"ಭಾರತೀಯ ಭಾಷಾ ಗಣಕ ಪಿತಾಮಹ ಶ್ರೀ ಕೆ.ಪಿ. ರಾವ್ ಅವರಿಗೆ ನಾಡೋಜ ಪ್ರಶಸ್ತಿ ಘೋಷಣೆ"

"ಭಾರತೀಯ ಭಾಷಾ ಗಣಕ ಪಿತಾಮಹ ಶ್ರೀ ಕೆ.ಪಿ. ರಾವ್ ಅವರಿಗೆ ನಾಡೋಜ ಪ್ರಶಸ್ತಿ ಘೋಷಣೆ"

ಹಂಪೆ ವಿಶ್ವವಿದ್ಯಾಲಯದಿಂದ ನೀಡಲಾಗುವ ಪ್ರತಿಷ್ಠಿತ ನಾಡೋಜ ಪ್ರಶಸ್ತಿಗೆ ಭಾರತೀಯ ಭಾಷಾ ಗಣಕಲೋಕದ ಪಿತಾಮಹ -ಕೆ.ಪಿ.ರಾವ್ ಅವರ ಹೆಸರು ಘೋಷಣೆಯಾಗಿದೆ. ಉತ್ತಮ ಸಾಧನೆಗಳನ್ನ ಮಾಡಿ ಸಮಾಜಕ್ಕೆ ಆದರ್ಶಪ್ರಾಯರಾಗಿರುವ ವ್ಯಕ್ತಿಗಳಲ್ಲಿ ಶ್ರೀ ಕೆ.ಪಿ. ರಾವ್ ಸಹ ಒಬ್ಬರು. ಭಾರತೀಯ ಭಾಷೆಗಳ ಲಿಪಿಯನ್ನು ಕಂಪ್ಯೂಟರ್ ಬಳಸಿ ಪಡಿಮೂಡಿಸುವ ತಂತ್ರಜ್ಞಾನಕ್ಕೆ ತಮ್ಮದೇ ರೀತಿಯಲ್ಲಿ ಉತ್ತಮ ಕೊಡುಗೆಯನ್ನು ಇವರು ನೀಡಿದ್ದಾರೆ.

