕಷ್ಟವಾಗದಂತೆ ನೋಡಿಕೊಳ್ಳಬೇಕು. ಪಾರಿವಾರಿಕ ಜೀವನವನ್ನು ಸುಖಮಯವಾಗಿ ಮಾಡಲು, ಅಥರ್ವವೇದ ಕೊಡುವ ಈ ಆದೇಶಗಳನ್ನು ನೆನಪಿನಲ್ಲಿಡಬೇಕಾದುದು ಆವಶ್ಯಕ.

ಅನುವ್ರತಃ ವಿತುಃ ಪುತ್ರೋ ಮಾತ್ರಾ ಭವತು ಸಂಮನಾ | 

ಜಾಯಾ ಪತ್ಯೇ ಮಧುಮತೀಂ ವಾಚಂ ವದತು ಶಂತಿವಾಮ್ || (ಅಥರ್ವ.೩.೩೦.೨)

     [ಪುತ್ರಃ] ಮಗನು, [ಪಿತುಃ ಅನುವ್ರತಃ] ತಂದೆಗೆ ಅನುಕೂಲವಾದ ಸಂಕಲ್ಪವುಳ್ಳವನೂ, [ಮಾತ್ರಾ] ತಾಯಿಯೊಂದಿಗೆ [ಸಮ್ಮನಾಃ] ಸಮಾನ ಚಿತ್ತನೂ, [ಭವತು] ಆಗಿರಲಿ. [ಜಾಯಾ] ಪತ್ನಿಯು [ಪತ್ಯೇ] ಪತಿಗೆ [ಮಧುಮತೀಂ ಶಂತಿವಾಂ ವಾಚಮ್] ಮಧುರವೂ, ಶಾಂತಿದಾಯಕವೂ ಆದ ಮಾತನ್ನು, [ವದತು] ಆಡಲಿ.

ಮಾ ಭ್ರಾತಾ ಭ್ರಾತರಂ ದ್ವಿಕ್ಷನ್ಮಾ ಸ್ವಸಾರಮುತ ಸ್ವಸಾ | 

ಸಮ್ಯಂಚಃ ಸವ್ರತಾ ಭೂತ್ವಾ ವಾಚಂ ವದತ ಭದ್ರಯಾ || (ಅಥರ್ವ.೩.೩೦.೩)

     [ಭ್ರಾತಾ] ಸೋದರನು [ಭ್ರಾತರಮ್] ಸೋದರನನ್ನು [ಮಾ ದ್ವಿಕ್ಷತ್] ದ್ವೇಷಿಸದಿರಲಿ. [ಉತ] ಅಂತೆಯೇ [ಸ್ವಸಾರಮ್] ಸಹೋದರಿಯು [ಸ್ವಸಾ] ಸಹೋದರಿಯೊಂದಿಗೆ (ದ್ವೇಷಭಾವನೆ ಹೊಂದದಿರಲಿ). [ಸಮ್ಯಂಚಃ] ಪರಸ್ಪರ ಪ್ರೀತಿಯುಕ್ತರೂ [ಸವ್ರತಾಃ] ಒಂದೇ ಸಂಕಲ್ಪವುಳ್ಳವರೂ [ಭದ್ರಯಾ] ಶುಭವಾದ ರೀತಿಯಲ್ಲಿ [ವಾಚಂ ವದತ] ಮಾತನ್ನಾಡಿರಿ.

     ಪತಿ-ಪತ್ನಿಯರಲ್ಲಿ, ಸೋದರ-ಸೋದರಿಯರಲ್ಲಿ ಪರಸ್ಪರ ವೈಮನಸ್ಯವಿದ್ದರೆ, ಅವರು ಮಾತಾ-ಪಿತೃಗಳನ್ನು ಉಪಚರಿಸುವುದಾದರೂ ಎಂತು? ಗೃಹದ ವಾತಾವರಣವನ್ನು ಮಧುರವಾಗಿಟ್ಟುಕೊಂಡು, ಪ್ರತಿದಿನವೂ ಮಾತಾ-ಪಿತೃಗಳನ್ನು ಎಲ್ಲ ರೀತಿಯಲ್ಲಿಯೂ ಪ್ರಸನ್ನರಾಗಿಯೂ, ತೃಪ್ತರನ್ನಾಗಿಯೂ ಇಟ್ಟುಕೊಂಡಿರುವುದೇ ನಿಜವಾದ ಪಿತೃಯಜ್ಞ.

