ಇಲ್ಲಿರುವ ಚೌಕಾಸಿ ಅಲ್ಲಿಲ್ಲ ಏಕೆ?

ಇಲ್ಲಿರುವ ಚೌಕಾಸಿ ಅಲ್ಲಿಲ್ಲ ಏಕೆ?

ಗಂಡಸರು ತಮಗೆ ಬೇಕಾದ ವಸ್ತುಗಳನ್ನು ಹೆಚ್ಚಿನ ಚೌಕಾಸಿ ಮಾಡದೆ ಸೂಕ್ತವಾದದ್ದಕ್ಕಿಂತ ಸ್ವಲ್ಪ ಹೆಚ್ಚಾದ ಬೆಲೆಯನ್ನೇ ಕೊಟ್ಟು ಖರೀದಿ ಮಾಡುತ್ತಾರೆ. ಆದರೆ, ಹೆಂಗಸರು ಸುದೀರ್ಘವಾದ ಚೌಕಾಸಿ ಅಥವಾ ಚರ್ಚೆ ಮಾಡಿ ಸೂಕ್ತವಾದದ್ದಕ್ಕಿಂತ ಸ್ವಲ್ಪ ಕಡಿಮೆ ಬೆಲೆಕೊಟ್ಟು, ಆದರೆ, ತಮಗೆ ಅಗತ್ಯವೇ ಇಲ್ಲದ, ವಸ್ತುಗಳನ್ನು ಖರೀದಿಸುತ್ತಾರೆ ಅನ್ನುವುದು ಮೊಬೈಲ್‌ಗಳ ಮೂಲಕ ಚಾಲ್ತಿಯಲ್ಲಿರುವ ಒಂದು ನಗೆಹನಿ (ಎಸ್ಸೆಮ್ಮೆಸ್ ಪೀಜೆ).


ಅದರ ಸತ್ಯಾಸತ್ಯತೆಯ ಬಗ್ಗೆ ಸದ್ಯಕ್ಕೆ ಯಾರೂ ತಲೆಕೆಡಿಸಿಕೊಳ್ಳ ಬೇಕಾಗಿಲ್ಲ. ಏಕೆಂದರೆ, ಅದು ನನ್ನ ಈ ಲೇಖನದ ವಿಷಯವೇ ಅಲ್ಲ.


ತರಕಾರಿ ಕೊಂಡುಕೊಳ್ಳುವಾಗ, ಬಟ್ಟೆ ಖರೀದಿಸುವಾಗ, ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವಾಗ, ಹೀಗೇ ಎಲ್ಲಾ ಕಡೆಗಳಲ್ಲಿ ಜನರು ಚೌಕಾಸಿ ಮಾಡುವುದನ್ನು ನಾನು ಕಂಡಿದ್ದೇನೆ. ಒಮ್ಮೊಮ್ಮೆ ಆ ಚೌಕಾಸಿಯ ವಾದಗಳಿಂದ ಕಿರಿಕಿರಿಗೊಂಡಿದ್ದೇನೆ. ಇನ್ನು ಕೆಲವೊಮ್ಮೆ, ಕೆಲವರ ಆ ವಾದಗಳ ಧಾಟಿಯನ್ನು ಮೆಚ್ಚಿದ್ದೇನೆ. ಚೌಕಾಸಿ ಮಾಡುವ ಶೈಲಿಯನ್ನು ಕಲಿತಿದ್ದೇನೆ. ಕೆಲವೊಮ್ಮೆ ನಾನು ಕೂಡ, ಹೀಗೆ ಕಲಿತ ಆ ವಿದ್ಯೆಯ ಪ್ರಯೋಗವನ್ನೂ ಮಾಡಿದ್ದೇನೆ.


