ಶೋಷಣೆ
1979'ಮೇ ತಿಂಗಳಲ್ಲಿ ನಾನು ನನ್ನ ಅಪ್ಪನೊಂದಿಗೆ ಉತ್ತರಭಾರತ ಪ್ರವಾಸಕ್ಕೆ ಹೋಗಿದ್ದೆನು. ಹ್ಯ್ದೆದರಾಬಾದನಿಂದ ಹೊರಟ ನಮ್ಮ ಬಸ್ ರಾಜಮಹೇಂದ್ರಿ ಸಮೀಪಿಸುತ್ತಿತ್ತು. ಬಿಸಿಲು ಬಹಳ ವಿತ್ತು. ನಾಲ್ಕಾರು ಮರಗಳು ಇರುವ ತಂಪು ಸ್ಥಳದಲ್ಲಿ ಬಸ್ ನಿಲ್ಲಿಸಿದರು. ಅಲ್ಲಿದ್ದ ಸ್ಥಳೀಯ ಜನರು ಮಜ್ಜಿಗೆ ಮಜ್ಜಿಗೆ ಎನ್ನುತ್ತಾ ಬಸ್ ಬಳಿಗೆ ಬಂದರು. ೧೦ಪೈಸೆಗೆ ಒಂದು ಗ್ಲಾಸ್ ಎಂಟು ಆಣೆಗೆ ೬ ಎಂದಾಗ ನಾನು ಒಂದು ರೂಪಾಯಿ ಕೊಟ್ಟು ಹನ್ನೆರೆಡು ಗ್ಲಾಸ್ ಮಜ್ಜಿಗೆ ನನ್ನಲ್ಲಿದ್ದ ಪಾತ್ರೆಗೆ ಹಾಕಿಸಿಕೊಂಡೆನು. ಬಿಸಿಲಿನಿಂದ ರಿಲೀಫ ಪಡೆಯಲೆಂದು ಸಾಕಷ್ಟು ಪ್ರಯಾಣಿಕರು ಮಜ್ಜಿಗೆ ಕೊಂಡರು. ಕೆಲವರು ತಮ್ಮಲ್ಲಿದ್ದ ಪಾತ್ರೆಗೆ ಹಾಕಿಸಿಕೊಂಡರೆ ಕೆಲವರು ಗ್ಲಾಸ್ ಗಳನ್ನು ಇಸಿದುಕೊಂಡು ಮಜ್ಜಿಗೆ ಕುಡಿದರು. ಆಯ್ತಾ ನಿಮ್ಮದೆಲ್ಲಾ ಎನ್ನುತ್ತಾ ಡ್ರೈವರ್ ಬಸ್ ಸ್ಟಾರ್ಟ್ ಮಾಡಿದನು. ಕೂಡಲೇ ಸ್ಥಳೀಯರು ಗ್ಲಾಸಗಳನ್ನು ಹಿಂದೆ ಪಡೆಯಲು ದುಡ್ಡು ಪಡೆಯಲು ಅವಸರಿಸಿದರು. ನನ್ನ ಹಿಂದಿನ ಸೀಟ್ನಲ್ಲಿ ಕುಳಿತ ಪ್ರಯಾಣಿಕನು ಅವರಿಗೆ ದುಡ್ಡು ಕೊಡುತ್ತ ನಡೀರಿ ಹೋಗೋಣ ಎಂದಾಗ ಡ್ರೈವರ್ ಬಸ್ ನ ವೇಗ ಹೆಚ್ಚಿಸಿದ. ಆಗ ನನ್ನ ಪಕ್ಕದಲ್ಲಿ ಬಸ್ ಹೊರಗೆ ಒಬ್ಬ ಹುಡುಗ ಏನನ್ನೋ ಹೇಳುತ್ತಾ ಓಡೋಡಿ ಬರುತ್ತಿದ್ದ. ಅವನನ್ನು ಕಂಡ ನಾನು ಬಹುಶಹ ಅವನಿಗೆ ಅವನ ದುದ್ದು/ಗ್ಲಾಸ್ ಸಿಕ್ಕಿರಲಿಕ್ಕಿಲ್ಲಾ ಎಂದುಕೊಂಡೆನು. ಹಾಗೆಯೇ ಡ್ರೈವರ್ ಗೆ ಹೇಳುತ್ತಾ ಬಸ್ ನಿಲ್ಲಿಸಲು ಕೇಳಿ ಕೊಂಡೆನು. ಆದರೆ ನನ್ನ ಹಿಂದೆ ಕುಳಿತ ಪ್ರಯಾಣಿಕನು ನಡ್ರಿ ನಡ್ರಿ ಅವರದು ಗೋಳು ಹಂಗ ಇರೋದ ಅಂದಾಗ ಡ್ರೈವರ್ ಬಸ್ ನ ವೇಗ ಹೆಚ್ಚಿಸಿದ್ದು ಕಂಡು ನನಗೆ ಪಿಚ್ಚೆನಿಸಿತು. ನಾನು ಹೊರಗೆ ನೋಡುತ್ತಲೇ ಇದ್ದೆ . ಆ ಹುಡುಗ ಸಾಕಷ್ಟು ದೂರ ಬಂದು ಬಳಲಿ ನಿಂತನು.