 

Comments

Submitted by sathishnasa Tue, 02/12/2013 - 16:38

ವಿಚಾರರ್ಹ ಲೇಖನ ನಾಗರಾಜ್ ರವರೇ ನನ್ನ ಅನಿಸಿಕೆಯಲ್ಲಿ ಶ್ರಾದ್ದ ಎನ್ನುವುದು ನಮ್ಮನಗಲಿದವರನ್ನು ನೆನಪಿಸಿ ಕೊಳ್ಳಲು ಮಾಡುವ ಒಂದು ಕರ್ಮ ಎನಿಸುತ್ತದೆ. ಸ್ವಲ್ಪ ವರ್ಷ ಕಳೆದ ಮೇಲೆ ಅದು ಯಾಂತ್ರಿಕವಾಗಿ ನಡೆಯುತ್ತಿರುತ್ತದೆ (ಬಿಟ್ಟರೆ ಏನಾಗುವುದು ಎಂಬ ಭಯದಿಂದ ) ಧನ್ಯವಾದಗಳೊಂದಿಗೆ ......ಸತೀಶ್
Submitted by kavinagaraj Tue, 02/12/2013 - 20:24

In reply to by sathishnasa

ಧನ್ಯವಾದ ಸತೀಶರೇ. ನಿಮ್ಮ ಅನಿಸಿಕೆ ಸರಿಯಾಗಿದೆ. ಬಿಟ್ಟರೆ ಏನಾಗುವುದೋ ಎಂಬ ಭಯ ವಿವೇಚಿಸಿ ನಡೆಯುವವರಿಗೆ ಬರಲಾರದು.
Submitted by Prakash Narasimhaiya Wed, 02/13/2013 - 11:48

In reply to by kavinagaraj

ಬದುಕಿರುವಾಗ ನಮ್ಮ ಹಿರಿಯರಿಗೆ ತೋರಿಸುವ ಗೌರವ, ನೀಡುವ ಸಹಕಾರ, ಮಾಡುವ ಉಪಚಾರ ಮತ್ತು ನಿರ್ವಹಿಸುವ ಕರ್ತವ್ಯ ಇವೆಲ್ಲವೂ ಬೌತಿಕ ಕ್ರಿಯೆಗಳು. ಈ ಕರ್ತವ್ಯದಿಂದ ನಮ್ಮ ಗುಣಗಳನ್ನು ದೃಢ ಗೊಳಿಸಿಕೊಂಡಾಗ ವ್ಯಕ್ತಿಗತವಾಗಿ ನಮಗೆ ಸಂತೋಷ,ಸಂತೃಪ್ತಿ ಮತ್ತು ಸಮಾಧಾನ ಸಿಗುತ್ತದೆ. ಆದರೆ, ಆ ವ್ಯಕ್ತಿ ಮೃತರಾದಾಗ ನಮ್ಮ ದುಃಖವನ್ನು ಸಮಾಧಾನ ಮಾಡಿಕೊಳ್ಳಲು, ಮೃತವ್ಯಕ್ತಿಯ ಸ್ಮರಣೆಯಲ್ಲಿ ಕೃತಜ್ಞತೆಯಿಂದ ಸ್ಮರಿಸುವ ಸಂಸ್ಕಾರಕ್ಕೆ ಶ್ರಾದ್ಧ ಎಂದು ಕರೆಯುತ್ತಾರೆ. ಇಂತಹ ಸಂದರ್ಭದಲ್ಲಿ ಮೃತ ವ್ಯಕ್ತಿಯ ಇಷ್ಟ ಬಂಧು ಮಿತ್ರರನ್ನು , ಆಹ್ವಾನಿಸಿ ಭೋಜನ ಮತ್ತು ಯಥಾನುಶಕ್ತಿ ದಾನವನ್ನು ಮಾಡುತ್ತಾರೆ. ಈ ಸಂಸ್ಕಾರ ಮಾಡಲು ಸತ್ವಶುದ್ದಿ ಮತ್ತು ಚಿತ್ತಶುದ್ದಿ ಎರಡು ಬೇಕಾಗುತ್ತದೆ. ಈ ಎರಡು ಶುದ್ದಿ ಲಭ್ಯವಾಗಲು ರಜಸ್ತಮೂ ಗುಣದಿಂದ ಸಾತ್ವಿಕ ಗುಣದತ್ತ ಮನಸ್ಸು ಕೊಡಬೇಕಾಗುತ್ತದೆ. ಆಗ ಪ್ರೀತಿ,ಪ್ರೇಮ,ಸತ್ಯ, ಗೌರವ, ಕೃತಜ್ಞತಾ ಭಾವಗಳು ಹತ್ತಿರ ಸುಳಿಯುತ್ತವೆ. ಆಗ ಮನಸ್ಸು ಪುಟವಾಗುತ್ತದೆ. ಪುಟವಾದ ಮನಸ್ಸು ವಿಶಾಲವಾಗಿ ಜಗತ್ತನ್ನು ನೋಡುತ್ತದೆ. "ಶ್ರದ್ಧಯಾ ಇದಂ ಕರ್ಮ ಅನುಷ್ಟೀಯತೆ ಇತಿ ಶ್ರಾದ್ಧಂ."ಅತ್ಯಂತ ಶ್ರದ್ಧೆಯಿಂದ ಆಚರಿಸುವ ಶ್ರಾದ್ಧ ಕರ್ಮವನ್ನು ಕರ್ತವ್ಯ ಎಂದು ಹೇಳಲಾಗಿದೆ. ನಮ್ಮ ಜನ್ಮಕ್ಕೆ ಕಾರಣರಾದ, ನಮ್ಮ ಸರ್ವತೋಮುಖ ಬೆಳವಣಿಗೆಗೆ ಮತ್ತು ನಮ್ಮ ಪುರೋಭಿವೃದ್ದಿಗೆ ಕಾರಣಕರ್ತರಾದ ನಮ್ಮ ತಂದೆ ತಾಯಿ,ಹಿರಿಯರು, ಗುರುಗಳು,ಕುಟುಂಬದ ಸದಸ್ಯರು, ಬಂಧು ಬಾಂಧವರು ಮತ್ತು ಸ್ನೇಹಿತರು ಇವರುಗಳನ್ನು ಮರೆಯದೆ ಕೃತಜ್ಞತೆಯಿಂದ ನೆನೆಯುತ್ತ ಪ್ರತಿವರ್ಷವು ಆಚರಿಸುವ ಸಾಂಕೇತಿಕ ಕರ್ಮವೆ ಶ್ರಾದ್ಧ.
Submitted by ಆರ್ ಕೆ ದಿವಾಕರ Fri, 02/15/2013 - 13:07