ನಾನು ಎಷ್ಟೇ ಚೌಕಾಸಿ ಮಾಡಿ ಒಂದು ವಸ್ತುವನ್ನು ಖರೀದಿ ಮಾಡಿದ್ದರೂ, ನನ್ನ ಮನೆಯ ಇನ್ನೊರ್ವ ಸದಸ್ಯ, ನನ್ನ ಪಕ್ಕದ ಮನೆಯವನು, ಓರ್ವ ಸಹೋದ್ಯೋಗಿ ಅಥವಾ ಇನ್ನೊರ್ವ ಗೆಳೆಯ ಅದೇ ವಸ್ತುವನ್ನು ನಾನು ಕೊಟ್ಟ ಬೆಲೆಗಿಂತ ಕಡೆಮೆ ಬೆಲೆಗೆ ಖರೀದಿ ಮಾಡಿದ್ದೇನೆ ಅಂತ ಕೊಚ್ಚಿ ಕೊಂಡದ್ದಿದೆ. ಅಥವಾ ನನಗೆ ಚೌಕಾಸಿ ಮಾಡಲು ಬರುವುದಿಲ್ಲ, ನಾನು ಕೊಟ್ಟ ಬೆಲೆ ತುಂಬಾ ಜಾಸ್ತಿ ಆಯ್ತು ಅಂತ ಹೀಯಾಳಿಸಿದ್ದಿದೆ. ಆಗ ನಾನು ನನ್ನಲ್ಲಿರುವ ಚೌಕಾಸೀಶಕ್ತಿಯ ಕೊರತೆಯ ಬಗ್ಗೆ ಒಳಗೊಳಗೇ ನೊಂದು ಕೊಂಡದ್ದಿದೆ. ನನಗೆ ಚೌಕಾಸೀ ಶಕ್ತಿಯನ್ನು ಕರುಣಿಸುವಾಗ ಏಕೆ ಚೌಕಾಸಿ ಮಾಡಿದೆ ಅಂತ ದೇವರಿಗೆ ಮೊರೆಯಿಟ್ಟದ್ದೂ ಇದೆ. ಈ ತೆರನಾದ ಅನುಭವ ನಿಮಗೂ ಆಗಿರಬಹುದು. ನೀವೂ ನನ್ನಂತೆ ನೊಂದು ಕೊಂಡಿರಬಹುದು.


ಎಲ್ಲಾ ವ್ಯಾಪಾರಿಗಳಿಗೂ ತಮ್ಮಲ್ಲಿಗೆ ಬರುವ ಪ್ರತಿಯೊಬ್ಬ ಗಿರಾಕಿಯೂ ಚೌಕಾಸಿ ಮಾಡಿಯೇ ಮಾಡುತ್ತಾನೆ ಅನ್ನುವುದು ಮನದಟ್ಟವಾಗಿರುತ್ತದೆ. ಹಾಗಾಗಿಯೇ, ವಸ್ತುವಿನ ಬೆಲೆಯನ್ನು ಮೂರು ನಾಲ್ಕು ಪಟ್ಟು ಏರಿಸಿಯೇ ಮಾರಾಟಕ್ಕೆ ಇಟ್ಟಿರುತ್ತಾರೆ. ಇತ್ತ ಕೆಲ ಗ್ರಾಹಕರು ಅದನ್ನು ಅರ್ಧದಷ್ಟಕ್ಕೆ ಇಳಿಸಿ ಶೇಕಡಾ ಐವತ್ತು ಇಳಿಸಿದೆ ಎಂಬ ಸಂತಸದಲ್ಲಿ ಹೋಗಬಹುದು. ಇನ್ನು ಕೆಲ ಘಾಟಿ ಗ್ರಾಹಕರು ತಮ್ಮ ಚೌಕಾಸೀ ಕುಶಲತೆಯಿಂದ ಅದರ ನಿಜವಾದ ಮಾರಾಟ ಬೆಲೆಗೆ ಇಳಿಸುವಲ್ಲಿ ಯಶಸ್ವಿಯಾಗಬಹುದು.


ಒಟ್ಟಾರೆ ನೋಡಿದರೆ ಎಲ್ಲಾ ಗ್ರಾಹಕರಿಗೂ ಚೌಕಾಸಿ ಮಾಡಿ ಕಡಿಮೆ ಬೆಲೆಗೆ ಖರೀದಿ ಮಾಡಿದೆವೆಂಬ ನೆಮ್ಮದಿ ಇದ್ದರೆ, ವ್ಯಾಪಾರಿಗಳು ತಾವು ನಿಗದಿ ಪಡಿಸಿದ ಮಾರಾಟ ಬೆಲೆಗಳಿಗಿಂತ ಕಡಿಮೆ ಬೆಲೆಗೆ ಮಾರಾಟವಾಗಿಲ್ಲ, ತಮಗೆ ನಷ್ಟವೇನೂ ಆಗಿಲ್ಲವಲ್ಲ ಎಂಬ ಸಂತಸದಲ್ಲಿರುತ್ತಾರೆ.