ಬಸ್ ನ್ನು ಒಂದು ಕ್ಷಣ ನಿಲ್ಲಿಸಿದ್ದರೆ ಡ್ರೈವರ್ ಗೇನು ಹಾನಿಯಾಗುತ್ತಿತ್ತು ಎಂದು ನಾನು ಸ್ವಲ್ಪ ಜೋರಾಗಿಯೇ ಗೊಣಗಿಕೊಂಡೆನೇನೋ ನನ್ನ ಹಿಂದೆ ಕುಳಿತಿದ್ದ ಪ್ರಯಾಣಿಕ ಮಾತನಾಡಿದನು. ಬಿಸಿಲಲ್ಲಿ ನೀರು ಮಜ್ಜಿಗೆ ಮಾರಿ ನಮ್ಮಂಥ ಅವಶ್ಯಕತೆ ಇರುವ ಪ್ರಯಾಣಿಕರನ್ನು ಶೋಷಿಸುತ್ತಾರೆ. ನೋಡಿ ಹತ್ತು ಪೈಸೆಗೆ ಒಂದು ಗ್ಲಾಸ್ ಅಂತೆ.ಇದು ಶೋಷಣೆ ಅಲ್ಲದೆ ಮತ್ತೇನು? ಅದಕ್ಕೆ ನಾನವನ ಎರಡು ಗ್ಲಾಸ್ ಗಳನ್ನು ನನ್ನಲ್ಲೇ ಉಳಿಸಿಕೊಂಡೆನು. ಹೀಗೆಂದಾಗ ನನ್ನಲ್ಲಿ ನಾನು ವಿಚಾರ ಮಾಡತೊಡಗಿದೆನು .
ಶೋಷಣೆಗೆ ಒಳಗಾದವರು ಯಾರು? ೧೦ಪೈಸೆಗೆ ಗ್ಲಾಸ್ ಮಜ್ಜಿಗೆ ಮಾರಿದ ಆ ಹುಡುಗನೆ? ತನ್ನದಲ್ಲದ ಎರಡು ಗ್ಲಾಸ್ ಗಳನ್ನು ಉಳಿಸಿಕೊಂಡ ಪ್ರಯಾಣಿಕನೆ? ಬಿಸಿಲಲ್ಲಿ ಬಸ್ ಹಿಂದೆ ಓಡೋಡಿ ಬರುತ್ತಿದ್ದ ಆ ಹುಡುಗನು ನನ್ನ ಸ್ಮೃತಿ ಯಿಂದ ಹೋಗಿಲ್ಲಾ ಹಾಗೂ ಶೋಷಿತರಾರು ಎಂದು ನನಗಿನ್ನೂ ತಿಳಿದಿಲ್ಲ.
Comments
ತಮ್ಮ ತಪ್ಪನ್ನು ಇತರರ ಮೇಲೆ