In reply to by kavinagaraj

ಎಳ್ಳು, ಅಕ್ಕಿ, ದರ್ಬೆ, ದೊನ್ನೆ - ಇವು ಶ್ರಾದ್ಧದ ಅವಿಭಾಜ್ಯ ಪರಿಕರಗಳು. ಪಿತೃದೇವತೆಗಳು, ವಿಶ್ವೇದೇವತೆಗಳು ಇಲ್ಲಿ ಸನ್ನಿಹಿತರಾಗಿ ಬರುತ್ತಾರೆ. ಪಿತೃ-ಮಾತೃ ಉಲ್ಲೇಖ ಬರುವಾಗಲೆಲ್ಲಾ ಜನಿವಾರವನ್ನು ಅಪಸವ್ಯ ಮಾಡಿರೆನ್ನುತ್ತಾರೆ. ಅದು ’ಪ್ರಾಚೀನವೀಥಿ’. ಬ್ರಾಹ್ಮಣ್ಯದ ಬಹ್ಮಬಂಧಕ್ಕಿಂತಾ ಮುನ್ನಿನ ಅವಸ್ಥೆಯನ್ನೂ ಇದು ಧ್ವನಿಸಬಹುದು! ಹಿರಿಯರನ್ನು ಜ್ಞಾಪಿಸಿಕೊಳ್ಳುವ ವಿಧಿ ಬಹುಶಃ ಚೌಲ, ಮುಂಜಿ ಇತ್ಯಾದಿ ಷೋಡಶ ಸಂಸ್ಕಾರಗಳ ಪರಿಕಲ್ಪನೆಗೂ ಮುಂಚಿನಿಂದಲೇ ಇದ್ದ ವಿಧಿಯೂ ಆಗಿರಲೊಲ್ಲದೇಕೆ?!ಇಲ್ಲಿ ಮೂರು ಎಂಬ ಅಮಂಗಳ ಸಂಖ್ಯೆತಲ್ಲಿ ದರ್ಭೆಯ ತುಮಡುಗಳು ಬಳಕೆಯಾಗುತ್ತವೆ. ಪಿತೃ, ಪಿತಾಮಹ, ಪ್ರಪಿತಾಮಹರುಗಳು ಹೋಗಿಬಿಟ್ಟ ಸಂಕೇತವಾಗಿ ಮುರು ದರ್ಭೆಯ ಚಟ್ಟದಮೇಲೆ ದೊನ್ನೆಗಳನ್ನು ದಬ್ಬಾಕುತ್ತೇವೆ. ’ಇಲ್ಲ, ಅವರು ಸತ್ತಿಲ್ಲ. ಅವರ ವೀರ್ಯ ನಮ್ಮಲ್ಲಿ ಜೀವಂತವಾಗೇ ಇದೆಯಲ್ಲಾ’ ಎಂದು ಉದ್ಧರಿಸಿ, ಚಟ್ಟದ ಬದಲು ’ಸುಖಾಸನ’ (ಉತ್ಥಾನದಲ್ಲಿದ್ದ ಮೂರು ದರ್ಭೆಗಳು) ನೀಡಿ, ಅರ್ಘ್ಯವೆರೆದು, ಮುತ್ತಾತನಿಂದ ತಾತ, ತಾತನಿಂದ ಅಪ್ಪನಿಗೆ ಆ ವೀರ್ಯ ಸಂಕೇತ ಜಲವನ್ನು ವರ್ಗಾಯಿಸಿ ಅದನ್ನು ಪ್ರೊಕ್ಷಿಸಿಕೊಂಡು ಕಣ್ಣಿಗೊತ್ತಿಕೊಳ್ಳುತ್ತೇವೆ. ಇಲ್ಲೆಲ್ಲಾ ಬಳಕೆಯಾಗುವುದು ಅಮಂಗಳದ ಕರಿ ಎಳ್ಳು. ಎಳ್ಳು, ಸಾಸಿವೆಯೆಂಬುದು, ಬಹುಶಃ ಗೋಧಿಗೂ ಹಿಂದಿನಿಂದಲೂ ನಮ್ಮದೆಂಬ ತಲೆಮಾರಿನಲ್ಲಿ ಬಳಕೆಯಲ್ಲಿದ್ದ ಧಾನ್ಯವಾಗಿದ್ದಿರಬಹುದು. ಸವ್ಯದಲ್ಲಿ, ವಿಶ್ವೇದೇವತೆಗಳಿಗೆ ನೀಡುವ ಆಹ್ವಾನ ಮತ್ತು ಮಾಡುವ ಅರ್ಚನೆ ಅಕ್ಕಿಯಲ್ಲಿ. ಆದರೂ ತಿಥಿ ಮಂತ್ರದಲ್ಲಿ ಇದನ್ನು ಯವ ಅಂದರೆ ಗೋಧಿ ಎಂದೇ ಸಂಭಾವಿಸಲಾಗುತ್ತದೆ. ತಿಥಿ, ತದ್ದಿನ, ವೈದಿಕ ಎಂದೆಲ್ಲಾ ಕರೆಯಲಾಗುವ ಶ್ರಾದ್ಧ ಕ್ರಿಯೆ ಬಹುಶಃ ವೇದಗಳಿಗಿಂತಲೂ ಹಿಂದಿನಿಂದ ಇದ್ದ ಪ್ರಕ್ರಿಯೆಯಾಗಿದ್ದು , ನಂತರ ವೈದಿಕ ಶಿಸ್ತು-ಸಂಹಿತೆಗಳಿಗದನ್ನು ಬದ್ಧಗೊಳಿಸಲಾಯಿತೇನೋ? ’ಶ್ರಾದ್ಧ’ವೆನ್ನುವುದು ವಿಪರ್ಯಾಸಕರ ನಾಮಧೇಯ. ಮಗು ನಾಳಿನ ಪರೀಕ್ಷೆಗೆ ಅತ್ಯಂತ ’ಶ್ರದ್ಧೆ’ಯಿಂದ ಅಭ್ಯಾಸ ಮಾಡುವುದೂ, ಮಗಳನ್ನು ಗಂಡನಿಗೆ ಶ್ರದ್ಧಾಸಕ್ತಿಗಳಿಂದ ಧಾರೆ ಎರೆದುಕೊಡುವುದೂ, ಈ ಅರ್ಥದಲ್ಲಿ "ಶ್ರಾದ್ಧ"ವೇ ಆಗಿಹೋಗುತ್ತದೆ !
Submitted by makara Fri, 02/15/2013 - 19:00