ಎಲ್ಲಾ ಅಂಗಡಿಗಳಲ್ಲಿ, ಎಲ್ಲಾ ವಸ್ತುಗಳ ಖರೀದಿಯಲ್ಲಿ ಚೌಕಾಸಿ ಅಥವಾ ಚರ್ಚೆ ನಡೆಯುತ್ತದೆ. ಕಡಿತಗಳು, ಜೊತೆಗೆ ಉಚಿತ ಕೊಡುಗೆಗಳೂ ಇರುತ್ತವೆ. ಔಷಧಿ ಅಂಗಡಿಗಳಲ್ಲೂ ಚೌಕಾಸಿ ಮಾಡುವವರನ್ನು ಕಂಡಿದ್ದೇನೆ. ಊಟದ ಹೋಟೇಲುಗಳಲ್ಲೂ ಈಗೀಗ ಚೌಕಾಸಿ ನಡೆಯುತ್ತದೆ. ನಾವು ೧೫ ಜನ ಬರುತ್ತಿದ್ದೇವೆ, ನಿಮ್ಮ ಬಫೆ ಊಟದ ಬೆಲೆಯನ್ನು ಪ್ರತಿ ತಲೆಗೆ ಮುನ್ನೂರರಿಂದ ಇನ್ನೊರೈವತ್ತಕ್ಕೆ ಇಳಿಸಿ, ಅಂತ ದುಂಬಾಲು ಬಿದ್ದು, ಅದರಲ್ಲಿ ಸಫಲರಾಗುವವರೂ ಇದ್ದಾರೆ.


ಆದರೆ, ಜನರು ಯಾವುದೇ ರೀತಿಯ ಚೌಕಾಸಿ ಮಾಡದೆ, ವ್ಯಾಪಾರಿ ಹೇಳಿದ ಬೆಲೆ ಕೊಟ್ಟು ಖರೀದಿ ಮಾಡುವುದೂ ಇದೆ. ವಸ್ತುಗಳ ಮೇಲೆ ನಮೂದಿಸಲ್ಪಟ್ಟಿರುವ ಗರಿಷ್ಟ ಮಾರಾಟ ಬೆಲೆಗಿಂತಲೂ ಜಾಸ್ತಿ ಬೆಲೆ ಕೊಟ್ಟು ಕೊಂಡುಕೊಳ್ಳುವ ಜನರೂ ಇದ್ದಾರೆ, ಅಂತಹ ವಸ್ತುಗಳೂ ಇವೆ.


ಆ ವಸ್ತುಗಳು ಯಾವುವು ಅಂತ ಕೇಳ್ತೀರಾ? ಅವು ವಿಷೇಷ ವರ್ಗಕ್ಕೆ ಸೇರಿದವುಗಳು. ಅವುಗಳಿಂದ ಮಾನವ ಶರೀರಕ್ಕೆ ಆಗುವ ಲಾಭಕ್ಕಿಂತ ನಷ್ಟವೇ ಜಾಸ್ತಿ. ಅವುಗಳ ಪಟ್ಟಿಯಲ್ಲಿ ಮಾದಕ ಪದಾರ್ಥಗಳು. ತಂಪು ಪಾನೀಯಗಳು, ಬೀಡಿ, ಸಿಗರೇಟು, ಹೊಗೆಸೊಪ್ಪು ಮಿಶ್ರಿತ ಅಡಿಕೆಪುಡಿಯ ಪೊಟ್ಟಣಗಳು ಮತ್ತು ವಿವಿಧ ರೀತಿಯ ಮದ್ಯಗಳು ಸೇರಿವೆ. ಇವುಗಳ ಬೆಲೆಗಳ ಮೇಲೆ ಚೌಕಾಸಿ ನಡೆಯುವುದೇ ಇಲ್ಲ. ಅಲ್ಲಿ ಯಾವುದೇ ರೀತಿಯ ಚರ್ಚೆಯೇ ಇಲ್ಲ. ಸ್ವದೇಶದಲ್ಲಿ ತಯಾರಾಗುವ ವಿದೇಶೀ ಮದ್ಯಗಳ ಬಾಟಲಿಗಳ ಮೇಲೆ ಅವುಗಳ ಗರಿಷ್ಟ ಮಾರಾಟ ಬೆಲೆ ಕೂಡ ನಮೂದಾಗಿರುವುದಿಲ್ಲ. ಅದರರ್ಥ ಅವುಗಳ ಬೆಲೆಗಳ ಮೇಲೆ ನಿಯಂತ್ರಣವೇ ಇಲ್ಲ.