ಭಾರತದಲ್ಲಿ ಆಧುನಿಕ ಮುದ್ರಣ ತಂತ್ರಜ್ಞಾನದ ಅನುಷ್ಠಾನ, ಭಾರತೀಯ ಭಾಷಾ ಲಿಪಿಗಳ ಫೋಟೋಕಂಪೋಸಿಂಗ್ ಮತ್ತು ಸುಂದರ ಮುದ್ರಣದ ಕುರಿತು ಯಾರೂ ಸಹ ಹೆಚ್ಚು ಆಲೋಚನೆಯನ್ನೇ ಮಾಡಿರದ ಅಂದಿನ ಸಂದರ್ಭದಲ್ಲಿ ವಿನೂತನ ಮಾರ್ಗಗಳನ್ನು ಅನ್ವೇಷಿಸಿದ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹತ್ತು ಹಲವು ಹೊಸ ಹೊಸ ಪ್ರಯೋಗಗಳನ್ನು ಕೈಗೊಂಡು ಅದರಲ್ಲಿ ಯಶಸ್ಸನ್ನು ಕಂಡವರಲ್ಲಿ ಕೆ.ಪಿ ರಾವ್ ಅವರು ಮೊದಲಿಗರು. ಅಲ್ಲದೆ ಕನ್ನಡದ ಕಂಪ್ಯೂಟರ್ ಕ್ಷೇತ್ರದ ಬೆಳವಣಿಗೆಯಲ್ಲಿನ  ಹಲವು ಪ್ರಥಮಗಳಿಗೆ ಇವರು ಕಾರಣರು. ಅಂದಿನ ಸೀಮಿತ ತಂತ್ರಜ್ಞಾನವನ್ನು ಬಳಸಿ ೧೯೮೮ರಲ್ಲಿಯೇ ಕನ್ನಡಕ್ಕೆ ಪ್ರಪ್ರಥಮವಾಗಿ ಪರ್ಸನಲ್ ಕಂಪ್ಯೂಟರ್ಗಳಲ್ಲಿ ಬಳಸಬಹುದಾದ “ಸೇಡಿಯಾಪು” ಎಂಬ ಹೆಸರಿನ ತಂತ್ರಾಂಶವನ್ನು (ಡಾಸ್ ಎಡಿಟರ್) ಸಿದ್ಧಪಡಿಸಿ ಕನ್ನಡಿಗರೆಲ್ಲರ ಬಳಕೆಗೆ ಉಚಿತವಾಗಿ ನೀಡಿದರು. “ಸೇಡಿಯಾಪು” ತಂತ್ರಾಂಶವು ಕನ್ನಡ ಭಾಷೆಯಲ್ಲಿ ಪತ್ರಗಳು ಮತ್ತು ಲೇಖನಗಳನ್ನು ಕಂಪ್ಯೂಟರ್ ಬಳಸಿ ಸಿದ್ಧಪಡಿಸಲು ಬಳಕೆಗೆ ಬಂದ ಪ್ರಥಮ ಡಾಸ್ ಆಧಾರಿತ ಪದಸಂಸ್ಕಾರಕ (ವರ್ಡ್ ಪ್ರೋಸೆಸರ್). ಇವರು ಕಾಲಕಾಲಕ್ಕೆ ಲಭ್ಯವಿದ್ದ ತಂತ್ರಜ್ಞಾನಗಳನ್ನು ಬಳಸಿ ಸುಂದರವಾದ ಕಂಪ್ಯೂಟರ್ ಫಾಂಟ್ಗಳನ್ನು ನಿರ್ಮಿಸಿದರು. ಅಂತಹ ಕನ್ನಡ ಲಿಪಿಯ ಫಾಂಟ್ನ್ನು ಸುಲಭವಾಗಿ ಕಂಪ್ಯೂಟರ್ನಲ್ಲಿ ಮೂಡಿಸಲು ಸರಳ ಹಾಗೂ ತರ್ಕಬದ್ಧವಾದ ಕೀಲಿಮಣೆ ವಿನ್ಯಾಸವನ್ನು ರಚಿಸಿದ ಕೀರ್ತಿ ಇವರದ್ದು. ಇದೇ ಕೀಲಿಮಣೆ ವಿನ್ಯಾಸ ಕನ್ನಡದ ಅಧಿಕೃತ ವಿನ್ಯಾಸ ಎಂದು ಇಂದು ಮಾನ್ಯತೆಯನ್ನು ಪಡೆದಿದೆ.