ಅವರಿಂದ ನಮಗಾದ ಉಪಕಾರಗಳನ್ನು ಸ್ಮರಿಸುವುದು; ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಯಾವುದಾದರೂ ಸತ್ಕಾರ್ಯ ಮಾಡುವುದು ತಪ್ಪಲ್ಲ. ಆದರೆ ಕರ್ಮಗತಿಯನ್ನು ಪರಿವರ್ತಿಸಬಲ್ಲೆವೆಂದು ಮಾತ್ರ ಕನಸಿನಲ್ಲಿಯೂ ಭಾವಿಸಬಾರದು...+1 ಮೃತರ ಶ್ರಾದ್ಧ ಒಂದು ಅರ್ಥರಹಿತವಾದ ಆಡಂಬರ ಕ್ರಿಯೆ ಮಾತ್ರ. ..ನಿಜ; ಆದರೆ ಆಧುನಿಕರು ಆಚರಿಸುವ ವ್ಯರ್ಥವಾದ ಬರ್ತ್‌ಡೇ ಪಾರ್ಟಿಗಳು ಆನಿವರ್ಸರಿಗಳಿಗಿಂತ ತಂದೆ-ತಾಯಿಯಗಳ ಹೆಸರಿನಲ್ಲಿ ಯೋಗ್ಯ ರೀತಿಯಲ್ಲಿ ಒಂದಷ್ಟು ಖರ್ಚು ಮಾಡುವುದು ಒಳ್ಳೆಯದಲ್ಲವೇ? ಇವೆಲ್ಲದರ ಹೊರತಾಗಿ, ನಿಜವಾದ ಅರ್ಥದಲ್ಲಿ ಶ್ರಾದ್ಧವನ್ನು ಆಚರಿಸಬೇಕೆಂಬ ನಿಮ್ಮ ಆಶಯಕ್ಕೆ ನನ್ನ ಸಂಪೂರ್ಣ ಸಹಮತವಿದೆ. ಒಳ್ಳೆಯ ಲೇಖನಕ್ಕೆ ಧನ್ಯವಾದಗಳು ಕವಿಗಳೆ.
Submitted by kavinagaraj Sat, 02/16/2013 - 12:33

In reply to by makara

ಧನ್ಯವಾದಗಳು, ಮಕರರವರೇ. ನನ್ನ ತಂದೆಯವರ ವಾರ್ಷಿಕ ತಿಥಿಯಂದು ಸಾಂಪ್ರದಾಯಿಕ ಕರ್ಮದ ಜೊತೆಗೆ ಹಾಸನದ ವೃದ್ಧಾಶ್ರಮದ ನಿವಾಸಿಗಳಿಗೆ ಒಂದು ದಿನದ ಊಟದ ವ್ಯವಸ್ಥೆ ಸಹ ಮಾಡಿದ್ದು ನನಗೆ ಸಂತೋಷ ಕೊಟ್ಟಿತ್ತು.
Submitted by bhalle Sat, 02/16/2013 - 08:26

ಸೊಗಸಾದ ವಿಚಾರಯುಕ್ತ ಬರಹವಿದು ... ನನಗೆ ಎರಡು ವಿಷಯಗಳು ತಲೆಗೆ ಬಂದವು ೧. ಎರಡು ವರ್ಷಗಳ ಹಿಂದೆ ಬರೆದ, ಇನ್ನೂ ಹಂಚಿಕೊಳ್ಳದ ನನ್ನ ಒಂದು ಕಥೆ. ಇದೇ ವಿಚಾರದ ಸಮಾಜಿಕ ಕಥೆ. ಇನ್ನೆರಡು ದಿನಗಳಲ್ಲಿ ಹಂಚಿಕೊಳ್ಳುತ್ತೇನೆ. ೨. ಶ್ರಾದ್ದ / ತಿಥಿ / ಪಿಂಡದ ವಿಚಾರವಾಗಿ ಒಂದು ಹಾಸ್ಯ ಬರಹವೂ ತಲೆಗೆ ಬಂತು .. ಇನ್ನೂ ಅಕ್ಷರ ರೂಪಕ್ಕೆ ತರಬೇಕು.