ವಾಹನಗಳಲ್ಲಿ ಮತ್ತು ವಿಹಾರ ಸ್ಥಳಗಳಲ್ಲಿ, ಇಂತಹ ವಸ್ತುಗಳಿಗೆ ಹೆಚ್ಚಿನ ಬೆಲೆ ತೆರುವುದು ಮಾಮೂಲಾಗಿದೆ. ಅದನ್ನು ನಾವು ನೀವೂ ಒಪ್ಪಿಕೊಂಡೂ ಆಗಿದೆ. ಆದರೆ, ನಮ್ಮ ಊರೊಳಗೂ ಈ ರೀತಿ ಅಧಿಕ ಬೆಲೆ ಕೇಳುವ ವ್ಯಾಪಾರಿಗಳನ್ನು ಮತ್ತು ತುಟಿ ಪಿಟಕ್ಕೆನ್ನದೇ ಆ ಬೆಲೆ ತೆತ್ತು ಖರೀದಿ ಮಾಡುವ ಗ್ರಾಹಕರನ್ನು ಕಾಣಬಹುದು. ಇದೇಕೆ ಹೀಗೆ? ಇನ್ನಿತರ ಎಲ್ಲಾ ಕಡೆ ಇರುವ ಈ ಬಾರ್ಗೇನ್ ಸಂಸ್ಕೃತಿ, ಬಾರ್‌ಗಳಲ್ಲಿ ಇರುವುದೇ ಇಲ್ಲ. ಹೀಗ್ಯಾಕೆ?


ನಾವು ನಮ್ಮ ಹವ್ಯಾಸಗಳಿಗೆ, ದುರಭ್ಯಾಸಗಳಿಗೆ ಖರ್ಚು ಮಾಡುವಾಗ ಲೆಕ್ಕಾಚಾರ ಮಾಡುವುದೇ ಇಲ್ಲ. ಆ ಖರ್ಚು ಎಷ್ಟೇ ಆದರೂ, ಮಾಡಿಯೇ ಮಾಡುತ್ತೇವೆ. ಒಂದು ವೇಳೆ ಕೈಯಲ್ಲಿ ಕಾಸಿಲ್ಲದಿದ್ದರೂ, ಸ್ನೇಹಿತರಿಂದ ಸಾಲ ಪಡೆದಾದರೂ ಖರ್ಚು ಮಾಡಿಯೇ ತೀರುತ್ತೀವೆ.


ಮನುಷ್ಯ ತನ್ನ ದುರಭ್ಯಾಸಗಳಿಗೆ ಸಾಲ ಮಾಡಿದಷ್ಟು, ಅಗತ್ಯದ ವಸ್ತುಗಳ ಖರೀದಿ ಬಗೆಗಿನ ಖರ್ಚಿಗಾಗಿ ಮಡುವುದಿಲ್ಲ. ಆದರೆ ತನ್ನ ಸಂಸಾರದ ಸದಸ್ಯರು ಏನಾದರೂ ಬೇಡಿಕೆ ಮುಂದಿಟ್ಟಾಗ, ಅದರ ಬಗ್ಗೆ ಯೋಚನೆ ಮಾಡಿ, ಗಹನವಾದ ಚಿಂತನೆ ಮಾಡಿ, ಬಹಳಷ್ಟು ಲೆಕ್ಕಾಚಾರ ಮಾಡಿ, ಅತ್ಯಂತ ಕಷ್ಟದಿಂದ ಖರ್ಚು ಮಾಡುತ್ತಾನೆ. ತಾನು ಎಷ್ಟು ಕಷ್ಟದಿಂದ ಖರೀದಿ ಮಾಡುತ್ತಿದ್ದೇನೆ ಅನ್ನುವುದನ್ನು ಬೇಡಿಕೆ ಮುಂದಿಟ್ಟವರಿಗೆ ಮನದಟ್ಟು ಮಾಡುವ ಪ್ರಯತ್ನ ಕೂಡ ಮಾಡಿರುತ್ತಾನೆ. ಇದೇಕೆ ಹೀಗೆ?
***********


 

Rating
No votes yet

Comments

Submitted by ಗಣೇಶ Tue, 02/19/2013 - 00:03

:) :) ಅಲ್ಲಿಲ್ಲ ಏಕೆ? ನನಗೂ ಗೊತ್ತಿಲ್ಲ. >>>ನನಗೆ ಚೌಕಾಸೀ ಶಕ್ತಿಯನ್ನು ಕರುಣಿಸುವಾಗ ಏಕೆ ಚೌಕಾಸಿ ಮಾಡಿದೆ ಅಂತ ದೇವರಿಗೆ ಮೊರೆಯಿಟ್ಟದ್ದೂ ಇದೆ. ಈ ತೆರನಾದ ಅನುಭವ ನಿಮಗೂ ಆಗಿರಬಹುದು. ನೀವೂ ನನ್ನಂತೆ ನೊಂದು ಕೊಂಡಿರಬಹುದು. +೧.:)
http://www.theatlantic.com/business/archive/2012/07/the-11-ways-that-consumers-are-hopeless-at-math/259479