ಹಿಂದೆ ಕನ್ನಡ ಲಿಪಿ ಮೂಡಿಕೆಗಾಗಿ ವಿವಿಧ ರೀತಿಯ ವಿವಿಧ ವಿನ್ಯಾಸದ ಬೆರಳಚ್ಚು ಯಂತ್ರದ ಮಾದರಿಗಳೇ ಬಳಕೆಯಲ್ಲಿತ್ತು. ಇವುಗಳನ್ನು ಬಳಸಿ ಲಿಪಿಮೂಡಿಕೆ ಕ್ರಮಗಳನ್ನು ಕಲಿಯುವುದು ಕಷ್ಟಕರವಾಗಿತ್ತು. ಈಗಿರುವ ಇಂಗ್ಲಿಷ್ ಕೀಲಿಮಣೆಯ K ಅನ್ನು ಒತ್ತಿದರೆ ಕನ್ನಡದ 'ಕ' ಮೂಡುವಂತೆ, K ಮತ್ತು a ಅನ್ನು ಕ್ರಮವಾಗಿ ಬೆರಳಚ್ಚಿಸಿದರೆ 'ಕಾ' ಮೂಡುವಂತೆ, K ಮತ್ತು i ಒತ್ತಿದರೆ 'ಕಿ' ಮೂಡುವಂತೆ ಹೊಸ ತರ್ಕವನ್ನು ಬಳಸಿ ಕನ್ನಡಕ್ಕೆ ಹೊಸ ಕೀಲಿಮಣೆ ವಿನ್ಯಾಸವನ್ನೇ ಕೆ.ಪಿ ರಾವ್ರವರು ರೂಪಿಸಿದರು. ಈಗಿರುವ ೨೬ ಇಂಗ್ಲಿಷ್ ಕೀಲಿಗಳನ್ನೇ ಬಳಸಿ ಕನ್ನಡದ ಎಲ್ಲಾ ಒತ್ತಕ್ಷರಗಳನ್ನು ಹಾಗೂ ಗುಣಿತಾಕ್ಷರಗಳನ್ನು ಮೂಡಿಸುವ ಹೊಸ ಕ್ರಮವನ್ನು ಅನ್ವೇಷಿಸಿದರು. ಈ ವಿನ್ಯಾಸವು ಧ್ವನಿ ಆಧಾರಿತವಾಗಿರುವುದರಿಂದ ಇರುವ ಇಂಗ್ಲಿಷ್‌ನ ಕೀಲಿಮಣೆಯನ್ನೇ ಬಳಸಿ ಕನ್ನಡದ ವೇಗದ ಬೆರಳಚ್ಚು ಕಲಿಯುವುದು ಸುಲಭ. ಈ ವಿನ್ಯಾಸವು ಇತರ ಭಾರತೀಯ ಭಾಷೆಗಳ ಕಂಪ್ಯೂಟರ್ ತಂತ್ರಾಂಶಗಳಲ್ಲಿಯೂ ಅಳವಡಿಕೆಯಾಗಿ ಜನಪ್ರಿಯವಾಗಿದೆ.
ಭಾರತೀಯ ಭಾಷಾ  ಗಣಕ ಕ್ಷೇತ್ರಕ್ಕೆ ಗಣನೀಯ ಸೇವೆ ಸಲ್ಲಿಸಿದ ಕೆ.ಪಿ.ರಾವ್ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಘೋಷಣೆಯಾಗಿರುವುದು ಕನ್ನಡಿಗರಾದ ನಮಗೆಲ್ಲರಿಗೂ ಸಂತಸದ ವಿಚಾರ. ಸಂಪದಿಗರೆಲ್ಲರೂ ಶುಭ ಹಾರೈಸೋಣ.

Comments

Submitted by ಗಣೇಶ Wed, 02/13/2013 - 23:23

In reply to by ಗಣೇಶ

ಪ್ರಶಸ್ತಿ ಸಿಕ್ಕಿದ ವಿವರ- http://vbnewsonline… ಹಿಂದೆ ಒಮ್ಮೆ ಕೆ.ಪಿ.ರಾವ್ ಅವರ ಸಂದರ್ಶನ ಪ್ರಕಟವಾದ ಕೊಂಡಿ- http://kannada.yaho… (ಮೇಲಿನ ಪ್ರತಿಕ್ರಿಯೆಯಲ್ಲಿ ತಪ್ಪಾಗಿತ್ತು)
Submitted by ಕೆ.ಎಂ.ವಿಶ್ವನಾಥ Thu, 02/14/2013 - 13:27

In reply to by ಗಣೇಶ

ಅವರ ಸಾಧನೆಯ ಹಾದಿ ನೋಡಿ ಪ್ರಶಸ್ತಿ ಸಿಕ್ಕಿದೆ ಅಭಿನಂದನೆಗಳು ಒಂದು ವಿನಂತಿ ಅವರನ್ನು ಹಿಂಬಾಲಿಸುವ ಯುವಕರಿಗೆ ಬೆಳೆಯು ದಾರಿ ತೋರಿಸಲಿ ಸಹಕರಿಸಲಿ
Submitted by pavanbenkal Sat, 02/16/2013 - 01:08

ಇಂಥ ಮಹನೀಯರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವ ಹಂಪಿ ವಿಶ್ವವಿದ್ಯಾನಿಲಯ ಅಭಿನಂದನಾರ್ಹ. ಶ್ರೀಯುತ ಕೆ.ಪಿ.ರಾವ್ ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು.