ಮತ್ತೆ ಮತ್ತೆ ಒಲವು

ಮತ್ತೆ ಮತ್ತೆ ಒಲವು

ಕವನ

 

 
 
 
ಪರಿಚಯವಾಗಿ ವರ್ಷಗಳಾದ ಮೇಲೆ
ಯೌವನದ ಮುನ್ನುಡಿಯಲ್ಲಿ ಭಾವ
ನನ್ನೆದೆಯ ಕದವನ್ನು ತಟ್ಟುವಾಗ
ಬೆಳಕಿಗೆ ಬಂದಿರಲು ಹಗುರವಾಗಿ
ವ್ಯಕ್ತವಾಗುವ ಕಳವಳವೆ ಒಲವೆ ??
 
ಮತ್ತದೆ ದಿನಚರಿಯ ಭಾಗವಾಗಿ
ಕಳೆದುಹೋದರು ಕಾಯಕದೊಳಗೆ
ಹೃದಯ ನಲುಮೆಯ ಹೊಸ್ತಿಲಲ್ಲಿ
ಬದುಕೆಂಬ ಜಾತ್ರೆಯೊಳಗೆ ಬಿಡದೆ
ಅರಸುವುದು ನಿನಗೇನಾ ಒಲವೆ ?
 
ಒಂಟಿತನದ ಸಂಗ ಅಸಹನೀಯ
ಅಂತರಂಗದ ಅರಮನೆಯೊಳಗೆ
ಮೊಳಗಬೇಕು ಆವರಣದಿ ಗಟ್ಟಿಮೇಳ
ವರನಂತೆ ಸಿಂಗರಿಸಿ ಕಾಯುತಿರುವೆ 
ವಧುವಾಗಿ ಬರುವೆಯಾ ಒಲವೆ ?
 
ತವಕವಿದೆ ಸಂಭ್ರಮದ ಆಚರಣೆಗೆ
ಕುತೂಹಲದ ಭವಿಷ್ಯ ಎದುರಲ್ಲಿ
ಪ್ರಶ್ನಾರ್ಥಕ ನೋಟವಿರಲಿ ದೂರ
ಗಮ್ಯದೆಡೆಗಿನ ಹಾದಿಯಿದು ದಿಟವೆ 
ನಂಬಿ ಪಯಣಿಸುವೆಯಾ ಒಲವೆ ?
 
ಪ್ರಣಯಗೀತೆಯೇನೊ ದಾಖಲು
ಕಾಗದದ ಖಾಲಿತನವ ತುಂಬುತ
ಸಾಮಾನ್ಯನ ಸಾಹಿತ್ಯವಿದು ನೇರ
ಸೂಕ್ಷ್ಮವಾಗಿ ಗಮನಿಸಿ ಒಮ್ಮೆ
ಸಮ್ಮತಿ ಮಿಡಿಯುವೆಯಾ ಒಲವೆ ?
 
 
  - ಪ್ರಮೋದ್ ಶ್ರೀನಿವಾಸ