Submitted by ASHOKKUMAR Sat, 02/23/2013 - 19:41

ಬಲೆಕೋಲೆ ಮಾರುವಾತ ಬರೇ ಪೈಪಿಗೆ ಪ್ಲಾಸ್ಟಿಕ್ ಬಲೆಯನ್ನು ಕಟ್ಟಿ,ಅದಕ್ಕೆ ಇನ್ನೂರೈವತ್ತು ಎಂದು ಬಂದ. ದುಬಾರಿ ಎನ್ನುವುದು ಮೇಲ್ನೋಟಕ್ಕೇ ಗೊತ್ತಾಗುತ್ತಿತ್ತು. ಅದಕ್ಕೆ ನೂರು ರೂಪಾಯಿ ಕೂಡಾ ಜಾಸ್ತಿ ಎಂದು ಗೊತ್ತಿದ್ದೂ,ಮನೆಮನೆಗೆ ಸುತ್ತಿ ಕಷ್ಟ ಪಡುವ ಅವನ ಪಾಡು ನೆನೆದು ನೂರು ರೂಪಾಯಿಗಾದರೆ ಬೇಕೆಂದೆ.ಆತ ಒಪ್ಪಿ ಕೊಟ್ಟುಹೋದ!
(ನನ್ನ ತಾಯಿಯವರು ಹಿಂದಿನ ಸಲ ಅದಕ್ಕೇ ಇನ್ನೂರು ರೂಪಾಯಿ ಕೊಟ್ಟು ಖರೀದಿಸಿದ್ದರು ಎಂದು ನಂತರ ಗೊತ್ತಾಯಿತು :) )

Submitted by makara Sat, 02/23/2013 - 19:55

ಆ.ಸು. ಹೆಗಡೆಯವರೇ,
ನಿಮ್ಮ ಸಂದೇಹಕ್ಕೆ ಸೂಕ್ತ ಉತ್ತರವನ್ನು ಬಹುಶಃ ತುಲಸೀದಾಸರ ಕೀರ್ತನೆಯೊಂದು ತಿಳಿಸುತ್ತದೆ ಎನಿಸುತ್ತದೆ. ಆಗಿನ ಕಾಲದಲ್ಲಿ ಹೆಂಡವನ್ನು ಊರ ಹೊರಗೆ ಮಾರುತ್ತಿದ್ದರೂ ಸಹ ಜನ ಅಲ್ಲಿಗೆ ಕಷ್ಟಪಟ್ಟು ಹೋಗಿ ಕುಡಿದು ಬರುತ್ತಾರೆ ಅದೇ ಹಾಲನ್ನು ಮನೆ ಮನೆಗೆ ಬಂದು ಮುಟ್ಟಿಸಬೇಕಾಗುತ್ತದೆ. ಇದು ಕೇವಲ ಮಾನವ ಸ್ವಭಾವವಲ್ಲದೇ ಮತ್ತೇನೂ ಅಲ್ಲ -ಕೆಟ್ಟದ್ದರ ಕಡೆಗೆ ಸುಲಭವಾಗಿ ಜಾರುತ್ತದೆ.

Submitted by venkatesh Sun, 02/24/2013 - 06:17

In reply to by makara

ಚೌಕಶಿ ಎನ್ನುವುದು ಮರಾಥಿ ಪದ. ಅದಕ್ಕೆ ಅರ್ಥ ವಿಚಾರಿಸಿ ಅಂತ. ಅದು ನಮ್ಮ ಕನ್ನಡಕ್ಕೆ ಬಂದು ಹೇಗೆ ಪರಿವರ್ತಿತವಾಗಿದೆ ನೋಡಿ. ವ್ಯಾಪಾರಿಗರ ಹತ್ತಿರ ಬೆಲೆ ಕಮ್ಮಿ ಮಾಡ್ಕೊಳ್ರಿ ಸ್ವಾಮಿ ಅನ್ನುವ ಅರ್ಥ ಬರುವಂತಿದೆ ಅಲ್ಲವೇ !